ಎಚ್ ಎಸ್ ಶಿವಪ್ರಕಾಶರ ‘ಯಾವ ಶಹರು ಯಾವ ಬೆಳಕು’

ಸದ್ಯದ ಉರಿಯಲ್ಲಿ ಬೆಳಗುವ ಕವಿತೆಗಳು

ಎಚ್ ಆರ್ ರಮೇಶ

ಹಿಂದೆಂದಿಗಿಂತಲೂ ಕವಿತೆ ಇಂದು ಅತಿ ಅವಶ್ಯಕವೆನ್ನುವುದು ಯಾವತ್ತಿಗೂ ಸಲ್ಲುವ ಹೇಳಿಕೆ. ಈ ಹೇಳಿಕೆಯಲ್ಲಿಯೇ ಸದ್ಯದ ಪ್ರಖರತೆ, ಪ್ರಸ್ತುತತೆ, ಮತ್ತು ಪ್ರಾಮುಖ್ಯತೆ ಇದೆ. ಸದ್ಯವನ್ನು ಕಾಣುವುದು ಎಂದರೆ ಇಡೀ ಬದುಕನ್ನೇ ಕಾಣುವುದು. ಈ ಬಗೆಯ ಕಾಣುವಿಕೆಯನ್ನು ಎಚ್. ಎಸ್. ಶಿವಪ್ರಕಾಶರ ಹೊಸ ಕವನ ಸಂಕಲನ ‘ಯಾವ ಶಹರು ಯಾವಬೆಳಕು’ ನಲ್ಲಿ ಕಾಣಬಹುದು.

ಪ್ರತಿ ಕವಿಯೂ ಸದ್ಯದ ಜ್ವಾಲೆಯೊಳಗೆ ಅಥವಾ ತೀವ್ರತೆಯೊಳಗೆ ಹಾದು ಸಾಮಧಾನವಾಗಿ ಬದುಕನ್ನು ಕಲೆ/ಕಾವ್ಯದಲ್ಲಿ ಹಿಡಿಯುವ ಪ್ರಯತ್ನವನ್ನು ಮಾಡುತ್ತಾನೆ. ಬದುಕಿನ ತೀವ್ರತೆಯನ್ನು ಕವಿಮಾತ್ರ ಹಿಡಿಯಬಲ್ಲ/ಳು. ತತ್ವಜ್ಞಾನಿಗೆ ಪ್ರಮೇಯದ, ತರ್ಕದ ಚೌಕಟ್ಟು ಇರುತ್ತದೆ, ಮತ್ತು ಅದರೊಳಗಿಂದಲೇ ಬದುಕಿನ ಸತ್ಯಗಳನ್ನು ಅರಿಯುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಕವಿ ಎಲ್ಲ ಚೌಕಟ್ಟುಗಳನ್ನು ಮೀರಿ ತನ್ನನ್ನು ಮೀರಿ ಸದ್ಯದಲ್ಲಿ ಬದುಕು ಪ್ರಕಟಗೊಳ್ಳುವುದನ್ನು ತನ್ಮಯವಾಗಿ ಕಾಣಬೇಕಾಗುತ್ತದೆ, ಮತ್ತು ಕಂಡದ್ದನ್ನು ಲೋಕಕ್ಕೆ ತೋರಿಸಬೇಕಾಗುತ್ತದೆ. ಆದರೆ ಲೋಕಕ್ಕೆ ತೋರಿಸುತ್ತೇನೆಂಬ ಅತಿ ಎಚ್ಚರವಿದ್ದರೆ ಕವಿತೆ ಹೇಳಿಕೆಯಾಗಿ ಮಕಾಡೆ ಮಲಗುತ್ತದೆ.

ಕಾಣುವುದನ್ನು ಅಥವಾ ಇರುವುದನ್ನು ಎಷ್ಟು ಸಾಧ್ಯವೋ ಅಷ್ಟು ಸಾಧ್ಯದಲ್ಲಿ ಸಾವಧಾನವಾಗಿ ಹಿಡಿಯಬೇಕಾಗುತ್ತದೆ. ಈ ಸವಾಲನ್ನು ಎದುರಿಸುತ್ತಲೇ ಕವಿತೆಯನ್ನು ಮೂಡಿಸುವ ಸಂಕಟ ಮತ್ತು ಸಂಭ್ರಮವನ್ನು ಪಡಬೇಕಾಗುತ್ತದೆ. ಇದೇ ಬಗೆಯ ಅರ್ಥಗಳನ್ನು ಹೊಮ್ಮಿಸುವಂತಹ ಸಾಲುಗಳನ್ನು ಈ ಸಂಕಲನದ ‘ಆ ಕವಿಯತ್ರಿ’ ಯ ಎರಡನೇ ಚರಣದಲ್ಲಿ ಕಾಣಬಹುದು. ತೋಟಗಳಿಂದ ಹೂಗಳು ಮಾಯವಾದ ಮೇಲೆ ಹೇಗೋ ಹಾಗೆ ಎಂದು ಪ್ರಾರಂಭವಾಗುವ ಈ ಕವಿತೆ ಕವಿಯಾಗುವುದನ್ನು, ಕವಿತೆಯಾಗುವುದನ್ನು, ಕವಿತೆಯೊಳಗೆ ಬರುವ ವಸ್ತುವನ್ನು ಏಕಕಾಲಕ್ಕೆ ಧ್ಯಾನಸಿದಂತಿದೆ.

ಕವಯತ್ರಿ ಕವಿತೆಯನ್ನು ಬಿಡಲಾರಳಾಗಿ/ ಕವಯತ್ರಿ ತಾನೇ ಕವಿತೆಯಾಗತೊಡಗಿ/ ಅವಳ ಮುಖ ಕವಿತೆ ಪುಸ್ತಕವಾಗಿ/ ಗುಂಡಿಗೆ ಡವಡವ ಚಂದಚಂದದ ಛಂದಲಯಗಳ ಖಜಾನೆಯಾಗಿ/ ಅವಳ ಕರಗಳೂ ಸೋಖಿ ಪ್ರತಿವಸ್ತುವೂ/ಚಾಕು,ಬಾಕು,ಡಬ್ಬ,ಮಷೀನು,/ಕೊಳವೆ, ರಸ್ತೆ,/ಖಗ,ಮಿಗ,ಗಿಡ, ಮರ,ಬಳ್ಳಿ, ಎಲ್ಲವೂ/ತಮ್ಮ ವಾಸ್ತವಿಕತೆಯಿಂದ ಹೊಂದಿ ಬಿಡುಗಡೆ/ ಮರುಮೈತಾಳಿ ಬರೀ ಉಪಮೆಗಳಾಗಿ/ಪೃಥ್ವಿಯ ಸರ್ವ ನಿವಾಸಿಗಳೂ/ಸೂರ್ಯ-ಚಂದ್ರೋದಯಾಸ್ತಮಾನಗಳು/…

ಕವಯತ್ರಿ ಎನ್ನುವುದಕ್ಕಿಂತ ಕವಿಯೆಂದು ಹೇಳಿದ್ದರೆ ಅಷ್ಟೇ ಸಾಕಾಗುತ್ತಿತ್ತು ಅನ್ನಿಸುತ್ತದೆ. ಅಂದರೆ ಕವಿಗೆ ಹಣ್ಣುಗಂಡೆಂಬ ಭಿನ್ನಬೇಕಾ? ಇದು ವೈಯಕ್ತಿಕ ಅನಿಸಿಕೆ.

ಈ ಸಂಕಲನದ ಎಲ್ಲ ಕವಿತೆಗಳನ್ನು ಓದುತ್ತಾ ಹೋಗುವಾಗ, ಕವಿ ಜಗತ್ತಿಗೆ ಮತ್ತು ಅಲ್ಲಿ ಘಟಿಸುವ ತಲ್ಲಣಗಳಿಗೆ ಒಂಟಿಯಾಗಿ ಮಾತಾಡುತ್ತ ಹೋಗುತ್ತಿದ್ದಾನೆ ಅನ್ನಿಸುತ್ತದೆ. ಮತ್ತು ಇದು ಪಿಸುಮಾತಲ್ಲ, ಬದಲಿಗೆ ಮಾತು, ಆ ಮಾತು ಕವಿಗೆ ಅರಿವಿದೆ ತಾನು ಮಾತಾಡುವುದು ಮತ್ತು ತಾನು ಮಾತಾಡುತ್ತಿರುವುದುನ್ನು ಜಗತ್ತು ಕೇಳಿಸಿಕೊಳ್ಳುತ್ತಿಲ್ಲ ಎನ್ನುವ ಮಾತು ಇದೆ, ಜೊತೆಗೆ ಜಗತ್ತು ಇರುವುದು ಹೀಗೆ, ಆದರೆ ತಾನು ಮಾತ್ರ ಮಾತಾಡುವುದನ್ನು ನಿಲ್ಲಿಸಬಾರದು ಎನ್ನುವ ಆತ್ಮವಿಶ್ವಾಸ ಇಡೀ ಸಂಕಲನದ ಉದ್ದಕ್ಕೂ ನಿಚ್ಚಳವಾಗಿ ಕಾಣುತ್ತಿದೆ.

ಲೋಕಲೋಕಾಂತರಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿಯುವ ವಿನಯದ ತುಡಿತ ಮತ್ತು ಹಂಬಲ. ಕನ್ನಡ ಭಾಷೆ ಕೇವಲ ನಿಮತ್ತವಾಗಿ ಒದಗಿಬಂದಿದೆ. ಈ ಸಂಕಲನದ ಹಾಸು ಮತ್ತು ಹರಹು ವಿಶ್ವವ್ಯಾಪಿಯಾಗಿದೆ. ಹಾಗಾಗಿಯೇ ಬುದ್ಧ ಗುರು ವನ್ನು ಕುರಿತು ಬರೆದಂತೆ ಸಲೀಸಾಗಿ ರಿಯೋ ದ ಜೆನೆರೋದ ಏಸೂ ಮೂರ್ತಿಯ ಬಗ್ಗೆಯೂ ಬರೆಯುತ್ತಾರೆ. ಏಸು ನಿಂತಿರುವ ಪ್ರತಿಮೆಯನ್ನು ಹೀಗೆ ವರ್ಣಿಸುತ್ತಾರೆ: ನೀಳತೋಳುಗಳೆರಡನ್ನೂ ಚಾಚೆ/ಪೂರ್ವಪಶ್ಚಿಮಕ್ಕೆ/ಪಾಪಿಷ್ಠ ನಗರಗಳನ್ನೂ/ನಾವು ಕುಲಗೆಡಿಸಿಟ್ಟ ಪ್ರಕೃತಿಯನ್ನೂ/ಕ್ಷಮಿಸಿ ತಬ್ಬಿಕೊಳ್ಳಲು ತಯಾರಾಗಿ/

ಬೇಷರತ್ತು/ಆತರನ ಕರುಣೆ.

ಈ ಕೊನೆಯ ಎರಡು ಸಾಲುಗಳು ಬೇಕಾಗಿರಲಿಲ್ಲವೆನೋ, ಯಾಕಂದರೆ ಏಸುವಿನ ಚಾಚಿರುವ ಕೈಗಳೇ ಕರುಣೆಯನ್ನು ಸ್ಫುರಿಸುವುದನ್ನು ವ್ಯಕ್ತಪಡಿಸುತ್ತಿವೆ. ಬುದ್ಧ ಅಂಗುಲಿಮಾಲರ ನಡುವಿನ ಸಂಭಾಷಣೆ ಬುದ್ಧಗುರು ಅಂಗುಲಿಮಾಲನಿಗೆ ಹೇಳಿದ್ದು ಕವಿತೆಯಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ. ಇದು ಈ ಸಂಕಲನದ ಒಂದು ಘನವಾದ ಪದ್ಯ. ಇಂಗ್ಲಿಷಿನಲ್ಲಿ ಸಾಲಿಡ್ ಎನ್ನುತ್ತಾರಲ್ಲ, ಆ ಥರ. ಓದುವಾಗ ಮನಸ್ಸಿನಲ್ಲಿ ಬೆಳಕು ಪಟ್ಟಂತ ಹರಿದು ಹೋಗುತ್ತದೆ. ಜೊತೆಗೆ ನಾವೂ ಸಲ ಅಂಗುಲಿಮಾಲನ ಬೇರೆ ಬೇರೆ ರೂಪಗಳೆನೋ ಎಂದು ಭಾಸವಾಗುತ್ತದೆ.

ಈ ಕವಿತೆಯಲ್ಲಿ ಕವಿ ಎಚ್.ಎಸ್.ಶಿವಪ್ರಕಾಶರು ಕವಿತೆಗಿರುವ ಮಾಂತ್ರಿಕ ಶಕ್ತಿಯನ್ನು, ಅದು ಹರಿಸುವ ಅರಿವಿನ ಬೆಳಕನ್ನು ಮಿಂಚಿನ ಗತಿಯಲ್ಲಿ ತೋರಿಸುತ್ತಾರೆ: ಆತ್ಮ ಯಾರಲ್ಲೂ ಇಲ್ಲ/-ಇದು ಬುದ್ಧ ಶಾಸನ/ ಆದರೆ ಕೈಯಿಲ್ಲದವರು/ಕೈಬೆರಳುಗಳಿರದವರು/ಇದ್ದಾರಾ ಎಲ್ಲಾದರೂ?/ ಬೆರಳು ಕತ್ತರಿಸಿದಾಗ ನೀನು ಕೊಲ್ಲುವುದು/ಒಂದು ಬೆರಳನ್ನಲ್ಲ/ಒಂದು ಜೀವವನ್ನು/ಜೀವವನ್ನಲ್ಲ ದೇವನನ್ನು/ದೇವನನ್ನಲ್ಲ/ಬುದ್ಧನನ್ನು/ಬುದ್ಧನನ್ನಲ್ಲ/ಮುಂದೊಮ್ಮೆ ಬುದ್ಧನಾಗಲಿರುವ/ನಿನ್ನನ್ನು ಅಂಗುಲಿಮಾಲನನ್ನು..

ನಾಟಕಕಾರರಾಗಿಯೂ ಗುರುತಿಸಿಕೊಂಡಿರುವ ಕವಿ ಶಿವಪ್ರಕಾಶರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕವಿಯಾಗಿಯೇ ಎಲ್ಲರಿಗು ಇಷ್ಟವಾಗಿದ್ದಾರೆ. ಅಕಾಡೆಮಿಕ್ ಕಾರಣಗಳಿಗಾಗಿ ಲೋಕವನ್ನು ಸುತ್ತಿದ್ದರೂ ಅಲ್ಲಿ ಅವರು ಕಂಡಿದ್ದು ಮನುಷ್ಯಲೋಕದ ದುರಂತಗಳನ್ನು ಮತ್ತು ನೋವುಗಳನ್ನು. ಪರಲೋಕ/ಹೊರಲೋಕ/ಹೊರದೇಶ ಆಕರ್ಷಕವಾಗಿ ಕಂಡರೂ ಅಲ್ಲೂ ಸಹ ಎಲ್ಲಕಡೆಯಿರುವಂತೆ ದುಗುಡ, ಸಂಕಟಗಳಿದ್ದಾವೆ ಎನ್ನವುದನ್ನು ತಮ್ಮ ಕವಿತೆಗಳಲ್ಲಿ ಕವಿ ಶಿವಪ್ರಕಾಶರು ತೋರಿಸುತ್ತಾರೆ. ಮಗಳಿಗೆ ಪಾಠ ಎನ್ನುವ ಕವಿತೆ ಕಲಿಸುವ ಕ್ರಮಕ್ಕೆ ಒಂದು ಟೀಕೆ ಬರೆದಂತಿದೆ.

ಎಳೆಯ ಮನಸ್ಸುಗಳಿಗೆ ಪೂರ್ವಕಲ್ಪಿತ ಸಂಗತಿಗಳನ್ನು ತುಂಬಿ ಅವುಗಳನ್ನು ಹಳೆಯ ಜಾಡಿನಲ್ಲಿಯೇ ಸಾಗುವಂತೆ ಮಾಡುವ ಪ್ರವೃತ್ತಿಯನ್ನು ತುಂಬಾ ಮಾರ್ಮಿಕವಾಗಿ ಗೇಲಿಮಾಡುತ್ತಾರೆ: ಬೇಕು ಬೇಡಗಳ ಆಟ ಆಟ ಆಡುವಾಗ/ ಹುಷಾರು ಮಗಳೆ/ ನನ್ನಂಥ ಅಪ್ಪಂದಿರು ನಿಮ್ಮಮ್ಮನ ಥರಾ ಅಮ್ಮಂದಿರು/ಇನ್ನುಳಿದ ಅಣ್ಣ-ತಮ್ಮ,ಅಕ್ಕ-ತಂಗಿ/ಸುತ್ತು ಮುತ್ತಲ ಅಕ್ಕಪಕ್ಕದವರನ್ನೂ ಒಳಗೊಂಡು/ನಿನಗೆ ಕಲಿಸುತ್ತಾರೆ/ಈ ಖತರನಾಕ್ ಪಾಠವನ್ನು/.. ಆ ಮೋಡವನ್ನು ಮುಟ್ಟಬೇಕು/ಈ ಚಿಟ್ಟೆ ಮುಂಗೈ ಮೇಲೆ ಕೂಡಬೇಕು/ಆ ಬಟ್ಟೆ ತೊಟ್ಟು ನಲಿದಾಡ ಬೇಕು/ ಈ ನವಿಲಗರಿಯನ್ನು ನೇವರಿಸಬೇಕು/ ಇತ್ಯಾದಿ ಈ ಪೃಥ್ವಿ ಮಾತ್ರ ಕೊಡಬಲ್ಲ/ಸಣ್ಣ ಪುಟ್ಟ ಸುಖಗಳನ್ನು ಕಳೆದುಕೊಳ್ಳುತ್ತೀಯಾ/ಹುಷಾರು ಮಗಳೆ

ಸಮಾಜವನ್ನು ಸೃಷ್ಟಿಸಿಕೊಂಡ ಮನುಷ್ಯ ಅದನ್ನು ಎಷ್ಟು ಅಧ್ವಾನ ಮಾಡಬೇಕೋ ಅಷ್ಟು ಮಾಡಿದ್ದಾನೆ. ಈ ಥರದ ಕವಿತೆಗಳು ಸಮಾಜ ಕೆಡುವ ಮೂಲ ಕಾರಣಗಳನ್ನು ತನ್ನದೇ ನೆಲೆಯಲ್ಲಿ ಹೊರಗೆಡಹುತ್ತದೆ.

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಬರೆದಿದ್ದರೂ ಇವು ಯಾವುದೇ ದೇಶಕ್ಕೆ ಸೇರಬಹುದಾದ ಕವಿತೆಗಳು. ಆತ್ಮಾಹುತಿ ದಾಳಿ, ಭಯೋತ್ಪಾದನೆಗಳ ಬಗ್ಗೆ ದಿನನಿತ್ಯ ದಿನಪತ್ರಿಕೆಗಳಲ್ಲಿ ಕೇಳುತ್ತಿರುತ್ತೇವೆ, ಮತ್ತು ನೋಡುತ್ತಿರುತ್ತೇವೆ. ಇವು ರಾಜಕೀಯಕಾರಣಗಳಿಗಾಗಿಯೋ ಅಥವಾ ಧರ್ಮದ ಕಾರಣಗಳಿಗೋ ಮಾಡಿಸಲ್ಪಡಲಾಗುತ್ತಿದೆ. ಆದರೆ ಸುಂದರವಾದ ಬದುಕನ್ನು ಸೌಂದರ್ಯದಿಂದ ತುಂಬಿತುಳುಕುವ ಪ್ರಕೃತಿಯನ್ನು, ಮನುಷ್ಯ ಮನುಷ್ಯರ ನಡುವಿನ ಸಾಮರಸ್ಯವನ್ನು ಮನುಷ್ಯನೇ ನಿತ್ಯ ಹಾಳುಮಾಡುತ್ತಿದ್ದಾನೆ. ಇದು ನಿಜವಾದಂತಹ ಆತ್ಮಾಹುತಿ ದಾಳಿ ಮತ್ತು ಭಯೋತ್ಪಾದನೆಯಾಗಿದೆ.

ಈ ಸಂಕಲನದ ಒಂದು ಕವಿತೆ ಒಂದಾನೊಂದು ಕಾಲ- ಇದು ಗೇಬ್ರಿಯೆಲ್ ಒಕಾರನ ಒನ್ಸ್ ಆಪಾನ್ ಎ ಟೈಮ್ ಪದ್ಯವನ್ನು ನೆನಪಿಸುತ್ತದೆ ಮತ್ತು ಭಿತ್ತಿಯಲ್ಲಿ ಎರಡೂ ಒಂದೇ ಬಳ್ಳಿಯ ಹೂವುಗಳಂತೆ ತೋರುತ್ತವೆ. ಒಬ್ಬ ಕವಿಯ ಮೇಲೆ ಮತ್ತೊಬ್ಬ ಕವಿಯ ನೆರಳು ಇದ್ದೇ ಇರುತ್ತದೆ. ಅದು ಎಷ್ಟೇ ಪ್ರಜ್ಞಾಪೂರ್ವಕವಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆಗದಂತಹದ್ದು. ಹ್ಯಾಮ್ಲೆಟ್ ನಾಟಕದಲ್ಲಿ ಮಗ ಹ್ಯಾಮ್ಲೆಟ್ ಗೆ ತನ್ನ ತಂದೆ ಭೂತ ಐ ಯಾಮ್ ದೈ ಫಾದರ್ಸ್ ಸ್ಪಿರಿಟ್  ಎನ್ನುತ್ತ ಕಾಣುತ್ತಾನಲ್ಲ ಹಾಗೆ- ಜಗತ್ತಿನ ಸರ್ವನಾಶವನ್ನು ಹರಿತವಾದ ವ್ಯಂಗ್ಯ ಮತ್ತು ವಾಸ್ತವಾಂಶಗಳಿಂದ ಹೇಳುತ್ತದೆ.

ಜೋಗುಳ ಕವಿತೆಯಲ್ಲಿ ಕವಿ ಮನಸನ್ನು ಅವ್ವನನ್ನಾಗಿ ಕಾಣುತ್ತ ಶಿಶಿರ ಋತುವನ್ನು ಒಂದು ಇಮೇಜಾಗಿ ಬೆಳೆಸಿ, ಬೆಳಗಿಸಿದ್ದಾರೆ. ಜಗತ್ತಿನಲ್ಲಿ ಎಷ್ಟೊಂದೆಲ್ಲ ಅನಿಷ್ಟಗಳು ಜರುಗುತ್ತಿರುವಾಗ, ಸಂವೇದನಾ ಶೀಲವಾದ ಮನಸು ಸುಮ್ಮನೆ ಹೇಗೆ ಇರುತ್ತದೆ? ಮತ್ತು, ಅದು ವಿಹ್ವಲಗೊಳ್ಳದಿರಲು ಜಗತ್ತು ಸದಾ ಸಂಚನ್ನು ಹೆಣೆಯುತ್ತಿರುತ್ತದೆ. ಎಲ್ಲ ಅದ್ವಾನಗಳನ್ನು ಕಂಡು ಮನಸ್ಸು ಸುಮ್ಮನೆ ಇರಲು ಹೇಗೆ ಸಾಧ್ಯವೆನ್ನುವ ಸಂಘರ್ಷವನ್ನು ಕಾಣಬಹುದು. ಇಲ್ಲಿ ಮಲಗು ಎಂದರೆ ಸಮಾಧಾನಗೊಳ್ಳುವುದು, ಸಹಿಸಿಕೊಳ್ಳುವುದು.

ಪ್ರಕೃತಿಗೆ ವಿಷವಿಕ್ಕುವುದೆಂದರೆ ತನಗೆ ತಾನೇ ವಿಷವನ್ನು ಉಣ್ಣುವದೇ ಆಗಿದೆ. ಆತ್ಮಘಾತುಕತನ: ಮಲಗು ಮಲಗವ್ವ/ನನ ಮನಸೆ ಮಲಗು/ ಮಲಗು ಮನಸೆ ಮಲಗು/ಹಾಡುತಿದೆ ನನ್ನರ್ಧ ಮನಸು/ಹಾಹಾಕರಿಸಲು ಇನ್ನರ್ಧ ಮನಸು/ಕೊಲೆ, ಸುಲಿಗೆ, ಅತ್ಯಾಚಾರ/ವೇಷರಮು ಹತ್ಯಾಕಾಂಡಗಳ/ನೆತ್ತರಿನಿಂದ/ನೆನೆಯುತಿದೆ ನನ್ನ ನೆಲ.

ಜೋಗುಳವೆನ್ನುವುದೇ ಈ ದಾವಂತದ ಬದುಕಿನಲ್ಲಿ ವ್ಯಂಗ್ಯವಾಗಿ ಕಾಣುತ್ತಿದೆ. ಮತ್ತು ಅದನ್ನು ಹಾಗೆ ಮಾಡಲಾಗಿದೆ. ಅದನ್ನು ಹಾಡಿದರೆ ಜಗತ್ತು ಕೇಳಿಸಿಕೊಳ್ಳಲು ಆಸ್ಪದಕೊಡುವುದಿಲ್ಲ. ಆದರೆ ಎಂತಹ ದಿಕ್ಕೆಟ್ಟ ಪರಿಸ್ಥಿತಿಯನ್ನಾದರೂ ಮನಸ್ಸು ಎದುರಿಸಿ ಬದುಕನ್ನು ಸಾಗಿಸಬೇಕೆನ್ನುವ ಆತ್ಮವಿಶ್ವಾಸವನ್ನು ಕವಿ ಹೇಳುತ್ತಿದ್ದಾರೆ.

ಈ ಸಂಕಲನದಲ್ಲಿ ಎಚ್.ಎಸ್.ಶಿವಪ್ರಕಾಶರ ಹಿಂದಿನ ಕವಿತೆಗಳಲ್ಲಿ ಕಂಡಂತಹ – ಅತಿ ಮುಖ್ಯವಾಗಿ ಮಿಲರೇಪ, ಸೂರ್ಯಜಲ ಇತ್ಯಾದಿ ಸಂಕಲನಗಳಲ್ಲಿರುವಂತೆ – ಅನುಭಾವದ ಕವಿತೆಗಳು ಕಡಿಮೆ. ಬದಲಾಗಿ ಸದ್ಯದ ಬದುಕನ್ನು ಹಿಡಿಯುವಲ್ಲಿ ಹೆಚ್ಚಿನ ಆಸ್ಥೆಯನ್ನು ತೋರಿಸಿದ್ದಾರೆ ಮತ್ತು ಸದ್ಯದ ಬದುಕು ಅವರಿಗೆ ತುಂಬಾ ಕಾಡಿದೆ. ಆಫ್ ಕೋರ್ಸ್ ಯಾವ ಶಹರು, ಯಾವ ಬೆಳಕು ಎನ್ನುವ ಶೀರ್ಷಿಕೆಯಲ್ಲಿಯೇ ಮನುಷ್ಯ ಯಾಂತ್ರಿಕ ಜಗತ್ತಿನಿಂದಾಗಿ ಅಲೌಕಿಕ ಅನುಭವದಿಂದ ವಂಚಿತನಾಗಿ ಪರಿತಪಿಸುತ್ತಿರುವ ಧ್ವನಿಯನ್ನು ಕಾಣಬಹುದು.

ಸೋಕು ಮತ್ತು ಎರಡು ಸೊನ್ನೆಗಳು ಅನುಭಾವದ ಆತ್ಯಂತಿಕ ಸ್ಥಿತಿಗೆ ತಲುಪಿ ಬದುಕಿನ ದರ್ಶನಮಾಡಿಸುತ್ತಾರೆ. ಸೋಕು ಕವಿತೆಯ ಕೆಲವು ಸಾಲುಗಳು:ನಿನ್ನ ನಾನು ಮುಟ್ಟಬೇಕು/ಮೈಯ ಸೋಕದೆ/ಕೈಯಿಂದ ಸೋಕದೆ/ನಿನ್ನ ಅವನ ಇವಳವಳ/ಮುಟ್ಟಬೇಕು/ಕೈಯಿಂದ ಸೋಕದೆ/ಮೈಯ ಸೋಕದೆ/ಸೂರ್ಯ ಮುಟ್ಟುವಂತೆ ನೆಲವ.

ಎರಡು ಸೊನ್ನೆಗಳು ಕವಿತೆ ಜಿಡ್ಡು ಕೃಷ್ಣಮೂರ್ತಿಯವರು ಹೇಳುತ್ತಾರಲ್ಲ ಮನಸನ್ನು ಖಾಲಿಮಾಡಿಕೊಳ್ಳುವುದು ಆ ಥರ ಇದೆ. ಎಲ್ಲವನ್ನು ಕಳೆದುಕೊಂಡು ಖಾಲಿಯಾಗಿ ಮತ್ತೆ ಹೊಸ ಚೈತನ್ಯವನ್ನು ಮೂಡಿಸಿಕೊಳ್ಳುವುದು. ಕವಿತೆಯ ಒಂದೆರಡು ಸಾಲುಗಳನ್ನು ನನ್ನ ಹೇಳಿಕೆಗೆ ಬೆಂಬಲವಾಗಿ ಬಳಸಿಕೊಳ್ಳುತ್ತೇನೆ: ಎಲ್ಲವನ್ನೂ ಕಳೆದುಕೊಂಡು/ಕೊನೆಗೆ ಯಾವುದೂ ಇಲ್ಲದೆ ಹೋಗಿ/ಸೊನ್ನೆ ಒಂದು ಇಲ್ಲವಾಗಿ/ಇಲ್ಲದುದರ ಸಂಕೇತವಾಗುವುದು.

ಕಾಲವನ್ನು ಕುರಿತು ಮತ್ತು ಬದುಕಿನಲ್ಲಿ ಮಾಗುವಿಕೆಯನ್ನು ಕುರಿತು ಧ್ಯಾನಿಸಿರುವ ಕವಿತೆ ಶಿಶಿರವೇ ನನ್ನ ಋತು. ಈ ಕವಿತೆಯಲ್ಲಿ    ಎಚ್.ಎಸ್.ಶಿವಪ್ರಕಾಶರು ಇಷ್ಟವಾದಷ್ಟು ಬೇರೆಕವಿತೆಗಳಲ್ಲಿ ಇಷ್ಟವಾಗದ ರೀತಿಯಲ್ಲಿ ತುಂಬಾ ಸೊಗಸಾಗಿ ಬರೆದಿದ್ದಾರೆ. ಷೇಕ್ಸ್‌ಪಿಯರ್ ಗೆ ಇಷ್ಟವಾದಂತೆ ಶಿವಪ್ರಕಾಶರಿಗೂ ಸಹ ಶಿಶಿರವೆಂದರೆ ಬಲು ಇಷ್ಟ. ಮತ್ತು ಮಮಕಾರ. ಅದೊಂದು ರೀತಿಯ ಎಪಿಟೋಮ್ ಆಫ್ ಬ್ಯೂಟಿ ಇದ್ದಹಾಗೆ ಅವರಿಗೆ. ಅಲ್ಲಿ ಅವರು ಬದುಕಿನ ಸಾಕ್ಷಾತ್ಕಾರವನ್ನು ಕಾಣುತ್ತಾರೆ. ಬದುಕಿನಲ್ಲಿನ ಮಾಗಿದ ಸ್ಥಿತಿಯನ್ನು ದರ್ಶನಮಾಡಿಸುತ್ತಾರೆ ಮತ್ತು ಬದುಕಿನ ತೀವ್ರತೆಯನ್ನು ಸೊಗಸಾಗಿ ಕಾಣಿಸುತ್ತಾರೆ.

ಈ ಕವಿತೆ ಒಂಥರದ ಅಲೌಕಿಕ ಸೆಳಕು. ಮನುಷ್ಯರ ಬಗ್ಗೆ ನೇರವಾಗಿ ಇಲ್ಲದಿದ್ದರೂ ಮನುಕುಲದ ಬದುಕನ್ನೇ ಕುರಿತು ಧೇನಿಸಿದಂತಿದೆ ಈ ಕವಿತೆಯಲ್ಲಿ. ಇಲ್ಲಿ ಕವಿ ತನ್ನ ಇತರೆ ಕೆಲವು ಕವಿತೆಗಳಲ್ಲಿ ಅಭಿಪ್ರಾಯಗಳನ್ನು ಹೇರಿದಂತೆ ಹೇರದೆ, ಸತ್ಯ ಮತ್ತು ಸೌಂದರ್ಯಗಳನ್ನು ಕಾಣುವ ಪರಿ ಮನೋಜ್ಞವಾಗಿ ಮೂಡಿಬಂದಿದೆ. ಇಡೀ ಪದ್ಯವನ್ನು ಷೇಕ್ಸ್‌ಪಿಯರ್ ನ ಮಾತಿನಲ್ಲೇ ಹೇಳುವುದಾದರೆ ಮಾಗುವುದೇ ಎಲ್ಲಾ. ಶಿಶಿರವೇ ನನ್ನ ಋತು/ಹಸಿರು ಮೂರ್ತಿ ಅಲ್ಲ ಚೈತ್ರದಂತೆ/ಆದರೆ ಮಾದು ಮೆದು ಹಳದಿ/ಕಂದಿ ಶೋಕ, ಧ್ಯಾನ ಲೀನ ಎನ್ನುವ ಸಾಲುಗಳು ಷೇಕ್ಸ್‌ಪಿಯರ್ ನ 73ನೇ ಸಾಲಿನ ದಟ್ ಟೈಮ್ ಆಫ್ ಈಯರ್ ದೋ ಮೆಯಿಸ್ಟ್ ಇನ್ ಮಿ ಬೆಹೋಲ್ಡ್/ವೆನ್ ಯಲ್ಲೋ ಲೀವ್ಸ್ ಆರ್ ನನ್ ಆರ್ ಫ್ಯೂ ಡು ಹ್ಯಾಂಗ್/ಅಪಾನ್ ದೋಸ್ ಬೋಫ್ಸ್ ವಿಚ್ ಶೇಕ್ ಅಗೈನ್ಸ್ಟ್ ದ ಕೋಲ್ಡ್/ಬೇರ್ ರೂಯ್ನ್ಡ್ ಖಾಯರ್ಸ್ ವೇರ್ ಲೇಟ್ ದ ಸ್ವೀಟ್ ಬರ್ರ್ಡ್ ಸ್ಯಾಂಗ್.

(ಹಳದಿ ಎಲೆಗಳೆಲ್ಲಾ ಉದುರಿ ಬೋಳು ಕೊಂಬೆಗಳು/ಅಥವಾ ಒಂದೋ ಎರಡೋ ಎಲೆ ನೇತಾಡುತ/ಕೊರೆವ ಚಳಿಗೆ ನಡುಗುವ ದಿನಗಳ ನನ್ನಲೂ ಕಾಣುವೆ/ಪಾಳು ಬಿದ್ದ ಮೇಳದ ಪ್ರಾಂಗಣಗಳು/ಹಾಡಿದ್ದವು ಅಲ್ಲಿ ಹಕ್ಕಿಗಳು ವಸಂತವನು ಮುದದಿ.) ಸಾಲುಗಳನ್ನು ನೆನಪಿಸುತ್ತವೆ.

ಹರಿದ ಸಿರ ಕವಿತೆಯಲ್ಲಿ ಕರುಣೆ, ಹಿಂಸೆಗಳ ಕುರಿತು ಚಿಂತನೆಯನ್ನು ಕಾಣಬಹುದು: ನನ್ನ ಕಲ್ಪನೆಗೂ ತಾಗುತ್ತದೆ ಆ ರಕ್ತ.ಈ ಸಾಲುಗಳನ್ನು ಓದುವಾಗ ಎಲ್ಲೋ ನಡೆಯುವ ಹಿಂಸೆ, ಅದರಿಂದ ಚಿಮ್ಮುವ ರಕ್ತ ನಮ್ಮ ಮುಖಕ್ಕೆ ರಪ್ಪಂಥ ಬಡಿದಂತಾಗುವುದು.

ಮಹಾಭಾರತದ ವ್ಯಾಸರಿಗೆ ಅವರ ಮಾತನ್ನು ಯಾರು ಕೇಳುತ್ತಿಲ್ಲ ಎನ್ನುವ ಕೊರಗಿತ್ತಂತೆ. ಕೇಳಿದ್ದಿದ್ದರೆ ಬಹುಷಃ ಕುರುಕ್ಷೇತ್ರ ಜರುಗುತ್ತಿರಲಿಲ್ಲವೆನೋ. ಅಂದರೆ ಕವಿ ಸಮಾಜದ ಸಾಕ್ಷಿಪ್ರಜ್ಞೆ. ಅವನ ಮಾತನ್ನು ಕೇಳಿಸಿಕೊಂಡರೆ ಪ್ರಭುತ್ವ ಆಗುವ ದುರಂತಗಳನ್ನು ಕಡಿಮೆಯಾದರೂ ಮಾಡಬಹುದೇನೋ. ಇದು ಕವಿತೆಯ ಮತ್ತು ಕವಿಯ ಸೋಲು ಮತ್ತು ಗೆಲುವು. ಅಂದರೆ ಪ್ರತಿಬಾರಿಯೂ ಕವಿ ಕವಿತೆಯನ್ನು ಬರೆಯುವಾಗ ನನ್ನ ಮಾತನ್ನು ಯಾರು ಕೇಳುತ್ತಾರೆ ಎಂದುಕೊಂಡೇ ಬರೆಯುತ್ತಾನೆನೋ, ಮತ್ತು ಕೇಳಿದರೆ ಕೇಳಲಿ, ಆದರೆ ನಾನು ಮಾತ್ರ ಹೇಳಬೇಕಾದುದನು ಜೀವನ್ಮರಣದ ಸಂಗತಿಯಂತೆ ತೆಗೆದುಕೊಂಡು ಹೇಳಲೇಬೇಕೆಂದುಕೊಂಡು ಬರೆಯುತ್ತಾನೆ.

ಇಲ್ಲಿಯ ಕವಿತೆಗಳೂ ಸಹ ಆ ಬಗೆಯವು. ಪ್ರಭುತ್ವವನ್ನೇ ವಿಮರ್ಶೆಮಾಡಿರುವಂತಹ ಈ ಕವಿತೆಗಳು ರಾಜಕೀಯ ಪದ್ಯಗಳೂ ಹೌದು. ಪ್ರಭುತ್ವ ಕವಿತೆಯನ್ನು ಮತ್ತು ಕವಿಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಅಪಾರ್ಥಮಾಡಿಕೊಂಡು ವಿವಾದಗಳನ್ನು ಬೇಕಂತಲೇ ಸೃಷ್ಟಿಮಾಡುವುದರಲ್ಲಿ ತನ್ನ ಆಸ್ಥೆಯನ್ನು ತೋರಿಸುತ್ತದೆ. ಆದರೆ ಕವಿತೆ ಪ್ರಭುತ್ವದ ಹಿಪಕ್ರಸಿಯನ್ನು ಜಗಜ್ಜಾಹೀರಮಾಡದೆ ಬಿಡದು. ಅದು ಅದರ ತುರ್ತು, ದರ್ದು.

ಕಾಲವನ್ನು ಹಿಡಿಯುವುದೆಂದರೆ ಸದ್ಯದ ಬದುಕನ್ನು ಮುಷ್ಟಿಯಲ್ಲಿ ಹಿಡಿಯುವ ಧಾಷ್ಟ್ರ್ಯತೆಯೇ ಸರಿ. ಕಲೆ ಮುಖ್ಯವಾಗಿ ಕವಿತೆ/ಸಾಹಿತ್ಯ ಇದನ್ನು ತನ್ನ ಅನಿವಾರ್ಯತೆ ಎಂದುಕೊಂಡು ಪ್ರಯತ್ನಿಸುತ್ತಿರುತ್ತದೆ. ಇದರ ತೀಕ್ಷ್ಣ ಪ್ರತಿಸ್ಪಂದನೆಗೆ ಪ್ರಭುತ್ವ ಬೆಚ್ಚಿಬೀಳುವುದು. ಕವಿತೆ ಉಂಟುಮಾಡುವ ಮುಜುಗರಕ್ಕೆ ಪ್ರಭುತ್ವ ತನ್ನದೇ ರೀತಿಯಲ್ಲಿ ಅದರ ಬಾಯಿಯನ್ನು ಮುಚ್ಚಿಸುವ ಹುನ್ನಾರಗಳನ್ನು ಹೆಣೆಯುತ್ತಿರುತ್ತದೆ. ಆದರೆ ಕಲೆಯೆಂದಿಗೂ ತನ್ನದೇ ಆದ ರಹದಾರಿ, ಒಳದಾರಿಗಳನ್ನು ಕಂಡುಕೊಂಡಿರುತ್ತದೆ. ಅದರ ಇಮೇಜುಗಳನ್ನು, ಮೆಟಫರ್‍ಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕಳಚಿಡು ನಿನ್ನ ಜೋಡುಗಳನ್ನು ಈ ಸಂಕಲನದಲ್ಲಿನ ಕೆಲವು ಕಾಡುವ ಕವಿತೆಗಳಲ್ಲಿ ಒಂದು: ಇಡಬೇಡ ದಾಪುಗಾಲು ಚಂಗೀಸನ ಸೇನಾಪತಿಹಾಗೆ/ ನೀ ನಡೆವ ಭೂಮಿ ಪಾವನವಾದುದು/ ಕೊರೆಯದಿರು ಅಗೆದು ಹಾಕದಿರು ಆಪಾಟಿ/ ತಗೆದು ವೃಥಾ ಚಲ್ಲದಿರು ನೆಲದಡಿ ನೀರನ್ನುಎನ್ನುವ ಸಾಲುಗಳು ಅಧಿಕಾರ ದಾಹದ ಮನಸ್ಥಿತಿಯನ್ನು ಮತ್ತು ನಮಗೆ ತಾವನ್ನು ಕಲ್ಪಿಸಿಕೊಟ್ಟಿರುವ ಪ್ರಕೃತಿ/ಭೂಮಿಯನ್ನು ಹಾಳುಮಾಡುತ್ತಿರುವುದನ್ನು ತುಂಬಾ ಮಾರ್ಮಿಕವಾಗಿ ಕವಿ ತೋರಿಸಿದ್ದಾರೆ.

ಪ್ಲೇಟೋ ತನ್ನ ರಿಪಬ್ಲಿಕ್ ನಲ್ಲಿ ಒಂದು ಮಾತನ್ನು ಹೇಳುತ್ತಾನೆ: ನಾಯಕರು ತತ್ವಜ್ಞಾನಿಗಳಾಗದ ಹೊರತು ಅಥವಾ ತತ್ವಜ್ಞಾನಿಗಳು ನಾಯಕರಾಗದ ಹೊರತು ರಾಜ್ಯ/ದೇಶಗಳು ಎಂದಿಗೂ ಸುಭೀಕ್ಷವಾಗಿರಲಾರವು. ಈ ಮಾತುಗಳು ಈ ಕವಿತೆಯ ಸಂದರ್ಭದಲ್ಲಿ ಮತ್ತು ಪ್ರಸ್ತುತತದ ಸಂದರ್ಭಕ್ಕೆ ತುಂಬಾ ಹೊಂದಿಕೆಯಾಗುತ್ತವೆ.

ಈ ಕವಿತೆ ಎಷ್ಟು ವಾಸ್ತವವೆಂದರೆ ಎಲ್ಲ ತತ್ವ, ವಿಜ್ಞಾನ, ಸಮಾಜಶಾಸ್ತ್ರ, ಕಲೆ, ಮತ್ತಿತರೆ ಎಲ್ಲಾ ಚಿಂತನೆಗಳನ್ನು ಪಾಕಮಾಡಿ ಒಂದು ಎರಕದಲ್ಲಿ ಹೊಯ್ದಿರುವಂತೆ ಕಂಗೊಳಿಸುತ್ತದೆ. ಈ ಕವಿತೆಯ ವೇಗೋನ್ಮತ್ತ ನಿನ್ನ ಮೆದುಳೆಂಬ ಮಾರಕ ಚಾಲಕ/ಐಲುಪೈಲಾಗಿ ಓಡಿಸುತ್ತಿರುವ/ನಿನ್ನ ಅವಿಶ್ರಾಂತ ಮನಸಿಗೆ ಕೈಕಾಲುಗಳಿಗೆ/ಸ್ವಲ್ಪ ದಿನವಾದರೂ ಕಡಡಾಯ ರಜೆ ನೀಡು/ಅವು ಬಳಲಿ ನೆಲಕುರುಳುವ ಮೊದಲು/ಮಣ್ಣಿಂದ ಬಂದ ನೀನು/ಮಣ್ಣಿಗೇ ವಾಪಸ್ಸಾಗುವ ನೀನು ಎಂಬ ಸಾಲುಗಳು ಕವಿಗಳನ್ನು ಕಂಡರೆ ಪ್ರಭುತ್ವ ಯಾಕೆ ಹೆದರುತ್ತದೆ ಮತ್ತು ಕವಿತೆ ಮಾತ್ರ ತನ್ನೊಳಗಿನ ಸ್ಥಾಯಿಭಾವವಾದ ವೈಚಾರಿಕತೆಯ ಅಂಕುಶದಿಂದ ಅದನ್ನು ಯಾಕೆ ತಿವಿಯುತ್ತಿರುತ್ತದೆ ಎನ್ನುವುದನ್ನು ಕಾಣುತ್ತೇವೆ. ಇಂತಹ ಸಾಲುಗಳನ್ನು ಬರೆದ ಕವಿ ಓದುಗರ ಮನಸ್ಸಿನೊಳಗೆ ಸೀದ ಲಗ್ಗೆ ಇಡುತ್ತಾರೆ.

ಸಂಕಲನದ ಶೀರ್ಷಿಕೆಯ ಕವನ ಯಾವ ಶಹರು ಒಂದು ಆಪ್ತತೆಗಾಗಿ, ಮನಸ್ಸನ್ನು ಹಗೂರಾಗಿಸುವ ಮತ್ತೊಂದು ಮನಸ್ಸಿಗೆ ಹಾತೊರೆಯುವಿಕೆಯನ್ನು ಕಾಣಿಸುತ್ತದೆ. ಮಡುಗಟ್ಟಿರುವ ಒಳಗಿನ ಮೌನವನ್ನು ಅರ್ಥಮಾಡಿಕೊಂಡು ಮಾತಾಗಿಸಿ ಎದೆಯೊಳಗೆ ಅವಿಸಿಟ್ಟುಕೊಳ್ಳುವ ಮನಸ್ಸಿಗಾಗಿ ಒಂದು ಮನಸ್ಸು ಕಾಯುತ್ತಿದೆ ಎಂದು ಕವಿ ಪ್ರಶ್ನೆ ಮೂಲಕ ಹೇಳುತ್ತಾರೆ, ಕೇಳುತ್ತಾರೆ. ಅಗಾಧವಾದ ಬದುಕಿನಲ್ಲಿ ಆಪ್ತ ಕ್ಷಣಗಳನ್ನು ಕಳೆಯುವ ಸಾಂಗತ್ಯದ ಬಯಕೆ, ತಹತಹಿಕೆ ತುಂಬ ಸುಂದರವಾಗಿ ಮೂಡಿಬಂದಿದೆ. ಅಥವಾ ಒದಗಿಬಂದಿದೆ.

ಎಚ್. ಎಸ್. ಶಿವಪ್ರಕಾಶರು ಈ ಸಂಕಲನದ ಮೂಲಕ ಕನ್ನಡ ಕಾವ್ಯ, ಅಷ್ಟೇ ಅಲ್ಲದೆ,  ಜಗತ್ತಿನ ಕಾವ್ಯ ಯಾವ ಕಡೆ ಹೋಗುತ್ತಿದೆ ಮತ್ತು ಅದು ಏನನ್ನು ಒಳಗೊಳ್ಳಬೇಕು ಎಂಬುದನ್ನು ಯಾವ ಐಡಿಯಾಲಜಿಗಳ ಪ್ರಭಾವಕ್ಕೆ ಒಳಗಾಗದೆ, ತೋರಿಸುವ ಒಂದು ಕೈಮರದಂತಿದೆ. ಸ್ವರತಿಯಿಂದ ಬಳಲುತ್ತಿರುವ  ಮತ್ತು ಸತ್ಯ, ಸೌಂದರ್ಯ, ಕಲಾತ್ಮಕತೆ, ಸಮಾಜಕ್ಕೆ ಮುಖಾಮುಖಿಯಾಗುವ ಛಾತಿ ಇಲ್ಲದೆ ಕೊರಗುತ್ತಿರುವ ಆಧುನಿಕ ಕಾವ್ಯಕ್ಕೆ ಮುಖ್ಯವಾಗಿ ಕನ್ನಡ ಕಾವ್ಯಕ್ಕೆ ಒಂದು ಬಗೆಯ ಚೇತನವನ್ನು ಧಾರೆಯೆರೆದು ಕೊಡುವ ರೀತಿಯಲ್ಲಿ ಯಾವ ಶಹರು ಯಾವ ಬೆಳಕು ಸಂಕಲನ ಕಾಣುತ್ತಿದೆ. ಆದರೂ ಕೆಲವು ಕವಿತೆಗಳಲ್ಲಿ ಕವಿ ಸಡನ್ನಾಗಿ ಧುಮುಕಿ ತನ್ನ ಅಭಿಪ್ರಾಯಗಳನ್ನು, ಮತ್ತು ಹೀಗೆ ಎಂದು ಹೇಳುವುದನ್ನು ಕಾಣಬಹುದು. ಆದರೆ ಅವರು ಕೊಡುವ ದರ್ಶನ ಅದನ್ನೆಲ್ಲ ಮರೆಸುತ್ತದೆ.

ಈ ಸಂಕಲನವನ್ನು ಓದಲೇಬೇಕಾದ ಅನಿವಾರ್ಯತೆ ಯಾಕೆ ಇದೆಯೆಂದರೆ,ನಮ್ಮ ಬದುಕನ್ನು ಅನೇಕ ಕ್ಷಣಿಕ ಆಕರ್ಷಣೆಗಳು ವಿಚಲಿತಗೊಳಿಸಿ, ದಿಕ್ಕುತಪ್ಪಿಸುತ್ತಿರುವಾಗ, ನಮ್ಮನ್ನು ನಾವು ಅರ್ಥಮಾಡಿಕೊಳ್ಳುವುದಕ್ಕಾಗಿ ಮತ್ತು ನಾವಿರುವ ಜಗತ್ತು ಹಾಕೆ ಹೀಗಾಗುತ್ತಿದೆ ಎನ್ನುವುದನ್ನು ಅರಿಯುವುದಕ್ಕಾಗಿ. ಕನ್ನಡದ ಈ ಕವಿತೆಗಳು ಜಗತ್ತಿನ ವಿವಿಧ ದೇಶಗಳಲ್ಲಿ ಕವಿಯು ಸುತ್ತಾಡುತ್ತಿದ್ದಾಗ ರಚಿಸಲ್ಪಟ್ಟವು. ಅಂದರೆ ಕೋಸ್ಟಾರಿಕಾ, ಎಲೆನಿಕ,ಕ್ರಯೋಮಾ ರೊಮೇನಿಯೋ, ಎಲ್ ಸಾಲ್ಯಡಾರ್, ರಿಯೋ ದ ಜೆನೆರೋದ, ಭುವನೇಶ್ವರ, ದೆಹಲಿಗಳಲ್ಲಿ ಬರೆಯಲ್ಪಟ್ಟಿದ್ದರೂ ಅವು ನೆಪಮಾತ್ರ. ಇದರ ಮೂಲಕ ಜಗತ್ತಿನ ಯಾವ ಮೂಲೆಗೆ ಹೋದರೂ ಮನುಷ್ಯನ ಪಾಡು ಒಂದೇ ಎನ್ನುವುದನ್ನು ತೋರಿಸುತ್ತದೆ.

ತಾಂತ್ರಿಕವಾಗಿ, ರಾಜಕೀಯವಾಗಿ ಗಡಿಗಳಿಂದ ಬೇರ್ಪಟ್ಟಿದ್ದರೂ ಮನುಷ್ಯನ ಬೇಗುದಿ ಸಂಕಟ ಒಂದೇ ತೆರನಾಗಿವೆ. ಹೀಗಿರುವಾಗ ಧರ್ಮ, ಜಾತಿ, ಹೆಸರಿನಲ್ಲಿ ಮನುಷ್ಯನನ್ನು ಒಡೆದು ನೋಡುತ್ತಿರುವ ಅವಸ್ಥೆ/ವ್ಯವಸ್ಥೆಯ ಮೂರ್ಖತನವನ್ನು ಸಾಮಧಾನವಾಗಿ ಎಲ್ಲೂ ಕಿರುಚಿಕೊಳ್ಳದೆ ಆದರೆ ಗಟ್ಟಿಯಾಗಿ ಹೇಳುತ್ತಿವೆ. ಮತ್ತು ಇದರ ಮೂಲಕ ಕವಿ ಮನಸ್ಸೊಂದು ನಮ್ಮ ಸುತ್ತಲಿನ ಜಗತ್ತನ್ನು ಅಲ್ಲಿಯ ತವಕ-ತಲ್ಲಣಗಳಿಗೆ ಯಾವ ರೀತಿ ಸ್ಪಂದಿಸಿದೆ ಎನ್ನುವುದನ್ನು ಕಾಣುತ್ತೇವೆ.

ಕವಿತೆ ಎಂದಿಗೂ ಯಾವುದನ್ನೂ ಸಂಪೂರ್ಣವಾಗಿ ಒಪ್ಪದು. ಒಪ್ಪುವುದಕ್ಕೆ ಸಂಪೂರ್ಣವಾದುದೆನ್ನುವುದು ಯಾವುದು ಇಲ್ಲ. ಈ ನೆಲೆಯಲ್ಲಿ ಸಂಕಲನದ ಶೀರ್ಷಿಕೆಯನ್ನು ಗಮನಸಿದಾಗ ಅಲ್ಲೊಂದು ಪ್ರಖರವಾದಂತಹ ವ್ಯಂಗ್ಯ, ಟೀಕೆ, ವಿಮರ್ಶೆ ಎದ್ದು ಕಾಣುತ್ತದೆ. ಶಹರುಗಳು ಕನಸುಗಳನ್ನು ಹುಟ್ಟುಹಾಕಿದರೂ ಮನುಷ್ಯರಲ್ಲಿ ಬೇಗನೆ ಆ ಕನಸುಗಳು ಭ್ರಮನಿರಸನವಾಗುವಂತೆ ಅದೇ ಶಹರುಗಳು ಮಾಡುವುದು ವ್ಯಂಗ್ಯವೇ ಸರಿ. ಶಹರುಗಳು ಮನುಷ್ಯರ ಟ್ರಾಂಕ್ಯುಲ್ ಆದಂತಹ ಬದುಕನ್ನು ಕದಡಿ, ಮನುಷ್ಯರನ್ನು ಯಾಂತ್ರಿಕವಾಗಿಸಿ, ವೇಗೋನ್ಮತ್ತರನ್ನಾಗಿಸುತ್ತವೆ.

ಯಾವ ಶಹರು, ಯಾವ ಬೆಳಕು ಎಂದು ಕವಿ ಹೇಳುವುದರಲ್ಲೇ ಇದು ಯಾವ ಸೀಮೆ ಶಹರು, ಇದು ಯಾವ ಸೀಮೆ ಬೆಳಕು, ಇದು ತರವಲ್ಲ ತೊಲಗಾಚೆ ಎನ್ನುವ ಧ್ವನಿಯನ್ನು ಸೂಚಿಸುತ್ತದೆ. ಮತ್ರ್ಯದ ಬದುಕನ್ನು ತುಂಬಿಕೊಂಡಿರುವ ಈ ಸಂಕಲನದ ಕೆಲವು ಕವಿತೆಗಳು ಹೆಚ್ಚು ಮಾತಾಡಿದರೂ ಸದ್ಯದ ಉರಿಯಲ್ಲಿ ಬೆಳಗುತ್ತವೆ. ಲಕ್ಷೀಶ ತೋಳ್ಪಾಡಿಯವರು ವಿಕ್ರಮ್ ಹತ್ವಾರ್ ಅವರ ಮೆಟ್ರೋ ಜೆನ್ ಕವಿತೆಗಳ ಬಗ್ಗೆ ಮಾತಾಡುತ್ತ ಆ ಮಾತು ಬೇರೆ ಎನ್ನುತ್ತೇವಲ್ಲ, ಆ ಥರದ ಕವಿತೆಗಳು ಇವು ಎಂದು ಹೇಳುತ್ತಾರೆ. ಅದೇ ಥರ ಶಿವಪ್ರಕಾಶರ ಕವಿತೆಗಳೂ ಸಹ. ಎಲ್ಲರ ಬದುಕನ್ನು ಎಲ್ಲರಂತಲ್ಲದೆ, ತನ್ನದೇ ಧಾಟಿಯಲ್ಲಿ ತೋರಿಸಿದ್ದಾರೆ. ಇವರ ಕವಿತೆಗಳಾಡುವ ಮಾತು ಬೇರೆಯೇ ಆಗಿವೆ.

ಈ ಕವಿತೆಗಳು ಕವಿದಿರುವ ಕತ್ತಲನ್ನು ತಮ್ಮ ಬೆಳಕಿನಲ್ಲಿ ಓಡಿಸುತ್ತವೆ. ಅವು ಕೊಡುವ ಸುಖ ಅರಿವಿನ ಬೆಳಕು. ಅಲ್ಲಮನ ಸಾಲುಗಳಿಂದ ನನ್ನ ಮಾತುಗಳನ್ನು ಮುಗಿಸುತ್ತೇನೆ: ಸುಖಬಲ್ಲವನಿಗೆ ಸುಖವಿಲ್ಲ; ದುಃಖಬಲ್ಲವನಿಗೆ ದುಃಖವಿಲ್ಲ. ಈ ಅನುಭವವನ್ನೇ ಈ ಸಂಕಲನದ ಕವಿತೆಗಳು ಕೊಡುವುದು.

‍ಲೇಖಕರು Avadhi

March 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: