‘ಅವ್ವೈಯಾರ್’ ಸಂಗಂ ಸಾಹಿತ್ಯ…

ಶಿವಪ್ರಸಾದ ಪಟ್ಟಣಗೆರೆ

ಮಲರ್ ವಿಳಿ ಕೆ

ಅವ್ವೈಯಾರ್ ಕೇವಲ ತಮಿಳು ಸಾಹಿತ್ಯದಲ್ಲಿ ಮಾತ್ರವಲ್ಲದೆ ತಮಿಳಿಗರ ಭಾವದಲ್ಲಿ ಬೆರೆತು ಹೋಗಿದ್ದಾರೆ. ತಮಿಳಿನ ಶ್ರೇಷ್ಠ ಕವಯಿತ್ರಿಯರಲ್ಲಿ ಇವರೂ ಒಬ್ಬರು. ಅವೈಯಾರ್ ಎಂಬುವವರು ಹಲವರು ಇದ್ದಿದ್ದರು ಎಂಬುದು ಒಂದು ಕೆಲವರಿಗೆ ತಿಳಿದಿರುವುದಿಲ್ಲ ಆದರೆ ಅವರ ಕೃತಿಗಳು, ಅವರ ತಮಿಳಿನ ನುಡಿಯ ಶೈಲಿ, ಅವರ ಸಹವರ್ತಿಗಳು, ಸಮಕಾಲೀನರು ಯಾರು? ಎಂಬ ಚಾರಿತ್ರಿಕ ದಾಖಲೆಗಳನ್ನು ಹಿನ್ನೆಲೆಯಾಗಿರಿಸಿಕೊಂಡು ಗಮನಿಸಿದರೆ ವಿವಿಧ ಕಾಲಘಟ್ಟದಲ್ಲಿ ವಿವಿಧ ಅವ್ವೈಯಾರ್ ಗಳು ಬಾಳಿ ಬದುಕಿದ್ದರು ಎಂಬುದು ಗಮನಾರ್ಹವಾದ ಸಂಗತಿ.

ಈ ಕೆಳಗಿನಂತೆ ನಾವು ದಾಖಲಿಸಬಹುದು

೧. ಸಂಗಂ ಸಾಹಿತ್ಯ
೨. ಧಾರ್ಮಿಕ ಕೃತಿ,
೩. ನೀತಿಗೆ ಸಂಬಂಧಿಸಿದ ಕೃತಿಗಳು,
೩. ಕೆಲವು ಕತೆಗಳಲ್ಲಿ
೪. ಸಿಟ್ರಿಲಕ್ಕಿಯಂ (ಕಿರು ಸಾಹಿತ್ಯದಲ್ಲಿ – ಕಡಿಮೆ ಸಾಲುಗಳಿರುವ ಹಾಗು ನೀತಿ ಹಾಗು ಉಪದೇಶಾತ್ಮಕ ಪದ್ಯ ಪ್ರಕಾರಗಳು) ಹೀಗೆ ನೀತಿಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ ಅವ್ವೈಯಾರ್ ಸಹ ಉಂಟು. ಇವರು – ಆತ್ತಿಚೂಡಿ, ಕೊನ್ರೈವೇಂದನ್, ಮೂದೊರೈ, ನಲ್‌ವಳಿ, ಮುಂತಾದ ನೀತಿಗೆ ಸಂಬಂಧಿಸಿದ ಹಾಡುಗಳನ್ನು ಹಾಡಿದ್ದಾರೆ. ಹೀಗೆ ಬರುವ ಕವಯಿತ್ರಿಯರು ಬೇರೆ ಬೇರೆ ಕಾಲಘಟ್ಟಗಳಲ್ಲಿ, ಸನ್ನಿವೇಶಗಳಲ್ಲಿ ಬೇರೆ ಬೇರೆ ರಾಜರುಗಳಿಂದ ದಾನಿಗಳಿಂದ ಆಶ್ರಯವನ್ನು, ಉಡುಗೊರೆಗಳನ್ನು ಪಡೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸಂಗಂ ಕಾಲದ ಅವ್ವೈಯಾರ್ ಅದಿಯಮಾನ್ ರಾಜನ ಕಾಲದಲ್ಲಿ ಇದ್ದವರು. ಇವರ ಸಮಕಾಲೀನರೆ ಕಪಿಲರ್ ಎಂಬ ಸುಪ್ರಸಿದ್ಧ ತಮಿಳು ಕವಿ. ಕಪಿಲರ್ ಕವಿಯ ಸ್ನೇಹಿತರಾದ ‘ಪಾರಿ’ ಎಂಬ ರಾಜನ ಪುತ್ರಿಯರಾದ ಅಂಗವೈ, ಸಂಗವೈ ಎಂಬ ಇಬ್ಬರ ವಿವಾಹದ ಜವಾಬ್ದಾರಿಯನ್ನು (ಅವೈಯಾರ್ ಮತ್ತು ಕಪಿಲರ್) ಹೊತ್ತು ನಡೆಸಿಕೊಟ್ಟಿದ್ದಾರೆ. ಒಟ್ಟಾರೆ ಕ್ರಿ. ಪೂ. ಒಂದನೇ ಶತಮಾನದಿಂದ ಕ್ರಿ. ಶ ೧೮ ನೇ ಶತಮಾನದವರೆಗೂ ಹಲವು ಕಾಲಘಟ್ಟಗಳಲ್ಲಿ ಅವ್ವೈಯಾರ್ ಎಂಬ ಹೆಸರಿನ ಕವಯಿತ್ರಿಯರು ಇದ್ದರು. ಎಂಬುದಕ್ಕೆ ದಾಖಲೆಗಳಾಗಿ ಕೆಲವು ಕೃತಿಗಳು, ಹಾಡುಗಳು, ದೊರಕಿವೆ ಹಾಗು ಕೆಲವು ಕೃತಿಗಳಲ್ಲಿ ಪಾತ್ರವಾಗಿ ಬಂದಿದ್ದಾರೆ ಎಂಬುದು ಗಮನಾರ್ಹವಾದ ಸಂಗತಿ.

ಹಲವುಕಡೆ ಅವೈಯಾರ್ ಅವರನ್ನು ಮುದಿ ವಯಸ್ಸಿನವರಾಗಿ ಚಿತ್ರಿಸಿದ್ದಾರೆ. ಆದರೆ ಸಂಗಂ ಕಾಲದ ಅವೈಯಾರ್ ವೃದ್ಧೆ ಅಲ್ಲ ಆಕೆ ತಾರುಣ್ಯವತಿ ಹಾಗೂ ‘ವಿರಲಿ’- ನರ್ತಕಿ, ಗಾಯಕಿ, ಸಂಗೀತಗಾರ್ತಿ ಹೀಗೆ ತನ್ನ ಕುಲ ಕಸುಬಿನಲ್ಲಿ ನಿರತರಾಗಿದ್ದವರು. ಜೊತೆಗೆ ಕವಯಿತ್ರಿಯೂ ಆಗಿದ್ದವರು. ಇವರ ಸುಮಾರು ೫೯ ಹಾಡುಗಳನ್ನು ಸಂಗಂ ಕಾಲದ ಎಟ್ಟುತ್ತೊಗೈ ಎಂಬ ಸಂಕಲನದಲ್ಲಿ ಕಾಣಬಹುದು.

ಅದಿಯಮಾನ್ ನೆಡುಮಾನ್- ಅಂಜಿ ತಗಡೂರನ್ನು, ಅಂದರೆ ಇಂದಿನ ಧರ್ಮಪುರಿಯನ್ನು ಆಳಿದ ಸಂಗಂ ಕಾಲದ ಅರಸರುಗಳಲ್ಲಿ ಈತನೂ ಒಬ್ಬ. ಅದಿಯರ್-ಎಂಬುವವರು ಸಂಗಂ ಕಾಲದ ಪ್ರಜೆಗಳು. ಇವರು ಚೇರ ನಾಡಿನ ಅರಸು ಪರಂಪರೆಗೆ ಸೇರಿದವರಾಗಿದ್ದರು. ಇವರ ನಾಯಕನಾಗಿ ಅದಿಯಮಾನ್ ಎಂಬುವನು ಪ್ರಸಿದ್ಧಿ ಹೊಂದಿದವನು. ಇವನ ಆಳ್ವಿಕೆಯಲ್ಲಿದ್ದ ನಾಡು “ತಲೈನೀರ್‌ನಾಡು” ( ಪ್ರಧಾನ ನೀರ ನಾಡು ಎಂಬುದಾಗಿ ಸಂಗಂ ಸಾಹಿತ್ಯದಲ್ಲಿ ದಾಖಲಾಗಿದೆ- ಈಗಿನ ಹೊಗೇನಕಲ್) ಎಂಬ ಹೆಸರನ್ನು ಪಡೆದಿತ್ತು.

ಹಲವು ಸಂಗಂ ಸಾಹಿತ್ಯದಲ್ಲಿ ಅದಿಯಮಾನ್ ಅಥವಾ ಅಂಜಿ ಎಂಬ ಹೆಸರಿನಲ್ಲಿ ಈತನ ವೀರ, ಶೌರ್ಯ ಪ್ರತಾಪ ಹಾಗೂ ದಾನದ ಮಹಿಮೆಗಳನ್ನು ಅವ್ವೈಯಾರ್ ಮುಂತಾದ ಸಂಗಂ ಕಾಲದ ಕವಿಗಳ ಹಾಡಿನ ವಸ್ತುವಾಗಿ ಬಂದಿರುವುದನ್ನು ಕಾಣಬಹುದು. ದೃಢಕಾಯನಾಗಿದ್ದ ಈತ ಚೇರನ್‌ಪಾಂಡ್ಯನ್ ಚೋಳನ್ ಅವರುಗಳನ್ನು ಒಳಗೊಂಡಂತೆ ಏಳು ಅರಸರುಗಳನ್ನು ಎದುರಿಸಿ ಗೆದ್ದಂತಹವನು ಎಂಬುದಾಗಿ ಕವಿ ಮಹಾಶಯರು ಹಾಡಿ ಹೊಗಳಿದ್ದಾರೆ.

ತನಗೆ ದೊರೆತ ಅಪರೂಪದ ಮರಣರಹಿತ ಹಾಗು ಚಿರಂಜೀವಿತನವನ್ನು ನೀಡುವ ಒಂದು ನೆಲ್ಲಿಕಾಯಿಯನ್ನು ಸ್ವಾರ್ಥಿಯಾಗಿ ತಾನು ತಿನ್ನದೆ ತನ್ನ ರಾಜಸಭೆಗೆ ಬರಮಾಡಿಕೊಳ್ಳುತ್ತಿದ್ದ ವಿದ್ವತ್‌ಪ್ರತಿಭೆಗಳಲ್ಲಿ ಒಬ್ಬರಾದ ಅತಿ ಜ್ಞಾನಿಯಾದ ಅವೈಯಾರ್ ಗೆ ಒಂದು ತಟ್ಟೆಯಲ್ಲಿಟ್ಟು ಗೌರವ ಪೂರ್ವಕವಾಗಿ ಎಲ್ಲರ ಸಮ್ಮುಖದಲ್ಲಿ ನೀಡುತ್ತಾನೆ. ಅದನ್ನು ಸ್ವೀಕರಿಸಲು ನಿರಾಕರಿಸಿ ‘ಅರಸರಾದ ತಾವು ಸೇವಿಸಿದರೆ ಪ್ರಜೆಗಳಿಗೆ ಒಳಿತನ್ನು ದೀರ್ಘಕಾಲ ಮಾಡಬಹುದು’ ಎಂದು ಅವೈಯಾರ್ ನುಡಿಯುತ್ತಾಳೆ. ಆಗ ಅರಸ ಅವರ ಮಾತನ್ನು ಅಲ್ಲಗಳೆದು ಹೀಗೆ ಹೇಳುತ್ತಾನೆ- “ಕವಿಗಳು ಸಾಹಿತಿಗಳು ಆಯುರಾರೋಗ್ಯದಿಂದ ಇದ್ದರೆ ಪ್ರಜೆಗಳಿಗೆ ಉಪದೇಶಗಳನ್ನು, ಜ್ಞಾನವನ್ನು ನೀಡಿ ಸಮಾಜವನ್ನು ನೈತಿಕ ಮಾರ್ಗದಲ್ಲಿ ಕೊಂಡೊಯ್ಯಬಹುದು ಎಂಬ ಸದುದ್ದೇಶದಿಂದ ಸ್ವೀಕರಿಸಬೇಕು” ಎಂದು ತಿಳಿಸಿದ ನಿಗರ್ವಿ, ನಿಸ್ವಾರ್ಥಿ ಪ್ರಜಾಪತಿ ಅದಿಯಮಾನ್.

ಅವ್ವೈಯಾರ್ ಅತ್ಯಂತ ಸೂಕ್ಷ ಮತಿ ಚತುರೆಯಾಗಿದ್ದವರು. ಅದಕ್ಕೆ ಈ ಕೆಳಗಿನ ಒಂದು ಉನ್ನತ ಸಂದರ್ಭವನ್ನು ದಾಖಲುಮಾಡಬಹುದು. ಚೋಳ ಅರಸ ತನ್ನ ಆಸ್ಥಾನದಲ್ಲಿ ಯಾವುದೇ ಸಮಾರಂಭವಾದರೂ ಸಹ ಆಕೆಯನ್ನು ಆಹ್ವಾನಿಸುತ್ತಿದ್ದ. ಹೀಗೆ ಒಂದು ಒಮ್ಮೆ ಕುಲೋತ್ತುಂಗಚೋಳನ ಪಟ್ಟಾಭಿಷೇಕದ ಮಹೋತ್ಸವಕ್ಕೂ ಆಕೆಯನ್ನು ಆಹ್ವಾನಿಸಿದ್ದ ಅಲ್ಲಿ ಮಂತ್ರಿಮಹನೀಯರು, ಕವಿಪುಂಗವರು ಮುಂತಾದವರು ಅರಸನನ್ನು ಹರಸಿ, ಹೊಗಳಿ ಹಾಡುಗಳನ್ನು ಹಾಡಿ ಸಂತಸಗೊಳಿಸಿ ತಾವೂ ಸಂತಸಗೊಳ್ಳುತ್ತಿದ್ದರು.

ಅಂತಹ ಸಂದರ್ಭದಲ್ಲಿ ಅವ್ವೈಯಾರ್ ಅವರ ಸರದಿಗಾಗಿ ಅಲ್ಲಿದ್ದವರೆಲ್ಲ ಕುತೂಹಲದಿಂದ ಕಾಯುತ್ತಿದ್ದರು ಆಗ ಅವ್ವೈಯಾರ್ “ವರಪ್ಪುಯರ” ಎಂದು ಒಂದು ನುಡಿಗಟ್ಟಿನ ರೀತಿಯಲ್ಲಿ ಈ ಕೆಳಗಿನ ಪದವನ್ನು ಹೇಳಿ ಕುಲೋತ್ತುಂಗಚೋಳನನ್ನು ಹರಸಿದರು. ಅಲ್ಲಿದ್ದವರಿಗೆಲ್ಲಾ ಈ ನುಡಿಗಟ್ಟಿನ ಮರ್ಮ ತಿಳಿಯದಾಯಿತು. ಆಗ ಈ ನುಡಿಗಟ್ಟಿನ ಒಳನುಡಿ ಏನು ಎಂದು ಅವ್ವೈಯಾರ್ ಅವರ ಬಳಿ ಬಿನ್ನವಿಸಿಕೊಂಡಾಗ ಅವ್ವೈಯಾರ್ ಈ ಕೆಳಗಿನಂತೆ ವಿಸ್ತರಿಸಿ ಹೇಳಿದರು.

ವರಪ್ಪುಯರ ನೀರ್ ಉಯರುಂ
ನೀರ್ ಉಯರ ನೆಲ್ ಉಯರುಂ
ನೆಲ್ ಉಯರ ಕುಡಿ ಉಯರುಂ
ಕುಡಿ ಉಯರ ಕೋಲ್ ಉಯರುಂ
ಕೋಲ್ ಉಯರ ಕೋನ್ ಉಯರುಂ

ಈ ಇವರ ಅರ್ಥಗರ್ಭಿತ ನುಡಿಗಟ್ಟಿನ ಹಾರೈಕೆಯನ್ನು ಕೇಳಿ ಅಲ್ಲಿ ನೆರೆದಿದ್ದ ಎಲ್ಲರೂ ಆಶ್ಚರ್ಯಗೊಂಡು ನಿಬ್ಬೆರಗಾದರು.

ಈ ಹಾರೈಕೆಯ ನುಡಿಯ ಅರ್ಥವೇನೆಂದರೆ :
ಕೃಷಿಕನ ಗದ್ದೆಯ ಬದು ಎತ್ತರವಿದ್ದರೆ ಆತನ ಭತ್ತದ ತೆನೆಯೂ ಎತ್ತರಕ್ಕಿರುತ್ತದೆ. ಗದ್ದೆ , ಭತ್ತದ ತೆನೆ ಎತ್ತರಿಸಿದಂತೆ ಆತನ ಭತ್ತದ ರಾಶಿಯೂ ಹೆಚ್ಚಾಗುತ್ತದೆ ಹೀಗೆ ಹೆಚ್ಚಾದ ಭತ್ತದ ರಾಶಿ ಸಾಮಾನ್ಯ ಜನರ ಜೀವನಮಟ್ಟವನ್ನೂ ಎತ್ತರಿಸುತ್ತದೆ ಆಗ ಪ್ರಜೆಗಳೂ ಸೌಖ್ಯ ರಾಜನೂ ಸೌಖ್ಯ ಇದರಿಂದ ರಾಜನ ರಾಜದಂಡಕ್ಕೂ ಘನತೆ ಹೆಚ್ಚುತ್ತದೆ. (ಆಳ್ವಿಕೆ ಉತ್ತಮವಾಗುತ್ತದೆ) ಹೀಗೆ ರಾಜನ ಆಳ್ವಿಕೆಯೂ ಉತ್ತಮಗೊಂಡರೆರಾಜನ ಕೀರ್ತಿ, ಪತಾಕೆಗಳು ಅವನ ಊಹೆಗೆ ಮೀರಿ ಬೆಳೆಯುತ್ತದೆ. ಇಲ್ಲಿ ಕವಯಿತ್ರಿಯ ವಾಕ್ಸೂಕ್ಷಮತೆಯನ್ನು, ವಾಗ್ಜಾಲವನ್ನು ವಾಗ್ವಿಭವವನ್ನು ಜ್ಞಾನವನ್ನು ಅದರೊಂದಿಗೆ ಅವರ ಸಾಮಾಜಿಕ ಕಾಳಜಿಯನ್ನು ವ್ಯವಸಾಯಕ್ಕೆ ಕೊಡುವ ಪ್ರಾಮುಖ್ಯತೆಯ ಮೇರೆಗೆ ಅಳೆಯಬಹುದು. ಈ ಮಾತು ಸಾರ್ವಕಾಲಿಕ ಸತ್ಯವಲ್ಲವೇ?

‍ಲೇಖಕರು Admin

February 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: