ಯಾರಿಗೆ ಯಾರೋ ಎರವಿನ ಸಂಸಾರ!

ಸಂಕೇತದತ್ತ

ಮೂಗು ಧಾರಾಕಾರವಾಗಿ ಸೋರುತ್ತಿತ್ತು, ಕಣ್ಣಿಂದ ನೀರು ಇಳೀತಾ ಇತ್ತು‌. ಬಲವಂತವಾಗಿ ಕುತ್ತಿಗೆ ಬಗ್ಗಿಸಿ ಕೂರಿಸಲಾಗಿತ್ತು.

ಪಾಪ ಆ ಪುಟಾಣಿಯು ಬಿಗಿಯಾಗಿ ಸುತ್ತಿದ್ದ ಬಟ್ಟೆಯಲ್ಲಿದ್ದ ಕೈಗಳನ್ನು ಈಚೆ ತೆಗೆಯಲಾಗದೇ ಕಣ್ಣು, ಮೂಗನ್ನು ಒರೆಸಿಕೊಳ್ಳಲಾಗದೇ ಒಳಗೊಳಗೇ ದುಃಖ ಪಡುತ್ತಾ, ತಲೆಯಲ್ಲಿ ಓಡಾಡುತ್ತಿದ್ದ ಕತ್ತರಿಯ ಕಚಗುಳಿಯನ್ನು ಸಹಿಸಿಕೊಂಡು ಉದ್ದದ ಚೇರಿನ ಮೇಲೆ ಮತ್ತೊಂದು ಹಲಗೆಯ ಮೇಲೆ ಪಟ್ಟಾಭಿಷೇಕ್ಕಾಗಿ ಪಟ್ಟ ಏರಿದ್ದ!

ಈ ಪುಟಾಣಿಯ ತಲೆಯ ಕೂದಲಿನ ಮಧ್ಯೆ ಬಾಚಣಿಗೆಯ ನಡೆಯನ್ನು ಕತ್ತರಿಯು ಅನುಸರಿಸಿ ಚೋಟು ಕೂದಲನ್ನು ಕತ್ತರಿಸುತ್ತಾ ಟ್ರಿಮ್ ಮಾಡುತ್ತಿತ್ತು. ಅದರೊಂದಿಗೆ ಗಾಜಿನ ಬಳೆಗಳ ‘ಗಲ್-ಗಲ್’ ಸದ್ದು! ಕ್ಷೌರ ಮಾಡುತ್ತಿದ್ದದ್ದು ಒಬ್ಬ ಹೆಂಗಸು!

ಏನಿದು ವಿಚಿತ್ರ! ಕ್ಷೌರವನ್ನು ಮಹಿಳೆ ಮಾಡುವುದೇ? ಆದೂ ಗಂಡು ಸಂತಾನಕ್ಕೆ!

ಅದೇ ಇಲ್ಲಿಯ ಕತೆ.

ಈಕೆ ಝಾನ್ಸಿ, ಈಕೆಯ ಗಂಡ ವೆಂಕಟಾದ್ರಿ ಈ ಕಟ್ಟಿಂಗ್ ಶಾಪಿನ ಒಡೆಯ ಹಾಗೂ ಕೆಲಸಗಾರ! ಹಲವು ವರ್ಷಗಳಿಂದ ತನ್ನ ಮಡದಿ ಹಾಗೂ ಒಬ್ಬಳು ಮಗಳಿಗಾಗಿ ತನ್ನ ಕುಲ ಕಸುಬನ್ನು ಸಕ್ರಿಯವಾಗಿ ನಡೆಸುತ್ತಾ ಜೀವನವನ್ನು ಕಟ್ಟಿಕೊಂಡಿದ್ದ. ಹೆಚ್ಚೂ ಅಲ್ಲಾ ಕಡಿಮೆಯೂ ಅಲ್ಲಾ ಎನ್ನುವ ಆದಾಯ!

ಅಂಗಡಿ ಬಾಡಿಗೆ ಬಿಟ್ಟು ಜೀವನ ತಳ್ಳಲು ಇದು ಸರಿ ಹೋಗುತ್ತಿತ್ತು. ಆದರೆ ಕರೋನಾ ವಕ್ಕರಿಸಿ ಹಲವು ತಿಂಗಳು ಶಾಪ್ ಬಂದ್‌ ಆಯ್ತು! ಉಳಿಸಿದ್ದ ಅಷ್ಟಿಷ್ಟು ಹಣ ಕರಗಿ ಸಾಲ ಪಡೆದು ಜೀವನ ನಡೆಸುವ ಮಟ್ಟಕ್ಕೆ ಹೋಯ್ತು!

ಅಂಗಡಿಯ ಬಾಡಿಗೆಯೂ ಕಟ್ಟಲಾಗಿರಲಿಲ್ಲಾ. ಇಷ್ಟೆಲ್ಲಾ ಕಷ್ಟಗಳ ನಡುವೆ ಕರೋನಾ ಕೂಡ ಈ ವೆಂಕಟಾದ್ರಿಯ ಮನೆಯ ಬಾಗಿಲು ಬಡೆದಿತ್ತು‌. ಕರೋನಾ ಹೊಡೆತಕ್ಕೆ ಮೂವರೂ ಬಳಲಿದರು. ಹೆಂಡತಿ ಹಾಗೂ ಮಗಳು ಗುಣವಾದರು. ಆದರೆ ಮೊದಲಿಂದಲೂ ಸ್ವಲ್ಪ ದಮ್ಮು ಇದ್ದ ಕಾರಣ ಹಲವು ದಿನಗಳು ಬಳಲಿ ವೆಂಕಟಾದ್ರಿಯು ಕರೋನಾಗೆ ಬಲಿಯಾದ.

ಸಾಲದಲ್ಲಿದ್ದ ಸಂಸಾರ ಬೀದಿಗೆ ಬರುವ ಪರಿಸ್ಥಿತಿಗೆ ಬಂತು. ಗಂಡಸರಿಗೆ ಸೀಮಿತವಾದ ಕಸುಬು ಒಂದಡೆಯಾದರೆ, ಸಾಲಗಾರರ ತಾಕೀತು. ಅಂಗಡಿಯ ಬಾಡಿಗೆ ಬಾಬ್ತು ಮತ್ತೊಂದು ಕಡೆ ಬಾಧಿಸಿತು. ಊಟಕ್ಕೂ ತತ್ವಾರ ಬಂತು. ಮಗಳು ಚಿಕ್ಕವಳು ಅವಳಲ್ಲಿ ಹೇಳಲಾಗದು, ಹೇಳಿದರೂ ಅರ್ಥ ಮಾಡಿಕೊಳ್ಳಲಾರದ ವಯಸ್ಸು. ವೆಂಕಾಟಾದ್ರಿಯ ಮಡದಿ ಝಾನ್ಸಿಯು ಧೈರ್ಯ ಮಾಡಿ ತಾನೇ ಕಟ್ಟಿಂಗ್ ಶಾಪ್ ನಡೆಸಲು ನಿರ್ಧರಿಸಿದಳು. ಆದರೆ ಗಂಡಸರು ಬರಬೇಕಲ್ಲಾ!

ಬೀದಿಯವರ ನಗೆ ಪಾಟಲಿಗೆ ಗುರಿಯಾದಳು. ಆಗ ಹೊಸ ಆಲೋಚನೆಯೊಂದು ಬಂದು ಹೀಗೊಂದು ಬೋರ್ಡ್ ತಗುಲಿಸಿದಳು. ‘ಇಲ್ಲಿ ಪುಟ್ಟ ಮಕ್ಕಳಿಗೆ ಹೇರ್ ಕಟ್ಟಿಂಗ್ ಮಾಡಲಾಗುತ್ತೆ’. ಈ ಬೋರ್ಡ್ ಬಿದ್ದ ಮೇಲೆ ಸಣ್ಣದಾಗಿ ಕೆಲಸವು ಶುರುವಾಯ್ತು. ದಿನಕ್ಕೆ ಐದಾರು ಪುಟ್ಟ ತಲೆಗಳು ಸಿಕ್ಕಲು ಆರಂಭವಾಯ್ತು! ಒಂದ್ಹೊತ್ತು ಊಟಕ್ಕೆ ದಾರಿ ಆಯ್ತು!

ಹಿಂದೆಂದೂ ಈ ಶಾಪ್ ಒಳಗೆ ಕಾಲಿಡದಿದ್ದ ಝಾನ್ಸಿಯು ಈ ಪರಿಸ್ಥಿತಿಯಲ್ಲಿ ತನಗೆ ತೋಚಿದಂತೆ ಕಟ್ಟಿಂಗ್ ಮಾಡುತ್ತಾ ಕರಗತ ಮಾಡಿಕೊಂಡಳು. ಹೀಗೆ ಹೆಂಗಸೊಬ್ಬಳು ಪುಟ್ಟ ಮಕ್ಕಳಿಗೆ ಹೇರ್ ಕಟ್ಟಿಂಗ್ ಮಾಡುವುದು ಹೆಸರಾಯ್ತು. ಆಡಿಕೊಳ್ಳುತ್ತಿದ್ದ ಬಾಯಿಗಳೇ ಹೊಗಳುತ್ತಾ ತಮ್ಮ ಮಕ್ಕಳನ್ನೂ ಇಲ್ಲಿಗೆ ಕರೆದು ತರಲು ಆರಂಭಿಸಿದರು‌!

ಹೀಗಿದ್ದಾಗ ಅದೇ ಸಣ್ಣ ಹಳ್ಳಿಯಲ್ಲಿ ಪುಟ್ಟದಾದ ಕೈ ಮಗ್ಗ ಹಾಗೂ ಟೆಕ್ಸಟೈಲ್ ಡಿಸೈನ್ ಸ್ಟುಡಿಯೊದಲ್ಲಿ ಟೆಕ್ಸಟೈಲ್ ಡಿಸೈನರ್ ಆಗಿ ನವೀನ ಎಂಬ ಹುಡುಗ ಕೆಲಸ ಮಾಡ್ತಿದ್ದ! ಪಕ್ಕದ ಟೌನ್ನಿನಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ಕುಟುಂಬದ ಹುಡುಗನು ತನ್ನಲ್ಲಿದ್ದ ಡ್ರಾಯಿಂಗ್ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಹಳ್ಳಿಯಲ್ಲಿದ್ದ ಟೆಕ್ಸಟೈಲ್ ಡಿಸೈನರ್ ಆಗಿ ಸೇರಿದ್ದ. ಹತ್ತಿರದಲ್ಲೇ ಒಂದು ಪುಟ್ಟ ರೂಂ ಅನ್ನು ಮಾಡಿಕೊಂಡು ತನ್ನಲ್ಲಿದ್ದ ಕಲೆಯನ್ನು ಕರಗತ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ.

ಈ ಹುಡುಗನ ಕಿವಿಗೂ ಝಾನ್ಸಿಯ ಕಷ್ಟದ ಪರಿಸ್ಥಿತಿಯು ಅರಿವಿಗೆ ಬಂತು. ಒಂದು ಮುಂಜಾನೆ ನವೀನನು ಝಾನ್ಸಿಯ ಕಟ್ಟಿಂಗ್ ಶಾಪ್ ಗೆ ಹೋದ‌‌‌. ಝಾನ್ಸಿಯು ನವೀನನ ಹಿಂದೆ ಮುಂದೆ ನೋಡಿ ‘ಮಗು ಎಲ್ಲಿ ಕಟ್ಟಿಂಗ್ ಮಾಡೋಣ’ ಎಂದಳು.

ಆಗ ನವೀನ ಮಾತಿಗಿಳಿದ. ‘ಅಮ್ಮಾ, ನಿಮ್ಮ ಸಾಹಸ ಕೇಳಿದೆ.‌ ತಮ್ಮ ಧೈರ್ಯ ಕಂಡು ಖುಷಿಯೂ ಆಯ್ತು, ಆದರೆ ಅದರ ಹಿಂದೆಯೇ ತುಂಬಾ ದುಃಖವೂ ಆಯ್ತು. ನಾನೂ ಇದೇ ಕಸುಬಿನ ಕುಟುಂಬದಿಂದ ಬಂದವನು. ಟೌನ್ನಲ್ಲಿ ನಮ್ಮ ಅಪ್ಪಾ ಹಾಗೂ ಅಣ್ಣಂದಿರು ಇದೇ ಕೆಲಸ ಮಾಡ್ತಿದ್ದಾರೆ. ನಾನೂ ಹಲವು ವರ್ಷ ಈ ಕಸುಬು ಮಾಡಿದ್ದೆ.

ಆದರೆ ನಾನು ಇಲ್ಲಿ ಟೆಕ್ಸಟೈಲ್ ಡಿಸೈನರ್ ಕೆಲಸ ಮಾಡುವ ಸಲುವಾಗಿ ಇಲ್ಲೇ ಬಂದು ನೆಲೆಸಿದ್ದೀನಿ. ಬೆಳಗ್ಗೆ ಹನ್ನೊಂದರ ನಂತರ ನನ್ನ ಕೆಲಸ ಶುರುವಾಗುತ್ತೆ. ಹಾಗಾಗಿ ಬೆಳಗ್ಗೆ ನಾನು ಸ್ವಲ್ಪ ಫ್ರೀ ಇದ್ದೇನೆ.

ಹಾಗಾಗಿ ನಾನು ಇಲ್ಲಿ ಕಟ್ಟಿಂಗ್ ಮಾಡಬಹುದು. ತಾವು ತಮ್ಮ ಮನೆಯಲ್ಲಿ ಮಗಳೊಂದಿಗೆ ನೆಮ್ಮದಿಯಿಂದ ಇರಿ. ಇಲ್ಲಿ ಬರುವ ಹಣವನ್ನು ನಾನು ತಮಗೇ ಕೊಡುವೆ.‌ ನನ್ನ ತಂಗಿಯ ವಯಸ್ಸಿನ ತಮ್ಮ ಮಗಳನ್ನು ತಾವು ಚೆನ್ನಾಗಿ ಓದಿಸಿ. ನನ್ನ ತಾಯಿ ಈ ಕೆಲಸ ಮಾಡಿದ್ದರೆ ನಾನು ಸುಮ್ಮನೆ ಇರುತ್ತಿದ್ದೆನೆ. ಹಾಗಾಗಿ ತಾವೂ ಈ ಕೆಲಸ ಮಾಡುವುದು ಬೇಡ. ಮನೆಯಲ್ಲಿದ್ದು ಮಗಳ ಭವಿಷ್ಯಕ್ಕೆ ಬುನಾದಿ ಹಾಕಿ’ ಎಂದು ಒಂದೇ ಉಸಿರಲ್ಲಿ ನವೀನ ಹೇಳಿದ.

ತಾನೇನು ಕನಸು ಕಾಣುತ್ತಿದ್ದೇನೇನೋ ಎಂಬಂತೇ ಝಾನ್ಸಿಯು ಬಿಟ್ಟ ಬಾಯಿ ಬಿಟ್ಟು ನವೀನನ ಮಾತುಗಳನ್ನು ಕೇಳುತ್ತಿದ್ದಳು.
‘ನೋಡಪ್ಪಾ ಮರಿ, ನಿನ್ನ ದೊಡ್ಡತನ ನನಗೆ ಇಷ್ಟವಾಯ್ತು. ಆದರೆ ಇದು ಒಂದು ದಿನದ ಕೆಲಸವಲ್ಲಪ್ಪಾ. ಸರಿಯಾಗಿ ಯೋಚಿಸು. ನಿನ್ನ ಅಪ್ಪ-ಅಮ್ಮರಲ್ಲಿ ಹೋಗಿ ಕೇಳು. ನಮಗಾಗಿ ನೀನೇಕೆ ತ್ಯಾಗ ಮಾಡುವೆ’ ಎಂದೆಲ್ಲಾ ಹೇಳಿದಳು.

ಆಗ ನವೀನ ಮುಗುಳ್ನಕ್ಕು, ‘ಅಮ್ಮಾ, ನನಗೆ ಅಮ್ಮನಿಲ್ಲ, ಅಪ್ಪ ಹಾಗೂ ಅಣ್ಣಂದಿರು ಇದ್ದಾರೆ. ನಾನೇನು ತ್ಯಾಗ ಮಾಡ್ತಿಲ್ಲಾ. ನಮ್ಮ ಕುಲದ ಕಸುಬನ್ನು ಮಾಡುವ ಹಂಬಲ. ಅದೂ ಅಲ್ಲದೇ ನನ್ನ ಬಿಡುವಿನ ವೇಳೆಯಲ್ಲಿ ಮಾಡುತ್ತಿದ್ದೇನೆ. ನನ್ನಮ್ಮನ ವಯಸ್ಸಿನ ತಾವು ಸಂಸಾರ ನಡೆಸಲು ಕಷ್ಟ ಪಡುವುದು ನನಗೆ ಸಹಿಸುತ್ತಿಲ್ಲಾ. ಹಾಗಾಗಿ ನನಗೊಂದು ಒಂದು ಅವಕಾಶ ಕೊಡಿ’ ಎಂದ.

ದೇವರೇ ತನ್ನ ಕಷ್ಟವನ್ನು ನೋಡಿ ಹೀಗೆ ಈ ಹುಡುಗನ ರೂಪದಲ್ಲಿ ಬಂದನೆಂದು ಝಾನ್ಸಿಗೆ ಅನಿಸಿ. ನವೀನನ ಕೈ ಹಿಡಿದು ಕಣ್ಣಿಗೆ ಒತ್ತಿಕೊಂಡು ‘ಗಳ ಗಳ’ ಅತ್ತಳು. ‘ಸರಿ, ನೀನು ಹೀಗೆ ಸಹಾಯ ಮಾಡುವುದಿದ್ದರೆ ನೀನು ನಮ್ಮ ಮನೆಯಲ್ಲೇ ಇರು. ನಮ್ಮಿಂದಲೂ ನಿನಗೆ ಕಿಂಚಿತ್ತಾದರೂ ಸಹಾಯವಾದೀತು’ ಎಂದಳು.

ಹೀಗೆ ನವೀನನು ಝಾನ್ಸಿಯ ಮಗಳನ್ನು ತನ್ನ ತಂಗಿಯಂತೆ ನೋಡಿಕೊಂಡನು. ಅಮ್ಮನಿಲ್ಲದ ನವೀನನು ಝಾನ್ಸಿಯಲ್ಲಿ ತನ್ನಮ್ಮನ ಪ್ರೀತಿಯನ್ನು ಪಡೆದನು. ವೆಂಕಟಾದ್ರಿಯ ಅಂಗಡಿಗೂ ಒಂದು ಹೊಸ ಕಳೆ ಬಂತು!

‍ಲೇಖಕರು Avadhi

June 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಕೋಟೆಕುಮಾರ್

    ಯಾರಿಗೆ ಯಾರೋ ಎರವಿನ ಸಂಸಾರ ಕಥೆ ತುಂಬಾ
    ಚನ್ನಾಗಿದೆ ಹಾಗೂ ಪ್ರಸ್ತುತ ವಾಗಿದೆ ಧನ್ಯವಾದಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: