‘ಯಾವುರಪ್ಪ?’ ‘ಸುಗ್ಗನಳ್ಳಿ’ ‘ಯಾರಮನೆ’ ‘ಶಿವಮ್ಮರ ಮನೆ’

 

ಲಕ್ಷಣವಾದ ಹೆಂಗಸು ನಾನೂ ನೋಡಿದ್ದೆ ಕಣಮಗ

ಹೆಚ್.ಆರ್. ಸುಜಾತಾ

ನಮ್ಮೂರ ಗದ್ದೆ ಏರಿ ಹತ್ತಿ ಇಳಿದ್ರೆ ಸುಗ್ಗನಳ್ಳಿ ಅಂತ ಈತೆ. ನಮ್ಮೂರಲ್ಲಿ ಮೂವತ್ತು ಮನೆ. ಅಲ್ಲಿ ಹತ್ತು ಹನ್ನರಡು ಲಿಂಗಾಯತರ ಮನೆ ಇದಾವೆ. ಅವರು ನಮ್ಮೂರಾಸೇ ಪ್ಯಾಟೆಗೆ ಹೋಗಬೇಕಾಗಿತ್ತು. ನಮ್ಮೂರ ಗದ್ದೆ ಇಳುದು ಕೆರೆ ಏರಿ ಮೇಲಾಸಿ ನಮ್ಮೂರ ಕಾವಲು ದಾಟಿ ನಮ್ಮೂರ ಕರನೆತ್ತಿ ಮರದ ತಾವ ರಸ್ತೆಗೆ ಇಳಿಯವ್ರು. ಅಲ್ಲಿಂದ ಮಂಟಪದ ತಗ್ಗಿಗಿಳ್ದು ರಂಗಸಾಮಿ ಗುಡಿಗೆ ಕೈಮುಗದು ಕಡೇಪೇಟೆ ದೊಡ್ಡರಸ್ತೆಯ, ರೈಲ್ವೆ ಕಟಿಂಗ್ ದಾಟಿಕೊಂಡ್ರೆ, ಎಲ್ರೂ ಒಂದೇ ಆಗಿ ಆಲೂರುಗೆ ಸೇರಿತಿದ್ವಿ.

ಒಂದುಸಲ ನಡುಕೊಂಡು ಬರುವಾಗ ಹಣೆಗೆ ಮೂರು ಬೊಟ್ಟು ವಿಭೂತಿ ಅಡ್ಡಪಟ್ಟೆ ಹೊಡೆದ ಹುಡುಗ ಸಿಕ್ದ. ಆ ಹುಡುಗನ್ನ ಕೇಳ್ದೆ. “ಯಾವುರಪ್ಪ”? “ಸುಗ್ಗನಳ್ಳಿ” ಅಂದ. “ಯಾರಮನೆ” ಎಂದೆ. “ಶಿವಮ್ಮರ ಮನೆ” ಅಂದ.

Nammuru-1ನಾನು ಮನೆಗೆ ಬಂದಿಳಿದವಳೆ, ಸುಗ್ಗನಳ್ಳಿ ಶಿವಮ್ಮರ ಮನೆ ಅಂದ ಹುಡುಗನ ಸುದ್ದಿ ಹೇಳಿದ್ದೆ ತಡ, ನಮ್ಮಪ್ಪನ ಬಾಯಿಲ್ಲಿ ಮೆಚ್ಚುಗೆ ಮಾತು ಬಂದವು. “ಅವ್ಳು ಮಗಾ! ಗಟ್ಟಿಗಿತ್ತಿ ಅಂದ್ರೆ, ಹೆಣ್ಣು ಅಂದ್ರೆ ಹೆಣ್ಣು, ಛಲಗಾತಿ” ಅಂತ ಅಪ್ಪ, ಅವ್ವ, ಅಣ್ಣ ಅಮ್ಮ(ಅಜ್ಜಿ) ಎಲ್ರೂ ತಲಾ ಒಂದಂದ್ ಮಾತಾಡಿ ಅವಳ ವ್ಯಕ್ತಿತ್ವವನ್ನು ಗಟ್ಟಿ ಮಾಡ್ತಾ ಹೋದ್ರು. ಕಾಲ ಯಾವುದಾದರೇನು? ವ್ಯಕ್ತಿತ್ವ ದೂಡ್ಡದು ಅನ್ಸೋಹಂಗೆ ಬಾಳಾಟ ಮಾಡೋದೇ ದೊಡ್ಡದು ಅನ್ನೋ ಮಾತುಕತೆ ಆದ್ವು.

ಶಿವಮ್ಮ ಸುಮಾರು 90 ರಿಂದ 100 ವರ್ಷ ಬಾಳ್ವೆ ಮಾಡ್ದವ್ಳು. ನನ್ನಜ್ಜಯ್ಯನ ಕಾಲದೋವ್ಳು. ನನ್ನಜ್ಜಂದ್ರು ಮೂರು ಜನ ಸುತ್ತುಮುತ್ತಕ್ಕೆ ಒಳ್ಳೆ ಹೆಸರು ಇಟ್ಕೊಂಡಿದ್ರು. ಭತ್ತದ ವ್ಯಾಪಾರ ಅಂತ ಮಲೆನಾಡಿನ ಕಟ್ಟಕಡೆಯ ಊರುಮನೆಗಳನ್ನು ಪರಿಚಯ ಇಟ್ಕೊಂಡಿದ್ರು. ಇತ್ತಾ ನಮ್ಮೂರು ಆಲೂರಿನ ತನಕಾನು ಒಳ್ಳೆ ಹೆಸರಿತ್ತು.

ಇಂಥ ಹೊಸಹಳ್ಳಿ ಎಂಬಾ ನಮ್ಮೂರಿನ ಗದ್ದೆಹಳ್ಳಕ್ಕೆ ಅಂಟಿಕೊಂಡಿದ್ದ ಸುಗ್ಗನಳ್ಳಿ ಶಿವಮ್ಮ ನಮ್ಮೂರಿನ ಎಲ್ಲಾರಿಗೂ ಗೌರವಪಾತ್ರರಾಗಿದ್ರು. ಹಾಗೇನೆ ಸಲಿಗೆಯಿಂದಿದ್ದರು.

ಶಿವಮ್ಮ ಎತ್ತರದ ಎಣ್ಣೆಗೆಂಪಿನ ಆಳು. ಹಣೆಮೇಲೆ ಶಿವನ ವಿಭೂತಿ. ಸೊಂಟಕ್ಕೆ ಚಾರಕಾನಿ ಸೀರೇನ ಎತ್ತಿ ಕಚ್ಚೆ ಹಾಕ್ಕೊಂಡು, ಗೊಬ್ಬೆಸೆರಗನ್ನ ಎದೆಮೇಲೆ ಬಿಗಿದು, ಗದ್ದೆ ಕೆಲ್ಸಕೆ ನಿಂತಾ ಅಂದ್ರೆ, ಗದ್ದೆನೆ ನಾಚ್ಕೊಂಡು, ಪೈರಾ ತಲೆ ಮೇಲೆ ಹೊತ್ಕೊಂಡು ಭೀಗಿ ಬಿದ್ದುಹೊಗವು. ಅಂಥಾ ಬೇಸಾಯ ಮಾಡೋಳು. ಮದ್ವೇನೆ ಆಗ್ದೆ ತಮ್ಮನ್ನ, ತಮ್ಮನ ಮಕ್ಕಳನ್ನ ಸಾಕಿ ಇಡೀ ಮನೇನೆ ಗಂಡಾಳಂಗೆ ಎತ್ತಿ ನಿಲ್ಲಿಸಿದ್ಲು. “ಗೆಯ್ಮೆ ಅಂದ್ರೆ ಶಿವಮ್ಮಂದು” ಅಂತ ಹತ್ತೂರಲ್ಲಿ ಹೆಸರು ವಾಸಿ.

ಗದ್ದೆ ಅಡೆ ಕಡಿಯಾಕೆ ನಿಂತಳು ಅಂದ್ರೆ ಬೆಳಗೆ ಬಗ್ಗದವಳು ಮಧ್ಯಾನ ತಲೆ ಎತ್ತೋಳು. ನೀರು ಸರಾಗವಾಗಿ ಹಾಡು ಹೇಳ್ಕೊಂಡು ಗದ್ದೆ ಕಾವಲಿಲಿ ಹಾದು ಹೋಗೋದು. ಗಂಡಾಳು ಮಾಡೋ ಕೆಲಸ ಅಂತ ಹಣೆಪಟ್ಟಿ ಅವಳುಗೆ ಗೊತ್ತಿರಲಿಲ್ಲ.

ನಮ್ಮಜ್ಜಯರು ಏರಿ ಮೇಲೆ ಏನಾರು ಶಿವಮ್ಮನ ಕಂಡೆ ಅಂದ್ರೆ “ಶಿವಮ್ಮ ಬತ್ತಾವ್ಳೆ, ಅರೆ ಸರೀಗೆ ಹೊಡಿರೋ” ಅನ್ನೋರಂತೆ. ಸೊಂಟದ ಮೇಲೆ ಕೈ ಇಟ್ಕೊಂಡು, ಬದೀನ್ ಮೇಲೆ ನಿತ್ಕೊಂಡು ನೆಟ್ಟಕಣ್ಣಿಂದಾ ಗದ್ದೆ ಆ ಬದಿನ ತನಕಾ ಕಣ್ಣಿಂದಲೇ ಅಳತೆ ಹಾಕೊಳಂತೆ, ‘ಗೆರೆ ನೆಟ್ಟಗವ ಇಲ್ವಾ’ ಅಂತ. ಏನ್ನಾರಾ, ವಾರೆಕೋರೆ ಕಂಡ್ರೆ “ಲೇ ಮರಗೌಡ, ದೊಡ್ಡಗೌಡ, ಏ ಸೊಮೇಗೌಡ” ಅಂತ ನೇಗ್ಲುಮೇಣಿ ಮೇಲೆ ಕಯಿಟ್ಟು, “ಏನ್ ಗಂಡಸರೋ ನೀವು, ಯಾವನಾದರೂ ಬಂದು ನೇಗ್ಲು, ಗುದ್ಲಿ ಹಿಡ್ಕೊಂಡು ಬಂದು ನನ್ ಸಮಕ್ಕೆ ಗೆಯ್ರಿ ನೋಡನ” ಅಂತ ಗದರಿದ್ರೂ, ಎಲ್ಲಾ ಸುಮ್ಗಾಗೋರಂತೆ. ಯಾಕಂದ್ರೆ ಅವಳ ಅಚ್ಚುಕಟ್ಟುತನದ ದುಡಿಮೆ ಬೆಲೆ ಗೊತ್ತಿರೋ ಹೊತ್ತ್ಗೆ. ಹಾಗೇನೆ ಸೌದೆಗಾಡಿ ಹೊಡ್ಕೊಂಡೂಗಿ ಹಾಸನದ ಮಂಗಳವಾರ ಸಂತೆಲ್ಲಿ ಮಾರ್ಕೊಂಡು ಬರೋಳಂತೆ. ಎಲ್ಲದ್ಕಿಂತಾ ಇನ್ನು ಹೆಚ್ಚಿನದು.

village2ನನ್ನಜ್ಜಯ್ಯ ಸೋಮೇಗೌಡ ಸೀತಾನದಿ ದಂಡೆವರಗೂ ದಟ್ಟಕಾಡಿನಲ್ಲಿ ವ್ಯಾಪಾರಕ್ಕೆ ಗಾಡಿ ಕಟ್ಕೊಂಡು ಹೋಗೋರು. ಊರಲ್ಲಿ “ಗಾಡಿ ಅಯ್ಯ” ಅಂತ ಅವುರಿಗೆ ಹೆಸರು. ಈ ಕಡೆಯಿಂದಾ ಉಪ್ಪು, ಮೆಣಸಿನಕಾಯಿ, ದವಸಧಾನ್ಯ ಮಲೆನಾಡಿನ ಜನರ ಬೇಡಿಕೆಗಳನ್ನು ಆಲೂರು ಪೇಟೆಯಿಂದ ಕೊಂಡುಹೋಗಿ, ಆ ಕಡೆಯಿಂದಾ ಕಾಫಿ, ಏಲಕ್ಕಿ, ಕಾಳ್ಳುಮೆಣಸು ಹೀಗೆ ಕಾಡಿನ ಉತ್ಪನ್ನಗಳನ್ನ ತಂದು ಅದಲಿಬದಲಿ ವ್ಯಾಪಾರ ಮಾಡೋರು.

ಶಿವಮ್ಮನು ಹಂಗೇ, ಯಾರ ಹಂಗೂ ಇಲ್ದೇ ಅವಳ ಪ್ರಾಯದ ದಿನಗಳಲ್ಲಿ ದಟ್ಟಕಾನನದೊಳಗೆ ಗಾಡಿ ಕಟ್ಟಿಕೊಂಡು ಹೋಗಿ ನಮ್ಮಜ್ಜಯ್ಯನ್ನ ತಲೆ ಮೇಲೆ ಹೊಡದ ಹಾಗೆ ವ್ಯಾಪಾರ ಮಾಡ್ಕೊಂಡು ಬರೋಳಂತೆ. ಅದರಲ್ಲೂ ಅಲ್ಲಿಂದಾ ಕಾಫಿ ತಂದು ವ್ಯಾಪಾರ ಮಾಡೋದ್ರಲ್ಲಿ ಅವಳ್ದು ಎತ್ತಿದ ಕೈ. ಹಾಗೇ ಅಂತಾ ಪ್ರಾಯದ ದಿನದಲ್ಲೂ ಕೂಡಾ, ಯಾರೂ ಅವಳ ಬಗ್ಗೆ ಚಕಾರ ಎತ್ತದ ಹಾಗೇ ಚಾರಿತ್ರವನ್ನು ಉಳಿಸಿಕೊಂಡವಳು.

ಅಂಥ ಗವ್ ಎನ್ನೋ ಕಾಡಿನ ದಾರಿಗಳಲ್ಲಿ ಒಂಟಿ ಹೆಂಗಸಿನ ಗಾಡಿ ವ್ಯಾಪಾರ ಇತ್ತಂದ್ರೆ, ಆಗಿನ ಕಾಲದ ಅಲ್ಲಿಯ ಜನರ ನಂಬಿಕೆಗಳು ಹೇಗಿದ್ದವು? ಅದರ ನಡುವೆ ಪಾಪ! ಹೆಣ್ಹೆಂಗ್ಸು, ಅನ್ಸ್ಕೊಳದೆ ಬದುಕಿದ ಆ ಎದೆಗಾರಿಕೆಯ ಹೆಣ್ತನ ಹೇಗಿತ್ತು? ಯೋಚಿಸಿದೆ.

ನಮ್ಮಜ್ಜಮ್ಮ ಹೇಳ್ತಿದ್ದ ಮಾತು “ಗಾಡಿ ಮೇಲೆ ನಿಂತ್ಕೊಂಡು ಶಿವಮ್ಮ, ಎತ್ತಿನ ಹಗ್ಗಾ ಹಿಡ್ಕೊಂಡು ಗಾಡಿ ಹೊಡ್ಕೊಂಡು ಬರ್ತಿದ್ರೆ, ದೇವರು ಬಂದಂಗ್ ಆಗೋದು. ನಾವು ಗಾಡಿ ಕಣ್ಣಮರೆ ಆಗೋವರಗು ಕೈ ಅಡ್ಡ ಹಿಡ್ಕೊಂಡು ನೋಡ್ತ್ಹಿದ್ವಿ.”

ನನ್ನವ್ವ ಹೇಳೋ ಮಾತಿಂದ ಇದನ್ನ ಮುಗಿಸ್ತಿನಿ. “ಲಕ್ಷಣವಾದ ಹೆಂಗಸು. ನಾನೂ ನೋಡಿದ್ದೆ ಕಣಮಗ.” ನೂರು ವರುಷಾ ಸುತ್ತಮುತ್ತಲ ಜನರ ಬಾಯಲ್ಲಿ ಇರೋ ಶಿವಮ್ಮಾರೆ ನಿಮಗೆ ನಮ್ಮ ಹೆಣ್ಣುಮಕ್ಕಳ ನೂರು, ನೂರೂ ನಮನ.

‍ಲೇಖಕರು admin

August 9, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. ಮಮತಾ ಅರಸೀಕೆರೆ

    ಹೀಗೇ ಹತ್ತಾರು ಘನ ವ್ಯಕ್ತಿತ್ವಗಳು ಅದೆಷ್ಟೋ ಹಳ್ಳಿಗಳಲ್ಲಿರಬಹುದು ..
    ಆಪ್ತ ಬರಹ …
    ಚನ್ನಾಗಿದೆ

    ಪ್ರತಿಕ್ರಿಯೆ
  2. Anonymous

    ಚನ್ನಾಗಿದೆ. ಶಿವಮ್ಮನನ್ನೆ ನೋಡಿದ ಹಂಗಾಯ್ತು

    ಪ್ರತಿಕ್ರಿಯೆ
  3. Anonymous

    Shivamma. Very compassinate and multifaceted lady. Nice subject . Great narration.
    Gopinath.R

    ಪ್ರತಿಕ್ರಿಯೆ
  4. Nagesh

    Title it self has expressed so many stories of rural folks
    Nice narration
    Touching
    Dr D R Nagesh dasudi

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: