ಎಂ.ಸಿ.ಎಂ. ಮೇಷ್ಟ್ರು ಇನ್ನಿಲ್ಲ

ಗಿರಿಜಾ ಶಾಸ್ತ್ರಿ

ಎಂ.ಸಿ.ಎಂ. ಮೇಷ್ಟ್ರು ಎಂದರೆ ಕಣ್ಣ ಮುಂದೆ ಬರುವುದು, ಇಸ್ತ್ರಿ ಹಾಕಿದ ಗರಿ ಗರಿ ಪ್ಯಾಂಟು, ತುಂಬುತೋಳಿನ ಶರಟು ಹಾಕಿಕೊಂಡು, ಕನ್ನಡ ವಿಭಾಗದ ಕಾರಿಡಾರಿನಲ್ಲಿ ಗುಡು ಗುಡು ಓಡುವಂತೆ ನಡೆದು ಬರುವ ದೃಶ್ಯ. ವಿಭಾಗದ ಒಂದು ಮೂಲೆಯಲ್ಲಿದ್ದ ಆ ಕೋಣೆಯಿಂದ ಅವರು ಹೊರಬಂದರೆಂದರೆ ಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ನಾವೆಲ್ಲಾ ತರಗತಿಯೊಳಗೆ ಲಗುಬಗೆಯಿಂದ ತೂರಿಕೊಳ್ಳುತ್ತಿದ್ದೆವು. ಒಳಗೆ ಬಂದವರೇ ಬೋರ್ಡು ಒರೆಸಿ

ಅನಾಥೆ ಇವಳೊಬ್ಬಳೀ
ಜನ್ಮ ರೋಸಿ ವೇದೆಯನು
ತಾಳದೆಯೇ ಹಾರಿದಳು ಹೊಳಗೆ

“ದುಃಖಸೇತು” ಎನ್ನುವ ಬಿ. ಎಂ. ಶ್ರೀ ಯವರ ಯಾವುದೋ ಇಂಗ್ಲಿಷ್ ಕವಿಯ ಹಾಡು. “ನಾಥೆ ನಾಥೆೆ” ಎಂದು ಒತ್ತಿ ಒತ್ತಿ ಹೇಳುತ್ತಿದ್ದರು. ಇದನ್ನು ಯಾಕೆ ಹೇಳುತ್ತಿದ್ದರು ಎನ್ನುವುದೆಲ್ಲ ಮರೆತು ಹೋಗಿದೆ. ಬಹುಶಃ ಮೊದಲ ಅಕ್ಷರ ‘ಅ’ದ ಮೇಲೆ ಒತ್ತು ಬೀಳದೆ ‘ನಾ ‘ ಮೇಲೆ ಬೀಳುತ್ತಿದ್ದ ವಿಶೇಷವನ್ನು ಹೇಳಲು ಇದನ್ನು ಉದಹರಿಸುತ್ತಿದ್ದರು. ವ್ಯಾಕರಣದ ಯಾವ ವಿಚಾರವೋ ಎಲ್ಲ ಮರೆತು ಹೋಗಿದೆ ಆದರೆ ಮೇಷ್ಟ್ರು ಕೊಡುತ್ತಿದ್ದ ಉದಾಹರಣೆಗಳು ಮಾತ್ರ ಕಿವಿಯಲ್ಲಿ ಇನ್ನೂ ಗುಂಯ್ಗುಡುತ್ತಿದೆ.

ಸ್ರಗ್ದರೆ, ಮಹಾ ಸ್ರಗ್ಧರೆ, ಗಾಯತ್ರಿ , ಅನುಷ್ಟುಪ್, ಚಂಪಕಮಾಲಾವೃತ್ತ. ಅಂಶ ಛಂದಸ್ಸು, ಅಂಶ ಗಣ, ಏಳೆ, ತ್ರಿಪದಿ, ರಗಟಾ ಬಂಧ (ರಗಳೆ) ಕನ್ನಡ ಛಂದಸ್ಸು, ಸಂಸ್ಕೃತ ಛಂದಸ್ಸು, ಅಬ್ಬಬ್ಬಾ! ಈ ಎಲ್ಲವೂ ಕೇವಲ ನಾಮ ಮಾತ್ರವಾಗಿ ಉಳಿದುಕೊಂಡಿರುವುದು ಎಂ.ಸಿ. ಎಂ. ಮೇಷ್ಟ್ರು ಇನ್ನಿಲ್ಲವಾದ ಈ ಹೊತ್ತಿನಲ್ಲಿ ನೆನಪಿಗೆ ಬರುತ್ತಿದೆ. ವ್ಯಾಕರಣ ಮರೆತಿರಬಹುದು ಆದರೆ ಅದರ ಮೂಲಕ ಮೇಷ್ಟ್ರು ಕಲಿಸಿದ ಸಂಸ್ಕಾರ ಮಾತ್ರ ಇನ್ನೂ ಅಚ್ಚಳಿಯದೇ ಉಳಿದಿದೆ.

“ಸುಗ್ಗಿ ಬರೆ ಹಿಗ್ಗಿ ತಿರೆ
ಸಗ್ಗ ಸುಖವ ತರುತಿದೆ” ಎನ್ನುತ್ತಾ ಮೇಷ್ಟರು ಅಕ್ಷರಶಃ ಕುಣಿಯುತ್ತಿದ್ದರು. ಯಥಾ ಪ್ರಕಾರ ಈ ಸಾಲುಗಳೂ ವ್ಯಾಕರಣದ ಯಾವ ಗುಣವಿಶೇಷಗಳೋ?!

ಒಮ್ಮೆ ಅಂಶಗಣದ ಮೇಲೆ ಪ್ರಬಂಧ ಬರೆದುಕೊಂಡು ಬರಲು ಹೇಳಿದ್ದರು. ಕನ್ನಡ ಐಚ್ಛಿಕವಾಗಿ ಓದಿಕೊಂಡು ಬಂದವರಿಗಾದರೂ ಏನಾದರೂ ಬರೆಯಲು ಸಾಧ್ಯವಾಗಿತ್ತೇನೋ, ದ್ವೀತೀಯ ಭಾಷೆ ಕನ್ನಡವನ್ನು ಓದಿಕೊಂಡು ಎಂ.ಎ ಮಾಡಲು ಹೋದ ನನ್ನಂತಹವಳಿಗೆ ಇದರ ಓ ಠೋ ಗೊತ್ತಿಲ್ಲದೇ ಅವರು ಕ್ಲಾಸಿನಲ್ಲಿ ಹೇಳಿದ ಅಂಶಗಳನ್ನೇ ಮಕ್ಕಿಕಾಮಕ್ಕಿ ಬರೆದುಕೊಂಡು ಹೋಗಿದ್ದಕ್ಕೆ ನಪಾಸಂತೂ ಮಾಡಿರಲಿಲ್ಲ.

ಬಹಳ ವರ್ಷಗಳ ಮೇಲೆ ಅಕ್ಕ ಮಹಾದೇವಿಯ ಸಾಕ್ಷ್ಯ ಚಿತ್ರದ ಕುರಿತಾಗಿ ಅವರನ್ನು ಸಂದರ್ಶನ ಮಾಡಲು ಅವರ ಮನೆಗೆ ಹೋದಾಗ ‘ಮಗನನ್ನು ಯಾಕೆ ಕರೆದುಕೊಂಡು ಬರಲಿಲ್ಲ?’ ಎಂದು ಆಕ್ಷೇಪಣೆ ಮಾಡಿದ್ದರು.ಸಾಕ್ಷ್ಯ ಚಿತ್ರದ ಕುರಿತು ಕೇಳಿ ಮೆಚ್ಚುಗೆ ವ್ಯಕ್ತ ಪಡಿಸಿ ಬೆನ್ನು ತಟ್ಟಿದ್ದರು.

ಇಂತಹ ಮೇಷ್ಟ್ರು ಕನ್ನಡ ಚಳವಳಿಗೆ ಇಳಿದದ್ದು ನಮಗೆಲ್ಲಾ ಬೇಸರದ ಸಂಗತಿಯಾಗಿತ್ತು. ಲಿಡೋ ಟಾಕೀಸಿನ ಟಿಕೆಟ್ ಕೊಡುವವ ಇವರು ಕನ್ನಡದಲ್ಲಿ ಪ್ರಶ್ನೆ ಕೇಳಿದರೆಂದು ಸರಿಯಾಗಿ ಉತ್ತರಿಸಲಿಲ್ಲ ಎನ್ನುವ ಕಾರಣಕ್ಕೆ ದೊಡ್ಡ ಗಲಾಟೆ ಎಬ್ಬಿಸಿದ್ದರು.

ಹಂಪಿಯಲ್ಲಿ ಜಲಪ್ರವೇಶಮಾಡುವ ಇವರ ಹುಚ್ಚಿನಿಂದಾಗಿ ನಮಗೆಲ್ಲಾ ಭಯವಾಗಿತ್ತು. “ನೀವು ಯಾಕೆ ಸರ್ ಇದೆಲ್ಲಾ ಮಾಡಬೇಕು” ಎಂದು ಕೇಳಿದ್ದಕ್ಕೆ ಜನಕ್ಕೆ ಗೊತ್ತಾಗಬೇಕು. ‘ಸಾಮಾನ್ಯರು ಮಾಡಿದರೆ ಯಾರೂ ಅದಕ್ಕೆ ಮಹತ್ವ ಕೊಡುವುದಿಲ್ಲ’ ಎಂದಿದ್ದರು, ಬಹಳ ಶಿಸ್ತಿನ ಆದರೆ ಅಷ್ಟೇ ಅಂತಃಕರಣದ ಮೇಷ್ಟ್ರು . ನಮಗೆ ಅವರ ಬಳಿ ಸಲುಗೆಯೂ ಇತ್ತು. ಜಿ.ಎಸ್.ಎಸ್. ಅವರಿಗೆ ಹೇಳಬೇಕಾದುದನ್ನು ಅವರ ಮೇಲಿನ ಹೆದರಿಕೆಯಿಂದ ನಾವು ಇವರಿಗೆ ಹೇಳಿಕೊಳ್ಳುತ್ತಿದ್ದವು. ಇವರು ಅದನ್ನು ಜಿ.ಎಸ್.ಎಸ್. ಅವರಿಗೆ ತಲಪಿಸುತ್ತಿದ್ದರು.

ಒಮ್ಮೆ ಒಬ್ಬ ಮೇಷ್ಟ್ರರ (ಪ್ರಸಿದ್ಧ ಸಾಹಿತಿ) ವಿರುದ್ಧ ಕಂಪ್ಲೇಂಟನ್ನು ಇವರ ಬಳಿಗೆ ತೆಗೆದುಕೊಂಡು ಹೋಗಿದ್ದೆವು. ಆಗ ನಮಗೆ ಸಮಾಧಾನಮಾಡಿ ಕಳುಹಿಸಿದ್ದರು.

ಮೇ಼ಷ್ಟ್ರು ಬದುಕಿದ್ದಾಗ ಮಾಮೂಲಾಗಿದ್ದ ಈ ಸಂಗತಿಗಳು ಅವರಿಲ್ಲದ ಈ ಹೊತ್ತಿನಲ್ಲಿ ನೆನಪಿನಾಳದಿಂದ ವಿಶೇ಼ಷವಾಗಿ ಹೊರಬರುತ್ತಿವೆ. ವಿಭಾಗದಿಂದ ಬೀಳ್ಕೊಂಡು ಹೊರಬರುವಾಗ ‘ನೀವೇನು ದೊಡ್ಡ ಸಾಹಿತಿಗಳೇ ಆಗ ಬೇಕಿಲ್ಲ, ಒಳ್ಳೆ ಮನುಷ್ಯರಾದರೆ ಸಾಕು’ ಎಂದು ಜಿ.ಎಸ್.ಎಸ್. ಅವರು ಹಾರೈಸಿದ್ದರು.

ಇಂತಹ ಗುರುಗಳ ನೆನಪು ಮಾಸದೇ ನಲವತ್ತು ವರುಷಗಳ ಆಚೆಗೂ ಉಳಿದಿದೆಯೆಂದರೆ, ಅಲ್ಲಿ ಇಂತಹ ಗುರುಗಳಿಂದ ಕಲಿತ ಮಾನವೀಯ ಮೌಲ್ಯಗಳ ಪಾಠಗಳೇ ಆಗಿವೆ.

‍ಲೇಖಕರು sreejavn

January 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಗುರುವಿಗೊಂದು ಸುಂದರ ನುಡಿನಮನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: