ಮಿಸ್ಸು..!

ಯಶಸ್ವಿ ದೇವಾಡಿಗ

‘ಕಪ್ಪೆ ಕರ ಕರ.. ತುಪ್ಪ ಜಲಿ ಜಲಿ…’ ತರಗತಿಯಲ್ಲಿ ಪದ್ಯವನ್ನು ಜಾನಕಿ ಟೀಚರ್ ಹೇಳಿಕೊಡುತ್ತಿದ್ದಂತೆ.. ಮಕ್ಕಳೆಲ್ಲ ಎದ್ದು ನಿಂತು…ನಮಸ್ಕಾರಗಳು, ಎಂದಾಯ್ತು. ಶಾಲೆಯ ಇನ್ಸ್ಪೆಕ್ಷನ್ಇ ಅಧಿಕಾರಿಗಳು ಬಂದಿದ್ದಾರೆ. ಅದಾಗಲೇ ತರಗತಿ ಒಳಗೆ ಬಂದು, ‘ನೀವೇನಾ ಜಾನಕಿ ಟೀಚರ್’? ಕೇಳಿದಾಗ, ಜಾನಕೀ ಟೀಚರ್ ನಮೃತೆಯ ಉತ್ತರ.. ‘ಹೌದು ಸರ್. ನಾನೇ ಜಾನಕೀ’. ‘ನಿಮ್ಮ ಸ್ಕೂಲಿನಲ್ಲಿ ಹೆಡ್ ಮಾಸ್ಟರ್ ಎಲ್ಲಿ ಹೋಗಿದ್ದಾರೆ’? ನಿಮ್ಮ ಧ್ವನಿ ಬಿಟ್ರೆ ಬೇರೆ ಯಾರದ್ದೂ ಧ್ವನಿ ಕೇಳ್ತಾ ಇಲ್ವಲ್ಲಾ’?… ಒಂದು ಕಡೆ ನೆಲದಲ್ಲಿ ಮಗು ಅಳುತ್ತಿದೆ. ‘ಯಾರದ್ದು ಮಗು?’ ಎಂದು ಅಧಿಕಾರಿಗಳು ಪ್ರಶ್ನಿಸಿದಾಗ, ‘ಅದು ನಂದೆ ಸರ್’. ‘ಕ್ಲಾಸ್ ನಲ್ಲಿ ಮಗು ಇಟ್ಟುಕೊಂಡು ಮಕ್ಕಳಿಗೆ ಹೇಗೆ ಕಲಿಸ್ತೀರಿ? ಇದು ಸರಿ ಅನಿಸುತ್ತಾ ನಿಮಗೆ’? ಎಂದು ಒಂದು ಕ್ಷಣ ಕೋಪದಿಂದಲೇ ಕೇಳಿದರು ಅಧಿಕಾರಿಗಳು.

ಇದು ಹೊಸದೇನಲ್ಲ, ಎರಡು ಬಾರಿ ವರ್ಗಾವಣೆ ಆದಾಗಲೂ ಮೊದಲನೇ ಮಗುವಿನ ಸಮಯದಲ್ಲೂ ಇದೇ ಸಂದರ್ಭ ಎದುರಿಸಿದ ಜಾನಕಿ, ಈಗ ಎರಡನೇ ಮಗುವಿಗೆ ಮತ್ತೆ ಅದೇ ಸಂದರ್ಭ ಎದುರಿಸುತ್ತಿದ್ದಾಳೆ. ‘ಸರ್, ನಾವು ಬಾಡಿಗೆ ಮನೆಯಲ್ಲಿ ವಾಸವಿರುವುದು. ಇದು ಹಳ್ಳಿ ಬೇರೆ. ನಮಗೆ ಊರು ಕೂಡ ಹೊಸದು, ಹಾಲು ಕುಡಿಯುವ ಈ ಕೂಸನ್ನು ಇಲ್ಲಿ ಇಟ್ಟುಕೊಳ್ಳದೇ ಬೇರೆ ವಿಧಿಯಿಲ್ಲ ಸರ್’.

ಅಧಿಕಾರಿಗಳು ಈ ಮಾತುಗಳನ್ನು ಕೇಳುತ್ತಲೇ ತರಗತಿಯ ಕೊಠಡಿಗಳನ್ನು ಗಮನಿಸುತ್ತಲೇ ಇದ್ದರು. ಧಾನ್ಯಗಳಿಂದ ಮಾಡಿದ ಅಕ್ಷರಗಳ ಪಟ, ಅಲ್ಲಲ್ಲಿ ತೂಗಾಡುತ್ತಿದ್ದ ಅಕ್ಷರಗಳ ಮಾಲೆ, ನೈಜ ವಸ್ತುಗಳಿಂದ ತಯಾರಿಸಿದ ಪುಟ್ಟ ಮನೆಗಳು, ವಿಜ್ಞಾನ ಕುರಿತಾದಂತಹ ಮಾದರಿ… ಅಬ್ಬಾ ಒಂದೇ ಎರಡೇ.. ‘ಇದೆಲ್ಲ ತಂದಿದ್ದಾ?’ ಎಂದು ಅಧಿಕಾರಿಗಳು ಪ್ರಶ್ನೆ ಮಾಡಿದಾಗ, ಕೊನೇಯ ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿ ಎದ್ದು ನಿಂತು.. ‘ಸರ್ ಅದು ನಾವೇ ಮಾಡಿದ್ದು, ಇದೆಲ್ಲ ಅಕ್ಕೋರು ಮಾಡಿದ್ದು, ಚಿಕ್ಕ ಪುಟ್ಟ ಮನೆ, ಅದೇ ಸರ್ ಎ..ಬಿ.ಸಿ..ಡಿ ಅದು ನಮ್ಮ ಕ್ಲಾಸ್ ನವರು ಸೇರಿ ಮಾಡಿದ್ದು, ಮತ್ತೇ ಅಲ್ಲಿ ಮೇಲೇ ಅದೇ ಆ ಮೂಲೆಗೆ ಇದೆಯಲ್ಲ ಸರ್ ರ..ಗ..ಸ..ದ..ಅ..ಅದೆಲ್ಲ ಮೂರನೇತ್ತಿಯವರು ಮಾಡಿದ್ದು’… ಅವನು ಹೇಳುವ ಉತ್ತರದಲ್ಲಿಯೇ ಜಾನಕಿ ಮೇಡಂ ಪಾಠದ ಬಗ್ಗೆ ಅಧಿಕಾರಿಗಳಿಗೆ ಅರಿವಾಗಿತ್ತು.

ಮಕ್ಕಳನ್ನು ಪರಿಕ್ಷೆ ಮಾಡಿಯೇ ಬಿಡೋಣವೆಂದು ಪ್ರಶ್ನೆಗಳನ್ನು ಕೇಳಿದರೂ. ಮಕ್ಕಳೆಲ್ಲ ಪಟ ಪಟಪಟನೇ, ಪ್ರಶ್ನೇ ಕೇಳುವದಕ್ಕಿಂತ ಮುಂಚೆಯೇ ಉತ್ತರಗಳ ಪಟಾಕಿಯನ್ನು ಸಿಡಿಸಿದ್ದರು. ಮಲೆನಾಡಿನಲ್ಲಿ ಮಳೆಯ ಬಗ್ಗೆ ವರ್ಣನೆ ಮಾಡಿದಷ್ಟು ಸಾಲದು. ಸೌಂದರ್ಯ ರಾಶಿಯೇ ಹೊತ್ತು, ಕಂಗೊಳಿಸುತ್ತಿರುವ ಹಸಿರ ಸಸ್ಯರಾಶಿ. ತೋಡು, ಅಲ್ಲಲ್ಲಿ ನೀರು ನಿಂತ ಗುಂಡಿಗಳು. ಶಾಲೆಯ ಮಕ್ಕಳು ಅದೇ ಮಳೆಯಲ್ಲಿ ತೋಡು, ಗದ್ದೆ, ಕುಂಟೆ ದಾಟಿ ಬರುವ ಪರಿಸ್ಥಿತಿ ಭಯಾನಕವಾದದ್ದು. ಮಕ್ಕಳು ಶಾಲೆಯ ಒರಾಂಡ ದಲ್ಲಿ ಬಂದರೆ, ಒಂದಿಷ್ಟು ರಾಶಿ ಉಂಬುಳಗಳು, ಅವರ ಕಾಲಿನ ಮೇಲೆ.ರಕ್ತ ಒಂದು ಕಡೆ ಸೋರುತ್ತಲೇ ಇರುತ್ತಿತ್ತು.

ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹೊತ್ತು ಸದಾ ಮಕ್ಕಳಿಗೆ ಶೂಶ್ರಷೆ ಮಾಡುವ ಶಿಕ್ಷಕರು. ಜಾನಕೀ ಟೀಚರ್ ಪಾತ್ರ ಮಳೆಗಾಲದಲ್ಲಿ ಒಂದು ಆದರ್ಶಮಯವಾಗಿರುತ್ತಿತ್ತು. ಬಿಸಿ ಊಟ ಇರುವ ಕಾರಣ ತರಕಾರಿಗಳನ್ನು ಹೊರಗಡೆ ಕೊಂಡುಕೊಳ್ಳದೇ, ಆಟದ ಸಮಯದಲ್ಲಿ, ಬಿಡುವಿದ್ದಾಗ ಮಕ್ಕಳ ಸಹಾಯದಿಂದ ಅದೆಷ್ಟೋ ತರಕಾರಿ, ಹಂಪಲಗಳನ್ನು ಬೆಳೆಸಿದ್ದರು. ಅದಕ್ಕೆ ಪೂರಕವಾದ ಇಂಗು ಗುಂಡಿ, ಗೊಬ್ಬರ ಹೀಗೆ ತಾವೆ ಮಾಡಿ, ಅದರ ಜೊತೆ ಮಕ್ಕಳಿಗೆ ಪರಿಸರದ ಪಾಠವನ್ನು ಪ್ರಾಯೋಗಿಕವಾಗಿ ಹೇಳಿ ಮನದಟ್ಟು ಮಾಡುವಲ್ಲಿ ಇವರು ಎತ್ತಿದ ಕೈ. ಕೆಲವೊಮ್ಮೆ ಈ ಕುರಿತು ಅಧಿಕಾರಿಗಳು ಪ್ರಶ್ನಿಸಿದಾಗ, ‘ನಮ್ಮ ಹವ್ಯಾಸವೇ ನಮಗೆ ಒಳ್ಳೆಯ ದಾರಿಯನ್ನು ತೋರಿಸುತ್ತದೆ’ ಎಂಬ ಅವರ ಉತ್ತರ. ಶಾಲೆಯ ಒರಾಂಡ ಕೂಡ ಸಗಣಿಯಿಂದ ಸಾರಿಸಿ, ಗಿಡಗಳನ್ನು ಬೆಳಸಿ, ಚಪ್ಪಲಿಯನ್ನು ಹಾಕಲು ಹಿಂದೂ ಮುಂದೆ ನೋಡುವಂತಹ ವಾತಾವರಣವನ್ನು ಸೃಷ್ಟಿ ಮಾಡಿದ್ದರು.

ಜನಗಣತಿಗೆ ಜಾನಕೀ ಟೀಚರ್ ವಿದ್ಯಾರ್ಥಿಗಳ ಮನೆಗೆ ತೆರಳಿದರೆ… ಮನೆಯ ಹೊರಗಡೆಯ ವಾತಾವರಣವೇ ಅವರಿಗೆ ಹೇಳುತ್ತಿತ್ತು. ಅಂದರೆ ಮಕ್ಕಳು ಶಾಲೆಯಲ್ಲಿ ಕಲಿತಂತೆ ಸಗಣಿ ಯಿಂದ ಸಾರಿಸಿ ಶುಭ್ರತೆಯಿಂದ ಇಟ್ಟುಕೊಳ್ಳುವುದಲ್ಲದೇ, ಮನೆಯ ಸುತ್ತಮುತ್ತಲೂ ತರತರಹವಾದ ಸಸ್ಯ, ಗಿಡ ಗಳನ್ನು ನೆಟ್ಟು, ಅವೆಲ್ಲವನ್ನು ನೋಡಿದಾಗ ಅವರ ಮುಖದಲ್ಲಿ ಸಂತೋಷ ಉಕ್ಕಿ ಹರಿಯುತ್ತಿತ್ತು. ಅದರಲ್ಲೂ ಪಾಲಕರು ಈ ಕುರಿತು ಸಂತಸ ವ್ಯಕ್ತಪಡಿಸದಾಗ ಶಿಕ್ಷಕನಿಗೆ ಆಗುವ ಸಾರ್ಥಕ ಎಂತು ಹೇಳಿ?

ಈ ಎಲ್ಲದರ ಮಧ್ಯೆ.. ಜಾನಕೀ ಟೀಚರ್ ಕಂಡರೆ ಆಗದೇ ಇರುವ ಅದೆಷ್ಟೋ ಮನಸ್ಸುಗಳು ಸುತ್ತಲೂ ಇದ್ದರೂ ಅಂಜದೇ ನಿಷ್ಠೆಯ ಕೆಲಸವನ್ನು ಮಾಡುವ ಶಿಕ್ಷಕಿ ಇವರಾಗಿದ್ದರು. ಸರ್ಕಾರ ಮಕ್ಕಳಿಗೆ ಕೊರತೆ ಮಾಡದೇ ಒಳ್ಳೆಯ ಊಟವನ್ನು ನೀಡಿದೆ. ಅದರಲ್ಲಿಯೂ ಅಡುಗೆ ಕೋಣೆಗೆ ಹೋಗಿ ನಮ್ಮ ಪಾಲಿನ ಸಾರನ್ನೂ ಕೂಡ ಮಕ್ಕಳಿಗೆ ಹಾಕಿ, ನಮಗೆ ಸ್ವಲ್ಪ ಇಟ್ಟರೆ ಸಾಕು ಎನ್ನುವ ಮನೋಭಾವ ಜಾನಕಿ ಟೀಚರ್‌ದ್ದು. ಕೆಲವೊಮ್ಮೆ ಅಡುಗೆ ಬಡಿಸುವವರ ಬಳಿ ಪಾತ್ರೆಯನ್ನು ಕಸಿದು ತಾವೇ ಅನ್ನವನ್ನು ಮಕ್ಕಳಿಗೆ ಬಡಿಸಿದ್ದೂ ಇದೆ.

ಕನ್ನಡ ವ್ಯಾಕರಣದಲ್ಲಿ ಟೀಚರ್ ಎತ್ತಿದ ಕೈ. ಅದೇ ಊರಿನ ಹೈ ಸ್ಕೂಲ್ ವಿದ್ಯಾರ್ಥಿಗಳು ಕೆಲವೊಮ್ಮೆ, ವೃತ್ತಗಳು, ಹಳೆಗನ್ನಡವನ್ನು ಕಲಿಯಲು ಇವರ ಹತ್ತಿರ ದಂಡೇ ಬರುತ್ತಿತ್ತು. ಎಂತದ್ದೇ ಸಂದರ್ಭ ಇರಲಿ, ಯಾವ ಮಕ್ಕಳೆ ಆಗಿರಲಿ, ಯಾವುದೇ ತರಗತಿಯ ಪಠ್ಯವೇ ಆಗಿರಲಿ, ಬೇಸರ ಪಟ್ಟುಕೊಳ್ಳದೇ ಕಲಿಸುವಂತಹ ಮನೋಭಾವ ಆಕೆಯದ್ದು.

ಈ ಹಿಂದೆ ಎಸ್.ಡಿ.ಎಮ್.ಸಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಬಂದಿದ್ದೂ ಇದೆ. ‘ನಮ್ಮ ಜಾನಕೀ ಮೇಡಂ ಬಂದ್ ಮೇಲೆ ನಮ್ಮ ಶಾಲೆ ಹೆಣ್ಣು ಮಕ್ಕಳು ಎಲ್ಲಾದರಲ್ಲೂ ಮುಂದೆ, ಕ್ರೀಡೆಯಲ್ಲೂ ಸೈ, ಅಂಕದಲ್ಲೂ ಸೈ’ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಈ ಹಿಂದೆ ಇದೇ ಹಳ್ಳಿಯಲ್ಲಿ ಇದೇ ಶಾಲೆಗೆ ಮಕ್ಕಳ ಸಂಖ್ಯೆ ಅತ್ಯಂತ ಕಡಿಮೆ ಆಡ್ಮಿಶನ್ ಹಂತದಲ್ಲಿ ಇದ್ದ ಕಾರಣ ಮುಚ್ಚುವ ಹಂತದವರೆಗೂ ಹೋಗಿದ್ದು ಇದೆ. ಜಾನಕೀ ಟೀಚರ್ ನಿಂದಾಗಿ ಅಲ್ಲಿಯ ಜನರಿಗೆ ಇವರ ಮೇಲೆ ಒಂದು ತರಹದ ಗೌರವ.

ಎಂತಹ ಶಿಕ್ಷಕನಾಗಿರಲೀ ಒಂದು ವಿದ್ಯಾರ್ಥಿ ಅವರ ಪಾಲಿಗೆ ಅಚ್ಚು ಮೆಚ್ಚು ಆಗಿರುತ್ತಾನೆ. ಆದರೆ ಅದೇ ವಿದ್ಯಾರ್ಥಿ ಬೆರೆ ಸಹೋದ್ಯೋಗಿ ಶಿಕ್ಷಕ ಮಿತ್ರರಿಗೆ ಅಚ್ಚು ಮೆಚ್ಚು ಆಗಬೇಕು ಅಂತಲ್ಲ. ಅಂದರೆ ಕುಮಾರ್ ಗೆ ಜಾನಕೀ ಟೀಚರ್, ಕ್ಲಾಸ್ ಟೀಚರ್ ಆಗಿದ್ದರೂ ಉಳಿದ ವಿಷಯಗಳಲ್ಲಿ ಕಡಿಮೆ ಅಂಕ ತೆಗೆದುಕೊಳ್ಳುತ್ತಿದ್ದ, ಆದರೆ ಜಾನಕೀ ಟೀಚರ್ ಕಲಿಸುವ ಎಲ್ಲಾ ವಿಷಯಗಳಲ್ಲೂ ಅವನೇ ಮೊದಲಿಗನಾಗಿರುತ್ತಿದ್ದ. ಆಗ ಜಾನಕೀ ಟೀಚರ್ ಮೇಲೆ ಅಪವಾಧ ಬರುವುದು ಸಹಜವೇ. ಉಳಿದ ವಿದ್ಯಾರ್ಥಿಗಳ ಪಾಲಕರು ಫಲಿತಾಂಶ ಪ್ರಕಟವಾದಾಗ ಇದರ ಬಗ್ಗೆ ಕ್ಯಾತೆ ತೆಗೆಯದೇ ಇರುತ್ತಿರಲಿಲ್ಲ.

ಕುಮಾರ್ ತರಗತಿಯಲ್ಲಿ ಪಾಠ ಕೇಳುವಾಗ, ಅಪ್ಪಿ ತಪ್ಪಿ ಲಾರಿ ಸಪ್ಪಳ ಕೇಳಿತು ಅಂತಾದರೇ ಬಾಗಿಲ ಬಡಿ ಓಡಿ ಹೋಗಿ ನೋಡುತ್ತಾ ನಿಲ್ಲುತ್ತಿದ್ದ. ಇದಕ್ಕೆ ಸಾಕಷ್ಟು ಬಾರಿ ಜಾನಕೀ ಟೀಚರ್‌ನ ಬಳಿ ಪೆಟ್ಟು ತಿಂದಿದ್ದೂ ಇದೆ. ಆದರೆ ‘ಲಾಲಿ..ಲಾಲಿ’ ಎಂದು ಓಡಿ ಹೋಗಿ, ಮತ್ತೆ ಲಾರಿ ಹೋದಮೇಲೆ ಯಥಾಸ್ಥಿತಿಗೆ ಕ್ಲಾಸಿನಲ್ಲಿ ಬಂದು ಕುಳಿತು ಪಾಠ ಕೇಳುತ್ತಿದ್ದ. ಕ್ರಮೇಣ ಈ ಕುರಿತು ಬೇರೆ ಶಿಕ್ಷಕರು ದೂರು ನೀಡಲು ಶುರು ಮಾಡಿದರು. ಪೆಟ್ಟು ಕೂಡ ಸಾಕಷ್ಟು ತಿನ್ನುತ್ತಿದ್ದ. ಅದ್ಯಾಗೋ ಎನೋ ಕುಮಾರ್, ಬೇರೆ ಶಿಕ್ಷಕರ ಪಾಠವನ್ನು ವಿದ್ಯಾರ್ಜನೆಗಿಂತ ಜಾನಕೀ ಟೀಚರ್ ವಿಷಯಗಳನ್ನು ಮಾತ್ರ ಸರಿಯಾಗಿ ಓದಿ ಅಂಕ ಗಳಿಸುತ್ತಿದ್ದ. ಜಾನಕೀ ಟೀಚರ್ ಅವನ ಈ ನಡುವಳಿಕೆಗೆ ಆ ಕ್ಷಣ ಅವನನ್ನು ಫ್ರೀ ಬಿಟ್ಟು, ನಂತರ ಅವನನ್ನು ಪಾಠದ ಕಡೆಗೆ ಕರೆದುಕೊಂಡು ಬರುವ ಚಾಕಚಕ್ಯತೆ ಅವರಿಗಿತ್ತು.

ಶಾಲೆಯನ್ನು ಬಿಟ್ಟು, ಕೊನೇಗೆ, ಮುಖ್ಯ ಫಲಿತಾಂಶದಲ್ಲಿ ಕುಮಾರ್ ಟಾಪರ್ ಹಾಗೂ ಆದರ್ಶ ವಿದ್ಯಾರ್ಥಿ ಆಗಿ ಹೊರಹೊಮ್ಮಿದ್ದ. ಕೊನೆಯಲ್ಲಿ ಬಿಳ್ಕೊಡುಗೆ ಸಮಾರಂಭದಲ್ಲಿ ಜಾನಕೀ ಟೀಚರ್ ಕುರಿತಾಗಿ, ಮಾಡಿದ ಭಾಷಣಕ್ಕೆ ಅದೇಷ್ಟೋ ಪಾಲಕರು, ಶಿಕ್ಷಕರೂ ಕಂಬಿನಿ ಸುರಿಸಿದ್ದೂ ಇದೆ.
ಶಾಲೆಗೆ, ಜಾನಕೀ ಟೀಚರ್ ಕಾಲಿಡುತ್ತಲೇ ಒಂದು ಹೂವನ್ನು ಕೊಟ್ಟು, ಟೀಚರ್ ಎಂದು ಆಲಂಗಿಸಿ ಪ್ರೀತಿ ಮಾಡುವ ಈ ಚಿಕ್ಕ ಚಿಕ್ಕ ಮಕ್ಕಳಿಗೆ ಅಂದು ಬೇಸರದ ದಿನ. ಜಾನಕೀ ಟೀಚರ್ ಗೆ ಬೇರೆ ಊರಿಗೆ ವರ್ಗವಾಗಿದೆ. ಇವರೇ ನಮ್ಮ ಶಾಲೆಗೆ ಬೇಕು ಎಂದು ಅದೆಷ್ಟೋ ಅರ್ಜಿಗಳನ್ನು ಹಾಕುತ್ತಿರುವ ಊರಿನ ಜನರು ಒಂದು ಕಡೆ ಆದರೆ, ಮಕ್ಕಳ ಅಳು ಇನ್ನೊಂದು ಕಡೆ. ಹೋಗಲೇ ಬೇಕಾದ ಅನಿವರ‍್ಯದ ಪರಿಸ್ಥಿತಿ.

ಇಂದು ಜಾನಕೀ ಟೀಚರ್ ನಿವೃತ್ತಿ ಹೊಂದಿದ್ದಾರೆ. ಕಣ್ಣಿಗೆ ಕನ್ನಡಕ ಮರೆ ಮಾಚಿದರೂ ಕಂಗಳಲ್ಲಿ ಇರುವಂತಹ ಆ ಆಲೋಚನೆ, ಹುಮ್ಮಸ್ಸು ಯಾವುದೂ ಮಾಗಿಲ್ಲ. ಹಳ್ಳಿಯಲ್ಲಿಯೇ ತಮ್ಮ ವೃತ್ತಿ ಜೀವನ ಮುಗಿಸಿದರೂ, ಕೊನೆಗಾಲದಲ್ಲಿ ನಗರದಲ್ಲಿ ಜೀವನ. ಪರಿಸರ, ಹಸಿರ ಮಡಿಲಲ್ಲಿ, ಮಕ್ಕಳೊಂದಿಗೆ ಸಾಗಿಸಿದ ಅವರ ಜೀವನ ಇಂದು ಎನೋ ಕಳೆಗುಂದಂತೆ ಆವರಿಸಿದೆ.

ನಿಧಾನವಾಗಿ ಹೆಜ್ಜೆ ಇಡುತ್ತಾ, ಸಾಗಬೇಕಾದರೆ, ಯಾರೋ ಕೈ ಹಿಡಿದುಕೊಂಡಂತೆ ಭಾಸ…! ನೋಡಿದರೆ, ಆರು ಅಡಿ ಎತ್ತರದ ಯುವಕ. ಕೋಟು, ಸೂಟು ಹಾಕಿಕೊಂಡು ಅತ್ಯಂತ ನಲುಮೆಯಿಂದ, ನಮೃತೆಯಿಂದ, ‘ನಮಸ್ತೆ ಜಾನಕಿ ಟೀಚರ್’. ಎಂದು ಮಾತನಾಡಿಸಿದ. ಎಷ್ಟೆ ಪ್ರಯತ್ನಿಸಿದರೂ ಗುರುತು ಹಿಡಿಯಲಾರದಷ್ಟು ಮರೆವು. ‘ಯಾರಪ್ಪ..? ಎಂದು ಕೇಳಿದಾಗ, ‘ನಾನು ಟೀಚರ್ ಕುಮಾರ್… ಲಾಲಿ ಕುಮಾರ್’.. ಇಂದು ಜಿಲ್ಲಾಧಿಕಾರಿಯಾಗಿ ಅವನ ಗುರುಗಳ ಮುಂದೆ ನಿಂತಿದ್ದಾನೆ. ಕಲಿಸಿದ ಗುರುವಿಗೆ ಇನ್ನೇನು ಬೇಕು? ಸಾರ್ಥಕದ ಛಾಯೆ, ಸಂತಸ ಎರಡೂ ಅವರ ಮುಖದಲ್ಲಿ ಎದ್ದು ನಿಂತಿತ್ತು.

‍ಲೇಖಕರು Avadhi

June 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: