ಖಾಲಿ ಫ್ರೇಮಿನಲ್ಲಿ ಕಂಡ ಬಣ್ಣ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಆ ಮನೆಯೊಳಗೆ ಕಾಲಿಟ್ಟಾಗ ನನ್ನನ್ನು ಸ್ವಾಗತಿಸಿದ್ದು ಒಂದು ಫೋಟೋ ಫ್ರೇಮ್. ಹೌದು, ಫ್ರೇಮ್ ಅಂದರೆ ಅದು ಫ್ರೇಮ್ ಮಾತ್ರ. ಅದರೊಳಗೆ ಯಾವುದೇ ಛಾಯಾಚಿತ್ರವಿರಲಿಲ್ಲ. ಖಾಲಿ ಫ್ರೇಮಿನೊಳಗೆ ಯಾವುದೇ ಚಿತ್ರವಿಲ್ಲದ ಅದನ್ನು ನೋಡಿದಾಗ ಒಂದು ಕ್ಷಣ ದಂಗಾದೆ. ಹಾರ ಏನಾದರೂ ಹಾಕಿದ್ದಾರಾ? ಎಂಬುದನ್ನು ಖಚಿತಪಡಿಸಿಕೊಂಡೆ. ಇರಲಿಲ್ಲ. ಅಂದರೆ ಇದು ಯಾರೋ ಸತ್ತ ವ್ಯಕ್ತಿಯ ಫೋಟೋ ಫ್ರೇಮ್ ಅಂತೂ ಅಲ್ಲವೆಂಬುದು ತಿಳಿಯಿತು. 

ನಾನು ಚಿತ್ರಕಾರನಾಗಬೇಕೆಂದು ಹೊರಟಾಗ ಸಾಕಷ್ಟು ಜನ ಅವರ ಬಳಿ ತರಬೇತಿ ಪಡೆದುಕೊಳ್ಳಲು ಸೂಚಿಸಿದ್ದರು. ಅಂಥ ಪ್ರಸಿದ್ಧ ಮತ್ತು ಅದ್ಭುತ ಚಿತ್ರಕಾರ್ತಿ ಆಕೆ. ಹೇಗೋ ಅವರ ಸಂಪರ್ಕ ಸಂಖ್ಯೆ ಪಡೆದು ಮೊದಲೇ ಭೇಟಿಯ ಸಮಯ ನಿಗದಿ ಮಾಡಿಕೊಂಡು ಹೋಗಿದ್ದೆ. ಮನೆಯ ಬೆಲ್ ಮಾಡಿದಾಕ್ಷಣ ಬಾಗಿಲು ತೆಗೆದು ‘ಎರಡು ನಿಮಿಷ. ಬಂದು ಬಿಡುತ್ತೇನೆ’ ಎಂದು ಒಳಗಿನಿಂದಲೇ ಹೇಳಿದ್ದರು. ಆಗಲೇ ನನಗೆ ಈ ಖಾಲಿ ಫೋಟೋ ಫ್ರೇಮ್ ಕಣ್ಣಿಗೆ ಬಿದ್ದದ್ದು. ಮೊದಲೇ ನಾನು ಕಥೆಗಾರ. ಇದರಲ್ಲಿ ಏನಾದರೂ ಕಥೆ ಸಿಗಬಹುದೆ ಎಂದು ನನ್ನ ಕಲ್ಪನೆಗಳಿಗೆ ರೆಕ್ಕೆ ಕಟ್ಟುತ್ತಿದ್ದೆ. ಅಷ್ಟರಲ್ಲಿ ಆಕೆ ಓಳಗಿನಿಂದ ಬಂದು ‘ನಮಸ್ತೆ. ನಿಮಗೆ ಈ ವಯಸ್ಸಲ್ಲಿ ಚಿತ್ರಕಲೆಯ ಮೇಲೇಕೆ ಆಸಕ್ತಿ ಹುಟ್ಟಿತು?’ ಎಂದರು. 

‘ನನಗೀಗ ನಲವತ್ತೆರೆಡು ವರ್ಷ. ನನ್ನ ವಯಸ್ಸಲ್ಲಿ ಚಿತ್ರಕಲೆ ಹೊಸದಾಗಿ ಕಲಿಯಬಾರದೆ? ಅಥವಾ ಆ ವಯಸ್ಸಲ್ಲಿ ಕಲಿಯುವುದು ಸಾಧ್ಯವಿಲ್ಲವೆ?’ ಎಂದು ಮೆಲುದನಿಯಲ್ಲೇ ಕೇಳಿದೆ. 
‘ಛೇ ಛೇ, ಹಾಗೇನಿಲ್ಲ. ಕಲಿಯುವುದಕ್ಕೆ ವಯಸ್ಸೇನು ಅಡ್ಡಿ ಅಲ್ಲ. ಆದರೆ ನಿಮ್ಮೊಳಗಿನ ಯಾವ ಡ್ರೈವಿಂಗ್ ಫೋರ್ಸ್ ಈಗ ಇದನ್ನು ಕಲಿಯಲು ಉತ್ತೇಜನ ನೀಡುತ್ತಿದೆ ಎಂದು ತಿಳಿದುಕೊಳ್ಳಲು ಕೇಳಿದೆ ಅಷ್ಟೆ’ ಎಂದಳಾಕೆ. 
‘ಸತ್ಯ ಹೇಳಬೇಕೆಂದರೆ, ನನ್ನೊಳಗಿನ ಧ್ವನಿ ನನಗೆ ಹೇಳುತ್ತಿರುವುದರ ವಿರುದ್ಧವೇ ನಾನು ಮಾಡಲು ಹೊರಟಿರುವುದು’ 
‘ಏನು ಹಾಗಂದರೆ? ನಿಮಗೆ ಆಸಕ್ತಿಯೇ ಇಲ್ಲದೆ ಚಿತ್ರಕಲೆ ಕಲಿಯಲು ಹೊರಟಿದ್ದೀರಾ?’ 
‘ಆಸಕ್ತಿ ಇರಲಿಲ್ಲ. ಆದರೆ ಈಗ ಆಸಕ್ತಿ ಹುಟ್ಟಿಸಿಕೊಳ್ಳಲೇಬೇಕಿದೆ’ 
‘ಇದ್ದಕ್ಕಿದಂತೆ ಹೇಗೆ ಆಸಕ್ತಿ ಹುಟ್ಟಿತು?’ 

‘ನನ್ನ ಧ್ವನಿಯ ವಿರುದ್ಧವಾಗಿ’ 
‘ವಾಟ್ ಡು ಯು ಮೀನ್?’ 
‘ನಿಮ್ಮ ಮನಸ್ಸು ಬೇಡ ಅಂದಿದ್ದನ್ನ ನೀವು ಮಾಡಲು ಹೊರಟಿದ್ದೀರ?’ 
‘ಹೌದು. ನನ್ನ ಒಳ ಧ್ವನಿ ಹೇಳ್ತಾ ಇದೆ; ನೀನು ಯಾವ ಕಾರಣಕ್ಕೂ ಚಿತ್ರಕಲೆ ಕಲಿಯಬೇಡ. ಬಣ್ಣಗಳನ್ನು ತುಂಬುವುದು ನಿನ್ನಿಂದ ಸಾಧ್ಯವಿಲ್ಲದ ಮಾತು’ ಎಂದು. 
‘ಮತ್ತೆ ನೀವ್ಯಾಕೆ ಕಲಿಯುವ ಹಠ ಹಿಡಿದಿದ್ದೀರಿ?’ 
‘ನನಗೆ ಚಿತ್ರಕಲೆ ಕಲಿಯುವ, ಬಣ್ಣಗಳನ್ನು ತುಂಬಾ ಚೆನ್ನಾಗಿ ಬಳಸಿಕೊಳ್ಳುವುದನ್ನು ಕಲಿಯುವ ಶಕ್ತಿ ಇದೆ ಎಂದೇ ನನ್ನ ಧ್ವನಿ ಹೀಗೆ ಹೇಳುತ್ತಿರುವುದು ಎಂದು ನನಗನ್ನಿಸುತ್ತೆ ಮೇಡಂ’ 
‘ಅಂದರೆ ನಮ್ಮ ಧ್ವನಿಗಳು ನಾವು ಮಾಡಬೇಕಾದ್ದನ್ನೇ ಮಾಡಲಾರಿರಿ ಎಂಬಂತೆ ಹೇಳುತ್ತವೆ ಎಂದು ಭಾವಿಸಬೇಕೆ?’ ಎಂದು ಆಸಕ್ತಿಯಿಂದ ಕೇಳಿದಳಾಕೆ.
‘ಹಾಗೆ ಖಚಿತವಾಗಿ ಹೇಳಲೂ ನನಗೆ ಸಾಧ್ಯವಿಲ್ಲ. ಯಾಕೋ ಈ ವಿಷಯದಲ್ಲಿ ಮಾತ್ರ ನನಗೆ ಹೀಗೇ ಅನ್ನಿಸುತ್ತಿದೆ. ನಾನು ಒಳ್ಳೆಯ ಚಿತ್ರಕಾರನಾಗಬಲ್ಲೆ. ಬಣ್ಣಗಳನ್ನೂ ವಿಶೇಷವಾಗಿ ಬಳಸಬಲ್ಲೆ. ಹಾಗೆ ಮಾಡಲಿ ಎಂದೇ ನನ್ನ ಒಳ ಧ್ವನಿ ಅದನ್ನು ತಡೆಯಲು ಪ್ರಯತ್ನಿಸುತ್ತಿರಬೇಕು. We should learn to quit. Yes, we should quit oursleves too.’ ಎಂದು ಗಟ್ಟಿಯಾಗಿ ಹೇಳಿಬಿಟ್ಟೆ. 

‘ನೀವು ಕಾಲ್ ಮಾಡಿದಾಗ ನಿಮ್ಮ ಪರಿಚಯ ಮಾಡಿಕೊಳ್ಳುತ್ತ ನೀವೊಬ್ಬ ಕಥೆಗಾರ ಎಂದಿದ್ದಿರಿ ಅಲ್ಲವೆ? ಮತ್ತೆ ಕಥೆಗಳನ್ನು ಬರೆಯುವುದನ್ನು ನಿಲ್ಲಿಸಿಬಿಡ್ತೀರಾ?’ ಎಂದು ಕಿಚಾಯಿಸಿದಳಾಕೆ. 
‘ಚಿತ್ರಕಲೆ ಕೂಡ ಒಂದು ಕಥೆಯಲ್ಲವೆ?’ ಎಂದೆ.
‘… ‘ಆಕೆ.
‘… ‘ನಾನು. 
‘ಆಯ್ತು. ನಿಮ್ಮಲ್ಲಿರುವ ಉತ್ಸಾಹ ನನಗೆ ಮನದಟ್ಟಾಗಿದೆ. ನೀವು ಚಿತ್ರಕಲೆಯನ್ನು ನನ್ನಿಂದ ಕಲಿತುಕೊಳ್ಳಲು ನಾನು ಒಪ್ಪಿದ್ದೇನೆ ‘ 
‘ ಥ್ಯಾಂಕ್ಸ್ ಅ ಲಾಟ್ ಮೇಡಂ. ನಾಳೆಯಿಂದಲೇ ಅಭ್ಯಾಸಕ್ಕೆ ಬರುತ್ತೇನೆ ‘ ಎಂದು ಹೇಳಿ ಹೊರಟೆ. 
ಗೋಡೆಯ ಮೇಲಿಂದ ನನ್ನನ್ನು ಸ್ವಾಗತಿಸಿದ್ದ ಖಾಲಿ ಫ್ರೇಮಿಗೆ ಮನದಲ್ಲಿ ವಂದನೆ ಹೇಳಿ ಅಲ್ಲಿಂದ ಹೊರಟೆ. 
*   *   *   * 
‘ನೀವು ಕಲಿಯುತ್ತಿರುವ ವೇಗ ಮತ್ತು ಪಡೆದುಕೊಳ್ಳುತ್ತಿರುವ ಪರಿಣಿತಿ ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ’ ಎಂದು ಆಕೆ ಹೇಳಿದಾಗ ಒಳಗೊಳಗೇ ಖುಷಿ ಪಟ್ಟೆ. 
‘ನನ್ನ ಗುರುಗಳ ಪ್ರತಿಭೆ ಅಂತದ್ದು’ ಎಂದಷ್ಟೆ ಹೇಳಿದಕ್ಕೆ ಆಕೆಯೂ ನಕ್ಕಳು. 
‘ಶಿಷ್ಯರು ಆಸಕ್ತಿವುಳ್ಳವರಾಗಿದ್ದರೆ ಸಾಕು ಗುರುವಿನ ಸಾಮಾನ್ಯ ಪ್ರತಿಭೆಯೂ ಅವರನ್ನು ಅಸಾಧಾರಣವಾಗಿ ರೂಪಿಸಬಲ್ಲದು’ ಎಂದು ವೇದಾಂತ ಉದುರಿಸಿದರು. 

ಹೀಗೆ ದಿನಗಳು ಕಳೆದು ನನ್ನ ಕೋರ್ಸ್ ಮುಗಿಯುತ್ತ ಬಂತು. ನಾನು ಬಿಡಿಸಿದ ಚಿತ್ರಗಳಿಗೆಲ್ಲ ಶಹಬ್ಬಾಸ್ ಗಿರಿ ಕೊಡುತ್ತ, ನಾನು ತುಂಬುವ ಬಣ್ಣಗಳ ಕಾಂಬಿನೇಷನ್ ಬಗ್ಗೆ ಅಚ್ಚರಿ ವ್ಯಕ್ತ ಪಡಿಸುತ್ತಾ, ‘You will great gun one day’ ಎನ್ನುತ್ತಿದ್ದಳಾಕೆ. 
‘ನಾನು ಯಾವುದೇ ಸ್ಪರ್ಧೆಗಾಗಿ ಇದನ್ನು ಕಲಿತಿಲ್ಲ. ಕೇವಲ ನನ್ನ ಒಳ ಧ್ವನಿಯ ಪ್ರತಿಭಟನೆಗಾಗಿ ಕಲಿತೆ’ ಎನ್ನುತ್ತಿದ್ದೆ ನಾನು. 
‘ಅದೇನೇ ಇರಲಿ. ನೀವು ಬಣ್ಣಗಳನ್ನು ಬಹಳ ಚೆನ್ನಾಗಿ ಆಯ್ಕೆ ಮಾಡುತ್ತೀರಿ.’ ಎಂದಳಾಕೆ. 
‘ನಾವು ಆಯ್ಕೆ ಮಾಡಿದ ಬಣ್ಣಗಳು ಇತರರಿಗೂ ಪ್ರಿಯವಾಗುವುದು ಅಪರೂಪ’ ಎಂದೆ. 
‘ಬಣ್ಣಗಳ ಅರ್ಥ ತಿಳಿದವರಿಗೆ ಮಾತ್ರ ಅದು ಇಷ್ಟವಾಗುತ್ತದೆ ಬಿಡಿ. ಉಳಿದವರಿಗೆ ಎಲ್ಲ ಬಣ್ಣವೂ ಬಿಳಿ ಬಣ್ಣ ಮಾತ್ರ ಆಗಿರುತ್ತದೆ’ 
‘ಸರಿ ಮೇಡಂ. ನಾಳೆ ನನ್ನ ಕೋರ್ಸಿನ ಕೊನೆಯ ದಿನ. ನಿಮಗೆ ಕೊಡಬೇಕಾದ ಉಳಿದ ಕೋರ್ಸ್ ಫೀ ಯನ್ನು ನಾಳೆ ಕೊಡುತ್ತೇನೆ.’ 
‘ಆಗಲಿ. ಕೋರ್ಸ್ ಫೀ ನ ಜೊತೆಗೆ ಮತ್ತೇನಾದರೂ ಕೇಳಿದರೆ ಸಿಗಬಹುದೆ?’ ಎಂಬ ವಿಚಿತ್ರ ಪ್ರಶ್ನೆ ಆಕೆಯಿಂದ ಬಂತು. 
‘ … ‘ ನಾನು.
‘ಡೋಂಟ್ ವರಿ. ಚಿತ್ರಕಲೆಯನ್ನು ನಾನು ನಿಮಗೆ ಕಲಿಸಿದೆ ತಾನೆ? ನೀವೊಬ್ಬ ಕಥೆಗಾರರಲ್ಲವೆ? ಅಂದಮೇಲೆ ಕೊನೆಯ ದಿನ ನನಗೊಂದು ಕಥೆ ಹೇಳಬಹುದೆ ನೀವು?’ 
‘ಅಯ್ಯೋ, ಅಷ್ಟೆ ತಾನೆ? ಇತ್ತೀಚಿಗೆ ನಾನು ಯಾವ ಕಥೆಯನ್ನೂ ಬರೆದಿಲ್ಲ. ಆದರೆ ನಾಳೆ ಗುರುವಿಗಾಗಿ ಬರೆದು ತರುತ್ತೇನೆ ‘ ಎಂದು ಹೊರಟೆ. 
*    *    * 
ಕೋರ್ಸಿನ ಅವಧಿಯಲ್ಲಿ ನಾನು ಬಿಡಿಸಿದ ಒಳ್ಳೆಯ, ಕೆಟ್ಟ ಚಿತ್ರಗಳೆಲ್ಲವನ್ನೂ ನನ್ನ ಮುಂದಿಟ್ಟು;
‘ಇವನ್ನೆಲ್ಲ ತೆಗೆದುಕೊಂಡು ಹೋಗಿ. ನಿಮ್ಮ ಕಲಿಕೆಯ ಹಾದಿ ಸದಾ ನೆನಪಲ್ಲಿರಲಿ’ 
‘ನಿಮ್ಮಿಂದ ತುಂಬಾ ಸಹಾಯವಾಯಿತು. ಧನ್ಯವಾದ. ನನಗೆ ಈ ಕಲೆಯನ್ನು ಈ ವಯಸ್ಸಿನಲ್ಲಿ ಕಲಿಸಿಕೊಟ್ಟಿದ್ದಕ್ಕೆ’ 
‘ನೀವೇ ಹುಡುಕಿಕೊಂಡು ಬಂದು ಕಲಿತಿರಿ’ 
‘ಹೌದು. ನಿಮಗೆ ಅಭ್ಯಂತರವಿಲ್ಲದಿದ್ದರೆ ನಾನು ನಿಮಗೆ ಒಂದು ಗಿಫ್ಟ್ ಕೊಡಬಹುದೆ ‘ 
‘ಗಿಫ್ಟ್ ಎಲ್ಲ ಏನೂ ಬೇಡ. ನಾನು ಕೇಳಿದ ಹಾಗೆ ಒಂದು ಕಥೆ ಹೇಳಿ ಸಾಕು’ 
‘ನಾನು ತಂದಿರುವ ಗಿಫ್ಟ್ ಆ ಕಥೆಯ ಭಾಗವಾಗವೇ ಆಗಿದೆ’ 
‘ಪರವಾಗಿಲ್ಲ. ನನಗೆ ಗಿಫ್ಟ್ ನ ಬಗ್ಗೆ ಆಸಕ್ತಿಯಿಲ್ಲ. ಮೊದಲು ನೀವು ಕಥೆ ಹೇಳಿ’ 
ಚಿತ್ರಕಲೆಯೊಂದರಲ್ಲಿ ಶ್ರೇಷ್ಠ ಪರಿಣಿತಿ ಹೊಂದಿರುವವರು ಕಥೆ ಕೇಳಲು ಹೀಗೆ ಉತ್ಸುಕರಾಗಿದ್ದನ್ನು ನೋಡಿ ನನಗೂ ಖುಷಿಯಾಯಿತು‌. ಕಥೆ ಹೇಳಲು ಶುರು ಮಾಡಿದೆ. 
*     *   * 
‘ಇಬ್ಬರು ಚಿತ್ರಕಾರರು ಚಿತ್ರಕಲಾ ಸ್ಪರ್ಧೆಯೊಂದರಲ್ಲಿ ಅಕಸ್ಮಾತಾಗಿ ಭೇಟಿಯಾದರು. ಸ್ಪರ್ಧೆಗೆ ಇಬ್ಬರೂ ಬಿಡಿಸಿದ್ದ ಚಿತ್ರಗಳನ್ನು ಪರಸ್ಪರರಿಬ್ಬರೂ ಬಹಳವಾಗಿ ಮೆಚ್ಚಿಕೊಂಡರು. ಫಲಿತಾಂಶ ಘೋಷಣೆಯಾದಾಗ ಇಬ್ಬರಿಗೂ ಒಂದು ವಿಶೇಷ ಸುದ್ದಿಯಿತ್ತು. ಅವನಿಗೂ, ಅವಳಿಗೂ ಇಬ್ಬರಿಗೂ ಪ್ರಥಮ ಬಹುಮಾನ ಕೊಡಲು ತೀರ್ಮಾನ ಮಾಡಿದ್ದರು.

ಎರಡೂ ಚಿತ್ರಗಳು ತೀರ್ಪುಗಾರರಿಬ್ಬರಿಗೂ ಸಮಾನವಾಗಿ ಕಂಡ ಕಾರಣ ಇಬ್ಬರಿಗೂ ಪ್ರಥಮ ಬಹುಮಾನ ನೀಡಲಾಗಿತ್ತು. Birds of a feather flock together ಎನ್ನುವಂತೆ, ಇಬ್ಬರೂ ಚಿತ್ರಗಳಿಗೆ ಬಣ್ಣಗಳನ್ನು ತುಂಬುವುದರಲ್ಲಿ ವಿಶೇಷವಾಗಿದ್ದರು. ಚಿತ್ರಗಳನ್ನು, ಬಣ್ಣಗಳನ್ನು ಇಬ್ಬರೂ ಪ್ರೀತಿಸುತ್ತಲೇ ಚಿತ್ರಕಾರರೂ ಪ್ರೀತಿಸತೊಡಗಿದರು. ಒಂದೇ ಅಭಿರುಚಿ, ಒಂದೇ ಆಸಕ್ತಿ, ಒಂದೇ ವೃತ್ತಿಯಾದ್ದರಿಂದ ಎಲ್ಲವೂ ಸುಗುಮವಾಗಿ ನೆರವೇರಿತು. ಇಬ್ಬರೂ ಮದುವೆಯಾದರು. ಇಡೀ ಕಲ್ಯಾಣ ಮಂಟಪವನ್ನು ಇವರಿಬ್ಬರು ಬಿಡಿಸಿದ ಬಣ್ಣ ಬಣ್ಣದ ಚಿತ್ರಗಳಿಂದ ಅಲಂಕರಿಸಲಾಗಿತ್ತು. 

ಮದುವೆಗೆ ಬಂದವರೆಲ್ಲ ‘ಎಂಥಾ ಜೋಡಿ. ಎಷ್ಟು ಕಲರ್ ಫುಲ್ ಆಗಿದೆ. ಹೀಗೆಯೇ ಇವರ ಜೀವನವೂ ಕಲರ್ ಫುಲ್ ಆಗಿರಲಿ’ ಎಂದು ಹಾರೈಸಿ ಹೋದರು. ಅವರಿಬ್ಬರೂ ಆ ನಂತರ ಜಂಟಿಯಾಗಿ ಎಷ್ಟೋ ಅದ್ಭುತ ಪೇಂಟಿಂಗ್ ಗಳನ್ನು ಮಾಡಿದರು. ಚಿತ್ರಗಳಿಗೆ ಬಣ್ಣಗಳನ್ನು ತುಂಬುವುದರಲ್ಲಿ ಇಬ್ಬರೂ ಅಪ್ರತಿಮರಾಗಿದ್ದರು. ( ಮುಂದಿನ ವಾಕ್ಯ ಹೇಳುವ ಮುನ್ನ ಆಕೆಯನ್ನೊಮ್ಮೆ ನೋಡಿದೆ. ಆಕೆಯ ಕಣ್ಣುಗಳಲ್ಲಿ ಎಲ್ಲಾ ಬಣ್ಣಗಳು ಕಾಣುತ್ತಿದ್ದವು ) ಆದರೆ ಇದ್ದಕ್ಕಿಂದಂತೆ ಅವನಿಗೆ ಕಣ್ಣಗಳು ಹೋದವು. ಅವನು ಬಣ್ಣಗಳನ್ನು ಗುರುತಿಸದಾದ.

ಆಕೆ ವಿಪರೀತ ಸಂಕಟಪಟ್ಟುಕೊಂಡಳು. ತನ್ನವನು ಇನ್ನು ಬಣ್ಣಗಳನ್ನು ನೋಡಲಾರ. ಚಿತ್ರಗಳಿಗೆ ಬಣ್ಣ ತುಂಬಲಾರ ಎಂದು ನೆನೆದು ದುಃಖಿಸಿದಳು. ಮೇಲ್ನೋಟಕ್ಕೆ ಅವನಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದರೂ ಒಳಗೆ ಅನೂಹ್ಯ ಸಂಕಟಪಟ್ಟಳು. ಆತನಿಗೆ ದೃಷ್ಟಿಯಿಲ್ಲವೆಂಬುದು ಅರಿವಾಗಬಾರದೆಂದು ಸದಾ ಅವನೊಂದಿಗಿದ್ದು ಎಲ್ಲವನ್ನೂ ವಿವರಿಸುತ್ತಿದ್ದಳು. ಚಿತ್ರಗಳಿಗೆ ಬಣ್ಣ ತುಂಬುವಾಗ ಅವನನ್ನೇ ಕೇಳುತ್ತಿದ್ದಳು. 

ಆದರೆ ಒಂದು ದಿನ ಬೆಳಗ್ಗೆ ಅವನು ಮನೆಯಿಂದ ಕಾಣೆಯಾಗಿದ್ದ. ಬಣ್ಣಗಳನ್ನು ಕಾಣದೆ ಇಲ್ಲಿರುವುದು ಅವನಿಗೆ ಸಾಧ್ಯವೇ ಆಗಲಿಲ್ಲ ಅನ್ನಿಸುತ್ತದೆ. ಎಲ್ಲಿ ಹೋದ ಎಂಬ ಗುರುತು ಕೂಡ ಸಿಕ್ಕಲಿಲ್ಲ. ಇವಳು ತಿಂಗಳಾನುಗಟ್ಟಲೆ ಅವನನ್ನು ಹುಡುಕಿದಳು. ಪ್ರೈವೇಟ್ ಏಜೆನ್ಸಿಗಳ ಮೂಲಕವೂ ಹುಡುಕಿಸಿದಳು. ಆದರೆ ಅವನು ಪತ್ತೆಯಾಗಲಿಲ್ಲ. 

ಮನೆಯಲ್ಲಿದ್ದ ಬಣ್ಣಬಣ್ಣದ ಎಲ್ಲಾ ಪೇಂಟಿಂಗ್ ಗಳನ್ನು ತೆಗೆದು ಹಾಕಿದಳು. ಗೋಡೆಯ ಮೇಲೊಂದು ಯಾವುದೇ ಚಿತ್ರವಿಲ್ಲದ ಕೇವಲ ಖಾಲಿ ಫ್ರೇಮ್ ಒಂದನ್ನು ನೇತು ಹಾಕಿದಳು. ಏಕೆ ಹಾಗೆ ಮಾಡಿದ್ದೀಯಾ ಎಂದು ಯಾರಾದರೂ ಕೇಳಿದರೆ ಆಕೆ ಹೀಗೆ ಹೇಳುತ್ತಿದ್ದಳು: 

‘ಅವನ ಹಾಜರಿಯಿಲ್ಲವೆಂದು ಅವಳು ಪರಿತಪಿಸುವುದೇ ಇಲ್ಲ ಗೊತ್ತು ಅವಳಿಗೆ, ಅವನು ಗೈರಿನಲ್ಲೇ ಹೆಚ್ಚು ಹಾಜರಿರುತ್ತಾನೆಂದು’ ಈಗಲೂ ಆ ಮನೆಯಲ್ಲಿ ಆ ಖಾಲಿ ಫ್ರೇಮ್ ಹಾಗೆಯೇ ಇದೆ… 
*     *    * 


ನಾನು ಕಥೆ ಹೇಳಿ ಮುಗಿಸಿದೆ. 
ಆಕೆ ಮನಸಾರೆ ನಗುತ್ತಿದ್ದಳು. ಒಳಗೊಳಗೇ ಅಳುತ್ತಿದ್ದಳೋ ಏನೋ! 
ಕಥೆಯ ಬಗ್ಗೆ ಆಕೆ ಒಂದು ಮಾತನ್ನೂ ಹೇಳಲಿಲ್ಲ. ನಾನೂ ಯಾವುದೇ ಪ್ರತಿಕ್ರಿಯೆ ಬಯಸಲಿಲ್ಲ. 
‘ನಾನು ಕಥೆ ಹೇಳಿದ್ದೇನೆ. ನೀವು ನಾನು ಕೊಡುವ ಗಿಫ್ಟ್ ನ್ನು ಸ್ವೀಕರಿಸಲೇಬೇಕು’ ಎಂದೆ. 
‘ಆಗಲಿ. ಕೊಡಿ’ 
ಗಿಫ್ಟ್ ಕವರ್ ಕೈಯಲ್ಲಿ ಹಿಡಿದು ‘ಏನು ಇದು?’ ಎಂದು ಕೇಳಿದಳು. 
‘ಒಂದು ಕಥೆ’ ಎಂದೆ. 
‘ನಾನು ಇದನ್ನು ನಿಮ್ಮೆದುರಲ್ಲೇ ಒಡೆದು ನೋಡಲು ಇಚ್ಛಿಸುತ್ತೇನೆ’ 
‘ನನಗೇನೂ ಅಭ್ಯಂತರವಿಲ್ಲ’ 
ಸರಿಯಾಗಿ ಗೋಡೆಯ ಮೇಲಿದ್ದ ಗಾತ್ರದ ಫ್ರೇಮು. ಆ ಫ್ರೇಮಿನೊಳಗೆ ತಿಳಿ ನೀಲಿ ಬಣ್ಣದಲ್ಲಿ ಈ ಕೆಳಗಿನ ಅಕ್ಣರಗಳು ಅವಳ ಕಣ್ಣಿಗೆ ಬಿದ್ದವು : 
‘ಅವನ ಹಾಜರಿಯಿಲ್ಲವೆಂದು ಅವಳು ಪರಿತಪಿಸುವುದೇ ಇಲ್ಲ ಗೊತ್ತು ಅವಳಿಗೆ, ಅವನು ಗೈರಿನಲ್ಲೇ ಹೆಚ್ಚು ಹಾಜರಿರುತ್ತಾನೆಂದು’ 
ನನಗದನ್ನು ಆಕೆ ತೋರಿಸಲಿಲ್ಲ. ನಾನು ಗುರುಮನೆಯಿಂದ ಕೊನೆಯ ಬಾರಿ ಹೊರಟೆ. ಬಾಗಿಲ ಬಳಿಯಿದ್ದವನನ್ನು ಮನೆಯ ಅಜ್ಞಾತ ಜಾಗದಲ್ಲಿದ್ದುಕೊಂಡೇ ಕೇಳಿದಳು; 

‘ನೀವು ನನ್ನ ಬಳಿ ಬಂದದ್ದು ನಿಜಕ್ಕೂ ಯಾವ ಕಾರಣಕ್ಕೆ?’ 
ತಕ್ಷಣಕ್ಕೆ ಏನೂ ಉತ್ತರಿಸದ ನಾನು, ಮತ್ತೆ ಮನೆಯ ಒಳ ಬಂದು ಗೋಡೆಯ ಮೇಲಿದ್ದ ಆ ಖಾಲಿ ಫ್ರೇಮನ್ನು ನೋಡುತ್ತಾ ಹೇಳಿದೆ; 
‘ಈ ಖಾಲಿ ಫ್ರೇಮಿನ ಜಾಗದಲ್ಲಿರಬೇಕಾದ ಚಿತ್ರವನ್ನು ನಿಮಗೆ ನೆನಪಿಸಲಿಕ್ಕೆ’ 
ಅವಳು ಬಿಕ್ಕುತ್ತಿರುವ ಶಬ್ಧ ಕೇಳಿಸಿತು. 
ಜೋರಾಗಿ ಎಕ್ಸಲರೇಟರ್ ಕೊಟ್ಟು ಆ ಶಬ್ಧವನ್ನು ಕ್ಷೀಣಿಸುತ್ತಾ ಹೊರಟು ಬಂದೆ. 
*     *     * 
ಆ ಮನೆಯ ಗೋಡೆಯ ಮೇಲಿನ ಖಾಲಿ ಫ್ರೇಮಿನ ಜಾಗಕ್ಕೆ ನಾನು ಕೊಟ್ಟ ಉಡುಗೊರೆ ಬಂದಿರಬಹುದೆ? ಎಂದು ನಾನು ಆಗಾಗ ಯೋಚಿಸುತ್ತಿರುತ್ತೇನೆ. ಆದರೆ ಪರಿಶೀಲಿಸಲು ಹೋಗುವುದಿಲ್ಲ …

March 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: