ರಮೇಶ ಗಬ್ಬೂರ್ ಓದಿದ ʼದೇವರಿಲ್ಲದ ಸಾಕ್ಷಿಗೆ ರುಜು ಹಾಕಿʼ

ದೇವರಿಲ್ಲದ ಸಾಕ್ಷಿಗೆ ರುಜು ಹಾಕಲು ನಾನು ಸಿದ್ಧ..

ರಮೇಶ ಗಬ್ಬೂರ್

ಕೊಪ್ಪಳದ ‘ನಾಡಕವಿ ಗವಿಸಿದ್ದ ಎನ್ ಬಳ್ಳಾರಿ ಕಾವ್ಯಪ್ರಶಸ್ತಿ’ ಗೆಳೆಯ ಬಿದಲೋಟಿ ರಂಗನಾಥ್ ರವರಿಗೆ ದೊರಕಿದ್ದನ್ನು ಗಮನಿಸಿದ್ದೆ. ‘ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ’ ಎಂಬ ಪುಸ್ತಕದ ಶೀರ್ಷಿಕೆ ನನ್ನ ಗಮನ ಸೆಳೆದಿತ್ತು. ಅದನ್ನು ಓದಬೇಕು ಎಂದು ಮನದಲ್ಲಿ ಅಂದುಕೊಳ್ಳುತ್ತಿರುವಾಗಲೇ ಸಮ ನೋವಿನ ಮಿತ್ರ ಬಿದಲೋಟಿ ರಂಗನಾಥ್ ಫೋನಾಯಿಸಿ ಅಣ್ಣ ಪುಸ್ತಕ ಕಳಿಸುವೆ ವಿಳಾಸ ಹಾಕಿ ಎಂದಾಗ ಸಂತಸವಾಗಿತ್ತು.

ಪುಸ್ತಕ ತಲುಪಿದಾಗ ಮತ್ತಷ್ಟು ಸಂತೋಷವಾಗಿತ್ತು. ಕಾರ್ಯಕ್ರಮ ಮತ್ತು ಕೆಲಸದ ಒತ್ತಡದ ನಡುವೆ ಓದಲಾಗಿರಲಿಲ್ಲ. ಒಂದೆರಡು ತಿಂಗಳು ಕಳೆದಿತ್ತು. ಆ ಕಡೆಯಿಂದ ಫೋನಾಯಿಸಿ ‘ಅಣ್ಣ ಪುಸ್ತಕ ಓದಿದಿರಾ ಎಂದಾಗ’ ಆ ಪ್ರೀತಿಗೆ ಸೋತು ತಕ್ಷಣವೇ ಓದತೊಡಗಿದೆ.

ಲೋಕದ ವಿದ್ಯಾಮಾನಗಳಿಗೆ ವೈಚಾರಿಕವಾಗಿ ಮತ್ತು ಭಾವುಕವಾಗಿ ಮಿಡಿಯುವ ಕಾವ್ಯಪ್ರತಿಭೆ ಬಿದಲೋಟಿ ರಂಗನಾಥ. ವರ್ತಮಾನದ ವಿದ್ಯಾಮಾನಗಳಿಗೆ ತಕ್ಷಣವೇ ಸ್ಪಂದಿಸಿ ಕಾವ್ಯದ ಮೂಲಕ ಪ್ರಶ್ನಿಸುತ್ತಾ ಉತ್ತರಿಸುತ್ತಾ ಸಾಗಿದವರು. ಅವರ ಈ ಸಂಕಲನದೊಳಗಿನ ಭಾವನೆಗಳು ಕಾವ್ಯದ ಉತ್ಪ್ರೇಕ್ಷೆಗೆ ಒಳಗಾಗಿ ದಿಗ್ಗನೆದ್ದು ಬಂದ ಸಂಗತಿಗಳಲ್ಲ. ಬದಲಾಗಿ ಕಾಲದೊಳಗೆ ಕುದ್ದು ಆಕಾಶದ ಅಪಮಾನಗಳನ್ನೆಲ್ಲಾ ಅಂಗೈಯಲ್ಲಿ ತುಂಬಿಕೊಂಡು ನೋವ ಕಂಠದಲ್ಲಿ ಬರೆಯುತ್ತಿರುವವರು. ನಮಗೆಲ್ಲರಿಗೂ ಅರಿವಿನ ದಾರಿ ತೋರಿಸಿದ ಗುರು ಭೀಮನ ಮಾರ್ಗವಾಗಿ ಕಾಡುವ ಕವಿತೆಗಳ ಬಿತ್ತಿದವರು.

ಸಂಕಟಗಳನ್ನು ಕವಿತೆಗಳಲ್ಲಿ ಕಟ್ಟಿ ಸಮನಾಗಿ ಹಂಚುವ, ಆ ಮೂಲಕ ಏಕತಾರಿಯ ನಾದದಂತೆ ಮಿಡಿಯುವ ಕಾವ್ಯ ಪ್ರತಿಭೆಯಾಗಿ ನಿಂತವರು. ಮೇಲೆ ಭೋರ್ಗರೆಯುವ ನದಿಯ ಶಬ್ದದಂತಾಗದೆ ನದಿಯ ಒಳ ಹರಿವನ್ನು ಮತ್ತದರ ಶಾಂತ ಪ್ರತಿಭಟನೆಯನ್ನು ನಮಗೆ ಅರ್ಥ ಮಾಡಿಸುವ ಬಗೆಯಲ್ಲಿ ಇವರ ಕಾವ್ಯ ಹೊಸ ರೂಪಕಗಳನ್ನು ಇಟ್ಟುಕೊಂಡು ನಮ್ಮ ಮುಂದೆ ಬಂದು ನಿಲ್ಲುತ್ತದೆ.

ನಾನಿರದ ಮನದೊಳಗೆ ತಂತಿ ಎಷ್ಟು ಮೀಟಿದರೇನು ಎಂಬ ಮೌಲ್ಯವ ಹೇಳುತ್ತಾ “ತಂತಿಯೊಳಗಿನ ಶಬ್ದ” ದಿಂದ ಆರಂಭವಾಗುವ ಸಂಕಲನದ ಮೊದಲ ಕವಿತೆಯಳಗಿನ ಕವಿಯ ಆಶಯ ಮತ್ತು ನನ್ನ ಆಶಯ ಒಂದೇ. ತತ್ವಪದಕಾರರ ಶರಣರ ಸಂತರ ವಾಣಿಯಂತೆ ಸಕಲವೂ ನನ್ನೊಳನ್ನು ನುಡಿಯುವಂತೆ ಸಾಗುವ ಸಾಲುಗಳು.

ಸಣ್ಣ ಬೆಳಕಿನ ದಾರಿ ಮೇಲೆ
ಕಂಡು ಕಾಣದ ಹಂಸದ ನಡಿಗೆ
ಬೆನ್ನ ಹಿಂದಿನ ಸತ್ಯ ನಿರಾಕಾರದಲ್ಲಿ
ಮಿಥ್ಯವ ಸುಟ್ಟು ನಡೆಯುತ್ತಲೇ ಹೋಯಿತು
ಗೋಡೆಗಳಿಲ್ಲದ ಬಯಲ ಅರಸಿ.. (ತಂತಿಯೊಳಗಿನ ಶಬ್ದ)

ಮಾನವ ಪ್ರೀತಿಯನ್ನು ಬಿತ್ತಲು ಸಾಗಿದ ಹೆಜ್ಜೆಗಳ ಪರಂಪರೆಯನ್ನು ಕವಿ ಇಲ್ಲಿ ದಾಖಲಿಸುತ್ತಾರೆ. ತತ್ವಪದಕಾರರಂತೆ ಹಂಸವನ್ನು ಮಾನವ ರೂಪವಾಗಿ ತಂದು ಸುಳ್ಳನ್ನು ನಂಬಿದ, ಬದುಕಿದ, ನಡೆದ ಈ ಲೋಕ ಸಾಗುತ್ತಿರುವ ಗುರಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಇನ್ನೇನು ಬದುಕಿನ ಎಲ್ಲಾ ಮಗ್ಗುಲುಗಳನ್ನು ಅನುಭವಿಸಿದ ನಂತರ ಲೋಕದ ಸತ್ಯ ಗೊತ್ತಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಈ ಲೋಕದ ಸಂತೆ ಮುಗಿಸಿ ಹೊರಡುವ ಕಾಯವನ್ನು ಕುರಿತು “ಭವದ ಬೀಜ ಸಿಡಿದು” ಕವಿತೆಯಲ್ಲಿ ಸೂಕ್ಷ್ಮವಾಗಿ ಗ್ರಹಿಸುತ್ತಾರೆ. ಬುದ್ಧ ತತ್ವವನ್ನು ಸಾಗುವ ಹಾದಿಯ ಹೆಜ್ಜೆಯಾಗಿಸುತ್ತಾರೆ.

ಕವಿತೆಯಲ್ಲಿಯೇ ಪ್ರತಿಭಟಿಸುವ ಮಾರ್ಗವನ್ನು ಕಮಡುಕೊಂಡ ಕವಿ ಬಿದಲೋಟಿ ರಂಗನಾಥರವರು “ಬೆಳಕಿನ ಸಂತಾನ” ಎಂಬ ಕವಿತೆಯಲ್ಲಿ, ಬೆಳಕನರಿಯದೆ ಜಗದ ಕತ್ತಲೆಗಳನ್ನು ಓಡಿಸಲು ಎಡವಿ ಗಾಯ ಮಾಡಿಕೊಂಡು ಸಾಗುವ ಮನಸ್ಸುಗಳಿಗೆ ಹೇಳುತ್ತಾ ಕತ್ತಲೆ ಹೋಗುವುದಾದರೆ ಕರುಳನ್ನೇ ಬತ್ತಿ ಮಾಡಿ ಉರಿಸಲೂ ಸಿದ್ಧ ಎಂದೆನ್ನುವಾಗ ಲೋಕದಲ್ಲಿ ಎಡತಾಕುವ ಮಚ್ಚು, ತುಪಾಕಿ, ಅತ್ಯಾಚಾರ, ಬ್ರಷ್ಟಗೊಂಡ ಮನಸ್ಸುಗಳ ಮೇಲೆ ಬಹಳ ಮುನಿಸಿಕೊಳ್ಳುತ್ತಾರೆ.

ಸಂಕಲನದ ಆಶಯವನ್ನು ಹೊತ್ತ ಕವಿತೆ “ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ”. ಈ ಸಂಕಲನದೊಳಗೆ ನನಗಿಷ್ಟವಾದ ಕವಿತೆ. ಈ ಕವಿತೆ ಓದುವಾಗ ನಾನೇ ಹೇಳಿದ ಮಾತುಗಳಂತೆ ನನಗೆ ಪ್ರೀತಿ ಮೂಡುತ್ತದೆ. ಎಷ್ಟೊಂದು ಅಪಮಾನಗಳನ್ನು ಸಹಿಸಿಕೊಂಡು ಬದುಕುತ್ತಿದ್ದ ನನಗೆ ಅವಮಾನಗೊಂಡ ನೆಲದಲ್ಲಿಯೇ ನನ್ನನ್ನು ಗೌರವಿಸುವ ಆ ದಿನ ಬರಬಹುದು ಎಂಬ ನಂಬಿಕೆಯನ್ನು ಕಟ್ಟಿಕೊಡುವ ಕವಿತೆ. ಈ ನೆಲದಲ್ಲಿ ನಡೆದ ಅಪಮಾನಗಳು ಎಲ್ಲರಿಗೂ ಕೂಡ ಭವಿಷ್ಯದ ಬೆಳಕನ್ನು ತಮ್ಮ ಮುಂದೆ ತಂದು ನಿಲ್ಲಿಸುತ್ತವೆ ಮತ್ತು ತಾಳ್ಮೆಯನ್ನು ಕಲಿಸುತ್ತವೆ.

ಈ ಲೋಕದಲ್ಲಿ ಹಿಂದೆ ನಡೆದ ಮತ್ತು ಈಗಲೂ ನಡೆಯುತ್ತಿರುವ ಅಸ್ಪೃಶ್ಯತೆಯ, ಜಾತಿಯ, ಹಸಿವಿನ ಮತ್ತು ಇತರೆ ಕಾರಣಗಳಿಗಾಗಿ ನಡೆದ ಅವಮಾನಗಳನ್ನು ತಾಳಿಕೊಂಡ ಒಬ್ಬ ವ್ಯಕ್ತಿ ಸಾಧಕನಾದಾಗ ಅದೇ ಸಮಾಜ ಆತನನ್ನು ಹೇಗೆ ನೋಡಬಹುದು ಎನ್ನುತ್ತಾ ತನ್ನನ್ನು ವಿದ್ಯೆಯಿಂದ ದೂರವಿಟ್ಟಿರುವ ನಂಬಿಕೆಗಳ ಮೇಲೆ ದಾಳಿಮಾಡಿ ಅವುಗಳನ್ನು ಚಿದ್ರಗೊಳಿಸುತ್ತಾರೆ. ತಮ್ಮ ಗೌರವಕ್ಕೆ ಕಾರಣನಾದವನು ಇವನಲ್ಲವೆಂದು ಸಾಕ್ಷಿಗಾಗಿ ರುಜು ಹಾಕಿ ಎಂದು ಲೋಕವನ್ನು ಕೇಳುತ್ತಾರೆ. ಇದು ನಂಬಿಕೆಯ ಪ್ರಶ್ನೆ ಇಲ್ಲವೆಂದಲ್ಲ.. ಇಲ್ಲಿ ಕವಿ ಹೇಳುವುದು ಶ್ರಮದ, ಬೆವರಿನ, ನಂಬಿಕೆಯ ಉತ್ತರವೇ ಹೊರತು ಬೇರೇನೂ ಅಲ್ಲ.

ಬದುಕಿನ ಪಾಠ ಕಲಿಸಿದ ಅಪ್ಪನ ಹೆಗಲನ್ನು, ಆತನ ಮೌನವನ್ನು, ಆತನ ಹೆಜ್ಜೆಗಳನ್ನು ಇಡೀ ಬದುಕಿನ ಆಶಯವಾಗಿಸಿ ನೋಡುವಂತಹುದು “ಅಪ್ಪನೆದೆಯ ಬೆಳಕಿನ ಹಾಡು” ಕವಿತೆ. ಎಲ್ಲರ ಅಪ್ಪಂದಿರ ಹೆಗಲು ನೆನಪಾಗಿಸಿ ಕೊಡುವ ಮೂಲಕ ನಮ್ಮ ಬಾಲ್ಯದ ಬಣ್ಣಬಣ್ಣದ ಚಿತ್ರಣಗಳನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತದೆ.

ಸಂಕಲನದಲ್ಲಿನ ಸಾಲುಗಳಿಗೆ ಮಾತುಗಳಿರುವಂತೆ ಸಾಲುಗಳೊಳಗಿನ ಮೌನಗಳಿಗೆ ಮಾತುಗಳಿವೆ. ಅವು ಆಗಾಗ ಮೌಲ್ಯಯುತ ಮಾತು ಹೇಳಿ ತಿದ್ದುವ ಬುದ್ದನಂತೆ ಎಚ್ಚರಿಸುತ್ತವೆ. “ಹೆಸರಿಲ್ಲದ ಗುರುತಿನ ಚೀಟಿ” ಈ ಕವಿತೆ ಬಹಳವಾಗಿ ಕಾಡುವ ಕವಿತೆ.. ಈ ಕವಿತೆಯೊಳಗಿನ ಆ ತಾಯಿಯ ಮಾತುಗಳನ್ನು ಕೇಳಿಸಿಕೊಳ್ಳುವಾಗ ಮಾಡಿದ ಪಾಪಗಳಿಗೆ ಭಾರವಾದ ಮನಸ್ಸುಗಳಿವೆ ಎಂದು ಅರ್ಥವಾಗುತ್ತದೆ. ಮಾರಿಕೊಂಡ ಮನಸ್ಸುಗಳ ಹಿಂದೆ ಯಾರ ಬೆಂಬಲ ಇತ್ತು ಎಂದು ಮಕ್ಕಳಿಗಾಗಿ ಅಪ್ಪಂದಿರ ಹುಡುಕುವ ಕಡುಕಷ್ಟದ ಹಿನ್ನೆಲೆಯಲ್ಲಿ ನೋಡಿದರೆ ಅರ್ಥವಾಗುತ್ತದೆ..

ಅಪ್ಪನು ಯಾರೆಂದು ಕೇಳುತ್ತಿರುವೆ
ಎಷ್ಟೊಂದು ಅಪ್ಪಂದಿರು
ಯಾರು, ಯಾರ ಅಪ್ಪ?
ಹಾಜರಾತಿಯಲ್ಲಿ ಏನೆಂದು ಬರೆಸಲಿ?
ಗಂಡನ ಹೆಸರಿಲ್ಲದ ನಾನೊಂದು ಗುರುತಿನ ಚೀಟಿ

ಈ ಚಿತ್ರಣ ನನ್ನನ್ನು ಬಹಳವಾಗಿ ಕಾಡಿಸುತ್ತದೆ ಈಗಲೂ ನಮ್ಮ ಕಾಲೇಜಿನಲ್ಲಿ ಓದುವ ದೇವದಾಸಿ ತಾಯಂದಿರ ಮಕ್ಕಳ ಗೋಳಿದು. “ಕದವಿಲ್ಲದ ಕವಿಮನೆ” ಕವಿತೆಯಲ್ಲಿ ಎತ್ತುವ ಪ್ರಶ್ನೆ ಎಲ್ಲ ಕವಿಗಳನ್ನು ತಿವಿಯುತ್ತದೆ.

ಮನೆಯೊಳಗೆ ಕವಿಯ ಮನಸ್ಸಿದೆ
ಬುಡ್ಡಿ ಬೆಳಕಲ್ಲಿ ಕವಿತೆ ಬರೆಯುತ್ತದೆ
ಕವಿ ಮಾತ್ರ ಕಾಣಲಿಲ್ಲ

ನಿಜ ಕವಿತೆ ಕಾಣಬೇಕು. ಆದರೆ ಕವಿ ಕಾಣಬಾರದು ಅಂದಾಗ ಮಾತ್ರ ಕವಿ ಪ್ರಸಿದ್ಧಿಯಾಗಬಲ್ಲ. ಬರೀ ಪ್ರಶಸ್ತಿಗಾಗಿ, ವಿಶ್ವವಿದ್ಯಾಲಯಗಳ ಟೆಕ್ಸ್ಟ್ಗಳಿಗಾಗಿ ಬರೆದರೆ ಸಾಲದು ಕವಿತೆ ತೆರೆದ ಗೋಡೆಗಂಟಿದ ಪೋಸ್ಟರ್ ಆಗಬೇಕು ಎಂಬ ಸಾಮಾಜಿಕ ಕಾಳಜಿಯ ಮಾತು ಬಿದಲೋಟಿ ರಂಗನಾಥ ರವರದು..

ಹೆಣ್ಣೆಂದರೆ
ಒರೆಸಿ ಬಿಸಾಕುವ ಬಟ್ಟೆಯಲ್ಲ
ಅದೊಂದು ಜೀವಧ್ವನಿ
ಹುಣ್ಣಿಮೆ ಬೆಳಕು

ಹೀಗೆ ಸಾಗುವ ಸಾಲುಗಳಿರುವ ಈ ಭಾವ ಸ್ಪರ್ಷದ ಕವಿತೆ “ಮಮತೆಯ ಬೆಳಕು ಬಿತ್ತಿ” ಎಂಬ ಕವಿತೆಯದು. ಈ ಕವಿತೆಯನ್ನು ಓದುತ್ತಿದ್ದರೆ ಕವಿ ರಮೇಶ ಗಬ್ಬೂರ್ ಬರೆದ “ಹೆಣ್ಣೆಂದರೆ ದೀಪವು ಬೆಂಕಿಯಲ್ಲ ಬೆಳಕು” ಎಂಬ ಹಾಡಿನ ಸಾಲುಗಳು ನೆನಪಾಗುತ್ತವೆ.. ರಂಗನಾಥ್ ರವರ ಕವಿತೆಯ ಸಾಲುಗಳಿಗೆ ಸಾಮಾಜಿಕ ಜವಾಬ್ದಾರಿ ಇದೆ. “ವಜನಿಲ್ಲದ ಜಗುಲಿ ದಿಂಡು” ಎಂಬ ಕವಿತೆಯ ನೋಡುವುದಾದರೆ, ಬರಿಮೈಯಲ್ಲೇ ಜಗುಲಿ ಮೇಲೆ ಕೂತ ತನ್ನ ಅಜ್ಜ ಪೊರೆ ಬಂದ ಕಣ್ಣಲ್ಲಿ ಕನಸುಗಳ ಶೋಧಿಸುತ್ತಿದ್ದ ಚಾಣಕ್ಷ ಶಾಕ್ಯ.

ಸಶಕ್ತವಾಗಿ ಕಟ್ಟಿದ ಸಾಲುಗಳಿಂದ ಕವಿ ತನ್ನ ಪ್ರೀತಿಯ ಅಜ್ಜನನ್ನು ಭಾರ ಕಳೆದುಕೊಂಡವ ಎಂಬ ಅರ್ಥದಲ್ಲಿ ವಜನ್ ಇಲ್ಲದ ಎಂದು ಹೇಳುತ್ತಾ, ಲೋಕದ ಭಾರವನ್ನು ಕಳೆದು ತನ್ನೆಲ್ಲ ಅನುಭವಗಳನ್ನು ಪರಂಪರೆಗೆ ಧಾರೆ ಎರೆದು ಮಾರ್ಗದರ್ಶಕನಾಗಿ ಬರಿಮೈಯಲ್ಲಿ ಕಟ್ಟೆಯ ಮೇಲೆ ಕುಳಿತ ಪರಂಪರೆಯ ನೆನಪುಗಳ ಜೊತೆ ಇದ್ದ ಶಾಕ್ಯಮುನಿ ಗೌತಮನ ಮಾತಾಗಿ ಕಾಣುತ್ತಾರೆ.

ದಮ್ಮಿಲ್ಲದ ನೀಚರ ಮುಂದೆ ನಿನ್ನದು ಸೋಲಿನ ಸಾವಲ್ಲ
ಆದರೂ
ಅಕ್ಕಾ
ನೀನಿರಬೇಕಿತ್ತು
ಸೂರ್ಯ ಕಿರಣಗಳ ಉಗುಳಬೇಕಿತ್ತು
ಮೌಢ್ಯದ ಕತ್ತಲು ನಡುಗಬೇಕಿತ್ತು

ಈ ಮೇಲಿನ ಸಾಲುಗಳು “ವೈಚಾರಿಕತೆಯ ಕಗ್ಗೊಲೆ” ಎಂಬ ಕವಿತೆ ಯಾಗಿ ಅಕ್ಕ ಗೌರಿಯ ಸಾವನ್ನು, ನಂತರದ ಸಂಕಟಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುತ್ತದೆ. ಗೌರಿಯ ಸಾವು ಎಷ್ಟೊಂದು ಬೆಲೆಕಟ್ಟಲಾಗದ ಸಾವು, ಬೆವರ್ಸಿ ಮತ್ತು ದಮ್ಮಿಲ್ಲದ ನೀಚರ ಕೈಯಲ್ಲಿ ಸತ್ತದ್ದಕ್ಕೆ ನೋವಿದೆ ಎನ್ನುವ ಕವಿ ಸಾವು ಸಾರ್ಥಕವಾಗಿ ನಿನ್ನಂತಹ ಅಕ್ಕಂದಿರ ಹುಟ್ಟಿಗೆ ಕಾರಣವಾಗಿದೆ ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.. ಗೌರಿಯ ಸಾವಿನ ನಂತರದಲ್ಲಿ ನಾನು ಗೌರಿ ಅಭಿಯಾನವನ್ನು ನೆನಪಿಗೆ ತರಿಸುತ್ತಾರೆ.. “ನಿನ್ನ ಹೆಗಲ ಮೇಲೆ ಕೂತ ಹಕ್ಕಿ” ಎಂಬ ಕವಿತೆಯಲ್ಲಿ ಗಾಂಧಿಗೆ ಸೂಕ್ಷ್ಮವಾಗಿ ತಿವಿಯುವ ಕವಿ ನಿನ್ನ ಕನಸಿನ ದೇಶ ಏನಾಗಿದೆ ಎಂದು ಪ್ರಶ್ನಿಸುತ್ತಾ ಗಾಂಧಿಗೆ ಒಂದು ಕಿವಿ ಮಾತು ಹೇಳುತ್ತಾರೆ.

ಲೋಕದ ಕವಿಗಳಾರು ಹೇಳದ ಮಾತನ್ನು ಕವಿ ಬಿದಲೋಟಿ ರಂಗನಾಥ್ ಈ ಕವಿತೆಯಲ್ಲಿ ಹೇಳುತ್ತಾರೆ. ನೀವು ಹೊತ್ತು ಸಾಕಿದ ನಿಮ್ಮ ಹೆಗಲ ಮೇಲೆ ಕುಳಿತ ಹಕ್ಕಿ ಕೊನೆಗೂ ನಿಮ್ಮ ಮಾತು ಕೇಳಲಿಲ್ಲ ಅದಕ್ಕಾಗಿ ನೀವು ಒಮ್ಮೆ ಭೀಮನ ಜೊತೆ ಸೇರಿದ್ದರೆ ಹೇಗಿರುತ್ತಿತ್ತು, ಜಾತಿಮುಕ್ತ ಭಾರತ ಮಾಡಬಹುದಿತ್ತು ಎಂದು ಹೇಳುತ್ತಾರೆ. ಮತ್ತು “ಎಡವಿಬಿದ್ದ ಚರಕ” ಕವಿತೆಯಲ್ಲಿ ಇದರ ಮುಂದುವರೆದ ಮಾತುಗಳಿವೆ.

ಗಲ್ಲೆಬಾನಿಯ ನೀರಿನೊಳಗೆ ಮನಸ್ಸುಗಳು ಬಿಕ್ಕಳಿಸಿದ
ನಿಟ್ಟುಸಿರು ಕೇಳಿಸಲೇ ಇಲ್ಲ..

ಎಷ್ಟು ಬರೆದರೂ ಸಾಲದು. ಕವಿ ಸಿದ್ಧಲಿಂಗಯ್ಯನ ನಂತರದಲ್ಲಿ ದಲಿತ ಲೋಕ ತೆರೆದುಕೊಂಡ ಬಗೆ ಹೊಸದು. ಅವರ ಊರುಕೇರಿಯ ಮಾರ್ಗದಲ್ಲಿ ಸಾಗುವ “ನರಳುವ ಪದಗಳನ್ನು ಬೆನ್ನಟ್ಟಿ” ಎಂಬ ಕವಿತೆಯಲ್ಲಿನ ಈ ಸಾಲುಗಳು ದಲಿತ ಲೋಕ ಕಂಡ ಸಂಕಟಗಳಿಗೆ ಸಾಕ್ಷಿಯಾಗಿ ನಿಂತಿವೆ.. ಜಾತಿ ಬರೆವ ಮತ್ತು ಬರೆಯುತ್ತಿರುವ ಹೊಸ ಸಂಕಟಗಳ ಕಾರಣದಿಂದಾಗಿ ಈ ಲೋಕದ ಅಸ್ಪೃಶ್ಯನ ಕಷ್ಟಗಳು ನೀರಿನೊಳಗೆ ಅಳುತ್ತಿವೆ. ಯಾಕೆಂದರೆ ಅಳುವಾಗ ಕಣ್ಣೀರು ಯಾರಿಗೂ ಕಾಣದಿರಲೆಂದು. ನಿಟ್ಟುಸಿರು ಗಾಳಿಗೆ ತಾಗದಿರಲೆಂದು, ಜಾತಿ ಬರೆದ ಸಂಕಟಗಳಿಗಾಗಿ ನೆಲಕೆ ಚೆಲ್ಲಿದ ರಕ್ತದ ಮೇಲೆ ಕವಿತೆ ಬರೆಯುತ್ತೇವೆ ಎನ್ನುತ್ತಾರೆ.

ತಾತ ಕೂತ ಜಗುಲಿ ಇಲ್ಲ
ಅಜ್ಜಿಯ ಗಂಟೆ ನಾದ ವಿಲ್ಲ ಕಥೆಗಳಿಲ್ಲ
ಆಡಿ ಬೆಳೆದ ಮನೆಯೊಳಗಿನ ಹೆಜ್ಜೆಗುರುತಿಲ್ಲ..
ಪ್ರೀತಿ ಸಂಬಂಧದ ಮೇಲೆ ಹಣದ ಕಣ್ಣು.. (ಅಂಗಳದ ಮೇಲೆ ಕೂತು)

ಈ ಕಾಲದಲ್ಲಿನ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಕವಿ ಈ ಕವಿತೆಯಲ್ಲಿ ಎಲ್ಲ ಸಂಬಂಧಗಳಿಗೆ ತಿಲಾಂಜಲಿಯಿಟ್ಟು ಹಣದ ತಕ್ಕಡಿಯಲ್ಲಿ ತೂಗುವ ಸಂಬಂಧಗಳನ್ನು ಪರಿಚಯಿಸುತ್ತಾರೆ. ಈ ಕವಿತೆಯ ಕೊನೆಯಲ್ಲಿ ಹೇಳುವ ಮಾತು ಬಹಳ ದುರಂತಮಯವಾದುದು. ಸತ್ಯ ನಿಷ್ಠೆಯ ಮೇಲೆ ಸಿಮೆಂಟ್ ಹಾಸಿದ್ದಾರೆ ಎಂದು ಕವಿತೆಯಲ್ಲಿಯೆ ತೀರ್ಪು ಬರೆಯುತ್ತಾರೆ.

ಕುಳಿತ ನೆಲ ಸುಡುವಾಗ ಜನಿಸಿದ ಭೀಮ
ಕರುಳ ವೇದನೆಯ ಕೊರಳ ಹಾರದ ನೋವು
ಬಿದ್ದಿತ್ತು ನೆಲದ ತುಂಬಾ

“ಭೀಮನೆಂಬ ಅಂತರಂಗದ ಬೆಳಕು” ಕವಿತೆಯಲ್ಲಿ ಬೆಳಕು ರೂಪಕವಾಗಿ ನೆಲದ ತುಂಬ ಬಿದ್ದಂತೆ, ಕುಂತ ನೆಲವೇ ಸುಡುವಾಗ ಜನಿಸಿ ಬಂದವರು ನಮ್ಮ ಬಾಬಾ ಸಾಹೇಬರು ಎಂದು ಅವರನ್ನು ಪರಿಚಯಿಸುತ್ತಾರೆ. ಕರುಳ ಬೇನೆಯ ಕೂಗನು ಪಾರ್ಲಿಮೆಂಟಿನಲ್ಲಿ ಇಟ್ಟವರೆಂದು, ನಿನ್ನ ದಾರಿಯೇ ನಮಗಿರುವ ಮಾರ್ಗವೆಂದು ಹೇಳುತ್ತಾರೆ. ಕವಿಗಿರುವ ಸಾಮಾಜಿಕ ಬದ್ಧತೆ ಎಲ್ಲಾ ಕವಿತೆಗಳ ಹಿಂದಿನ ಆಶಯವಾಗಿ ಇಲ್ಲಿ ಕಾಣುತ್ತೇವೆ. ಸಂಕಲನದಲ್ಲಿ ಕವಿ ಕೆ.ಬಿ.ಸಿದ್ದಯ್ಯ, ಎಲ್.ಎನ್. ಮುಕುಂದರಾಜ್ ರವರನ್ನು ಕುರಿತು ಕವಿತೆ ಬರೆದು ವ್ಯಕ್ತಿತ್ವಗಳನ್ನು ವಿಭಿನ್ನವಾಗಿ ಪರಿಚಯಿಸುತ್ತಾರೆ.

ಕವಿತೆಗಳ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಹೊಸ ಹೊದಿಕೆ ಹೆಣೆಯಲಾಗಿದೆ. ಜಗದ ಪ್ರತಿ ವಿದ್ಯಮಾನವನ್ನು ಸೂಕ್ಷ್ಮವಾಗಿ ಗ್ರಹಿಸಿ ಕಾವ್ಯವಾಗಿಸುವ ತಾಕತ್ತು ಬಿದಲೋಟಿ ರಂಗನಾಥ ರವರಿಗೆ ಸರಿಯಾಗಿ ದಕ್ಕಿದೆ. ಓದುತ್ತಿದ್ದರೆ ಕವಿತೆಗಳು ಬೇಗ ಅರ್ಥವಾಗುವವು ಎಂಬ ಭ್ರಮೆ ಕಳಚಿ ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಕಾರಣಕ್ಕಾಗಿ ಕವಿತೆ ಈ ಲೋಕದ ಶೋಷಿತರ ಪರವಾದ ತನ್ನ ಹಕ್ಕುಗಳನ್ನು ಮಂಡಿಸುತ್ತದೆ. ಕವಿತೆಯೊಳಗಿನ ಆಕ್ರೋಶ ಸಾಮಾಜಿಕ ನ್ಯಾಯಕ್ಕಾಗಿ ಎಂಬುದನ್ನು ಇಲ್ಲಿ ಮರೆಯಲಾಗದು..

ಕೊನೆಗೆ ಕವಿಯ ಕವಿತೆಯ ಸಾಲುಗಳನ್ನು ಹಾಗೆಯೇ ಇಡುತ್ತಾ ಆ ಸಾಲುಗಳಿಗೆ ಒಂದು ಶಿರ್ಷಿಕೆ ನೀಡಿದ್ದೇನೆ ಅಷ್ಟೇ. ಅವರದೇ ಕಾಡುವ ಸಾಲುಗಳು.. “ಸತ್ಯದ ಬಣಿಮೆಗೆ ಸುಳ್ಳಿನ ಬೆಂಕಿ ತಾಕಿಸಿ, ಮನೆಹಾಳರ ಹೆಜ್ಜೆ ಸದ್ದು, ನೆಲವ ಬೆದರಿಸಿದೆ” ಇಂದಿನ ತಲ್ಲಣ. “ಮಾತಿಲ್ಲದ ಮನಸನು, ಅರಿಯದ ಮಡಿವಂತಿಕೆಗೆ, ಬ್ರಾಹ್ಮಣ್ಯದ ಜಾಢ್ಯ” ಇಂದಿನ ದುರಂತ. “ಅಡಿಯಿಟ್ಟ ಹೆಜ್ಜೆಗಳಿಗೆ, ಮುಡಿ ಮೇಲಿನ ಮಡಿ ನೀರು, ಬೆಂಕಿಯಾದೀತೆಂಬ ಚಿಂತೆಯಲಿ, ಕೊರಗಿದ ಮನಸ್ಸುಗಳು” ಇಂದಿನ ಬೆದರಿಕೆ ಇದನ್ನೇ ಈಗ ಆಲೋಚಿಸಬೇಕಿರುವುದು.

‍ಲೇಖಕರು Admin

January 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Bi

    ಉತ್ತಮ ಅನುಸಂಧಾನ..
    ಇಬ್ಬರಿಗೂ ಅಭಿನಂದನೆಗಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: