ಮೇಘನಾ ಸುಧೀಂದ್ರ ಅಂಕಣ: ಅನ್ನದಾನದ ಮಹತ್ವವೇ ಬೇರೆ..‍

 

“ಸಕತ್ ಹಸಿವೆ ಆಗುತ್ತಿದೆ ಎಲೆನಾ” ಎಂದು ಹುಡುಗಿ ಅಂದಳು. ಹುಡುಗಿಗೆ ಬೆಳಗ್ಗೆ ೮ ಘಂಟೆಗೆ, ಮಧ್ಯಾಹ್ನ ಒಂದು ಘಂಟೆಗೆ, ಸಂಜೆ ನಾಲ್ಕು ಘಂಟೆಗೆ ಮತ್ತು ರಾತ್ರಿ ೯ ಘಂಟೆಗೆ ಏನೇ ಆಗಿದ್ದರೂ ಹಸಿವೆಯಾಗಿರುತ್ತದೆ. ಯಾವುದೇ ಟೈಮ್ ಜೋನ್, ಯಾವುದೇ ದೇಶ ಎಲ್ಲೇ ಇದ್ದರೂ. ಅವಳ ಶಾಲೆಯ ಶಿಸ್ತು ಇನ್ನೂ ಅವಳನ್ನು ಬಿಟ್ಟಿಲ್ಲ. “ನಿನಗೆ ಹಸಿವಾದಾಗಲ್ಲೆಲ್ಲಾ ಏನಾದರೂ ಕೊಡುವ ಎಂಜಲ್ ಇದ್ದರೆ ಚೆನ್ನ” ಎಂದು ಎಲೆನಾ ನಕ್ಕು ಒಂದು ಒಳ್ಳೆ ತಾಪಸ್ ತಿನ್ನೋಣ ಎಂದಳು. “ಏನು ತಪಸ್ಸು, ಅವೆಲ್ಲಾ ಬೇಡ ಫುಲ್ ಮೀಲ್ಸ್ ಬೇಕು” ಎಂದು ಹೇಳಿದಳು. “ಫುಲ್ ಮೀಲ್ಸ್ ಆ ಹಹಹ” ಎಂದು ಹುಡುಗಿಯ ಭಾಷೆಗೆ ನಕ್ಕಳು. ವಿಪರೀತ ತಿಂಡಿ ಪ್ರಿಯಳಾದ ಹುಡುಗಿಗೆ ತಾನು ತಿನ್ನುವ ಭೇಲ್ ಪುರಿ, ಮಸಾಲೆ ಪುರಿಯಾವುದೂ ಇಲ್ಲಿ ಸಿಗದಿದ್ದಕ್ಕೆ ಶಾಪ ಹಾಕಿಕೊಂಡೆ ಇದ್ದಳು. “ಲೆಟ್ಸ್ ಈಟ್ ಪಾಯೆಯಾ” ಎಂದಳು ಹುಡುಗಿ. “ಅದು ಸ್ಪಾನಿಷ್, ನಮ್ಮದಲ್ಲ” ಎಂದು ಕುಪಿತಗೊಂಡೇ ಎಂದಳು ಎಲೆನಾ.

“ಹಹಹ ನಾನು ಇದನ್ನ ಸ್ಪಾನಿಷ್ ಬಿಸಿಬೇಳೆ ಭಾತ್ ಅಂತೀನಪ್ಪ, ಏನ್ ಮಾಡ್ತ್ಯಾ” ಎಂದು ನಕ್ಕಳು. ಪಾಯೆಯಾ ಸ್ಪೇನಿನಲ್ಲಿ ಅಕ್ಕಿ ಮತ್ತು ಸಿ ಫುಡ್ಡಿನ ಜೊತೆ ಮಾಡುವ ಒಂದು ಖಾದ್ಯ. ಹುಡುಗಿ ತನ್ನ ಮನೆಗೆ ಬಂದ  ದಿವಸ ತಿನ್ನುತ್ತಿದ್ದ ಅಕ್ಕಿಯನ್ನ ನೋಡಿ ಬ್ರೇಜಿಲ್ಲಿನ ಮನೆಯೊಡತಿ ಪಾಯೆಯಾ ಮಾಡಲು ಅಂದುಕೊಂಡಳು. ಆದರೆ ಹುಡುಗಿ ಮಾತ್ರ ಅವತ್ತು ನೀಟಾಗಿ ಬಿಸಿಬೇಳೆಭಾತ್ ಮಾಡಿಕೊಂಡದ್ದನ್ನ ನೋಡಿ “ಒಹ್ ಇವರಲ್ಲೂ ಇದು ಇದೆ” ಎಂದು ಅಂದುಕೊಂಡು ಸುಮ್ಮನೆ ಆದಳು. ಈ ವಿಷಯವನ್ನು ಹುಡುಗಿ ಎಲಿನಾಗೆ ಹೇಳಿ ನಕ್ಕಳು. “ಎಲ್ಲ ಇದೊಳ್ಳೆ ಸಮುದ್ರ ತೀರದ ಹತ್ತಿರ ಇದ್ದು, ಇಡೀ ಜಗತ್ತಿನಲ್ಲಿ ನಾನೊಬ್ಬನೇ ಮೀನನ್ನ ತಿನ್ನೋದು” ಅಂದ ಹಾಗಾಯಿತು ಎಂದು ನಕ್ಕಳು.

“ಇದರ ಹೆಸರು ಪ ಎಂಬ್ ಟಮಾಕೆಟ್” ಎಂದಳು ಎಲೆನಾ. “ಏನಿದು ಬ್ರೆಡ್ಡು, ಟೊಮಾಟೊ, ಚೀಸ್ ಇದೆ ಎಂದು ಏನು ಅರಿಯದೆ ಹುಡುಗಿ ನಿಂತುಕೊಂಡಳು. “ಇನ್ನು ತಿನ್ನುವ ವಿಧಾನ ಏನೆಂದರೆ ಬ್ರೆಡ್ಡಿನ ಮೇಲೆ ಟೊಮಾಟೊವನ್ನು ಹಿಚುಕಿ, ಅದರ ಮೇಲೆ ಆಲಿವ್ ಆಯಿಲ್ ಹಾಕಿಕೊಂಡು, ಉಪ್ಪನ್ನ ಉದುರಿಸಿದರೆ ಇದು ತಿನ್ನೋದಕ್ಕೆ ರೆಡಿ” ಎಂದಳು ಎಲೆನಾ. ಕಾಲೇಜಿನ ಮುಂದೆ ಇದ್ದ ಫುಡ್ ಗಾಡಿಯಲ್ಲಿ ಇದನ್ನ ತಿನ್ನುವ ಬಗ್ಗೆ ಹೇಳುತ್ತಿದ್ದಳು. ಈ ಥರದ ಅಡುಗೆ ಏನಾದರೂ ನಮ್ಮಜ್ಜಿಗೆ ಮಾಡಿ ತೋರಿಸಿದರೆ “ಒಂದು ಒಗ್ಗರಣೆ ಹಾಕೋ ಸಮಯಾನು ಆಗಲವಲ್ಲ ಇದು ಎಂದು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದರು” ಎಂದು ಅಂದೆ ಇದನ್ನ ತಿನ್ನುತ್ತಿದ್ದಳು ಹುಡುಗಿ. “ಒಂದು ನಾಲ್ಕು ಚೀಸ್ ಪೀಸ್, ಪಲ್ಯ ಇದ್ದಿದ್ದರೆ ಎಂಥಾ ಒಳ್ಳೆ ಸ್ಯಾನ್ಡವಿಚ್ ಆಗುತ್ತಿತ್ತು ಛೆ” ಎಂದು ಹುಡುಗಿ ಮತ್ತೆ ಮತ್ತೆ ಅದರ ಬಗ್ಗೆಯೇ ಮಾತಾಡುತ್ತಿದ್ದ ಹುಡುಗಿಯನ್ನ ಕಂಡು, “ಯೂ ಆರ್ ಟೂ ಫಸ್ಸಿ” ಎಂದು ಬೈಯ್ಯಲು ಶುರು ಮಾಡಿದಳು ಎಲೆನಾ. “ಈ ಟಮಾಕೆಟ್ ಇಂದ ನಮ್ಮ ಎಷ್ಟೋ ಹೋರಾಟಗಳು ನಡೆದಿದೆ ನಿನಗೇನು ಗೊತ್ತು, ನಿಮ್ಮ ದೇಶದ ಹಾಗೆ ೧ ಘಂಟೆ ದಿನಾ ಅಡುಗೆ ಮನೆಯಲ್ಲೇ ಕಳೆದರೆ ಕ್ರಾಂತಿ  ಹೇಗೆ ಆಗುತ್ತದೆ?” ಎಂದು ಕಿಚಾಯಿಸಿದಳು.

“ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ನಿನ್ನ ಈ ತಿಂಡಿ ಯಾವ ಮೂಲೆಗೂ ಸಾಕಾಗಲಿಲ್ಲ” ಎಂದು ಹುಡುಗಿ ಹೇಳಿದಾಗ, “ಆ ರಾವಣನ ಬಗ್ಗೆ ಹೇಳು” ಎಂದು ಎಲೆನಾ ಹುಡುಗಿಯನ್ನು ತಲೆ ತಿನ್ನುತ್ತಾ ಇದ್ದಳು. “ನೋಡು ೧೫೨೦ರಲ್ಲಿ ನಮ್ಮದೊಂದು ಕುಕ್ ಬುಕ್ ಇತ್ತು, ಲಿಬ್ರೆ ಡೆಲ್ ಕೋಚ್ ಎಂಬುದು ಅದರ ಹೆಸರು. ಅದೆಷ್ಟು ಸಾಲ್ಸಾಗಳನ್ನ ಮಾಡುವ ವಿಧಾನಗಳನ್ನ ತಿಳಿಸಿದ್ದಾರೆ ಎಂದರೆ ನಿನಗೆ ನಂಬೋದಕ್ಕೂ ಅಸಾಧ್ಯ, ಶುಂಠಿ, ಚಕ್ಕೆ, ಕೇಸರಿ, ಲವಂಗ, ವೈನ್ ಮತ್ತು ಜೇನುತುಪ್ಪದಿಂದ ಮಾಡುವ ಅದೆಷ್ಟೋ ರೆಸಿಪಿಗಳ ಬಗ್ಗೆ ಇಲ್ಲಿ ಇದೆ, ನಮ್ಮ ರೆಸಿಪಿಗಳು” ಎಂದು ಹೆಮ್ಮೆಯಿಂದ ಹೇಳಿಕೊಂಡಳು ಎಲೆನಾ. ಹುಡುಗಿ ಗಮನಿಸಿದ್ದು ಎಲೆನಾ ತಾನು ಮಾತಾಡುವ ಎಲ್ಲಾ ವಿಷಯದ ಬಗ್ಗೆ ನಮ್ಮ ಕತ್ತಲಾನಿನದ್ದು ಎಂದು ಹೇಳುವ ಬಗ್ಗೆ ಆಶ್ಚರ್ಯ ತರಿಸಿತು. ಯಾವ ರೀತಿ ಇವಳು ಚರಿತ್ರೆ ಓದುತ್ತಿದ್ದಾಳೆ, ಯಾವ ರೀತಿ ಜನರಿಗೆ ತಿಳಿಸುತ್ತಿದ್ದಾಳೆ” ಎಂದು.

“ನಿನಗೆ ಗೊತ್ತಾ ಈ ಅಡುಗೆ ಮಾಡುವ ಕಾಮನ್ ಕಿಚನ್ನಿನಿಂದಲೂ ನಮ್ಮ ಹೋರಾಟ ದೊಡ್ಡದಾಯಿತು. ಎಷ್ಟೋ ಕಡೆ ಊಟವಿಲ್ಲದವರಿಗೆ ಅಡುಗೆ ಬಡಿಸಿ ಅವರಿಗೆ ಕ್ರಾಂತಿಯ ವಿಷಯಗಳನ್ನ ತಿಳಿಸುತ್ತಿದ್ದೆವು, ನನ್ನ ಮನೆಯವರೇ ಅಂಥದನ್ನೆಲ್ಲ ನಡೆಸುತ್ತಿದ್ದರು ಗೊತ್ತಾ, ೨ ಹೊತ್ತು ಊಟ ಸಿಕ್ಕುತ್ತದೆ ಎಂದು ಕೆಲವರು ಹೋರಾಟದಲ್ಲಿ ಭಾಗಿಯಾಗಿದ್ದರು” ಎಂದಳು ಎಲೆನಾ. ಈ ವಿಷಯ ಹುಡುಗಿಗೆ ವಿಚಿತ್ರ ಭಾವನೆ ಹುಟ್ಟುಹಾಕಿತ್ತು. ಹೊಟ್ಟೆ ತುಂಬಿಸುವ ನೆಪದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಇವರನ್ನೆಲ್ಲ ಎಳೆದುಕೊಂಡು ಬರುತ್ತಿದ್ದಾರಲ್ಲ ಎಂದು. ತನ್ನ ದೇಶದಲ್ಲಿ ಅನ್ನದ ಮಹತ್ವ ಬೇರೆಯದ್ದೇ. ಅದು ದಾನದ ಸ್ವರೂಪ. ಅದು ಕೊಟ್ಟ ನಂತರ ಬೇರೆ ಏನ್ನನ್ನು ಅಪೇಕ್ಷಿಸಬಾರದು ಎಂಬ ನಿಯಮ ಇದೆ. ಇದು ಭಾರತದಿಂದ ಒರಿಜಿನೇಟ್ ಆದ ಎಲ್ಲಾ ಧರ್ಮದಲ್ಲೂ ಅನ್ನದಾನದ ಮಹತ್ವವೇ ಬೇರೆಯದ್ದು, ಆದರೆ ಈ ಒಂದು ವಿಧದಲ್ಲಿ ಒಪ್ಪಲು ಸಹ್ಯವಲ್ಲದ ವಿಷಯವಾಗಿತ್ತು ಹುಡುಗಿಗೆ.

“ಈ ಲಾ ಬುಕಾರಿಯಾ ಮಾರುಕಟ್ಟೆಯಲ್ಲಿ ಸಿಗದ ವಸ್ತುವಿಲ್ಲ ನೋಡು” ಎಂದು ಮತ್ತೆ ಮಾರುಕಟ್ಟೆಗೆ ಎಳೆದುಕೊಂಡು ಬಂದಳು. ವಿಶ್ವದ ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಇದು ಒಂದು. “ನಾವು ಮೆಡಿಟರೇನಿಯನ್ ಜನದ ಹಾಗೆ ಎಲ್ಲವನ್ನು ತಿನ್ನುತ್ತೇವೆ, ಸ್ಪೈಸಿ ಸಹ” ಎಂದು ಹೆಮ್ಮೆಯಿಂದ ಹೇಳಿಕೊಂಡಳು ಎಲೆನಾ. “ಇವರ ಖಾರದ ಮಟ್ಟ ನಮ್ಮನೆಯಲ್ಲಿ ಒಂದು ಸಣ್ಣ ಮಗು ಸಹ ತಿನ್ನುತ್ತದೆ” ಎಂದು ನಕ್ಕು, “ಒಹ್ ಇಷ್ಟೆಲ್ಲಾ ಆಡಿಕೊಳ್ಳಬಾರದು” ಎಂದು ಸುಮ್ಮನಾದಳು.

“ನೋಡು ಈ ಬದನೇಕಾಯಿ, ಈ ಟೊಮಾಟೊ, ಬೆಳ್ಳುಳ್ಳಿ ಇವೆಲ್ಲಾ ನಮ್ಮದೇ” ಎಂದು ಶುರುಮಾಡಿದಳು. “ಅದೇ ತಿನ್ನೋ ತರಕಾರಿಯಲ್ಲೂ ನೀನು ಸ್ಪಾನಿಷ್ ಮತ್ತು ಕತಲಾನ್ ಎಂದು ಬೇಧ ಮಾಡುತ್ತೀಯಾ, ನಮ್ಮ ದೇಶದಲ್ಲೂ ಹೀಗೆ ಏನೇನೋ ಕಥೆ ಹೊಡೆದು ಅದು ತಿನ್ನಲ್ಲ ಇದು ತಿನ್ನಲ್ಲ ಎಂದೆಲ್ಲಾ ಆಡುತ್ತಿದ್ದವರಿಗೆ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ ಪುಸ್ತಕ ಸರಿಯಾದ ಪಾಠ ಕಲಿಸಿತು ಗೊತ್ತಾ? ಇದನ್ನ ಬರೆದವರು ಒಬ್ಬರು ಸಸ್ಯಶಾಸ್ತ್ರಜ್ಞ ಮತ್ತು ಒಳ್ಳೆ ಬರಹಗಾರರು, ತಿನ್ನೋ ಆಹಾರದಲ್ಲಿ ಅದೇನು ಅದು ಅಲ್ಲಿಂದ ಇದು ಇಲ್ಲಿಂದ ಅಂತೇನೇನೋ ಅನ್ನೋದು, ಇದು ನನಗೆ ಸರಿ ಬರುವುದಿಲ್ಲ” ಎಂದು ಕೋಪ ಮಾಡಿಕೊಂಡೆ ಅಂದಳು. “ಆದರೂ ನಿಮ್ಮ ಯುರೋಪಿಯನ್ನರು ನಮ್ಮ ದೇಶಗಳಿಗೆ ಈ ಥರ ತಿನ್ನೋ ಪದಾರ್ಥಕ್ಕೆ ಬಂದು ಅವರ ಧರ್ಮ, ಜೀವನಶೈಲಿಯನ್ನು ಬಲವಂತವಾಗಿ ಹೇರಿ ಹೋದರಲ್ಲ, ಆ ಸಂದರ್ಭದಲ್ಲೇ ನಿಮಗೂ ನಮ್ಮ ಊರಿನ ಮೆಣಸು, ಮಿಕ್ಕೆಲ್ಲಾ ಮಸಾಲೆ ಪದಾರ್ಥಗಳು ಮತ್ತು ಕೆಲವು ತರಕಾರಿಗಳು ಸಿಕ್ಕಿರಬಹುದು, ಅದನ್ನ ಹೇಗೆ ನೀನು ಇದು ನಮ್ಮದು ನಮ್ಮದು ಎಂದು ಒತ್ತಿ ಒತ್ತಿ ಹೇಳುತ್ತೀಯಾ?” ಎಂದು ಸ್ವಲ್ಪ ಖಾರವಾಗಿಯೇ ಹುಡುಗಿ ನುಡಿದಳು.

“ಹೇ ಕೂಲ್ ಕೂಲ್, ಹಾಗಲ್ಲ ಹೇಳಿದ್ದು, ನಮ್ಮ ಆಹಾರದಲ್ಲೂ ನಮ್ಮ ಸಂಸ್ಕೃತಿ ಅಡಗಿದೆ ಅನ್ನೋದಕ್ಕ ಹೇಳಲು ಬಂದೆ” ಎಂದು ಪಿನಾ ಕೋಲಾಡಾ ಕೊಟ್ಟು ಸಂತೈಸಿದಳು ಎಲೆನಾ. “ಒಹ್ ವಾವ್ ಕನೆಲಾನ್ಸ್ ” ಎಂದು ಸಿಕ್ಕಾಪಟ್ಟೆ ಖುಷಿಯಾಗಿ ಓಡಿದಳು ಅವಳು. ಇದು ಒಂದು ತರಹ ಇಟಲಿಯ ಲಾಸಾನಿಯಾದ ಸ್ವಲ್ಪ ತಿರುಚಿದ ರೂಪ. ಅದರೊಳಗೆ ಮೀಟ್ ಅಥವಾ ತರಕಾರಿ ಪಲ್ಯ ಇಟ್ಟು ಕೊಡುತ್ತಾರೆ. ಜಗತ್ತಲ್ಲಿ ಚೀಸ್ ಹಾಕಿದ್ದ ಯಾವುದೇ ಪದಾರ್ಥವನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವ ಹುಡುಗಿಗೆ ಇದು ಬಹಳ ಇಷ್ಟವಾಯಿತು. “ಇದು ಆರಾಮಾಗಿ ಟ್ರಾಮಿನಲ್ಲೂ  ತಿನ್ನಬಹುದು, ನನ್ನ ಫೆವರೇಟ್” ಎಂದು ಎಲೆನಾ ಅದರ ಬಗ್ಗೆ ವಿವರಣೆ ಕೊಡುತ್ತಿದ್ದಳು. ಅದರ ಪಕ್ಕವೇ ಕಲ್ಕೋಟ್ಸ್ ಅಂದರೆ ಸ್ಪ್ರಿಂಗ್ ಈರುಳ್ಳಿಯನ್ನು ಬಾರ್ಬೇಕ್ಯುನಲ್ಲಿ ಸುಟ್ಟು ತಿನ್ನುತ್ತಿದ್ದರು. “ಅದು ಮಜವಾಗಿದೆ, ನಮ್ಮ ಕಡೆ ಜೋಳವನ್ನ ಹೀಗೆ ಸುಟ್ಟು ತಿನ್ನೋದು” ಎಂದು ವಿವರಣೆ ಕೊಡುವಷ್ಟರಲ್ಲಿ ನಾಲ್ಕು ಬಂಚನ್ನ ಇಬ್ಬರು ತಿಂದು ಮುಗಿಸಿದ್ದರು.

“ನೋಡು ನೀನು ಸಮುದ್ರದ ಹತ್ತಿರ ಬಂದು ಮೀನು ತಿಂದಿಲ್ಲ ಎಂದರೆ ನಮ್ಮ ಊರಿಗೆ ಅವಮಾನ ಇಲ್ಲಿ ಕಾಡ್ ಮತ್ತು ಸ್ಕ್ವಿಡ್ ಬಹಳ ಫೇಮಸ್ ಇಲ್ಲಿ ನೋಡು ಎಸ್ಕಾವೊಸಾದಾ, ಸಾಕುಟ್ ಡೇ ಪಿಎಸ್” ಎನ್ನುವಷ್ಟರಲ್ಲಿ “ಕ್ರೆಮ್  ಕತಲಾನಾ” ಎಂಬ ದೊಡ್ಡ ಬೋರ್ಡು ಅದರ ಚಿತ್ರ ನೋಡಿ ಬಾಯಿ ಮುಚ್ಚಲೇ ಇಲ್ಲ ಹುಡುಗಿ. ಅದು ತಿಳಿ ಹಳದಿ ಬಣ್ಣದ ಒಂದು ಸಿಹಿ ತಿಂಡಿಯಾಗಿತ್ತು, ಅದರ ಮೇಲೆ ಸಕ್ಕರೆ ತುಣುಕುಗಳನ್ನು ಸುತ್ತಿದ್ದರು. ಅದರ ಮೇಲೆ ಒಂದು ಕೇಸರಿ ಬಣ್ಣದ ಲೇಯರ್ ಸಹ ಇತ್ತು. ನೋಡಿದರೆ ಬಾಯಲ್ಲಿ ನೀರು ಬರುತ್ತಿತ್ತು. ಬೆಂಗಳೂರಿನ ಕಹಳೆ ಬಂಡೆ ಉದ್ಯಾನವನದ ಹತ್ತಿರ ಇರುವ ಕೆ ಸಿ ದಾಸಿನಲ್ಲಿ ನೋಡಿದ ರಸಮಲೈನ ಬಣ್ಣ ನೆನಪಾಗಿ “ಇದು ಬೇಕು” ಎಂದು ಹೇಳಿ ತಿನ್ನೋದಕ್ಕೆ ಶುರು ಮಾಡಿದಳು. ಒಂದು ಎರಡಾಯಿತು, ಎರಡು ಮೂರಾಯಿತು. ಎಲೆನಾ ಹೇಳುತ್ತಿದ್ದ ಕತಲಾನ್ ಕಥೆ ಮೆಲ್ಲಗೆ ಕಿವಿಗೆ ತಾಗದೆ ಇರೋದಕ್ಕೆ ಶುರುವಾಯಿತು. ಆ ಕ್ರೀಮು, ಅದರ ಒಳಗಿನ ಸಿಹಿ, ಅದ್ರೊಳಗಿದ್ದ ಪಿಯರ್ ಹಣ್ಣು ಎಲ್ಲವು ಅವಳನ್ನ ಸ್ವರ್ಗ ಲೋಕಕ್ಕೆ ಕರೆದಿಯ್ಯುವಂತೆ ಭಾಸವಾಯಿತು. “ಹೇ ನೋಡು ಇಲ್ಲೂ ಸರಿ ಮತ್ತು ಹಳ್ದಿ ಕ್ರೀಮ್, ಪಕ್ಕಾ  ಕತಲಾನ್” ಅನ್ನೋದಕ್ಕೆ ಎಲೆನಾ ಹೋದಾಗ ಅವಳ ಬಾಯಿಗೆ ಪೂರ್ತಿ ಒಂದು ಬಟ್ಟಲು ಕ್ರೀಮ್  ಕತಲಾನಾವನ್ನ ತುರುಕಿದಳು…

August 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: