ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ ಆರಂಭ…

ಇವರು ರಂಗ ‘ಕಿರಣ’-

ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.

ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.

ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.

ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.

ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.

ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.

ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.

ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ

-ಜಿ ಎನ್ ಮೋಹನ್

‘ರಂಗ ಕೈರಳಿ’ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

1

ನಾಟ್ಕ….ನಾಟ್ಕ….ನಾಟ್ಕ

ಇಟ್ಫಾಕ್…ಕೇರಳದ ಅಂತರರಾಷ್ಟ್ರೀಯ ರಂಗ ಹಬ್ಬ

Humanity Must Unite

——-

ನಾನು ಈ ವರ್ಷ ಕೇರಳದ ಅಂತರರಾಷ್ಟ್ರೀಯ ನಾಟಕೋತ್ಸವ ‘ಇಟ್ಫಾಕ್’ ಗೆ ಹುರುಪಿನಿಂದ ಹೊರಟಿದ್ದಕ್ಕೆ ಕಾರಣಗಳು ಮೂರು.

ಮೊದಲನೆಯದು, ‘ಇಟ್ಫಾಕ್’ ನ ಅಂಗಳದಲ್ಲಿ ಅಲೆದಾಡಬೇಕೆನಿಸುವ ನನ್ನ ಕಾಲ ತುರಿಕೆಗೆ ಮದ್ದು ಸಿಗೋದು. ಎರಡನೆಯದು, ಜೋಳಿಗೆಯಲ್ಲಿ ತುಂಬಿಟ್ಟುಕೊಂಡ ‘ರಂಗಕೈರಳಿ’ ಯಲ್ಲಿನ ಅವರ ಚಿತ್ರಗಳನ್ನು ಗೆಳೆಯರಿಗೆ ತೋರಿಸಿ ಅವರ ಮುಖದಲ್ಲಿ ಮಂದಹಾಸ ಕಾಣೋದು. (ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ನಾಟಕೋತ್ಸವ ನಡೆದಿರಲಿಲ್ಲ. ಜೊತೆಗೆ ಪುಸ್ತಕದ ಕುರಿತು ಅಲ್ಲಿನ ರಂಗಭೂಮಿಯ ಗೆಳೆಯರ ಗ್ರೂಪ್ ನಲ್ಲಿ ಪರಿಚಯ ಪ್ರಕಟವಾಗಿ ಒಂದು ವಲಯದಲ್ಲಿ ಅದರ ಕುರಿತ ಕುತೂಹಲವೂ ಇತ್ತು)

ಮತ್ತು ಮೂರನೆಯದಾಗಿ, ಪುಸ್ತವನ್ನು ಪ್ರಕಾಶಿಸುತ್ತಲೇ ಇಟ್ಫಾಕ್ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಗೆಳೆಯ ಜಿ.ಎನ್ ಮೋಹನ್ ಜೊತೆ ಒಂದು ವಾರ ನಾಟಕ ನೋಡ್ತಾ ಕಳೆಯೋದು…

ಹಾಗಾಗಿ, ಇಟ್ಫಾಕ್ ನ ದಿನಗಳು ನಿಗದಿಯಾದಂತೆ ಪುಳಕ, ಆತಂಕ. ಯಾವಾಗಲೂ ಉಳಿದುಕೊಳ್ಳೋ ನಮ್ಮ ಬಿ.ಎಸ್.ಎನ್. ಎಲ್ ನ ಗೆಸ್ಟ್ ಹೌಸ್ ಸಿಗ್ತದೋ ಇಲ್ವೋ….ಈಗ ಅದರ ಸ್ಥಿತಿ ಹೇಗಿದೆಯೋ? ಓನ ಲೈನ್ ನಲ್ಲಿ ಎಷ್ಟು ಟಿಕೆಟ್ ಸಿಗ್ತದೊ? ಎಷ್ಟು ನಾಟ್ಕಕ್ಕೆ ಸಿಗ್ತದೋ. ಹೀಗೆ ಚಡಪಡಿಕೆ.  

ಈ ವರ್ಷದ ಇಟ್ಫಾಕ್ ನ ಪ್ರಚಾರವೂ ಜೋರೇ ಇತ್ತು. ಅದರಲ್ಲೂ ಉತ್ಸವದ ಹೈಲೈಟ್ ಆಗಿ ಪೀಟರ್ ಬ್ರೂಕ್ ರ ‘ಟೆಂಪೆಸ್ಟ್’ ಬರಲಿಕ್ಕಿತ್ತು. ಸೊಷಿಯಲ್ ಮೀಡಿಯಾದಲ್ಲೂ ಜೋರು ಸುದ್ದಿಯೇ ಇತ್ತು. ದಿನಕ್ಕೊಂದರಂತೆ ಹೊಸ ಹೊಸ ಪ್ರಯೋಗಶೀಲ ಪ್ರಚಾರದ ವೀಡಿಯೋಗಳೂ ಬರ್ತಿದ್ವು. ದಿನ ಹೋದಹಾಗೆ ಕಾಲ್ತುರಿಕೆಯೂ ಜೋರಾಗ್ತಿತ್ತು.

ಕಾರ್ನಾಡರು ಕಂಡರು:

ಊರಿಂದ ಸುಮಾರು ಹನ್ನೊಂದು ಗಂಟೆ ಪ್ರಯಾಣ ಮುಗಿಸಿ ನಾನು ಇಟ್ಫಾಕ್ ನ ಅಂಗಳಕ್ಕೆ ಕಾಲಿಟ್ಟಾಗ ಮೊದಲು ಕಂಡಿದ್ದೇ ಗಿರೀಶ್ ಕಾರ್ನಾಡರು. ಕಂದು ಬಣ್ಣದ ಕ್ಯಾನ್ವಾಸ್ ನಲ್ಲಿ ನನ್ನ ಕಂಡೇ ನಗುತ್ತಿದ್ದಾರೇನೋ ಎನಿಸುವಂಥ ಅವರ ಚಿತ್ರ ಕಂಡಿದ್ದೇ ತಡ, ಕ್ಯಾಂಪಸ್ ತುಂಬ ಆಪ್ತವಾಗಿಹೋಯ್ತು. ಅವರ ಜೊತೆ ಜೊತೆಯಲ್ಲೇ ಜಗತ್ತಿನ ಮಹಾನ್ ನಾಟಕಕಾರರು, ರಂಗದಿಗ್ಗಜರು. ಮಹಾ ದೊಡ್ಡ ಗಾತ್ರದ ಇಂಥ ಪೇಂಟಿಂಗ್ ಗಳ ಹೊರಾಂಗಣ ಪ್ರದರ್ಶನವನ್ನೇ ಇಟ್ಫಾಕ್ ಈ ಬಾರಿ ಏರ್ಪಡಿಸಿತ್ತು. ಪೀಟರ್ ಬ್ರೂಕ್, ಸಫ್ದರ ಹಷ್ಮಿ, ಕಾರ್ನಾಡ್, ಕಾವಲಮ್ ನಾರಾಯಣ ಪಣಿಕ್ಕರ್, ಹೀಗೆ… ಈ ಪೇಂಟಿಂಗ್ ಗಳ ಸಂಖ್ಯೆ ಮೊದಲ ದಿನ ನಾಲ್ಕು ಇದ್ದಿದ್ದು, ಮರುದಿನ ಎಂಟಾಗಿ, ಮಾರನೇ ದಿನ ಹದಿನಾರಾಗಿ ದಿನ ದಿನಕ್ಕೆ ಏರ್ತಾ ಜಾಗ ಬದಲಿಸ್ತಾ ಹೋಗಿ ಕೊನೆಗೆ ಎಲ್ಲ ಎತ್ತರದ ರ್ಯಾಕನ್ನೇರಿ ಅಚ್ಚರಿ ಮೂಡಿಸಿದ ಪ್ರಕಿಯೆಯೇ ಮಜವಾದದ್ದು.  2013 ರಿಂದಲೇ ನಿರಂತರವಾಗಿ ಈ ಮೇಳಕ್ಕೆ ಹೋಗ್ತಿರುವವ ನಾನು. ಅದೇಕೋ ಈ ಬಾರಿ ವ್ಯವಸ್ಥೆಯೂ ಆವರಣವೂ ಜಾಸ್ತಿ ರಂಗೀನ್ ಎನಿಸ್ತಿತ್ತು.

ಹನುಮಂತನ ಬಾಲದಂಥಾ ಕ್ಯೂ:

ಆ ಸಂಜೆ ಬಹಳ ಹೊತ್ತು ಓಡಾಡ್ತಾ ಕಾಲ ಕಳೆಯೋ ಹಾಗಿರ್ಲಿಲ್ಲ. ಅದೇ ಸಂಜೆ ನಾನು ತೈವಾನ್ ನ ‘ ಹೀರೋ ಬ್ಯೂಟಿ’ ಬ್ಯಾಲೆ ನೋಡ್ಬೇಕಿತ್ತು. ಮೈಲುದ್ದದ ಕ್ಯೂ ಸೇರ್ಕೋಬೇಕಿತ್ತು.

ಇಟ್ಫಾಕ್ ನಲ್ಲಿ ನಾಟ್ಕ ನೋಡೋದೇನೂ ಸುಲಭ ಅಲ್ಲ. ಹದಿನೈದು ದಿನ ಮೊದಲೇ ಓಪನ್ ಆಗೋ ಓನಲೈನ್ ಬುಕ್ಕಿಂಗ್ ಗೆ ಕಾಯ್ತಿರಬೇಕು. ಅದೂ ನಿಮಿಷಗಳ ಲೆಕ್ದಲ್ಲಿ. ಬುಕಿಂಗ್ ಶುರುವಾದ ಕೆಲವೇ ಹೊತ್ತಿಗೆ ಎಲ್ಲ ಟಿಕೆಟ್ ಗಳೂ ಖಾಲಿಯಾಗ್ಬಿಟ್ಟಿರ್ತವೆ. ಅದ್ರಲ್ಲೂ ವಿದೇಶೀ ನಾಟ್ಕಗಳ ಟಿಕೆಟ್ ತುಂಬಾ ಕಷ್ಟ. ಟಿಕೆಟ್ ಸಿಗಲಿಲ್ಲ ಅಂದ್ರೆ ಬೆಳಿಗ್ಗೆ ಏಳಕ್ಕೇ ಬಂದು ಮೂರ್ನಾಲ್ಕು ತಾಸು ಕಾಯ್ತಿರೋರ ಜೊತೆ ಟಿಕೆಟ್ಗಾಗಿ ಕ್ಯೂ ನಿಲ್ಬೇಕು. ಟಿಕೆಟ್ ಸಿಕ್ಕಮೇಲೂ ಎಂಟ್ರಿ ಗೆ ಕಡಿಮೆ ಅಂದ್ರೂ ಒಂದು ಗಂಟೆ ಕ್ಯೂ. ಆ ಕ್ಯೂ ಅಂತೂ ಹನುಮಂತನ ಬಾಲದಂತೆ ಕಂಪೌಂಡ್ ದಾಟಿ ರಸ್ತೆ ಸೇರಿರ್ತದೆ. ತುಂಬಾ ಖುಷಿಯ ಸಂಗ್ತಿ ಅಂದ್ರೆ ಅಲ್ಲಿ ವಿ.ಐ.ಪಿ ಸಂಸ್ಕೃತಿ ಇಲ್ಲ. ಎಷ್ಟೇ ದೊಡ್ಡ ಮನುಷ್ಯನಾದ್ರೂ ಕ್ಯೂ ನಲ್ಲೇ ಹೋಗ್ಬೇಕು. ಏನೇ ಆದ್ರೂ ಸಂಯಮದಿಂದ ಕಾಯೋ ಜನರ ನಾಟ್ಕದ ಹುಚ್ಚಿಗೆ ನಮಸ್ಕಾರ ಮಾಡೋದೇ.

ತೈವಾನ್ ಬ್ಯಾಲೆ:  

ಹೀರೋ ಬ್ಯೂಟಿ

Director: Chen Chao-Hsien

 ಈ ನಾಟ್ಕಕ್ಕೆ ತೈವಾನಿನ ಹೈ ಕಮಿಷನರ್ ಬಂದಿದ್ರು. ಎಷ್ಟು ಚುರುಕಿನ ಜನ ಅವ್ರು. ಅಷ್ಟೇ ನಿರರ್ಗಳ, ನಗೆಯುಕ್ಕಿಸುವ ಮಾತುಗಳು. ಅವರ ಮಾತುಗಳೇ ಮುಂದೆ ನೋಡೋ ‘ಬ್ಯಾಲೆ’ಗೆ ಮುನ್ನುಡಿ ಬರೆಯುವ ಹಾಗಿದ್ವು ಸುಮಾರು ತೊಂಭತ್ತೈದು ವರ್ಷ ಹಿರಿಯದಾದ Ming Hwa Yuan Arts and Cultural Group ತೈವಾನಿನ ಪಾರಂಪರಿಕ ಬ್ಯಾಲೆಗಳಾಚೇನೂ ಯೋಚಿಸ್ತಾ, ಸಾಕಷ್ಟು ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಂಡಿರೋ ತಂಡ. ಪದ್ಯಗಳು, ಸಂಗೀತ, ನೃತ್ಯ, ನಾಟಕ, ಯುದ್ಧಕಲೆ, ಆರ್ಕೆಸ್ಟ್ರಾ, ಸಿನಿಮಾ ಇವೆಲ್ಲವನ್ನೂ ಒಳಗೊಂಡಂತೆ ಆಧುನಿಕ ರಂಗ ತಾಂತ್ರಿಕತೆಯನ್ನೂ ಬಳಸಿಕೊಂಡು ತನ್ನದೇ ಶೈಲಿಯನ್ನು ಕಂಡುಕೊಂಡಿದೆ.

ಪ್ರಸ್ತುತ ಬ್ಯಾಲೆಯಲ್ಲಿ ಎರಡು ಚಿಕ್ಕ ಕಥೆಗಳು.

ಮೊದಲನೆಯದು…..Love Birds Spears

ಇದೊಂದು ಮಜವಾದ ಕತೆ. ಮಾರು ವೇಷ ಧರಿಸಿ ಪ್ರಜೆಗಳ ಕಷ್ಟ ಸುಖ ನೋಡೋಕೆ ಹೊರಟ ರಾಜನೊಬ್ಬ, ಟೀ ತೋಟದ ಸುಂದರ ಮಾಲೀಕಳೊಬ್ಬಳು ಒಡ್ಡಿದ ಪಂದ್ಯದಲ್ಲಿ ಸಿಕ್ಕುಹಾಕೊಳ್ತಾನೆ. ಪಂದ್ಯವನ್ನೂ ಗೆದ್ದು, ಆಗಲೇ ಪ್ರೀತಿಸಿದ ಸುಂದರಿಯ ಜೊತೆ ಮದುವೆಯೂ ಆಗ್ತಾನೆ.

ಮೊದಲೇ ಹೇಳಿದಂತೆ ಎಲ್ಲಾ ಕಲಾಪ್ರಕಾರಗಳನ್ನೂ ಬೆರಗಾಗುವಂತೆ ಸಮೂಹಗೊಳಿಸಿದ ಪ್ರದರ್ಶನ ಇದು. ಮೋಹಗೊಳಿಸಬಲ್ಲ ಬಣ್ಣ ಬಣ್ಣದ ಕಾಸ್ಟ್ಯೂಮ್ ಗಳು. ಹಕ್ಕಿಯ ಪುಕ್ಕ ಗಾಳಿಯಲ್ಲಿ ಹಾರಿದಂತೆ ನವಿರಾದ ಚಲನೆಗಳು. ಹಾಡುತ್ತಲೇ ಅಭಿನಯಿಸುವ ನಟರು, ಅದ್ಭುತ ಲೈವ್ ಸಂಗೀತ. ಎಲ್ಲವನ್ನೂ ಮೀರುವ ಧ್ವನಿ, ಬೆಳಕಿನ ಡಿಸೈನ್. ಇವೆಲ್ಲ ಸೇರಿ ಕಟ್ಟಿಕೊಟ್ಟಿದ್ದು ಪರವಶಗೊಳಿಸುವ ಬ್ಯಾಲೆ. ಆ ರಂಗ ಶ್ರೀಮಂತಿಕೆಯನ್ನು ಇಲ್ಲಿರುವ ಚಿತ್ರಗಳೇ ಶಬ್ದಗಳಿಗಿಂತ ಚೆನ್ನಾಗಿ ಹೇಳ್ತವೇನೋ.

ಎರಡನೆಯ ಕತೆ…. General Of the empire

ಇದೊಂದು ಯುದ್ಧದ ಕಥೆ. ಚೈನಾದ ಯುದ್ಧ ಪರಂಪರೆ ಇರೋದೇ ಗೋಪುರಗಳನ್ನ ವಶಪಡಿಸಿಕೊಳ್ಳೋದ್ರಲ್ಲಿ. ಮತ್ತು ದೊಡ್ಡ ದೊಡ್ಡ ಗೋಡೆಗಳನ್ನ ಹಾರೋದಕ್ಕೆ ಉಪಯೋಗಿಸುವ ಎತ್ತರದ ಏಣಿಗಳಲ್ಲಿ. ಇದೂ ಅಂಥದೇ ಒಂದು ಪ್ರಯೋಗ. ಚೈನಾದ ಯುದ್ಧಕಲೆ ಮತ್ತು ತೈವಾನಿನ ಒಪೇರಾ ದ ಮಿಸಳ್. ಚಕ್ಕ ಚಕ್ಕಂತ ನಿರಂತರ ಹಾರುವ, ಬೀಸುಬೀಸಾದ ರಂಗ ಚಲನೆಗಳು, ಹಾಡುತ್ತಲೇ ಕಸರತ್ತು ಮಾಡುವ ನಟರು, ಕಣ್ತೆರೆಯುವದರೊಳಗೆ ಕೈ ಕೈ ಬದಲಾಯಿಸುವ ಏಣಿಗಳು. ಒಟ್ನಲ್ಲಿ ಇದೊಂದು ಅದ್ಭುತ ರಂಗ ಸಮಾರಾಧನೆ.ಒಪೇರಾ ಮುಗೀತಿದ್ದ ಹಾಗೆ ಎದ್ದು ನಿಂತ ಸುಮಾರು ಮೂರು ಸಾವಿರ ಪ್ರೇಕ್ಷಕರ ನಿರಂತರ ಕರತಾಡನ.

। ನಾಳೆಗೆ ಇನ್ನೊಂದು ನಾಟಕ ।

‍ಲೇಖಕರು avadhi

March 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: