-ಡಾ ದಾವಲಸಾಬ ನರಗುಂದ
ತಂಗಾಳಿ ಹೂವನ್ನೇ ಹುಡುಕಿತು
ಯುದ್ಧ ಮತ್ತೆ ನಡೆಯಿತು
ಭೂಮಿಯ ಮೇಲೆ ಮತ್ತೊಂದು ಗೆರೆ
ಕಾಗದದಲ್ಲೂ ಗೆರೆ
ಮನಸ್ಸಿನೊಳಗೂ ಗೆರೆ
ಬಾವುಟ ಹಾರಿತು
ಗಾಳಿಗೆ ಅದು ಹೊಸದೇನಲ್ಲ
ಆದರೆ ಮಣ್ಣಿನ ಘಮ ಮಾತ್ರ
ಹಳೆಯದನ್ನೇ ನೆನಪಿಸಿತು
“ಇದು ನಮ್ಮದು” ಎಂಬ ಘೋಷಣೆ
ಆಕಾಶದವರೆಗೂ ಹೋಯಿತು
ಆಕಾಶ ಮಾತ್ರ
ಯಾರ ಹೆಸರೂ ನೆನಪಿಸಿಕೊಳ್ಳಲಿಲ್ಲ
ಬೀದಿನಾಯಿ ತುತ್ತು
ಅನ್ನಕ್ಕಾಗಿ ಅಲೆಯುತ್ತಿತ್ತು
ಯಾವ ದೇಶ, ಯಾವ ಗಡಿ
ಅದಕ್ಕೆ ತಿಳಿಯಲಿಲ್ಲ
ಮರದಲ್ಲಿ ಹಕ್ಕಿ
ಗೂಡನ್ನು ಮತ್ತೆ ಕಟ್ಟಿತು
ಕಾಲ ಎಬ್ಬಿಸಿದ ಗಾಳಿ
ಅದನ್ನು ಕೇಳಲಿಲ್ಲ
ಹದ್ದು ಗಿರಕಿ ಹೊಡೆದು
ಕೆರೆಗೆ ಇಳಿಯಿತು
ನಿಷೇಧದ ಫಲಕ
ನೀರಿನ ಮೇಲೆ ತೇಲಲಿಲ್ಲ
ಜೇನುಗೂಡಿನ ಹನಿ
ದುಂಬಿಗೆ ಮತ್ತೆ ಸಿಕ್ಕಿತು
ಅರ್ಧ ಕಟ್ಟಿದ್ದ ಕನಸು
ಪೂರ್ಣವಾಗಬೇಕೆಂದಿತು
ಹುಲ್ಲುಗಾವಲು
ದನದ ಹೆಜ್ಜೆಗಳನ್ನು ಕಾಯುತ್ತಿತ್ತು
ಯಾರೂ ತಡೆಯಲಿಲ್ಲ
ಹಸಿವು ಯಾವ ಆಜ್ಞೆಯನ್ನೂ ಕೇಳಲಿಲ್ಲ
ಹುಲಿ ತನ್ನ ಗುರುತನ್ನು ಹುಡುಕಿತು
ದೊರೆಯ ಆದೇಶ
ಅರಣ್ಯಕ್ಕೆ ತಲುಪಲಿಲ್ಲ
ನವಿಲು ಬೆಳಗೆದ್ದು
ಮತ್ತೆ ನಲಿಯಿತು
ಅದರ ನೃತ್ಯಕ್ಕೆ
ಯುದ್ಧದ ನೆರಳು ತಟ್ಟಲಿಲ್ಲ
ಕೋಗಿಲೆ ತನ್ನ ಸ್ವರದಲ್ಲಿ ಹಾಡಿತು
ಭಾಷೆ ಬದಲಾಗಲಿಲ್ಲ
ಕೋಳಿ ತನ್ನ ಸಮಯಕ್ಕೆ ಕೂಗಿತು
ಗಡಿಯಾರವನ್ನು ಕೇಳಲಿಲ್ಲ
ತಂಗಾಳಿ ಹೂವನ್ನೇ ಹುಡುಕಿತು
ದಾರಿ ಮರೆಯಲಿಲ್ಲ
ನಕ್ಷತ್ರಗಳು ರಾತ್ರಿಯನ್ನೇ ಆರಿಸಿಕೊಂಡವು
ರಜೆ ಎಂದೇ ತಿಳಿಯಲಿಲ್ಲ
ಮಣ್ಣಿಗೆ
ಪ್ರತಿದಿನವೂ ಒಂದೇ ಘಮ
ಯಾರಿಗೂ ಒಪ್ಪಂದ ಮಾಡಲಿಲ್ಲ
ಬದಲಾದದ್ದು ಮತ್ತದೇ
ಬಾವುಟಗಳು
ಹೆಸರುಗಳು
ಕೆಲವು ಹೊಸ ಹೆಸರುಗಳು
ಹಳೆಯ ಪಟ್ಟಿಗೆ ಸೇರಿಕೊಂಡವು…






0 Comments