ಎಂ ಚಿದಾನಂದಮೂರ್ತಿ ಇನ್ನಿಲ್ಲ

ಹಿರಿಯ ಸಂಶೋಧಕ ಸಾಹಿತಿ ಪ್ರೊ ಎಂ ಚಿದಾನಂದಮೂರ್ತಿ ಇನ್ನಿಲ್ಲ

ಅವರಿಗೆ ೮೮ ವರ್ಷ ವಯಸ್ಸಾಗಿತ್ತು

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ ೩ ೩೦ ರ ವೇಳೆಯಲ್ಲಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು

ಬೆಳಿಗ್ಗೆ 8 ಗಂಟೆಗೆ ಹಂಪಿನಗರದ ಅವರ ಮನೆಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ವಿಕಿಪೀಡಿಯಾ ಕಂಡಂತೆ ಎಂ ಚಿದಾನಂದಮೂರ್ತಿ ಅವರ ಪರಿಚಯ ಇಲ್ಲಿದೆ- ಕ್ಲಿಕ್ಕಿಸಿ

ಬೆಳಿಗ್ಗೆ ಏಳುತ್ತಲೇ ಹಿರಿಯ ಸಂಶೋಧಕರಾದ ಚಿದಾನಂದ ಮೂರ್ತಿಯವರು ನಮ್ಮನ್ನಗಲಿದ್ದಾರೆ ಅನ್ನುವ ಸುದ್ದಿ.

ನಲ್ವತ್ತು ವರ್ಷ ಕನ್ನಡಕ್ಕಾಗಿ ದುಡಿದವರು, ಒಂದು ರೀತಿಯ ಮೈಮರೆವು ಆವರಿಸಿರುವ ಕನ್ನಡಿಗರಿಗೆ ನಮ್ಮ ಹಿಂದಿನವರು ಎಲ್ಲೆಲ್ಲಿದ್ದರು, ಭಾಷಿಕ ಮತ್ತು ಸಾಂಸ್ಕೃತಿಕವಾಗಿ ಏನೆಲ್ಲ ಸಾಧಿಸಿದ್ದರು ಅನ್ನುವ ಕುರಿತು ತಮ್ಮ ಸಂಶೋಧನೆಗಳಿಂದ ಎಚ್ಚರಿಸುವ ಕೆಲಸ ಅವರು ಮಾಡಿದ್ದರು.

ಬೃಹತ್ ಕರ್ನಾಟಕ – ಭಾಷಿಕ ಮತ್ತು ಸಾಂಸ್ಕೃತಿಕ ಅನ್ನುವ ಒಂದು ಕೃತಿಯನ್ನು ಎಲ್ಲರೂ ತಪ್ಪದೇ ಓದಬೇಕಿರುವಂತದ್ದು.

ಸಂಶೋಧನೆಯ ಆಚೆ ಗೋಕಾಕ್ ಚಳವಳಿಯಲ್ಲಿ ಅವರ ಕ್ರಿಯಾಶೀಲತೆ, ಕನ್ನಡ ಶಕ್ತಿ ಕೇಂದ್ರದ ಮೂಲಕ ಕನ್ನಡಿಗರನ್ನು ಸಂಘಟಿತರನ್ನಾಗಿಸುವ ಕೆಲಸಗಳೆಲ್ಲವೂ ಕಳೆದ ಮೂವತ್ತು-ನಲವತ್ತು ವರ್ಷದಲ್ಲಿ ಕನ್ನಡದ ಕುರಿತು ನಡೆದಿರುವ ಹೋರಾಟ, ಅಭಿಯಾನ, ಚಿಂತನೆ ಎಲ್ಲದರ ಮೇಲೂ ತಮ್ಮ ಗಟ್ಟಿಯಾದ ಪ್ರಭಾವ ಹೊಂದಿದೆ.

ಕನ್ನಡವನ್ನೇ ಕೇಂದ್ರವಾಗಿಟ್ಟುಕೊಂಡು ಇಡೀ ಜೀವನ ದುಡಿದ ಅವರಿಗೆ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ ಅಂತ ನನಗೆ ಅನ್ನಿಸುತ್ತೆ.

ಕನ್ನಡಕ್ಕಾಗಿ ಪ್ರಾಣತ್ಯಾಗಕ್ಕೆ ತುಂಗಭದ್ರಾ ನದಿಗೆ ಹಾರಿದ್ದ ಅವರು ಇಳಿವಯಸ್ಸಿನಲ್ಲಿ ಕನ್ನಡಕ್ಕಿಂತ ಹೆಚ್ಚಾಗಿ ಇಂದಿನ ಎಡ-ಬಲದ ತಿಕ್ಕಾಟದಲ್ಲಿ ಬಲಗಡೆಗೆ ವಾಲಿದವರಾಗಿ ಕಾಣಿಸಿಕೊಂಡು ಕೊಂಚ ಗೊಂದಲದಲ್ಲಿದ್ದರು ಅಂತ ನನಗೆ ಅನ್ನಿಸಿತ್ತು.

ಕೆಲವು ವಿಚಾರಗಳಲ್ಲಿ ಅವರ ಇಳಿವಯಸ್ಸಿನ ನಿಲುವುಗಳ ಬಗ್ಗೆ ನನಗೆ ಒಪ್ಪಿಗೆಯಾಗದೇ ಇದ್ದರೂ ಅವರು ಕನ್ನಡಕ್ಕಾಗಿ ಮಾಡಿದ ಕೆಲಸಗಳು, ಇತಿಹಾಸ ಸಂಶೋಧನೆಯತ್ತ ಬರೆದ ಪುಸ್ತಕಗಳು, ಯಾವ ಹೊತ್ತಿನಲ್ಲೂ ಕನ್ನಡ ಹೋರಾಟಕ್ಕೆ ಇಳಿದು ಬರುತ್ತಿದ್ದ ಬದ್ಧತೆ, ಬೆಳೆಸಿದ ಚಿಂತಕರು, ಬರಹಗಾರರು ಎಲ್ಲವನ್ನೂ ಸಮಗ್ರವಾಗಿ ನೋಡಿದರೆ ಕಳೆದ ನಲ್ವತ್ತು ವರ್ಷಗಳಲ್ಲಿ ಕನ್ನಡ ಕಟ್ಟಿದ ಮೇರು ನಾಯಕರಲ್ಲಿ ಅವರೂ ಒಬ್ಬರು ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ.

ಹೋಗಿ ಬನ್ನಿ ಹಿರಿಯರೇ, ನಿಮ್ಮ ಕೆಲಸಗಳಿಗೆ ಎಂದಿಗೂ ಸಾವಿಲ್ಲ.

ವಸಂತ ಶೆಟ್ಟಿ

2೦11.. ಚಿದಾನಂದ ಮೂರ್ತಿ ಅವರನ್ನು ಆಕಾಶವಾಣಿಯ ಚಿಂತನ ಕಾರ್ಯಕ್ರಮದ ಧ್ವನಿಮುದ್ರಣಕ್ಕೆ ಕರೆದಿದ್ದೆ. ಮೊದಲು ಫೋನಿನಲ್ಲಿ ಮಾತನಾಡಿದಾಗ ಇಂಥ ವಿಷಯಗಳ ಬಗ್ಗೆ ತಾವು ಮಾತನಾಡುವುದಾಗಿ ಹೇಳಿದ್ದರು. ಅದರಲ್ಲಿ ನೇಪಾಳದ ಬಗೆಗೆನ ವಿಷಯವೂ ಒಂದು. ನೇಪಾಳದ ಬಗೆಗೆ ಅವರು ಕೆಲವು ಮಹತ್ವದ, ಕುತೂಹಲಕಾರಿ ವಿಷಯಗಳನ್ನು ಸಂಗ್ರಹಿಸಿದ್ದರು. ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಆಶಯ ಅವರದಾಗಿತ್ತು. ನೇಪಾಳದ ಪಶುಪತಿನಾಥ ದೇವಸ್ಥಾನಕ್ಕೆ ಇಂದಿಗೂ ಕನ್ನಡಿಗರು, ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಅರ್ಚಕರೇ ಪ್ರಧಾನ ಎಂಬುದನ್ನು ಅವರು ಸಾಕ್ಷ್ಯಾಧಾರಗಳಿಂದ ಹೇಳಿದ್ದರು.

ನಾನಾಗ ನೇಪಾಳಕ್ಕೆ ಹೋಗುವ ತಯಾರಿ ನಡೆಸಿದ್ದೆ. ಅದನ್ನು ಅವರಿಗೆ ತಿಳಿಸಿದಾಗ “ಹೊರಡುವ ಮೊದಲು ನನಗೆ ಹೇಳಿ. ಅಲ್ಲಿ ವಿಶೇಷವಾಗಿ ಏನನ್ನು, ಏಕಾಗಿ ನೋಡಬೇಕು ಎಂದು ಹೇಳುತ್ತೇನೆ” ಎಂದಿದ್ದರು. ನಾನು ಹೊರಡುವ ಮೊದಲು ಅವರನ್ನು  ಸಂಪರ್ಕಿಸಲು ಪ್ರಯತ್ನಿಸಿದ್ದೆ. ಅವರು ಸಿಗಲಿಲ್ಲ. ನಾನು ಹಿಂತಿರುಗಿ ಬಂದು ಮೇಲೆ ಅವರನ್ನು ಆಕಾಶವಾಣಿಯಲ್ಲಿ ಮತ್ತೆ ಭೇಟಿಯಾದಾಗ ಅವರು”ಓ, ನಾನಾಗ ಯಾವುದೊ ರಾಜ್ಯದ ತಿರುಗಾಟದಲ್ಲಿದ್ದೆ” ಎಂದು ಬೇಸರಗೊಂಡಿದ್ದರು. ಆದರೆ ಅಲ್ಲಿನ ವಿಷಯಗಳ. ಬಗ್ಗೆ ಸವಿಸ್ತಾರವಾಗಿ ಮಾತನಾಡುವುದನ್ನು ಮರೆಯಲಿಲ್ಲ. ಅಗಾಧ ಪಾಂಡಿತ್ಯದ ನಡುವೆಯೂ ಚಿಕ್ಕ ಚಿಕ್ಕ ವಿಷಯಗಳಿಗೂ ಸಮಯ ಕೊಟ್ಟಿದ್ದು ಸೋಜಿಗವಾಗಿತ್ತು.

ಆಕಾಶವಾಣಿಯಿಂದ ಭಾರತೀಯ ವಿದ್ಯಾಭವನಕ್ಕೆ ಅವರು ನಡೆದೇ ಹೋಗುತ್ತಿದ್ದರು. ಸರ್ ಟ್ರಾಫಿಕ್ ತುಂಬಾ. ಆಟೋನಲ್ಲಿ ಕಳಿಸ್ತೀನಿ ಅಂದರೆ ” ಬೇಡ. ನನಗೇನೂ ತೊಂದರೆ ಇಲ್ಲ. ನಾನು ಆರಾಂ ಆಗಿ ನಡೆದು ಹೋಗ್ತೀನಿ ” ಅಂತಿದ್ರು.
ಅವರನ್ನು ಪ್ರತಿ ಬಾರಿ ಭೇಟಿಯಾದಾಗಲೂ ತಮ್ಮ ಸಂಶೋಧನೆಗಳ ಹೊಸ ಹೊಳಲನ್ನು ಕೊಟ್ಟೇ ಹೋಗುತ್ತಿದ್ದರು.

-ನೂತನ ದೋಶೆಟ್ಟಿ

‍ಲೇಖಕರು avadhi

January 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: