ಮೇಘನಾ ಸುಧೀಂದ್ರ ಅಂಕಣ: ನೀನು ಪೆರಿಯಾರ್ ಬಗ್ಗೆ ಮಾತಾಡಿದ್ದು ಕೇಳಿ ಖುಷಿಯಾಯಿತು

ತೀವ್ರ ಭಾವನೆಗಳನ್ನ ಹುಟ್ಟಿಸುವ ಸಿನೆಮಾಗಳು ಮತ್ತು ಪುಸ್ತಕಗಳನ್ನ ಓದಿ ಹುಡುಗಿಗೆ ಜಗತ್ತೆಲ್ಲಾ ಒಂದೆ, ಎಲ್ಲರೂ ಮನುಷ್ಯರು, ರಕ್ತಪಾತ ಅವಶ್ಯಕತೆಯಿಲ್ಲ ಎಂಬ ಅತೀ ಸ್ಪಿರಿಚುಯಲ್ ಯೋಚನೆಗಳು ಅವಳ ತಲೆ ಹೊಕ್ಕಿತ್ತು. ರಕ್ತಪಾತದಿಂದ ಏನೂ ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಅವಳು ಬಂದಿದ್ದಳು. ಇಂಡಿಯಾ ಸೆಂಟರಿನಲ್ಲಿ ಏನೋ ಕೆಲಸವಿದೆ ಎಂದು ಹೋದಾಗ, ಈ ಕತಲಾನಿನ ಗಲಾಟೆಯ ಬಗ್ಗೆ ಎಲ್ಲರೂ ಮಾತಾಡುತ್ತಿದ್ದರು.

ಹೇಗೆ ನಮ್ಮ ದೇಶ ಆರಾಮಾಗಿ ಇದೆ, ಇಲ್ಲಿ ಬಂದ ಇವರ ಗಲಾಟೆಯಲ್ಲಿ ಸಿಕ್ಕಿಹಾಕಿಕೊಂಡೆವು, ನಮ್ಮ ರಕ್ತಪಾತಗಳು ಬರಿ ಕಾಶ್ಮೀರಕ್ಕೇ ಸೀಮಿತ, ಆ ಗಲಾಟೆಯನ್ನೂ ನಾವು ಶಾಂತಿಯಿಂದ ಬಗೆಹರಿಸಿಕೊಳ್ಳಬಹುದು ಹೀಗೆ ಮಾತುಗಳು ಸಾಗುತ್ತಿದ್ದವು. ತನ್ನ ಕೆಲಸ ನೆನಪಾಗಿ, ಅಲ್ಲಿ ಒಂದು ಐಡಿ ಕಾರ್ಡ್ ಮಾಡಿಸಿಕೊಳ್ಳುವ ಸಲುವಾಗಿ ತನ್ನ ಡಾಕ್ಯುಮೆಂಟ್ಸ್ ಗಳನ್ನ ಮೇಜಿನ ಮೇಲಿಟ್ಟಳು. ಇದು ಭಾರತದ ಯಾವ ಹಬ್ಬಕ್ಕಾದರೂ ಉಚಿತ ಊಟಕ್ಕೆ ಒಂದು ಕಾರ್ಡ್ ಕಡ್ಡಾಯ ಮಾಡಲಾಗಿತ್ತು. ಯಾರ್ಯಾರೋ ಬಂದು ತಿನ್ನುವ ಪ್ರಮೇಯ ಬರಬಾರದೆಂದು. ಭಾರತೀಯರು ಊಟಕ್ಕೋಸ್ಕರ ಏಣಾದರೂ ಮಾಡುತ್ತಾರೆ ಎಂದು ಎಲೆನಾ ಹೇಳಿದ್ದು ನೆನಪಿಸಿಕೊಂಡು ನಕ್ಕಳು.

“ಸರ್ ನೇಮ್? ” ಎಂದು ಆ ಕೌಂಟರ್ ಅಲ್ಲಿ ಕೂತ್ತಿದ್ದ ಹುಡುಗ ಕೇಳಿದ. “ನೋ” ಅಂದಳು. “ಯಾಕೆ ನೀನು ಯಾವ ಭಾಗದಲ್ಲಿ , ಎಲ್ಲಿಂದ ಬಂದಿದ್ದೀಯಾ ಎಂಬ ಅಭಿಮಾನ ನಿನಗಿಲ್ಲವಾ ?” ಎಂದು ಕೇಳಿದ. “ಕರ್ಮ ಇದು ಬೇರೆ, ನೋಡಿ ಸಾರ್ ಪೆರಿಯರ್ ಹೇಳಿದ್ದರು ಹಾಗೆಲ್ಲಾ ಜಾತಿವಾಚಕ ಸರ್ ನೇಮ್ ಗಳನ್ನ ಹಾಕಿಕೊಳ್ಳಬಾರದು ಅಂತ, ಅದಕ್ಕೆ ಹಾಕಿಕೊಂಡಿಲ್ಲ, ಈ ಉತ್ತರ ಭಾರತದವರಿಗೆ ಪೆರಿಯರ್ ಎಲ್ಲಿ ಗೊತ್ತು ಹೇಳಿ… ” ಎಂದು ಹುಡುಗಿ ವ್ಯಂಗ್ಯವಾಗಿಯೇ ನುಡಿದಳು.

ಪಕ್ಕದಲ್ಲಿ ಕೂತಿದ್ದ ಒಂದು ಹುಡುಗ ಹುಡುಗಿ ಅವಳನ್ನೇ ದುರುಗುಟ್ಟಿಕೊಂಡು ನೋಡುತ್ತಿದ್ದರು. “ಇವರ್ಯಾರೋ ಹುಮ್ಯಾನಿಟಿಸ್ ಇರಬೇಕು, ನನ್ನ ಕಥೆ ಇಲ್ಲಿ ಮುಗಿತು” ಎಂದು “ಏನು? ಏನಾಯಿತು?” ಎಂದು ಕೇಳಿದಳು. “ನಮಗೂ ಪೆರಿಯರ್ ಗೊತ್ತು” ಎಂದಳು ಪೂಂಗೋಡಿ. “ಓಹ್ ಹೌದಾ, ಹೇಗೆ ನೀನು ತಮಿಳಾ? ” ಎಂದು ಕೇಳಿದಳು ಹುಡುಗಿ, “ಯೆಸ್ ಬಟ್ ಬೇರೆ ದೇಶ” ಎಂದಳು. “ಯಾವುದು?” ಎಂದಾಗ ಶ್ರೀಲಂಕಾ ಅಂತ ಗೊತ್ತಾದ ಮೇಲೆ, ಸ್ವಲ್ಪ ಹುಷಾರಾಗಿ ಮಾತಾಡಬೇಕು, ಇವರು ತಮಿಳು ಎಂದು ಅಂದರೂ ಭಾರತದ ತಮಿಳಿನವರಿಗಿಂತ ಒಳ್ಳೆ ಭಾಷೆಯನ್ನ ಮಾತಾಡುತ್ತಾರೆ ಮತ್ತು ಸಂಘ ತಮಿಳನ್ನ ಇನ್ನೂ ಬದುಕಿಸಿದ್ದಾರೆ ಎಂಬ ವಿಷಯವಾಗಿ ತಮಿಳು ಸಂಘದಲ್ಲಿ ಒಮ್ಮೆ ಇವರಿಗೆ ಮತ್ತು ಭಾರತದ ತಮಿಳಿನವರಿಗೆ ಗಲಾಟೆಯಾಗಿದ್ದನ್ನ ಕೇಳಿದ್ದಳು. ಅದಕ್ಕೆ ಓಹ್ ಹಾಗೆ ಹೀಗೆ ಎಂದು ಅಲ್ಲೇ ಮಾತು ತೇಲಿಸಿ ನಕ್ಕು ಹೊರಬಂದಳು.

ಪೂಂಗೋಡಿ ಅವಳ ಹಿಂದೆಯೇ ಬಂದಳು. “ಏನಪ್ಪಾ ಗೊತ್ತಿಲ್ಲದ ಪೆರಿಯರ್ ಬಗ್ಗೆ ಹೇಳಿದ್ದಕ್ಕೆ ರಜನಿಕಾಂತ್ ರೇಂಜಿಗೆ ಎಕ್ಸೈಟ್ ಆಗೋದ್ಲಲ್ಲಾ ಈ ಹುಡುಗಿ” ಎಂದು ಮನಸಿನಲ್ಲಿಯೇ ಅಂದುಕೊಂಡು ಬೇಗ ಬೇಗ ಹೋಗಲು ಶುರುಮಾಡಿದಳು. ಯುರೋಪಿನಲ್ಲಿ ಈಳಂ ನ ಬೆಂಬಲಿಸುವ  ತುಂಬಾ ಜನರಿದ್ದಾರೆ. ಅವರಿಗಿನ್ನೂ ಶ್ರೀಲಂಕಾದಲ್ಲಿ ಮತ್ತೆ ತಮಿಳು ದೇಶ ಮಾಡುವ ಆಸೆಯಿದೆ. ಅದಕ್ಕೆ ಕೆಲವೊಮ್ಮೆ ಅವರನ್ನೆಲ್ಲಾ ಅಷ್ಟು ಮಾತಾಡಿಸುವ ಕೆಲಸ ಮಾಡುವುದಿಲ್ಲ. ಅವರೂ ಅಷ್ಟೆ ಅಷ್ಟು ಎಲ್ಲರೊಟ್ಟಿಗೆ ಬೆರೆಯುವುದಿಲ್ಲ. ಸುಮ್ಮನೆ ಯಾಕೆ ಕಥೆ ಎಂದು ಸುಮ್ಮನೆ ಹೋಗುತ್ತಿದ್ದಾಗ, ಪೂಂಗೋಡಿ ಕೈ ಹಿಡಿದು ನಿಲ್ಲಿಸಿದಳು.

“ನೀನು ಪೆರಿಯಾರ್ ಬಗ್ಗೆ ಮಾತಾಡಿದ್ದು ಕೇಳಿ ಖುಷಿಯಾಯಿತು, ಉತ್ತರ ಭಾರತದವರಿಗೆ ವ್ಯಂಗ್ಯ ಮಾಡಿದ್ದು ಇನ್ನೂ ಖುಷಿಯಾಯಿತು. ಸಕ್ಕತ್ ನೀನು” ಎಂದಾಗ ಏನೂ ಮಾತಾಡಲು ಗೊತ್ತಾಗದ ಹುಡುಗಿ, “ಪೂಂಗೋಡಿ ಎಂದರೇನು” ಎಂದು ಬೆಪ್ಪುಬೆಪ್ಪಾಗಿ ಕೇಳಿದಳು. “ಓಹ್ ಅದು ಬಳ್ಳಿಯ ಮೇಲಿರುವ ಹೂ” ಎಂದು ಮುದ್ದಾಗಿ ನಕ್ಕು ಹೇಳಿದಳು. ಅಷ್ಟರಲ್ಲಿ ಆ ಹುಡುಗನೂ ಬಂದ. “ಹಾಯ್ ನಾನು ಜಯವರ್ಧನೆ” ಎಂದ. ಸ್ಪಾನಿಷ್ ಮತ್ತು ಕತಲಾನಂತೆ ವರ್ಷಾನುಗಟ್ಟಲೆಯಿಂದ ಜಗಳ ಮಾಡುತ್ತಿರುವ ಸಿಂಹಳೀಯರು ಮತ್ತು ತಮಿಳರು ಪಕ್ಕಪಕ್ಕದಲ್ಲಿ ಖುಷಿಯಾಗೇ ಇದ್ದದ್ದು ನೋಡಿ ಆಶ್ಚರ್ಯಗೊಂಡು, “ಅದು ಹೇಗೆ ನೀವಿಬ್ಬರೂ ಕಿತ್ತಾಡದೇ ಇದ್ದೀರಾ” ಎಂದು ಬಾಯಿ ತಪ್ಪಿ ಹೇಳಿದಳು. “ಬಹಳ ಸುಲಭ, ಬೇರೆ ದೇಶಕ್ಕೆ ಹೋಗಿ ನೆಲೆಸೋದು” ಎಂದು ಹೇಳಿ ಕಿಸಕಿಸನೆ ನಕ್ಕರು.

ಪೂಂಗೋಡಿ ಅವಳ ದೇಶದ ರಕ್ತಪಾತದ ಬಗ್ಗೆ ಬಿಡಿಬಿಡಿಯಾಗಿ ಒಂದೊಂದು ಅಧ್ಯಾಯವನ್ನೂ ಹೇಳಿದಳು. ಅಲ್ಲಿನ ಧಾರ್ಮಿಕ ಮತ್ತು ರಾಜಕೀಯ ನಾಯಕರು ಹೇಗೆ ಇವರಿಬ್ಬರ ವೀಕ್ ನೆಸ್ಸುಗಳನ್ನ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾ ಹೋದಳು. ಅಧಿಕಾರ ಅಂತ ಬಂದಾಗ ಎಡ ಬಲ ಎಲ್ಲಾ ಒಂದಾಗತ್ತೆ ಎಂದು ಬಹಳ ಆರಾಮಾಗಿ ಹೇಳಿದಳು. “ಬೇಕಾದ್ರೆ ಇಲ್ಲೇ ನೋಡು, ನಾಳೆ ಎರಡು ಜನಕ್ಕೂ ಇಷ್ಟಷ್ಟು ಮಿಲಿಯನ್ ಕೊಟ್ಟರೆ ಎಲ್ಲಾ ಮನೆಯಲ್ಲಿ ನೆಮ್ಮದಿಯಾಗಿರುತ್ತಾರೆ” ಎಂಡುದು ಕೇವಲವಾಗಿ ಈ ಹೋರಾಟದ ಬಗ್ಗೆ ಮಾತಾಡಿದಳು.

“ನಾನು ರಕ್ತಪಾತ ಬರೀ ನೋಡಿಲ್ಲ, ರಕ್ತವನ್ನ ಅಂಟಿಸಿಕೊಂಡಿದ್ದೀನಿ” ಅಂದಾಗ “ಇದ್ಯಾವುದೋ ಟೆರರಿಸ್ಟ್ ಸಹವಾಸ ಆಯ್ತಾ” ಎಂದು ಮನಸಲ್ಲಿಯೇ ಭಯಪಟ್ಟುಕೊಂಡು ನಡೆದಳು. “೧೮೭೪ರಲ್ಲಿ ಜನರಲ್ ಮಾರ್ಟಿನಝ್ ಕಾಂಪೋಸ್ ಬಾರ್ಬನ್ ಮನೆತನದವರಿಗೆ ಗದ್ದುಗೆ ತಂದುಕೊಟ್ಟ ಮೇಲೆ, ಸ್ವಲ್ಪ ಕಾಲ ಈ ದೇಶ ಉದ್ಧಾರ ಆಗುವ ಪಥದಲ್ಲಿತ್ತು. ಆದರೆ ಕತಲಾನಿಸಮ್ ಕಡಿಮೆಯಾಗಿತ್ತು. ಅಷ್ಟರಲ್ಲಿ ವಲೆಂತಿ ಅಲ್ಮೇರಾಲಿ ಎನ್ನುವ ರಾಜಕಾರಣಿ ಕತಲಾನಿನ ಎಡ ಬಲಗಳನ್ನ ಒಗ್ಗೂಡಿಸಿ ಕತಲಾನಿಸ್ಟ್ ಕಾಂಗ್ರೆಸ್ಸನ್ನು ಶುರು ಮಾಡಿದರು. ನಾವು ಎಡ ಬಲ ಕ್ರಿಶ್ಚಿಯನ್ನರು, ಮುಸಲ್ಮಾನರು ಏನೇ ಆದರೂ ನಾವು ಕತಲನ್ನರು ಎಂದು ಬಹಳ ಪ್ರಚಾರ ಮಾಡಿ ೧೮೮೦ ದೊಡ್ಡ ಪಾರ್ಟಿಯನ್ನೇ ಶುರು ಮಾಡಿದರು. ಅದು ಪ್ರಜಾಪ್ರಭುತ್ವದ ಹಾದಿಗೆ ಆ ದೇಶವನ್ನ ಕರೆದೊಯ್ಯುವ ದೊಡ್ದ ಕನಸನ್ನ ಕಂಡಿದ್ದರು.

ಆದರೆ ೧೮೮೮ರಲ್ಲಿ ನಡೆದ ಬಾರ್ಸಾದ ಎಕ್ಸ್ಪೋಸಿಶನ್ ಎಂಬ ದೊಡ್ಡ ವರ್ಲ್ಡ್ ಫೇರಿನಿಂದ ಒಂದು ದೊಡ್ಡ ಮನಸ್ತಾಪ ಏರ್ಪಟ್ಟು ಎಡ, ಬಲ ಬೇರೆಯಾಯಿತು. ಈ ಜಾತ್ರೆ ಆರ್ಕ್ ದೆ ಟ್ರಾಯಂಪ್ ಮತ್ತು ಸಿತಾಡೆಯಾ ಪಾರ್ಕಿನಲ್ಲೆ ಚೆನ್ನಾಗಿ ನಡೆಯಿತು. ಆದರೆ ದುಡ್ಡಿನ ವಿಷಯದಲ್ಲಿ ಗಲಾಟೆಯಾಗಿ ಎಡದ ಸೋಷಿಯಲಿಸಮ್ ಮತ್ತು ಬಲದ ಕ್ಯಾಪಿಟಲಿಸಮ್ ನ ಸಿದ್ಧಾಂತ ವ್ಯತ್ಯಾಸಕ್ಕೆ ಕತಲಾನಿನ ಮೂವ್ ಮೆಂಟ್ ಹಳ್ಳ ಹಿಡಿಯಿತು. ಇದೇ ರೀತು ಯುನಿಯೋ ಕಾತಲನಿಸ್ಟಾ ಎಂಬ ಹೊಸ ಪಾರ್ಟಿಯೂ ಶುರುವಾಯಿತು. ರೀಜಿಯನಿಸ್ಟಿಕ್ ಲೀಗ್ ಎಂಬ ಸಮ್ಮಿಶ್ರ ಸರ್ಕಾರವನ್ನ ನಡೆಸಿ ಕತಲಾನ್ನಿನ ಪ್ರಜಾಪ್ರಭುತ್ವವನ್ನ ಇನ್ನೂ ಹಾಸ್ಯಾಸ್ಪದ ಮಾಡಿದ್ದರು. ಅತಿಯಾದ ದೇಶಪ್ರೇಮ, ಅವರ ಪ್ರಧಾನಿ, ರಾಷ್ಟ್ರ, ರಾಷ್ಟ್ರ್ ಧ್ವಜ, ಮಿಲಿಟರಿಯ ಬಗ್ಗೆ ಸೊಲ್ಲೆತ್ತುವ ಹಾಗಿರಲ್ಲಿಲ್ಲ. ಹಾಗೆ ಮಾಡಿದರೆ ಅವರನ್ನ ಜೈಲಿಗೆ ಅಟ್ಟುತ್ತಿದ್ದರು. ಕೆಲವೊಮ್ಮೆ ಗಲ್ಲಿಗೂ ಏರಿಸಲಾಗುತ್ತಿತ್ತು. ಎಡ ಮತ್ತು ಬಲದ  ವಿಪರೀತ ಹುಚ್ಚಿಗೆ ಸಾಮಾನ್ಯ ಜನ ಬಲಿಯಾಗುತ್ತಿದ್ದರು. ಗದ್ದುಗೆ ಮೇಲೆ ಕೂತ ಮುಂಚಿನ  ರಾಜನೇ ತುಂಬಾ ಸಹನಾಮಯಿಯಾಗಿ ಕಾಣುತ್ತಿದ್ದ. ತಮ್ಮಲ್ಲಿಯೇ ಒಬ್ಬನಿಗೆ ಅಧಿಕಾರ ಕೊಟ್ಟವನಿಗೆ ತನ್ನ ದೇಶದ ಪ್ರಜೆಗಳ ಬಗ್ಗೆ, ತನ್ನ ಸಿದ್ಧಾಂತದ ಬಗ್ಗೆ ಯಾವ ಆಸ್ಥೆಯೂ ಇರಲ್ಲಿಲ್ಲ. ತಾನಾಯಿತು ತನ್ನ ಪಾರ್ಟಿಯ ಫಂಡಾಯಿತು, ತನ್ನ ಬೇಕಾದವರಿಗೆ ಅಧಿಕಾರ ಎಂಬ ಹುಂಬತನದಿಂದ ದೇಶವಾಳತೊಡಗಿದ…

೧೯೧೩ ರಲ್ಲಿ ಮನಕುಮಾನಿತಾತ್ (ಕಾಮನ್ ವೆಲ್ತ್), ಎಂಬ ಒಕ್ಕೂಟ ಕಟ್ಟಿಕೊಂಡು ಸ್ಪೇನಿನ ಪ್ರಜಾಪ್ರಭುತ್ವವನ್ನೇ ಚಾಲೆಂಜ್ ಮಾಡುವ ಹಠಕ್ಕೆ ಬಿದ್ದರು ಬಾಸ್ಕ್ , ಬಾರ್ಸಾ ಮತ್ತು ಅಸ್ತೂರಿಯಾಸಿನವರು. ಆಗ ಅತ್ಯಂತ ಆಸ್ಥೆಯಿಂದ ಬಾರ್ಸಾಗೆ ರೇಲ್ವೆ, ಟೆಲಿಫೋನ್ ಮತ್ತಿತ್ತರ ಅಭಿವೃದ್ಧಿಯನ್ನು ತೋರಿಸುವ ಕಾರ್ಯಗಳಾದವು. ಆಗ ಈ ವರ್ಕರ್ಸ್ ಗಳು ಪ್ರಜಾಪ್ರಭುತ್ವದ ಪ್ರಭು ಮೇಲೆ ವಿಪರೀತ ಸಿಟ್ಟಿಗೊಳಗಾದರು. ಅವರಿಗೆ ವೇತನ ಸರಿಯಾಗಿ ಸಿಗುತ್ತಿರಲ್ಲಿಲ್ಲ. ಅಲ್ಲಿಂದ ಶುರುವಾಗಿ ಮೇಲು ಕೀಳೆಂಬ ವಿಷಯಕ್ಕೆ ದೊಡ್ಡ ಗಲಾಟೆಯೇ ಆಯಿತು. ಪ್ರಜೆಗಳು ಪ್ರಭುಗಳನ್ನ ಹತ್ಯೆ ಮಾಡೋಡು, ಪ್ರಭುಗಳು ಗೋಲಿಬಾರ್ ಮಾಡೋದು ಅತಿ ಸಾಮಾನ್ಯವಾಗಿತ್ತು. ರಸ್ತೆಯಲ್ಲಿ ಹೊಡೆದು ಸಾಯಿಸುವುದು, ಹೆಣ್ಣುಮಕ್ಕಳನ್ನ ಕಂಡಲ್ಲಿ ಅತ್ಯಾಚಾರ ಮಾಡೋದು, ಕರಿ ಬಿಳಿ ಎಂದು ಗಲಾಟೆ ಮಾಡೋದು ಬಹಳ ಸಾಮಾನ್ಯವಾಯಿತು. ಇದಕ್ಕೇ ಕಾಯುತ್ತಿದ್ದ ಸ್ಪೇನಿನವರು ಪ್ರಿಮೋ ದಿ ರವೆರಾ ಎಂಬ ಸರ್ವಾಧಿಕಾರಿಯನ್ನ ಈ ಪ್ರದೇಶದ ಶಾಂತಿ ಸುವ್ಯವಸ್ಥೆ ಕಾಪಾಡುವದಕ್ಕೆ ಕಳಿಸಿದರು.

ಅವನು ಅಲ್ಲಿ ಶಾಂತಿ, ಸುವ್ಯವಸ್ಥೆ ಅಲ್ಲ, ಪ್ರಜಾಪ್ರಭುತ್ವವನ್ನ ಇಳಿಸಿ ತನ್ನ ಸರ್ವಾಧಿಕಾರಿವನ್ನ ಚಲಾಯಿಸುವಲ್ಲಿ ಇವರ ಪ್ರಜಾಪ್ರಭುತ್ವದ ಹೋರಾಟ ಬಿತ್ತು… ” ಎಂದು ಕಣ್ಣೀರಾಗಿ ಕಥೆ ಹೇಳಿದಳು.

ಪೂಂಗೋಡಿ ಮತ್ತು ಜಯವರ್ಧನೆ, ಒಟ್ಟಾಗಿ, “ಇದು ನಮ್ಮ ಕಥೆಯೂ ಸಹ… ಸರ್ವಾಧಿಕಾರ ವ್ಯಾಪಿಸಿದೆ…” ಎಂದರು..

“ಯಾರು” ಎಂದು ಕೇಳಿದಳು ಹುಡುಗಿ… “ಚೈನಾ” ಎಂದು ನಿಟ್ಟುಸಿರು ಬಿಟ್ಟರು.

‍ಲೇಖಕರು avadhi

January 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: