ವಿಧಾನ ಸೌಧದಲ್ಲಿ ಮಕ್ಕಳಿದ್ದಾರೆ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

‘ವಿಧಾನಪರಿಷತ್ತಿನ ಮುಂದಿನ ಅಧಿವೇಶನದಲ್ಲಿ ‘ಮಕ್ಕಳ ಹಕ್ಕು’ಗಳನ್ನು ಕುರಿತು ವಿಶೇಷವಾದ ಚರ್ಚೆಯನ್ನು ಏರ್ಪಡಿಸಲಾಗುತ್ತಿದೆ. ಇಂತಹದೊಂದು ವಿಶೇಷವಾದ ಸಮಯವನ್ನು ವಿಧಾನಮಂಡಲದಲ್ಲಿ ಮಕ್ಕಳ ವಿಚಾರಗಳಿಗಾಗಿ ಮೀಸಲಿಡುತ್ತಿರುವುದು ಇದೇ ಪ್ರಥಮ. ಬಹುಶಃ ದೇಶದಲ್ಲೇ ಪ್ರಥಮ ಇರಬಹುದು. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ೨೫ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಇಂತಹದೊಂದು ಚರ್ಚೆ ನಡೆಸುತ್ತಿರುವುದು ಚಾರಿತ್ರಿಕ. ಈ ಸಭೆಯಲ್ಲಿ ಮಕ್ಕಳನ್ನು ಕುರಿತು ವಿಶೇಷವಾದ ಆಸಕ್ತಿ, ಗಮನ, ಪ್ರೀತಿ ಇರುವಂತಹ ವಿಧಾನಪರಿಷತ್ತಿನ ಎಲ್ಲ ಸದಸ್ಯರು ಪಾಲ್ಗೊಳ್ಳುತ್ತಾರೆ ಎಂದು ನಾನು ಆಶಿಸುತ್ತೇನೆ.’ ವಿಧಾನ ಪರಿಷತ್ತಿನ ಅಂದಿನ ಅಧ್ಯಕ್ಷರಾಗಿದ್ದ ಡಿ.ಎಚ್‌. ಶಂಕರಮೂರ್ತಿಯವರು ಮಾಧ್ಯಮ ಗೋಷ್ಟಿಯಲ್ಲಿ ಹೇಳಿದರು (ಜುಲೈ ಮೊದಲ ವಾರ ೨೦೧೪).

ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು ಪಕ್ಷ ಭೇದ ಪಕ್ಕಕ್ಕಿಟ್ಟು ಜುಲೈ ೧೦, ೧೧, ೧೪ ಮತ್ತು ೧೭ರಂದು ನಾಲ್ಕು ದಿನಗಳ ಕಾಲ ರಾಜ್ಯದ ಮಕ್ಕಳ ಪರಿಸ್ಥಿತಿ ಕುರಿತು ಚರ್ಚೆ ಮಾಡಿದರು ಮತ್ತು ಮುಂದಿನ ದಿನಗಳ ಗತಿಯನ್ನು ಕುರಿತು ಸಲಹೆಗಳನ್ನು ನೀಡಿದರು.  

ಡಿ.ಎಚ್.ಶಂಕರಮೂರ್ತಿಯವರು ಹೇಳಿದಂತೆ ಚರ್ಚೆಯಲ್ಲಿ ಭಾಗವಹಿಸಲು ಸದಸ್ಯರು ನಾಮುಂದು ತಾಮುಂದು ಎಂದು ಹೆಸರುಗಳನ್ನು ನೀಡಿದ್ದರು. ಇದ್ದ ಕಾಲಮಿತಿಯಲ್ಲಿ ೨೩ ಸದಸ್ಯರು ಮಕ್ಕಳಿಗೆ ಸಂಬಂಧಿಸಿದ ೩೦ ವಿವಿಧ ವಿಚಾರಗಳನ್ನು ಹಾಗೂ ಅವುಗಳಿಗೆ ಸಂಬಂಧಿಸಿದ ವೈವಿಧ್ಯಮಯವಾದ ಆಯಾಮಗಳನ್ನು ತೆರೆದಿಟ್ಟರು.

ಒಂದಷ್ಟು ಸದಸ್ಯರು ಸ್ವಾನುಭವದಿಂದ ವಿಚಾರ ಹೇಳಿದರೆ, ಸಾಕಷ್ಟು ಸದಸ್ಯರು ಪ್ರಕರಣಾಧ್ಯಯನಗಳು ಮತ್ತು ಅಂಕಿಸಂಖ್ಯೆಗಳನ್ನು ಎದುರಿಟ್ಟು, ಆಗಬೇಕಾದ ಕೆಲಸಗಳನ್ನು ನಡೆಸಿಕೊಡಲು ಸರ್ಕಾರವನ್ನು ಒತ್ತಾಯಿಸಿದರು. ಸಭೆ ಎಲ್ಲ ದಿನಗಳೂ ಸಂಜೆ ಎಂಟು ಗಂಟೆಯವರೆಗೂ ನಡೆಯಿತು. ಸದಸ್ಯರ ಉತ್ಸಾಹವನ್ನು ಗಮನಿಸಿದ ಡಿ.ಎಚ್.‌ ಶಂಕರಮೂರ್ತಿಯವರು ಸಮಯ ಮುಗಿಯುತ್ತಿದೆ ಎಲ್ಲರಿಗೂ ಅವಕಾಶ ಕೊಡಲಾಗುತ್ತಿಲ್ಲವೆಂದು ವಿಷಾದಿಸಿದ್ದರು. 

ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿದ್ದ ಆರ್.ವಿ. ವೆಂಕಟೇಶ್‌  ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದ ಕ್ಯಾಪ್ಟನ್‌ ಗಣೇಶ ಕಾರ್ಣಿಕ್‌ ಮಕ್ಕಳ ವಿಚಾರದ ಬಗ್ಗೆ ವಿಶೇಷ ಆಸಕ್ತಿ ವಹಿಸಿ ತಮ್ಮ ತಮ್ಮ ಪಕ್ಷದ ಸದಸ್ಯರನ್ನು ಈ ಮುಖ್ಯ ಸಭೆಯಲ್ಲಿ ಭಾಗವಹಿಸಲು, ಮಾತನಾಡಲು ಪ್ರೋತ್ಸಾಹಿಸಿದ್ದರು. 

ಈ ವಿಶೇಷ ಅಧಿವೇಶನಕ್ಕೆ ಮೊದಲು ಜುಲೈ ೯ರಂದು ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ’ ಮತ್ತು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಯುನಿಸೆಫ್‌ ಮತ್ತು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಜಂಟಿಯಾಗಿ ವಿಧಾನ ಸೌಧದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ೧೫ ಶಾಸಕರು ಭಾಗವಹಿಸಿದ್ದರು. ರಾಜ್ಯದಲ್ಲಿ ಮಕ್ಕಳ ಪರಿಸ್ಥಿತಿ ಹೇಗಿದೆ, ಏನಾಗಬೇಕಿದೆ ಎಂದು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದ ವಿಚಾರಗಳನ್ನು ಅಂಕಿ ಅಂಶಗಳೊಡನೆ ನಾವು ಸಿದ್ಧ ಮಾಡಿದ್ದ ವಿಚಾರಗಳನ್ನು ಮಂಡಿಸಿದೆವು.

ಡಾ. ಪದ್ಮಿನಿ, ಡಾ. ಶ್ರೀಲಕ್ಷ್ಮೀ ಗುರುರಾಜ, ಯುನಿಸೆಫ್‌ನ ಸೋನಿ ಕುಟ್ಟಿ ಜಾರ್ಜ್‌ ಮತ್ತು ಪ್ರಸೂನ್‌ ಸೇನ್‌ ಮತ್ತಿತರರು ಇನ್ನಷ್ಟು ವಿವರಿಸಿದರು. ಭಾಗವಹಿಸಿದ್ದ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಬಹಳ ಆಸಕ್ತಿಯಿಂದ ಮಕ್ಕಳ ಆರೋಗ್ಯ, ಅಪೌಷ್ಟಿಕತೆ, ಹೆಣ್ಣುಮಕ್ಕಳ ಸ್ಥಿತಿಗತಿ, ಶಿಕ್ಷಣ, ಕುಡಿಯುವ ನೀರು, ಮಕ್ಕಳ ಮಾರಾಟ ಮತ್ತು ಸಾಗಣೆ, ಬಾಲಕಾರ್ಮಿಕ ಪದ್ಧತಿ ಪರಿರಿಸ್ಥಿತಿ, ಬಾಲ್ಯವಿವಾಹವೇ ಮೊದಲಾದ ವಿಚಾರಗಳ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳಿ ತಳಮಟ್ಟದ ವಾಸ್ತವಗಳಿಗೆ ಅಂಕಿಅಂಶಗಳು ಮತ್ತು ಪ್ರಕರಣಾಧ್ಯಯನಗಳನ್ನು ಜೋಡಿಸಿಕೊಂಡಿದ್ದರು.   

ನಾಲ್ಕು ದಿನಗಳು ವಿಧಾನ ಪರಿಷತ್ತಿನ ಸದಸ್ಯರು ಮಂಡಿಸಿದ ವಿಚಾರ ಮತ್ತು ಅಭಿಪ್ರಾಯಗಳನ್ನು ಗಮನವಿಟ್ಟು ಆಲಿಸಿ, ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಉಮಾಶ್ರೀಯವರು ಸುಮಾರು ಐದು ಗಂಟೆಗಳ ಕಾಲ ಸಭೆಗೆ ಉತ್ತರಿಸಿ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಹೇಳಿದರು.  ರಾಜ್ಯದ ವಿವಿಧ ಮಾಧ್ಯಮಗಳು ಈ ಬೆಳವಣಿಗೆಯನ್ನು ಪ್ರಮುಖವೆಂದು ಪರಿಗಣಿಸಿ ವರದಿಗಳನ್ನು ಪ್ರಕಟಿಸಿದರು. ಯುನಿಸೆಫ್‌ ಈ ಸಭೆಯನ್ನು ಅತ್ಯಂತ ಪ್ರಮುಖ ಬೆಳವಣಿಗೆ ಎಂದು ದಾಖಲಿಸಿ ಕರ್ನಾಟಕದ ಶಾಸಕರನ್ನು ಅಭಿನಂದಿಸಿತು. 

ವಿಧಾನ ಸೌಧದಲ್ಲಿ ಮಕ್ಕಳಿದ್ದಾರೆಯೆ…?

ಹೌದು ಇದ್ದಾರೇನು? ಅಂದರೆ ‘ವಿಧಾನ ಸೌಧದಲ್ಲಿ ಮಕ್ಕಳ ವಿಚಾರಗಳು ಚರ್ಚೆಗೆ ಬರುತ್ತಿದೆಯೇನು?’ ಈ ಪ್ರಶ್ನೆ ನನ್ನ ತಲೆಯನ್ನು ಕೊರೆಯಲಾರಂಭಿಸಿದ್ದು ೨೦೦೦ದ ಆಸುಪಾಸಿನಲ್ಲಿ. ನಾನಾಗ ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ಮುಂಚೂಣಿಯಲ್ಲಿದ್ದೆ. ಆಗಲೇ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕುರಿತು ಚರ್ಚೆ ಪ್ರಚಾರ ದೊಡ್ಡ ಪ್ರಮಾಣದಲ್ಲಿ ನಡೆದಿತ್ತು. ನಾವೊಂದಷ್ಟು ಜನ ಶಾಸಕರ ಭವನಕ್ಕೆ ಹೋಗಿ ಕೋಣೆ ಕೋಣೆ ಅಲೆದು ಇದ್ದಬದ್ದ ಶಾಸಕರನ್ನು ಭೇಟಿ ಮಾಡಿ ಶಿಕ್ಷಣ ಹಕ್ಕು ಕುರಿತು ಸಾಮಗ್ರಿಗಳನ್ನು ಕೈಗೆ ಕೊಟ್ಟು ಇದೇಕೆ ಪ್ರಾಮುಖ್ಯ, ನೀವೇಕೆ ಇದರ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿದ್ದೆವು.

ಕಂಡಕಂಡ ಕಡೆಯಲ್ಲೆಲ್ಲಾ ಶಾಸಕರುಗಳನ್ನು ನಿಲ್ಲಿಸಿಕೊಂಡು ‘ಶಿಕ್ಷಣ ಅಸ್ತ್ರದಿಂದ ಮಕ್ಕಳಿಗೆ ಸಂಬಂಧಿಸಿದ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ’ ಎಂದು ವಿವರಿಸುತ್ತಿದ್ದೆವು. ಆ ಹೊತ್ತು ಡಾ. ಸಿದ್ಧಲಿಂಗಯ್ಯ ಮತ್ತಿತ್ತರರು ಇನ್ನಷ್ಟು ವಿಚಾರಗಳು ಬೇಕು ಎಂದು ಕೂರಿಸಿಕೊಂಡು ತಿಳಿದುಕೊಂಡಿದ್ದರು.  ಶಾಸನ ಸಭೆಗಳಲ್ಲಿ ಮಾತನಾಡುವುದಾಗಿ ಭರವಸೆ ನೀಡಿದ್ದರು. ಆದರೆ ಎಷ್ಟು ಜನ ಈ ಕುರಿತು ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಮಾತನಾಡಿದರೆಂದು ಗೊತ್ತಾಗಲೇಯಿಲ್ಲ. 

ಇದು ನನ್ನನ್ನ ಕೊರೆಯುತ್ತಲೇ ಇತ್ತು. ವಿಧಾನ ಸೌಧದಲ್ಲಿ ಮಕ್ಕಳು ಇದ್ದಾರೆಯೆ, ಅರ್ಥಾತ್‌ ಮಕ್ಕಳ ವಿಚಾರಗಳು ಚರ್ಚೆಗೆ ಬರುತ್ತಿದೆಯೇ? ೨೦೦೧ರ ಹೊತ್ತಿಗೆ ವಿಧಾನಸೌಧದ ಗ್ರಂಥಾಲಯ ವಿಭಾಗ, ಅದರಲ್ಲೂ ಶಾಸನಸಭೆಗಳ ಚರ್ಚೆಗಳನ್ನು ದಾಖಲಿಸುವ ವಿಭಾಗದಲ್ಲಿ ಗೆಳೆಯರೊಬ್ಬರ ಸಹಾಯದಿಂದ ಕೆಲವು ಗಂಟೆಗಳನ್ನು ಹೂಡಲು ಪ್ರಯತ್ನಿಸಿದೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ನಡೆಯುವ ಚರ್ಚೆಗಳನ್ನು ಚಾಚೂ ತಪ್ಪದೆ ದಾಖಲಿಸಿರುವುದು ಕಂಡು ಬರುತ್ತದೆ. ಆದರೆ ಆ ಮಾಹಿತಿಯ ಕಾಡಿನಲ್ಲಿ ಮಕ್ಕಳ ವಿಚಾರಗಳು ಯಾವಾಗ ಚರ್ಚೆಗೆ ಬಂದಿತು, ಯಾವ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ, ವಿಷಯವನ್ನು ಯಾವ ಶಾಸಕರು ತೆಗೆದುಕೊಂಡು ಕೇಳಿದ್ದಾರೆ, ಯಾವ ಸಚಿವರು ಇದನ್ನು ಕುರಿತು ಏನು ಉತ್ತರ ಕೊಟ್ಟಿದ್ದಾರೆ ಗೊತ್ತಾಗಲಿಲ್ಲ.

ಎಲ್ಲ ಪ್ರಶ್ನೆಗಳನ್ನು ಅಕಾರಾದಿಯಾಗಲಿ, ವಿಷಯವಾರುವಾಗಲಿ, ಶಾಸಕರವಾರು ಆಗಲಿ ಹುಡುಕುವುದು ಸಾಧ್ಯವಾಗಲೇ ಇಲ್ಲ. ಮಕ್ಕಳ ವಿಚಾರಗಳಿರಲಿ, ನಮ್ಮ ಅಭಿವೃದ್ಧಿಗೆ ಮೂಲ ವಿಚಾರವಾದ ನೀರು, ಮಣ್ಣು, ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಹಣಕಾಸು, ಸಂಸ್ಕೃತಿ ಯಾವುದೇ ವಿಚಾರದ ಬಗ್ಗೆಯೂ ಇಂತಹ ವಿಂಗಡಣೆ ಇಲ್ಲವೇ ಇಲ್ಲ. ಎಲ್ಲ ಪ್ರಶ್ನೆಗಳು ದಿನಾಂಕ ಮತ್ತು ಪ್ರಶ್ನೆಯ ಸಂಖ್ಯೆಯನ್ನು ಮಾತ್ರ ಆಧರಿಸಿತ್ತು. 

ಕೊಂಚ ಹತಾಶನಾಗಿದ್ದೆ. ಏನಾದರೂ ಮಾಡಬೇಕಲ್ಲ, ಶಾಸಕರು ವಿಧಾನಸೌಧದಲ್ಲಿ ಮಕ್ಕಳ ವಿಚಾರಗಳನ್ನು ಕುರಿತು ಮಾತನಾಡುವಂತೆ, ಮಕ್ಕಳ ವಿಚಾರಗಳು ಏಕೆ ಪ್ರಮುಖ ಎಂದು ಶಾಸನ ಸಭೆಗಳಲ್ಲಿ ಭಾಗವಹಿಸುವವರಿಗೆ, ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ತಿಳಿಯುವಂತಾಗಬೇಕಲ್ಲ ಎಂದು ಮಾರ್ಗೋಪಾಯಗಳನ್ನು ಹುಡುಕಲು ಚಡಪಡಿಸುತ್ತಿದ್ದೆ.

ಅಷ್ಟು ಹೊತ್ತಿಗೆ ದೆಹಲಿ ಮೂಲದ ಹಕ್‌ ಸಂಸ್ಥೆಯವರು ಪ್ರಕಟಿಸುತ್ತಿದ್ದ ಲೋಕಸಭೆಯಲ್ಲಿ ನಡೆಯುವ ಕಲಾಪಗಳಲ್ಲಿ ಮಕ್ಕಳ ವಿಚಾರಗಳ ವಿಶ್ಲೇಷಣೆಯ ಪುಸ್ತಕ ಕೈಗೆ ಸಿಕ್ಕಿತು. ನಾನು ಹುಡುಕುತ್ತಿದ್ದ ವಿಚಾರಕ್ಕೊಂದು ಹೊಳಹು ಸಿಕ್ಕಿತು. ವಿಧಾನಮಂಡಲದ ಪ್ರಶ್ನೋತ್ತರ ಪುಸ್ತಕಗಳಿಂದ ನಮಗೆ ಬೇಕಾದ ವಿಚಾರಗಳನ್ನು ನಾವೇ ಪಟ್ಟಿ ಮಾಡಿಕೊಳ್ಳಬೇಕು. ಅದಕ್ಕಾಗಿ ಜನ ಬೇಕು, ಸಮಯ ಬೇಕು, ಮುಖ್ಯವಾಗಿ ಹಣ ಬೇಕು. ಇದನ್ನು ಕಾರ್ಯಗತಗೊಳಿಸಲು ಮತ್ತೆ ಮೂರು ವರ್ಷಗಳು ಕಾಯಬೇಕಾಯಿತು!

ಅಪ್ಪನಿಂದ ಕಲಿತದ್ದು

ವಿಧಾನ ಸೌಧದಲ್ಲಿ ನಮ್ಮ ವಿಚಾರ ಚರ್ಚೆಗೆ ಬಂದರೆ ಮಾತ್ರ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂಬುದನ್ನು ನನ್ನಪ್ಪ ನೆ. ವಿಶ್ವನಾಥ ಅವರ ನೇತೃತ್ವದಲ್ಲಿ ನಡೆದ ಚಳವಳಿಯನ್ನು ಹತ್ತಿರದಿಂದ ನೋಡಿ ಕಲಿತಿದ್ದುದ್ದ ಬಾಲಬೋಧೆಯೇ ಆಗಿದೆ. ೧೯೮೦ರ ತನಕ ಅಪ್ಪ ಕೆಲಸ ಮಾಡುತ್ತಿದ್ದ ಖಾದಿ ಮತ್ತು ಗ್ರಾಮೀಣಾಭಿವೃದ್ಧಿ ಮಂಡಳಿಯ ನೌಕರರು ಸರ್ಕಾರಿ ಉದ್ಯೋಗಿಗಳಾಗಿರಲಿಲ್ಲ. ಅವರಿಗೆ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಸಂಬಳ ಮತ್ತು ಸವಲತ್ತುಗಳು ಇರಲಿಲ್ಲ. ಇವನ್ನು ತಮಗೂ ಕೊಡಬೇಕೆಂದು ಆ ನೌಕರರು ಸರ್ಕಾರಕ್ಕೆ ಹಲವು ಬಾರಿ ಮಾಡಿಕೊಂಡಿದ್ದ ಅಹವಾಲುಗಳಿಗೆ ಬೆಲೆ ಸಿಕ್ಕಿರಲಿಲ್ಲ.

ಹೀಗಾಗಿ ನೌಕರರ ಸಂಘ ಅಪ್ಪನ ಮುಂದಾಳತ್ವದಲ್ಲಿ ಮುಷ್ಕರ ಮತ್ತು ವಿಧಾನಸೌಧದ ಮುಂದೆ ಸರಣಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಪ್ಪ ಹೇಳಿದ್ದ ಮಾತು ನೆನಪಿರುವಂತೆ, ಈ ವಿಚಾರ ವಿಧಾನ ಸೌಧದಲ್ಲಿ ಯಾರಾದರೂ ಕೆಲವು ಶಾಸಕರು ಮಾತನಾಡಿದರೆ ಸರ್ಕಾರದ ಕಿವಿಗೆ ಬೀಳುತ್ತದೆ, ಪರಿಹಾರ ಸಿಗುತ್ತದೆ. ಅದು ಹಾಗೇ ಆಯಿತು. ಆಗ ಗುಂಡೂರಾಯರು ಮುಖ್ಯಮಂತ್ರಿಗಳು. ಮಂಡಳಿಯ ನೌಕರರನ್ನು ಸರ್ಕಾರದ ಒಡನೆ ವಿಲೀನಗೊಳಿಸುವ ಯೋಜನೆ ಜಾರಿಯಾಯಿತು. (ಆದರೆ ಚಳವಳಿಯ ಮುಂದಾಳತ್ವ ವಹಿಸಿದ್ದ ಅಪ್ಪನನ್ನೂ  ಇತರ ಕೆಲವು ನಾಯಕರನ್ನು ಬಲವಂತ ವರ್ಗ ಮಾಡಿದರು. ಈ ದಿಸೆಯಿಂದಾಗಿ ನಮ್ಮ ಕುಟುಂಬ ಮೈಸೂರು ವಾಸಿಗಳಾದೆವು). 

ಯುನಿಸೆಫ್‌ ರಂಗ ಪ್ರವೇಶ 

೨೦೦೧-೨೦೧೦ರ ದಶಕಕ್ಕಾಗಿ ‘ಕರ್ನಾಟಕ ರಾಜ್ಯ ಮಕ್ಕಳ ಕ್ರಿಯಾ ಯೋಜನೆ’ಯನ್ನು ಹೊರಡಿಸಲು ಕರ್ನಾಟಕ ಸರ್ಕಾರ ಮತ್ತು ಯುನಿಸೆಫ್‌ ಸಮಾಲೋಚಕರನ್ನು ಹುಡುಕುತ್ತಿತ್ತು. ನಾನೂ ಅರ್ಜಿ ಸಲ್ಲಿಸಿದೆ. ಸಂದರ್ಶನ ಎದುರಿಸಿ, ನನ್ನ ಕಲ್ಪನೆಗಳು ಮತ್ತು ಸಾಧ್ಯತೆಗಳನ್ನು ವಿವರಿಸಿದೆ. ಆಯ್ಕೆಯಾದೆ. (ಕ್ರಿಯಾಯೋಜನೆ ಹೊರ ತಂದದ್ದು ಒಂದು ದೊಡ್ಡ ಕತೆ. ಮತ್ತೆ ಯಾವಾಗಲಾದರೂ ಬರೆಯುತ್ತೇನೆ.) ಕ್ರಿಯಾಯೋಜನೆ ನಿರ್ಮಾಣ ಮಾಡುವಾಗ ವಿಧಾನಸೌಧದ ಒಳಕ್ಕೆ ಹೋಗಲು ಮತ್ತು ವಿವಿಧ ಇಲಾಖೆಗಳೊಡನೆ ಅಧಿಕೃತವಾಗಿ ಮಾತನಾಡಲು, ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಲು, ನಿರ್ದಿಷ್ಟ ಇಲಾಖೆಗಳಿಂದ ನಿರ್ದಿಷ್ಟ ಮಾಹಿತಿಗಳನ್ನು ಕೊಡಿ ಎಂದು ಕೇಳಲು ಸಾಧ್ಯವಾಯಿತು. ʻವಿಧಾನ ಸೌಧದಲ್ಲಿ ಮಕ್ಕಳಿದ್ದಾರೆಯೆ…?ʼ ಎಂಬ ಪ್ರಶ್ನೆಗೆ ಹೇಗೆ ಉತ್ತರಗಳನ್ನು ಪಡೆಯಲು ಯತ್ನಿಸಬಹುದು ಎಂದು ಆ ಅನುಭವ ಇನ್ನೊಂದಷ್ಟು ಸಾಧ್ಯತೆಗಳನ್ನು ತೋರಿಸಿತು. 

ಆಗ್ಗೆ ಯುನಿಸೆಫ್‌ನ ಪ್ರತಿನಿಧಿಯಾಗಿದ್ದ ವಿಕಾಸ್‌ ವರ್ಮಾ ಅವರೊಡನೆ ಈ ಕಲ್ಪನೆಯನ್ನು ಹಂಚಿಕೊಂಡೆ. ವಿಧಾನಮಂಡಲದಲ್ಲಿ ನಡೆಯುವ ಪ್ರಶ್ನೋತ್ತರಗಳನ್ನು ಪಟ್ಟಿ ಮಾಡಿ, ಮಕ್ಕಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಯಾವ ಶಾಸಕರು ಕೇಳುತ್ತಿದ್ದಾರೆ, ಯಾವ ಪಕ್ಷದವರು ಮತ್ತು ಯಾವ ಯಾವ ವಿಚಾರಗಳನ್ನು ಕುರಿತು ಚರ್ಚೆ ನಡೆಯುತ್ತಿದೆ ಎಂಬೆಲ್ಲಾ ವಿಶ್ಲೇಷಣೆ ಮಾಡಿ ಪ್ರಕಟಿಸಿ ಅದನ್ನು ಮಕ್ಕಳ ಪರವಾದ ವಕೀಲಿಗೆ ಬಳಸುವ ಸಾಧ್ಯತೆ ಕುರಿತು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಸಂಸ್ಥೆಯ ವತಿಯಿಂದ ಯುನಿಸೆಫ್‌ಗೆ ಪ್ರಸ್ತಾವನೆ ಸಲ್ಲಿಸಿದೆವು. 

ಇಂತಹದೊಂದು ವಿಶ್ಲೇಷಣೆ ಮುಂದಿಟ್ಟುಕೊಂಡು ವಿಧಾನಸೌಧದಲ್ಲಿ ಹೆಚ್ಚಿನ ಮಟ್ಟದಲ್ಲಿ ಮಕ್ಕಳ ವಿಚಾರಗಳಿಗಾಗಿ ಸಮಯವನ್ನು ಪಡೆಯಬೇಕು ಎಂಬುದು ನನ್ನ ಕನಸಾಗಿತ್ತುದಾಗಿತ್ತು. ಅಳೆದು ಸುರಿದು ಯುನಿಸೆಫ್‌ನವರು ಒಂದಷ್ಟು ಸಲಹೆಗಳನ್ನು ನೀಡಿದ ಮೇಲೆ ವಿಧಾನಮಂಡಲದ ಉಭಯಸದನಗಳ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲಿ ವಿಧಾನ ಸೌಧಕ್ಕೆ ಲಗ್ಗೆ ಇಟ್ಟೆವು (೨೦೦೪).

ಆಗ ಎದುರಾದದ್ದು ನಾವು ಎದುರು ನೋಡದೇ ಇದ್ದಂತಹ ಹೊಸ ಸಮಸ್ಯೆ!

‘ಪ್ರಶ್ನೆಗಳು ಉತ್ತರಗಳನ್ನು ಶಾಸಕರಲ್ಲದವರಿಗೆ ಕೊಡುವುದಿಲ್ಲ. ಇದು ಕಾನ್ಫಿಡೆನ್ಷಿಯಲ್. ನಾಳೆ ಪೇಪರ್‌ನಲ್ಲಿ ಬರುತ್ತೆ ಓದಿಕೊಳ್ಳಿʼ ಪ್ರಶ್ನೋತ್ತರಗಳನ್ನು ವಿತರಿಸುವ ಕಛೇರಿಯಿಂದ ಉಡಾಫೆಯ ಪ್ರತಿಕ್ರಿಯೆ. ಯಾರಾದರೂ ಶಾಸಕರ ಕಛೇರಿಗಳಿಂದ ಪಡೆಯೋಣವೆಂದುಕೊಂಡರೆ ಆಗ್ಗೆ ಇನ್ನೂ ನಮಗೆ ಯಾವುದೇ ಶಾಸಕರೊಂದಿಗೆ ಅಷ್ಟೊಂದ ಸ್ನೇಹ ಸಂಬಂಧ ಬೆಳೆದಿರಲಿಲ್ಲ. ಆಗಿನ್ನೂ ವಿಧಾನಸೌಧದ ಕಲಾಪಗಳ ಪಟ್ಟಿ, ಪ್ರಶ್ನೆ ಮತ್ತು ಉತ್ತರಗಳಾವುವೂ ಅಂತರ್ಜಾಲದಲ್ಲಿ ಸಿಗುತ್ತಿರಲಿಲ್ಲ. ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೋತ್ತರದ ಪ್ರತಿಗಳನ್ನು ಕೊಡುವುದು ವಾಡಿಕೆ. ಪ್ರತಿ ದಿನ ಸುಮಾರು ಇನ್ನೂರು ಮುನ್ನೂರರಿಂದ ಹಿಡಿದು ಸಾವಿರಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತದೆ, ಆದರೆ ಎಲ್ಲ ಪ್ರಶ್ನೆಗಳು ಮತ್ತು ಉತ್ತರಗಳು ಪತ್ರಿಕೆಗಳಲ್ಲಿ ಪ್ರಕಟವಾಗುವುದಿಲ್ಲ. 

ನಮಗೀಗ ಪ್ರಶ್ನೆಗಳಾದರೂ ಸಿಗಬೇಕು.

ಮತ್ತೊಂದು ಸುತ್ತು ಸಮಾಲೋಚನೆಗಳು ನಮ್ಮ ಕಛೇರಿಯಲ್ಲಿ ನಡೆಯಿತು. ʻವಿಧಾನಮಂಡಲದಲ್ಲಿ ಮಂಡಿಸಲಾಗುವ ಪ್ರಶ್ನೆಗಳನ್ನು ಪಡೆಯುವುದು ಹೇಗೆ?ʼ ಹಲವಾರು ಸಲಹೆಗಳ ಸಾಧ್ಯಾಸಾಧ್ಯತೆಗಳನ್ನು ಅಳೆದು ಸುರಿದೂ ನೋಡಿದಾಗ ಕಂಡು ಬಂದದ್ದು ಮಾಧ್ಯಮ ಮಿತ್ರರನ್ನೇ ಸಂಪರ್ಕಿಸುವುದು. ನನಗೂ ನನ್ನ ಸಹೋದ್ಯೋಗಿಯಾಗಿದ್ದ ಡಿ.ಜಿ.ಸುಮತಿಯವರಿಗೆ ಮಾಧ್ಯಮಗಳಲ್ಲಿ ಸಾಕಷ್ಟು ಗೆಳೆಯರಿದ್ದರು. ಅವರನ್ನು ಸಂಪರ್ಕಿಸಿದೆವು. ʻಬಳಸಿದ ಮೇಲೆ ಆ ಕಾಗದಗಳೆಲ್ಲವೂ (ಸ್ಪೈಕ್‌ ಆಗಿ) ರದ್ದಿಯೇ. ಪ್ರಶ್ನೆಯಾದರೇನು, ಪತ್ರಿಕಾ ಹೇಳಿಕೆಯಾದರೇನು, ನೀವು ಒಯ್ಯುವುದಾದರೆ ಏನೂ ಅಭ್ಯಂತರವಿಲ್ಲʼ ಗೆಳೆಯರೆಂದರು.

ಸುಮತಿ ಮತ್ತು ನಮ್ಮ ಇನ್ನೊಬ್ಬ ಸಹೋದ್ಯೋಗಿ ಸತೀಶ್‌ ಜಿ.ಸಿ. ಪರಿಚಿತ ಪತ್ರಿಕಾಲಯಗಳಿಗೆ ಹೋಗಿ ಅವರೆಸೆದಿದ್ದ ಪ್ರಶ್ನೆಗಳಿದ್ದ ಕಾಗದಗಳನ್ನೂ ಮೂಟೆಗಳಲ್ಲಿ ತುಂಬಿಕೊಂಡು ಬಂದರು. ಅವುಗಳನ್ನೆಲ್ಲಾ ವಾರಗಟ್ಟಲೆ ಬಿಡಿಸಿಟ್ಟು, ದಿನಾಂಕವಾರು ಮತ್ತು ಕ್ರಮ ಸಂಖ್ಯೆವಾರು ಜೋಡಿಸಿಕೊಂಡೆವು. ಆಮೇಲೆ ಅವುಗಳಲ್ಲಿ ಬಿಟ್ಟುಹೋಗಿರುವುದನ್ನು ಹುಡುಕಿಕೊಂಡು ಹೋಗುವ ಆವಶ್ಯಕತೆ ಇತ್ತು.

ಫ್ರಶ್ನೆಗಳೇನೋ ಗುಡ್ಡೆ ಬಿದ್ದಿತ್ತು. ಈಗಿನ ಮುಂದಿನ ಕೆಲಸ ಅವನ್ನು ಕ್ರಮಸಂಖ್ಯೆಗಳಿಗನುಗುಣವಾಗಿ, ಇಲಾಖೆ, ವಿಷಯ, ಪ್ರಶ್ನೆ ಕೇಳಿದ ಶಾಸಕರ ಹೆಸರು, ಯಾವ ಪಕ್ಷವನ್ನು ಪ್ರತಿನಿಧಿಸುತ್ತಾರೆ, ಅವರ ಚುನಾಯಿತ ಕ್ಷೇತ್ರವೇ ಮೊದಲಾದವುಗಳನ್ನು ಪಟ್ಟಿ ಮಾಡಿಕೊಳ್ಳಲು ಹೆಣಗಾಡಿದೆವು. ಎಲ್ಲವನ್ನೂ ಹೊಸದಾಗಿ ಕಲಿಯುತ್ತಿದ್ದುದು. ಚುನಾಯಿತರ ವಿಧಾನಸಭಾ ಕ್ಷೇತ್ರಗಳು ಯಾವ ಜಿಲ್ಲೆಗೆ ಸೇರಿದೆ, ಶಾಸಕರು ಯಾವ ಪಕ್ಷದಿಂದ ಗೆದ್ದವರು (ಕಳೆದ ಬಾರಿ ಆ ಪಕ್ಷವಲ್ಲವೆ, ಇವರು ಹೋದ ಬಾರಿ ಇನ್ನೊಂದು ಕ್ಷೇತ್ರದಲ್ಲಿದ್ದರು ಎಂಬ ಪ್ರಶ್ನೆಗಳು ಬಹಳ ಬಾರಿ ಬಂದು ಹೋಯಿತು).

ಇಂತಹದೊಂದು ಪ್ರಕ್ರಿಯೆಯನ್ನು ಮೊದಲ ಬಾರಿ ಮಾಡುವಾಗ ನಾವೇ ಹೊಸತೊಂದು ವಿಧಾನವನ್ನು ಕಂಡುಕೊಳ್ಳುವಾಗ   ಅನುಮಾನಗಳು, ಸಂಭ್ರಮೆಲ್ಲವೂ ಇತ್ತು. ಬಹಳ ಭರವಸೆ ಇದ್ದ ಕೆಲವು ಸಚಿವರು ವಿಧಾನಸೌಧ ಅಥವಾ ಪರಿಷತ್ತಿನಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲವಲ್ಲ ಎನ್ನುವ ಆಶ್ಚರ್ಯ (ನಾವೇನಾದರೂ ತಪ್ಪು ಮಾಡಿದ್ದೇವಾ, ಮತ್ತೊಮ್ಮೆ ಪರಿಶೀಲಿಸಿ) ಜೊತೆಗೆ ಇಂತಹವರು ಖಂಡಿತಾ ಬಾಯೇ ಬಿಟ್ಟಿರಲ್ಲ ಎಂದುಕೊಂಡರೆ ಅವರು ಕೇಳಿರುವ ಪ್ರಶ್ನೆಗಳ ಸಂಖ್ಯೆ ನೋಡಿಯೇ ಅಚ್ಚರಿಯಾಗುತ್ತಿತ್ತು. ಇಷ್ಟರ ಮೇಲೆ ಮಕ್ಕಳ ವಿಚಾರಗಳ ಬಗ್ಗೆ, ಅದರಲ್ಲಿನ ವೈವಿಧ್ಯತೆಗಳ ಬಗ್ಗೆ ಕೆಲವರು ಕಂಡಿರುವ ವಿವರಗಳು ನಮ್ಮ ತಲೆತೂಗಿಸಿತ್ತು.

ವಿಧಾನಸಭೆ ಮತ್ತು ಪರಿಷತ್ತು ಎರಡರಲ್ಲೂ ಸದಸ್ಯರು ವಿವಿಧ ಇಲಾಖೆಗಳಿಗೆ ಅನ್ವಯಿಸಿ ಅಧಿವೇಶನದ ಯಾವ ಯಾವ ದಿನಗಳು ಪ್ರಶ್ನೆಗಳನ್ನು ಕೇಳಬಹುದು, ಹೇಗೆ ಕೇಳಬೇಕು ಎನ್ನುವ ಅಧ್ಯಯನ ಸಾಕಷ್ಟು ಮಾಹಿತಿ ನೀಡಿತು. (ಸದಸ್ಯರು ಎಷ್ಟು ಬೇಕಾದರೂ ಪ್ರಶ್ನೆಗಳನ್ನು ಯಾವ ಇಲಾಖೆಗೆ ಬೇಕಾದರೂ ಕೇಳಬಹುದು. ಅವುಗಳಲ್ಲಿ ಕೆಲವನ್ನು ಅಧಿವೇಶನದ ಅವಧಿಯಲ್ಲಿ ʻಚುಕ್ಕೆ ಗುರುತಿನ ಪ್ರಶ್ನೆʼ ಎಂದು ಪರಿಗಣಿಸಿ ಅವನ್ನು ಸಂಬಂಧಿಸಿದ ಮಂತ್ರಿಗಳು ಮೌಖಿಕ ಉತ್ತರ ಕೊಡಲು ಅವಕಾಶವಿರುತ್ತದೆ. ಅಂತಹ ಪ್ರಶ್ನೆಗಳು ಪ್ರಾಮುಖ್ಯತೆಯನ್ನೂ ಪಡೆಯುತ್ತವೆ. ಆ ವಿಚಾರಗಳನ್ನು ಕುರಿತು ಚರ್ಚೆಗೂ ಅವಕಾಶವಿರುತ್ತದೆ).  

ನಮಗೆ ಸಿಕ್ಕಷ್ಟು ಪ್ರಶ್ನೆಗಳನ್ನೇ ಇಟ್ಟುಕೊಂಡು ಸತೀಶ್‌ ಜಿ ಸಿ, ಮಂಜುನಾಥ್‌, ಸುಮತಿ ಮತ್ತಿತರರು ಸೇರಿ ವಿಶ್ಲೇಷಣೆ ನಡೆಸಿ ೨೦೦೫ರಲ್ಲಿ ‘ವಿಧಾನ ಸೌಧದಲ್ಲಿ ಮಕ್ಕಳಿದ್ದಾರೆಯೇ?ʼ ಎನ್ನುವ ಹೆಸರಿನಲ್ಲಿ ನಮ್ಮ ಅಧ್ಯಯನವನ್ನು ಬಿಡುಗಡೆ ಮಾಡಿದೆವು. ಪುಸ್ತಕವನ್ನು ವಿಧಾನಸಭೆಯ ಸಭಾಪತಿಗಳಾಗಿದ್ದ ಕೃಷ್ಣ ಬಿಡುಗಡೆ ಮಾಡಿದರು. ಜೊತೆಗೆ ಮಕ್ಕಳ ವಿಚಾರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಮಂಡಲದಲ್ಲಿ ಎತ್ತಿದ್ದ ಶಾಸಕರನ್ನು ʻಮಕ್ಕಳ ಸ್ನೇಹೀ ಶಾಸಕʼರು ಎಂದು ಸನ್ಮಾನವನ್ನೂ ಮಾಡಿದೆವು. ಹಾಗೆ ಸನ್ಮಾನಿತರಾದ ಆಗ ವಿಧಾನಪರಿಷತ್ತಿನ ಸದಸ್ಯರಾಗಿದ್ದ ಮನೋಹರ ಮಸ್ಕಿ ಮತ್ತು ವಿಧಾನಸಭೆಯ ಸದಸ್ಯರಾಗಿದ್ದ ನೆಲ ನರೇಂದ್ರ ಬಾಬು ಅವರು ʻನಾವು ಮಾಡಿರುವ  ಕರ್ತವ್ಯವನ್ನು ಗುರುತಿಸಿ ನೀಡಿರುವ ಈ ಸನ್ಮಾನ ನಮ್ಮೆಲ್ಲರ ಕರ್ತವ್ಯ ಮತ್ತು ಬಾಧ್ಯತೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆʼ ಎಂದರು. ಮುಂದೆ ʻಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆʼಯ ನಿರ್ಮಾಣದಲ್ಲಿ ಮುಂದಾದರು. 

ಮಕ್ಕಳ ಹಕ್ಕುಗಳಿಗಾಗಿ ನಡೆದ ಈ ವಕೀಲಿ ವರ್ಷದಿಂದ ವರ್ಷಕ್ಕೆ  ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಾ ಬೆಳೆದು ಬಂದಿದೆ. ಈ ಪ್ರಕಟಣೆಯಲ್ಲಿ ಪ್ರತಿ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳು ಮತ್ತು ಅವುಗಳನ್ನು ಪ್ರತಿನಿಧಿಸುವ ಶಾಸಕರ ಹೆಸರುಗಳನ್ನು ಪಟ್ಟಿ ಮಾಡಿ ಅವರು ಕೇಳಿದ ಪ್ರಶ್ನೆಗಳು ಎಷ್ಟು ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಶ್ನೆಗಳು ಎಷ್ಟು ಇವೆ ಎಂಬ ವಿವರಗಳು ಸಿಗುತ್ತವೆ. 

ವಿಧಾನಮಂಡಲದ ಉಭಯ ಸದನಗಳ ಸದಸ್ಯರೊಡನೆ ಕಾಲಕಾಲಕ್ಕೆ ಮಕ್ಕಳ ವಿಚಾರಗಳು, ಸಮಸ್ಯೆಗಳು, ಅಂಕಿಸಂಖ್ಯೆಗಳನ್ನಿಟ್ಟುಕೊಂಡು ಸಮಾಲೋಚನೆಗಳು ನಡೆದಿವೆ. ಜೊತೆಗೆ ರಾಜ್ಯದುದ್ದಕ್ಕೂ ಹರಡಿಕೊಂಡಿರುವ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಸಂಸ್ಥೆಗಳು ನೀಡುವ ಸುದ್ದಿ, ಪುರಾವೆಗಳೂ, ಸುಳುಹುಗಳನ್ನು ಇಟ್ಟುಕೊಂಡು, ಶಾಸಕರುಗಳಿಗೆ ಪ್ರಶ್ನೆಗಳನ್ನೂ ನೀಡುತ್ತಿದ್ದೇವೆ. ಜೊತೆಗೆ ಪ್ರತಿ ದಿನ ಸಹೋದ್ಯೋಗಿ ನಾಗಸಿಂಹ ಹೊಣೆ ಹೊತ್ತಿರುವ ʻಸುದ್ದಿಯಲ್ಲಿ ಮಕ್ಕಳುʼ (Child in News) ಸುದ್ದಿ ಸಂಗ್ರಹ ಮತ್ತು ವಿಶ್ಲೇ಼ಷಣೆಯೂ ಮಕ್ಕಳಿಗೆ ಸಂಬಂಧಿಸಿದ ವಿಚಾರಗಳತ್ತ ಎಲ್ಲರ ಗಮನ ಸೆಳೆಯುತ್ತದೆ. 

ಹೀಗಾಗಿ ಮೋಟಮ್ಮನವರು ಮತ್ತು ಶೋಭಾ ಕರಂದ್ಲಾಜೆಯವರು ವಿಧಾನ ಪರಿಷತ್ತಿನಲ್ಲಿ ʻಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆʼ ಕುರಿತು ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಗಮನ ಸೆಳೆದು ಮಾತನಾಡಿದ್ದರು. ಮಕ್ಕಳ ಅಂಗವಿಕಲತೆ, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿಗತಿ, ಅಂಗನವಾಡಿಗಳಲ್ಲಿ ಆಹಾರ ಸರಬರಾಜು ಹಾಗೂ ಗುಣಮಟ್ಟ, ಮಕ್ಕಳ ಹಕ್ಕುಗಳ ಗ್ರಾಮಸಭೆ, ವಿದ್ಯುದಾಘಾತದಿಂದ ಸಾಯುವ ಮಕ್ಕಳು… ಹೀಗೆ ಹತ್ತು ಹಲವು ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳು ಸ್ಥಾನ ಪಡೆಯುತ್ತಿವೆ.  

ಹೌದು. ವಿಧಾನಸೌಧದಲ್ಲಿ ಮಕ್ಕಳಿದ್ದಾರೆ.

(ಮಕ್ಕಳ ಹಕ್ಕುಗಳ ಸಂಸತ್‌ನಲ್ಲಿ ಮುಖ್ಯಮಂತ್ರಿಗಳು ಮಕ್ಕಳೊಡನೆ ಸಮಾಲೋಚನೆ; ಮಕ್ಕಳ ಹಕ್ಕುಗಳ ಸುಸ್ಥಿರ ಜಾರಿಗಾಗಿ ದಕ್ಷಿಣ ಭಾರತ ಶಾಸಕರ ಸಮಾವೇಶ)

| ಮುಂದಿನ ಸಂಚಿಕೆಯಲ್ಲಿ |

‍ಲೇಖಕರು ವಾಸುದೇವ ಶರ್ಮ

March 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: