ನಾ ದಿವಾಕರ ಕಂಡಂತೆ ʼ ನಾವೂ ಇತಿಹಾಸ ಕಟ್ಟಿದೆವು ʼ

ನಾ ದಿವಾಕರ


ವಿಸ್ಮೃತಿಯ ಕಣಜದಿಂದ ಹೆಕ್ಕಿ ತೆಗೆದ ರತ್ನಗಳು
ಇತಿಹಾಸದಲ್ಲಿ ಮುಖ ಹುದುಗಿಸಿದರೆ ಕಳೆದಹೋದ ಹೆಜ್ಜೆಗಳೂ ಕಾಣುವುದಿಲ್ಲ ಎಂದು ಸೂಚಿಸುವ ಕೃತಿ

ವರ್ತಮಾನದ ಬೌದ್ಧಿಕ ಪರಿಸರದಲ್ಲಿ ಮತ್ತು ಸಾರ್ವಜನಿಕ ಸಂಕಥನಗಳಲ್ಲಿ ಅತಿ ಹೆಚ್ಚು ಸಂಕೀರ್ಣತೆಗೊಳಗಾಗಿರುವುದು ನಾವು ಸಾಗಿ ಬಂದಿರುವ ಇತಿಹಾಸದ ಹಾದಿ ಮತ್ತು ಈ ಹಾದಿಯಲ್ಲಿ ನಾವು ಗುರುತಿಸಲು ಸಾಧ್ಯವಾಗಿರುವ ಹೆಜ್ಜೆ ಗುರುತುಗಳು.ಇತಿಹಾಸವನ್ನು ಕುರಿತು ಸಮಕಾಲೀನ ಸಮಾಜ ಮತ್ತು ವರ್ತಮಾನದ ಸನ್ನಿವೇಶಗಳು ಸೃಷ್ಟಿಸುವ ಕಥನಗಳು ಅನೇಕ ಸಂದರ್ಭಗಳಲ್ಲಿ ಯಾವುದೋ ಒಂದು ನಿರ್ದಿಷ್ಟ ತಾತ್ವಿಕ/ಸೈದ್ಧಾಂತಿಕ ಅಭಿಪ್ರಾಯಕ್ಕೆ ಬದ್ಧವಾಗಿರುತ್ತವೆ.ಮಾನವ ಸಮಾಜ ನಡೆದುಬಂದ ಹಾದಿಯನ್ನು ಅವಲೋಕಿಸುವ ಸಂದರ್ಭಗಳಲ್ಲೆಲ್ಲಾ ನಮಗೆ ಕೆಲವು ಖ್ಯಾತನಾಮರು ಇತಿಹಾಸದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳು ನೆನಪಾಗುವುದು ಸಹಜ. ಡಾ ಬಿ ಆರ್‌ ಅಂಬೇಡ್ಕರ್‌ ಅವರ “ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು ”ಎಂಬ ಮಾತುಗಳು ನಮ್ಮ ನಡುವೆ ನಿರಂತರವಾಗಿ ಹರಿದಾಡುತ್ತಲೇ ಇದೆ.ಆದರೆ ಪ್ರಸ್ತುತ ರಾಜಕೀಯ ಮತ್ತು ಸಾಂಸ್ಕೃತಿಕ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇತಿಹಾಸದ ಉತ್ಖನನ ಪ್ರಕ್ರಿಯೆಯು ಬೌದ್ಧಿಕ ನೆಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದೂ ಕಾಣುತ್ತದೆ.

ಚರಿತ್ರೆಯ ಹೆಜ್ಜೆಗಳಿಂದ ಹೆಕ್ಕಿ ತೆಗೆದ ಕೆಲವು ಪ್ರಾಸಂಗಿಕ ಘಟನೆಗಳನ್ನೇ ಇಡೀ ಕಾಲಯುಗಕ್ಕೆ ಆರೋಪಿಸುವ ಒಂದು ಬೌದ್ಧಿಕ ಪರಂಪರೆಯನ್ನೂ ವರ್ತಮಾನದ ಸಮಾಜ ಪೋಷಿಸುತ್ತಿದೆ. ಚರಿತ್ರೆ, ಚಾರಿತ್ರಿಕ ವ್ಯಕ್ತಿ, ಚಾರಿತ್ರಿಕ ಘಟನೆಗಳು ಮತ್ತು ಆಗುಹೋಗುಗಳನ್ನು ಅಧ್ಯಯನ ಮಾಡುವುದಕ್ಕಿಂತಲೂ ಹೆಚ್ಚಾಗಿ, ತಮ್ಮ ವರ್ತಮಾನದ ಅನಿವಾರ್ಯತೆಗಳಿಗೆ ಸೂಕ್ತವಾದ ಘಟನಾವಳಿಗಳನ್ನು ಹೆಕ್ಕಿ ತೆಗೆದು, ಅವುಗಳನ್ನೇ ಸಮಗ್ರ ನೆಲೆಯಲ್ಲಿ ಪ್ರಸ್ತುತಪಡಿಸುವ ಮೂಲಕ, ಚರಿತ್ರೆಯ ವಿಸ್ಮೃತಿಗಳನ್ನು ವಿಕೃತಗೊಳಿಸುವ ಪ್ರಯತ್ನಗಳ ನಡುವೆ ನಾವಿದ್ದೇವೆ.ಮೈಸೂರು ಹುಲಿ ಟಿಪ್ಪು ಸಹ ಇಂತಹ ವಿಕೃತಿಗಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಮಧ್ಯಕಾಲೀನ ಚರಿತ್ರೆಯನ್ನು ವರ್ತಮಾನದಲ್ಲಿಟ್ಟು ನೋಡುವ ಬೌದ್ಧಿಕ ಪ್ರಕ್ರಿಯೆಗೆ ಸಾರ್ವಜನಿಕ ಮನ್ನಣೆಯೂ ದೊರೆಯುತ್ತಿರುವ ಸಂದರ್ಭದಲ್ಲೇ, ಸಮಕಾಲೀನ ಚರಿತ್ರೆಯ ಕೆಲವು ಹೆಜ್ಜೆಗಳನ್ನು ವರ್ತಮಾನದ ಚೌಕಟ್ಟಿನೊಳಗಿಟ್ಟು ಗಮನಿಸಲೇಬೇಕಾದ ಸಂಗತಿಗಳೂ ನಮ್ಮನ್ನು ಕಾಡಬೇಕಿದೆ. ವಿಸ್ಮೃತಿಗೆ ಜಾರಿದೆ ಎನ್ನುವುದಕ್ಕಿಂತಲೂ, ಶ್ರೇಣೀಕೃತ-ಪಿತೃಪ್ರಧಾನ ಸಮಾಜದ ಚಾರಿತ್ರಿಕ ಸ್ಮೃತಿಗೆ ನಿಲುಕಲಾರದೆ ಹೋದ ಇಂತಹ ಹೆಜ್ಜೆಗುರುತುಗಳನ್ನು ದಾಖಲಿಸುವ ಮಹತ್ಕಾರ್ಯವನ್ನು ಮರಾಠಿ ಲೇಖಕಿಯರಾದ ಊರ್ಮಿಳಾ ಪವಾರ್‌ ಮತ್ತು ಮೀನಾಕ್ಷಿ ಮೂನ್‌ ಮಾಡಿದ್ದಾರೆ. ವಂದನಾ ಸೋನಾಲ್ಕರ್‌ ಅವರ ಆಂಗ್ಲ ಅನುವಾದವನ್ನು ನಮ್ಮವರೇ ಆದ ದು ಸರಸ್ವತಿ ಅದ್ಭುತವಾಗಿ ಕನ್ನಡೀಕರಿಸಿದ್ದಾರೆ.

“ ನಾವೂ ಇತಿಹಾಸ ಕಟ್ಟಿದೆವು ” ಎಂಬ ಈ ಅಮೂಲ್ಯ ಕೃತಿ ಅಂಬೇಡ್ಕರ್‌ ಚಳುವಳಿಯಲ್ಲಿ ಮಹಿಳೆಯರ ಹೆಜ್ಜೆಗಳ ಹೆಗ್ಗುರುತುಗಳನ್ನು ದಾಖಲಿಸುವುದೇ ಅಲ್ಲದೆ, ಬಹುತೇಕ ಐದಾರು ದಶಕಗಳ ಕಾಲ ಈ ಹೆಗ್ಗುರುತುಗಳನ್ನೂ ಗಮನಿಸಲಾರದಷ್ಟು ಕುರುಡಾಗಿದ್ದ ಸಮಾಜದ ಮುಂದೆ ಚರಿತ್ರೆಯ “ ಮರೆತುಹೋದ ಅಥವಾ ನೆನಪಾಗಿಸಿಕೊಳ್ಳಲು ಇಚ್ಚಿಸದ “ ಮಹಿಳೆಯರ ಧೀರೋದ್ದಾತ ಬದುಕಿನ ಕ್ಷಣಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುತ್ತದೆ. ಅಂಬೇಡ್ಕರ್‌ ಅವರ ಬರಹಗಳು ಕನ್ನಡಿಗರಿಗೆ ಪರಿಚಯವಾದದ್ದೇ ನಾಲ್ಕೈದು ದಶಕಗಳ ಮುನ್ನ ಎಂಬ ಪರಿತಾಪ, ಪಶ್ಚಾತ್ತಾಪ ನಮ್ಮನ್ನು ಕಾಡುತ್ತಿರುವ ಸಮಯದಲ್ಲೇ ಈ ಪುಸ್ತಕದ ಓದು ನಮ್ಮೊಳಗಿನ ಪಾಪಪ್ರಜ್ಞೆಯನ್ನು ಮತ್ತೊಮ್ಮೆ ಬಡಿದೆಬ್ಬಿಸುತ್ತದೆ. ಅಂಬೇಡ್ಕರ್‌ ನೇತೃತ್ವದ ಮಹಾಚಳುವಳಿಗಳಲ್ಲಿ, ಹೋರಾಟಗಳಲ್ಲಿ ದಲಿತ ಸಮುದಾಯದ ಮಹಿಳೆಯರು ನಿರ್ವಹಿಸಿದ ಪಾತ್ರ ಮತ್ತು ಅಂಬೇಡ್ಕರ್‌ ಪರಿನಿಬ್ಬಾಣದ ನಂತರದಲ್ಲೂ ಅವರ ಚಿಂತನೆಗಳನ್ನು ಅನುಕರಿಸುತ್ತಾ, ಅವರ ಸೈದ್ಧಾಂತಿಕ ನೆಲೆಗಳನ್ನು ವಿಸ್ತರಿಸುತ್ತಾ ಬಂದಿರುವ 44 ಮಹಿಳೆಯರ ಜೀವನಗಾಥೆಯನ್ನು ಈ ಕೃತಿ ಹೃದಯಸ್ಪರ್ಶಿಯಾಗಿ ತೆರೆದಿಡುತ್ತದೆ.

ಭಾರತದ ಬೌದ್ಧಿಕ ಸಂಕಥನಗಳಲ್ಲಿ ಚರಿತ್ರೆಯ ಹೆಜ್ಜೆಗಳನ್ನು ಗುರುತಿಸುವಾಗ, ಅಂಬೇಡ್ಕರ್‌ ಅವರು ಗುರುತಿಸಿದ ಜಾತಿ ವ್ಯವಸ್ಥೆಯ-ಅಸ್ಪೃಶ್ಯತೆಯ ಉಗಮ ಮತ್ತು ಜಾತಿ ದೌರ್ಜನ್ಯಗಳ ಮೂಲ ನೆಲೆಗಳನ್ನು ಶೋಧಿಸುವ ಚಾರಿತ್ರಿಕ ಧಾತುಗಳನ್ನು ಸಹ ಗಮನಿಸುವುದು ಅತ್ಯವಶ್ಯಕ. ಸಮಕಾಲೀನ ಇತಿಹಾಸ ಮತ್ತು ಸ್ವಾತಂತ್ರ್ಯಪೂರ್ವ ಭಾರತದ ಚರಿತ್ರೆಯ ಪುಟಗಳತ್ತ ಹೊರಳಿದಾಗ ಸಹಜವಾಗಿಯೇ ಅಂಬೇಡ್ಕರ್‌ ಕೇಂದ್ರ ಬಿಂದುವಾಗಿ ಕಾಣುತ್ತಾರೆ. ಹಾಗೆಯೇ ಅವರ ಎಲ್ಲ ಹೋರಾಟಗಳಲ್ಲಿ ಮತ್ತು ಹೋರಾಟಗಳ ನಂತರದಲ್ಲಿ ಅವರ ಹಾದಿಯಲ್ಲೇ ನಡೆದು, ಇಂದು ನಾವು ಅಂಬೇಡ್ಕರ್‌ವಾದ ಎಂದು ಪರಿಭಾವಿಸುವ ತಾತ್ವಿಕ ನೆಲೆಗಳನ್ನು ವಿಸ್ತರಿಸಲೆತ್ನಿಸಿದ ಅನೇಕಾನೇಕ ಮಹಿಳೆಯರ ಹೆಜ್ಜೆ ಗುರುತುಗಳನ್ನೂ, ಹೋರಾಟದ ವಿಭಿನ್ನ ಆಯಾಮಗಳನ್ನೂ ಗುರುತಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಹುಶಃ ನಮ್ಮ ಬೌದ್ಧಿಕ ಜಗತ್ತು, ದಲಿತ ಜಗತ್ತನ್ನೂ ಸೇರಿದಂತೆ, ವಿಫಲವಾಗಿದೆಯೇನೋ ಎಂಬ ಭಾವನೆ ಮೂಡುತ್ತದೆ. ವರ್ತಮಾನದ ಸಂದರ್ಭದಲ್ಲೂ, ಕರ್ನಾಟಕದ ದಲಿತ ಚಳುವಳಿಯ ನಡುವೆ, ಈ ಕೃತಿ ಇನ್ನೂ ವ್ಯಾಪಕವಾದ ಚರ್ಚೆಗೊಳಗಾಗುತ್ತಿಲ್ಲ ಎನ್ನುವುದನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ.

ಮೂಲ ಕೃತಿಯ ಆಂಗ್ಲ ಅನುವಾದಕಿ ವಂದನಾ ಸೋನಾಲ್ಕರ್‌ ತಮ್ಮ ಪ್ರಸ್ತಾವನೆಯಲ್ಲಿ “ ಈ ದಲಿತ ಮಹಿಳೆಯರ ಎರಡು ರೀತಿಯ ಸ್ವ-ಅಭಿವ್ಯಕ್ತಿಗೆ ಸಾಕ್ಷಿಯಾಗುವ ಅವಕಾಶವನ್ನು ಹೊಂದಿದೆ,,,,, ” (ಪು04)ಎಂದು ಹೇಳುತ್ತಲೇ “ ಅಂಬೇಡ್ಕರರ ಚಳುವಳಿಯ ಕಥನಗಳು, ಮತ್ತು ಈ ಕಥನಗಳಲ್ಲಿ ಬಿಂಬಿತವಾಗಿರುವ ದಲಿತರ ಸಂಸ್ಕೃತಿ, ಪುರಾಣ, ಹಾಡುಗಳು, ಸಂಕೇತಗಳು, ಶೌರ್ಯ ಮತ್ತು ಬಲಿದಾನದ ಕತೆಗಳಲ್ಲಿ ದಲಿತ ಮಹಿಳಾ ದೃಷ್ಟಿಕೋನದ ಕೊರತೆ ಇದೆ ” (ಪುಟ ೪)ಎಂದೂ ವಿಷಾದದಿಂದಲೇ ಹೇಳುವುದು ನಮ್ಮೊಳಗಿನ ಪುರುಷ ಪ್ರಜ್ಞೆಯನ್ನು ಖಂಡಿತವಾಗಿಯೂ ಇರಿಯುತ್ತದೆ. ಮತ್ತೊಂದೆಡೆ ಇದೇ ಲೇಖಕಿ “ದಲಿತ ಮಹಿಳೆಯರದೇ ನಿರ್ದಿಷ್ಟ, ವಿಶೇಷ ನೋಟವು ದಲಿತ ಸಾಂಸ್ಕೃತಿಕ ಅಭಿವ್ಯಕ್ತಿಯ ಭಾಗವಾಗುವುದೇ ಇಲ್ಲ ” (ಪುಟ 03) ಎಂದೂ ವಿಷಾದಿಸುತ್ತಾರೆ. ಏಕೆ ಹೀಗಾಗಿದೆ ಎಂದು ಯೋಚಿಸುತ್ತಾ ಕುಳಿತರೆ ನಮ್ಮ ತೋರು ಬೆರಳು ಸೋತುಹೋಗಬಹುದು. ಬದಲಾಗಿ ನಮ್ಮನ್ನು ನಾವೇ ಪ್ರಶ್ನಿಸಿಕೊಂಡಾಗ, ನಮ್ಮ ಅಧ್ಯಯನದ ಕ್ಷೇತ್ರದಲ್ಲಿ ಬಹುಶಃ ಈ ನಿರ್ದಿಷ್ಟ ಆಯಾಮವು ನಮ್ಮ ಚಿಂತನೆಗೆ, ಆಲೋಚನೆಗೆ, ಯೋಚನಾ ಲಹರಿಗೆ ನಿಲುಕಲು ಸಾಧ್ಯವಾಗಿಲ್ಲ ಎಂದು ಭಾವಿಸಿ, ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು. ಈ ಆತ್ಮಾವಲೋಕನದ ಛಾಯೆ ಮರಾಠಿಗರನ್ನೂ ಕಾಡಬೇಕಿದೆ ಏಕೆಂದರೆ ಈ ಕೃತಿಯು ಹೊರಬಂದಿದ್ದು 1989-90ರಲ್ಲಿ. ಅಂದರೆ ಅಂಬೇಡ್ಕರ್‌ ನಿರ್ಗಮಿಸಿದ ಮೂರು ದಶಕಗಳ ನಂತರ, ಮಂಡಲ್-ಕಮಂಡಲ್‌ ವಿವಾದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ. ಮೂಲ ಮರಾಠಿ ಕೃತಿಕಾರರಾದ ಊರ್ಮಿಳಾ ಪವಾರ್‌ ಮತ್ತು ಮೀನಾಕ್ಷಿ ಮೂನ್‌ ಹಾಗೂ ಅವರಿಗೆ ಇಂತಹ ಒಂದು ಸಂಶೋಧಕ ಕೃತಿಯನ್ನು ಸಿದ್ಧಪಡಿಸಲು ಪ್ರೇರಣೆ ನೀಡಿದ ʼ ಸ್ತ್ರೀ ಉವಾಚ್‌ ʼ ಎಂಬ ಸ್ತ್ರೀವಾದಿ ಗುಂಪಿಗೆ, ಅದರ ಸದಸ್ಯರಾದ ಛಾಯಾ ದಾತಾರ್‌ ಅವರಿಗೆ ಸಮಸ್ತ ಕನ್ನಡಿಗರೂ ಕೃತಜ್ಞತೆ ಸಲ್ಲಿಸಬೇಕು. ಹಾಗೆಯೇ ಆಂಗ್ಲದಿಂದ ಕನ್ನಡಕ್ಕೆ ಸಹಜ ಶೈಲಿಯಲ್ಲಿ ಮನಮುಟ್ಟುವಂತೆ ಅನುವಾದಿಸಿರುವ ದು. ಸರಸ್ವತಿ ಅವರನ್ನೂ ಅಭಿನಂದಿಸಬೇಕು.

ಅಂಬೇಡ್ಕರ್‌ ಅವರ ಹೋರಾಟಗಳಲ್ಲಿ ಅವರೊಡನೆ ಹೆಜ್ಜೆ ಹಾಕಿದ 44 ಮಹಿಳೆಯರ ಜೀವನಗಾಥೆಯನ್ನು ಓದುತ್ತಾ ಹೋದಂತೆ ನಮ್ಮೊಳಗಿನ ಸಂವೇದನೆಯ ತಂತುಗಳು ಪ್ರಕ್ಷುಬ್ಧವಾಗುತ್ತಲೇ ಹೋಗುತ್ತವೆ. ಏಕೆಂದರೆ ಈ ಪುಟಗಳಲ್ಲಿರುವ ಹೆಜ್ಜೆಗುರುತುಗಳು 20ನೆಯ ಶತಮಾನದ್ದು. ಭಾರತ ಆಧುನಿಕತೆಯನ್ನು ಮೈಗೂಡಿಸಿಕೊಂಡು, ಒಂದು ಸ್ವತಂತ್ರ ರಾಷ್ಟ್ರವಾಗಲು ಸನ್ನದ್ಧವಾಗುತ್ತಿದ್ದ ಸಂದರ್ಭದಲ್ಲೂ ನಮ್ಮ ಸಮಾಜ ಮಹಿಳೆಯ ಬಗ್ಗೆ ಹೊಂದಿದ್ದ ಪ್ರಾಚೀನ ಮನಸ್ಥಿತಿ ಮತ್ತು ಈ ಸಾಂಸ್ಕೃತಿಕ ನೆಲೆಯಲ್ಲೇ ದಲಿತ ಅಸ್ಮಿತೆಗಾಗಿ, ಮಹಿಳೆಯ ಘನತೆಗಾಗಿ ಹೋರಾಡಿದ ಈ ಮಹಿಳೆಯರು ಅನುಭವಿಸಿದ ಕಷ್ಟ ಕೋಟಲೆಗಳು ನಮ್ಮೊಳಗಿನ ಸಾಂಸ್ಕೃತಿಕ ಪ್ರಜ್ಞೆಯನ್ನೂ ಕಲಕಿಬಿಡುತ್ತದೆ. ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಮಹಿಳೆ ಸದಾ ಪಿತೃಪ್ರಾಧಾನ್ಯತೆಯ ತೂಗುಗತ್ತಿಯ ಅಡಿಯಲ್ಲೇ ಬದುಕು ಸವೆಸುತ್ತಾಳೆ. ಶೋಷಿತ ಸಮುದಾಯಗಳ, ದಲಿತ ಮಹಿಳೆಯರ ಪಾಲಿಗೆ ಇದು ಎರಡಲಗಿನ ಕತ್ತಿಯಾಗುತ್ತದೆ. ಒಂದೆಡೆ ಆಂತರಿಕ ಪುರುಷಾಧಿಪತ್ಯ ಮತ್ತೊಂದೆಡೆ ಬಾಹ್ಯ ಜಾತಿ ದೌರ್ಜನ್ಯ, ಈ ಎರಡು ನೆಲೆಗಳಲ್ಲಿ ದಲಿತ ಮಹಿಳೆ ತನ್ನ ಹೆಣ್ತನದ ಘನತೆಗಾಗಿ, ಸಾಂಸ್ಕೃತಿಕ ಅಭಿವ್ಯಕ್ತಿಗಾಗಿ, ಸಾಮಾಜಿಕ ಸ್ಥಾನಮಾನಗಳಿಗಾಗಿ ಹೋರಾಡಬೇಕಾಗುತ್ತದೆ.

ಇಂತಹ ಹೋರಾಟಗಳ ವಿಭಿನ್ನ ನೆಲೆಗಳನ್ನು, ಆಯಾಮಗಳನ್ನು ʼ ಇತಿಹಾಸ ಕಟ್ಟಿದವರ ʼ ಈ ಕಥನಗಳಲ್ಲಿ ನಾವು ಕಾಣಬಹುದು. ಒಂದೆಡೆ ಕೌಟುಂಬಿಕ ನೆಲೆಯ ಪುರುಷಾಧಿಪತ್ಯವನ್ನು ಧಿಕ್ಕರಿಸಿ ಹೋರಾಟದ ಬದುಕನ್ನು ರೂಪಿಸಿಕೊಂಡ ಮಹಿಳೆಯರು ಕಂಡುಬಂದರೆ ಮತ್ತೊಂದೆಡೆ ಸಮಾಜದ ಕಾಕದೃಷ್ಟಿಯನ್ನೂ ಲೆಕ್ಕಿಸದೆ ತಮ್ಮ ಘನತೆ ಮತ್ತು ಅಸ್ಮಿತೆಗಾಗಿ ಹೋರಾಡಿದ ಮಹಿಳೆಯರು ಇಲ್ಲಿ ಕಾಣುತ್ತಾರೆ. ಸಾಮಾನ್ಯವಾಗಿ ಭಾರತೀಯ ಮಹಿಳೆ, ವಿಶೇಷವಾಗಿ ಶೋಷಿತ ಸಮುದಾಯದ ಮಹಿಳೆ, ಎದುರುಗಾಣುವ ನೋವು, ವೇದನೆ, ಯಾತನೆ, ಚಿತ್ರಹಿಂಸೆ, ತಾರತಮ್ಯ, ದೌರ್ಜನ್ಯ ಇವೆಲ್ಲವನ್ನೂ ದಾಖಲಿಸುವ ಈ ಕೃತಿ ಇದರ ನಡುವೆಯೇ ಫಿನಿಕ್ಸ್‌ಗಳಂತೆ ಎದ್ದು ನಿಲ್ಲುವ ಧೀರೋದ್ದಾತ್ತ ಮಹಿಳೆಯರನ್ನು ನಮಗೆ ಪರಿಚಯಿಸುತ್ತದೆ. ಒಂದೆಡೆ ಶಾಂತಾಭಾಯಿ ಭಾಲೇರಾವ್‌ ಎಂಬಾಕೆ “ ನನ್ನ ಗಂಡನೊಂದಿಗೆ ನನಗೆ ಸರಿಬರಲಿಲ್ಲ, ಏಕೆಂದರೆ ಅವರಿಗೆ ಬೇಕಾಗಿದ್ದುದು ಕೇವಲ ಗೃಹಿಣಿ,,,, ” (ಪುಟ 280) ಎಂದು ಹೇಳಿದರೆ ಮತ್ತೊಂದೆಡೆ ಬೇಬಿತಾಯಿ ಕಾಂಬ್ಳೆ ಎಂಬ ಮಹಿಳೆ “ ದಲಿತ ಹೆಣ್ಣುಮಕ್ಕಳ ಬದುಕು ಕತ್ತರಿಯ ನಡುವೆ ಸಿಕ್ಕಿದಂತೆ,,,,,ಮನೆಯೊಳಗೆ ಗಂಡಂದಿರ ಭಯ, ಹೊಲದಲ್ಲಿ ದುಡಿಯುವಾಗ ಮರ್ಯಾದೆಗಾಗಿ ಭಯಪಡಬೇಕು,,,,, ಒಂದೇ ಒಂದು ದಿನವನ್ನೂ ನಾನು ಸಂತೋಷದಿಂದ ಕಳೆಯಲಿಲ್ಲ,,,, ಹೊಡೆತ, ಜಗಳ, ಕಣ್ಣಿರು, ಅಳು ಮತ್ತು ಹಸಿವು ಇವೆಲ್ಲವೂ ಮಾಮೂಲಿಯಾಗಿದ್ದವು,,,,,” ಎಂದು ಹೇಳುತ್ತಾರೆ.

ಈ ರೀತಿಯ ನೋವು, ಯಾತನೆ ಮತ್ತು ಆಂತರಿಕ-ಬಾಹ್ಯ ಚಿತ್ರಹಿಂಸೆಗಳನ್ನು ಎದುರಿಸಿಯೂ ಎಲ್ಲವನ್ನೂ ಮೆಟ್ಟಿನಿಂತು ಅಂಬೇಡ್ಕರ್‌ ಅವರ ಹೆಜ್ಜೆಗಳಲ್ಲೇ ನಡೆದ ಮಹಿಳೆಯರ ಪ್ರತಿಯೊಂದು ಹೆಜ್ಜೆಯೂ ಸಮಕಾಲೀನ ಸಮಾಜದ ಸುಪ್ತ ಅಥವಾ ಸತ್ತ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಿದೆ. ಈ ಶೋಷಿತ ಮಹಿಳೆಯರು ಇಂತಹ ದೌರ್ಜನ್ಯವನ್ನು ಎದುರಿಸಿದ್ದು: “20ನೆಯ ಶತಮಾನದಲ್ಲಿ , ಭಾರತ ಆಧುನಿಕತೆಯನ್ನು ಅಪ್ಪಿಕೊಂಡ ನಂತರದಲ್ಲಿ, ಭಾರತೀಯ ಸಂಸ್ಕೃತಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮತ್ತು ಭಾರತ ತನ್ನದೇ ಆದ ಪ್ರಜಾಸತ್ತಾತ್ಮಕ-ಸ್ವತಂತ್ರ ದೇಶವನ್ನು ಕಟ್ಟಿಕೊಳ್ಳಲು ಹವಣಿಸುತ್ತಿದ್ದ ಸನ್ನಿವೇಶದಲ್ಲಿ”. ಈ ಅಂಶವೂ ನಮ್ಮನ್ನು ಕಾಡಲೇಬೇಕಲ್ಲವೇ ? ಈ ದೌರ್ಜನ್ಯ, ಅಟ್ಟಹಾಸ, ದಬ್ಬಾಳಿಕೆ ಮತ್ತು ಜಾತಿ ತಾರತಮ್ಯಗಳ ಹಿಂಸೆ ಮರಾಠಾವಾಡ ವಿಶ್ವವಿದ್ಯಾಲಯದ ಸುತ್ತ ನಡೆದ ಹೋರಾಟದವರೆಗೂ ವಿಸ್ತರಿಸುವುದನ್ನೂ ಈ ಹೆಜ್ಜೆಗಳಲ್ಲಿ ನಾವು ಕಾಣುತ್ತೇವೆ. ಅಂದರೆ 20ನೆಯ ಶತಮಾನದ ಅಂಚಿನವರೆಗೂ ಭಾರತದ ಶೋಷಿತ ಮಹಿಳೆ ತನ್ನ ಹುಟ್ಟಿನ ಕಾರಣಕ್ಕಾಗಿ ಪುರುಷಾಧಿಪತ್ಯದ ಶೋಷಣೆಯನ್ನೂ, ಜಾತಿಯ ಕಾರಣಕ್ಕಾಗಿ ಮೇಲ್ಜಾತಿ ಸಮಾಜದ ಶೋಷಣೆಯನ್ನೂ ಎದುರಿಸುತ್ತಲೇ ಬಂದಿರುವುದನ್ನು ಈ ಕೃತಿ ದಾಖಲಿಸುತ್ತದೆ.

ಹಾಗಾಗಿಯೇ ಈ ಅಮೂಲ್ಯ ಕೃತಿಯ ಪುಟಪುಟದಲ್ಲೂ ಹೆಜ್ಜೆ ಮೂಡಿಸುವ ಶೋಷಿತ ಮಹಿಳೆಯರು ʼಇತಿಹಾಸ ಕಟ್ಟಿದವರಾಗಿಯೇʼ ಕಾಣಲು ಸಾಧ್ಯ. ಮಥುರಾದಿಂದ ಮುರುಘಾಮಠದವರೆಗಿನ ಪಯಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ನಮ್ಮ ನೆನಪುಗಳಲ್ಲಿ ಹಾದು ಹೋಗುವ ಬಾವ್ರಿ ದೇವಿ, ಬಿಲ್ಕಿಸ್‌ ಬಾನೋ, ನಿರ್ಭಯ, ಖೈರ್ಲಾಂಜಿ ಮತ್ತು ಹಾಥ್ರಸ್‌ ಘಟನೆಗಳು, ಈ ʼಇತಿಹಾಸ ಕಟ್ಟಿದವರʼ ಮುಂದುವರೆದ ಸಂತತಿಯಾಗಿ ಕಾಣುತ್ತಾರೆ. ಇತಿಹಾಸವನ್ನು ಅರಿಯುವುದೆಂದರೆ ಕೇವಲ ಸಮಾಜದ ಮೇಲೆ ಆಧಿಪತ್ಯ ಸಾಧಿಸಿದವರ ವೀರಗಾಥೆಯನ್ನು ಹಾಡುವುದಷ್ಟೇ ಅಲ್ಲ. ಈ ಪುಟಗಳಲ್ಲೇ ಅಳಿಸಿಹೋಗದೆ ಪಳೆಯುಳಿಕೆಗಳಂತೆ ಉಳಿದುಕೊಂಡಿರುವ ಚೇತನಗಳನ್ನು ಹೆಕ್ಕಿ ತೆಗೆಯುವುದು. ಇಂತಹ ಚೇತನಗಳೇ ಭವಿಷ್ಯದ ಸಮಾಜಕ್ಕೆ ದಿಕ್ಸೂಚಿಯಾಗಿಯೂ ಪರಿಣಮಿಸುತ್ತಾರೆ. ವ್ಯಕ್ತಿ ಕೇಂದ್ರಿತ ಇತಿಹಾಸದ ಚೌಕಟ್ಟಿನಿಂದ ಹೊರಬಂದು ಜನಕೇಂದ್ರಿತ ಇತಿಹಾಸಕ್ಕೆ ಹೊರಳಿದಾಗ ನಮಗೆ ಹೀಗೆ ʼ ಇತಿಹಾಸ ಕಟ್ಟಿದವರ ʼ ನೋವಿನ ಎಳೆಗಳು ಗೋಚರಿಸಲು ಸಾಧ್ಯ.

“ ನಾವೂ ಇತಿಹಾಸ ಕಟ್ಟಿದೆವು ” ಕೃತಿ ಈ ಮಹತ್ಸಾಧನೆಯನ್ನು ಮಾಡುತ್ತದೆ. ರಾಜಮಹಾರಾಜರು, ಆಳುವವರು ಕೋಟೆ ಕೊತ್ತಲಗಳನ್ನು, ಸ್ಮಾರಕ ಅರಮನೆಗಳನ್ನು ಕಟ್ಟುತ್ತಾರೆ ಆದರೆ ನಿಜವಾದ ಇತಿಹಾಸ ಕಟ್ಟುವವರು ತಳಮಟ್ಟದ ಸಾಮಾನ್ಯ ಜನತೆ, ಅದರಲ್ಲೂ ವ್ಯಕ್ತಿಗತವಾಗಿ ಆಂತರಿಕ-ಕೌಟುಂಬಿಕ ದೌರ್ಜನ್ಯಗಳನ್ನು ಎದುರಿಸುತ್ತಲೇ ಸಮಾಜವನ್ನು ಕಟ್ಟುವ ಶೋಷಿತ ಜನತೆ. ಶೋಷಿತರಲ್ಲಿ ಶೋಷಿತರಾಗಿಯೇ ಇಂದಿಗೂ ಕಾಣಬಹುದಾದ ಮಹಿಳಾ ಸಮೂಹವೂ ಇಂತಹುದೇ ಇತಿಹಾಸವನ್ನು ಕಟ್ಟಬಹುದು ಎನ್ನುವುದನ್ನು ನಿರೂಪಿಸಿರುವ “ ನಾವೂ ಇತಿಹಾಸ ಕಟ್ಟಿದೆವು ” ವರ್ತಮಾನದ ಸಮಾಜಕ್ಕೆ ಮತ್ತು ಭವಿಷ್ಯದ ತಲೆಮಾರಿಗೆ ಕಣ್ತೆರೆಸುವಂತಹ ಒಂದು ಕೃತಿ ಎಂದರೆ ಅತಿಶಯೋಕ್ತಿಯೇನಲ್ಲ. ಶತಮಾನದ ನಂತರವೂ ಭಾರತೀಯ ಸಮಾಜದಲ್ಲಿ, ಹೆಣ್ತನದ ಘನತೆ ಮತ್ತು ಮಹಿಳಾ ಅಸ್ಮಿತೆಗೆ ಸಂಬಂಧಿಸಿದಂತೆ, ಕ್ರಾಂತಿಕಾರಕ ಬದಲಾವಣೆಯೇನೂ ಆಗಿಲ್ಲ ಎಂಬ ವಿಷಾದದೊಂದಿಗೇ ಈ ಕೃತಿಯನ್ನು ನಾವು ಓದಿ ಮನನ ಮಾಡಿಕೊಳ್ಳಬೇಕಿದೆ.

‍ಲೇಖಕರು avadhi

February 15, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: