ಮುದ್ರಕನ ಡೈರಿ: S- ಸ್ವಾತಿ V- ವರಲಕ್ಷ್ಮಿ A- ಅಶೋಕ್ ಕುಮಾರ್ N- ನಂದ

‘ಸ್ವ್ಯಾನ್’ ಎನ್ನುವ ಹೆಸರಿನ ಬಗ್ಗೆ ಅನೇಕರಿಗೆ ಕುತೂಹಲವಿದೆ…

ಸ್ವ್ಯಾನ್ ಹೆಸರು ಸೂಚಿಸಿದ್ದು ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ, ನನ್ನ ಗುರು, ಮಾರ್ಗದರ್ಶಕ, ಸ್ನೇಹಿತ, ಶಬ್ದಗಾರುಡಿಗ – ಬೈರಮಂಗಲ ರಾಮೇಗೌಡರು.

ನನ್ನನ್ನು ಬರೆಯುವಂತೆ ಪ್ರೇರೇಪಿಸಿ, ಬರೆದುದನ್ನು ತಿದ್ದಿ ತೀಡಿ ಅನೇಕ ಸಲಹೆಗಳನ್ನು ಕೊಟ್ಟು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಗುರು…

ಮಗನ ಏಳಿಗೆಗೆ ಮಾರ್ಗದರ್ಶನ ಮಾಡುವ ತಂದೆಯಂತೆ, ತಂದೆಗಿಂತ ಮಿಗಿಲಾಗಿ ನನ್ನ ಜೊತೆ ನಿಂತು ಉದ್ಯಮಕ್ಕೆ ಅನೇಕ ರೀತಿಯ ನೆರವನ್ನು ನೀಡುವ ಮಾರ್ಗದರ್ಶಕ…

ಕೆಲಸದ ಒತ್ತಡಗಳಿಂದ ಬಿಡುವಿನ ಸಂದರ್ಭದಲ್ಲಿ ಬೇರೆಬೇರೆಯವರ ಜೊತೆ ಹೇಗೆ ಸ್ನೇಹದಿಂದ ಕಾಲಕಳೆಯಬೇಕು ಎಂಬುದನ್ನು ತೋರಿಸಿಕೊಟ್ಟ ಆತ್ಮೀಯ ಸ್ನೇಹಿತ..

ನಾನು ಮುದ್ರಣಾಲಯ ಪ್ರಾರಂಭಿಸಬೇಕು ಎಂಬ ನಿರ್ಧಾರ ಮಾಡಿದ ಮೇಲೆ ಸಲಹೆ ಕೇಳಲು ಗುರುಗಳಾದ ಬೈರಮಂಗಲ ರಾಮೇಗೌಡರ ಮನೆಗೆ, ಬೆಂಗಳೂರಿನಲ್ಲಿ ನನಗೆ ಬೆಂಬಲವಾಗಿ ನಿಂತ, ಆಗ ಬೆಂಗಳೂರಿನ ಮುರುಘಾ ಮಠದ ಶಾಖೆಯಲ್ಲಿ ಮ್ಯಾನೇಜರ್ ಆಗಿದ್ದ ವೀರಣ್ಣಗೌಡರ ಜೊತೆ ಹೋದೆ.

ಆಗಷ್ಟೇ ಅವರು ಯಾವ ಮುನ್ಸೂಚನೆಯೂ ಇಲ್ಲದೆ ಕೈಕಾಲುಗಳ ಚಲನೆಯನ್ನೇ ಸ್ಥಗಿತಗೊಳಿಸಿದ್ದ ವಿಲಕ್ಷಣ ಖಾಯಿಲೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಎರಡು ತಿಂಗಳು ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿ ವಿಶ್ರಾಂತಿಯಲ್ಲಿದ್ದರು. ಸ್ವಲ್ಪ ಹೊತ್ತು ಆರೋಗ್ಯ ವಿಚಾರಿಸಿ ಅದು ಇದು ಮಾತನಾಡುತ್ತಲೇ ಇದ್ದೆವೇ ಹೊರತು, ಅವರ ಮುಂದೆ ನನ್ನ ಮನದಾಸೆಯನ್ನು ಹೇಳಲು ಸ್ವಲ್ಪ ಅಳುಕು.

ಏಕೆಂದರೆ ಬೈರಮಂಗಲ ಅವರು ನಮ್ಮ ಯಜಮಾನರಾದ ಅಶೋಕ್ ಕುಮಾರ್ ಅವರ ಅತ್ಯಂತ ಆತ್ಮೀಯ ಸ್ನೇಹಿತರು. ಹೇಗೆ ಇವರ ಮುಂದೆ ಆ ವಿಷಯ ಪ್ರಸ್ತಾಪಿಸುವುದು ಅನ್ನುವಷ್ಟರಲ್ಲಿ ವೀರಣ್ಣಗೌಡರೇ… ಸರ್, ನಿಮ್ಮ ಶಿಷ್ಯ ಸ್ವಂತ ಮುದ್ರಣಾಲಯ ಪ್ರಾರಂಭಿಸಬೇಕು ಎಂದಿದ್ದಾನೆ… ಎಂದು ಮಾತು ಶುರುಮಾಡಿದರು. ಆಗ ನಾನೂ ಧ್ವನಿಗೂಡಿಸಿದೆ, ಹೌದು ಸರ್ ಎಂದು. ಆಗ ಬೈರಮಂಗಲ ರಾಮೇಗೌಡರು..”ಹೋ ಒಳ್ಳೆಯ ಆಲೋಚನೆ, ಆದರೆ ಮೊದಲು ಯಜಮಾನರಿಗೆ ಈ ವಿಷಯ ತಿಳಿಸಿ, ತೊಂದರೆ ಆಗದ ಹಾಗೆ ಮುಂದುವರಿ” ಎಂದು ಉತ್ತಮ ಸಲಹೆಯನ್ನು ಕೊಟ್ಟರು.

ತಕ್ಷಣ “ಸರ್ ನಾವು ಪ್ರಾರಂಭಿಸಬೇಕೆಂದಿರುವ ಮುದ್ರಣಾಲಯಕ್ಕೆ ಯಜಮಾನರ ಕುಟುಂಬದ ಹೆಸರು ಬರುವಂತೆ ಒಂದು ಹೆಸರು ಸೂಚಿಸಿ. ಏಕೆಂದರೆ ಮುದ್ರಣ ಕ್ಷೇತ್ರದಲ್ಲಿ ನಾನು ಬೆಳೆಯಲು ಸ್ಫೂರ್ತಿ, ಪ್ರೇರಣೆ ಅಶೋಕ್ ಕುಮಾರ್ ಮತ್ತು ಅವರ ಇಡೀ ಕುಟುಂಬದಿಂದ ಬಂತು. ಆ ಕುಟುಂಬದ ಒಡನಾಟ ಪ್ರೀತಿ ವಿಶ್ವಾಸಗಳು ಸಿಗದಿದ್ದರೆ ನನ್ನ ಬಾಳ ಪಯಣ ಬೇರೊಂದು ದಾರಿ ಹಿಡಿಯುತ್ತಿತ್ತು. ಅದು ನನ್ನ ಪಾಲಿಗೆ ಸ್ಮರಣೆಯೊಂದೇ ಆದರೆ ಸಾಲದು. ಆ ಕೃತಜ್ಞತೆ ನಾನು ಮುದ್ರಣ ಕ್ಷೇತ್ರದಲ್ಲಿ ಇರುವವರೆಗೂ ಕಾಯುವ ನೆರಳಾಗಿ ಇರುವಂತದ್ದಾಗಬೇಕು. ಅಶೋಕ್ ಕುಮಾರ್ ಅವರ ಕುಟುಂಬದ ಸದಸ್ಯರಲ್ಲಿ ಒಬ್ಬನಂತೆಯೇ ಇದ್ದ ನನಗೆ ಅಲ್ಲಿಂದ ಹೊರಗೆ ಹೋಗಬೇಕೆಂದಾಗ ಕಾಡಿದ ನೋವು ಗಣನೆಗೆ ನಿಲುಕದ್ದು. ಈ ಮಾನವ ಸಂಬಂಧಗಳನ್ನು ಹಚ್ಚಹಸಿರಾಗಿ ಉಳಿಸಬೇಕೆನ್ನುವ ಹಂಬಲ ನನ್ನದು ಎಂದು ಹೇಳಿದೆ.

ಅವರು ಒಳ್ಳೆಯ ಆಲೋಚನೆ, ಸ್ವಲ್ಪ ಸಮಯ ಕೊಡು, ಯೋಚನೆ ಮಾಡಿ, ಎರಡು ಮೂರು ದಿನಗಳಲ್ಲಿ ಮೂರು ನಾಲ್ಕು ಹೆಸರು ಸೂಚಿಸುವೆ ಎಂದು ಹೇಳಿ ಮುದ್ರಣಾಲಯ ಪ್ರಾರಂಭಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿಚಾರಿಸಿ ಬಹಳ ಸಂತೋಷದಿಂದ ಬೀಳ್ಕೊಟ್ಟರು..

 

ಅವರ ಮನೆಯಿಂದ ವಾಪಸ್ಸಾದ ಅರ್ಧ ಗಂಟೆಯಲ್ಲೇ ಬೈರಮಂಗಲ ಅವರ ಕಡೆಯಿಂದ ಕರೆ ಬಂತು. ಕಿಟ್ಟಿ ಒಂದು ಹೆಸರು ಹೊಳೆದಿದೆ, ಅಶೋಕ್ ಕುಮಾರ್ ಅವರ ಕುಟುಂಬದ ಎಲ್ಲಾ ಸದಸ್ಯರ ಹೆಸರಿನಿಂದ ಮೊದಲಿನ ಅಕ್ಷರಗಳನ್ನು ತೆಗೆದುಕೊಂಡು
S- Swathi (ಮಗಳು)
V- Varalakshmi (ಶ್ರೀಮತಿ)
A- Ashok Kumar (ಯಜಮಾನರು)
N- Nanda (ಮಗ)
ಇಂಗ್ಲಿಷ್ ನಲ್ಲಿ ಒಟ್ಟಾಗಿ ಸೇರಿಸಿದರೆ SVAN ಅಂತ ಬರುತ್ತೆ. ಇಂಗ್ಲಿಷ್ ನಲ್ಲಿ SWAN ಅನ್ನುವ ಶಬ್ದ ಇದೆ. ಅದಕ್ಕೆ ಹಂಸ ಅಂತ ಅರ್ಥ. ಅದನ್ನೇ ಹೋಲುವ ಇದನ್ನು ‘ಸ್ವ್ಯಾನ್’ ಅಂತ ಕರೆಯಬಹುದು ಎಂದರು. ನಮಗೆಲ್ಲ ಈ ಹೆಸರು ಬಹಳ ಇಷ್ಟವಾಗಿ, ತಕ್ಷಣ ‘ಇದೇ ಹೆಸರು ಇರಲಿ’ ಎಂದು ಅಂತಿಮಗೊಳಿಸಿದೆವು.

ಹೆಸರು ಸೂಚಿಸಿ ಸುಮ್ಮನಾಗದೆ ಪ್ರಾರಂಭದಿಂದಲೂ ಗುರುಗಳು ನಮ್ಮ ಜೊತೆ ನಿಂತರು. ಅವರ ಸ್ನೇಹಿತರ ಕಡೆಯಿಂದ ದೊಡ್ಡ ಮುದ್ರಣ ಆದೇಶ ಕೊಡಿಸಿ ಮುದ್ರಣಾಲಯಕ್ಕೆ ಕೆಲಸ ಮತ್ತು ಆರ್ಥಿಕವಾಗಿ ನೆರವಾದರು. ಅದೂ ಅಲ್ಲದೇ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಯಾರಾದರೂ ನಿಮ್ಮ ಮನೆಗೆ ಬರುತ್ತೇವೆ ಎಂದರೆ..” ಬೇಡ ಬೇಡ, ಚಾಮರಾಜಪೇಟೆಯಲ್ಲಿ ಸ್ವ್ಯಾನ್ ಪ್ರಿಂಟರ್ಸ್ ಗೆ ಬನ್ನಿ” ಎನ್ನುತ್ತಿದ್ದರು. ಯಾಕೆಂದರೆ ಅವರ ಒಡನಾಡಿಗಳೆಲ್ಲರೂ ಸಾಹಿತ್ಯ ವಲಯದವರು. ಅವರು ಬಂದು ಒಮ್ಮೆ ಮುದ್ರಣಾಲಯ ನೋಡಿದರೆ ಮುಂದೆ ಏನಾದರೂ ಅವರ ಮುದ್ರಣದ ಕೆಲಸ ಆಗಬೇಕಾದರೆ ತಕ್ಷಣ SVAN ನೆನಪು ಬರಲಿ ಎಂದು.

ಯಾರೇ ಅವರಿಗೆ ಕರೆ ಮಾಡಿದರೂ ನಾನು ಚಾಮರಾಜಪೇಟೆ ಸ್ವ್ಯಾನ್ ಪ್ರಿಂಟರ್ಸ್ ನಲ್ಲಿದ್ದೇನೆ ಎಂದು ಹೇಳುತ್ತಿದ್ದರು. ಎರಡು ಮೂರು ಬಾರಿ ಅವರ ಕಿವಿಗೆ SVAN ಹೆಸರು ಬಿದ್ದರೆ ಅವರಿಗೆ  SVAN ಮುದ್ರಣ ಪರಿಚಯವಾಗಿ ಅವರ ಮನದಲ್ಲಿ ಉಳಿಯಲಿ ಎಂದು. ಅಲ್ಲದೆ ಅವರು ಹೋಗುತ್ತಿದ್ದ ಎಲ್ಲಾ ಸಭೆ-ಸಮಾರಂಭಗಳಿಗೆ ನನ್ನನ್ನು ಜೊತೆಯಲ್ಲಿ ಕರೆದೊಯ್ದು ಅಲ್ಲಿ ಸೇರಿರುತ್ತಿದ್ದ ಹಿರಿಯ-ಕಿರಿಯ ಸಾಹಿತಿಗಳಿಗೆ ಹಾಗು ಪ್ರಕಾಶಕರಿಗೆ ಪರಿಚಯಿಸುತ್ತಿದ್ದರು. ಇದರಿಂದಾಗಿ ಅತ್ಯಂತ ಅಲ್ಪಾವಧಿಯಲ್ಲಿ ಎಲ್ಲರ ಮನದಲ್ಲಿ SVAN ಉಳಿಯುವಂತಾಯಿತು.

ಒಂದು ದಿನ ‘ವಿಜಯ ಕರ್ನಾಟಕ’ದಲ್ಲಿ ಕೆಲಸ ಮಾಡುತ್ತಿದ್ದ ಜಯಪ್ರಕಾಶ್ ನಾರಾಯಣ್ ಬಿಡುವಿನ ಸಮಯದಲ್ಲಿ ಕಾಫಿಗೆ ಸಿಕ್ಕು ಅವರ ಜೊತೆ ಹರಟುವಾಗ, ಸಾಕು ನಾಯಿಗಳ ಬಗ್ಗೆ ಬೇರೆಬೇರೆಯವರಿಂದ ಲೇಖನ ತರಿಸಿ ನಾಯಿಗಳ ನಿಯತ್ತನ್ನು ಕುರಿತು ಒಂದು ವಿಶೇಷ ಪುಟ ಮಾಡುತ್ತಿದ್ದೇವೆ ಎಂದರು. ತಕ್ಷಣ ನಾನು ನಮ್ಮ ಮನೆಯಲ್ಲಿದ್ದ ವಿಶೇಷವಾದ ನಾಯಿಗಳ ಬಗ್ಗೆ ಬೈರಮಂಗಲ ಅವರ ಮುಂದೆ ಅನುಭವ ಹಂಚಿಕೊಂಡೆ. ಅವರು ಚೆನ್ನಾಗಿದೆ, ನೀನು ಹೇಳಿದ್ದನ್ನೇ ಬರೀ ವಿಜಯ ಕರ್ನಾಟಕಕ್ಕೆ ಕಳಿಸೋಣ ಎಂದರು.

ನನಗೆ ಸರಿಯಾಗಿ ಬರೆಯೋಕೆ ಬರಲ್ಲ, ಬೇಡ ಬಿಡಿ ಎಂದಾಗ.. ನಿನಗೆ ಹೆಂಗೆ ಬರುತ್ತೋ ಹಂಗೇ ಬರೀ ಎಂದು ಪಟ್ಟುಹಿಡಿದು ಕೂತು ಬರೆಸಿದರು. ನಂತರ ಅದನ್ನು ತಿದ್ದಿ ತೀಡಿ ಕೊಟ್ಟರು. ಅದು ವಿಜಯ ಕರ್ನಾಟಕದಲ್ಲಿ ಪ್ರಕಟಣೆಯೂ ಆಯಿತು. ಇದು ನನ್ನ ಮೊದಲ ಬರವಣಿಗೆ. ಹೀಗೆ ಮುಂದೆ ನನ್ನಲ್ಲಿದ್ದ ಅನೇಕ ವಿಚಾರಗಳನ್ನು, ವಿಶಿಷ್ಟ ಅನುಭವಗಳನ್ನು ಕೆದಕಿ ತೆಗೆದು, ಹೇಗೆ ಬರೀಬೇಕು ಎಂಬುದಕ್ಕೆ ಮೊದಲು ಕನ್ನಡದ ಬೇರೆ ಬೇರೆ ತಲೆಮಾರಿನ ಹಲವು ಮಹತ್ತರ ಕೃತಿಗಳನ್ನು, ದಿನವೂ ದಿನಪತ್ರಿಕೆ, ವಾರಪತ್ರಿಕೆ ಹಾಗು ವಿಶೇಷಾಂಕಗಳಲ್ಲಿ ಸಾಮಾನ್ಯ ವಾಚಕರು ಬರೆಯುವ ಲೇಖನಗಳನ್ನು ನಿರಂತರವಾಗಿ ಓದಲು ಸಲಹೆಗಳನ್ನು ಕೊಟ್ಟು, ನನ್ನಲ್ಲಿ ಓದುವ ಅಭ್ಯಾಸವನ್ನು ಬೆಳೆಸಿದರು. ಹಾಗೆಯೇ ಲೇಖನಗಳನ್ನೂ ಬರೆಸಿದರು.

ನನ್ನ ಬರಹ ಬರೀ ಮೂಳೆ ಮಾಂಸಗಳದ್ದು. ಅದಕ್ಕೆ ರೂಪ ಕೊಟ್ಟವರು ಬೈರಮಂಗಲ ಅವರು. ಅದರಿಂದಾಗಿ, ಏನಾದರೂ ಸರಿಯೇ ಬರೆಯಬಲ್ಲೆ ಎನ್ನುವ ಆತ್ಮವಿಶ್ವಾಸ ನನ್ನೊಳಗೆ ಮೂಡುವಂತಾಯಿತು. ಇವರ ಜೊತೆ ದಿನಾ ಒಂದು ಸ್ವಲ್ಪ ಹೊತ್ತು ಹರಟಿದರೆ ಸಾಕು ಎಷ್ಟೋ ವಿಶಿಷ್ಟ ಕನ್ನಡ ಪದಗಳು ನಮ್ಮೊಳಗೆ ಹೊಕ್ಕು ನಿಲ್ಲುತ್ತವೆ.

ನನ್ನ ಮೇಲಿರುವ ಅವರ ಪ್ರೀತಿಯ ಸಂಕೇತವಾಗಿ ಸಪ್ನಾ ಬುಕ್ ಹೌಸ್ನಿಂದ ಇತ್ತೀಚೆಗೆ ಲೋಕಾರ್ಪಣೆಗೊಂಡ ಅವರ ’ರಸಯಾನ’ ಪುಸ್ತಕವನ್ನು ನನಗೆ ಅರ್ಪಣೆ ಮಾಡಿದ್ದಾರೆ.

‍ಲೇಖಕರು avadhi

August 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಎಂ.ಜಿ.ರಂಗಸ್ವಾಮಿ

    ಕಿಟ್ಟಿ ಸರ್, ಮುದ್ರಣಾಲಯಕ್ಕೆ SVAN ಎಂಬ ಹೆಸರು ಬರಲು ಅದರ ಹಿಂದಿರುವ ಕತೆ
    ಸ್ವಾರಸ್ಯಕರವಾಗಿದೆ. ನೀವು ಹಾಗೂ ಬೈರಮಂಗಲ ಸರ್ ಆತ್ಮೀಯ ಗೆಳೆಯರು ಎಂಬುವುದಷ್ಟೇ ತಿಳಿದಿತ್ತು. ಆ ಆತ್ಮೀಯತೆಯ ಹಿಂದಿರುವ ವಿಶೇಷ ಈಗಷ್ಟೇ ತಿಳಿಯಿತು. ನೀವು ನಿಮ್ಮ ಬರವಣಿಗೆ ಬೆಳೆದು ಬಂದ ಕತೆ ಹೇಳಿರುವುದೂ ಕುತೂಹಲಕರವಾಗಿದೆ. ನನ್ನ ಅನುಭವದಂತೆ ಒಂದು ಮುದ್ರಣಾಲಯ ಹಾಗೂ ಪ್ರಕಾಶನ ಸಂಸ್ಥೆ ಗೆ ಡಾ.ಬೈರಮಂಗಲ ರಾಮೇಗೌಡ ರಂತಹ ಹಿರಿಯ ಲೇಖಕರ ಮಾರ್ಗದರ್ಶನ ಬೇಕೇಬೇಕು. ಈಗ ನಿಮ್ಮ ಬರಹ ಸಹ ಕುದುರಿದೆ. ಸಂಕೋಚವಿಲ್ಲದೆ ಬರೆಯಬಲ್ಲಿರಿ. ಸಾಕಷ್ಟು ಸಾಹಿತಿಗಳ ಒಡನಾಟ ಹೊಂದಿರುವ ತಮಗೆ ಅಪರೂಪದ ಮಾಹಿತಿ ಕೂಡ ಇರಲಿಕ್ಕೇ ಬೇಕು. ಬರೆಯಿರಿ. ಒಳಿತಾಗಲಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: