ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಜನಿ ಪ್ರಭು ಕವಿತೆ – ನನ್ನ ಕನಸಿನ ಹಕ್ಕಿ..

ರಂಜನಿ ಪ್ರಭು

ಕಣ್ಣಾಮುಚ್ಚೇ ಕಾಡೇಗೂಡೇ ಆಡುತಿರುವಾಗ
ನನ್ನ ಕನಸಿನ ಹಕ್ಕಿಯ
ಕಣ್ಣನು ಕೈಯಿಂದ ಮುಚ್ಚಿ
“ನಮ್ಮಯ ಹಕ್ಕಿಯ ಬಿಟ್ಟೇ ಬಿಟ್ಟೇ” ಎನುತಾ ಹಾರಿಬಿಟ್ಟೆ.
ಹಾರಿಯೇ ಹೋಯಿತು
ಮರಳಿಬರಲಿಲ್ಲ..
ನೋಡು ಗೆಳೆಯಾ ನಿನ್ನೆದೆಯ ವಿಸ್ತಾರ ಬಾನಿನಲಿ ಹಾರಬಂದಿದೆ
ನನ್ನ ಕನಸಿನಾ ಹಕ್ಕಿ
ಆಗಾಗ ನಿನ್ನ ಕಂಗಳಾ ಕೊಳದೊಳಗೆ ಮುಳುಮುಳುಗಿ ಏಳುತಿದೆ

ನಿನ್ನ ಬೆರಳುಗಳ ತಾಳಕ್ಕೆ
ಪುಟಪುಟನೆ ಕುಣಿಯುತಿದೆ
ಪುಟ್ಟ ಕಾಲುಗಳ
ನನ್ನ ಕನಸಿನಾ ಹಕ್ಕಿ

ನಿನ್ನ ಹೆಗಲ ಕೊಂಬೆಯಲಿ ಕುಳಿತು ಕರ್ಣಕುಂಡಲದೊಳಗೆ
ಏನನೋ ಹಾಡುತಿದೆ ಕೇಳು
ನಿನ್ನ ಕಣ್ಣಂಚಿನ ಬಿಂದುವನು ಕೊಕ್ಕಿನಲಿ ಹೀರುತಿದೆ ಇಬ್ಬನಿಯ ಹನಿಯೆಂದು ನನ್ನ ಕನಸಿನ ಹಕ್ಕಿ..
ನೀ ನಿದ್ರಿಸಿರುವಾಗ
ಹಣೆಯಮೇಲಿನ ಕುರುಳ ಸರಿಸುತಿದೆ
ನೀ ಕಾಣುವಾ ಕರಿಬಿಳಿಯ ಕನಸಿಗೆ
ತನ್ನ ಪುಚ್ಛದ ಬಣ್ಣ ಹಚ್ಚುತಿದೆ ನೋಡು
ನನ್ನ ಕನಸಿನ ಹಕ್ಕಿ

ನಿನ್ನ ಹೃದಯದೊಳೆದ್ದ
ಮಧುರ ಭಾವದ ಉಸಿರ
ಮಂದಮಾರುತವೆಂದು
ಭ್ರಮಿಸುತಿದೆ…ನನ್ನ ಕನಸಿನ ಹಕ್ಕಿ
ನನ್ನ ಕಣ್ತಪ್ಪಿಸಿದ
ಕನಸಿನಾ ಹಕ್ಕಿಯನು
ಅನುದಿನವೂ ಅನುಕ್ಷಣವೂ ಅರಸುತಿಹೆ ನಾನು…

‍ಲೇಖಕರು avadhi

15 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading