ಮಿನಿಸ್ಟ್ರ ಮನೆಯಲ್ಲಿ ಮುಸುರೆ ತಿಕ್ಕಿದ ಮಗು…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ʼಅವರು ಮಿನಿಸ್ಟ್ರಂತೆ… ಅವರ ಗಂಡಾನೂ ಮಿನಿಸ್ಟ್ರಾಗಿದ್ದರಂತೆʼ

ಆ ಹತ್ತು ವರ್ಷದ ಹುಡುಗಿ ಜೊತೆ ಮಾತನಾಡಿದಾಗ ಸಿಕ್ಕ ಸುಳಿವುಗಳಲ್ಲಿ ಇದೊಂದು. ಆದರೆ ತನಗೆ ಏನಾಗುತ್ತಿತ್ತು ಎಂಬ ಸ್ಪಷ್ಟ ಕಲ್ಪನೆ ಅವಳಿಗಿರಲಿಲ್ಲ. ರಾತ್ರಿಯೆಲ್ಲಾ ಕಾರಿನಲ್ಲಿ ಪ್ರಯಾಣ ಮಾಡಿ ಆ ಬೆಳಗ್ಗೆಯಷ್ಟೆ ದೂರದ ಊರಿನಿಂದ ತಾನು ಬೆಂಗಳೂರಿಗೆ ಬಂದಿರುವುದು ಎಂದು ಹೇಳಿದ್ದಳು.

ಯಾವ ಊರಿನಿಂದ ಬಂದೆ ಎಂಬ ವಿಚಾರವೂ ಆಕೆಗೆ ಸರಿಯಾಗಿ ತಿಳಿದಿರಲಿಲ್ಲ. ಮತ್ತೆ ಮತ್ತೆ ಕೇಳಿದಾಗ ʼನಲತ್ತಡʼ ಎಂದೇನೋ ಹೇಳುತ್ತಿದ್ದಳು. ʼದೊಡ್ಡ ಮನೆ. ಅಲ್ಲಿ ಮಿನಿಸ್ಟ್ರ್‌ಮ್ಮ ಇರೋರು. ಅವರ ಮನೇಲಿ ಇನ್ನೊಬ್ಬರು, ಅವರ ಮಗಳು. ಅವರಿಗೆ ಮೂರು ವರ್ಷದ ಗಂಡು ಮಗು’ʼ.

ಅಲ್ಲೇನು ಮಾಡ್ತಿದ್ದೆ? ʼಬೆಳಗ್ಗೆ ಐದ್ಗಂಟೆಗೆ ಎದ್ದು ಮುಸುರೆ ಪಾತ್ರೆ ತೊಳೆದು, ಆಮೇಲೆ ಮನೆ ಕಸ ಗುಡಿಸಿ, ನೆಲ ಒರೆಸ್ತಿದ್ದೆ. ಅದೇ ಹೇಳದ್ನಲ್ಲ, ಮಗು ಇದೆ ಅಂತ, ಆಮೇಲೆ ದಿನ ಪೂರ್ತಿ ಅದರ ಜೊತೆ ಆಡ್ಕೊಂಡು ಇರೋದು. ಬೇರೆ ಯಾರೂ ಇರ್ತಿರಲಿಲ್ಲ. ಪಾಪ ಮಗು ನನ್ನ ಜೊತೆ ಚೆನ್ನಾಗಿ ಹೊಂದಿಕೊಂಡಿತ್ತು. ನಾನು ಯಾವಾಗ ಹೋಗೋದು ಮಗು ನೋಡ್ಕಳೋಕೆ?ʼ

ನಾನಾಗ ಕ್ರೈ (ಆಗ ಚೈಲ್ಡ್‌ ರಿಲೀಫ್‌ ಅಂಡ್‌ ಯು) ಸಂಸ್ಥೆಯ ಬೆಂಗಳೂರು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದೆ (೧೯೯೯). ಕರ್ನಾಟಕ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮಕ್ಕಳ ಅಭಿವೃದ್ಧಿ ಕೆಲಸ ಮಾಡುವ ಸಂಸ್ಥೆಗಳನ್ನು ಗುರುತಿಸುವ ಮತ್ತು ಅವುಗಳಿಗೆ ಧನ ಸಹಾಯ ಮಾಡಲು ಕ್ರೈ ಸಂಸ್ಥೆಗೆ ಸಲಹೆ ಕೊಡುವುದು, ಕ್ಷೇತ್ರ ಕಾರ್ಯ ಮಾಡುವ ಸಂಸ್ಥೆಗಳ ಕೆಲಸಗಳ ಉಸ್ತುವಾರಿ, ಮೌಲ್ಯಮಾಪನ ಮಾಡುವುದು, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕುರಿತು ತರಬೇತಿಗಳನ್ನು ಸಂಘಟಿಸಿ, ಸರ್ಕಾರದೊಡನೆ ವಕೀಲಿ ಕೆಲಸಗಳಲ್ಲೂ ಕೈಜೋಡಿಸುವುದು ನನ್ನ ಜವಾಬ್ದಾರಿಗಳಾಗಿತ್ತು.

ಜೊತೆಗೆ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದ (ಸಿ.ಎ.ಸಿ.ಎಲ್‌) ಚಟುವಟಿಕೆಗಳಲ್ಲೂ ರಾಜ್ಯದಾದ್ಯಂತ ತೊಡಗಿಕೊಂಡಿದ್ದೆ. ಅಷ್ಟರಲ್ಲಾಗಲೇ ಮಕ್ಕಳ ಹಕ್ಕುಗಳ ಒಡಂಬಡಿಕೆ, ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ ೧೯೮೬ ಹಾಗೂ ಶಿಕ್ಷಣ ಹಕ್ಕು ಆಂದೋಲನ ಪ್ರಚಾರಕ್ಕಾಗಿ ರಾಜ್ಯ ಮಟ್ಟದಲ್ಲಿ ಹಲವು ಸಂಘಟನೆಗಳ ಜೊತೆಗೂಡಿದ್ದೆ. 

‌೧೯೯೯ರ ಸೆಪ್ಟಂಬರ್ ತಿಂಗಳ ಒಂದು ದಿನ ನನ್ನನ್ನ ನೋಡಲು ಯಾರೋ ಮಹಿಳೆಯರು ಬಂದಿದ್ದಾರೆ ಎಂದು ಕಛೇರಿಯವರಿಂದ ಮಾಹಿತಿ ಬಂದಿತು. ಚನ್ನಪಟ್ಟಣದ ಒಂದು ಹಳ್ಳಿಯಿಂದ ಅವರನ್ನು ʼವಿಕಾಸʼ ಎನ್ನುವ ಸಂಸ್ಥೆಯನ್ನು ನಡೆಸುವ ಗೆಳೆಯ ಶ್ರೀ ಪ್ರಸನ್ನ ಕಳುಹಿಸಿದ್ದರು. ಅವರದೊಂದು ಅಹವಾಲು.

ಬಂದಿದ್ದವರು ಅವರ ಹಳ್ಳಿಯಲ್ಲಿನ ಮಹಿಳಾ ಸಂಘದ ಅಧ್ಯಕ್ಷರು ಮತ್ತು ಇನ್ನೊಬ್ಬರು ಅದರ ಸದಸ್ಯೆ. ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದ ಬಾಲಕಿಯೊಬ್ಬಳನ್ನು ಬೆಂಗಳೂರಿನ ಹೆಬ್ಬಾಳದ ಹತ್ತಿರದ ʼ… ಸೇವಾಶ್ರಮʼ ಎಂಬ ಪ್ರಸಿದ್ಧ ಸಂಸ್ಥೆಯ ಆಶ್ರಯದಲ್ಲಿ ಇವರಿಬ್ಬರ ಮುಂದಾಳತ್ವದಲ್ಲಿ ತಂದು ಬಿಟ್ಟಿದ್ದರು. ಆ ಸಂಸ್ಥೆ ಇವರ ಹಳ್ಳಿಯಲ್ಲಿ ಒಮ್ಮೆ ಕಾರ್ಯಕ್ರಮ ಏರ್ಪಡಿಸಿ ತೊಂದರೆಯಲ್ಲಿರುವ ಮಕ್ಕಳು ಮತ್ತು ಮಹಿಳೆಯರಿಗೆ ತಾವು ಆ‍ಶ್ರಯ ನೀಡಿ ಶಿಕ್ಷಣ, ಆರೋಗ್ಯ, ರಕ್ಷಣೆ ನೀಡಿ ಬೆಳೆಯಲಿಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದರಂತೆ.

ಸರಿ. ಒಳ್ಳೆಯದಾಗುವುದಾದರೆ ಏಕೆ ಬೇಡ ಎಂದು ಇವರೇ ಮುಂದಾಗಿ ಸಂಘದಲ್ಲಿ ಠರಾವು ಬರೆಯಿಸಿ ಮಗುವನ್ನು ತಂದು, ʼ…ಸೇವಾಶ್ರಮʼದಲ್ಲಿ ಬಿಟ್ಟಿದ್ದರು. ಕಾಗದವನ್ನೂ ಬರೆದುಕೊಟ್ಟಿದ್ದರು. ʼಹೀಗೆ ಹೀಗೆ… ಈ ಅನಾಥ ಮಗುವಿನ ಒಳ್ಳೆಯದಕ್ಕೆ ಮಗುವನ್ನು ತಮ್ಮ ಸುಪರ್ದಿಯಲ್ಲಿ ಕೊಡುತ್ತಿದ್ದೇವೆ. ಬಾಲಕಿ ದೊಡ್ಡವಳಾದ ಮೇಲೆ ಅವಳ ಬದುಕಿಗೊಂದು ನೆಲೆ ಮಾಡಿಕೊಡಲು ಇದು ಬೇಕಾಗಿದೆ. ಇತ್ಯಾದಿʼ. ಸಹಿಯನ್ನೂ ಹಾಕಿದ್ದರು. ʼ…ಸೇವಾಶ್ರಮʼದವರ ಸಹಿ, ಮೊಹರು ಹಾಕಿದ ಕಾಗದದ ಪ್ರತಿಯನ್ನೂ ಆ‍ಶ್ರಮದ ಅಮ್ಮನವರಿಂದಲೇ ಪಡೆದಿದ್ದರು.

ಇಂತಹದು ಬಹಳ ಕಾಲದಿಂದ ನಡೆದು ಬಂದಿದೆ. ತೊಂದರೆ, ಹಿಂಸೆ, ಅತಂತ್ರದಲ್ಲಿರುವ ಅನಾಥ ಮಕ್ಕಳಿಗೆ ಆಶ್ರಮಗಳು, ಆಲಯಗಳು, ಸರ್ಕಾರದ ಮಕ್ಕಳ ನಿಲಯಗಳು ನೆರವು ಕೊಡುವ ಜವಾಬ್ದಾರಿ ತೆಗೆದುಕೊಳ್ಳುವುದು ಇದ್ದದ್ದೇ. ಈ ಮಹಿಳೆಯರು ತಾವು ಮಾಡಿದ ಒಳ್ಳೇ ಕೆಲಸದಿಂದ ತೃಪ್ತರಾಗಿ ಹಳ್ಳಿಗೆ ಹೋಗಿದ್ದರು.

ಚೆನ್ನಾಗೇ ಇತ್ತು. ಆದರೆ ತಿಂಗಳು ಕಳೆಯುವುದರೊಳಗೆ ಬಾಲಕಿಯ ತಾತ ಹಳ್ಳಿಗೆ ಬಂದರು. ಅವರಿಗೆ ಯಾರು ಯಾರಿಂದಲೋ ವಿಚಾರ ತಿಳಿದಿತ್ತು. ಆಗ ಇಡೀ ಪ್ರಕರಣ ಜಟಿಲವಾಗತೊಡಗಿತ್ತು. 

ʼನಾನು ಬದುಕಿರುವಾಗ ನನ್ನ ಮೊಮ್ಮಗೂನ ಅನಾಥ ಅನ್ನಲಿಕ್ಕೆ ನೀವ್ಯಾರು?ʼ ಎಂದೇ ತಾತ ಗುಡುಗಿದ್ದರಂತೆ. ಆ ಮನುಷ್ಯನಿಗೆ ಇಬ್ಬರು ಹೆಣ್ಣುಮಕ್ಕಳು. ದೊಡ್ಡವಳ ಮಗಳು ಈ ಪ್ರಸಂಗದಲ್ಲಿರುವ ಹುಡುಗಿ. ಅವಳಪ್ಪ ಅಮ್ಮ ಸತ್ತು ಹೋಗಿದ್ದರಿಂದ ಚಿಕ್ಕಮ್ಮನ ಮನೆಯಲ್ಲಿ ಇದ್ದಳು. ಮೊದಮೊದಲು ಚೆನ್ನಾಗಿತ್ತು. ಹುಡುಗಿಯ ಅಪ್ಪನ ಮನೆಯವರು ಕೈಹಿಡಿಯಲಿಲ್ಲ. ಮಾವಂದಿರು ತಿರುಗಿ ನೋಡಿರಲಿಲ್ಲ.

ತಾತನಿಗೆ ಆಗುವುದಿಲ್ಲ ಎಂದು ಎಲ್ಲರೂ ಭಾವಿಸಿಬಿಟ್ಟಿದ್ದರು. ಸೊಪ್ಪು ಬೆಳೆದಾದರೂ ನಾನು ಮಗೂನ ನೋಡ್ಕೋತೀನಿ, ಎತ್ಕೊಂಡೋಗಿ ಎಂತದೋ ಅನಾಥಾಲಯಕ್ಕೆ ಸೇರಿಸಿಬಿಟ್ಟಿದ್ದೀರಾ ಅಂತ ತಾತ ಕೂಗಾಡಿದ್ದರು. ಸಂಘದವರು ತಾವು ಮಾಡಿದ್ದ ಒಳ್ಳೇ ಕೆಲಸಕ್ಕೆ ತಾತ ಹೀಗೆ ಆಡತ್ತಲ್ಲ ಎಂದು ಚಡಪಡಿಸಿದ್ದರು. ಆಶ್ರಮಕ್ಕೆ ಸೇರಿಸುವ ನಿರ್ಧಾರ ಮಾಡಿದವರಲ್ಲಿ ಚಿಕ್ಕಮ್ಮನೂ ಒಬ್ಬಳು.

ತನ್ನ ಮನೆಯಲ್ಲೇ ಮೂರು ಮಕ್ಕಳಿವೆ ಅವನ್ನು ದೊಡ್ಡದು ಮಾಡುವುದರಲ್ಲಿ ಭೂಮಿಕಾಣಿ ಇಲ್ಲದ ತನ್ನ ಕುಟುಂಬದ ಕಷ್ಟ ತನಗೇ ಗೊತ್ತು, ಒಳ್ಳೇದಾಗುವುದರಾಗಲಿ ಎಂದು ಅವಳೂ ಒಪ್ಪಿದ್ದಳು. ಮಗುವನ್ನು ಆ‍ಶ್ರಮಕ್ಕೆ ಬಿಟ್ಟು ಬರುವಾಗ ತಾನೂ ಹೋಗಿದ್ದಳು. ಈಗ ತಾತ ಬಂದಿದ್ದಾರೆ. ಮಾಡೋದೇನು? ಇಂತಿಂಥಾ ಕಡೆ ಮಗುವನ್ನು ಬಿಟ್ಟಿದ್ದೇವೆ ಎನ್ನಲು, ತಾತ ತಾನು ಮಗುವನ್ನು ನೋಡಿಯೇ ಬರುವುದು ಎಂದು ʼ…ಸೇವಾಶ್ರಮʼದ ಬಾಗಿಲಿಗೆ ಹೋಗೇ ಬಿಟ್ಟರು. 

ತಾತನಾಗಲಿ, ತಂದೆಯಾಗಲೀ ಯಾವದೇ ವ್ಯಕ್ತಿ ಅಚಾನಕ್‌ ಆಗಿ ಬಂದು ನನಗೆ ಮಗು ತೋರಿಸಿ ಎಂದರೆ ಕಾನೂನಿನಂತೆ ಯಾವುದೇ ಆ‍ಶ್ರಯದಾತರು ಹಾಗೆಲ್ಲಾ ನೋಡಲು ಬಿಡುವಂತಿಲ್ಲ. ಆಯ್ತು. ʼ…ಸೇವಾಶ್ರಮʼದವರೂ ಹಾಗೇ ಹೇಳಿದರು. ಇಲ್ಲ!

ತಾತನಿಗೆ ಸಿಟ್ಟು ಬಂತು. ಕೂಗಾಡಿದರು. ಹಳ್ಳಿಗೆ ಬಂದು ಸಂಘದ ಮಹಿಳೆಯರನ್ನು ಬೈದರು. ಮುಖ್ಯವಾಗಿ ತನ್ನ ಎರಡನೇ ಮಗಳನ್ನೇ ಆಡಬಾರದ ಮಾತುಗಳಿಂದ ಅಂದುಬಿಟ್ಟರು. ಎಲ್ಲರಿಗೂ ಕೆಟ್ಟದೆನಿಸಿತು. ಆಯಿತು. ತಾವೇ ಹೋಗಿ ಮಗುವನ್ನು ಹಿಂದಕ್ಕೆ ತಂದುಬಿಡುವುದು ಎಂದು ಸಂಘದ ಮಹಿಳೆಯರು ನಿರ್ಧರಿಸಿದರು.

ತಾವು ʼ…ಸೇವಾಶ್ರಮʼದಿಂದ ಪಡೆದಿದ್ದ ಪತ್ರವನ್ನು ಹಿಡಿದುಕೊಂಡು ಮಾರನೇ ದಿನವೇ ಆಶ್ರಮದ ಬಾಗಿಲಿಗೆ ಹೋದರು. ಇವರು ಹೀಗೆ ಕೇಳಿದರೆ ಅವರು ಹಾಗೆ ಕೊಟ್ಟುಬಿಡುತ್ತಾರೆ ಎಂದುಕೊಂಡೇ ಅವರಲ್ಲಿಗೆ ಬಂದಿದ್ದರು. ಆದರೆ ಸಿಕ್ಕ ಉತ್ತರ ಮಾತ್ರ ʼಇಲ್ಲʼ. ಮಾತುಕತೆ ಜಗಳದ ಹಂತಕ್ಕೆ ತಲುಪಿತು. ಆಶ್ರಮದ ಅಮ್ಮ ಹೇಳಿದ್ದು, ನೀವು ಒಮ್ಮೆ ಕೊಟ್ಟರೆ ಮುಗಿಯಿತು. ಹೀಗೆಲ್ಲಾ ಬಂದು ಕೇಳಿದರೆ ಹೇಗೆ, ಮಗುವಿನ ಅಭಿವೃದ್ಧಿಗಾಗಿ ರಕ್ಷಣೆಗಾಗಿ ಬಿಟ್ಟಿರುವಾಗ ಅದು ನಮ್ಮ ವಶದಲ್ಲಿದೆ. ನೀವು ಸುಮ್ಮನೆ ಹೋಗಿ. ಹೀಗೆಲ್ಲಾ ಮೇಲಿಂದ ಮೇಲೆ ಬಂದು ತೊಂದರೆ ಕೊಡಬಾರದು. ಮಗುವನ್ನು ಚೆನ್ನಾಗಿ ನೋಡಿಕೊಳ್ಳುವವರ ಮನೆಗೆ ದತ್ತು ಕೊಟ್ಟಿದ್ದೇವೆ ಎಂದೆಲ್ಲಾ ಹೇಳಿ ಕಳುಹಿಸಿಯೇಬಿಟ್ಟರು.

ಕೆಲಸ ಕೆಟ್ಟಿತು.

ಬರಿಕೈಯಲ್ಲಿ ಬಂದವರನ್ನು ಹಳ್ಳಿಯವರೆಲ್ಲಾ ತಲೆಗೊಂದು ಮಾತಾಡಿ ಸ್ವಾಗತಿಸಿದರು. ಅದರಲ್ಲಿ ಇವರನ್ನು ಬಹಳವಾಗಿ ಕಾಡಿದ್ದು, ʼಇವರೆಲ್ಲೋ ಮಗುವನ್ನು ಮಾರಿಕೊಂಡಿದ್ದಾರೆ. ಈಗ ಸುಮ್ಮನೆ ಹೋಗಿಬರೋ ನಾಟಕ ಮಾಡ್ತಿದ್ದಾರೆʼ. ದತ್ತು ಕೊಟ್ಟಿದ್ದಾರೆ ಎನ್ನುವ ವಿಚಾರವಂತೂ ಯಾರೂ ಒಪ್ಪದ ಸಂಗತಿಯಾಗಿತ್ತು.  

ಆ ಹೆಂಗಸರು ಪೇಚಾಡಿಕೊಂಡರು. ಅವರವರ ಮನೆಗಳಲ್ಲೂ ಏನೇನೋ ಕೇಳುವಂತಾಯಿತು. ಹಳ್ಳಿಯಲ್ಲಿ ಕುಟುಂಬಗಳ ಮರ್ಯಾದೆ ಪ್ರಶ್ನೆ. ಸರಿ ಅವರು ತಮ್ಮನ್ನು ಮಹಿಳಾ ಸ್ವಸಹಾಯ ಸಂಘವಾಗಿ ರೂಪಿಸಿದ ʼವಿಕಾಸʼ ಸಂಸ್ಥೆಯವರನ್ನು ಭೇಟಿ ಮಾಡಿದರು. ಅವರದ್ದೊಂದೇ ಆಗ್ರಹ. ʼ…ಸೇವಾಶ್ರಮʼದಿಂದ ತಮ್ಮ ಮಗುವನ್ನು ಹಿಂದಕ್ಕೆ ಕೊಡಿಸಿಬಿಡಿ. ತಾವು ದತ್ತು ಕೊಡಲು ಹೇಳಿಯೇಯಿಲ್ಲ. ನಮ್ಮ ಮಗು ನಮಗೆ ಸಿಕ್ಕರೆ ಸಾಕು. ವಿಕಾಸದವರು ಮಾಡಿದ ದೂರವಾಣಿ ಕರೆಗೆ ಯಾವುದೇ ಪ್ರತಿಫಲ ಸಿಗಲಿಲ್ಲ. ಶ್ರೀ ಪ್ರಸನ್ನ ಅವರನ್ನು ಕ್ರೈ ಸಂಸ್ಥೆಯಲ್ಲಿದ್ದ ನನ್ನ ಬಳಿಗೆ ಕಳುಹಿಸಿದ್ದರು.

ಪ್ರಕರಣದ ವಿವರಗಳನ್ನು ಪಡೆದ ನಾನು ಆ ಮಹಿಳೆಯರೊಂದಿಗೆ ʼ…ಸೇವಾಶ್ರಮʼದ ದೊಡ್ಡ ಬಾಗಿಲು ದಾಟಿಕೊಂಡು ಒಳಗೆ ಹೋದೆ. ನಾವು ಹೋದ ದಿನ ಆಶ್ರಮದ ಅಮ್ಮ ಶುಭ್ರ ಬಿಳಿಯ ಸೀರೆಯಲ್ಲಿ ಕುಳಿತು ಯಾರೋ ಗಂಡ ಹೆಂಡಿರ ನಡುವಿನ ವ್ಯಾಜ್ಯ ಪರಿಹಾರದ ಕೌನ್ಸೆಲಿಂಗ್‌ನಲ್ಲಿ ತೊಡಗಿದ್ದರು. ಅವರಿಬ್ಬರಿಗೂ ಹೊಂದಿಕೊಂಡು ಹೋಗಿ ಎಂದು ಅಮ್ಮ ತಾಕೀತು ಮಾಡಿದ ತರುವಾಯ ನಮ್ಮ ಮಹಿಳೆಯರತ್ತ ತಿರುಗಿದರು. ಅವರ ಬೇಡಿಕೆಗಳನ್ನು ಕುರಿತು ಅಮ್ಮ ಬಹಳ ನವಿರಾದ ಮಾತುಗಳಲ್ಲಿ ಉತ್ತರಿಸಲು ಆರಂಭಿಸಿದರು…

ನಾನೀಗಾಗಲೇ ಹೇಳಿಲ್ಲವೇ ಮಗುವನ್ನು ಹಾಗೆಲ್ಲಾ ಹಿಂದಕ್ಕೆ ಕೊಡಲಾಗುವುದಿಲ್ಲ. ಹೀಗೆಲ್ಲಾ ಮತ್ತೆ ಮತ್ತೆ ಬರಬಾರದು. ಮಗು ಚೆನ್ನಾಗಿದೆ. ದತ್ತು ಹೋಗಿರುವ ಮನೆಯಲ್ಲಿ ಸುಖವಾಗಿದೆ. ಅವರು ಸಾಕಿಕೊಳ್ಳುತ್ತಾರೆ. ನಿಮಗೆ ಮಗು ಸಾಕಲಾಗುವುದಿಲ್ಲ ಎಂದು ತಾನೆ ಕೊಟ್ಟಿರುವುದು… ನಾವು ಸಾಕಷ್ಟು ಮಕ್ಕಳನ್ನು ಹೀಗೆ ದತ್ತು ಕೊಟ್ಟಿದ್ದೇವೆ. ಮಕ್ಕಳು ಚೆನ್ನಾಗಿದ್ದಾರೆ.

ಮಗು ಕೊಟ್ಟು ಹೋದ ಮೇಲೆ ಹಿಂದಕ್ಕೆ ತೆಗೆದುಕೊಳ್ಳುವ ಅಧಿಕಾರವೇ ಇಲ್ಲ… ಅದೂ ಇದೂ ಎಂದು ಓತಪ್ರೋತವಾಗಿ ಹರಿದ ಮಾತು ಬರುಬರುತ್ತಾ ಬಹಳ ಗಟ್ಟಿಯಾಗಿ ಖಡಾಖಂಡಿತವಾಗಿ ಹೇರತೊಡಗಿದರು. ಆ ಹಂತದಲ್ಲಿ ಮುಂದಾಗಿ ನಾನೊಂದು ಪ್ರಶ್ನೆ ಇಟ್ಟೆ, ʼಮಕ್ಕಳನ್ನು ದತ್ತು ಕೊಡಲು ನಿಮಗೆ ಸರ್ಕಾರದಿಂದ ಅನುಮತಿಯಿದೆಯಾ?ʼ

ಅಮ್ಮ ನನ್ನತ್ತ ತಿರುಗಿದರು. ನೀವು ಯಾರು, ಇವರ ಕಡೆಯವರೇನು? ಅವರ ಪ್ರಶ್ನೆಗೆ ನಾನು ಬಹಳ ಸೌಜನ್ಯದಿಂದಲೇ ಹೇಳಿದೆ. ನಾನು ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ಕಡೆಯವನು. ಅವರು ಹೇಳುತ್ತಿದ್ದಾರಲ್ಲ ದತ್ತು ಕೊಡಲು ಮಗುವನ್ನು ಕೊಟ್ಟಿಲ್ಲ. ಕೇವಲ ನೋಡಿಕೊಳ್ಳಲು ನಿಮ್ಮನ್ನು ಕೇಳಿಕೊಂಡಿರುವುದು. ನಿಮ್ಮ ಸಂಸ್ಥೆಗೆ ದತ್ತು ನೀಡಲು ಪರವಾನಗಿ ಇದೆಯೇನು? 

ಅಮ್ಮ ಮಹಿಳೆಯರತ್ತ ತಿರುಗಿದರು, ʼನಿಮಗೆ ಮಗು ಬೇಕು ತಾನೆ? ನಾಳೆ ಬೆಳಗ್ಗೆ ಬನ್ನಿʼ.

ಮಾರನೇ ದಿನ ಬೆಳಗ್ಗೆ ನಾವೆಲ್ಲಾ ʼ…ಸೇವಾಶ್ರಮʼದ ಬಾಗಿಲಲ್ಲಿ ಇದ್ದೆವು. ಆ‍ಶ್ರಮದವರು ಅಲಂಕರಿಸಿದ್ದ ಬಾಲಕಿಯನ್ನು ಒಪ್ಪಿಸಿ, ಕಾಗದದ ಮೇಲೆ ಬರೆಯಿಸಿಕೊಂಡು ತಟ್‌ ಎಂದು ನಮ್ಮನ್ನೆಲ್ಲಾ ಅವರ ದೊಡ್ಡ ಗೋಡೆಗಿರುವ ಗೇಟು ಬಾಗಿಲಿನಿಂದ ಆಚೆಗೆ ಕಳುಹಿಸಿಯೇಬಿಟ್ಟರು. ಬಾಲಕಿಯೊಡನೆ ನಿಧಾನವಾಗಿ ಮಾತನಾಡಿದೆ, ʼಅವರು ಈಗ ಮಿನಿಸ್ಟ್ರು. ಅವರ ಗಂಡ ಮಿನಿಸ್ಟ್ರಾಗಿದ್ದರಂತೆ.

ಅವರು ಬಾಣದ ಗುರುತಿಗೆ ಓಟಾಕೋದಂತೆ… ಊರು ನಲತ್ತಡ… ರಾತ್ರಿಯೆಲ್ಲಾ ಕಾರಲ್ಲಿ ಪ್ರಯಾಣ ಮಾಡಿ ಬಂದದ್ದು…ʼ. ಅಂದರೆ ರಾಜ್ಯದ ಪೂರ್ವದ ಅಥವಾ ಉತ್ತರದ ಯಾವುದೋ ಮೂಲೆಯಿರಬೇಕು, ಆಗಿನ ಪ್ರಸಕ್ತ ರಾಜಕೀಯ, ಆಡಳಿತಾರೂಢ ಸರ್ಕಾರ ಎಲ್ಲವನ್ನೂ ವಿವಿಧ ಕೋನಗಳಲ್ಲಿಟ್ಟುಕೊಂಡು ಪರಿಶೀಲಿಸಿದ್ದಾಯಿತು. ಪತ್ರಿಕೆಗಳ ಗೆಳೆಯ ಗೆಳತಿಯರು ನೆರವಾದರು.

ನಲವತ್ತಾಡ, (ಆಗಿನ) ಬಿಜಾಪುರ ಬಾಗಲಕೋಟೆಗಳ ಹತ್ತಿರದ ಊರು. ಶಾಸಕರು ಯಾರು, ಅವರು ಮಿನಿಸ್ಟ್ರು ಮತ್ತು ಇತರ ವಿವರಗಳು ತಾಳೆಯಾಯಿತು. ಹಾಗೂ ಅವರ ಮನೆಯಲ್ಲಿ ಒಂದು ಸುಮಾರು ಹತ್ತು ವರ್ಷದ ಹುಡುಗಿ ಕೆಲ ಕಾಲ ಇದ್ದದ್ದು ಖಚಿತ ಮಾಡಿಕೊಂಡಿದ್ದಾಯ್ತು. ವಿಜಯಪುರದ ʼಉಜ್ವಲಾʼ ಸಂಸ್ಥೆಯ ಸುನಂದಾ ಮತ್ತು ವಾಸುದೇವ ತೋಳಬಂದಿ ಮಾಹಿತಿ ಸಂಗ್ರಹಿಸಲು ನೆರವಾದರು. ಒಮ್ಮೆ ಎಲ್ಲವೂ ಖಚಿತವಾದ ಮೇಲೆ’ ಪ್ರಜಾವಾ’ಣಿಯನ್ನು ಸಂಪರ್ಕಿಸಿದೆ.

ಶ್ರೀ ಜಿ.ಎನ್‌. ರಂಗನಾಥರಾವ್‌ ಅವರು ಶ್ರೀ ರಾಜು ಅಡಕಳ್ಳಿಯವರಿಗೆ ಜವಾಬ್ದಾರಿ ವಹಿಸಿದರು. ಆತ ನನ್ನ ಗೆಳೆಯ. ಆತನೂ ಪ್ರಕರಣವನ್ನು ವಿವಿಧ ಕೋನಗಳಿಂದ ಗಮನಿಸಿದ. ಮಾರನೇ ದಿನ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ನಲ್ಲಿ ಸುದ್ದಿ ಸ್ಫೋಟ.

ಇದ್ದಕ್ಕಿದ್ದ ಹಾಗೆ ʼ…ಸೇವಾಶ್ರಮʼ ಹಾಗೂ ಮಿನಿಸ್ಟ್ರ ಪರ ದೊಡ್ಡ ದನಿಯೇ ಎದ್ದಿತು. ಈ ಸುದ್ದಿಯ ಅನುಸರಣೆಗಾಗಿ ಶ್ರೀ ಜಿ.ಎನ್‌.ರಂಗನಾಥರಾವ್‌ ಅವರೆದುರು ಕುಳಿತಿದ್ದಾಗ ಯಾರದೋ ಫೋನ್‌ ಅವರಿಗೆ ಬಂದಿತು. ಆ ಕಡೆಯಿಂದ ಅವರ್ಯಾರೋ ಮಿನಿಸ್ಟ್ರು ಹಾಗೆ ಹೀಗೆ ಎಂದೆಲ್ಲಾ ಹೇಳಿ ಏನು ಹೇಳಿದನೋ, ಎಂದೂ ಸಿಟ್ಟಿಗೇಳದ, ಮೃದು ಭಾಷಿ ರಂಗನಾಥ್‌ರವರು ಧಡಕ್‌ ಎಂದು ಎದ್ದು, ʼಯಾರೋ ನೀನು. ಧೈರ್ಯ ಇದ್ದರೆ ಇಲ್ಲಿಗೆ ಬಂದು ಮಾತನಾಡೋ. ಏನಂದುಕೊಂಡಿದ್ದೀಯಾ…ʼ ಎಂದೇನೋ ಹೇಳಿದರು. ರಾಜು ಅಡಕಳ್ಳಿಯವರಿಗೆ ಅನುಸರಣೆ ವರದಿಯ ಬಗ್ಗೆ ಒಂದಷ್ಟು ನಿರ್ದೇಶನ ಕೊಟ್ಟಿದ್ದರು. ಆಗಲೇ ರಾಜ್ಯದ ಕೆಲವು ಪ್ರಖ್ಯಾತ ಸಾಹಿತಿಗಳು, ಹೋರಾಟಗಾರರು ʼ…ಸೇವಾಶ್ರಮʼದ ಪರವಾಗಿ ಒಂದು ಹೇಳಿಕೆಯನ್ನು ಪತ್ರಿಕೆಗೆ ಕೊಟ್ಟಿದ್ದರು.  ಅದನ್ನು ಯಥಾವತ್‌ ‘ವಾಚಕರವಾಣಿ’ಯಲ್ಲಿ ಪ್ರಜಾವಾಣಿ ಪ್ರಕಟಿಸಿತ್ತು.

ಪರಿಚಯವಿದ್ದ ಆ ಕೆಲವರು ನನಗೂ ವ್ಯಂಗ್ಯ ಕೋಪ ಬೆರೆಸಿ ಪೂಜೆಗೈದಿದ್ದರು. ಇಷ್ಟರ ಮೇಲೆ ನೀವೆಲ್ಲಾ ಫಾರಿನ್‌ ಫಂಡ್‌ನ ಪ್ರಯೋಜನದಿಂದ ಹೀಗೆಲ್ಲಾ ಸಭ್ಯರ ಮೇಲೆ ಕೆಸರೆರಚೋದು ಎಂದೂ ಆಪಾದಿಸಿದ್ದರು.

ಇಷ್ಟರ ಮಧ್ಯ ಸಚಿವರು ಮತ್ತು ʼ…ಸೇವಾಶ್ರಮʼದವರು ʼಮಗು ದತ್ತುವಿಗೆ ಹೊಂದಿಕೊಳ್ಳುತ್ತದೋ ಇಲ್ಲವೋ ನೋಡಲುʼ ಪ್ರಯತ್ನಿಸುತ್ತಿದ್ದೆವು ಎಂದು ಹೇಳಿದ ಹಾಸ್ಯಾಸ್ಪದ ಸಂಗತಿಯೂ ವರದಿಯಾಯಿತು.

ಬಾಲಕಾರ್ಮಿಕ ಪದ್ಧತಿ ವಿರೋಧೀ ಆಂದೋಲನದ ವತಿಯಿಂದ ಬೆಂಗಳೂರಿನ ಕೆ.ಆರ್‌. ಸರ್ಕಲ್‌ನಲ್ಲಿ ಹಲವು ಸಂಘಟನೆಗಳು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಿದೆವು. ಪ್ರಸನ್ನ, ಸರೋಜ, ಲಕ್ಷಾಪತಿ, ಶೀಲಾ, ಸುಚಿತ್ರಾ, ಮಾಥ್ಯೂ ಫಿಲಿಪ್‌, ರವಿ, ಉದಯಕುಮಾರ್‌, ವೆಂಕಟೇಶ್‌, ರಾಘವೇಂದ್ರ ಹಲವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಉಜ್ವಲಾ ಮತ್ತಿತರ ಸಂ‍ಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಸೇರಿ ಪ್ರತಿಭಟನೆ ನಡೆಸಿದರು. ʼಮಕ್ಕಳನ್ನು ನಿಲಯದಿಂದ ಯಾವುದೇ ಹೆಸರಿನಲ್ಲಿ ಬೇರೊಬ್ಬರ ಬಳಿಗೆ ಅನಧಿಕೃತವಾಗಿ ಕಳುಹಿಸುವುದು ಮಕ್ಕಳ ಸಾಗಣೆಯಾಗುತ್ತದೆ, ಇದು ಬಾಲಕಾರ್ಮಿಕ ಪದ್ಧತಿಯನ್ನು ಸರ್ಕಾರವೇ ಪ್ರೋತ್ಸಾಹಿಸಿದಂತೆ, ಮಗುವಿನ ಹಕ್ಕುಗಳನ್ನು ಉಲ್ಲಂಘಿಸಿರುವ ಸಂಸ್ಥೆ ಮತ್ತು ಮಂತ್ರಿಗಳ ವಿರುದ್ಧ ತನಿಖೆ ಆಗಲೇಬೇಕೆಂದು ಆಗ್ರಹಿಸಿದೆವು’.

ಮುಂದಿನದೆಲ್ಲವೂ ಕ್ಷಿಪ್ರವಾಗಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪರವಾಗಿ ಉಪನಿರ್ದೇಶಕಿ ಶ್ರೀಮತಿ ಬಾನು ಅವರು ಬಂದು ಮನವಿ ಸ್ವೀಕರಿಸಿದರು. ಮುಂದೆ ಇಲಾಖೆ ತನ್ನ ಉಪನಿರ್ದೇಶಕ ಟಿ. ರಂಗಧಾಮಯ್ಯನವರನ್ನು ತನಿಖೆಗೆ ನೇಮಿಸಿತು.

ತನಿಖಾ ವರದಿ ʼ…ಸೇವಾಶ್ರಮʼ ನಡೆಸಿರುವ ಹಲವು ಉಲ್ಲಂಘನೆಗಳನ್ನು ಪಟ್ಟಿ ಮಾಡಿತು, ಮಗುವನ್ನು ಕುರಿತು ಕೇಸ್‌ಫೈಲ್‌ ಅನ್ನು ಮಕ್ಕಳ ನ್ಯಾಯ ಕಾಯಿದೆ ೧೯೮೬ರ ನಿಯಮಾನುಸಾರ ಸರಿಯಾಗಿ ನಿರ್ವಹಿಸಿಲ್ಲದಿರುವುದು,  ಶಿಕ್ಷಣದಲ್ಲಿ ಅಥವಾ ಅನೌಪಚಾರಿಕ ಶಿಕ್ಷಣಕ್ಕೆ ತೊಡಗಿಸಿಲ್ಲದಿರುವುದು, ಹಾಜರಿ ಪುಸ್ತಕದಲ್ಲಿ ಸಮರ್ಪಕವಾದ ದಾಖಲೆಗಳಿಲ್ಲದಿರುವುದು ಮತ್ತು ಮಿಗಿಲಾಗಿ ಸಚಿವರ ಮನೆಗೆ ಅನಧಿಕೃತವಾಗಿ ಕಳುಹಿಸಿರುವುದು, ಇತ್ಯಾದಿ.

ಕಾರ್ಮಿಕ ಇಲಾಖೆಯ ಆಗಿನ ಆಯುಕ್ತರು ಶ್ರೀ ಲೂಕೋಸ್‌ ವಲ್ಲತ್‌ರೈ ಅವರು ೧೭.೫.೨೦೦೦ದಂದು ಆಗ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀ ಬುಳ್ಳಾ ಸುಬ್ಬರಾವ್‌ ಅವರಿಗೆ ವಿವರವಾದ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸಿದರು.

ಮಕ್ಕಳ ಹಕ್ಕುಗಳ ಉಲ್ಲಂಘನೆಯ ಈ ಪ್ರಕರಣವನ್ನು ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ಪ್ರಕರಣ ಸುಮಾರು ಎರಡು ವರ್ಷಗಳ ಕಾಲ ಎಳೆದಾಡಿ, ೨೦೦೧ ನವೆಂಬರ್‌ನಲ್ಲಿ ಪ್ರಕರಣವನ್ನು  ಈ ರಾಜ್ಯದ  ಪ್ರಸಿದ್ಧರೂ ಗೌರವಾನ್ವಿತರೂ ಆದ ನ್ಯಾಯಾಧೀಶರೊಬ್ಬರು ತಳ್ಳಿಹಾಕಿದರು.

ಕೊಟ್ಟ ಕಾರಣ ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ ಒಂದು ರಿಜಿಸ್ಟರ್ಡ್‌ ಸಂಸ್ಥೆಯಲ್ಲ! ನಾವೆಲ್ಲಾ ಮುಂದಿನ ಹಂತಕ್ಕೆ ಮನವಿ ಮಾಡಿಕೊಳ್ಳೋಣ. ಈ ಬಾರಿ ಬಾಲಕಿಯೇ ಪ್ರಕರಣ ದಾಖಲಿಸಲಿ ಎಂದು ಉತ್ಸುಕರಾಗಿದ್ದೆವು. ಆದರೆ ಅಷ್ಟು ಹೊತ್ತಿಗೆ ಸಾಕ್ಷಿ ಹೇಳಲೆಂದೋ, ಪಾಟಿ ಸವಾಲು ಎದುರಿಸಲಿಕ್ಕೆಂದೋ ಹತ್ತಾರು ಬಾರಿ ನ್ಯಾಯಾಲಯಕ್ಕೆ ಓಡಾಡಿದ್ದ ನಮ್ಮ ಬಾಲಕಿ, ಅವಳ ಚಿಕ್ಕಮ್ಮ, ತಾತ, ಮಹಿಳಾ ಸಂಘದ ಪದಾಧಿಕಾರಿಗಳು ನಮ್ಮನ್ನು ಬಿಟ್ಟು ಬಿಡಿ ಇದೆಲ್ಲಾ ಬೇಡ ಎಂದುಬಿಟ್ಟರು.

ಪ್ರಕರಣ ಅಲ್ಲಿಗೆ ಮುಗಿಯಿತು!

ಅಂದರೆ ನ್ಯಾಯಾಲಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೧೯ ಮತ್ತು ೨೧ನ್ನು ನೋಡಲಿಲ್ಲ. ಮಕ್ಕಳನ್ನು ಎಲ್ಲಿ ಇರಿಸಲಾಗುತ್ತದೋ ಅಲ್ಲಿಯವರು ಮತ್ತು ಪೋಷಕರು ಮಕ್ಕಳಿಗೆ ಯಾವುದೇ ಅನ್ಯಾಯ, ಮೋಸ, ದುರುಪಯೋಗ, ತಾರತಮ್ಯ ಆಗದಂತೆ ರಕ್ಷಿಸಬೇಕು (೧೯). ಮಕ್ಕಳನ್ನು ದತ್ತು ನೀಡುವಾಗ ಮತ್ತು ಪಡೆಯುವಾಗ ಅದು ಮಗುವಿನ ಹಿತದೃಷ್ಟಿಯಿಂದ ಆಗಬೇಕು (೨೧).

ದತ್ತು ಕುರಿತು ಚಾಲ್ತಿಯಲ್ಲಿದ್ದ ಹಿಂದೂ ದತ್ತಕ ಕಾಯಿದೆ ಮತ್ತು ಅದರ ನಿಯಮಗಳ ಉಲ್ಲಂಘನೆ ಹಾಗೂ ಮಕ್ಕಳ ಸಾಗಣೆಯಂತಹ ವಿಚಾರಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀ ಟಿ. ರಂಗಧಾಮಯ್ಯನವರು ನೀಡಿದ ತನಿಖಾ ವರದಿ ಹಾಗೂ ಅವರ ಸಲಹೆಗಳನ್ನು ನ್ಯಾಯಾಲಯ ಪರಿಗಣಿಸಲಿಲ್ಲ. ಭಾರತ ಸಂವಿಧಾನ ಮಕ್ಕಳಿಗೆ ನೀಡಿರುವ ಹಕ್ಕುಗಳು ಮತ್ತು ವಯಸ್ಕರು ಹಾಗೂ ಸರ್ಕಾರಕ್ಕೆ ನೀಡಿರುವ ಜವಾಬ್ದಾರಿಗಳು ಬೇಕಾಗಲಿಲ್ಲ. ಮಕ್ಕಳ ರಕ್ಷಣೆ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತೀರ್ಪುಗಳನ್ನೂ ಪರಿಗಣಿಸಲಿಲ್ಲ.

ಉನ್ನಿಕೃಷ್ಣನ್‌ ಮತ್ತು ಆಂಧ್ರಪ್ರದೇಶ ಸರ್ಕಾರದ ನಡುವಿನ ಪ್ರಕರಣದಲ್ಲಿ ೧೯೯೨ರಲ್ಲೇ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜೀವನರೆಡ್ಡಿಯವರಿದ್ದ ಸಾಂವಿಧಾನಿಕ ಪೀಠದ ತೀರ್ಪು ಜೀವಿಸುವ ಹಕ್ಕು (ಪರಿಚ್ಛೇದ ೨೧) ಜೊತೆಗೇ ಶಿಕ್ಷಣದ ಹಕ್ಕು ಇದೆ ಎಂದು ನಿರ್ದೇಶಿಸಿತ್ತು.

ಪರಿಚ್ಛೇದ ೩೯ ಸ್ಪಷ್ಟಪಡಿಸುವುದು ಮಕ್ಕಳ ಆರೋಗ್ಯ ರಕ್ಷಣೆ ಮಾಡಿ ಮಕ್ಕಳಿಗೆ ಅರಳಲು, ಬೆಳೆಯಲು, ವಿಕಾಸ ಹೊಂದಲು ಅವಕಾಶಗಳನ್ನು ಸೃಷ್ಟಿಸಬೇಕು ಎಂದಿದೆ. ಅಂದರೆ ಮುಖ್ಯವಾಗಿ ಶಿಕ್ಷಣ ಒದಗಿಸಬೇಕು. ಮಕ್ಕಳನ್ನು ಕೆಲಸಕ್ಕಿಟ್ಟುಕೊಂಡರೆ ಇಂತಹ ಅವಕಾಶಗಳು ಸಿಗುವುದಿಲ್ಲ. [ಮುಂದೆ ಇದೇ ವಿಚಾರ ಸಂವಿಧಾನದಲ್ಲಿ ಪರಿಚ್ಛೇದ ೨೧ ಎ : ಶಿಕ್ಷಣ ಪಡೆಯುವ ಹಕ್ಕು ಆಯಿತು].

ಭಾರತ ಸಂವಿಧಾನದ ಪರಿಚ್ಛೇದ ೨೪ ಮಕ್ಕಳನ್ನು ಕಾರ್ಖಾನೆಗಳು ಮತ್ತು ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಬಾರದು ಎಂದು ಸ್ಪಷ್ಟಪಡಿಸಿದೆ. ಅಪಾಯಕಾರಿ ಎನ್ನುವುದಕ್ಕೆ ನೀಡಿರುವ ವ್ಯಾಖ್ಯಾನದಲ್ಲಿ ʼಮನೆಗೆಲಸ ಮತ್ತು ಹೊಟೆಲ್‌ ಕೆಲಸʼವೂ ಸೇರಿದೆ. ಪ್ರಾಯಶಃ ಯಂತ್ರಗಳಿಗಿಂತ ಕೆಲಸ ಮಾಡಿಸಿಕೊಳ್ಳಲು ನಿಲ್ಲುವ ಮನುಷ್ಯರೇ ಮಕ್ಕಳಿಗೆ ಅಪಾಯಕಾರಿ ಎಂದು ಈ ವ್ಯಾಖ್ಯಾನ ಬಂದಿರಬಹುದು.

ಈ ವಿಚಾರವನ್ನೇ ಮುಂದಿಟ್ಟುಕೊಂಡು ಎಂ.ಸಿ. ಮೆಹ್ತಾ ಮತ್ತು ತಮಿಳುನಾಡು ನಡುವಿನ ಪ್ರಕರಣದಲ್ಲಿ ತನ್ನದೇ ಹಿಂದಿನ ನಿರ್ದೇಶನಗಳನ್ನು ಉಲ್ಲೇಖಿಸಿ ೧೯೯೬ರಲ್ಲಿ ಸ್ಪಷ್ಟಪಡಿಸಿದ್ದು ಎಲ್ಲ ರಾಜ್ಯಗಳಿಗೆ ಮಾಹಿತಿ ಕಳುಹಿಸಿ ಯಾವುದೇ ಮಗು ದುಡಿಮೆಯ ಸಂಕಷ್ಟದಲ್ಲಿ ಬೀಳದಂತೆ ಎಚ್ಚರಿಕೆ ವಹಿಸಬೇಕೆಂದು ಸ್ಪಷ್ಟಪಡಿಸಿತ್ತು.

ಇದರೊಂದಿಗೆ ನ್ಯಾಯಾಲಯ ಗಮನಿಸಲೇಬೇಕಾಗಿದ್ದ ಅಂಶ ಪರಿಚ್ಛೇದ ೩೯(ಇ). ʼಕೆಲಸಗಾರರ ಆರೋಗ್ಯ ಮತ್ತು ಅವರ ಸಾಮರ್ಥ್ಯ  ಹಾಗೂ ಯಾರೇ ಆಗಲಿ ಮಕ್ಕಳ ಎಳೆವಯಸ್ಸನ್ನು ದುರುಪಯೋಗ ಮಾಡಬಾರದು ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಪ್ರಜೆ ಆರ್ಥಿಕ ಆವಶ್ಯಕತೆಗಳಿಗಾಗಿ ತನ್ನ ವಯಸ್ಸು ಮತ್ತು ಶಕ್ತಿಗೆ ಸೂಕ್ತವಲ್ಲದ ಉದ್ಯೋಗಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಲೇಬೇಕುʼ.

ಪರಿಚ್ಛೇದ ೩೯ (ಎಫ್‌) ಕೂಡಾ ಮುಖ್ಯವಾಗಿದೆ. ಮಕ್ಕಳಿಗೆ ಆರೋಗ್ಯಕರವಾಗಿ ಅಭಿವೃದ್ಧಿ ಹೊಂದುವ, ತಮ್ಮ ಗೌರವ, ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ಅವಕಾಶಗಳನ್ನು ಒದಗಿಸಬೇಕು, ಮಕ್ಕಳನ್ನು ಶೋಷಣೆಗೆ ದೂಡಬಾರದು. 

ನ್ಯಾಯಾಲಯ ಮನಸ್ಸು ಮಾಡಿದ್ದರೆ, ಈ ಎಲ್ಲವನ್ನೂ ಆಧರಿಸಿ ಈ ಪ್ರಕರಣವನ್ನು ತಾನೇ ಮುನ್ನಡೆಸಬಹುದಿತ್ತು. ಮಕ್ಕಳನ್ನು ಸಾಗಿಸುವ, ದತ್ತು ಹೆಸರಿನಲ್ಲಿ ಮಾರಾಟ ಮಾಡುವ, ಕೆಲಸಕ್ಕೆ ಕಳುಹಿಸುವ ಅಪರಾಧ ಮಾಡುವವರಿಗೆ ಚಾಟಿ ಏಟು ಬೀಸಬಹುದಿತ್ತು. ಆದರೆ ಅದೇಕೋ ಸಂಬಂಧಿಸಿದ ನ್ಯಾಯಾಲಯದ ಪೀಠ ಹಾಗೆ ಮಾಡಲಿಲ್ಲ. ಇಂತಹ ಅಪರಾಧಗಳು ಅವ್ಯಾಹತವಾಗಿ ಆಗಲು ಬಿಟ್ಟುಬಿಟ್ಟಿತೇನೋ…!

ಅನಾಥ ಮಕ್ಕಳಿಗೆ ಪೋಷಕರನ್ನು ಒದಗಿಸುವ ದತ್ತು ಬಹಳ ಉದಾತ್ತವಾದ ಕಲ್ಪನೆ. ಆದರೆ ದತ್ತು ಹೆಸರನ್ನು ದುರುಪಯೋಗ ಮಾಡುವವರನ್ನು ನಿಯಂತ್ರಿಸಲೆಂದೇ ಸರ್ಕಾರ ಸಿ.ಎ.ಆರ್‌.ಎ. (ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆ)ಯನ್ನು ಸ್ಥಾಪಿಸಿದೆ. ಅದರ ಅನುಮತಿಯಿಲ್ಲದೆ ದತ್ತು ಕೊಡುವುದು/ತೆಗೆದುಕೊಳ್ಳುವುದು ಅಪರಾಧ.

ದತ್ತು ಎಂದರೆ ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕೊಡುವುದಲ್ಲ. ಬದಲಿಗೆ ದತ್ತು ಎಂಬ ಕಲ್ಪನೆಯ ಹಿಂದಿರುವ ತತ್ತ್ವ ʼಪೋಷಕರಿಲ್ಲದ ಮಕ್ಕಳಿಗೆ ಸೂಕ್ತ ಪೋಷಕರನ್ನು ಒದಗಿಸುವುದುʼ. ಈ ಮೌಲ್ಯವನ್ನು ಮಕ್ಕಳ ಹಕ್ಕುಗಳ ದೃಷ್ಟಿಕೋನದಲ್ಲಿ ಪ್ರಚುರಪಡಿಸುತ್ತಲೇ ಇರಬೇಕು.

ಈ ಪ್ರಕರಣದಲ್ಲಿ ಗುರುತಿಸಲಾದ ಬಾಲಕಿ ಬೆಂಗಳೂರಿನ ಅಪ್ಸಾ ಸಂಸ್ಥೆಯಲ್ಲಿ ತಾತ್ಕಾಲಿಕವಾಗಿ ಆ‍ಶ್ರಯ ಪಡೆದಳು. ಸಮುದಾಯ ಹಾಗೂ ತಾತನ ಅನುಮತಿಯಂತೆ  ಅಲ್ಲೇ ಇದ್ದು ಶಿಕ್ಷಣ ಮತ್ತು ವೃತ್ತಿ ತರಬೇತಿ ಪಡೆದಳು. ತನ್ನ ಜೀವನವನ್ನು ರೂಢಿಸಿಕೊಂಡಳು. ಕಾಲಾನುಕಾಲಕ್ಕೆ ಒಂದು ಉದ್ಯೋಗದಲ್ಲಿ ತೊಡಗಿಕೊಂಡಳು. ತನ್ನ ಆಯ್ಕೆಯ ಸಂಗಾತಿಯೊಡನೆ ಮದುವೆಯಾಗಿ ಬದುಕು ಕಂಡುಕೊಂಡಿದ್ದಾಳೆ.  ʼ…ಸೇವಾಶ್ರಮʼಕ್ಕೆ ದತ್ತು ನೀಡಲು ಪರವಾನಗಿ ಸ್ಥಾನಮಾನವೂ ಕೆಲವೇ ದಿನಗಳಲ್ಲಿ ದೊರಕಿತ್ತು.

ಮಕ್ಕಳ ಅನುಪಾಲನಾ ಸಂಸ್ಥೆಗಳು (ಸಿ.ಸಿ.ಐ) ಪೋಷಕರಿದ್ದೂ ತಮ್ಮ ಸುಪರ್ದಿಯಲ್ಲಿರುವ ಮಕ್ಕಳನ್ನೆಲ್ಲಾ ಅವರವರ ಪೋಷಕರ ವಶಕ್ಕೆ ತಕ್ಷಣವೇ ಕಳುಹಿಸಬೇಕು, ಇದಕ್ಕಾಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ಮತ್ತು ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ (ಐ.ಸಿ.ಪಿ.ಎಸ್‌) ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೆಪ್ಟಂಬರ್‌ ೨೪ರಂದು ಹೊರಡಿಸಿರುವ ಸುತ್ತೋಲೆ ʼಮಂತ್ರಿಗಳ ಮನೆಯಲ್ಲಿ ಮುಸುರೆ ತಿಕ್ಕಿದ ಮಗುʼವಿನ ಕತೆಯನ್ನು ನೆನಪಿಸಿತು. 

‍ಲೇಖಕರು ವಾಸುದೇವ ಶರ್ಮ

October 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anjali Ramanna

    Sir ಮತ್ತೊಮ್ಮೆ ನಮನಗಳು. ದಿನಾಂಕಗಳನ್ನು ನಮೂದಿಸಿ ರುವುದು ಲೇಖನಕ್ಕೆ ತೂಕ ತಂದಿದೆ. ನೀವು ಕೊನೆಯಲ್ಲಿ ಹೇಳಿರುವ ಸುತ್ತೋಲೆಯು ನಿಜಾರ್ಥದಲ್ಲಿ ಜಾರಿಗೆ ಬಂದರೆ ಬದುಕೂ ಸುಂದರವಾಗುವುದು. ಈ ಪ್ರತಿಕ್ರಿಯೆ ಬರೆಯುತ್ತಿರುವಾಗಲೇ ಕರೆ ಬಂತು ಹೊರ ರಾಜ್ಯದ ಎರಡು ಪುಟಾಣಿ ಕೂಸುಗಳನ್ನು ಇಲ್ಲಿ ಕೆಲಸಕ್ಕೆ ಬಿಡಲಾಗಿದೆ ರಕ್ಷಿಸಿ ಎಂದು. ಇದಕ್ಕೆ ಕೊನೆ ಎಂದು ?!!
    ಅಂಜಲಿ ರಾಮಣ್ಣ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: