ಯೋಗರಾಜಭಟ್ಟರ ಪಿಸುಗುಡುವ ತೀರದ ಮೌನ…

ಚಂದ್ರಶೇಖರ ಹೆಗಡೆ

‘ಪಿಸುಗುಡುವ ತೀರದ ಮೌನ’ಎಂಬ ಯೋಗರಾಜಭಟ್ಟ ಕವಿತೆಯೊಂದರ ವಿಮರ್ಶೆ

ಪ್ರಯಾಣ ಹೊರಟಾಗೊಮ್ಮೆ ಇಷ್ಟವಾದ ಹಾಡುಗಳನ್ನು ಹೆಕ್ಕಿ ಅವುಗಳಿಗೆ ಕಿವಿಯಾಗುವುದು ನನ್ನ ಜಾಯಮಾನ. ಒಂದೊಮ್ಮೆ ಹೀಗೆ ಕಿವಿಗಳಿಗೆ ತಗುಲಿಸಿಕೊಂಡ ಕರಣಸಾಧನವು ಹಸಿದ ಮನಸಿಗೆ ಸಂಗೀತವನ್ನು ಉಣಬಡಿಸುವಾಗ ತೇಲಿಬಂದ ಹಾಡೊಂದು ಹೃದಯಾಹ್ಲಾದವನ್ನು ತಂದೀಯಿತು‌. ಅದು ಯೋಗರಾಜಭಟ್ಟರು ಗಾಳಿಪಟ ಚಿತ್ರಕ್ಕಾಗಿ ರಚಿಸಿದ ಗೀತೆಯೆನ್ನುವುದು ವಿಶೇಷ.

ಒಂದೇ ಸಮನೆ ನಿಟ್ಟುಸಿರು ಪಿಸುಗುಡುವ ತೀರದ ಮೌನ
ಮೌನವೇ ಅನಂತವಾಗುವ ಬಗೆಯನ್ನು ನಿಟ್ಟುಸಿರಿನ ಮೂಲಕ ಅಭಿವ್ಯಕ್ತಿಸುವ ಈ ಸಾಲುಗಳು ಭಾವೋನ್ಮಾದದ ಪರಿಯೊಂದನ್ನು ಪರಿಚಯಿಸುತ್ತವೆ. ನಾವಾಡುವ ಮಾತುಗಳಿಗೆ ಮೂಲವೇ ಉಸಿರಾಟ. ಅಲ್ಲದೇ ಇದು ಕಡ್ಡಾಯ  ಮಾಧ್ಯಮ. ಆದಾಗ್ಯೂ ನಿಟ್ಟುಸಿರು ಮೌನವನ್ನೇ ಬಯಸಿ ಅಪ್ಪಿಕೊಳ್ಳುವುದರಲ್ಲಿ ತದ್ವಿರುದ್ಧ ಸಂಬಂಧವಿದೆ‌. ನಿರಂತರವಾದ ನಿಟ್ಟಿಸಿರು ತರುವ ಮೌನ ಅದೆಷ್ಟು ಗಾಢವಾಗಿರಬಹುದು ಎಂಬುದನ್ನು ಕವಿತೆಯ ಸಾಲುಗಳು ಮಾರ್ಮಿಕವಾಗಿ ಬಣ್ಣಿಸುತ್ತವೆ.

ಚಡಪಡಿಸಿ ಪಿಸುಗುಟ್ಟುವ ಮೌನಕ್ಕೆ ಮಾತಾಗುವ ಹಂಬಲವೆಷ್ಡಿರಬಹುದು ಲೆಕ್ಕ ಹಾಕುವುದು ಕಷ್ಟ. ಆಕಾಶಕ್ಕೆ ಏಣಿ ಹಾಕಲು ಮಾನದಂಡಗಳನ್ನು ಹುಡುಕಿದಂತಷ್ಟೇ. ಜಗತ್ತಿಗೆ ಅವಶ್ಯಕವಾಗಿರುವ ಸಕಲ ಸಂಗತಿಗಳ ಆವಿಷ್ಕಾರದಲ್ಲಿ ತೊಡಗಿದ ವಿಜ್ಞಾನಿಗಳ ದೊಡ್ಡ ಪಡೆಯೇ ಟೊಂಕ ಕಟ್ಟಿ ನಿಂತಿರುವುದನ್ನು ನಾವು ಕಾಣುತ್ತೇವೆ. ಒಂದು ಚಿಕ್ಕ ಬೆಂಕಿಪೊಟ್ಟಣದಿಂದ ಹಿಡಿದು ಬೃಹತ್ ಗಾತ್ರದ ಯಂತ್ರಗಳವರೆಗೆ; ಶ್ವಾಸಕೋಶದೊಳಗೆ ಸ್ಕ್ಯಾನ್ ಮಾಡುವ ಪುಟಾಣಿ ಕ್ಯಾಮರಾದಿಂದ ಹಿಡಿದು ನಮ್ಮನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಬಲ್ಲ ಅತಿವೇಗದ ರಾಕೆಟ್ ತಂತ್ರಜ್ಞಾನದವರಗೆ ಎಲ್ಲವೂ ಆದ್ಯತೆಯ ಮೇರೆಗೆ ತ್ವರಿತ ಸಂಶೋಧನೆಯಿಂದ ಉದ್ಭವಿಸಿದವುಗಳೇ.

ಇಷ್ಟೆಲ್ಲಾ ಸಂಶೋಧನೆಗಳಿಗೆ ಕಾರಣವಾದ ಮಾನವನ ಮೆದುಳು ಮಾತ್ರ ತನ್ನದೇ ಭಾವೋನ್ಮಾದವನ್ನು ಮಾಪನ ಮಾಡಲು ಬೇಕಾಗುವ ಅಳತೆಗೋಲೊಂದನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ. ಹಾಗೆ ಸಾಧ್ಯವಾಗಿದ್ದರೆ ಮೇಲಿನ ಕವಿತೆಯಲ್ಲಿನ ಭಟ್ಟರ ಭಾವಾನುಭಾವವನ್ನು ಲೆಕ್ಕ ಹಾಕಬಹುದಿತ್ತು. ತಾತ್ಪರ್ಯವಿಷ್ಟೇ. ಪ್ರೀತಿ ಹಾಗೂ ವಿರಹಗಳೆಂಬ ಭಾವಗಳನ್ನು‌ ಕೇವಲ ಅನುಭವಿಸಬಹುದಷ್ಟೇ ವಿನಹ ವರ್ಣಿಸಲಸಾಧ್ಯವಾದುದು. ಇಂತಹ ಮತ್ತೊಂದು ವಿಫುಲ ವರ್ಣನೆಯೇ ಒಂದೇ ಸಮನೆ ನಿಟ್ಟುಸಿರು. ಇವೆರಡೇ ಸಾಲು ಸಾಕು ಪ್ರೇಮಿಯೊಬ್ಬನ ಹೃದಯದಾಳದಲ್ಲಿ ಬೇರೂರಿರುವ ಪ್ರಣಯದ ತೀವ್ರತೆ ಹಾಗೂ ವ್ಯಾಪಕತೆಯನ್ನು ಕಟ್ಟಿಕೊಡಲು.

ಶಬ್ದಸೂತಕವಾಗದ ಕಾವ್ಯದ ಲಕ್ಷಣಗಳನ್ನು ತನ್ನ ಜೀವಂತಿಕೆಯೆಂಬಂತೆ ಒಳಗೊಂಡಿರುವ ಚಿತ್ರಕವಿತೆಗೆ ಭಟ್ಟರ ಬಿಡುವಿಲ್ಲದ ನಿರ್ದೇಶಕ ಮನಸು ಒಡ್ಡಿಕೊಂಡಿದ್ದು ವಿಸ್ಮಯವನ್ನುಂಟು ಮಾಡುತ್ತದೆ. ೨೦೧೦ ರಲ್ಲಿ ಬಿಡುಗಡೆಯಾದ ತಮ್ಮ ಪಂಚರಂಗಿ ಚಲನಚಿತ್ರದಲ್ಲಿ ನೀರುಗಳು, ಶಾಲೆಗಳು, ಮರಗಳು, ಮಣ್ಣುಗಳು, ಎಂಬ ವಿಲಕ್ಷಣ ಸಂಭಾಷಣೆಯ ನುಡಿಗಟ್ಟುಗಳನ್ನು, ಸಮಾಸಪದಗಳನ್ನು, ಸಂಧಿಗಳನ್ನು ರಚಿಸಿ ತಮ್ಮದೇ ಹೊಸಗನ್ನಡದ ವಿಕಟ ವ್ಯಾಕರಣವನ್ನು ಹೊಸೆದಿರುವ ಭಟ್ಡರು ಪ್ರೀತಿಯ ಆತ್ಯಂತಿಕತೆಯಲ್ಲಿನ ಆರ್ದ್ರತೆಯನ್ನೂ ಕಟ್ಟಿಕೊಡಬಲ್ಲ ಕವಿಯೂ ಹೌದು ಎಂಬುದನ್ನು ಈ ಕವಿತೆಯ ಮೂಲಕ ಸಹನೀಯ ಮಾಡಿದ್ದಾರೆ. ಅಂದು ಲೈಫು ಇಷ್ಟೇನೆ ಎಂದು ಹಾಡಿದ  ಭಟ್ಟರು ಇಲ್ಲಿ ಪಿಸುಗುಡುವ ತೀರದ ಮೌನವನ್ನಾಗಿ ಬದುಕನ್ನು ಅನಂತತೆಯತ್ತ ಕೊಂಡೊಯ್ಯುತ್ತಾರೆ. ಕವಿತೆಯ ಆರಂಭದ ಈ ಸಾಲು ಕವನದೊಳಗಿನ ವಿರಹದ ಪ್ರತಿಮೆಗೆ ಎದೆಯ ಮೇಲಿನ ಮಣಿಹಾರವಾಗಿ ಕಂಗೊಳಿಸುತ್ತವೆ.

ತುಂಬಿ ತುಳುಕೋ ಕಂಗಳಲಿ ಕರಗುತಿದೆ ಕನಸಿನ ಬಣ್ಣ
ಎಂದು ಮುಂದುವರೆಯುವ ಹಾಡು ಸೋನು ನಿಗಮ್ ರ ಗಾಯನದಿಂದ ಭಾವೋನ್ಮಾದದ ಉಚ್ಛ್ರಾಯ ಸ್ಥಿತಿಯನ್ನು ತಲುಪುತ್ತದೆ. ಕಣ್ಣುಗಳು ತುಳುಕುವುದು ಎರಡು ಸ್ವರೂಪಗಳಲ್ಲಿ. ಒಂದು ಅನಂದ ಭಾಷ್ಪವಾಗಿ, ಮಗದೊಂದು ಶೋಕ ಸಾಗರವಾಗಿ. ಇಲ್ಲಿ ಕರಗುತಿದೆ ಕನಸು ಎಂದಿರುವುದರಿಂದ ಇದು ವಿಪ್ರಲಂಭ ಶೃಂಗಾರದಿಂದುದಿಸಿದ ದುಃಖದಲೆಗಳ ಅಪ್ಪಳಿಸುವಿಕೆ. ಸುನಾಮಿಯಾಗಿ ಉಕ್ಕಿ ಬಂದ ಕಡಲು ತನ್ನೊಳಗೆ ಎಲ್ಲವನ್ನೂ ಕರಗಿಸಿಕೊಳ್ಳುವಂತೆ, ಇಲ್ಲಿ ವಿರಹಸಾಗರದ ಭೀಕರ ಅಲೆಗಳ ಹೊಡೆತದೊಳಗೆ ಕನಸುಗಳೆಲ್ಲವೂ ಲೀನವಾಗಿರುವುದನ್ನು ಕೊಂಡಾಡಲಾಗಿದೆ. ತುಂಬಿ ತುಳುಕೊ ಎಂಬ ಶಬ್ದಗಳೇ ಇಲ್ಲಿ ಅಳುವುದನ್ನು ಅಭಿನಯಿಸಿ ತೋರುವಂತಿವೆ.

ಈ ಪದಗಳು ಕಣ್ಣಂಚಲಿ ಕುಳಿತು ಹಿಂದಿನ ಹನಿಗಳ  ಒತ್ತಡವನ್ಙು ತಾಳಲಾಗದೇ ಅಲ್ಲಿಂದ ಜಾರಿಹೋಗುತಿರುವ ದೃಶ್ಯವನ್ನು ಹಾಡು ಕೇಳಿದವರ ಕಣ್ಣಿನೊಳಗೆ ಸೃಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಭಾವಗಳೆದ್ದು ಸಹೃದಯರ ಮನದ ವೇದಿಕೆಯ ಮೇಲೆ ಕುಣಿಯುವಂತೆ ಮಾಡುವ ಈ ಹಾಡಿನ ಭಾವಜಾಲವೇ ಆಮೋದವಾದುದು.  ಸೋನು ಅವರ ಗಾಯನ ಈ ಹಾಡಿನ‌ ಪದಲಲಾಟಕ್ಕೆ ಆರ್ದ್ರತೆಯ ಸ್ಪರ್ಶವನ್ನೊದಗಿಸಿದೆ.‌

ಈ ಹಾಡಿನ ಕೆಲವು ಕಡೆಗಳಲ್ಲಿ ಅವರ ಕಂಠದಲ್ಲಿ ಘರ್ಷಿಸಿ‌ ಬರುವ ಶಬ್ದಗಳ ಹೊರಡುವಿಕೆಯೇ ಪ್ರೇಮಲೋಕದ ಮಾಯೆಯನ್ನು ಕಾಣುವ ಸದವಕಾಶಕ್ಕೆಡೆಮಾಡಿಕೊಡುತ್ತದೆ. ಕರಗುತಿದೆ ಎನ್ನುವಲ್ಲಿ ಉಂಟಾಗುವ ಶೂನ್ಯತೆಯನ್ನು ಬಣ್ಣಿಸುವುದು ಹೇಗೆ  ? ಅರಿಯುತಿಲ್ಲ. ಐಕ್ಯತೆಯನ್ನು, ಅದ್ವೈತವನ್ನು ತೀವ್ರವಾದ ನೆಲೆಯಲ್ಲಿ ಅನುಭವಿಸುವಂತೆ ಮಾಡುವ ಈ ಪದಗಳ ಅಂತರಂಗ ಕವಿಪ್ರತಿಭೆಗೆ ಮಾತ್ರ‌ ನಿಲುಕುವಂತಹುದು. ಒಂದಾಗುವಿಕೆಯನ್ನು ಕನಸು ಹಾಗೂ ಕಣ್ಣೀರುಗಳ ಮಧ್ಯದ ರೂಪಕವಾಗಿ ಹೆಣೆಯುವ ಭಟ್ಟರ ಈ ಗೀತೆಯ ಅಲಂಕಾರಶಾಸ್ತ್ರವೇ ತೀರ ವಿಭಿನ್ನವಾದುದು. ಭಾಷ್ಪದ ಉದಯದೊಂದಿಗೆ ಕನಸುಗಳ ಲೀನವಾಗುವಿಕೆಯಲ್ಲಿ ವೈರುಧ್ಯದ ಪರಮಾರ್ಥವನ್ನು ಕವಿಯಿಲ್ಲಿ ಕಾಣಿಸುತ್ತಾರೆ.

ಜನನದ ಹಿಂದೆ ಇರುವ ಮರಣದ ಸಾಂಕೇತಿಕತೆಯನ್ನು ಇಲ್ಲಿ ಪರಿಭಾವಿಸಲು ಅವಕಾಶವಿದೆ.  ತುಂಬಿದ ಕೊಡ ತುಳುಕುವುದಿಲ್ಲ ಎನ್ನುವುದು ನಾಣ್ಣುಡಿ. ಆದರೆ ಇಲ್ಲಿ ತುಂಬಿದ ಕಂಗಳು ತುಳುಕಲೇಬೇಕು ಇದು ಜಾಣ್ಣುಡಿ; ಚತುರ ಕಿಡಿ. ಒಲುಮೆಯನ್ನು ಹಿಡಿದಿಡುವ ದಿಗ್ವಿಜಯದಲ್ಲಿ ಕವಿಗೆ ಹೀಗೆ ದಕ್ಕಿದ ಹವಳಮಣಿಹಾರಗಳಿವು. ಇವುಗಳಲ್ಲವೆ ಕವಿಯ ಪ್ರತಿಭಾ ಕೊರಳನ್ನಲಂಕರಿಸಿ ಸಂತುಷ್ಟಿಯನ್ನುಂಟುಮಾಡುವಂಥಹ ದಿವ್ಯಾಭರಣಗಳು. ಕವಿಯೊಬ್ಬ ಹಾಡುವಂತೆ ಒಣಗಿದ ಕಾಷ್ಠಕ್ಕೆ ಹಬ್ಬಿಕೊಂಡು ವ್ಯಾಪಿಸುವ ಅಗ್ನಿಯಂತೆ ವಿರಹವೂ ಆರ್ದ್ರವಾದ ಹೃದಯದೊಳಗೆ ಹೇಗೆ ಆವರಿಸಿ ಕಾಡಬಲ್ಲದು ಎಂಬುದನ್ನು ನರ್ತಿಸಿ ತೋರಿಸುವಂತಿದೆ ಈ ಕವಿತೆ.

ಇತ್ತೀಚೆಗೆ ನಮ್ಮನ್ನಗಲಿ ಬೆಳದಿಂಗಳಲ್ಲಿ ಲೀನವಾದ ಚೆನ್ನವೀರ ಕಣವಿಯವರ ಕವಿತೆಯಲ್ಲಿ ಹರಿಯುವ ಪ್ರೀತಿಯ ಚೆಲುವಿಕೆಯನ್ನೊಮ್ಮೆ ಆಸ್ವಾದಿಸಿ-
ಚೆಲುವಾಗಿದೆ ಬನವೆಲ್ಲವೂ ಗೆಲುವಾಗಿದೆ ಮನವುಉಸಿರುಸಿರಿಗೂ ತಂಪೆರಚಿದೆ ನಿನ್ನೆದೆ ಪರಿಮಳವುತಿಂಗಳ ತನಿವೆಳಕಲಿ ಮೈದೊಳೆದಿಹ ಮನದನ್ನೆಮಂಗಳವೀ ಮನೆಯಂಗಳ ಚೆಂಗಲವೆಯ ಚೆನ್ನೆ ಚೆಲುವಾಗಿದೆ ಗೆಲುವಾಗಿದೆ ಎಂದು ಆಗುವಿಕೆಯ ತಪವನ್ನಾಗಿ ಒಲವನ್ನು ಕಟ್ಟುವ ಕಣವಿಯವರ ಕವಿತೆಗೂ, ಭಟ್ಟರ ಕವನದಲ್ಲಿನ ನಿಟ್ಟುಸಿರಿನ ನಿರಾಳವಾಗುವಿಕೆಗೂ ಅವಿನಾಭಾವ ಸಂಬಂಧವಿರಬೇಕು. ತಂಪನ್ನೆರಚುವ ಪರಿಮಳದಲ್ಲಿ, ತಿಂಗಳ ಬೆಳಕಿನಲ್ಲಿ ತಮ್ಮೊಲುಮೆಗೆ ಅಭಿಷೇಕ ಮಾಡಿಸುವ ಕವಿಮನಸು ಪ್ರೀತಿಯನ್ನು ಸಂಭ್ರಮದ ಮಹೋತ್ಸವವನ್ನಾಗಿ ಅಪ್ಪಿಕೊಳ್ಳುತ್ತದೆ. ಇದೇ ಶೃಂಗಾರದೊಲುಮೆಯ ಮುಂದೊರಿಕೆಯೇ ಯೋಗರಾಜಭಟ್ಟರಂತಹ ಕವಿಮನೋಹರರನ್ನು ಸೃಜಿಸಿರಬೇಕು. ಮನದಂಗಳವನ್ನೇ ಮಂಗಳಮಯವನ್ನಾಗಿಸುವ ನಲುಮೆಯ ಮಹಿಮೆ ಮಾಂತ್ರಿಕವಾದುದು.

ಪ್ರೇಮವೆಂಬುದು ಒಂದು ದಿನದ ಆರಾಧನೆಯಲ್ಲ. ಅದು ನಿತ್ಯನೂತನ ; ಸತ್ಯಾರಾಧನ ; ದಿವ್ಯಾರೋಹಣ. ಈ ಕ್ಷಿತಿಯಲ್ಲಿ ಪ್ರೇಮಸಾಗರದ ಸುಳಿಯೊಳಗೆ ಸಿಲುಕದ ಕವಿವರ್ಯರಿಲ್ಲ. ಹೊರಬರಲಾಗದೇ ಒದ್ದಾಡಿದ ರಸಋಷಿಗಳಿಲ್ಲ. ಹಸಿವು ನೀರಡಿಕೆಗಳಿಂದ ಹಿಡಿದು ಮೋಕ್ಷದವರೆಗಿನ ಇದರ ಬಾಹುಬಲಗಳ ವಿಸ್ತಾರ ಅನಂತ. ಅಷ್ಟೇ ಆಳ. ಹೇಳಿದಷ್ಟೂ ಭಾಳ. ಇದಕಿಲ್ಲ ಕಾಲನ ತಾಳ. 

ಯೋಗರಾಜಭಟ್ಟರ  ‘ಮುಳ್ಳಿನ ಹಾಸಿಗೆಯಲಿ ಮಲಗಿ’ ಎಂಬ ಸಾಲನ್ನು ಆಲಾಪಿಸುವಾಗಲಂತೂ ಚುಚ್ಚಿ ಇರಿಯುವ ಭಾವೋತ್ಕರ್ಷ ತುಂಬಿ ಬರುತ್ತದೆ‌. ಬೇಂದ್ರೆಯವರಲ್ಲಿಯೂ ಈ ಭಾವಾಲಾಪ ಹೇಗೆ ತುಂಬಿ ತುಳುಕುವುದೆಂಬುದನ್ನು ಗಮನಿಸಿ-
ಕಾಲದ್ಹಾಂಗ ಕಪ್ಪಗಿತ್ತಸಾವಿನ್ಹಾಂಗ ತೆಪ್ಪಗಿತ್ತಹದ್ದು ಬಂದು ಹಾವಿನ ಮ್ಯಾಲೆ ಎರಗಿದಂತಿತ್ತಇರುಳ ಮಬ್ಬಿನ್ಯಾಗ ಹಗಲಿನ ಬೆಳಕು ಕರಗಿದಂತಿತ್ತಗುಂಗು ಹಿಡಿದು ತಂಗಿದಾಗ ತುಂಬಿ ನಿಂತಿತ್ತ ಈಗತುಳುಕಿ ಹೋಗಿತ್ತತಂಗೀ ತುಂಬಿ ಬಂದಿತ್ತು 
ಬೇಂದ್ರೆಯವರಲ್ಲಿ ಹೀಗೆ ತುಂಬಿ ತುಳುಕೋ ಒಲುಮೆ ಯೋಗರಾಜಭಟ್ಟರ ಗೀತೆಯಲ್ಲಿಯೂ ಉಕ್ಕಿ ಹರಿಯುತ್ತದೆ.

‘ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ ನಿನ್ನೊಳಿದೆ ನನ್ನ ಮನಸು’ ಎಂದು ಹಾಡಿದ  ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿಯವರಿಗೇ ಒಲವಿನಾಕೆಯ ಪ್ರೀತಿಯ ಹರಿವಿನ ಬಗೆಯನ್ನು ಅರಿಯಲಾಗಲಿಲ್ಲವೆಂದರೆ ಇನ್ನು ಅಳಿದುಳಿದ ನಮ್ಮಂತಹ ಸಹೃದಯರ ಗತಿಯೇನು ? ಭಟ್ಟರೂ ಹೀಗೆ ಒಲವಿನ ಜ್ಯೋತಿಯನ್ನರಸಿ ಎದೆಯ ಜೋಪಡಿಗೆ ಲಗ್ಗೆಯಿಡುವುದನ್ನೊಮ್ಮೆ ಕೇಳಿ ಕರಣ ತುಂಬಿಕೊಳ್ಳಿ.

ಎದೆಯ ಜೋಪಡಿಯ ಒಳಗೆ ಕಾಲಿಡದೆ ಕೊಲುತಿದೆ ಒಲವುಮನದ ಕಾರ್ಮುಗಿಲಿನ ತುದಿಗೆ ಮಳೆಬಿಲ್ಲಿನಂತೆ ನೋವುಕೊನೆ ಇರದ ಏಕಾಂತವೆ ಒಲವೆ?  ಎಂದು ಪ್ರಶ್ನೆ ಮಾಡುವ ಯೋಗರಾಜಭಟ್ಟರು ಒಲುಮೆಯನ್ನು ಮರುವ್ಯಾಖ್ಯಾನಿಸುವ ಶಬ್ದಪ್ರಮಾಣವನ್ನು ಮಾಡುತ್ತಾರೆ. ಕಾರ್ಮುಗಿಲಿನಿಂದ ಹನಿಯೊಡೆಯುವಿಕೆಯೂ ಒಂದು ಬಗೆಯ ಹೆರಿಗೆಯೇ. ಹುಟ್ಟಿದ ಶಿಶುವಾಗಿ ಮಳೆಬಿಲ್ಲು ಕಂಡರೆ ತಾಯಿಯ ನೋವು ಉಪಶಮನವೋ ಉಪಶಮನ. ಆದರೆ ಈ ಕವಿತೆಯು ಭಟ್ಟರಿಗೆ ಇಂತಹ ನೆಮ್ಮದಿಯನ್ನಾದರೂ ತಂದಿಲ್ಲ. ಏಕಾಂತದ ಕಾರ್ಯಕಾರಣವಾಗಿ ದಕ್ಕಬಲ್ಲದ್ದು ಕೂಡ ಒಲವೆಂದು ಕರೆಯುವ ಭಟ್ಟರ ಪ್ರೀತಿಯೇ ಅಸಾಮಾನ್ಯವಾದುದು.

ಇದೇ ಹಾಡಿನ ಕೊನೆಯಲ್ಲಿ ಒಂಟಿತನದ ಗುರುವಾಗಿ ಬರುವ ಪ್ರೇಮವನ್ನು ಬಣ್ಣಿಸುವ ಭಟ್ಟರ ಈ ಶಬ್ದಪೀಯೂಷವೇ ಗುಟುಕು ಗುಟುಕಾಗಿ ಹೀರುವಂತಹದು. ಮಳೆ,  ಮಳೆಬಿಲ್ಲು ಎಂದರೆ ಸಂಭ್ರಮದ ರೂಪಕ. ಭಟ್ಟರ ಈ ಹಾಡಿನಲ್ಲಿ ಇವೆರಡೂ ತದ್ವಿರುದ್ಧ. ಸ್ಥಾಪಿತ ಸಿದ್ಧ ಮಾದರಿಯ ಸಂಪ್ರದಾಯವನ್ನು ಮುರಿದು ಕಟ್ಟುವ ಜಾಯಮಾನ ಯೋಗರಾಜಭಟ್ಟರದು ಎಂಬುದಕ್ಕೆ ಉಪಮೆಯಾಗಿ ಹಬ್ಬಿಕೊಂಡ ಪ್ರಕೃತಿಯ ಈ ಸಹಜ ವರ್ತನೆಗಳೇ ಸಾಕ್ಷಿಯಾಗಿವೆ.

ನೋವಿನಲ್ಲಿರುವ ಹಿತವನ್ನು ಆರಾಧಿಸುವ ಕವಿಯ ಚಿತ್ತ  ಏಕಾಂತದ ಸುತ್ತ ಹುತ್ತಗಟ್ಟುತ್ತಲೇ ಹೋಗುವುದಿಲ್ಲಿ. ಮಾಯೆಯ ಮೋಹಪಾಶವನ್ನು‌ ಮೀರಿದ ಅಲ್ಲಮ ಆಶ್ರಯಿಸಿದ್ದು ಬಯಲನ್ನು. ಇದು‌ ತಿಳಿಯುವ ಹೊತ್ತಿಗೆ ಮಾಯೆ ಅನುಭವಿಸುವ ಏಕಾಂತ ಕೊನೆಯಿರದ ನೆಲೆಯನ್ನು ತಲುಪಿರುತ್ತದೆ. ಪ್ರೇಮದ ನಿಜದ ನೆಲೆಯನ್ನು ಅರಿಯಲಾಗದ ಮಾಯೆಗೆ ಉಳಿದದ್ದು ಬಯಲು ಮಾತ್ರ. ಇದು ಆಕೆ ತಾಮಸಿಯಾದ ಕಾರಣಕ್ಕೆ ಸಂದ ಪ್ರತಿಫಲವಿರಬೇಕೆಂದೆನಿಸಿದೆ ನನಗೆ. ಬಯಲೇ ಅಂತಿಮ ಸತ್ಯವೆಂದು ಅರಿಯುವ ವೇಳೆಗಾಗಲೇ ಮೋಹದ ಪಾಶ ಆಕೆಯನ್ನು ಹೊರಬರಲಾಗದಂತೆ ಸುತ್ತಿಕೊಂಡಿರುತ್ತದೆ. ಇದೊಂದು ರೂಪಕ. ತಾಮಸದಿಂದೊಡಗೂಡಿದ ಪ್ರೇಮವೆಂದೂ ಅನಂತತೆಯ ಬಯಲನ್ನಪ್ಪಿಕೊಳ್ಳಲು ಸಾಧ್ಯವಿಲ್ಲವೆನ್ನುವುದೇ ತಿರುಳು. ಸಹೃದಯಿಗಳೆಲ್ಲರೂ ಪ್ರೇಮಲೋಕದವರಾಗಬೇಕೆನ್ನುವುದೇ ಹುರುಳು. ಇದೊಂದು ಪ್ಲೇಟೋನ ಆದರ್ಶ ರಾಜ್ಯವಿದ್ದಂತೆ.  ಭಟ್ಟರ ಈ ಕವಿತೆಯಲ್ಲಿ ಇದನ್ನು ಕೊನೆಯಿರದ ಏಕಾಂತವನ್ನಾಗಿ ಬಣ್ಣಿಸಿ ಒಲುಮೆಯ ಅಂತರಾಳವನ್ನು ಶೋಧಿಸುವ ಪ್ರಯತ್ನವನ್ನು ಮಾಡಲಾಗಿದೆ.  

ನಾಲ್ಕು ಪದದ ಗೀತೆಯಲಿ ಮಿಡಿತಗಳ ಬಣ್ಣಿಸಬಹುದೆಮೂರು ಸ್ವರದ ಹಾಡಿನಲ್ಲಿ ಹೃದಯವನು ಹರಿಬಿಡಬಹುದೆ
ಪ್ರೀತಿಯನ್ನು ಬಣ್ಣಿಸುವ, ಅಭಿವ್ಯಕ್ತಿಸುವ, ದೇಹಭಾಷೆಯಾದಿಯಾಗಿ ಸಕಲ ಸಾಹಸಗಳ ನಂತರ ಭಟ್ಟರು ತಂಗುವುದು ಕೊನೆಗೆ ಕವಿತೆಯ ಮಡಿಲನ್ನು. ಇದೇ ಅಲ್ಲವೇ ಕವಿಮುನಿಯೊಬ್ಬ ವಿರಮಿಸಬೇಕಾದ ಪವಿತ್ರ ತೀರ್ಥಕ್ಷೇತ್ರ. ಜಾನ್ ಕೀಟ್ಸ್ ಕವಿತೆಯೆಂಬ ಜಲದ ಮೇಲೆ ಅಳಿಸಲಾಗದ ನೆನಪುಗಳನ್ನು ಬರೆದುಹೋದರೆ, ಗಾಲಿಬ್ ಇದೇ ದ್ವಿಪದಿಗಳೊಳಗೆ ತನ್ನ ಪರಿಶುದ್ಧ ಹೃದಯವನ್ನು ಹುದುಗಿಸಿಟ್ಟ.

ಭಟ್ಟರೂ ಇದರಿಂದೇನು ಹೊರತಲ್ಲ. ನಾಲ್ಕು ಪದದ ಗೀತೆಯಲಿ ಪ್ರೇಮವನ್ನು ಸೆರೆಹಿಡಿಯಲಾಗದಿದ್ದರೂ ಇದಕ್ಕಿಂತ ನಿರ್ಮಲವಾದ ಗಾಮಿನಿಯೊಂದು ಬೇರೊಂದಿರಲಿಕ್ಕೆ ಸಾಧ್ಯವಿಲ್ಲ. ಮೂರು ಸ್ವರ ಎಂಬಲ್ಲಿನ ಸಂಖ್ಯೆಯೇ ತ್ರಿಲೋಕವನ್ನೂ ತ್ರಿಮೂರ್ತಿಗಳನ್ನೂ ಸ್ಮರಿಸುವಂತೆ ಮಾಡುತ್ತದೆ. ಗೀತಯೊಂದರಲ್ಲಿಯೇ ಬೆಳಕನ್ನು ಕುರಿತು ಹೇಗೆ ಹಾಡಲಾದೀತು ? ಎಂಬುದೇ ಇಲ್ಲಿ ಎದುರಾಗಿರುವ, ಭಟ್ಟರ ಉತ್ತರವನ್ನಡಗಿಸಿಕೊಂಡ ಪ್ರಶ್ನೆಯಾಗಿದೆ. 

‘ಉಕ್ಕಿ ಬರುವ ಕಂಠದಲಿ ನರಳುತಿದೆ ನಲುಮೆಯ ಗಾನ’ ಎಂಬ ಸಾಲಿನಲ್ಲಿರುವ ಶಬ್ದಗಳೇ ನರಳುವುದನ್ನು ಅಭಿನಯಿಸಿ ತೋರುತ್ತಿರುವಂತೆಯೇ ವಿರಹಕೊಂದು ಹಸಿಹಸಿಯಾದ ಒದ್ದೆಯ ದನಿಯನ್ನು ನೀಡಿವೆ. ಭಟ್ಟರ ಪ್ರಕಾರ ವಿರಹ ಪ್ರೀತಿಗೆ ವಿರುದ್ಧವಾದ ಸಂಗತಿಯಲ್ಲ. ಬದಲಾಗಿ ಒಲುಮೆಯೊಳಗಿನ ಅಂತರಂಗದ ತರಂಗವಷ್ಟೇ.

ತಾತ್ಕಾಲಿಕವೋ, ಶಾಶ್ವತವೋ  ನಿನಾದವಷ್ಟೇ. ಬೇಂದ್ರೆವರಿಗೆ ಒಲುಮೆಯೊಂದು ನಾದವಾಗಿತ್ತು. ಅದಕ್ಕೆ ಅವರು “ಅಂತರಂಗದಾ ಮೃದಂಗ ಅಂತು ತೊಂತನಾನ ಚಿತ್ತತಾಳ ಬಾರಿಸುತಿತ್ತು ಝಂಝನಾನ” ಎಂದು ನಿನಾದಿಸುತ್ತಾರೆ. ನಾದುವ ನಾದವೇ ಬೇಂದ್ರೆಯವರ ಒಲುಮೆಯಾದರೆ,  ಭಟ್ಟರಲ್ಲಿ ಅದು ಯಾತನೆಯ  ನಾಲ್ಕು ಪದದಾ ಗೀತೆಯಾಗಿದೆ. ವಿರಹದ ತೀವ್ರತೆಯನ್ನು ಕಟ್ಟಿಕೊಡಲು ಇವುಗಳಿಗಿಂತ ಭಿನ್ನ ಪದಗಳು ಬೇಕೆ ?. ವಿಪ್ರಲಂಭ ಶೃಂಗಾರವೇ ನಟಿಸಿ ಸಹೃದಯರನ್ನು ಮೈಮರೆಸುವಂತಿದೆ. ರಸಭಾವ ಉಕ್ಕಿ ಹರಿಯುವಾಗ ಬಿಗಿದ ಕಂಠ ಶೃಂಗಾರದ ವಿಪರ್ಯಯವನ್ನುಂಟುಮಾಡಿದೆ.

ಈ ಹಾಡಿನ ಗಾಯನವಂತೂ ಶ್ರೋತೃಗಳಲ್ಲಿ ನಿರಾಯಾಸವಾದ ರಸಾನುಭವವನ್ನು ಉಂಟುಮಾಡುವಲ್ಲಿ ಯಶಸ್ವಿಯಾಗಿದೆ. ಹುಣ್ಣಿಮೆ ಚಂದಿರನಾ ಹೆಣಾ ಬಂತು ಮುಗಿಲಾಗ ತೇಲುತಾ ಹಗಲ ಎನ್ನುವುದೂ ಕೂಡ ಮುಳ್ಳಿನ ಹಾಸಿಗೆಯೇ. ರಾಜಲಕ್ಷ್ಮಿಯೊಂದಿಗಿನ ಭಗ್ನಪ್ರಣಯದ ಶಾಪದಿಂದಾಗಿ  ಭೀಷ್ಮ ಮಲಗಿದ್ದು ಕೂಡ ಇರಿಯುವ ಬಾಣಗಳ ಹಾಸಿನ ಮೇಲೆಯೇ. 

ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದೆನ್ನಬಹುದೇ
ವಿಷ, ಕಾಯಿಲೆ ಎಂಬ ನಿತ್ಯ ಬದುಕಿನ  ಋಣಾತ್ಮಕ ತಾಪತ್ರಯಗಳನ್ನೇ ಒಲುಮೆಯ ರಸಾಯನವನ್ನಾಗಿ ಕುದಿಸಿ ಕಷಾಯ ಮಾಡಿ ಕುಡಿಸುವ ಭಟ್ಟರು ಅದೆಂತಹ ಪ್ರಕಾಂಡ ಕಾವ್ಯ ಬಾಣಸಿಗರು ಎನ್ನುವುದಕ್ಕೆ ಸಾಕ್ಷಿಯನ್ನು ನುಡಿಯುತ್ತವೆ ಮೇಲಿನ ಸಾಲುಗಳು. ಪ್ರೀತಿಯಿಲ್ಲದ ಮೇಲೆ ಹೂವು ಅರಳೀತು ಹೇಗೆ ಎಂದು ಹಾಡಿದ ಜಿ.ಎಸ್. ಎಸ್ ರವರ ಪ್ರಶ್ನೋತ್ತರವನ್ನು ನಾವಿಂದು ಜಾತಿಯಿಲ್ಲದ ಮೇಲೆ ಜೀವನ ಅರಳುವುದು ಹೇಗೆ ಎಂದು ಬದಲಾಯಿಸಿಕೊಳ್ಳುವ ದುಸ್ಸಾಹಸಕ್ಕೆ ಇಳಿದಿದ್ಧೇವೆ.

ಜಾತಿ ಧರ್ಮಗಳಾಚೆಗಿನ ಗಡಿಯನ್ನು ಮೀರುವ ಜಗತ್ತಿನ ಏಕೈಕ ಸಂಜೀವಿನಿಯೆಂದರೆ ಅದು ಪ್ರೀತಿ. ಇಂತಹ ಸೌಹಾರ್ದತೆಯನ್ನೇ ಕಸವರಕ್ಕೆ ಸಮೀಕರಿಸಿ ಹಾಡಿದವನು  ಒಂಭತ್ತನೇ ಶತಮಾನದ ಶ್ರೀವಿಜಯ. ಇದೇ ನಲ್ಮೆಯೇ ೧೨ ನೆಯ ಶತಮಾನದಲ್ಲಿ ಭಕ್ತಿಯ ಹೊಳೆಯಾಗಿ ಹರಿದು ಕನ್ನಡ ನಾಡನ್ನು ಇಂಪಾದ ವಚನ ನಿನಾದದಲ್ಲಿ ತೇಲುವಂತೆ ಮಾಡಿತು. ಎಂದರೆ ಕನ್ನಡ ನಾಡಿನ ಚರಿತ್ರೆಯುದ್ದಕ್ಕೂ ಪ್ರೀತಿ ಹೇಗೆ ಜೀವಸೆಲೆಯಾಗಿ ಮೈದುಂಬಿಕೊಂಡು ಹರಿದಿದೆ ಎಂಬುದನ್ನು ಗಮನಿಸಬೇಕಾಗಿದೆ.

ಮುಂದೆ ಬಂದ ಪುರಂದರದಾಸರು, ಕನಕದಾಸರಂತಹ ಕೀರ್ತನಕಾರರು ತಮ್ಮ ಹಾಗೂ ಭಗವಂತನ ಮಧ್ಯದ ಜೀವದೊಲುಮೆಯ ಕೀರ್ತನೆಗಳಲ್ಲಿಯ ಅನುಭೂತಿಯನ್ನು ಕಂಡನುಭವಿಸಿದರು. “ಯಾತನೆಗೆ ಮುಗುಳ್ನಗು ಬರಲು ಕಣ್ಣಾ ಹನಿ ಸುಮ್ಮನೆ ಒಣಗಿ” ಎಂಬಲ್ಲಿನ ಯಾತನೆಯನ್ನೇ ಮಂದಹಾಸವನ್ನಾಗಿ ಸ್ವೀಕರಿಸುವ ವಿವೇಕ ಒಲವನ್ನಾರಾಧಿಸುವವರ ಅರ್ಹತೆಗಳಲ್ಲೊಂದು.

ಇಳಿಯುವ ಕಣ್ಣ ಹನಿಗಳ‌ ವ್ಯಾಕರಣ ಕೆಲವೊಮ್ಮೆ ಪ್ರಹಸನ ಮಗದೊಮ್ಮೆ  ನಿರಸನ. ಇದಕ್ಕೇ ಅಲ್ಲವೇ ಬೇಂದ್ರೆಯವರು ಕೇಳುವುದು ಒಲವೆಂಬ ಹೊತ್ತಗೆಯ ಓದಬಯಸುತ ನೀನು ಬೆಲೆಯೆಷ್ಟುಎಂದು ಕೇಳುವೆಯಾ ಹುಚ್ಚಹಗಲಿರುಳು ದುಡಿದರೂ ಹಲಜನುಮ ಕಳೆದರೂತೆರಲಾರೆ ನೀನದರ ಅಂಚೆವೆಚ್ಚ…

ಪ್ರೇಮದ ಆರಾಧನೆಗಿಳಿದರೆ ಹುಟ್ಟುವ ಪದಗಳಿಗಂಜಬೇಕಾದೀತು. ಶಬ್ದಸೂತಕವಾದೀತೆಂಬ ಭಯ ನನಗೆ…

‍ಲೇಖಕರು Admin

February 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ASHOK V BALLA

    ಯೋಗರಾಜ ಭಟ್ಟರ ಗೀತೆಯ ವಿಮರ್ಶೆ ಅದ್ಭುತ! ಸ್ಥಾಪಿತ ಶೈಲಿಗಳನ್ನು ಮುರಿದು ಕಟ್ಟುವಲ್ಲಿ ಅವರ ಪ್ರತಿಭೆ ಜಗಜ್ಜಾಹೀರು! ಒಂದು ವಿರಹ ಗೀತೆಯನ್ನು ಅತ್ಯಂತ ಆಸ್ಥೆಯಿಂದ ಆಲಿಸಿ ಈ ಬಗೆಯಲ್ಲಿ ವಿಮರ್ಶಿಸಿದ ಚಂದ್ರಶೇಖರ ಹೆಗಡೆಯವರ ಓದಿನ ಜ್ಞಾನ, ಬರವಣಿಗೆಯ ಕೌಶಲ, ಇನ್ನಿತರ ಬರಹಗಳೊಂದಿಗೆ ಮಾಡುವ ತುಲನೆ ಗಮನ ಸೆಳೆಯುತ್ತದೆ. ಬಹುಶಃ ಈ ಬರಹವನ್ನು ಭಟ್ಟರು ಓದಿದರೆ ಬರೆದಾಗಿನ ಸಂದರ್ಭದ ಖುಷಿಗಿಂತ ಹೆಚ್ಚು ಸಂಭ್ರಮಿಸಬಹುದು. ಅಭಿನಂದನೆಗಳು ಚಂದ್ರಶೇಖರ ಸರ್.

    ಪ್ರತಿಕ್ರಿಯೆ
    • Chandrashekhar Hegde

      ನಿಮ್ಮ ಪ್ರೀತಿಯ ವಿಮರ್ಶೆಗೆ ಅನಂತ ಕೃತಜ್ಞತೆಗಳು ಸರ್

      ಪ್ರತಿಕ್ರಿಯೆ
  2. T S SHRAVANA KUMARI

    ಲೇಕನದ ಆರಂಭದಲ್ಲಿ ಸಂಪೂರ್ನ ಗೀತೆಯನ್ನು ಕೊಟ್ಟಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: