ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈ ಮನಸ್ಸೆಲ್ಲಾ ಇದೀಗ ಬೊಬ್ಬೆಗಳು!

ಸೌಮ್ಯಶ್ರೀ ಎ ಎಸ್

ಮನದಲಿ ಕಟ್ಟಿಗೆ ತುಂಬಿಕೊಂಡಿತು
ಕಡ್ಡಿ ಗೀರಿ ಬೆಂಕಿ ತಗುಲಿಸಿ‌ ಗಾಳಿ ಊದಿದೆ
ಇದೀಗ ನಂದಿಸಿದರೂ ತಣಿಯದೇ
ಧಗಧಗನೆ ಉರಿಯುತ್ತಲೇ ಇದೆ

ನೀನು ನನ್ನತ್ತಲೇ ಸುಳಿದಾಡಿರಬಹುದೆಂಬ
ಸಂಶಯ!
ನಿನ್ನ ಉಸಿರಿನ ಗಾಳಿ ತಾಗಿ
ನನ್ನದೆಯಲ್ಲಿ ಒಲವೆಂಬ
ದೀಪ ಹೊತ್ತಿ ಉರಿಯುತಿದೆ!

ಅದೇನೋ ಅದೆಷ್ಟು ಮರೆವಿನ
ನೀರು ಸುರಿದರೂ, ತಣಿದಂತೆ ಭ್ರಮಿಸಿ
ಮರೆವಿನ ಹೊಗೆಯಾಡಿಸಿ ಮತ್ತೆ ಗಾಳಿಗೆ
ಅಲೆಯುತ್ತಾ ಉರಿಯುತ್ತಿದೆ

ನಾನಾದರೂ‌ ಸವಿಗನಸು‌ ತುಂಬಿಕೊಂಡು
ಒಲ್ಲದ ಮನಸಿನಿಂದ
ನೋವು ನುಂಗಿ, ಕಣ್ಣೀರಿನ ಮಳೆ ಸುರಿಸಿ
ನಿಗಿ ನಿಗಿ ಕೆಂಡವನ್ನು ಇದ್ದಿಲು ಮಾಡಿದ್ದೆ
ಇದ್ದಿಲು ಕೆದಕಿದರೆ ಉಸಿರಾಡುತ್ತಲೇ ಇತ್ತು

ನನ್ನತ್ತಲೇ ಸುಳಿದು ಕಣ್ಣಲ್ಲಿ
ಕಣ್ಣಿಟ್ಟು ಕಿಡಿಯೊಂದನ್ನು ಹೆಕ್ಕಿ
ಒಮ್ಮೆ ನೀನು ಉಸಿರಿದೆ
ಹೊಗೆಯಾಡುತ್ತಿದ್ದ ಇದ್ದಿಲು
ಮತ್ತೆ ಕಾದು ಕೆಂಡವಾಗಿದೆ

ನಿನ್ನ ಕಣ್ಣುಗಳಲ್ಲಿ ನನ್ನನ್ನೇ ಕಾಣುತ್ತಾ
ನಿನ್ನ ಉಸಿರಿಗೆ ನನ್ನ ಉಸಿರು ಸೇರಿಸಿ
ಕೆಂಡವಾಗಿಸಿದ್ದೇನೆ, ಆ ಕಿಡಿ ತಾಗಿ
ಮೈ ಮನಸ್ಸೆಲ್ಲಾ ಇದೀಗ ಬೊಬ್ಬೆಗಳು!
ಮಣ್ಣು ಹೊದ್ದು ಮಲಗಿದರೂ
ತಣಿಯದೆ ಉರಿಯುತ್ತಲೇ ಇರುತ್ತದೆ
ನಿನ್ನ ನೆನಪುಗಳ ಉರಿಯ ತಣಿಸುವುದಾರೂ ಹೇಗೆ!?

‍ಲೇಖಕರು Avadhi

24 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading