ಸಂಧ್ಯಾರಾಣಿ ಕಾಲಂ : ಅಜ್ಜನ ಅಲಮಾರಿನಲ್ಲಿ ಸಿಕ್ಕ ಮಲ್ಲಿಗೆ…


ಮೊದಲ ಬಾರಿ ನಾನು ಕೆ ಎಸ್ ನ ಕವಿತೆಗಳನ್ನು ನೋಡಿದಾಗ ನಾನಿನ್ನೂ ಶಾಲಾ ಬಾಲಕಿ. ಅದನ್ನು ನೋಡಿದ್ದು ಸಹ ಅದನ್ನು ಅಲ್ಲಿ ನೋಡಬಹುದು ಎನ್ನುವ ಕಲ್ಪನೆಯೂ ಇರದ ಜಾಗದಲ್ಲಿ. ಆಗೆಲ್ಲಾ ರಜೆ ಬಂದಾಗ ಅಜ್ಜಿ ಊರಿನಲ್ಲೇ ನಮ್ಮ ಠಿಕಾಣಿ. ಮನೆಯಲ್ಲಿ ಅಜ್ಜನ ಅಲಮಾರು ಒಂದಿತ್ತು. ಅದರಲ್ಲಿ ಅಜ್ಜನ ಕಾಗದ ಪತ್ರಗಳು, ಒಂದಿಷ್ಟು ಹಣ, ಜಮೀನಿನ ಕಾಗದ ಪತ್ರಗಳು, ಮದುವೆ, ನಾಮಕರಣ, ಗೃಹಪ್ರವೇಶ ಇತ್ಯಾದಿ ಸಮಾರಂಭಗಳಲ್ಲಿ ಮುಯ್ಯಿ ಕೊಟ್ಟವರ ಹೆಸರು, ಅವರು ಕೊಟ್ಟ ಹಣ/ವಸ್ತುವಿನ ವಿವರ ಇರುತ್ತಿದ್ದ ಒಂದು ಮಾಸಲು ಬಣ್ಣದ ಪುಸ್ತಕ, ಅಜ್ಜ ಬೆಂಗಳೂರಿನಲ್ಲಿ ಎಲ್ಲಿಂದಲೋ ತರುತ್ತಿದ್ದ ಚೇಳಿನ ಮಾತ್ರೆ, ಕಸ್ತೂರಿ ಮಾತ್ರೆ ಇವೆಲ್ಲಾ ಇರ್ತಾ ಇತ್ತು. ಅಪ್ಪಿ ತಪ್ಪಿ ಅಜ್ಜ ಅದಕ್ಕೆ ಬೀಗ ಹಾಕುವುದನ್ನು ಮರೆತರೆ ಅವರು ಆಚೆ ಹೋಗಿ ಒಳಗೆ ಬರುವುದರೊಳಗೆ ಆ ಮರದ ಅಲಮಾರಿನೊಳಗೆ ಒಮ್ಮೆ ಇಣುಕಿ ನೋಡುವುದು ನಮ್ಮ ಜೀವನದ ರೋಮಾಂಚನಗಳಲ್ಲಿ ಒಂದಾಗಿತ್ತು. ಹಾಗೆ ಇಣುಕಿದಾಗ ಒಂದು ಮಾಸಲು ಹಾಳೆಗಳ, ಅಂಚು ಮಡಿಸಿಕೊಂಡ, ಅಲ್ಲಲ್ಲಿ ತೂತು ಬಿದ್ದ ಒಂದು ಪುಸ್ತಕ ಕಂಡಿತ್ತು. ಯಾವ ಪುಸ್ತಕ ಎಂದು ತೆಗೆದು ನೋಡುತ್ತಿದ್ದಾಗ, ಹಠಾತ್ತಾಗಿ ಅಜ್ಜ ವಾಪಸ್ಸು ಬಂದಿದ್ದರು. ಪುಸ್ತಕವನ್ನು ವಾಪಸ್ಸಿಡಲು ಸಮಯ ಇರಲಿಲ್ಲ. ಸರಿ ಮತ್ತೆ ಇಟ್ಟರಾಯಿತೆಂದು ಪುಸ್ತಕವನ್ನು ಬೆನ್ನ ಹಿಂದೆ ಬಚ್ಚಿಟ್ಟುಕೊಂಡು ಪಕ್ಕದಲ್ಲೇ ಇದ್ದ ಅಕ್ಕಿ ಮೂಟೆಗಳ ಸಂದಿನಲ್ಲಿ ಕೂತು ಬಿಟ್ಟಿದ್ದೆ.
ಆಮೇಲೆ ನೋಡಿದಾಗ ಕಂಡದ್ದು ’ಮೈಸೂರು ಮಲ್ಲಿಗೆ’ ಅನ್ನುವ ಹೆಸರು. ಕೈಗೆ ಸಿಕ್ಕಿದ್ದು ಓದುವ ಹುಚ್ಚು ಶುರುವಾಗಿದ್ದ ಕಾಲ ಅದು. ಮೊದಲ ಪ್ರೀತಿಯ ಹಾಗೆ ಮೋಹ ತೀವ್ರವಾಗಿ ತಲೆಗೇರಿತ್ತು. ಪುಸ್ತಕ ಓದಲು ಶುರು ಮಾಡಿದ್ದೆ. ಬಹುಶಃ ನನ್ನ ಜೀವನದಲ್ಲಿ ನಾನು ಓದಿದ ಮೊದಲ ಕವಿತೆಗಳು ಅವು. ಆದರೆ ಮೊದಲ ಭೇಟಿಯ ಯಾವ ಸೆಡವು, ಬಿಗುಮಾನ ಇಲ್ಲದೆ ಮೈಸೂರು ಮಲ್ಲಿಗೆ ನನ್ನನ್ನು ಸ್ವಾಗತಿಸಿತ್ತು. ಬಹುಶಃ ಆ ಕಾರಣಕ್ಕಾಗಿ ಕವಿತೆ ಎಂದರೆ ನನಗೆ ಹೆದರಿಕೆ ಆಗದೆ ಪ್ರೀತಿ ಬೆಳೆಯಲು ಸಾಧ್ಯವಾಯಿತೋ ಏನೋ. ಓದುತ್ತಾ ಓದುತ್ತಾ ಹೋದಹಾಗೆ ಕವನ, ಕವನದ ವಸ್ತು ನನ್ನೆದಿರು ಒಂದು ರಮ್ಯ ಲೋಕವನ್ನೇ ತೆರೆದಿಡುತ್ತಾ ಹೋದವು. ಓದುತ್ತಾ ಹೋದಂತೆಲ್ಲಾ ಇನ್ನೊಂದು ಅಚ್ಚರಿ, ಅರೆ ಅಜ್ಜ ಈ ಪುಸ್ತಕ ಓದಿದ್ದಾರ ಅಂತ! ನಮ್ಮ ಬಾಲ್ಯ, ಯೌವನದಲ್ಲಿ ನಾವು ಯಾವ ಭ್ರಮೆಯಲ್ಲಿರುತ್ತೇವೆ ಎಂದರೆ ನಮ್ಮ ವಯಸ್ಸಿನ ೫-೬ ವರ್ಷ ಆಚೆಗಿರುವವರನ್ನೇ ನಾವು ಪುರಾತನರು ಎಂದುಕೊಳ್ಳುತ್ತೇವೆ, ಅಂಥಾದ್ದರಲ್ಲಿ ನನ್ನ ಅಜ್ಜನ ಅಲಮಾರಿನಲ್ಲಿ ಸಿಕ್ಕ ಈ ಮಲ್ಲಿಗೆ ನಾನು ನನ್ನ ಅಜ್ಜನನ್ನು ಬೆರಗಿನ ಕಣ್ಣುಗಳಿಂದ ನೋಡುವಂತೆ ಮಾಡಿತ್ತು.
ಆಮೇಲೆ ಮೈಸೂರು ಮಲ್ಲಿಗೆ ಕ್ಯಾಸೆಟ್ ಬಂತು, ಕಾಲೇಜಿನಲ್ಲಿದ್ದಾಗ ಮತ್ತೆ ಈ ಕವನಗಳನ್ನು ಓದಿದೆ. ಕವನಗಳು ಮತ್ತಷ್ಟು ಹತ್ತಿರವಾದವು, ಮತ್ತಷ್ಟು ಕೆನ್ನೆ ಬೆಚ್ಚಗಾಗಿಸಿದ್ದವು. ಕೆ ಎಸ್ ನರಸಿಂಹಸ್ವಾಮಿಗಳ ನೂರನೆಯ ಜನ್ಮ ದಿನದ ಸಂಭ್ರಮದ ನೆಪದಲ್ಲಿ ಆ ಕವಿತೆಗಳನ್ನು ಮತ್ತೊಮ್ಮೆ ಓದಲು ಕುಳಿತಿದ್ದೇನೆ. ಓದಿದ್ದು ಹಲವಾರು ಕವಿತೆಗಳು, ನನ್ನೆದೆಯ ದಾರಿಯಲ್ಲಿ ಹಲವು ಮಲ್ಲಿಗೆ ಮಾಲೆಗಳು, ಹೆಚ್ಚು ಓದಿಸಿಕೊಂಡ, ಹೆಚ್ಚು ಬಾರಿ ಓದಿಸಿಕೊಂಡ ಅವರ ಅನೇಕ ಕವಿತೆಗಳನ್ನು ಬಿಟ್ಟು ನಾನಿಲ್ಲಿ ಅವರ ಬೇರೆ ಎರಡು ಕವಿತೆಗಳ ಬಗ್ಗೆ ಬರೆಯುತ್ತಿದ್ದೇನೆ. ’ದೀಪದಮಲ್ಲಿ’ ಸಂಕಲನದಿಂದ ’ಉಮಾ’ ಮತ್ತು”ಉಂಗುರ’ ಸಂಕಲನದಿಂದ ’ಒಲುಮೆ ಒಲಿದೇ ಒಲಿಯುವುದು’.
 
ಉಮಾ
’ದೀಪದ ಮಲ್ಲಿ’ ಸಂಕಲನ
ಕೆ ಎಸ್ ನ ಅವರು ತುಂಬಾ ಸುಂದರವಾಗಿ ದಾಂಪತ್ಯದ ’ಚಿತ್ರ’ಗಳನ್ನು ಕಟ್ಟಿಕೊಡುತ್ತಾರೆ. ಇಲ್ಲಿ ’ಚಿತ್ರ’ ಎನ್ನುವ ಪದವನ್ನು ನಾನು ಪ್ರಜ್ಞಾಪೂರ್ವಕವಾಗಿಯೇ ಬಳಸುತ್ತಿದ್ದೇನೆ. ಅವರ ಕವನಗಳಲ್ಲಿ ಈ ’ಚಿತ್ರ’ವನ್ನು ಕಟ್ಟಿಕೊಡುವ ತಾಕತ್ತು ಎಷ್ಟು ಬಲವಾಗಿರುತ್ತದೆ ಎಂದರೆ ಓದುತ್ತಾ ಹೋದಂತೆ ನಮ್ಮ ಕಣ್ಣೆದುರಲ್ಲಿ ಆ ಇಡೀ ದೃಶ್ಯ ಬಿಡಿಸಿಕೊಳ್ಳುತ್ತಾ ಹೋಗುತ್ತದೆ. ಈ ಕವನ ಅವರ ಆ ಕವನ ಕಟ್ಟಿಕೊಡುವ ಸೊಗಸಿಗೆ ಒಂದು ಉದಾಹರಣೆ.
’ಬಳಿಗೆ ಬಾರದಿರೆ’೦ದು ಬೆಂಡೋಲೆ ಬೆದರಿಸಿತು;
ಬೇಸಿರಿಯ ಮುತ್ತು ’ಬೇಸರಗೊಂಡು ಮಲಗಿಹಳು;
ಕಲಕದಿರಿವಳ ಕನಸೆಂದು’ ಬಿನ್ನವಿಸಿತು;
ಕವನದ ಸಂದರ್ಭ ಹೀಗಿರಬಹುದು. ಗಂಡ ಹೆಂಡತಿ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಆಗಿದೆ. ಆಕೆ ಮುನಿಸಿನಿಂದ ಮಲಗಿದ್ದಾಳೆ, ಅವಳಲ್ಲಿ ಸಿಟ್ಟಿದೆ, ನೋವಿದೆ. ಆ ಸಿಟ್ಟು – ನೋವು ಅವಳಲ್ಲಿ ಮತ್ತು ಅವಳಿಗೆ ಸಂಬಂಧಿಸಿದ ಎಲ್ಲದರಲ್ಲೂ ಕವಿಗೆ ಕಾಣುತ್ತಿದೆ. ’ಹತ್ತಿರ ಬರಬೇಡ’ ಎಂದು ಬೆಂಡೋಲೆ ಬೆದರಿಸುತ್ತಿದೆ, ಅವಳ ಬೇಸರಿಯ ಮುತ್ತಿನಲ್ಲೂ ಆ ನಿರಾಕರಣೆ ಇದೆ. ಆದರೆ ಇಲ್ಲೊಂದು ಸ್ವಾರಸ್ಯ ಇದೆ. ಅವಳು ಮುಡಿದ ಮಲ್ಲಿಗೆಯಲ್ಲಿ ಮಾತ್ರ ಆ ಸಿಟ್ಟು, ನಿರಾಕರಣೆ ತೀವ್ರವಾಗಿಲ್ಲ! ಯಾಕೆಂದರೆ ಆಕೆ ಮಲ್ಲಿಗೆ ಮುಡಿಯುವುದೇ ಅವನಿಗಾಗಿ, ಆ ಸಿಟ್ಟಿನಲ್ಲೂ ಆಕೆ ಮಲ್ಲಿಗೆ ಮುಡಿದಿದ್ದಾಳೆ ಎಂದರೆ ಅರ್ಥ ಅವಳ ಮನಸ್ಸಿನ ಬಾಗಿಲು ಮುಚ್ಚಿರಬಹುದು, ಆದರೆ ಚಿಲಕ ಹಾಕಿಲ್ಲ ಎಂದು! ಅದಕ್ಕೇ ಅವಳ ಮಲ್ಲಿಗೆ ಅವನಿಗೆ ಒಂದಿಷ್ಟು ಅಭಯವನ್ನು ನೀಡುತ್ತಿದೆ. ಆದರೆ ಮೂಲೆಯಲಿ ಹಚ್ಚಿಟ್ಟ ದೀಪಕ್ಕೆ ಆ ಕರುಣೆ ಇಲ್ಲ, ಅದು ಅವನನ್ನು ’ಬೇಡ’ ಎಂದು ತಡೆಯುತ್ತಿದೆ. ಅವಳ ಕುಂಕುಮ ಬೆವರಿನಲ್ಲಿ ಕಲಸಿದೆ, ಜಡೆ ಅಸ್ತವ್ಯಸ್ತವಾಗಿ ಕೆಳಗೆ ಬಿದ್ದಿದೆ. ಒಟ್ಟಿನಲ್ಲಿ ಅಲ್ಲೊಂದು ಕಲಕಿದ ಚಿತ್ರ ಕಾಣುತ್ತಿದೆ. ಆಕೆ ಅವನ ’ಕೈ ನೀಡಿ’ನ ಆಚೆಗೇ ಇದ್ದಾಳೆ.
ಇಷ್ಟೆಲ್ಲಾ ಆದರೂ ಗಂಡನ ಒಂದು ಸಣ್ಣ ಅಹಂ ಇದಕ್ಕೆಲ್ಲಾ ತನ್ನ ಮಾತು ಅಥವಾ ನಡವಳಿಕೆ ಕಾರಣವಾಗಿರಬಹುದು ಎಂದು ಒಪ್ಪಿಕೊಳ್ಳುವುದಿಲ್ಲ. ಅವಳ ’ಕಣ್ ಪಾತಿಯೆಲ್ಲಾ ಒದ್ದೆ’ ಆಗಿದ್ದರೂ ಅದಕ್ಕೆ ಕಾರಣ ಅವಳು ಕಂಡ ಯಾವುದೋ ಕೆಟ್ಟ ಕನಸಿರಬೇಕು ಎಂದು ತನ್ನನ್ನು ತಾನೇ ಸಮಾಧಾನ ಮಾದಿಕೊಳ್ಳುತ್ತಾನೆ. ಇದೆಲ್ಲದರ ನಡುವೆಯೂ ಅವರ ಪ್ರೀತಿ ಗೆದ್ದೇ ಗೆಲ್ಲುತ್ತದೆ ಮತ್ತು ತಾಳ್ಮೆ ಫಲ ನೀಡಲಿದೆ. ಅದಕ್ಕೆಂದೇ ಆತ ’ನಾ ಬಂದ ಗಳಿಗೆಯೊಂದರಲೆ ಕುಂದಿರಬೇಕು’ ಎಂದು ಸಂತೈಸಿಕೊಳ್ಳುತ್ತಲೇ ’ಆ ಚಂದ್ರ ಮುಖದ ಕಿರುನಗೆ ತಣ್ಣಗಿರಬೇಕು’ ಎಂದು ಹಾರೈಸುತ್ತಾನೆ.
’ನಾ ಬಂದ ಗಳಗೆಯೊಂದರಲೆ ಕುಂದಿರಬೇಕು!
ಆ ಚಂದ್ರಮುಖದ ಕಿರುನಗೆ ತಣ್ಣಗಿರಬೇಕು’
ಅದು ’ಚಂದ್ರ ಮುಖ’, ಹಾಗೆಂದೇ ಅಲ್ಲಿ ಈಗ ಅಮಾವಾಸ್ಯೆ ಇದ್ದರೂ, ಹುಣ್ಣಿಮೆಯ ನಿರೀಕ್ಷೆಯೂ, ಆಶೆಯೂ ಸಾಧ್ಯ. ಅವರಿಬ್ಬರ ನಡುವೆ ಹುಣ್ಣಿಮೆ ಸಾಕ್ಷಾತ್ಕಾರವಾಗುತ್ತದೆ ಎನ್ನುವುದರ ಸುಳಿವೂ ನಮಗೆ ಸಿಕ್ಕಿಬಿಡುತ್ತದೆ.


೨. ಒಲುಮೆ ಒಲಿದೇ ಒಲಿಯುವುದು
’ಉಂಗುರ’ ಸಂಕಲನದಿಂದ
ಈ ಕವಿತೆಯ ಹೆಸರು ಓದಿದ್ದು ತಂಗಿಯಂತಹ ಗೆಳತಿ ಸಂಯುಕ್ತೆಯ ಮನೆಯಲ್ಲಿ. ಆಗ ಅಲ್ಲಿದ್ದವರು ನಾನು, ಭಾರತಿ ಮತ್ತು ಮಾಲಿನಿ. ಆ ಹೆಸರು ಎಲ್ಲರ ಮೊಗದಲ್ಲೂ ಹೇಗೆ ನಗೆ ಮಲ್ಲಿಗೆ ಅರಳಿಸಿತ್ತು ಎಂದರೆ ಕೆ ಎಸ್ ನರ ಮಲ್ಲಿಗೆಯ ಮೋಡಿಯ ಜೀವಂತ ಪ್ರಮಾಣದಂತಿದ್ದೆವು ನಾವೆಲ್ಲಾ! ಒಲುಮೆ ಒಲಿದೇ ಒಲಿಯುವುದು ಎನ್ನುವ ಮಾತೆಂದರೆ ದುಂಡುಮಲ್ಲಿಗೆ ಸೆರಗಲ್ಲಿ ಉಡಿತುಂಬಿಸಿಕೊಂಡ ಹಾಗೆ ಅಲ್ಲವೇ?!
’ಏನು ಬೇಕೋ, ಏನು ಬೇಡವೋ,
ಕಣ್ಣು ಈ ಕಡೆ ನೋಡವೊ,
ಬೆಳಕು ಹರಿದು ಮೋಡವೋ
ಬಯಕೆಗಳೆ ಕೈಗೂಡವೊ!
ಒಲವು ಮೂಡಿದ ಘಳಿಗೆಯಿಂದ ಹಿಡಿದು ಅದನ್ನು ಒಪ್ಪಿಕೊಳ್ಳುವ ಘಳಿಗೆಯ ನಡುವಿನ ಸಮಯ ಬಹಳ ಸುನ್ನಿತವಾದದ್ದು. ಒಲವು ಇದೆ ಎನ್ನುವುದು ಮನಸ್ಸಿಗೆ ಭಾಸವಾಗಿರುತ್ತದೆ. ಆದರೆ ಆ ಭಾವ ಇನ್ನೂ ಭಾಷೆಯ ಆಕಾರವನ್ನು ಧರಿಸಿರುವುದಿಲ್ಲ. ಆ ನಿರಕಾರ ಭಾವದ ಇರುವಿಕೆ ತರುವ ನೆಮ್ಮದಿ ಮತ್ತು ಅದು ಸಾಕಾರವಾಗದೆ ಇದ್ದರೆ ಎನ್ನುವ ಆತಂಕ ಇಲ್ಲಿ ಕವನವಾಗಿದೆ. ಅಲ್ಲಿ ಒಂದು ನಿರೀಕ್ಷೆಯೂ ಇದೆ, ಒಂದು ಹೆದರಿಕೆಯೂ ಇದೆ. ಕಣ್ಣುಗಳ ಮಾತು ಕೇಳಿದಾಗ ಇವು ನನ್ನವೇ ಅನ್ನಿಸಿರುತ್ತದೆ, ಆದರೆ ’ಹೌದು’ ಎಂದು ಹೇಳದೆ ಇರುವಾಗ ಕಣ್ಣು ಮತ್ತು ನಾಲಿಗೆಯ ನಡುವೆ ಮೈಲಿಗಳ ದೂರ ಇದೆ ಎನ್ನುವ ಆತಂಕ ಶುರುವಾಗುತ್ತದೆ.
ಈ ಕವಿತೆಯೂ ಆ ಕಳವಳದ ಉಯ್ಯಾಲೆ ಯಾನವೇ. ತೂಗಿ ಬಿಟ್ಟ ಉಯ್ಯಾಲೆ ಒಮ್ಮೆ ಆ ಕಡೆ, ಮತ್ತೊಮ್ಮೆ ಈ ಕಡೆ. ’ಏನು ಬೇಕೋ, ಎನು ಬೇಡವೋ’, ಕಣ್ಣುಗಳು ಯಾಕೆ ಈ ಕಡೆ ನೋಡುತ್ತಿಲ್ಲ ಎನ್ನುವ ಕಳವಳದೊಂದಿಗೆ ಕವನ ಶುರುವಾಗುತ್ತದೆ. ಅಲ್ಲಿ ಒಲವಿನ ಗಣಿ ಇದೆ ಎನ್ನುವುದು ಗೊತ್ತು, ಆದರೆ ಅದು ಎಲ್ಲೋ ಆಳದಲ್ಲಿದೆ. ಬನದಲ್ಲೆಲ್ಲೋ ಅಡಗಿದ ಇಂಪಿನ ದನಿಯ ಹಾಗೆ, ಆಗಸದಲ್ಲಿರುವ ತಾರೆಯ ನಗೆಯ ಹಾಗೆ, ಕಣ್ಣಿನಾಳದ ಕನಸಿನ ಹಾಗೆ ದೂರದಲ್ಲಿದೆ ಒಲವು.
ಒಲುಮೆ ಒಲಿಯುವ ಮುನ್ನಿನ ಕ್ಷಣಗಳು ಅವು. ಅಲ್ಲಿ ಕಳವಳ ಇದೆ, ನಿಶ್ಯಬ್ಧ ಇದೆ. ಅಲ್ಲಿ ದನಿ ಇರುವುದಿಲ್ಲ, ಅಲ್ಲಿರುವುದೆಲ್ಲಾ ದನಿಯ ’ಹೊಳಹು’ ಮಾತ್ರವೇ. ಕಣ್ಣುಗಳಿಗೆ ನಿದ್ದೆ ಬಂದರೆ ಅವುಗಳ ಮೇಲಾಣೆ! ಕನಸ ಕನವರಿಕೆಯಲ್ಲಿ ನಿದ್ದೆ ಬಂದರೂ ಅದು ಒಂದೇ ಘಳಿಗೆ, ಆಮೇಲೆ ಕಣ್ಣಿನಲ್ಲಿ ಅದೇ ಖಾಲಿತನ.
ಪರಿಚಯ ಒಲವಾಗುವ ಮೊದಲು ಬದುಕಿನಲ್ಲಿ ಖಾಲಿತನ ಇದ್ದರೂ ಅದು ಸಹನೀಯವಾಗಿರುತ್ತದೆ, ಸಹಿಸದೆ ಆಗ ಬೇರೆ ವಿಧಿಯೇ ಇಲ್ಲ. ಆದರೆ ಒಲವ ಒಂದು ನೋಟ, ಮಳೆಯ ಒಂದು ಹನಿ ದಕ್ಕಿದ ಮೇಲೆ ಸುಲಭವಲ್ಲ ಕಾಯುವಿಕೆ.
ವೀಣೆ ನುಡಿಸಿ, ದೂರವಿರಿಸಿ
ಬೆಳಕನಿಳಿಸಿ, ವಿರಮಿಸಿ
ಮಲಗಬಹುದೆ, ನಗೆಯ ಸುಳಿಸಿ
ಆಸೆಗಳನು ಅಡಗಿಸಿ?
ನುಡಿಸಿದ ಬೆರಳು ಮುಖ ತಿರುಗಿಸಿ ನಿಂತುಬಿಟ್ಟರೆ, ಕಂಪನಕ್ಕೊಳಗಾದ ವೀಣೆಯ ಏಕಾಕಿತನ ವರ್ಣಿಸಲು ಸಾಧ್ಯವೇ? ಅಂತಹ ಪರಿಸ್ಥಿತಿಯಲ್ಲಿ
ಎತ್ತ ಕಡೆಗು
ದೀಪ ಉರಿದು
ಬೆಳಕಿನಲ್ಲಿ ಕತ್ತಲು’.
’ಬೇಕು’ ’ಬೇಡ’ ಎನ್ನುವುದು ನದಿಯ ಎರಡು ದಡಗಳು, ನಡುವೆ ಹರಿವ ಗಂಗೆ ಒಲವು, ಹೌದು ಒಲುಮೆ ಗಂಗೆಯೇ. ಒಮ್ಮೆ ಅದರಲ್ಲಿ ಮುಳುಗಿದರೂ ಮನಸ್ಸು ಹೊಸತಾಗುತ್ತದೆ. ಮನಸ್ಸು ಮಾಡಿ, ಅದನ್ನು ದಾಟಿ ಆಚೆ ದಡ ಸೇರುತ್ತೇನೆ ಎಂದು ಹೊರಡಬೇಕು ಅಷ್ಟೆ. ’ಕಾದು ಕೊರಗಿ ದಾಟಬೇಕು’ ಆಗ, ಹೌದು ಆಗ ’ಒಲುಮೆ ಒಲಿದೇ ಒಲಿಯುವುದು’.
ಬಾಳಿಗೊಂದು ನಂಬಿಕೆ ಬೇಕು. ಇಲ್ಲಿ ಆ ನಂಬಿಕೆ ’ಒಲುಮೆ ಒಲಿದೇ ಒಲಿಯುವುದು’ ಎನ್ನುವುದರಲ್ಲಿದೆ. ಆ ನಂಬಿಕೆ ನಂಬಿದವರನ್ನು ಪೊರೆಯುತ್ತದೆ.
ಈ ಕವನಗಳನ್ನು ಓದುತ್ತಾ ಓದುತ್ತಾ ಮತ್ತೆ ಕೆಲವು ಕವನಗಳನ್ನು ಓದಿದೆ. ಮನಸ್ಸಿನ ತುಂಬೆಲ್ಲಾ ಅದೇ ಮಲ್ಲಿಗೆಯ ಘಮ. ’ತೆಂಗು ಗರಿಗಳ ನಡುವೆ ತುಂಬು ಚಂದಿರ ಬಂದು, ಬೆಳ್ಳಿ ಹಸುಗಳ ಹಾಲ ಕರೆಯುವಂದು’ ಎನ್ನುವ ಹುಣ್ಣಿಮೆಯ ತಂಪು. ಆದರೆ ಮನಸ್ಸಿನಲ್ಲಿ ಸಣ್ಣ ಕೊರೆ. ಆಗ ನನಗೆ ಕೊಟ್ಟಂತಹ ಸುಖವನ್ನು ಯಾಕೆ ಈ ಕವಿತೆಗಳು ಕೊಡುತ್ತಿಲ್ಲ? ಅವೇ ಕವಿತೆಗಳು, ಬದಲಾಗಿದ್ದು ನಾನೆ? ಕವಿತೆಗಳಲ್ಲಿ ಅವು ಕೊಡುವ ಓದುವ ಸುಖಕ್ಕಿಂತ ಹೆಚ್ಚಿನದೇನನ್ನೋ ನಾನು ಹುಡುಕುತ್ತಿದ್ದೇನೆಯೇ? ಹೌದಾದರೆ ಅದು ಏನು? ಹಾಗೆ ಹುಡುಕುವುದು ಸರಿಯೇ? ಗೊತ್ತಾಗುತ್ತಿಲ್ಲ.
ಹಾಗೆ ಚಿಂತಿಸುವಾಗೆಲ್ಲಾ ಕವಿ ’ಬೇಡವೇ ಯಾರಿಗೂ ಸಿರಿ ಮಲ್ಲಿಗೆ’ ಎಂದು ಕೇಳಿದಂತಾಗುತ್ತದೆ. ಅಜ್ಜನ ಅಲಮಾರಿನಲ್ಲಿದ್ದ ಘಮ ನೆನಪಾಗುತ್ತದೆ. ಕವನದ ಹಾಳೆಗಳ ನಡುವೆ ಎತ್ತಿಟ್ಟ ಆ ಮಲ್ಲಿಗೆ ಹೂವಿನ ಸರ ನೆನಪಾಗುತ್ತದೆ. ಅಂದು ಬೊಗಸೆ ತುಂಬಿ, ಬೊಗಸೆ ಖಾಲಿ ಆದರೂ ನನ್ನ ಕೈ ಬಿಡದ ಮಲ್ಲಿಗೆಯ ಪರಿಮಳ ನೆನಪಾಗುತ್ತದೆ. ನಾನು ಮತ್ತೆ ಆರ್ದ್ರಳಾಗುತ್ತೇನೆ, ಮತ್ತೆ ಮಲ್ಲಿಗೆಗೆ ಕೈ ಚಾಚುತ್ತೇನೆ.
 

‍ಲೇಖಕರು G

January 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಸಂಧ್ಯಾ, ನೀವಿಲ್ಲಿ ಬರೆದಿರೊ ಒಂದು ಮಾತು ಬಹಳ ವಾಸ್ತವವಾದ್ದು. ಹೊಸ ಓದುಗನೊಬ್ಬನ/ಳ ಕೈಗೆ ಸಿಕ್ಕಿದರೆ ಮೊದಲು ಇಂಥ ಮೈಸೂರು ಮಲ್ಲಿಗೆಯೊ ಅಥವಾ ಅನಕೃನೊ ಸಿಗಬೇಕು. ಕನ್ನಡಕ್ಕವರು ಅಡಿಕ್ಟ್ ಆಗ್ತಾರೆ. ಆಮೇಲೆ ಜೀವನ ಅವರನ್ನು ನುರಿಸಿ ಅದರನುಸಾರ ಅವರ ಹದ ಬೇರೆಯದಾಗಿ ವಿಸ್ತಾರಗೊಂಡು ಬೇಕಾದ್ದು ಓದಿಯಾರು. ಆದರೆ ಮೊದಮೊದಲು ಕನ್ನಡ ಓದುಗನೊಬ್ಬನನ್ನು ತನ್ನ ಅಂಗಡಿಗೇ ಕಟ್ಟಿಹಾಕುವ ವ್ಯಾಪಾರಿಯವೊಲು ಕಟ್ಟಿಹಾಕುವುದು ಇಂಥ ಹೊತ್ತಿಗೆಗಳೆ.

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    ಸಂಧ್ಯಾಜಿ, ಕೆ ಎಸ್ ಎನ್ ರವರ ಮೈಸೂರು ಮಲ್ಲಿಗೆ ಘಮ ನಿಜಕ್ಕೂ ಅಪರಿಮಿತ. ಒಂದು ಮಾತು ನಿಜ. ತಮ್ಮ ಕೆಲವು ಅನಿಸಿಕೆಗಳು ದೊಡ್ಡವರ ಕಾವ್ಯಗಳನ್ನು ಓದಿದಾಗ ಹಾಗೆ ಅನಿಸಿದ್ದಿದೆ, ಬಹುಶ: ಹೆಚ್ಚಿನ ನಿರೀಕ್ಷೆಗಳೇನೊ, ಅಥವಾ ನಮ್ಮ ಪ್ರಿಯಾರಿಟಿಗಳ ಬದಲಾವಣೆಗಳೇನೋ! ಸುಂದರ ಲಾಲಿತ್ಯದ ಸೊಗಡಿನ ಬರಹ.

    ಪ್ರತಿಕ್ರಿಯೆ
  3. ಅಕ್ಕಿಮಂಗಲ ಮಂಜುನಾಥ

    ಅವರು ಒಲವಿಗೆ ಚೆಲುವು ತುಂಬಿದರು. ನೀವು ಅಂತಹ ಚೆಲುವಿನ ಎರಡು ಪದ್ಯಗಳನ್ನು ಅರಗಿಸಿಕೊಳ್ಳುವಂತೆ ಮಾಡಿದ್ದೀರಿ. ಇಬ್ಬರಿಗೂ ಅಭಿನಂದನೆಗಳು.

    ಪ್ರತಿಕ್ರಿಯೆ
  4. sindhu

    ಪ್ರೀತಿಯ ಸಂಧ್ಯಾ,
    ನೀವು ಬರೆದದ್ದನ್ನ ಓದಿದಾಗೆಲ್ಲಾ ಅನಿಸುತ್ತಿತ್ತು. ಎಂಥ ಆರ್ದ್ರ ಭಾವ ಹುಟ್ಟಿಸುತ್ತೀರಿ ಅಂತ. ಮೊದ ಮೊದಲು ಓದಿದ ಈ ಕವಿತೆಗಳು ನಿಮ್ಮ ಭಾವಲೋಕದ ವಿಸ್ತಾರಕ್ಕೆ ಒಳ್ಳೆ ದಿಕ್ಕು ತೋರಿಸಿರಬಹುದು ಅಂತ ಈಗನ್ನಿಸುತ್ತಿದೆ.
    ಕೆ.ಎಸ್.ಎನ್ ನನಗೆ ಬೆರಗು ಮೂಡಿಸಿದ ಕವಿ.
    ಇದೇ, ಇಲ್ಲೆಯೆ, ಇವರ ಬಗ್ಗೆಯೇ ಬರೆದವರು ಅಂತ ಅನ್ನಿಸುತ್ತಲೇ ಅದು, ಅಲ್ಲಿ, ಮತ್ತು ಅವರ ಬಗ್ಗೆಯೂ ಬರೆದವರು. ಹೊರಗಿನ ಗಾಣಕ್ಕೆ ನಿರ್ಲಿಪ್ತವಾಗಿ, ಒಳಗೊಳಗೇ ಕುಲುಮೆಯ ತಿದಿಯೊತ್ತುತ್ತ ಕಿಡಿಗಳನ್ನ ಅಕ್ಷರವಾಗಿಸಿದರು. ಆ ಕಿಡಿಗಳು ಸುಡದ ಹಾಗೆ, ಬೆಳಕನ್ನ ಹೊತ್ತಿಸುವ ಹಾಗೆ ಬರೆಯುವ ಸಜ್ಜನಿಕೆಯನ್ನ ಎಚ್ಚರದಿಂದ ಮೈಗೂಡಿಸಿ ಬರೆದರು ಅಂತ ನನ್ನ ಅನಿಸಿಕೆ.
    ನೀವು ಉದ್ದರಿಸಿದ ಕವನದಲ್ಲಿರುವ “ಎತ್ತ ಕಡೆಗು ದೀಪವುರಿದು ಬೆಳಕಿನಲ್ಲು ಕತ್ತಲು” ನನಗೆ ಕೂಡಾ ಹಾಂಟಿಂಗ್ ಸಾಲು.
    ಇನ್ನೊಂದು ಅಂತಹುದೇ ಸಾಲು “ಅಲ್ಲಿ ಇರುಳಿನಲ್ಲು ಬೆಳಗು- ಕತ್ತಲಿಲ್ಲಿ ಒಳಗು ಹೊರಗು” ಕೂಡಾ..
    ಪ್ರೀತಿಯಿಂದ,
    ಸಿಂಧು

    ಪ್ರತಿಕ್ರಿಯೆ
  5. mahesh kalal

    ವೀಣೆ ನುಡಿಸಿ, ದೂರವಿರಿಸಿ
    ಬೆಳಕನಿಳಿಸಿ, ವಿರಮಿಸಿ
    ಮಲಗಬಹುದೆ, ನಗೆಯ ಸುಳಿಸಿ
    ಆಸೆಗಳನು ಅಡಗಿಸಿ? sogasagide ……………………….

    ಪ್ರತಿಕ್ರಿಯೆ
  6. Anil Talikoti

    ನಮ್ಮ ಮನಸಿನಲ್ಲಿದ್ದದನ್ನು ಅದು ಹೇಗೆ ನಿಮ್ಮ ಬರಹಗಳು ಪ್ರತಿಬಿಂಬಿಸುತ್ತವೊ ತಿಳಿಯದು. ಮನಸ್ಸಿಗೊಮ್ಮೆ ಕೇಳಿಕೊಳ್ಳಲು ಸಾಧ್ಯವಾದರೆ ಅದೆಂತೂ ಒಂದೊಮ್ಮೆ ಖುಷಿ ಕೊಟ್ಟ ಸಂಗತಿಗಳು ಮತ್ತೇಕೆ ಅದೇ ಮೂಲ ಮೊದ ನೀಡವೋ ಎಂದು ಕೇಳಿಕೊಳ್ಳಬೇಕು. ‘ಬಾಳಿಗೊಂದು ನಂಬಿಕೆ ಬೇಕು. ಇಲ್ಲಿ ಆ ನಂಬಿಕೆ ’ಒಲುಮೆ ಒಲಿದೇ ಒಲಿಯುವುದು’ ಎನ್ನುವುದರಲ್ಲಿದೆ. ಆ ನಂಬಿಕೆ ನಂಬಿದವರನ್ನು ಪೊರೆಯುತ್ತದೆ.ಇದೊಂದೆ ದಾರಿಯೇನೋ?

    ಪ್ರತಿಕ್ರಿಯೆ
  7. Shwetha.A......

    ಮೇಡಂ ನಿಮ್ಮ ಪದ ಆ ಪದಗಳ ಅರ್ಥ ನಿಜವಾಗ್ಲೂ ತುಂಬಾನೇ ಮನಸಿಗೆ ಖುಷಿ ಕೊಡುತ್ತೆ….ದಿನಕ್ಕೆ ಒಂದಸಲ ಆದ್ರೂ ನಿಮ್ಮ ಬರಹ ಓದ್ಬೇಕು ಅನ್ಸತ್ತೆ…ಇದೇ ರೀತಿ ನಿಮ್ಮ ಬರವಣಿಗೆನ ಮುಂದುವರೆಸಿ………ಪುಟ್ಟ ಬರಹದ ಮುದ್ದಾದ ಭಾವಗಳು ಭಾವಾಂತರಂಗದಲಿ ಅಚ್ಚಳಿಯದೇ ಕಾಡುತ್ತೆ…ಹೃದಯಪೂರ್ವಕ ಧನ್ಯವಾದಗಳು ನಿಮ್ಮ ಬರಹಕೆ ಮತ್ತೆ ನಿಮ್ಗೆ…..

    ಪ್ರತಿಕ್ರಿಯೆ
  8. vishwanath hebballi

    ajjana alamarinalli sikka mallige thumba chennagi moodi bandide. ” Bedave yaarigoo siri mallige” kai bidada malligeya parimala nenapagutte….. matte malligege kai chaachuttene…. thumba arthagarbhithavagide.
    Sunamiya hodethakke siluki naluguvudu saamanyavadadde….haagene hechinadenanno hudukuva hambala kooda sahajavaadadde.
    baligondu nambike beku,…. HAAGENE kala endoo heege iruvudilla haagoo kaalave ella kahi nenapu/gaaygalannu maresuva thaakattannu hondide.
    AJJANA alamariyalli sikka Malligege thumba thumba dhanyavadagalu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: