ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಹದಾರಿ

-ಮಂಜುನಾಥ ಬಾದಾಮಿ

ರಹಸ್ಯ

ಆಕಾಶಕ್ಕೆ ಮುಖವೆತ್ತಿ
ಅನಂತ ಋತುಗಳನ್ನು ರಹಸ್ಯವಾಗಿ
ಹಡೆಯುವ ಭೂಮಿಯ ಗರ್ಭದೊಳಗೆ
ರಾಗ ಲೀಲಾಜಾಲ
ಉಕ್ಕುವ ಜೀವ ಚೈತನ್ಯವನ್ನು
ಹೊತ್ತು ನಿಂತ ಗುರುತ್ವ ಬಲ
ಬರವಣಿಗೆ

ಅಗ್ನಿಕುಂಡದ ಮಾರ್ಜಾಲ ಉಕ್ಕಡಿಸಿದಂತೆ
ಒಮ್ಮೆಲೆ ತೆರೆದ ಅಂತರಂಗವೆಲ್ಲಾ ಬಹಿರಂಗ
ಒಮ್ಮೆ ಕುಡಿಕುಡಿಗೂ ಮೂಡುವ ಚಿಗುರು
ಮರುಕ್ಷಣವೇ ಸುಕ್ಕುಗಟ್ಟುವ
ಮರುಭೂಮಿಯ ಮಾರಣಾಂತಿಕ ತಾಪ
ಹುಟ್ಟಿನ ಹೊಟ್ಟೆಯೊಳಗೇ ಅಡಗಿದ
ಸಾವಿನ ಸರಕು

ಅಂತರಂಗದ ಅನಂತವನು ತೆರೆದಿಟ್ಟು
ಬರೆಯ ಹೊರಡುವ ಬೆರಳುಗಳಿಗೆ
ಪದ ಪದವೂ ಬೆರಗು
ಸೃಷ್ಟಿಯ ವ್ಯೂಹದಲ್ಲಿ ತುದಿಯ ಹೂವು
ಮುದಿಗೊಂಡು ಉದುರುವ ಮುನ್ನ
ಮಹಾವೃಕ್ಷ ಹೆರುವ ಬೀಜಗಳನು
ಹಣ್ಣಾಗುವ ಕಾಯೊಳಗೆ ಕಡೆದು ನಿಲ್ಲಿಸಿದಂತೆ
ಒಂದೊಂದೇ ಕಣ್ಣು ತೆರೆಯುವ
ಜೀವಜಗತ್ತು

ಒಳಗುದಿಯ ಅಗ್ನಿಪರ್ವತದ ಮೇಲೆ
ಹಾಸಿದ ಹಸಿರ ಮುಸುಕಿನ ತುದಿಯಲ್ಲಿ
ನಿತ್ಯ ಚಿಗಿಯುವ ಉನ್ಮಾದ
ಅದೊಂದು ಸರಳ ರೇಖೆಯಲ್ಲ
ವಿರುದ್ಧ ದಿಕ್ಕುಗಳಲ್ಲಿ ಹರಿದು
ಸರಹದ್ದುಗಳನ್ನು ಕೊರೆದು ಅಸಂಖ್ಯ
ಭಾವನದಿಗಳು ಸಂಧಿಸುವ
ಮಹಾಸಂಗಮ

ನದಿಯೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿ
ಗುಪ್ತಗಾಮಿಯಾಗಿ ಪ್ರವಹಿಸಿ ಮತ್ತೆಲ್ಲೋ
ದುತ್ತನೆ ಎದುರಾಗುವ ಆ ಅಗೋಚರ
ಜೀವನ ಸತ್ವವೇ ರಹಸ್ಯವಾಗಿ
ಎಲ್ಲಾ ಒಂದನ್ನೊಂದು ಸೇರಿಯೇ
ಒಂದನ್ನೊಂದು ಮೀರುವ
ಮುಖಾಬಿಲೆ

ಒಳಗಿನ ಆಕಾಶ ಹೊರಗಿನ ನಿಗೂಢ ತೆರೆದು
ಅಸ್ತಿತ್ವದ ಹಂಗು ಹರಿದು
ಮೈಯ್ಯ ಭಾರವೆಲ್ಲಾ ಕರಗಿ
ಮಿಂಚು ಮೋಡಗಳ ಮಿಲನದಲ್ಲಿ
ಧಾರೆ ಧಾರೆ ವರ್ಷಧಾರೆ
ಮರುಕ್ಷಣವೇ ಮಿದುಗೊಂಡ ಮೌನದ
ಅಪಾರ ಶೂನ್ಯದ ವಸುಂಧರೆಯ ಮೇಲೆ
ನಿಶ್ಯಬ್ಧದ ತುದಿಯಲ್ಲಿ ಮೂಡಿದ
ರಹದಾರಿ

‍ಲೇಖಕರು Admin

6 November, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading