ಇದು ‘ಆದಿಮರ ಬೇಗುದಿ’

ಪ್ರೊ ಹೆಚ್ ಆರ್ ಸ್ವಾಮಿ ಅವರು ವೈಜ್ಞಾನಿಕ ಮನೋಭಾವವನ್ನು ಬಿತ್ತುವ ಆಂದೋಲನದಲ್ಲಿ ತೊಡಗಿಸಿಕೊಂಡವರು. ಪ್ರಾಂಶುಪಾಲರು.

ಇವರು ಕೊರಚ ಜನಾಂಗದ ಬಗ್ಗೆ ನಡೆಸಿದ ಅಧ್ಯಯನ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

ಈ ಕೃತಿಗೆ ಅಗ್ರಹಾರ ಕೃಷ್ಣಮೂರ್ತಿ ಅವರು ಬರೆದ ಮುನ್ನುಡಿ ಇಲ್ಲಿದೆ- 

ಅಗ್ರಹಾರ ಕೃಷ್ಣಮೂರ್ತಿ

ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ವರ್ಣಾಶ್ರಮ ಮತ್ತು ಜಾತಿ ಪದ್ಧತಿಯ ಯಾವ ಗೋಜೂ ಇಲ್ಲದ ನೂರಾರು ವಿಭಿನ್ನ ಜನಸಮುದಾಯಗಳು ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿವೆ. ಈ ಸಮುದಾಯಗಳನ್ನು ನಾವು ಬುಡಕಟ್ಟು ಜನಾಂಗ, ಆದಿವಾಸಿ ಅಥವಾ ಗಿರಿಜನರು ಎಂದು ಗುರುತಿಸುವುದುಂಟು. ಇವು ಅಸ್ತಿತ್ವದಲ್ಲಿವೆ ಎಂದು ಹೇಳುವುದಕ್ಕಿಂತ ಇದ್ದವು ಎಂದು ಹೇಳುವುದೇ ಇವತ್ತಿಗೆ ಹೆಚ್ಚು ಸೂಕ್ತವಾದೀತು. ಯಾಕೆಂದರೆ, ಮಹಾ ಸಂಪ್ರದಾಯಗಳ (Great Tradition) ನಡುವೆ ಕಿರು ಸಂಪ್ರದಾಯಗಳು (Little tradition) ತಮ್ಮ ಮೂಲ ಲಕ್ಷಣಗಳನ್ನು ರಕ್ಷಿಸಿಕೊಂಡು ಬದುಕುಳಿಯುವುದು ಅಸಾಧ್ಯವೆನಿಸಿಬಿಟ್ಟಿರುವ ಕಾಲಘಟ್ಟ ಇದು. ಅಂತಹ ದಾಳಿಯನ್ನು ಎದುರಿಸುತ್ತಿರುವ ಕೊರಚ ಎಂಬ ಒಂದು ಜನಾಂಗ ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿದೆ. ನೆರೆ ರಾಜ್ಯಗಳಲ್ಲಿ ಅದನ್ನು ಬೇರೆಬೇರೆ ಹೆಸರಿನಿಂದ ಗುರುತಿಸಲಾಗುತ್ತದೆ. ಈ ಸಮುದಾಯದ ಬಗೆಗಿನ ತಮ್ಮ ಅಧ್ಯಯನದ ಹಲವು ಸಂಗತಿಗಳನ್ನು ಪ್ರೊ. ಹೆಚ್ ಆರ್ ಸ್ವಾಮಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ನಮ್ಮ ದೇಶದಲ್ಲಿ ಜನಾಂಗೀಯ ಆಸಕ್ತಿ ಹಾಗೂ ಅಧ್ಯಯನಗಳು ಮೊದಲಾದದ್ದು ಬಹುತೇಕ ವಸಾಹತುಶಾಹಿ ಕಾಲಿಟ್ಟ ನಂತರವೇ ಎನ್ನಬಹುದು; ಜಗತ್ತಿನಾದ್ಯಂತ ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನೋವಿಜ್ಞಾನ ಮುಂತಾದ ಆಧುನಿಕ ಅಧ್ಯಯನ ಶಿಸ್ತುಗಳು ಗರಿಗೆದರಿದ ಕಾಲಘಟ್ಟದಲ್ಲಿ. ಅದರಲ್ಲೂ ಮುಖ್ಯವಾಗಿ ಪೌರಾತ್ಯ ಸಂಸ್ಕೃತಿ, ತತ್ವಶಾಸ್ತ್ರ, ಭಾಷೆ ಇತ್ಯಾದಿಗಳ ಬಗ್ಗೆ ಬೇರೆ ಬೇರೆ ಕಾರಣಕ್ಕಾಗಿ ಒಲವು ಬೆಳೆಸಿಕೊಂಡಿದ್ದ, ಮುಂದಿನ ದಿನಗಳಲ್ಲಿ orientalist ಎಂದು ಕರೆಸಿಕೊಂಡ ಪಾಶ್ಚಾತ್ಯ ವಿದ್ವಾಂಸರಿಗೆ ಭಾರತ ಒಂದು ಆಡೊಂಬೊಲವಾಗಿತ್ತು. ದಕ್ಷಿಣ ಭಾರತದ ಮಟ್ಟಿಗೆ ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿಯೇ Edgar Thurston ಎಂಬ ಮಾನವಶಾಸ್ತ್ರಜ್ಞನ ನೇತೃತ್ವದಲ್ಲಿ, ಹಲವು ಸಂಪುಟಗಳಲ್ಲಿ ಪ್ರಕಟಗೊಂಡ ‘Caste and Tribes of southern India’ ಎಂಬ ಗ್ರಂಥ ಅನನ್ಯವಾದುದು. ಸುಮಾರು ಎರಡು ಶತಮಾನ ಕಳೆದರೂ ಈ ಗ್ರಂಥ ಬಹುಪಯೋಗಿಯಾಗಿ ಈಗಲೂ ನಮ್ಮ ನಡುವೆ ಇದೆ. ಆನಂತರ ಭಾರತೀಯರನ್ನೂ ಒಳಗೊಂಡಂತೆ ಅನೇಕ ವಿದ್ವಾಂಸರು ಈ ನಿಟ್ಟಿನಲ್ಲಿ ಕೆಲಸಮಾಡಿ ತಮ್ಮ ತಮ್ಮ ಪರಿಧಿಗೆ ಸಿಕ್ಕ ಮಾಹಿತಿಗಳನ್ನು ಪ್ರಕಟಣೆಗಳ ಮೂಲಕ ದಾಖಲಿಸಿದ್ದಾರೆ.

ಪ್ರೊ. ಹೆಚ್ ಆರ್ ಸ್ವಾಮಿ ಮೇಲಿನ ಎಲ್ಲ ಆಕರಗಳನ್ನು ಪರಿಶೀಲಿಸಿ ತಮ್ಮ ಕಂಡರಿಕೆಗಳನ್ನು ಪ್ರಸ್ತುತಗೊಳಿಸಿರುವುದು ಈ ಕೃತಿಗೊಂದು ಸೊಗಸನ್ನು ತಂದುಕೊಟ್ಟಿದೆ. ಎಲ್ಲ ಹಂತದಲ್ಲಿಯೂ ವಸ್ತುನಿಷ್ಠತೆಯನ್ನು ಕಾಯ್ದುಕೊಂಡು, ಪೂರ್ವಾಗ್ರಹರಹಿತರಾಗಿ ಈ ಅಧ್ಯಯನವನ್ನು ಕೈಗೊಂಡಿದ್ದಾರೆ. ಈ ಮಾತನ್ನು ಒತ್ತಿ ಹೇಳಬೇಕಾದ ಅಗತ್ಯವೂ ಇದೆ, ಯಾಕೆಂದರೆ ಅವರು ಈ ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಜಗತ್ತಿನ ಯಾವುದೇ ಆದಿವಾಸಿ ಸಮುದಾಯವನ್ನು ಇಂದು ಅಧ್ಯಯನ ಮಾಡುವಾಗ ಎದುರಾಗುವ ದೊಡ್ಡ ಸಮಸ್ಯೆಯೆಂದರೆ, ಈಗ ಅವು ತಮ್ಮ ಆದಿಮ ಲಕ್ಷಣಗಳನ್ನು ಕಳೆದುಕೊಂಡು ಮೂಲಸ್ವರೂಪದಲ್ಲಿ ಇಲ್ಲದಿರುವುದು. ಆಧುನಿಕತೆಯ ವಿಸ್ತರಣೆ ಮತ್ತು ಪ್ರಭಾವದಿಂದಾಗಿ ಜಗತ್ತಿನ ಎಲ್ಲಕಡೆ ಬುಡಕಟ್ಟುಗಳು ತತ್ತರಿಸಿದವು. ಜನ ಕ್ರಮಕ್ರಮೇಣ ತಮ್ಮ ಪರಂಪರಾಗತ ನೆಲೆಗಳನ್ನು ತೊರೆದು ಅನಿವಾರ್ಯವಾಗಿ ಅಲೆಮಾರಿಗಳಾಗಿಯೂ, ಅನ್ಯ ಪ್ರದೇಶಗಳಲ್ಲಿ ಪರದೇಶಿಗಳಾಗಿಯೂ ದಿಕ್ಕು ಕಾಣದಾದರು. ಅವರ ದೈನಂದಿನ ಎಲ್ಲವೂ ತಲೆಕೆಳಗಾದವು. ಊಟ, ವಸತಿ, ಕಸುಬು, ಭಾಷೆ, ಕುಲಾಡಳಿತ ಕಟ್ಟುಪಾಡುಗಳು, ನಡಾವಳಿ, ಒಟ್ಟು ಜೀವನಪದ್ಧತಿಯೇ ಅಯೋಮಯಗೊಳ್ಳುತ್ತದೆ. ಅವರ ಜಗತ್ತು ಕಳೆದುಹೋಗುತ್ತದೆ, ಮತ್ತೆ ಅವರ ಬದುಕಿಗೊಂದು ಲಯ ಸಿಗಬೇಕಾದರೆ ಏಳೇಳು ಕೆರೆಯ ನೀರು ಕುಡಿಯಬೇಕಾಗುತ್ತದೆ. ಏಳು ಸಮುದ್ರಗಳನ್ನೂ ದಾಟಬೇಕಾಗುತ್ತದೆ. ಅದೆಲ್ಲ ಒಂದೆರಡು ದಶಕಗಳಲ್ಲಿ ಮುಗಿಯುವ ಕತೆಯಲ್ಲ. ತಲೆ ತಲೆಮಾರುಗಳೇ ಕಾಣೆಯಾಗುತ್ತವೆ.

ಕರ್ನಾಟಕದಲ್ಲೂ ಕಂಡುಬರುವ ನೀಗ್ರೋ, ಸಿದ್ದಿಗಳೂ, ಜಗತ್ತಿನ ಹಲವೆಡೆ ಹರಡಿರುವ ಲಂಬಾಣಿ, ಜಿಪ್ಸಿಗಳೂ, ಹಿಮಾಲಯಗಳ ತಪ್ಪಲಲ್ಲೂ, ಸಾಗರಗಳ ನಡುವಿನ ನಡುಗಡ್ಡೆಗಳಲ್ಲೂ, ಜಗತ್ತಿನ ಎಲ್ಲ ಊರುಕೇರಿ, ಪಟ್ಟಣ, ನಗರ ನಗರಿಗಳಲ್ಲೂ ತಮ್ಮ ಬದುಕಿನ ಹೊಸ ಲಯಗಳನ್ನು ಅರಸುತ್ತಾ ಮುಖ್ಯಧಾರೆಯಲ್ಲಿ ಕರಗುವ ಹಂತ ತಲುಪುತ್ತಾರೆ. ತಮ್ಮ ಅಸ್ಮಿತೆಯನ್ನುಳಿಸಿಕೊಳ್ಳಲು ಹೆಣಗುತ್ತಾರೆ. ಅನಿವಾರ್ಯವಾಗಿಯಾದರೂ ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿಯುವ ಇದೆಲ್ಲ ಸರಿಯೇ. ಆಧುನಿಕತೆಯಲ್ಲಿ ಹೊಸ ಉದ್ಯೋಗಕ್ಕೆ ಹೊಂದಿಕೊಳ್ಳುತ್ತಾ, ಹೊಸ ದಿರಿಸಿಗೆ ಮೈಯೊಡ್ಡುತ್ತಾ, ಹೊಸ ರುಚಿಗೆ ನಾಲಗೆಯನ್ನು ಒಗ್ಗಿಸಿಕೊಳ್ಳುತ್ತಾ, ತಮ್ಮ ಭಾಷೆಯನ್ನು ಹೊಸ ಭಾಷೆಯೊಂದಿಗೆ ಹೊಸೆಯುತ್ತಾ, ಹೊಸ ಸಂಗೀತಕ್ಕೆ ದನಿಗೂಡಿಸುತ್ತಾ, ಹೊಸ ಕುಣಿತಕ್ಕೆ ಹೆಜ್ಜೆಯಾಕುತ್ತಾ ಹೇಗೋ ಕಷ್ಟವೋ ಸುಖವೋ ದಿನ ತಳ್ಳಿಬಿಡಬಹುದು. ತಮ್ಮ ಮೂಲ ನಡಾವಳಿಗಳನ್ನು ಸುಪ್ತಪ್ರಜ್ಞೆಗೆ ಸರಿಸಿ ತಾವು ಬಂದು ಸೇರಿದ ಹೊಸ ಜಾಗದಲ್ಲಿರುವ ಧರ್ಮದ ಕಟ್ಟುಪಾಡುಗಳಿಗೂ ಒಳಗಾಗಿ ನೆಮ್ಮದಿ ಅರಸಬಹುದು. ಆಧುನಿಕತೆ, ಕೈಗಾರಿಕಾ ಕ್ರಾಂತಿಯ ನಂತರ ಜಗತ್ತಿನಾದ್ಯಂತ ನಡೆದ ಆದಿವಾಸಿ ಸಂಕ್ರಮಣಗಳ ಕಥೆ ದಾರುಣವೂ, ಕುತೂಹಲದಾಯಕವೂ, ರೋಚಕವೂ ಆಗಿದೆ.

ಆದರೆ ಈ ಮಾತನ್ನು ಭಾರತದ ಮಟ್ಟಿಗೆ ಆಡಲಾಗುವುದಿಲ್ಲ. ಜಗತ್ತಿನ ಇತರ ನಾಗರಿಕತೆ, ಸಾಮಾಜಿಕ ವ್ಯವಸ್ಥೆಯಂತೆ ಇಲ್ಲಿನ ಪರಿಸ್ಥಿತಿಯಿಲ್ಲ. ಹಲವಾರು ಕಾರಣಗಳಿಗಾಗಿ ನೆಲೆ ಕಳೆದುಕೊಳ್ಳುವ ಇಲ್ಲಿನ ಗುಡ್ಡಗಾಡು ಸಮುದಾಯಗಳು ಭಾರತೇತರ ದೇಶಗಳಲ್ಲಿನ ಜನಾಂಗಗಳು ದಾಟಿಕೊಳ್ಳುವಷ್ಟು ಸರಳೀತವಾಗಿ ದಾಟಿಕೊಳ್ಳಲಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಪ್ರಾರಂಭದಲ್ಲೇ ಸೂಚಿಸಿದ ಭಾರತೀಯ ವರ್ಣಾಶ್ರಮ ಮತ್ತು ಜಾತಿಪದ್ಧತಿಯ ವಿಕಟ ಸ್ವರೂಪ. ಅದೊಂದು ಬಲಿಷ್ಠ ತಡೆಗೋಡೆಯಂತೆ ಅಡ್ಡ ನಿಂತಿದೆ. ನೆಲೆ ಕಳೆದುಕೊಂಡ ಜನಾಂಗಗಳು ತಮ್ಮ ಸಂಕ್ರಮಣಾವಸ್ಥೆಯನ್ನು ದಾಟಿ ‘ನಾಗರೀಕತೆ’ ಮತ್ತು ಅಭಿವೃದ್ಧಿ ಪಥದೆಡೆಗೆ ಸಾಗುವಲ್ಲಿ ಉಸಿರುಕಟ್ಟಿ ನರಳುತ್ತವೆ. ಶ್ರೇಣೀಕರಣ ವ್ಯವಸ್ಥೆಯಲ್ಲಿ ಯಾವ ಮೆಟ್ಟಲಿಗೆ ಸಲ್ಲುತ್ತೇವೆಂಬುದೂ, ಎಲ್ಲಿಗೆ ಸೇರಿಸಲಾಗುತ್ತದೆಂಬುದೂ ನಿರ್ಧಾರವಾಗದೆ ಈಗಾಗಲೇ ಇರುವ ಸಕಲೆಂಟು ಜಾತಿಗಳಲ್ಲಿ ಇವೂ ಒಂದೊಂದು ಪ್ರತ್ಯೇಕ ಜಾತಿಗಳಾಗಿ ನೀರು ನೆರಳಿಲ್ಲದೆ ಅಲೆಯುತ್ತವೆ. ವ್ಯವಸ್ಥೆ ಇವುಗಳೊಡನೆ ‘ಉದ್ಧಾರ’ ಮತ್ತು ಸುಧಾರಣೆಯ ಸೋಗು ಪ್ರಕಟಪಡಿಸುತ್ತದೆ.

ಪ್ರೊ. ಸ್ವಾಮಿ ಅವರ ಅಧ್ಯಯನ ಈ ಮಾತುಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ.

ಸ್ವಾತಂತ್ಯ್ರಪೂರ್ವ ಮತ್ತು ಆನಂತರದ ಕಾಲಘಟ್ಟದಲ್ಲಿ ಗುಡ್ಡಗಾಡು ಜನಾಂಗಗಳ ಬಗ್ಗೆ ಕಾಳಜಿವಹಿಸಿದ ಸುಧಾರಕರು, ಸಮಾಜಶಾಸ್ತ್ರಜ್ಞರು ಮತ್ತು ಮಾನವಶಾಸ್ತ್ರಜ್ಞರು ಅಧ್ಯಯನ, ಜಾನಪದ ಸಂಗ್ರಹ, ಗಿರಿಜನ ಕಲೆ, ಕುಶಲ ಕಲೆಯ ರಕ್ಷಣೆ, ಪ್ರೋತ್ಸಾಹ ಇತ್ಯಾದಿ ಹಲವು ಉದ್ದೇಶಗಳೊಂದಿಗೆ ಇಂಥ ಜನಾಂಗಗಳ ಜೊತೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಂಥವರ ನಡುವೆ ಇದ್ದ ಒಂದು ಭಿನ್ನಾಭಿಪ್ರಾಯವನ್ನು ವೆರಿಯರ್ ಎಲ್ವಿನ್ ಅವರ ಅನುಭವದ ಮೂಲಕ ಉದಾಹರಿಸಬಹುದೆನಿಸುತ್ತದೆ. ಎಲ್ವಿನ್ ಮಧ್ಯಪ್ರದೇಶದ ಗೊಂಡ ಮುಂತಾದ ಆದಿವಾಸಿ ಸಮುದಾಯಗಳ ನಡುವೆ ಕೆಲಸ ಮಾಡುತ್ತಿದ್ದಾಗ ಒಂದು ಅಭಿಪ್ರಾಯ ತಳೆದಿದ್ದರು. ಕಾಡುಮೇಡುಗಳಲ್ಲಿ ಸ್ವಚ್ಛಂದವಾಗಿ ಬದುಕುವ ಇಂಥ ಜನಾಂಗಗಳ ಬದುಕನ್ನು ಹೊರಗಿನ ಪ್ರಭಾವಗಳು ಯಾವುದೇ ರೀತಿಯಲ್ಲಿ ಕದಡಿ ವಿಚಲಿತಗೊಳಿಸಬಾರದು. ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಕೆಂದು ಪ್ರತಿಪಾದಿಸುತ್ತಿದ್ದರು.

ಆದರೆ ಇಂಥ ಜನಾಂಗಗಳನ್ನು ಸುಧಾರಣೆಯೆಡೆಗೆ, ಅಭಿವೃದ್ಧಿಪಥಕ್ಕೆ, ಮುಖ್ಯಧಾರೆಗೆ ತರುವ ಪ್ರಯತ್ನ ಮಾಡುವ ಅಗತ್ಯವಿದೆ ಎಂದು ವಾದಿಸುತ್ತಿದ್ದವರು ಎಲ್ವಿನ್ ಅವರನ್ನು ಕಟುವಾಗಿ ಟೀಕಿಸಿದರು. ಎಲ್ವಿನ್ ಗಾಂಧೀಜಿಯವರಿಗೆ ಹತ್ತಿರದವರಾಗಿದ್ದರಿಂದ ಅವರ ಬಳಿಗೂ ಸುಧಾರಣವಾದಿ ಸಮಾಜಶಾಸ್ತ್ರಜ್ಞರು ಈ ವಿಚಾರವನ್ನು ಕೊಂಡೊಯ್ದು ಚರ್ಚಿಸಿದ್ದುಂಟು ಎಂದು ಓದಿದ ನೆನಪು. ಮುಂದೆ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಲಭಿಸಿದ ನಂತರ ನೆಹರೂ ಎಲ್ವಿನ್ ಅವರನ್ನು ಭಾರತದ ಈಶಾನ್ಯ ಪ್ರದೇಶದ ಗುಡ್ಡಗಾಡು ರಾಜ್ಯಗಳಿಗೆ ಅಲ್ಲಿನ ನಿವಾಸಿಗಳ ಸ್ಥಿತಿಗಳನ್ನು ತಿಳಿಯಲು ನಿಯುಕ್ತಿ ಮಾಡುತ್ತಾರೆ.

ಈಗ ಎಂಟು ರಾಜ್ಯಗಳಾಗಿ ಹರಡಿಕೊಂಡಿರುವ ಈಶಾನ್ಯ ಭಾರತ ಆಗ ‘ನೀಫಾ’ (NIFA) ಎಂದು ಗುರುತಿಸಲ್ಪಡುತ್ತಿದ್ದ ವಿಸ್ತಾರ, ದುರ್ಗಮ, ಸುಂದರ ಗುಡ್ಡಗಾಡು ವಲಯ. ಅಲ್ಲಲ್ಲಿ ಕೆಲವು ಮಿಷನರಿಗಳು ಕ್ರಿಸ್ತ ಧರ್ಮವನ್ನು ಬಿತ್ತುತ್ತಿದ್ದರು. ಆದರೆ ಅಲ್ಲಿದ್ದ ವೈವಿಧ್ಯಮಯ ಜೀವನ ವಿಧಾನ, ಅಸಂಖ್ಯಾತ ಭಾಷೆ, ಉಪಭಾಷೆಗಳು ಇಡೀ ಭೂಪ್ರದೇಶವನ್ನೇ ಮುಖ್ಯ ಭಾರತದಿಂದ ಪ್ರತ್ಯೇಕಗೊಳಿಸಿದ್ದವು. ಅವರಿಗೆ ಹೊರ ಜಗತ್ತಿನ ಸಂಪರ್ಕವೇ ಇರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದೂ ತಿಳಿದಿದ್ದಿಲ್ಲ. ಎಲ್ವಿನ್ ಅವರ ನಡುವೆ ಬದುಕಿ ಅವರನ್ನು ಅಧ್ಯಯನ ಮಾಡುತ್ತಾ ಇದ್ದ ಕಾಲದಲ್ಲಿ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳತೊಡಗಿದರು. ಆ ಗುಡ್ಡಗಾಡು ಜನಸಮುದಾಯಗಳನ್ನು ಭಾರತೀಯ ಮುಖ್ಯಧಾರೆಗೆ ತರುವ ಕೆಲಸವಾಗಬೇಕು ಮತ್ತು ಅಲ್ಲಿನ ಜನರಿಗೆ ವಿಶೇಷ ಆರ್ಥಿಕ ಸವಲತ್ತುಗಳನ್ನು ಸರ್ಕಾರ ನೀಡಬೇಕು ಎಂಬ ನಿಲುವಿಗೆ ಬಂದರು. ಮುಂದೆ ಆ ದಿಕ್ಕಿನಲ್ಲಿ ಕೈಗೊಳ್ಳಲಾದ ಆರ್ಥಿಕ ಸವಲತ್ತುಗಳು ಈಗಲೂ ಮುಂದುವರೆಯುತ್ತಿವೆ. ಅಲ್ಲಿ ಕ್ರಿಸ್ತಧರ್ಮದ ಪ್ರಭಾವವಿದ್ದರೂ ವರ್ಣಾಶ್ರಮ ಮತ್ತು ಜಾತಿ ಪದ್ಧತಿಯ ಅಡ್ಡಗೋಡೆ ಅಷ್ಟಾಗಿ ಕಂಡುಬರದಿರುವುದರಿಂದ ಗುಡ್ಡಗಾಡು ಜನಾಂಗಗಳು ಶಿಕ್ಷಣ ಮತ್ತು ಅಭಿವೃದ್ಧಿ ಪಥದಲ್ಲಿ ಯಶಸ್ಸು ಗಳಿಸುತ್ತಾ ಸಾಗಿವೆ. ಇಂಥ ಬೆಳವಣಿಗೆ ಭಾರತದ ಇತರ ಗಿರಿಜನ ಸಮುದಾಯಗಳಿಗೆ ಸಾಧ್ಯವಾಗಲಿಲ್ಲವೆಂಬುದನ್ನು ಸೂಚಿಸಲು ಈ ಉದಾಹರಣೆಗಳನ್ನು ಕೊಡಬೇಕಾಯಿತು.

ತಮ್ಮ ಮೂಲ ನೆಲೆ ಕಳೆದುಕೊಂಡ ಕೊರಚರು ಇಂದು ಉಭಯ ಸಂಕಟಗಳ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ಬದುಕು ವಿಪರ್ಯಾಸಗಳ ನಡುವೆ ತೂಗುತ್ತಿದೆ. ಪ್ರೊ. ಸ್ವಾಮಿ ಅವರ ಅಧ್ಯಯನದಲ್ಲಿ ಸಿಕ್ಕುವ ಮಾಹಿತಿಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಈ ವಿಪರ್ಯಾಸಗಳ ಸ್ವರೂಪ ತಿಳಿಯುತ್ತದೆ. ಕೊರಚರ ಸ್ತ್ರೀ ಪುರುಷಾಧಿಕ್ಯಕ್ಕೆ ಒಳಗಾಗದ, ಸಮಾನತೆಯ ನೆಲೆಯಲ್ಲಿ ಸ್ವತಂತ್ರ ನಿಲುವುಗಳನ್ನು ತೆಗೆದುಕೊಳ್ಳುವ ವಿವರಗಳು ಸಿಗುತ್ತವೆ. ಮದುವೆ, ವಿಚ್ಛೇದನ, ಮರುಮದುವೆ, ವಿಧವಾ ವಿವಾಹ, ಮೊದಲ ಮದುವೆಯಿಂದ ಪಡೆದ ಮಕ್ಕಳ ಜೊತೆಗೇ ಮರುಮದುವೆ ಮಾಡಿಕೊಳ್ಳುವುದು ಇತ್ಯಾದಿ ಗುಡ್ಡಗಾಡು ನಡಾವಳಿಗನುಗುಣವಾದ ಮತ್ತು ‘ನಾಗರೀಕ’ ಸಮಾಜ ಕಂಡು ಕೇಳರಿಯದ ಉದಾರ ಮತ್ತು ಆರೋಗ್ಯಪೂರ್ಣ ಜೀವನ ಶೈಲಿ ಕಂಡುಬರುತ್ತದೆ.

ಸ್ವಾಮಿ ಅವರು ಒದಗಿಸಿರುವ ಅಂಕಿ-ಅಂಶಗಳಲ್ಲಿ ಹಲವಾರು ಪ್ರದೇಶಗಳ ಲಿಂಗಾನುಪಾತವನ್ನು ಗಮನಿಸಿದರೆ, ಹೆಂಗಸರ ಸಂಖ್ಯಾಪ್ರಮಾಣ ಸಮಾನವಾಗಿಯೂ, ಕೆಲವೆಡೆಗಳಲ್ಲಿ ಹೆಂಗಸರ ಪ್ರಮಾಣ ಹೆಚ್ಚೇ ಇರುವುದು ತಿಳಿದುಬರುತ್ತದೆ. ಈ ಅಂಶ ಕೊರಚ ಜನಾಂಗದಲ್ಲಿ ಹೆಣ್ಣಿಗೆ ಇರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಆದರೆ ಇಂದಿನ ವಿಪರ್ಯಾಸವೆಂದರೆ, ಈ ಜನಾಂಗದ ವಿಧವೆಯರು ವಸ್ತುಗಳ ರೀತಿಯಲ್ಲಿ ಮಾರಾಟಗೊಳ್ಳುತ್ತಿದ್ದಾರೆ. ಇದು ನಾಗರಿಕ ಎನಿಸಿಕೊಳ್ಳುವ ಸಮುದಾಯಗಳ ಸಂಪರ್ಕಕ್ಕೆ ಬಂದ ನಂತರದ ಬೆಳವಣಿಗೆ. ಇದು ಅವರನ್ನು ಮುಖ್ಯಧಾರೆಗೆ ಸೇರಿಸಿಕೊಳ್ಳುವ ಲಕ್ಷಣವೇ ಎಂಬ ಪ್ರಶ್ನೆ ಏಳುತ್ತದೆ.

ಇವರ ವೃತ್ತಿಗಳಲ್ಲಿ ಕಳ್ಳತನವೂ ಒಂದಾಗಿದೆ. ಇದನ್ನು Edgar Thurston ಆದಿಯಾಗಿ ಎಲ್ಲರೂ ದಾಖಲಿಸಿದ್ದಾರೆ. ಇಲ್ಲಿ ನ್ಯಾಯ, ನೈತಿಕತೆ ಇತ್ಯಾದಿ ‘ನಾಗರಿಕ’ ಪರಿಭಾಷೆಯಲ್ಲಿ ವ್ಯಾಖ್ಯಾನ ಮಾಡುವುದನ್ನು ಸ್ವಲ್ಪ ಬದಿಗಿರಿಸೋಣ. ಎಷ್ಟೇ ಆದರೂ ಇವರ ಕಳ್ಳತನ ಹೊಟ್ಟೆಪಾಡಿನ ದಾರಿ. ಪ್ರೊ. ಸ್ವಾಮಿ ಹೀಗೂ ಹೇಳಿದಂತೆ ಕಾಣುವುದಿಲ್ಲ. ಈ ವಿಷಯದ ಬಗ್ಗೆ ಇದ್ದದ್ದನ್ನು ಇದ್ದಂತೆ ಹೇಳಿರುವುದು ಅವರ ವಸ್ತುನಿಷ್ಠತೆಗೆ ಸಾಕ್ಷಿ. ಆದರೆ ನಾವು ಇದನ್ನು ಒಂದು ತಾತ್ವಿಕ ನೆಲೆಯಲ್ಲೂ ನೋಡಬಹುದೆ? ಯೋಚಿಸೋಣ. ಯಾವುದೇ ಜನಾಂಗ ಅದು ಗುಡ್ಡಗಾಡು ಜನಾಂಗವಾಗಿರಲಿ ಇತರೆ ‘ನಾಗರಿಕ’ ಸಮುದಾಯವಾಗಲಿ ಯುದ್ಧ, ದೇಶವಿಭಜನೆ, ನೆರೆ, ವಸಾಹತುಶಾಹಿ, ಬರ ಮುಂತಾದ ಯಾವುದಾದರೂ ಕಾರಣಕ್ಕೆ ತಮ್ಮ ಮೂಲ ನೆಲೆ ಕಳೆದುಕೊಂಡು ಗುಳೆ ಹೊರಡುವ ಪರಿಸ್ಥಿತಿಯಲ್ಲಿ ಏನೆಲ್ಲ ಆಗಬಹುದು? ಅದು ಬೇರೆ ಬೇರೆ ಕಸುಬುಗಳನ್ನು ರೂಢಿಸಿಕೊಳ್ಳಲು ತೊಡಗುತ್ತದೆ. ಅವರ ಜಗತ್ತು ಕಳೆದುಹೋಗಿದ್ದರೂ ಅವರ ಮುಂದೆ ಮತ್ತೊಂದು ಜಗತ್ತು ವಿಶಾಲವಾಗಿ ತೆರೆದುಕೊಳ್ಳುತ್ತದೆ.

ಅಲ್ಲಿ ನೈತಿಕತೆ, ಅನೈತಿಕತೆಗಳ ಪ್ರಶ್ನೆಗಿಂತಲೂದೊಡ್ಡ ಸವಾಲನ್ನು ಎದುರಿಸುತ್ತದೆ. ತನಗೆ ಗೊತ್ತಿಲ್ಲದ, ಅಪರಿಚಿತ ಕ್ಷೇತ್ರಗಳನ್ನು ಪ್ರವೇಶಿಸುತ್ತದೆ. ಮೂಲ ಕಸುಬುಗಳನ್ನು ಕಳೆದುಕೊಂಡ ಎಷ್ಟೋ ಜನಜಾತಿಗಳು ಎಲ್ಲ ಕಡೆ ತಮ್ಮ ಕೌಶಲವನ್ನು ಪಣಕ್ಕಿಡುತ್ತಾರೆ. ಆಗ ಕೂಲಿನಾಲಿ, ಬೇಸಾಯ, ವ್ಯಾಪಾರ, ಪ್ರದರ್ಶಕ ಕಲೆ ಮುಂತಾದ ಸಕಲ ಲೋಕ ವ್ಯವಹಾರಗಳಿಗೂ ಎದುರಾಗುತ್ತದೆ. ಇವುಗಳಲ್ಲಿ ವ್ಯಭಿಚಾರ, ಕಳ್ಳತನಗಳು ಸೇರುವುದಿಲ್ಲ ಎಂದರೆ ಎಷ್ಟರಮಟ್ಟಿಗೆ ನ್ಯಾಯವೆನಿಸೀತು! (ಇಂಥ ಹೊತ್ತಿನಲ್ಲಿ ತಾನೆ ನಾವು ದಾಸ್ತೋವಸ್ಕಿ, ಲಂಕೇಶ್, ದೇವನೂರ ಮಹದೇವ ಮುಂತಾದವರು ಸೃಜಿಸಿದ ಕಲಾಕೃತಿಗಳನ್ನು ನೆನಪು ಮಾಡಿಕೊಳ್ಳುವುದು. ಅಷ್ಟೇ ಅಲ್ಲ, ಚೋರವಿದ್ಯೆ ನಮ್ಮ ಶಾಸ್ತ್ರಗಳಲ್ಲೇ ಸಮ್ಮತಿ ಪಡೆದಿದೆಯಲ್ಲವೆ!)

ಬೇಸಾಯ, ವ್ಯಾಪಾರ, ಕಮ್ಮಾರಿಕೆ, ಚಿನಿವಾರಿಕೆ, ಬಡಗಿ, ಚಮ್ಮಾರಿಕೆ ಮುಂತಾದ ಕೆಲವು ಕಸುಬುಗಳಿಗೆ ಕೆಲಮಟ್ಟಿನ ಜಾತಿಯ ನಂಟಾದರೂ ಇದ್ದೀತು. ಆದರೆ ವ್ಯಭಿಚಾರ, ಕಳ್ಳತನಕ್ಕೆ ಯಾವ ಜಾತಿ ನಿರ್ಬಂಧಗಳಿರಲು ಸಾಧ್ಯ?! ನಮ್ಮಲ್ಲಿ ಬ್ರಿಟಿಷರು ಜಾರಿಗೊಳಿಸಿದ ‘Notified criminal tribes’ ಕಾಯ್ದೆಯಲ್ಲಿ ಲೆಕ್ಕವಿಲ್ಲದಷ್ಟು ಜನಜಾತಿಗಳು ಈ ವರ್ಗಕ್ಕೆ ಸೇರುತ್ತವೆ. ಅಂಥ ವರ್ಗೀಕರಣಗಳ ಹಿಂದೆ ವಸಾಹತುಶಾಹಿಯ, ಪಟ್ಟಭದ್ರ ಹಿತಾಸಕ್ತಿಗಳ, ರೂಢಿಗ್ರಸ್ತ ಧಾರ್ಮಿಕ ವ್ಯವಸ್ಥೆಯ ಕೈಕೆಲಸ ಇಲ್ಲದಿರುವುದನ್ನು ನಂಬುವುದಾದರೂ ಹೇಗೆ? ಇರಲಿ, ಜಗತ್ತಿನ ಎಲ್ಲ ಕಡೆ ಈ ಪ್ರವೃತ್ತಿಯನ್ನು ರೂಢಿಸಿಕೊಂಡಿರುವ ಸಮುದಾಯಗಳಿವೆ. ಆ ಕಾರಣಕ್ಕಾಗಿಯೇ ಕಾನೂನು ಕಟ್ಟಳೆಗಳು ರೂಪುಗೊಳ್ಳಲ್ಪಟ್ಟಿವೆ. ಆದರೆ ವಿಪರ್ಯಾಸವೆಂದರೆ ಭಾರತದ ಜಾತಿಪದ್ಧತಿ, ಕೊರಚ ಜನಾಂಗಕ್ಕೆ ಅಂಟಿರುವ ಕಳ್ಳತನದ ಕಳಂಕದಿAದಾಗಿ ಅವರಿಗೆ ಅಸ್ಪೃಶ್ಯತೆಯ ಪಟ್ಟಿ ಕಟ್ಟಿ ಊರಾಚೆಯಿಟ್ಟುಬಿಟ್ಟಿದೆ.

ಗುಡ್ಡಗಾಡು ಜನಾಂಗಗಳು ಬೇರೆಲ್ಲ ವೈಶಿಷ್ಟ್ಯಗಳಿಗಿಂತ ಹೆಚ್ಚಾಗಿ ತಾವಾಡುವ ಭಾಷೆಯ ಮೂಲಕವೇ ತಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಬಯಸುತ್ತವೆ. ಭಾಷೆ ಯಾವುದೇ ಜನಾಂಗದ ಉಗಮ, ಚರಿತ್ರೆ, ಪುರಾಣ, ಕುಲಗೀತೆ, ಕತೆ, ಐತಿಹ್ಯ, ಪಾರಂಪರಿಕ ಬುದ್ಧಿಮತ್ತೆಯನ್ನು ತನ್ನ ಒಡಲಲ್ಲಿಟ್ಟುಕೊಂಡು ಅನಂತಕಾಲವೂ ಕಾಪಾಡುವಂತಹ ಸಾಧನ. ಅದು ಆಯಾ ಜನಾಂಗಗಳ ಅಮೂಲ್ಯ ಸಂಪತ್ತು. ಪ್ರೊ ಸ್ವಾಮಿ ತಮ್ಮ ಪ್ರಸ್ತುತ ಕೃತಿಯಲ್ಲಿ ಈ ಅಂಶದ ಬಗ್ಗೆ ಕಾಳಜಿ ಪ್ರಕಟಿಸುತ್ತಾರೆ. ಈ ಬಗೆಯ ಸಾಂಸ್ಕೃತಿಕ ಘಟಕಗಳ ಮೂಲಕವೇ ಕೊರಚ ಜನಾಂಗದ ಅಧ್ಯಯನವನ್ನು ಕಟ್ಟಿಕೊಡಬೇಕೆಂಬ ಮನದಾಳದ ಬಯಕೆಯನ್ನು ಅವರು ಇಲ್ಲಿ ಪ್ರಕಟಿಸಿಲ್ಲವಾದರೂ ಅದು ನನ್ನ ಅರಿವಿಗೆ ಗೋಚರಿಸಿದೆ. ಹಾಗೆ ಅವರು ಈ ಅಂಶಗಳ ಕಡೆಗೆ ಹೆಚ್ಚು ಒತ್ತು ಕೊಡಲು ಸಾಧ್ಯವಾಗದಿರುವುದಕ್ಕೆ ಕಾರಣ, ಬೇಕಾದ ಮಾಹಿತಿಯ ಕೊರತೆ.

ಈ ಸಂದರ್ಭದಲ್ಲಿ ನಾನು ಅವರಿಗೊಂದು ಮಾತು ತಿಳಿಸಬೇಕೆನಿಸುತ್ತಿದೆ. ಈ ಸಾಂಸ್ಕೃತಿಕ ಘಟಕಗಳು ಜನಾಂಗದ ಮಾನಸ ಲೋಕದಲ್ಲಿ ಅಡಗಿ ಕುಳಿತ ಗಣಿಗಳಿದ್ದ ಹಾಗೆ. ಅವುಗಳನ್ನು ಹುಡುಕಿ ಹೊರತೆಗೆಯುವುದರಿಂದಲೇ ಅಸ್ಮಿತೆಯನ್ನು ಪ್ರತಿಷ್ಠಾಪಿಸಲು ಸಾಧ್ಯವಾಗುವುದು. ಇಂಥ ಜನಾಂಗಗಳಲ್ಲಿ ಯಾವಾಗಲೋ ಯಾರೋ ಒಬ್ಬಿಬ್ಬರು ಅವತರಿಸಿ, ಅವರ ಭಾಷೆಯನ್ನೂ ಆ ಜನಾಂಗವನ್ನೂ ಬೆಳಗಿಬಿಡುತ್ತಾರೆ. ಯಾರೋ ಇದ್ದಕ್ಕಿದ್ದಂತೆ ಆ ಭಾಷೆಯ ವ್ಯಾಕರಣವನ್ನು ರಚಿಸಿಬಿಡುತ್ತಾರೆ. ಯಾರೋ ಇದ್ದಕ್ಕಿದ್ದಂತೆ ಶಬ್ದಕೋಶ ಸೃಷ್ಟಿಸಿಬಿಡುತ್ತಾರೆ. ಮತ್ಯಾರೋ ಅದಕ್ಕೊಂದು ಹೊಸ ಲಿಪಿ ಕಂಡುಹಿಡಿದುಬಿಡುತ್ತಾರೆ. ಒಂದು ದಿನ ಒಂದು ಸಣ್ಣ ಪತ್ರಿಕೆ ಶುರುವಾಗಿಬಿಡುತ್ತದೆ. ಅಲ್ಲಿ ಕಾವ್ಯ ಹುತ್ತಗಟ್ಟತೊಡಗುತ್ತದೆ. ಆ ಭಾಷೆಯಲ್ಲಿ ಕವಿಗಳು ಹುಟ್ಟತೊಡಗುತ್ತಾರೆ. ಕಾದಂಬರಿಗಳು ಅವತರಿಸುತ್ತವೆ. ಭಾರತದ ನೂರಾರು ಅನಧಿಕೃತವೆಂದು ಕರೆಸಿಕೊಳ್ಳುವ ಭಾಷೆಗಳು ದಡ ಕಂಡಿರುವುದು ಹೀಗೆಯೆ. ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಡೋಗ್ರಿ, ಪಹಾಡಿ, ಕೊಂಕಣಿ, ಸಂತಾಲಿ, ಬೋಡೋ, ಮಣಿಪುರಿ ಮುಂತಾದ ಗುಡ್ಡಗಾಡು ನುಡಿಗಳು ಹೆಚ್ಚುಕಡಿಮೆ ಇದೇ ಸ್ವರೂಪದಲ್ಲಿದ್ದಂತಹವು. ಇವೆಲ್ಲ ಇಂದು ಜನಮನ್ನಣೆಯನ್ನೂ, ಪ್ರಭುತ್ವದ ಮನ್ನಣೆಯನ್ನೂ ಗಳಿಸಿವೆ. ಆ ಭಾಷೆಗಳ ಕೃತಿಗಳು ದೇಶ ವಿದೇಶದ ಭಾಷೆಗಳಿಗೆ ಅನುವಾದಗೊಳ್ಳುತ್ತಿವೆ. ಅಂಥದ್ದೊAದು ದಿನ ಕೊರಚರ ತಾಯ್ನುಡಿಗೂ ಬರಲಿ, ಅದಕ್ಕೆ ಸ್ವಾಮಿಯೇ ಮೊದಲಿಗರಾಗಲಿ ಎಂದು ಬಯಸುತ್ತೇನೆ.
*
ಪ್ರೊ. ಸ್ವಾಮಿ ಹಳ್ಳಿಗಾಡಿನ ಕಾಲೇಜೊಂದರಲ್ಲಿ ಪಾಠ ಮಾಡುವ ಮೇಸ್ಟ್ರು. ಹೇಗಾದರೂ ಸರಿ ನಗರದ ಕಾಲೇಜುಗಳಲ್ಲೇ ಉಳಿದುಕೊಳ್ಳಬೇಕೆಂದು ಬಯಸುವ ಮೇಸ್ಟ್ರ ಗುಂಪಿಗೆ ಸೇರಿದವರಲ್ಲ ಇವರು. ಇನ್ನೇನು ನಿವೃತ್ತಿ ಹಂತ ತಲುಪುತ್ತಿರುವ ಪ್ರೊ. ಸ್ವಾಮಿ ತಮ್ಮ ಸರ್ವೀಸನ್ನೆಲ್ಲ ಹಳ್ಳಿಗಾಡಿನ ಮಕ್ಕಳಿಗೆ ಪಾಠ ಮಾಡುತ್ತಲೇ ಕಳೆದಿದ್ದಾರೆ. ಈಚೆಗೆ ಅವರು ಪ್ರಿನ್ಸಿಪಾಲರಾಗಿರುವ ಹಳ್ಳಿ ಕಾಲೇಜಿಗೆ ನನ್ನನ್ನು ಕರೆದೊಯ್ದಿದ್ದರು. ಅಲ್ಲಿ ಕಾಲೇಜಿನ ಹಿಂದಿದ್ದ ಪಾಳು ಜಮೀನಿನಲ್ಲಿ ಒಂದು ಅರಣ್ಯವನ್ನೇ ಬೆಳೆಸಿಬಿಟ್ಟಿದ್ದಾರೆ. ಸಹದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಸಹಾಯದಿಂದ ಇದೆಲ್ಲಾ ಸಾಧ್ಯವಾಯಿತು ಎಂದು ವಿನೀತರಾಗಿ ಪ್ರೊ. ಸ್ವಾಮಿ ಹೇಳಿದರು. ತಮ್ಮ ಸಮುದಾಯದ ಆದಿಮ ಗುಣವನ್ನು ಸಾಮಾಜೀಕರಣಗೊಳಿಸುವ ಬಗೆ ಇದು.

ಅಲ್ಲದೆ ಪ್ರೊ. ಸ್ವಾಮಿ ಅವರ ಮತ್ತೊಂದು ಹವ್ಯಾಸ, ಜನರಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸುವುದಕ್ಕೆ ಬೇಕಾದ ಪರಿಸರ ನಿರ್ಮಾಣ ಮಾಡುವುದು. ಹಲವಾರು ವರ್ಷಗಳಿಂದ ಇಂಥ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ವೈಚಾರಿಕತೆ, ವೈಜ್ಞಾನಿಕ ಮನೋಭಾವಗಳ ಹಿನ್ನೆಲೆಯಲ್ಲಿ ಒಂದು ಆದಿಮ ಜನಾಂಗವನ್ನು ಅಧ್ಯಯನ ಮಾಡುವುದರಲ್ಲಿ ಕೆಲವು ತೊಡಕುಗಳಿರುತ್ತವೆ. ಬಹುಶಃ ಸ್ವಾಮಿ ಅವರಿಗೆ ಇದು ಅನುಭವಕ್ಕೆ ಬಂದಿರಬಹುದು ಎಂದು ಭಾವಿಸುತ್ತೇನೆ. ಅದನ್ನು ಮೀರಿಕೊಂಡು ಕನ್ನಡದ ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ ಕ್ಷೇತ್ರಕ್ಕೆ ಒಂದು ಉಪಯುಕ್ತ ಕೃತಿಯನ್ನು ಕೊಟ್ಟಿದ್ದಾರೆ.

ಕೊರಚ ಜನಾಂಗದಲ್ಲಿ ಮದ್ಯ ಸೇವನೆಗೆ ಒಂದು ವಿಶೇಷ ಸ್ಥಾನವಿದೆ. ಅದು ಕೇವಲ ಒಂದು ಹವ್ಯಾಸವಲ್ಲ. ಅವರ ಬದುಕಿನಲ್ಲಿ ಹುಟ್ಟಿನಿಂದ ಮೊದಲ್ಗೊಂಡು ಸಾವಿನವರೆಗೂ ಜರುಗುವ ಎಲ್ಲ ವಿಧಿ, ಆಚರಣೆ, ಹಬ್ಬ ಇತ್ಯಾದಿ ಸಂದರ್ಭಗಳಲ್ಲಿ ನಿರಂತರವಾಗಿ ಮದ್ಯಪಾನ ವಿಜೃಂಭಿಸುತ್ತದೆ! ಅವರ ನ್ಯಾಯ ಪಂಚಾಯ್ತಿಯಲ್ಲಿ ಪಂಚರಿಗೆ ಮದ್ಯ ಮಾಂಸಾದಿಗಳ ಸರಬರಾಜು ಇಲ್ಲದಿದ್ದರೆ ಮುಂದಕ್ಕೆ ಮಾತೇ ಇಲ್ಲ!! ಹೆಣ್ಣು ಗಂಡಿನ ಕೊಟ್ಟು ತರುವ ಮಾತುಕತೆ ಮದ್ಯದಂಗಡಿಯಲ್ಲೇ ನಡೆಯಬೇಕು! ಈ ವಿವರಗಳೆಲ್ಲ ಈ ಅಧ್ಯಯನದಲ್ಲಿ ಯಾವ ‘ನಾಗರಿಕ’ ಮುಚ್ಚುಮರೆಗೆ ಅವಕಾಶವಿಲ್ಲದಂತೆ ದಾಖಲಾಗಿವೆ.

ಪ್ರೊ. ಸ್ವಾಮಿ ಅವರನ್ನು ಮೊದಮೊದಲಿಗೆ ಭೆಟ್ಟಿಯಾದ ದಿನಗಳಲ್ಲಿ ನನಗೆ ಈ ಮದ್ಯಪುರಾಣದ ಅರಿವಿರಲಿಲ್ಲ. ಈ ಪುಸ್ತಕ ಓದುವಾಗ ಒಂದು ಸಂದರ್ಭ ನೆನಪಾಯಿತು. ಒಮ್ಮೆ ನಾವು ಕೆಲವು ಗೆಳೆಯರೆಲ್ಲ ಒಂದು ಬೆಟ್ಟದಲ್ಲಿ ಸೇರಿದ್ದೆವು. ಮೋಡಗಳು ನಮ್ಮನ್ನು ಹಾದು ಹೋಗುತ್ತಿದ್ದವು. ಸಂಜೆಗೇ ಕತ್ತಲಾಗುತ್ತಿತ್ತು. ರಾತ್ರಿಯೂಟಕ್ಕೆ ಮೊದಲಿನ ಸಿದ್ಧತೆಯಿತ್ತು.ಸೇರಿದ್ದ ಗೆಳೆಯರಲ್ಲೊಬ್ಬರಿಗೆ ಐವತ್ತನೆಯ ಜನ್ಮದಿನವೆಂದಮೇಲೆ ಕೇಳಬೇಕೆ! ಅತಿಥಿಗೃಹದ ಕಾರಿಡಾರಿನಲ್ಲಿ ಕುಳಿತು ಎಲ್ಲರೂ ಸುಖಾನುಭವಿಗಳಾಗಿದ್ದರು. ಮುಂದೆ ಒಂದು ಪುಟ್ಟದಾದ ಅಚ್ಚಹಸಿರು ಲಾನ್ ಇತ್ತು. ಅದರಮೇಲೆ ಲೈಟ್ ಕಂಬದ ಬೆಳಕು ಮಂಜು ಸುರಿಸುತ್ತಿತ್ತು. ಬೆಟ್ಟದ ಮೇಲಿನ ಚಳಿ! ನೋಡು ನೋಡುತ್ತಿದ್ದಂತೆಯೇ ತುಂತುರು ಶುರುವಾಯಿತು. ಕಾರಿಡಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಎದ್ದು ನಿಧಾನವಾಗಿ ನೆಡೆಯುತ್ತಾ ಹಸಿರು ಲಾನಿನ ನಡುವೆ ನಿಂತರು. ಕೈಯಲ್ಲಿದ್ದ ಗುಂಡಿನ ಗ್ಲಾಸನ್ನು ಜೋಪಾನದಿಂದ ತನ್ನ ನೆತ್ತಿಯ ಮೇಲಿಟ್ಟುಕೊಂಡರು. ಎರಡೂ ಕೈಗಳನ್ನು ರೆಕ್ಕೆಗಳಂತೆ ಹರಡಿ ಹಗುರ ಹಗುರವಾಗಿ ಕುಣಿತದ ಹೆಜ್ಜೆಯಿಡತೊಡಗಿದಾಗ ನನ್ನ ಕಣ್ಣಿಗೆ ಗಂಧರ್ವನಂತೆ ಕಾಣತೊಡಗಿದ್ದರು! ಈ ಚಿತ್ರ ಎಷ್ಟೋ ಕಾಲದಿಂದ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತ್ತು.

ಈ ಸಂದರ್ಭವನ್ನು ಹಿನ್ನೋಟದಲ್ಲಿ ಅರ್ಥಮಾಡಿಕೊಳ್ಳುವುದಾದರೆ ಹೀಗೆನಿಸುತ್ತೆ; ಆದಿಮ ಕಾಲದಿಂದಲೂ ಮದ್ಯವನ್ನು ಆರಾಧಿಸಿಕೊಂಡು ಬಂದ ಸಾವಿರಾರು ಆದಿವಾಸಿ ಜನಾಂಗಗಳ ಪ್ರತಿನಿಧಿಯಂತೆ ಅಂದು ಕಂಡ ನಮ್ಮ ಸ್ವಾಮಿಯ ಮುಂದೆ, ಆಧುನಿಕತೆಯ ಸುಳಿಯಲ್ಲಿ ಸಿಕ್ಕು ನಡಂತರದಲ್ಲಿ ಮದ್ಯದ ಬಟ್ಟಲುಗಳನ್ನು ಎತ್ತಿಕೊಳ್ಳುತ್ತಿರುವ, ಅದನ್ನು ನಮ್ಮ ಶರೀರಕ್ಕೂ ಮನಸ್ಸಿಗೂ ಪಳಗಿಸಿ ಒಗ್ಗಿಸಿಕೊಳ್ಳಲಾರದೆ hang-over ಸ್ಥಿತಿಯಲ್ಲಿ ನರಳುತ್ತಿರುವ ಅಡ್ನಾಡಿಗಳಂತೆಯೋ, ಅಡ್ಡಕಸುಬಿಗಳಂತೆಯೋ ಕಾಣುತ್ತಿಲ್ಲವೇ!!! ಇದನ್ನು ಒಂದು ರೂಪಕದಲ್ಲಿ ನೋಡುವುದಾದರೆ, ಪಾಶ್ಚಾತ್ಯರ ಮತ್ತನ್ನು ಮಾರಿ ದೇಶವನ್ನೇ ದೋಚಿ ಹಾರಿಹೋದ ಮಲ್ಯವೆಂಬ ಹದ್ದಿನ ಮುಂದೆ ನಮ್ಮ ನೆಲದಲ್ಲೇ ನಮ್ಮ ಆದಿವಾಸಿಗಳು, ಹಳ್ಳಿಗರು ತಯಾರಿಸುತ್ತಿದ್ದ ಅಕ್ಕಿಬೋಜ, ಈಚಲು ಕಳ್ಳು, ತೆಂಗಿನ ನೀರಾ, ಬುಂದೇಲಿಗಳ ಮಹುವ, ಈಶಾನ್ಯ ರಾಜ್ಯಗಳ ಬುಡಕಟ್ಟುಗಳು ತಯಾರಿಸುವ ನೂರಾರು ಬಗೆಯ ಮಧುರ ಪಾನೀಯಗಳನ್ನು ಕೈಚೆಲ್ಲಿ, ಹದ್ದುಗಳು ಹಾರಿಹೋದ ಆಕಾಶದ ದಿಕ್ಕುಗಳನ್ನು ನೋಡುತ್ತಾ ಕುಳಿತಂತಿದೆ. ಆದಿಮ ಪ್ರತಿನಿಧಿ ಸ್ವಾಮಿಗೆ Good Luck!

‍ಲೇಖಕರು avadhi

January 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: