ಮೇಘನಾ ಸುಧೀಂದ್ರ ಅಂಕಣ: “ಯೂರೋಪಿನ ಬಣ್ಣ ಬದಲಾಗುತ್ತಿದೆ…”

“ಏನ್ ಮೇಡಂ ಇಷ್ಟು ದಿವಸ ಗಾಯಬ್ ಆಗಿದ್ರಿ” ಎಂದು ಕೇಳಿದ ಅಪಾರ್ಟ್ಮೆಂಟಿನ ಕೆಳಗಿನ ಮನೆಯ ಹುಡುಗ ಉಮೇದ್. “ಎಕ್ಸಾಂ ಇತ್ತು ಮಾರಾಯ, ಗೊತ್ತಲ್ವಾ ಇಲ್ಲಿ ಅಸೈನ್ಮೆಂಟು, ಟಾಕು, ಅದು ಇದು ಎಲ್ಲವು ಸೇರಿ ಗ್ರೇಡ್ ಆಗುತ್ತದೆ, ಆಮೇಲೆ ರಿಸಲ್ಟ್ ಬಂದ ಮೇಲೂ ಅದರ ಮೇಲೆ ಯಾರೂ ತಲೆ ಕೆಡಿಸಿಕೊಳ್ಳಲ್ಲ, ಒಂದು ಬಿಯರ್ ಹಿಡಿದು ಸೆಲಬ್ರೇಟ್ ಮಾಡುತ್ತಾರೆ. ಅಲ್ಲಿಗೆ ಎಲ್ಲಾ ಮುಗಿಯುತ್ತದೆ, ಪೇಪರಿನಲ್ಲಿ ದೊಡ್ಡ ಫೋಟೋ, ದೊಡ್ಡ ಸಾಧನೆಯೇನೆಂದೆಲ್ಲಾ ಏನು ಬಿಲ್ಡಪ್ ಕೊಡಲ್ಲ” ಎಂದು ಹುಡುಗಿ ಹೇಳಿದ್ದಳು. ಉಮೇದ್ ಇರಾನಿನ ಹುಡುಗ. ಇಲ್ಲಿ ಅವನು ಎರಡನೇ ಪೀಳಿಗೆಯ ಮೈಗ್ರಂಟ್. ಅವನ ಅಪ್ಪ ಅಮ್ಮ ಕಾಲು ದಾರಿಯಲ್ಲಿ ಹೇಗೋ ಅವರ ದೇಶದ ಮಿಲಿಟೆನ್ಸಿ ತಪ್ಪಿಸಿಕೊಂಡು ಬಂದವರು. ಮುಂಚೆ ಪೋರ್ಚುಗಲ್ ಈಗ ಬಾರ್ಸಾ ಇವರ ತವರು ಮನೆ. ಹೋಟೆಲ್ಲು ಮತ್ತು ಕಾಸ್ಮೆಟಿಕ್ಸ್ ಉದ್ಯಮ ಇವರದ್ದು. ಆಗಾಗ ಶಾರುಖ್ ಖಾನ್ ಸಿನಿಮಾ, ಬಾಲಿವುಡ್ ಹಾಡುಗಳು ಮತ್ತು ಹಿಂದಿ ಸಿನಿಮಾ ನೋಡೋಕೆ ಹೋದಾಗಲ್ಲೆಲ್ಲ ಹುಡುಗಿಗೆ ಅಚಾನಕ್ಕಾಗಿ ಸಿಗುವವ.

“ಹಹಹ ನೀವೆಲ್ಲಾ ಹೊಟ್ಟೆ ತುಂಬಿದವರಲ್ಲವಾ ಅದಕ್ಕೆ ನಿಮಗೆಲ್ಲಾ ಕಷ್ಟ ಗೊತ್ತಾಗೋದಿಲ್ಲ, ನಮ್ಮಲ್ಲಿ ಓದುವುದು ಅನ್ನೋದು ದೊಡ್ಡ ಸಾಧನೆಯೇ, ಶಾಲೆಗೇ ಹೊರಟ ಮಗ ಅಥವಾ ಮಗಳು ಮತ್ತೆ ವಾಪಸ್ಸು ಬರುತ್ತಾರಾ ಇಲ್ಲವಾ ಅನ್ನೋ ಸಂದೇಹ ಜಾಸ್ತಿ ಇರುತ್ತದೆ” ಎಂದು ನಕ್ಕು ಹೇಳಿದ ಉಮೇದ್. “ಯೂರೋಪಿನ ಬಣ್ಣ ಬದಲಾಗುತ್ತಿದೆ” ಎಂದು ಹುಡುಗಿಯ ಪ್ರೊಫೆಸರ್ ಒಮ್ಮೆ ಪಾಠದ ಮಧ್ಯ ಹೇಳಿದ್ದರು. ಏಷಿಯಾದ ರಾಜಕೀಯ ಮತ್ತು ಧರ್ಮದ ಮಿಶ್ರಣವಾಗಿ ಜೀವನದ ಅಸ್ಥಿರತೆಯನ್ನು ತಂದಿಟ್ಟ ಕಾರಣ ಸುಮಾರು ಜನ ಯೂರೋಪಿನ ದೇಶಗಳಿಗೆ ವಲಸೆ ಬಂದು ಸಣ್ಣ ಸಣ್ಣ ಉದ್ಯಮಗಳಿಗೆ ಸೇರಿಕೊಳ್ಳಲು ಶುರುಮಾಡಿದ್ದರು. ಇಲ್ಲಿನ ಜನರ ಸೋಂಬೇರಿತನವನ್ನ ಏಷಿಯಾದ ಕಷ್ಟಪಟ್ಟು ಕೆಲಸ ಮಾಡುವ ಗುಣ ಕೊಂದು ಹಾಕಿತ್ತು. ಜಾಸ್ತಿ ಬೇರೆ ಜನರೇ ತುಂಬಿ ಹೋದರು. ಶುಕ್ರವಾರ ಮಧ್ಯಾಹ್ನವೇ ಬಿಯರ್ ಬಾಟಲು ಹಿಡಿದು ಆರಾಮಾಗಿ ಇರುತ್ತಿದ್ದ ಜನ ಏಷಿಯನ್ನರು ಬಂದ ಮೇಲೆ ಅವರ ಕೆಲಸ ಉಳಿಸಿಕೊಳ್ಳೋದಕ್ಕೆ ತುಂಬಾ ಕಷ್ಟ ಪಡಬೇಕಾಯಿತು. ವರ್ಷಾನುಗಟ್ಟಲೆ ತಿಂದುಂಡು ಕುಡಿದ ದೇಹ-ಮನಸ್ಸು. ಅಷ್ಟು ಬೇಗ ಕರಗಲು ಅಸಾಧ್ಯವಾಯಿತು. ಅತಿ ಹೆಚ್ಚು ಕಷ್ಟಪಟ್ಟು ವೀಸಾಗೆ ಅರ್ಜಿ ಸಲ್ಲಿಸುತ್ತಿದ್ದದ್ದು ಏಷಿಯನ್ನರೇ. ಬೌದ್ಧಿಕ ಸಾಮರ್ಥ್ಯದಲ್ಲಿ ಚೀನಿಯರು, ಭಾರತದವರು, ಮಿಕ್ಕೆಲ್ಲಾ ಕೆಲಸಗಳಿಗೆ ಮಿಡಿಲ್ ಈಸ್ಟಿನ ಜನ ಬಹಳ ಕಾಂಪಿಟಿಟಿವ್ ಆಗಿದ್ದರು. ಚೀನಿಯರನ್ನು ಎದುರು ಹಾಕಿಕೊಳ್ಳೋದಕ್ಕೆ ಅವರ ಕಮ್ಯುನಿಸಂ ಬಿಡುತ್ತಿರಲಿಲ್ಲ. ಭಾರತದವರು ಸಾಫ್ಟ್ ಟಾರ್ಗೆಟ್. “ಫಕ್ ಇಂಡಿಯನ್ಸ್” ಎಂಬ ದೊಡ್ಡ ಮೂಮೆಂಟ್ ಶುರುವಾಗುವ ಸನಿಹದಲ್ಲಿತ್ತು. ಪ್ರತಿ ಬಾರಿ ಕೆಲಸಗಳು ಇಲ್ಲವಾದಾಗ ಯಾವನೋ ಒಬ್ಬ ಭಾರತೀಯ ಕಸಿದುಕೊಂಡಿದ್ದಾನೆ ಎಂಬ ಕೋಪ ಅವರಲ್ಲಿತ್ತು.

ಉಮೇದ್ ಅವತ್ತು ಹುಡುಗಿಗೆ, “ಹೇ ನೀನು ಬಂದು ವರ್ಷವಾಯಿತು, ಇನ್ನೂ ನಮ್ಮ ಫ್ಯಾಕ್ಟರಿ, ಅಂಗಡಿ ಏನ್ನನ್ನೂ ನೋಡಿಲ್ಲ, ತೋರಿಸುತ್ತೀನಿ ಬಾ” ಅಂದ. “ಒಹ್ ರಜೆಗೆ ಕಸಿನ್ಸ್ ಮನೆಗೆ ಹೋಗಬೇಕು, ಗಿಫ್ಟ್ ತಗೊಂಡು ಹೋಗಬೇಕು, ಇವನ ಜೊತೆ ಹೋದರೆ ಸ್ವಲ್ಪ ರಿಯಾಯಿತಿ ಸಿಗಬಹುದು” ಎಂಬ ಟಿಪಿಕಲ್ ಇಂಡಿಯನ್ ಬುದ್ಧಿ ಉಪಯೋಗಿಸಿ ಉಮೇದ್ ಜೊತೆ ಹೊರಟಳು.

ಈ ಅಂಕಣದಲ್ಲಿ ಮುಂಚೆಯೇ ಹೇಳಿದಂತೆ ಯುರೋಪಿನಲ್ಲಿ ಮಂಗೋಲ್ ರೇಸಿನವರು ಹೇಗೆ ಬೇಗ ಒಗ್ಗಟ್ಟಾಗುತ್ತಾರೋ ಹಾಗೆ ಇಂಡಿಯಾ, ಪಾಕಿಸ್ತಾನ್, ಬಾಂಗ್ಲಾ, ಶ್ರೀಲಂಕಾ, ಇರಾಕ್, ಇರಾನ್, ಆಫ್ಗಾನಿಸ್ತಾನ್ ಎಲ್ಲರೂ ಬೇಗ ಒಗ್ಗಟ್ಟಾಗುತ್ತಾರೆ. ಯಾವ ಧರ್ಮ, ಜಾತಿಯಾದರೂ ಹೇಗೋ ಅವರ ಕಷ್ಟಗಳು ಒಂದೇ ಎನ್ನುವ ಭಾವನೆ ಇದೆ. ಸಹಜವಾಗಿ ಉಮೇದ್ ಮತ್ತು ಹುಡುಗಿ ದೇಶದ ರಾಜಕೀಯ ಮತ್ತು ಎಕಾನಮಿ ಬಗ್ಗೆ ಮಾತಾಡುತ್ತಿದ್ದರು.

ಕಾಸ್ಮೆಟಿಕ್ಸ್ ಫ್ಯಾಕ್ಟರಿ ಮತ್ತು ಅಂಗಡಿ ಲಾ ರಾಂಬ್ಲಾಸ್ ಅಲ್ಲೇ ಇದ್ದದ್ದು. ಇದು ಚಿಕ್ಕ ಏಷಿಯಾ. “ನಿನಗೆ ಗೊತ್ತಾ ನಮ್ಮ ಇರಾನಿಯರು ತಮ್ಮ ವರ್ಷದ ಸಂಬಳದ ೪.೭ ಪ್ರತಿಶತ ಈ ಕಾಸ್ಮೆಟಿಕ್ಸ್ ಇಂಡಸ್ಟ್ರಿಗೆ ಹಾಕುತ್ತಾರೆ. ಯೂರೋಪಿನ ರಾಷ್ಟ್ರಗಳಿಗಿಂತಾ ಜಾಸ್ತಿ, ನಾವು ಇಲ್ಲಿ ಟ್ಯಾನ್ ಕ್ರೀಮ್ ಜಾಸ್ತಿ ರಫ್ತು ಮಾಡುತ್ತೇವೆ” ಎಂದು ತೋರಿಸಿದ. “ಒಹ್ ಇದು ನಮ್ಮ ದೇಶದ ಯಾರಿಗೂ ವರ್ಕ್ ಆಗಲ್ಲ, ಇನ್ನು ಬೆಳ್ಳಗಾಗಬೇಕೆಂದೇ ಸಾವಿರಾರು ಖರ್ಚು ಮಾಡುತ್ತಾರೆ” ಎಂದು ಹುಡುಗಿ ನಕ್ಕು ಹೇಳಿದಳು. “ಹೆಣ್ಣುಮಕ್ಕಳನ್ನ ಅಷ್ಟಾಗಿ ಆಚೆ ಬಿಡೋದಿಲ್ಲ ಅಲ್ಲಿ, ಸೊ ಅವರು ಟ್ಯಾನ್ ಆಗಬೇಕು ಎಂದರೆ ಈ ಕ್ರೀಮ್ ಗಳು ಸಹಾಯಕಾರಿ” ಎಂದು ಹೇಳುತ್ತಿದ್ದ. “ಬಟ್ ನಿನಗೆ ನ್ಯಾಚುರಲ್ ಟ್ಯಾನ್ ಸ್ಕಿನ್ ಇದೆ” ಎಂದು ಜಡ್ಜ್ಮೆಂಟ್ ಸಹ ಮಾಡಿದ.

ಲಿಪ್ಸ್ಟಿಕ್, ಅದೂ ಇದು ಎಲ್ಲವನ್ನು ತಯಾರಿಸುವ ವಿಧಾನ, ಅದನ್ನ ಪ್ಯಾಕ್ ಮಾಡುವುದು ಎಲ್ಲವನ್ನು ನೋಡಿದ ನಂತರ, ಉಮೇದ್ ಒಂದು ಮಾತನ್ನು ಹುಡುಗಿಗೆ ಹೇಳಿದ. “ಬಾರ್ಸಿಲೋನಾ ಕಾತಲೂನ್ಯ ಆಗೋದಕ್ಕೆ ಇರಾನಿಯರ ಬಣ್ಣವೂ ಬೇಕೆಂದು”. “ಅದು ಸರಿಯೇ, ಬಾರ್ಸಾ ಈಗ ತುಂಬಾ ಕಾಸ್ಮೋಪಾಲಿಟನ್ ಆಗಿದೆ, ಇಲ್ಲೂ ಇಂಗ್ಲಿಷ್ ಕಾಲಿಟ್ಟಿದೆ, ಅವರದಲ್ಲದ ಭಾಷೆಯನ್ನ ಬಹಳ ಸುಲಭವಾಗಿ ಅಪ್ಪಿಕೊಂಡಿದ್ದಾರೆ” ಎಂದೇನೋ ಹುಡುಗಿ ಅಂದಿದ್ದಕ್ಕೆ, “ಹೇ ಸ್ಪಾನಿಷ್ ಸಹ ಅವರದಲ್ಲದ  ಭಾಷೆ, ಸೊ ಇದು ಹಾಗೆಯೇ” ಎಂದು ರಾಂಬ್ಲಾಸ್ ಗಲ್ಲಿಯ ಮಧ್ಯದಲ್ಲೆಲ್ಲೋ ಕರೆದುಕೊಂಡು ಹೋದ.

ಥೇಟ್ ಇದು ಮಹಾಭಾರತದ ಚಕ್ರವ್ಯೂಹ ಇದ್ದಂಗೆ ಇತ್ತು. ಇಡೀ ಬಾರ್ಸಾ ಪೂರ್ತಿ ಬ್ಲಾಕ್ ಬ್ಲಾಕ್ ಆಗಿ ಸರಿಯಾಗಿ ಕಟ್ಟಿದ್ದರೆ ರಾಂಬ್ಲಾಸ್  ಮಾತ್ರ ಸಿಕ್ಕಾಪಟ್ಟೆ ವ್ಯೂಹಗಳಿದ್ದವು. ಅದೇ ಯಾವುದೋ ಮಧ್ಯದ ವ್ಯೂಹದಲ್ಲಿ ಒಂದು ದೊಡ್ಡ ಸಭೆ ನಡೆಯುತ್ತಿತ್ತು. “ಒಹ್ ಇದೇನು ಮತ್ತೊಂದು ಗಲಾಟೆಯಾ?” ಎಂದು ಉಮೇದ್ ಗೆ ಕೇಳಿದ್ದಳು. “ಹೇ ಇಲ್ಲ ಇಲ್ಲ ಇದು ನೋಡು ಇಲ್ಲಿ ಯಾರೂ ಬಿಳಿಯರಲ್ಲ ಇವರೆಲ್ಲಾ ಬೇರೆ ಬೇರೆ ದೇಶದವರಾದರೂ ಕತಲೂನ್ಯಾದ ಸ್ವಾತಂತ್ರ್ಯಕ್ಕೆ ಒತ್ತು ಕೊಡುತ್ತಿರುವವರು. ನೋಡು ಇಲ್ಲಿನ ಹಾಗೆ ಕಾಸ್ಟಲ್ ಮಾಡಿಕೊಂಡು ನಿಂತಿದ್ದಾರೆ. ಇದು ಈ ಸಮಾಜದ ಅವಿಭಾಜ್ಯ ಅಂಗ” ಎಂದು ಹೇಳಿದ ಇವನು.

ಮುಖ ನೋಡಿ ಮೊಳ  ಹಾಕಬೇಡ ಎಂದು ಹೇಳಿದ್ದರು ಭಾರತದಲ್ಲಿ ಕಲಿತಿದ್ದ ಕೆಲವು ಅಪ್ರೆಹೆನ್ಷನ್ಸ್ ಹುಡುಗಿಯನ್ನ ಬಿಟ್ಟಿರಲಿಲ್ಲ. ಲ್ಯಾಟಿನ್ ಅಮೆರಿಕಾದವರು, ಆಫ್ರಿಕನ್ನರು ಮತ್ತು ಮಂಗೋಲರು ಕೆಲವು ಕತಲೂನ್ಯಾದ ಸ್ವಾತಂತ್ರ್ಯದ ಪಾಂಪ್ಲೆಟ್ಟನ್ನ ಹಂಚುತ್ತಿದ್ದರು. ಅದು ಕತಲಾನ್ ಭಾಷೆ, ಉರ್ದು ಮತ್ತು ಚೈನೀಸ್ ನಲ್ಲಿ ಸಹ ಇತ್ತು. ಹುಡುಗಿ ನೋಡಿ ಬೆಚ್ಚಿ ಬಿದ್ದಳು. ತಮ್ಮ ತಮ್ಮ ದೇಶದಿಂದ ವಲಸೆ ಬಂದವರು ಇಲ್ಲಿ ಬಂದು ಕತಲಾನ್ ಕಲಿತಿದ್ದರು, ಜೊತೆಗೆ ಅವರ ಭಾಷೆಯನ್ನು ಸಹ ಮರೆತಿರಲಿಲ್ಲ. ಹೊಸದಾಗಿ ಆಯಾ ದೇಶದಿಂದ ಬಂದವರು ಸಹ ತಮ್ಮ ಭಾಷೆಯಲ್ಲಿಯೇ ಪುಸ್ತಕ ಮತ್ತು ಪಾಂಪ್ಲೆಟ್ಗಳನ್ನ ಹಂಚಿಕೊಂಡು ವಿಷಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆಸೆಯಾಗಿ ಕನ್ನಡದಲ್ಲೂ ಇದೆಯಾ ಎಂದು ನೋಡಿದ್ದಳು. ಇರಲಿಲ್ಲ. ಭಾರತದ ಭಾಷೆಗಳಲ್ಲಿ ಹಿಂದಿ ಮತ್ತು ತಮಿಳು ಇತ್ತು ಆದರೆ ಶ್ರೀಲಂಕಾದ ತಮಿಳಾಗಿತ್ತು.

“ಹಾಯ್ ನಾನು ಇಂಡಿಯನ್ ನೀನು ಇಂಡಿಯನ್” ಎಂದು ಒಬ್ಬ ಮನುಷ್ಯ ಹುಡುಗಿಯ ಹತ್ತಿರ ಬಂದು ಹೇಳಿದ. ಅವನು ನೇಟಿವ್ ಇಂಡಿಯನ್ ಆಗಿದ್ದ. “ನೀನು ಕತಲಾನ್ ಇಂಡಿಯನ್ ಆಗು” ಎಂದು ಹಾರೈಸಿ ಹೋದ. ವಿಲ್ಮರ್ ಗೊಮೆಜ್ ಅರ್ಧ ಆಫ್ರಿಕನ್ ಮತ್ತು ಅರ್ಧ ನೇಟಿವ್ ಇಂಡಿಯನ್ (ನಮ್ಮ ಭಾಷೆಯಲ್ಲಿ ರೆಡ್ ಇಂಡಿಯನ್). ಇಲ್ಲಿ ಅರ್ಜೆಂಟಿನಾ, ಉರುಗ್ವೆ, ಮೊರೊಕ್ಕೋದ ಧ್ವಜಗಳ ಜೊತೆ ಕೆಂಪು ಹಳದಿಯ ಧ್ವಜಗಳು ಹಾರಾಡಿದ್ದು ವಿಶಿಷ್ಟವಾಗಿತ್ತು.

“ನಿಮ್ಮ ಜನರನ್ನು ತೋರಿಸುತ್ತೀನಿ”  ಎಂದು ಉಮೇದ್ ಇನ್ನೊಂದು ಕಡೆ ಎಳೆದುಕೊಂಡು ಹೋದ. ನೀಲಿ ಬಣ್ಣದ ಟರ್ಬನ್ ಕಟ್ಟಿಕೊಂಡಿದ್ದ ಎತ್ತರದ ವ್ಯಕ್ತಿಯೊಬ್ಬ ಸಹ ವೀರಾವೇಶದಿಂದ ಭಾಷಣ ಮಾಡುತ್ತಿದ್ದ. ಅದು ಪೂರ್ತಿ ಪಂಜಾಬಿಯಲ್ಲಿತ್ತು. ಒಂದಷ್ಟು ಜನ ಅದನ್ನ ಅಹುದು ಅಹುದು ಅನ್ನುತ್ತಿದ್ದರು. “ಇವನು ಗಗನ್ ದೀಪ್ ಖಾಲ್ಸಾ, ನಿಮ್ಮವನೇ” ಎಂದ ಉಮೇದ್. “ಹೇ ಇಲ್ಲ ಇಲ್ಲ ನಾನು ಸೌತ್ ಇಂಡಿಯನ್, ಕನ್ನಡದವಳು” ಎಂದು ಹುಡುಗಿ ಅಂದು “ಆಮೇಲೆ ಛೆ, ಹಾಗೆಲ್ಲ ಅಷ್ಟು ಸಂಕುಚಿತ ಮನೋಭಾವ ತೋರಿಸಬಾರದಿತ್ತು” ಎಂದು ಅವಮಾನದಿಂದ ಸುಮ್ಮನಾದಳು.

ಖಾಲ್ಸಾ ಮತ್ತೆ ಇಂಗ್ಲಿಷಿನಲ್ಲಿ ಭಾಷಣ ಮುಂದುವರಿಸಿದ. “೨೦೦೦ ರಿಂದ ೨೦೧೦ನೇ ಇಸವಿಯವರೆಗೆ ಈ ಪ್ರಾಂತ್ಯದ ಜನಸಂಖ್ಯೆ ೨೦ ಪ್ರತಿಶತ ಜಾಸ್ತಿಯಾಯಿತು. ಅದು ನಮ್ಮಂಥವರಿಂದ, ೨ ಲಕ್ಷದಷ್ಟು ಜನ ಸ್ಪೇನಿನ ಪ್ರಜೆಗಳಾಗಿದ್ದೀವಿ. ನಮಗೆ ಮ್ಯಾಡ್ರಿಡಿನ ಅವಶ್ಯಕತೆ ಇಲ್ಲ, ನಮಗೆ ಬಾರ್ಸಿಲೊನಾವೆ ಶ್ರೇಷ್ಠ, ಜೋ ಬೋಲೇ ಸೊ…” ಎಂದು ಜೋರಾಗಿಯೇ ಹೇಳಿದ. ಅವರ ಧರ್ಮದ ವಾಕ್ಯಗಳನ್ನ ಕೂಗಿದ್ದರು. ವೀರಾವೇಶದಿಂದ ಹುಡುಗಿ ಮತ್ತು ಉಮೇದ್ ಸಹ ಅಂದರು.

ಅಲ್ಲೇ ನಿಂತಿದ್ದ ಸಿವಾಕೊ ಕಿಂಗಲೋ ಸಹ ಚಪ್ಪಾಳೆ ತಟ್ಟಿ ತನ್ನ ಒಪ್ಪಿಗೆಯನ್ನ ಸೂಚಿಸಿದರು, ತಡೆಯಲಾರದೆ ಹುಡುಗಿ ಅವರನ್ನ ಕೇಳಿದರೆ, “ನಾನು ಕಾಂಗೋದವನು, ಅಲ್ಲಿನ ಸರ್ವಾಧಿಕಾರವನ್ನು ತಪ್ಪಿಸಿಕೊಳ್ಳಲೆಂದೇ ಇಲ್ಲಿಗೆ ಓಡಿ ಬಂದವನು, ಇಲ್ಲಿ ನೋಡಿದರೆ ಇವರದ್ದು ಅದೇ ಕಥೆ, ದೇಶದ ಪ್ರಜೆಗಳು ಪ್ಹ್ರೀ ಆಗಿರದಿದ್ದರೆ ನಮ್ಮ ದೇಶದ ಹಾಗಾಗುತ್ತದೆ, ನನಗೆ ಇವರ ಸ್ವಾತಂತ್ರ್ಯ ಮುಖ್ಯ” ಎಂದು ಬಹಳ ಧೈರ್ಯವಾಗಿ ಹೇಳಿದ.

ಬಸ್ಸು ಹಿಡಿಯುವಾಗ, ಉಮೇದ್ ಕೇಳಿದ, “ಏನ್ ಪ್ಲಾನ್ ವೀಕೆಂಡು” ಅಂತ, “ಅಮೆರಿಕಾಗೆ ಹೋಗಬೇಕು, ಒಂದು ಕಾಂಟೆಸ್ಟಿಗೆ, ಅದಕ್ಕೆ ವೀಸಾ ಮಾಡಿಸಿಕೊಳ್ಳಬೇಕು, ಅದಕ್ಕೆ ಮ್ಯಾಡ್ರಿಡ್ಗೆ ಹೋಗೋದು” ಅಂದಳು “ಈಗ ತಾನೇ ಫಾಲ್ ಮ್ಯಾಡ್ರಿಡ್” ಎಂದು ಕಿರುಚಿ ಬಂದೆ ಎಂದು ನಕ್ಕು ಕೇಳಿದ, ಹುಡುಗಿ ವಾಸ್ತವ ಮತ್ತು ಮನಸ್ಸಿನ ಭಾವನೆಗಳು , ಆವೇಶದ ವ್ಯತ್ಯಾಸಗಳನ್ನ ಬಹಳ ಬೇಗ ಅರಿತುಕೊಂಡಳು…

ಸ್ವಾತಂತ್ರ್ಯದ ಸೂರ್ಯ ಇನ್ನು ಇಲ್ಲಿ ಉದಯಿಸಲು ಇನ್ನೆಷ್ಟು ವರ್ಷ ಎಂದು ಬಸ್ಸಿನ ಕಂಬಿ ಹಿಡಿದಳು…

July 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasundhara k m

    ಪ್ರತಿಬಾರಿಯೂ ಕುತೂಹಲಕಾರಿಯಾಗಿರುವ ನಿಮ್ಮ ಅಂಕಣ ಓದಲು ಖುಷಿ ಎನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: