ಬಚ್ಚಲುಮನೆ ಎಂಬ ಬೆಚ್ಚನೆಯ ಭಾವ..

 ಗಾಯತ್ರಿ ಎನ್.

“ನಾನು ಇವತ್ತು ಸ್ನಾನ ಮಾಡುವುದಿಲ್ಲ. ಅಲ್ಲಿ ಕತ್ತಲಿದೆ. ನನಗೆ ಹೋಗಲು ಭಯವಾಗುತ್ತಿದೆ” ಬಚ್ಚಲುಮನೆ ಎಂದ ತಕ್ಷಣ ಬೇರೆಯವರಿಗೆ ಏನು ನೆನಪಾಗುತ್ತದೋ ಗೊತ್ತಿಲ್ಲ, ನನಗಂತೂ ಈ ಮಾತು ನೆನಪಾಗುತ್ತದೆ. ಬಾಲ್ಯದಲ್ಲಿ ಪ್ರತೀದಿನ ಎನ್ನುವಂತೆ ನಾನಾಡುತ್ತಿದ್ದ ಈ ಮಾತು ಕೇಳಿ ಮನೆಯವರೆಲ್ಲ ನನ್ನನ್ನು ಬಹುದೊಡ್ಡ ಅಂಜುಬುರುಕಿಯ ಪಟ್ಟಿಗೆ ಸೇರಿಸಿಬಿಟ್ಟಿದ್ದರು. ಆದರೆ ನಿಜಸ್ಥಿತಿ ಬೇರೆಯೇ ಇತ್ತು. ಸ್ನಾನವನ್ನು ಮಾಡದೇ ಇರುವುದಕ್ಕೆ ನಾನಾಡುತ್ತಿದ್ದ ಕುಂಟುನೆಪ ಅದೆನ್ನುವುದು ನನಗೆ ಮಾತ್ರ ಗೊತ್ತಿದ್ದ ಪರಮಸತ್ಯವಾಗಿತ್ತು. ಬಚ್ಚಲುಮನೆ ಮನೆಯಿಂದ ಒಂದಿಷ್ಟು ಪ್ರತ್ಯೇಕವಾಗಿದ್ದದ್ದೇ ನನ್ನಲ್ಲಿ ಸ್ನಾನದ ಕುರಿತ ಆಲಸ್ಯವನ್ನು ಹುಟ್ಟುಹಾಕಿತ್ತೇನೋ, ನನಗಿಂದಿಗೂ ಗೊತ್ತಿಲ್ಲ. ನಾನು ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳುವ ಬುದ್ಧಿವಂತರಾಗಿದ್ದರು ನನ್ನಮ್ಮ. ಹಠ ಮಾಡುತ್ತಿದ್ದ ನನ್ನನ್ನು ಎಳೆದುಕೊಂಡು ಹೋಗಿ ಸ್ನಾನ ಮಾಡಿಸಿ ಕರೆದುಕೊಂಡು ಬಂದರೇ ಅವರಿಗೆ ನೆಮ್ಮದಿ. ಸ್ವಚ್ಛಭಾರತದ ರಾಯಭಾರಿಯಾಗಿಸಬಹುದಿತ್ತು, ಅಂತಹ ಸ್ವಚ್ಛತೆಯ ಸಾಕಾರಮೂರ್ತಿ ನನ್ನಮ್ಮ. ಅವರ ಕೈಯ್ಯಿಂದ ತಪ್ಪಿಸಿಕೊಂಡು ಬರುವುದು ಸುಲಭದ ವಿಷಯವೇನೂ ಆಗಿರಲಿಲ್ಲ. ಕತ್ತಲೆಯ ಕೂಪಕ್ಕೆ ತಳ್ಳಿ ತಲೆಮೇಲೆ ಭರಭರ ನೀರು ಸುರಿಯುತ್ತಿದ್ದ ಅವಳ ಮೇಲೆ ಕೋಪ ಬರುತ್ತಿದ್ದದ್ದಂತೂ ಸುಳ್ಳಲ್ಲ. ಆದರೆ ಅಂದು ಒತ್ತಾಯದಿಂದ ನೀರೆರೆದ ಅವಳ ಕಾಳಜಿಯನ್ನು ನೆನೆಸಿಕೊಂಡಾಗ ಕಣ್ಣಂಚಲ್ಲಿ ಹನಿ ನೀರು ಸುರಿಯುತ್ತದೆ.

ಬಾಲ್ಯದಲ್ಲಿ ಒತ್ತಾಯದ ಹೇರಿಕೆಯಾಗಿದ್ದ ಬಚ್ಚಲುಮನೆ ಆ ಬಳಿಕ ನನ್ನ ಪಾಲಿಗೆ ಪ್ರತಿಭಾ ವೇದಿಕೆಯಾಗಿತ್ತು. ‘ಬಚ್ಚಲುಮನೆಯಲ್ಲಿಯೇ ಹೀಗೆ ಹಾಡುತ್ತಾಳೆ ಎಂದಮೇಲೆ ಅಪ್ಪಿತಪ್ಪಿ ಇವಳ ಕೈಗೆ ಮೈಕ್ ಸಿಕ್ಕಿದರೆ ಹೇಗೆ ಹಾಡಿಯಾಳು?’ ನನ್ನ ಜೀವಮಾನದಲ್ಲಿ ನಾನು ಪಡೆದ ಮೊದಲ ಪ್ರಶಂಸೆ ಇದು. ಬಚ್ಚಲಮನೆಯಲ್ಲಿ ನಾನು ಗುನುಗುತ್ತಿದ್ದ ‘ಇಂದು ಎನಗೆ ಗೋವಿಂದ…’ ಹಾಡನ್ನು ಹೊರಗಿನಿಂದ ಕೇಳಿಸಿಕೊಂಡು ನನ್ನ ಅಮ್ಮನ ಸ್ನೇಹಿತೆಯೊಬ್ಬರು ಹೀಗಂದಿದ್ದರಂತೆ. ಮಗಳಿಕೆ ಸಿಕ್ಕಿದ ಹೊಗಳಿಕೆ ಅಮ್ಮನನ್ನು ಆಕಾಶಕ್ಕೇರಿಸಿತ್ತು. ಬಚ್ಚಲುಮನೆಯಿಂದ ನಾನು ಹೊರಬರುವ ಮೊದಲೇ ಬೊಬ್ಬೆ ಹೊಡೆದು ಈ ಮಾತನ್ನು ನನ್ನ ಕಿವಿಗೆ ರವಾನಿಸಿದ್ದರು. ಬಚ್ಚಲುಮನೆಯ ಹಾಡಿಗೆ ನಾನು ಪಡೆದ ಹೊಗಳಿಕೆ ನನ್ನಲ್ಲಿ ಆತ್ಮವಿಶ್ವಾಸ ಹುಟ್ಟುಹಾಕಿತ್ತು. ಆ ಬಳಿಕ ಊರು ಪರವೂರಿನಲ್ಲಿ ನಡೆದ ಬಹುತೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಬಹುಮಾನ ಪಡೆದದ್ದು-ಇವುಗಳನ್ನೆಲ್ಲ ಮರೆಯುವುದಾದರೂ ಹೇಗೆ? ಇಂದು ಹಲವಾರು ಜನ ಮುಚ್ಚುಮರೆಯಿಲ್ಲದೆ ‘ನಾನು ಬಾತ್‍ರೂಂ ಸಿಂಗರ್’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಾಗೆ ನೋಡಿದರೆ ಹಲವರಲ್ಲಿರುವ ಸುಪ್ತ ಪ್ರತಿಭೆ ವ್ಯಕ್ತಗೊಳ್ಳುವುದೇ ಬಚ್ಚಲುಮನೆಯಲ್ಲಿ. ಹಲವು ದಿನಗಳ ನಂತರ ಕರೆಮಾಡಿದ್ದ ಬಾಲ್ಯದ ಗೆಳತಿಯೊಬ್ಬಳು ಅವಳ ಎಂಟು ವರ್ಷದ ಮಗನ ಗುಣಗಾನ ಮಾಡುತ್ತಾ “ಬಾತ್‍ರೂಂ ಹೊಕ್ಕರೆ ಸಾಕು, ದೊಡ್ಡದಾಗಿ ಬಾಲಿವುಡ್ ಸಾಂಗ್ ಹಾಡಿಕೊಂಡು ಡ್ಯಾನ್ಸ್ ಮಾಡುತ್ತಾನೆ ಕಣೇ. ವಾಯ್ಸ್ ರೆಕಾರ್ಡ್ ಮಾಡಿಟ್ಟಿದ್ದೇನೆ. ಮುಂದಿನ ಸಲ ಸಿಕ್ಕಾಗ ಕೇಳಿಸುತ್ತೇನೆ. ತಮಾಷೆ ಇದೆ” ಎಂದು ಹೇಳಿ ಮನತುಂಬಿ ನಗಾಡಿದ್ದಳು. ‘ಪುಣ್ಯ, ಇವಳು ವೀಡಿಯೋ ರೆಕಾರ್ಡ್ ಮಾಡಿಲ್ಲವಲ್ಲ’ ಎಂದು ನೆನೆಸಿಕೊಂಡು ನನಗೂ ತಡೆಯಲಾರದ ನಗು ಬಂದಿತ್ತು.

ನನ್ನ ಪ್ರತಿಭೆಗೆ ನೀರೆರೆದ ಬಚ್ಚಲುಮನೆ ಅದೊಂದು ದಿನ ಮರೆಯಲಾರದ ನಡುಕವನ್ನು ನನ್ನೊಳಗೆ ಮೂಡಿಸಿತ್ತು. ಶಾಲೆ ಮುಗಿಸಿ ಬರುವಾಗ ಮನೆಗೆ ಬೇಕಾಗಿದ್ದ ದಿನಸಿಯನ್ನು ತರುವ ಕೆಲಸ ಹಿರಿಯ ಮಗಳಾದ ನನ್ನದಾಗಿತ್ತು. ಯಾವತ್ತಿಗಿಂತ ತುಸು ಭಾರವಾಗಿದ್ದ ಅಂದಿನ ಕೈಚೀಲ ನನಗೇನೂ ಆಯಾಸ ಮೂಡಿಸಿರಲಿಲ್ಲ. ಆದರೂ ತಮ್ಮ-ತಂಗಿಯರಿಗಿಂತ ನಾನೇ ಹೆಚ್ಚು ಶ್ರಮಜೀವಿ ಎನ್ನುವುದನ್ನು ಹೆತ್ತವರೆದುರು ತೋರಿಸಿಕೊಳ್ಳಬೇಕೆಂಬ ಹಪಾಹಪಿ. ಭಾರೀ ಆಯಾಸವಾದಂತೆ ನಟಿಸಿದವಳು ಬಚ್ಚಲುಮನೆ ಹೊಕ್ಕಿದ್ದೆ. ಎರಡು ನಿಮಿಷ ಕಳೆದಿತ್ತೇನೋ, ನಾನು ನಿಂತ ನೆಲ ಚಲಿಸುತ್ತಿರುವಂತೆ ಅನಿಸತೊಡಗಿತು. ‘ಭೂಮಿ ಸೂರ್ಯನ ಸುತ್ತ ಚಲಿಸುತ್ತಿರುತ್ತದೆ’ ಎಂದು ಬೋಧಿಸಿದ ವಿಜ್ಞಾನ ಶಿಕ್ಷಕರ ಮಾತು ನೂರಕ್ಕೆ ನೂರರಷ್ಟು ನಿಜ ಎಂದು ಅಂದುಕೊಂಡು ಸ್ನಾನ ಮುಂದುವರಿಸಿದರೆ ಜೋರಾಗಿ ಉಸಿರಾಡಿದಂತಹ ಸದ್ದು. ಇದ್ದ ಮಂದ ಬೆಳಕನ್ನೇ ಮುಂದಿರಿಸಿಕೊಂಡು ನೋಡಿದರೆ ಹೃದಯ ಹಾರಿಹೋಗುವಂತಾಗಿತ್ತು. ಹಾವೊಂದು ನನಗೆ ಪೈಪೋಟಿ ಕೊಡುವಂತೆ ಚಲಿಸತೊಡಗಿತ್ತು. ಕಿಟಾರನೆ ಕಿರುಚಿಕೊಂಡವಳು ಐದೇ ಸೆಕೆಂಡಿನಲ್ಲಿ ಹೊರಗೋಡಿದ್ದೆ. ಮದುವೆ ಆದ ಮೇಲೆ ಪತಿರಾಯರಲ್ಲಿ “ಎರಡು ನಿಮಿಷ ನಾನು ಹಾವಿನ ಮೇಲೆಯೇ ನಿಂತಿದ್ದೆ” ಎಂದು ಬಾಯಿ ಅಗಲ ಮಾಡಿ ಹೇಳಿದ್ದಕ್ಕೆ ಅವರು “ಹಾವಿಗೆ ಏನೂ ಆಗಿರಲಿಲ್ಲ ತಾನೇ?” ಎಂದು ತುಂಟನಗೆ ಸೂಸುತ್ತಾ ಕೇಳಿದ್ದರು. ಅಪ್ಪನ ಮಾತನ್ನೇ ನಿಜ ಎಂದುಕೊಂಡ ನನ್ನ ಮುದ್ದುಮಗ “ಹಾವಿಗೆ ಏನಾಯಿತು ಹೇಳಮ್ಮ” ಎಂದು ತೊದಲು ನುಡಿದಿದ್ದ.

ನಾನೂ ನನ್ನ ಗಂಡ ಬಾಡಿಗೆ ಮನೆಯಲ್ಲಿದ್ದ ಸಂದರ್ಭ. ಪಕ್ಕದ ಮನೆಯಲ್ಲಿದ್ದ ನನ್ನ ಗೆಳತಿ ಕನ್ನಡ ಉಪನ್ಯಾಸಕಿಯಾಗಿದ್ದಳು. ವಿದ್ಯಾರ್ಥಿಗಳು ಅವಳ ಪಾಠವನ್ನು ಇಷ್ಟಪಡುತ್ತಾಳೆಂಬ ವಿಚಾರ ನನಗೆ ಗೊತ್ತಿತ್ತು. ಒಳ್ಳೆಯ ಭಾಷಣಗಾರ್ತಿಯೂ ಆಗಿದ್ದಳು. ಅವಳ ಮನೆತುಂಬ ಜನ. ಬಿಡುವಿರದ ಕೆಲಸದ ನಡುವೆ ಇವಳು ತರಗತಿಗೆ, ಭಾಷಣಕ್ಕೆ ಹೇಗೆ ಸಿದ್ಧಳಾಗುತ್ತಾಳಪ್ಪಾ ಎಂಬ ಕುತೂಹಲ ನನಗೆ. ಕೇಳಿಯೇಬಿಟ್ಟೆ. “ನಿಜ ಹೇಳುತ್ತೇನೆ, ನಗಬೇಡ. ನನ್ನ ಯೋಚನೆಗಳು ಗರಿಗೆದರುವುದು ಬಾತ್‍ರೂಮಿನಲ್ಲಿ. ಬಾತ್‍ರೂಮಿನ ಆ ಏಕಾಂತ ನನ್ನಲ್ಲಿ ಹೊಸ ಬಗೆಯ ಯೋಚನೆಗಳನ್ನು ಹುಟ್ಟಿಸುತ್ತದೆ. ಅಲ್ಲಿ ಹೊಳೆಯುವಷ್ಟು ಯೋಚನೆಗಳು ಬೇರೆಲ್ಲಿಯೂ ಸಿಗಲು ಸಾಧ್ಯವಿಲ್ಲ” ನಗುತ್ತಾ ಅವಳು ಹೇಳಿದ ಮಾತುಗಳನ್ನು ಪ್ರಯೋಗಿಸಿ ನೋಡಲು ನನ್ನ ಸಂಶೋಧಕ ಮನಸ್ಸು ಬಯಸಿತ್ತು. ಬಾತ್‍ರೂಮ್ ಹೊಕ್ಕವಳು ಯೋಚನೆಗಳು ದಾಳಿಯಿಡುತ್ತವೇನೋ ಎಂದು ಕಾದೆ. ಫಲಿತಾಂಶ ಮಾತ್ರ ಶೂನ್ಯ. “ಆಗ ಒಳಗೆ ಹೋಗಿದ್ದಿ. ತಪಸ್ಸು ಮಾಡುತ್ತಿದ್ದೀಯೋ ಹೇಗೆ?” ಎಂದು ಪತಿರಾಯರು ತಮಾಷೆ ಮಾಡುವಂತಾಯಿತಷ್ಟೇ.

ನನ್ನಪ್ಪನಿಗಂತೂ ಬಚ್ಚಲುಮನೆ ಎನ್ನುವುದು ಧಾರ್ಮಿಕ ನಂಬಿಕೆಯ ಇನ್ನೊಂದು ಆಯಾಮವಾಗಿಹೋಗಿತ್ತು. ದೇವರ ಕೋಣೆಯನ್ನು ಹೊಕ್ಕುವುದಕ್ಕೆ ಮೊದಲೇ ಬಚ್ಚಲುಮನೆಯಲ್ಲಿಯೇ ದೇವರನ್ನು ನೆನೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದರು. ‘ಗಂಗೇಚ ಯಮುನೇಚ್ಛೈವ ಗೋದಾವರೀ ಸರಸ್ವತಿ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿಂ ಸನ್ನಿಧಿಂ ಕುರು||’ ಬೆಳಗ್ಗಿನ ಬ್ರಾಹ್ಮೀ ಮುಹೂರ್ತದಲ್ಲಿ ತಣ್ಣೀರಿನ ಸ್ನಾನ. ಮಡಿ ವಸ್ತ್ರದಲ್ಲಿ ದೇವರ ಪೂಜೆ. ಇದು ನನ್ನಪ್ಪನ ದಿನ ಶುರು ಆಗುತ್ತಿದ್ದ ರೀತಿ. ಬಚ್ಚಲುಮನೆಯನ್ನೇ ಪವಿತ್ರ ಕ್ಷೇತ್ರಗಳ ಸನ್ನಿಧಾನ ಎನ್ನುವಂತೆ, ಬಚ್ಚಲುಮನೆಯ ನೀರನ್ನೇ ಪವಿತ್ರ ತೀರ್ಥ ಎನ್ನುವಂತೆ ಪರಿಗಣಿಸಿದ ನಮ್ಮ ಹಿರಿಯರ ಅಪೂರ್ವ ಸಾಂಕೇತಿಕತೆಯನ್ನು ಯಾವ ಕವಿಗಳೂ ಹಿಂದಿಕ್ಕಲು ಸಾಧ್ಯವಿಲ್ಲ. ದೇವರ ಕುರಿತಾಗಿದ್ದ ಅವರ ಅಚಲ ನಂಬಿಕೆ ಚಳಿಗಾಲದ ಬೆಳಗ್ಗಿನ ಚಳಿಯನ್ನೂ ಮೀರಿಸಿವಷ್ಟು ಸದೃಢವಾಗಿತ್ತು ಎನ್ನುವುದನ್ನು ನೆನೆಸಿಕೊಂಡಾಗ ಅಚ್ಚರಿಯಾಗುತ್ತದೆ. ಶಬರಿಮಲೆ ಯಾತ್ರಾರ್ಥಿಗಳ ಕಠಿಣ ವ್ರತವನ್ನು ತಿಳಿದಾಗಲೂ ಅಚ್ಚರಿಯಾಗುತ್ತದೆ. ಬಚ್ಚಲುಮನೆಯೊಳಗಿನ ಬಿಸಿಯಲ್ಲಿ ಭಕ್ತಿ ಭಂಡಾರವನ್ನು ಬಚ್ಚಿಟ್ಟ ಭಾರತೀಯ ಪರಂಪರೆಯ ಅದ್ಭುತ ಆಸ್ತಿಕತೆಗೆ ಧನ್ಯವಾದಗಳನ್ನು ಅರ್ಪಿಸಲೇಬೇಕು.

ಹಾಗೆ ನೋಡಿದರೆ ಮನೆಯ ಉಳಿದ ಎಲ್ಲಾ ಅಂಗಗಳಿಗಿಂತ ಮಿಗಿಲಾಗಿ ಬಚ್ಚಲುಮನೆ ರಾಜಮರ್ಯಾದೆಯನ್ನು ಪಡೆದುಕೊಳ್ಳುತ್ತದೆ. ಅಡುಗೆ ಕೋಣೆ ಎನ್ನುತ್ತೇವೆ. ಮಲಗುವ ಕೋಣೆ ಎನ್ನುತ್ತೇವೆ. ದೇವರ ಕೋಣೆ ಎನ್ನುತ್ತೇವೆ. ಆದರೆ ಬಚ್ಚಲನ್ನು ಬಚ್ಚಲು ಮನೆ ಎನ್ನುತ್ತೇವೆ. ಮನೆಯ ಒಂದು ಭಾಗವಾಗಿರುವ ಬಚ್ಚಲನ್ನು ಇನ್ನೊಂದು ಮನೆಯೇ ಎಂಬಂತೆ ಪರಿಗಣಿಸುತ್ತೇವೆ. ಮನೆಯ ಬೇರಾವ ಕೋಣೆಗಳಿಗೂ ಸಿಗದ ಪ್ರಾಶಸ್ತ್ಯ ಬಚ್ಚಲುಮನೆಗಿದೆ. ಉಳಿದ ಕೋಣೆಗಳು ಈ ತಾರತಮ್ಯವನ್ನು ಒಪ್ಪಿಕೊಳ್ಳದೆ ಪ್ರತಿಭಟಿಸದಿರುವುದೇ ಆಶ್ಚರ್ಯ! ಆಧುನಿಕ ಕಾಲದಲ್ಲಂತೂ ಬಾತ್‍ರೂಂ ಮತ್ತಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. “ಬಾತ್‍ರೂಮಿನ ಇಂಟೀರಿಯರ್ ಡಿಸೈನ್‍ಗೆ ಮೂರು ಲಕ್ಷ ಖರ್ಚಾಗಿದೆ” ಬೆಂಗಳೂರಿನ ಸಂಬಂಧಿಕರ ಮನೆಗೆ ಹೋದಾಗ ಸಹಜವೆಂಬಂತೆ ಅವರಾಡಿದ ಈ ಮಾತು ಕೇಳಿ ಅಚ್ಚರಿಯಿಂದ ಕಣ್ಣರಿಳಿಸಿದ್ದೆ.

‘ಇದೇ ಹಣದಲ್ಲಿ ಸರಳವಾದ ಅರ್ಧ ಮನೆಯೊಂದನ್ನು ಕಟ್ಟಿ ಮುಗಿಸಬಹುದಿತ್ತಲ್ಲ’ ನಾಲಗೆ ತುದಿವರೆಗೂ ಬಂದ ಮಾತನ್ನು ಒತ್ತಾಯಪೂರ್ವಕ ತಡೆದಿದ್ದೆ. ಬೆಂಗಳೂರಿನಲ್ಲಿದ್ದ ನನ್ನ ಗೆಳತಿಯೊಬ್ಬಳ ಬಾಡಿಗೆ ಮನೆಯ ಪರಿಸ್ಥಿತಿಯೇ ಬೇರೆ. “ಬಾತ್‍ರೂಮ್ ಇಕ್ಕಟ್ಟಾಗಿದೆ ಎಂದುಕೊಳ್ಳಬೇಡ ಆಯ್ತಾ? ಹಾಗೆ ನೋಡಿದರೆ ಇಲ್ಲಿರುವ ಬಾಡಿಗೆ ಮನೆಗಳಲ್ಲಿ ದೊಡ್ಡ ಬಾತ್‍ರೂಮ್ ಎಂದರೆ ನಮ್ಮ ಮನೆಯದ್ದೇ”- ನಾನು ಬಾತ್‍ರೂಮ್ ಪ್ರವೇಶಿಸುವಾಗಲೇ ಅರ್ಧ ಸಂಕೋಚದಿಂದ, ಅರ್ಧ ಹೆಮ್ಮೆಯಿಂದ ನುಡಿದಿದ್ದಳು ಗೆಳತಿ. ಮರುದಿನ ಬೆಳಗ್ಗೆ “ಬಿಸಿನೀರು ಬರುತ್ತಿಲ್ಲ ಕಣೇ” ಎಂದದ್ದಕ್ಕೆ “ಯಾವಾಗಲೂ ಎಂಟು ಗಂಟೆಗೇ ಬಂದುಬಿಡುತ್ತದೆ. ಇವತ್ತು ತಡವಾದೀತೋ ಏನೋ. ನಿನಗೇನೂ ಗಡಿಬಿಡಿ ಇಲ್ಲದಿದ್ದರೆ ಸ್ವಲ್ಪ ಸಮಯ ಕಾದು ಆಮೇಲೆ ಸ್ನಾನ ಮಾಡು” ಎಂದು ಮೊದಲಿನ ಸಲುಗೆಯಿಂದಲೇ ನುಡಿದಿದ್ದಳು. ಬೇಗ ಹೊರಟುಬರಬೇಕಾದ ಒತ್ತಡ ನನ್ನನ್ನು ತಣ್ಣೀರಿನ ಸ್ನಾನಕ್ಕೆ ಎಡೆಮಾಡಿತ್ತು. ಬಾಲ್ಯದಲ್ಲಿ ಬಚ್ಚಲುಮನೆಯ ಹಂಡೆ ತುಂಬಾ ದಿನದ ಇಪ್ಪತ್ನಾಲ್ಕು ಗಂಟೆಯೂ ತುಂಬಿರುತ್ತಿದ್ದ ಬಿಸಿನೀರು ಮೂಡಿಸುತ್ತಿದ್ದ ಬೆಚ್ಚನೆಯ ಭಾವದ ನೆನಪು ಮನವನ್ನು ಕಾಡತೊಡಗಿತ್ತು.

‍ಲೇಖಕರು nalike

August 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. NV Vasudeva Sharma

    ಸೊಗಸಾಗಿದೆ. ಬಚ್ಚಲಮನೆಯ ಸಂಬಂಧಗಳು ಬಿಚ್ಚಿಕೊಳ್ಳುತ್ತಾ ಹೋಯಿತು. ನಮ್ಮ ಬೆಂಗಳೂರಿನ ಪುಟ್ಟ ಪುಟ್ಟ ಬಚ್ಚಲಗೂಡುಗಳು, ಮಲೆನಾಡಿಗೆ ಹೋದಾಗ ಬಚ್ಚಲʼಮನೆʼ ಎಂಬುದರ ವಿಶಾಲತೆ ನೋಡಿ ದಂಗಾಗಿದ್ದೆ. ಅದು ಬಚ್ಚಲಮನೆ! ಮನೆ ಕಟ್ಟಿಸುವಾಗ ನಿಜವಾಗಿಯೂ ನೀವು ಹೇಳಿರುವಂತೆ ಒಂದು ವಿಶಾಲವಾದ ಬಚ್ಚಲಮನೆ ಸಾದಿಸಿಯೇಬಿಟ್ಟೆ (ನಿಜವಾಗಿಯೂ ಬಹಳ ಖರ್ಚಾಯಿತು). ಯಾರೋ ಕೇಳಿದ್ದರು, ಅಲ್ಲೋ ನೀನೇನು ಅಲ್ಲಿ ವಾಸ ಮಾಡ್ತೀಯ ಅಂತ… ಇನ್ನೊಂದು ಕೊಂಕಿತ್ತು, ʼಕ್ಲೀನ್‌ ಮಾಡುವಾಗ ನೋಡ್ತಿರು ಎಷ್ಟು ಕಷ್ಟ ಅಂತʼ, ಅಂತ. ಮನೆ ಕಟ್ಟಿ ಈಗ ೨೦ ವರ್ಷಕ್ಕೆ ಬರುತ್ತಿದೆ, ಈಗ ನಿಜವಾಗಿಯೂ ಕೋವಿಡ್‌-೧೯ರ ಕಾಲದಲ್ಲೇ ನಾನು ಹೆಚ್ಚು ಕಾಲ ಬಚ್ಚಲʼಮನೆʼಯಲ್ಲಿ ಕಾಲ ಕಳೆದದ್ದು. ಸಮಗ್ರವಾದ ಕ್ಲೀನ್‌ ಮಾಡಲೂ ಯತ್ನಿಸಿದ್ದು.

    ಪ್ರತಿಕ್ರಿಯೆ
  2. ವಿಜಯೇಂದ್ರ.ಕುಲಕರ್ಣಿ.ಕಲಬುರಗಿ

    ನಮ್ಮ ನೆಂಟರ ಹಳೆಯ ದೊಡ್ಡ
    ಮನೆಯಲ್ಲಿ ಪಡಸಾಲೆಯಂತಹ ಬಚ್ಚಲು ಮನೆ, ನೀರು ತುಂಬಿ ತುಳುಕುವ
    ಗಚ್ಚುಗಳು( ಟ್ಯಾಂಕ್),
    ಉರಿಯುವ ಒಲೆ, ಸದಾ ಬಿಸಿನೀರು ತುಂಬಿದ ಹಂಡೆ,
    ವಿಶಾಲವಾದ ಬೆಳಕಿಂಡಿ , ತಲೆ ಎತ್ತಿ ನೋಡಿದರೆ ತಲೆದೂಗುವ ಮರ ..ಓ..ನೆನಪಾದರೆ ರೋಮಾಂಚನ..
    ವಿಜಯೇಂದ್ರ.ಕುಲಕರ್ಣಿ.ಕಲಬುರಗಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: