ವಿಠಲನ ಮಾಸದ ನೆನಪು

ಡಾ ಪಿ ಬಿ ಪ್ರಸನ್ನ

ಅದು 2008 ನೆಯ ಇಸವಿಯ ನವೆಂಬರ್  ತಿಂಗಳು. ಆಗಷ್ಟೇ  ನಾನು ಹೆಗ್ಗಡದೇವನ ಕೋಟೆಯಿಂದ ವರ್ಗಾವಣೆಯಾಗಿ ಶಿರಸಿಗೆ ಬಂದು ಒಂದು ತಿಂಗಳಾಗಿತ್ತಷ್ಟೇ. ರಾಜು ಹೆಗಡೆಯವರನ್ನು ಬಿಟ್ಟರೆ ಅಂಥ ಪರಿಚಿತರು ನನಗೆ ಯಾರೂ ಇರಲಿಲ್ಲ. ಒಂದು ದಿನ ‘ನಮಸ್ಕಾರ ನಾನು ವಿಠಲ್ ಭಂಡಾರಿ ಮಾತನಾಡುದು’ ಅಂತ ಹೇಳಿಕೊಂಡು ಕರೆ ಮಾಡಿದರು. ನನಗೋ ಆಶ್ಚರ್ಯ ನನ್ನ ನಂಬರ್ ಹೇಗೆ ಸಿಕ್ಕಿತು ಅಂತ.

‘ನೀವು ಹಾಗೂ ರಮೇಶ್ ಭಟ್ರು ಸೇರಿಕೊಂಡು ಒಂದು ಹಾಸ್ಯಭಾಷಣ ನಮ್ಮ ಕಾಲೇಜಿನಲ್ಲಿ ನಡೆಸಿಕೊಡ್ಬೇಕು’ ಅಂತ ಕೇಳಿಕೊಂಡು ಫೋನ್ ಮಾಡಿದ್ದರು. ‘ಆರ್ ಆರ್ ಹೆಗಡೆಯವರು (ರಾಜು ಹೆಗಡೆ) ನಿಮ್ಮ ನಂಬರ್ ಕೊಟ್ಟರು’ ಎಂದಿದ್ದರು. ಕಾರಣಾಂತರಗಳಿಂದ ಆ ಕಾರ್ಯಕ್ರಮ ನಡೆಯಲೇ ಇಲ್ಲ. ಆದರೂ ನನ್ನ ಅವರ ಸ್ನೇಹ ಗಟ್ಟಿಗೊಳ್ಳುತ್ತ ಹೋಯಿತು.

2009 ರಿಂದ ಅವರು ಧಾರವಾಡದಲ್ಲಿ ನಡೆಯುತ್ತಿದ್ದ ಮೌಲ್ಯಮಾಪನದಲ್ಲಿ ಸಿಗುತ್ತಿದ್ದರು. ಯಾವಾಗಲೂ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದವರನ್ನು ಕಂಡು ರಾಜು ಹೆಗಡೆಯವರು’ ನೀ ಯಾವಾಗ ಕಾಲೇಜಲ್ಲಿ ಇರ್ತಿಯಾ, ಯಾವಾಗ ಬೆಂಗ್ಳೂರಲ್ಲಿ ಇರ್ತೆಯಾ ಭಗವಂತನೇ ಬಲ್ಲ’ ಅಂತ ತಮಾಷೆ ಮಾಡುದು ಇತ್ತು. ಅದಕ್ಕೆ ಅವರದ್ದು ಒಂದು ಸಣ್ಣ ನಗುವಿನ ಪ್ರತಿಕ್ರಿಯೆ.

ನಂತರ ‘ಇನ್ನೂ ಸುಮಾರು ಕೆಲಸ ಇದ್ರಾ. ಒಂದು ಕವಳ ಕೊಡಿ ನಾ ಹೋತೆ’ ಅಂತ ಹೇಳಿ ಅವರ ಸಂಚಿಗೆ ಕೈ ಹಾಕಿ ಎಲೆ ಅಡಿಕೆ ಹಾಕಿಕೊಂಡು ಹೋಗುತ್ತಿದ್ದರು. ಆಗೆಲ್ಲ ರಾಜು ಹೆಗಡೆಯವರು`ನನ್ನ ಶಿಷ್ಯ ಇವ ಹೊನ್ನಾವರದಲ್ಲಿ. ಸರೀ ಪಾಠ ಕೇಳಿದ್ದು ಮಾತ್ರ ನೆನಪಿಲ್ಲ’ ಅಂತ ಹಾಸ್ಯ ಮಾಡುತ್ತಿದ್ದರು.

ವಿಠಲ್ ಸುಮ್ಮನೆ ಕುಳಿತುಕೊಳ್ಳುವ ಪೈಕಿಯವರಲ್ಲ. ಮೌಲ್ಯಮಾಪನಕ್ಕೆಂದು ಧಾರವಾಡಕ್ಕೆ ಬಂದರೆ ಪ್ರತೀ ದಿನ ಸಂಜೆ ಏನಾದರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲೇ ಬೇಕು. ಒಂದು ಬಾರಿ ಅಧ್ಯಾಪಕರನ್ನು ಒಟ್ಟು ಸೇರಿಸಿ ಉತ್ತರ ಪೌರುಷ ತಾಳಮದ್ದಳೆ ಏರ್ಪಡಿಸಿದ್ದರು. ಅವರೂ ಅರ್ಥ ಹೇಳಿದ್ದರು. ಒಂದೋ ಅವರು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಅಥವಾ ಕೇಳುಗರಾಗಿಯಾದರೂ ಯಾವುದಾದರೂ ಕಾರ್ಯಕ್ರಮದಲ್ಲಿ ಇರಬೇಕು.

ನಾಟಕ, ಸಿನೆಮಾ ಇತ್ಯಾದಿ ನೋಡುತ್ತ, ಅಥವಾ ಯಾವುದಾದರೂ ಹೊಸ ಪುಸ್ತಕ ಓದುತ್ತಲೋ ಇರುತ್ತಿದ್ದರು. ಧಾರವಾಡ ವಿವಿಯ ಮೌಲ್ಯಮಾಪನದ ಅಸ್ತವ್ಯಸ್ತ ಸ್ಥಿತಿಯನ್ನು ಕಂಡಾಗ ‘ನಮಿಗೆ ಉತ್ತರಕನ್ನಡದವ್ರಿಗೇ ಸೆಪರೇಟಾಗಿ ಒಂದು ಯುನಿವರ್ಸಿಟಿ ಬೇಕು ಮಾರೇರ’ ಅನ್ನುತ್ತಿದ್ದರು.

ಹೊಸದರಲ್ಲಿ ನನಗೆ ಅವರ ಬಗ್ಗೆ ಅನುಮಾನಗಳು ಇದ್ದವು. ಅವರು ಪ್ರಚಾರ ಪ್ರಿಯರೋ, ವೇದಿಕಾ ಪ್ರಿಯರೋ ಅಥವಾ ಲಾಭ ಬಡುಕರೋ ಇರಬೇಕು ಎಂದೇ ಎಣಿಸಿದ್ದೆ. ಆದರೆ ಕಾರ್ಯಕ್ರಮ ಸಂಘಟನೆಯ ಅವರ ಶ್ರಮದ ಪರಿಚಯ ಆಗುತ್ತಿದ್ದಂತೆ ನನ್ನ ಎಣಿಕೆ ಸುಳ್ಳು ಅಂತ ಅನಿಸಿತು. ಅವರ ಕಾರ್ಯಕ್ರಮಗಳು ಜನಪರ ಆಗಿರುತ್ತಿದ್ದವು. ಒಮ್ಮೆ ಕರ್ನಾಟಕ ವಿವಿ ಹೊಸಗನ್ನಡ ಸಾಹಿತ್ಯ ಮೀಮಾಂಸೆಯನ್ನು ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಪಠ್ಯವನ್ನಾಗಿ ಇಟ್ಟಾಗ ಅದನ್ನು ಪರಿಣಾಮಕಾರಿಯಾಗಿ ಹೇಗೆ ಬೋಧಿಸಬಹುದು ಎಂದು ಅವರು ಗಂಟೆಗಟ್ಟಲೆ ಚರ್ಚಿಸಿದ್ದರು.

ರಹಮತ್ ತರೀಕೆರೆಯವರ ಪುಸ್ತಕವನ್ನು ಕೇಂದ್ರವಾಗಿ ಇರಿಸಿಕೊಂಡು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಹೇಗೆ ಪಾಠಮಾಡಬಹುದು ಎಂದು ಅವರು ಚಿಂತಿಸುತ್ತಿದ್ದರು. ದುರದೃಷ್ಟ ಆ ಪಠ್ಯ ಹೆಚ್ಚು ಸಮಯ ಮುಂದುವರಿಯಲೇ ಇಲ್ಲ. ಒಂದೆರಡು ವರ್ಷಗಳಲ್ಲಿಯೇ ಭಾರತೀಯ ಕಾವ್ಯ ಮೀಮಾಂಸೆ ಮರುಸ್ಥಾಪನೆಗೊಂಡಿತು.!

ಲೋಕರೂಢಿಯ ಗ್ರಹಿಕೆಗಳನ್ನು ಪ್ರಶ್ನಿಸುವವರು ಹೆಚ್ಚಿನ ಸಾಂಪ್ರದಾಯಿಕ ಚಿಂತಕರಿಂದ ಸಣ್ಣ ಮಟ್ಟಿನ ದ್ವೇಷವನ್ನಾದರೂ ಎದುರಿಸುತ್ತಾರೆ. ಆದರೆ ವಿಠಲ್ ಅನ್ನು ನಾನು ಕಂಡಂತೆ ದ್ವೇಷಿಸುವವರು ಇರಲಿಲ್ಲ. ವಿಠಲ್ ಕೂಡ ನಗುನಗುತ್ತಲೇ ತಣ್ಣಗಿನ ದನಿಯಲ್ಲೆ ಸಾಂಪ್ರದಾಯಿಕರನ್ನು ಪ್ರಶ್ನಿಸುತ್ತಿದ್ದರು. ಗ್ರಹಣ ಕಾಲದಲ್ಲಿ ಸಾಮೂಹಿಕವಾಗಿ ಊಟ ಮಾಡುವುದು, ಸೂರ್ಯಗ್ರಹಣವನ್ನು ವಿದ್ಯಾರ್ಥಿಗಳು ಹಾಗೂ ಆಸಕ್ತರಿಗೆ ತೋರಿಸುವುದು, ಇಂಥ ಕಾರ್ಯಕ್ರಮಗಳನ್ನು ಧೈರ್ಯದಿಂದ ಮಾಡುತ್ತಿದ್ದರು. ನೈತಿಕವಾಗಿ ಭ್ರಷ್ಟರಾದ ಮಠದ ಸ್ವಾಮಿಗಳ ವಿರುದ್ಧದ ಹೋರಾಟ, ಸಂವಿಧಾನದ ಓದು ಅಭಿಯಾನ ಹೀಗೆ ಪ್ರಗತಿಪರವಾದ ಕಾರ್ಯಕ್ರಮಗಳು ಹಲವಾರು ಇದ್ದವು.

ವಿದ್ಯಾರ್ಥಿಗಳಿಗೆ ಪಾಠ ಮಾತ್ರ ಮಾಡುವುದು ಅವರ ಕರ್ತವ್ಯ ಆಗಿರಲಿಲ್ಲ. ಸಾಹಿತ್ಯ ಕೃತಿಯನ್ನು ಓದುವಂತೆ ಪ್ರೇರೇಪಿಸುತ್ತಿದ್ದರು. ಆ ಕುರಿತು ಸಣ್ಣ ಟಿಪ್ಪಣಿ ಬರೆಯುವಂತೆ ಪ್ರೇರೇಪಣೆ ನೀಡುತ್ತಿದ್ದರು. ಕಳೆದ ವರ್ಷ ಕನ್ನಡದ ಕವಿಗಳ ಕುರಿತಾಗಿ ತಾನು ಒಂದು ವೀಡಿಯೋ ಮಾಡುತ್ತಿದ್ದೇನೆ ಎಂದೂ ನೀವೂ ಕೂಡ ನಿಮ್ಮಿಷ್ಟದ ಕವಿಯ ಒಂದು ಪದ್ಯವನ್ನುಓದಿ ಆ ಪದ್ಯದ ಬಗ್ಗೆ ಹದಿನೈದು ನಿಮಿಷ ಮಾತಾಡಿ ವೀಡಿಯೋ ಮಾಡಿ ಕಳಿಸಿ ಎಮದು ಕೇಳಿಕೊಂಡಿದ್ದರು. ಹಾಗೆ ಮಾಡುವಾಗ ವಿದ್ಯಾರ್ಥಿಗಳನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ಮಾಡಿ. ಅವರ ಪಠ್ಯದಲ್ಲಿ ಇರುವ ಪದ್ಯ ವಾದರೆ ನಿಮಗೂ ಸಹಾಯ ಆಗುತ್ತದೆ. ವಿದ್ಯಾರ್ಥಿಗಳಿಗೂ ಸಹಾಯ ಆಗ್ತದೆ ಎಂದಿದ್ದರು. ಅಷ್ಟರ ಮಟ್ಟಿಗೆ ಅವರಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ. 

ಗೆಳೆಯ ಶ್ರೀಪಾದ ಭಟ್, ಅಕ್ಕ ಮಾಧವಿ ಭಂಡಾರಿ, ಹೆಂಡತಿ ಯಮುನಾ ಇವರ ಜೊತೆ ಸಹಯಾನದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಸಹಯಾನದ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯುವಂಥವು ಆಗಿದ್ದವು. ಜೊತೆಗೆ ಬಂಡಾಯ ಪ್ರಕಾಶನದ ಕೆಲಸಗಳೂ ಕೂಡ ಅಷ್ಟೇ ಮುಖ್ಯವಾದುದು ಆಗಿತ್ತು.

2015 ರಲ್ಲಿ ನಾನು ಶಿರಸಿಯಿಂದ ವರ್ಗಾವಣೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿಗೆ ಬಂದೆ. ಆದರೂ ನನ್ನ ಅವರ ಸಂಪರ್ಕ ಸಂಬಂಧ ಮುಂದುವರಿದಿತ್ತು. ಕಾಲೇಜಿನ ಕಾರ್ಯಕ್ರಮಗಳ, ಸಹಯಾನದ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು ಈ ಮೈಲ್, ವಾಟ್ಸ್ ಆ್ಯಪ್ ಮುಖಾಂತರ ಬರುತ್ತಲೇ ಇದ್ದುವು. 2015 ರಲ್ಲಿ ಕೆರೆಕೋಣದಲ್ಲಿ ನಡೆದ ಸಾಹಿತ್ಯ ಗೋಷ್ಠಿಗೂ ನನ್ನನ್ನು ಆಹ್ವಾನಿಸಿದ್ದರು. ಅಲ್ಲಿ ಪ್ರತೀವರ್ಷ ನಡೆಯುತ್ತಿದ್ದ ಸಾಹಿತ್ಯ ಕಾರ್ಯಕ್ರಮಗಳು ಸಾಕಷ್ಟು ಪ್ರಚಾರ ಪಡೆದಿದ್ದವು. ತನ್ನಂತೆ ಯೋಚಿಸಬಲ್ಲ ಹೊಸತಲೆಮಾರಿನ  ಚಿಂತಕರನ್ನು ವಿಠಲ್ ಹುಟ್ಟುಹಾಕಿದ್ದರು.

ವಿಠಲ್ ಅವರ ಪ್ರಾಮಾಣಿಕ ನಡೆಗೆ ಒಂದು ನಿದರ್ಶನದ ಘಟನೆ. ಅದು 2011 ರಲ್ಲಿ ಮೌಲ್ಯಮಾಪನ ಧಾರವಾಡದಲ್ಲಿ ನಡೆಯುತ್ತಿತ್ತು. ಒಬ್ಬ ಪ್ರಾಂಶುಪಾಲ ಅದು ಹೇಗೋ ತನ್ನ ಮಗನ ಕನ್ನಡ ಉತ್ತರ ಪತ್ರಿಕೆ ಅವರ ಬಳಿ ಇದೆ ಎಂದು ಪತ್ತೆಹಚ್ಚಿದ್ದ. ಡೀ ಕೋಡಿಂಗ್ ಇದ್ದಾಗ್ಯೂ ಆತ ಶ್ರಮವಹಿಸಿ ಅವರ ಟೇಬಲ್ ಮುಂದೆ ಬಂದು ನಿಂತಿದ್ದ.!.ಒಂದಿಷ್ಟು ಆಮಿಷ ಒಡ್ಡುವ ರೀತಿಯಲ್ಲಿ ಇದ್ದ. ‘ನಿಮ್ಮ ಮಗನ ಪೇಪರ್ ಬಂದಿರಬಹುದು. ಆದರೆ ನನಗೆ ಯಾವುದು ಅಂತ ಗೊತ್ತಿಲ್ಲ. ಹುಡುಕುವಿರಾ?’ ಅಂತ ಕೇಳಿದರು. ಅವ ಖುಷಿಯಿಂದ ಹುಡುಕಿ ತೆಗೆದುಕೊಟ್ಟ. ಯಾಕೆಂದರೆ ಮಗ ಅವನ ಉತ್ತರ ಪತ್ರಿಕೆ ಸುಲಭವಾಗಿ ಗುರುತು ಹಚ್ಚಲು ಅನುಕೂಲವಾಗುವಂತೆ ಗುಲಾಬಿ ಬಣ್ಣದ ಗುರುತನ್ನು ಒಳಪುಟದ ಮೇಲ್ಭಾಗದಲ್ಲಿ ಮಾಡಿದ್ದ.

ಐದಾರು ಪುಟಗಳಲ್ಲಿ ಆ ಗುರುತು ಇತ್ತು!. ವಿಠಲ್ ಆ ಪೇಪರ್ ಎತ್ತಿಕೊಂಡರು. ಅದಕ್ಕೆ ನಲವತ್ತೆರಡು ಅಂಕ ಬಿದ್ದಿತ್ತು. ‘ಇದಕ್ಕೆ ನಲವತ್ತೆರಡು ಬಿದ್ದಿದೆ. ನೀವು ಬಂದು ಕೇಳಿದ್ದೀರಿ, ಅದ್ರಲ್ಲೂ ನೀವೇ ಒಬ್ಬ ಪ್ರಿನ್ಸಿಪಾಲ್. ನಿಮ್ಮಂಥವರೇ ಈ ರೀತಿ ಮಾಡಿದ್ರಿಂದ ಇದನ್ನು ಇನ್ನೊಂದುಬಾರಿ ಮೌಲ್ಯಮಾಪನ ಮಾಡ್ತೇನೆ’ ಎಂದು ಹೇಳಿಆ ವ್ಯಕ್ತಿಯ ಎದುರೇ ನಾಲ್ಕು ಅಂಕ ಕಡಮೆ ಮಾಡಿದರು. ಆತ ಪೆಚ್ಚು  ಮೋರೆ ಹಾಕಿಕೊಂಡು ಹಿಂದಕ್ಕೆ ಹೋದ.

ಎಪ್ರಿಲ್ 27 ಕ್ಕೆ ಸಿನಿಮಾ ಪಯಣದ ಬಗ್ಗೆ ಮೆಸೇಜ್ ಹಾಕಿದ್ದರು. ನಾನು ಬೇರೆ ಏನೋ ಕೆಲಸದಲ್ಲಿ ಇದ್ದೆ. ಅಷ್ಟಾಗಿ ಗಮನಿಸಿರಲಿಲ್ಲ. ಮೇ ಏಳರಂದು ಕುಟುಂಬ ಸಮೇತ ಶಿರಸಿಗೆ ಹೋಗುತ್ತಿದ್ದೆ. ಹೊನ್ನಾವರ ಹೈವೇಯಲ್ಲಿ ಸಾಗುವಾಗ ಕೆರೆಕೋಣಕ್ಕೆ ತಿರುಗುವ ಜಾಗ ಕಂಡಾಗ ಕತ್ತು ಅತ್ತ ಹೊರಳಿತು. ಲಾಕ್ ಡೌನ್ ಅಲ್ಲದೇ ಇದ್ದರೆ ಮೇ 8-9 ಕ್ಕೆ ಪ್ರತೀವರ್ಷ ಒಳ್ಳೆಯ ಕಾರ್ಯಕ್ರಮವನ್ನು ವಿಠಲ್ ಸಂಯೋಜಿಸುತ್ತಿದ್ದರು. ಕಳೆದ ವರ್ಷವೂ ಹೋಯಿತು. ಈ ವರ್ಷವೂ ಮತ್ತೆ ಲಾಕ್ ಡೌನ್ ಅಂತ ಯೋಚನೆ ಬಂತು. ಸಂಜೆ ಶಿರಸಿಯಲ್ಲಿ ಯಾಕೋ ಫೇಸ್ ಬುಕ್ ನೋಡಿದಾಗ ವಿಠಲ್ ಇನ್ನಿಲ್ಲ ಎಂಬ ಸುದ್ದಿ ಓದಿದೆ. ನಂಬಲಾಗಲಿಲ್ಲ. ರಾಜು ಅವರಿಗೆ ಫೋನ್ ಮಾಡಿದಾಗ ನಾನು ಅದನ್ನು ಕೇಳಲೆಂದೇ ಮಾಡಿದ್ದು ಎಂಬುದನ್ನು ಗ್ರಹಿಸಿಕೊಂಡು ‘ಹೌದಂತೆ ಕೊರೊನಾ ಆಗಿತ್ತು’ ಎಂದು ಹೇಳಿ ಫೋನ್ ಇಟ್ಟರು. ನಂಬಲಾಗಲಿಲ್ಲ. ಈ ಕ್ಷಣದವರೆಗೂ ಆ ಸುದ್ದಿ ಸುಳ್ಳೆಯೋ ಏನೋ ಎಂಬ ಭಾವನೆ ಕಾಡುತ್ತಿದೆ.

ವಿಠಲ್ ಅಗಲಿದ ನಂತರ ಅವರ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಹಿರಿಯರು ಕಿರಿಯರು ನೆನಪಿಸಿಕೊಂಡ ರೀತಿ ನೋಡಿದರೆ ಅವರ ಬದುಕು, ಆದರ್ಶ ಎಷ್ಟು ಶ್ರೇಷ್ಠವಾಗಿತ್ತು ಎನ್ನುವುದು ತಿಳಿಯುತ್ತದೆ. ಗುರುಗಳಾದ ಪುರುಷೋತ್ತಮ ಬಿಳಿಮಲೆಯವರು ನನ್ನೊಂದಿಗೆ ಫೋನಿನಲ್ಲಿ ಮಾತಾಡುತ್ತ, ‘ನಮಗಿಂತ ಕಿರಿಯರು ಸಾಧನೆ ಮಾಡಿದ್ದು ಕಂಡಾಗ ಸಂತೋಷವಾಗುತ್ತದೆ. ಅಗಲಿದಾಗ ಹತಾಶೆ ಆಗುತ್ತದೆ. ನನ್ನ ಕಣ್ಣೆದುರಿನಲ್ಲಿ ಬೆಳೆದ ಹುಡುಗ ವಿಠಲ್. ಮನೆ ಮಗನಂತಿದ್ದ. ಅವನ ಅಗಲಿಕೆ ಸಂಕಟ ತಂದಿದೆ. ಹಾಗಾಗಿ ನಾನು ಇವತ್ತು ಏನೂ ಮಾತಾಡಲಿಲ್ಲ. ಉಳಿದವರ ಮಾತಿಗೆ ಕಿವಿಯಾದೆ’ ಎಂದು ವಿಠಲನ ಸಂಸ್ಮರಣೆಯ ಝೂಮ್ ಮೀಟಿಂಗ್ ಕೇಳಿದ ನಂತರ ಹೇಳಿದ್ದರು.

ಒಂಬತ್ತನೆಯ ತಾರೀಕಿನಂದು ಕೆರೆಕೋಣ ಕ್ರಾಸ್ ಬಂದಾಗ ಕತ್ತು ಅತ್ತ ತಿರುಗಿತು. ನಿಟ್ಟುಸಿರು ಹೊಮ್ಮಿತು.                           

ವಿಠಲನ ಅಕ್ಕ ಮಾಧವಿಯವರಿಗೆ, ಹೆಂಡತಿ ಯಮುನಾ ಅವರಿಗೆ ಸಾಂತ್ವನ ಹೇಳೋಣ ಎಂದು ಹಲವು ಬಾರಿ ಫೋನು ಕೈಗೆ ಎತ್ತಿಕೊಂಡು, ಕೊನೆಗೆ ಮನಸ್ಸು ಬಾರದೆ ಫೋನನ್ನು ಬದಿಗೆ ಎಸೆದ ದಿನಗಳುಹಲವು. ಈಗಲೂ ಧೈರ್ಯ ಇಲ್ಲ

ಕೊರೊನಾಕ್ಕೆ ಧಿಕ್ಕಾರ. ವಿಠಲ್ ಗೆ  ಲಾಲ್ ಸಲಾಂ 

‍ಲೇಖಕರು Avadhi

June 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: