‘ಕೂರ್ಗ್ ರೆಜಿಮೆಂಟ್’ ಎಂಬ ಯೋಧರ ನಾಡಿಮಿಡಿತ

ಸ್ಮಿತಾ ಅಮೃತರಾಜ್, ಸಂಪಾಜೆ

 ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದು,ವೃತ್ತಿಯಲ್ಲಿ ವೈದ್ಯರಾಗಿ, ಅದರಲ್ಲೂ ಮಕ್ಕಳ ತಜ್ಞರಾಗಿ ಕೊಡಗಿನ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಮೇಜರ್ ಡಾಕ್ಟರ್ ಕುಶ್ವಂತ್ ಕೋಳಿಬೈಲು ಮೂಲತ; ಕೊಡಗಿನ ಕಾವೇರಿಮಾತೆಯ ಉಗಮಸ್ಥಾನವಾದ ಭಾಗಮಂಡಲದವರು. ಸೂಕ್ಷ್ಮ ಸಂವೇದನೆಯ ಈ ತರುಣ ಲೇಖಕ, ಕತೆಗಾರ ಮಾತ್ರ ಅಲ್ಲ, ಸೂಕ್ಷ್ಮ ಮನಸಿನ ಒಳ್ಳೆಯ ಕವಿಯೂ ಕೂಡ.

ಇತ್ತೀಚೆಗೆ ಪ್ರಕಟಗೊಂಡ  ಅವರ ಚೊಚ್ಚಲ ಕಥಾಸಂಕಲನ ’ ಕೂರ್ಗ್ ರೆಜಿಮೆಂಟ್ ’. ಅವರೇ ಹೇಳುವಂತೆ ಇದು ಬಂದೂಕು ಹಿಡಿದವರ ನಾಡಿ ಮಿಡಿತ.  ಕೊಡಗಿನ ಉದಯೋನ್ಮುಖ ಬರಹಗಾರನ ಈ ಕೃತಿ ನನ್ನ ಮಟ್ಟಿಗೆ ಹೇಳುವುದಾದರೆ ಕನ್ನಡಕ್ಕಿದು ಹೊಸ ಪ್ರಯತ್ನ. ಬರೇ ಸೈನಿಕರ ಅಂತರಂಗವನ್ನು , ಅವರ ತುಡಿತ , ಮಿಡಿತಗಳನ್ನು ಕಟ್ಟಿಕೊಡುವ ಇಡೀ ಸಂಕಲನ ನನಗಿದು ಹೊಸತು ಅಂತನ್ನಿಸುತ್ತದೆ. ಅಥವಾ ಇದು ನನ್ನ ಓದಿನ ಮಿತಿಯೂ ಇರಬಹುದು.

ಸೇನೆಯಲ್ಲಿ ಹಲವು ವರ್ಷಗಳ ವರೆಗೆ ಸೇವೆ ಸಲ್ಲಿಸಿದ ಕಾರಣವೇ  ಅವರಿಗೆ ರೋಗಿಯ ನಾಡಿಮಿಡಿತವನ್ನು ಪರೀಕ್ಷಿಸಿದ್ದಷ್ಟೇ ಸುಲಭವಾಗಿ ಅವರು ಬಂದೂಕು ಹಿಡಿದವರ ನಾಡಿಮಿಡಿತವನ್ನು ಗ್ರಹಿಸಬಲ್ಲರು. ಮತ್ತು ಅದನ್ನು ಅಷ್ಟೇ ಸುಲಲಿತವಾಗಿ ನಮ್ಮ ಮುಂದೆ ಕತೆಯಂತೆ ಹೃದ್ಯವಾಗಿ ಹರವಬಲ್ಲರು ಎನ್ನುವುದನ್ನು ಇಲ್ಲಿಯ ಕತೆಗಳನ್ನು ಓದಿ ನಾವು ತೀರ್ಮಾನಿಸ ಬೇಕಷ್ಟೆ.

ಬದುಕು ಮತ್ತು ಸಾವಿಗೆ ಪದೇ ಪದೇ ಮುಖಾ ಮುಖಿಯಾಗುತ್ತಾ ಬದುಕುವ ಕಾರಣವೇ ಅವರಿಗೆ ಪ್ರತಿ ಕ್ಷಣದ ಬದುಕು ಎಷ್ಟು ಅಮೂಲ್ಯ ಅನ್ನಿಸುವಂತದ್ದು. ಅವರೇ ಹೇಳುವಂತೆ ಯುದ್ದದ ಕ್ರೌರ್ಯವನ್ನು ಬಲು ಹತ್ತಿರದಿಂದ ನೋಡಿದವನು ಮಾತ್ರ ಬದುಕಿನ ಕುರಿತು ಮಾತನಾಡಬಲ್ಲ.ಅದಕ್ಕಾಗಿಯೇ ಇಲ್ಲಿಯ ಕಥಾನಾಯಕ ಯದ್ಧದ ಯಾವ ಕತೆಗಳನ್ನು ರಸವತ್ತಾಗಿ ಹೇಳಲಾರ. ಎಷ್ಟು ತಟ್ಟುವ ಸಾಲುಗಳಿವು.

ಬೆಂಗಳೂರಿನ ಮೈತ್ರಿ ಪ್ರಕಾಶನ ಹೊರ ತಂದ  ಈ ಕಥಾ ಸಂಕಲನದಲ್ಲಿ  ಒಟ್ಟು ೧೨ ಕತೆಗಳಿವೆ. ಪ್ರತೀ ಕತೆಯಲ್ಲೂ ಯೋಧನೊಬ್ಬನ ಉಸಿರಿದೆ, ಹಪಾಹಪಿಯಿದೆ, ಬದುಕಿನ ಕುರಿತ ಅದಮ್ಯ ಕನಸಿದೆ. ಕತೆಗಾರ ಮೂಲತ: ಕೊಡಗಿನವರಾದ ಕಾರಣ , ಕೊಡಗಿನ ಪರಿಸರದ, ಅಲ್ಲಿಯ ಸಂಸ್ಕೃತಿಯ ಚಿತ್ರಣದ ಜೊತೆಗೆ ಇಲ್ಲಿಯ ಯೋಧನ ಮನಸು ಭಾವನಾತ್ಮಕವಾಗಿ ಬೆಸೆದುಕೊಂಡಿರುವುದನ್ನು ನಾವು ಗಮನಿಸ ಬಹುದು. 

ಒಬ್ಬ ಯೋಧ ತನ್ನವರಿಂದ, ತನ್ನ ಹುಟ್ಟೂರಿನ ಮಣ್ಣಿನಿಂದ ದೂರವಾಗಿ ಉಳಿದರು ತನ್ನ ನೆಲದೊಂದಿಗೆ ಹೇಗೆ ಬಿಡಿಸಲಾರದ ಅನೂಹ್ಯ ನಂಟನ್ನು ಹೊಂದಿರುತ್ತಾರೆ ಅನ್ನುವಂತದ್ದನ್ನು ಇಲ್ಲಿಯ ಬಹುತೇಕ ಕತೆಗಳು ಸಾದರ ಪಡಿಸುತ್ತವೆ. ಮಣ್ಣು, ತಾಯಿನೆಲ , ಯಾವೊತ್ತಿಗೂ ಜೀವಂತಿಕೆಯ ಸಂಕೇತ . ಹಾಗಾಗಿ ಮಣ್ಣು ಇಲ್ಲಿಯ ಕತೆಗಳ ಸ್ಥಾಯಿ ಭಾವ.

 ಸೈನಿಕರು ಅಂದಾಕ್ಷಣ , ನಮಗೆ ತಟ್ಟನೆ ನೆನಪಿಗೆ ಬರುವುದು, ಅವರ ಶಿಸ್ತಿನ ವ್ಯಕ್ತಿತ್ವ, ಅವರ ಪೊದೆ ಮೀಸೆಯಡಿಯಲ್ಲಿನ  ನಿರ್ಲಿಪ್ತ ನಗು , ಹಾಗೂ ಗಂಭೀರತೆಯನ್ನು ಹೊರ ಸೂಸುವ ಅವರ ನಿರ್ಭಾವುಕ ಕಣ್ಣುಗಳು. ಹೊರ ನೋಟಕ್ಕೆ ಅವರು ಎಷ್ಟೇ ಗಟ್ಟಿಯಾಗಿ ಕಂಡರೂ ಒಳಗೊಳಗೆ ಅವರೆಷ್ಟು ಮಿದು?, ತನ್ನ ಮನೆಯಿಂದ ಬರುವ ನಾಲ್ಕು ಸಾಲಿನ ನೀಲಿ ಶಾಯಿಯ ಬಗ್ಗೆ ಅವರು ಯಾಕಿಷ್ಟು ಕಡು ಮೋಹಿಗಳು? ನೀಲಿ ಲಕೋಟೆಯ ಬರುವಿಕೆಗಾಗಿ ಯಾಕಿಷ್ಟು ಅವರ ಕಣ್ಣಂಚಿನಲ್ಲಿ ಕಾತರ  ಅಂತ ತಿಳಿದಾಗ ಗಂಟಲುಬ್ಬಿ ಕಣ್ಣಂಚು ತೇವಗೊಳ್ಳಬಲ್ಲದು.

ಯೋಧರ ಬದುಕಿನ ಕುರಿತು ಯಾರು ಇಷ್ಟೊಂದು ಗಂಭೀರವಾಗಿ ಪರಿಗಣಿಸಲಾರರು. ಅವರ ನಿಸ್ವಾರ್ಥ ದೇಶ ಸೇವೆಯ ಕುರಿತಷ್ಟೇ ಅಭಿಮಾನ ಪಡುವ ನಾವುಗಳು, ಅವರ ಬದುಕಿಗೆ ಮತ್ತೊಂದು ಮಗ್ಗುಲು ಇದೆ ಅನ್ನುವಂತದ್ದನ್ನ ನಾವು ಅಷ್ಟೊಂದು ಗಹನವಾಗಿ ಅರಿಯಲು ಹೋಗುವುದಿಲ್ಲವೆಂಬುದೇ ಸೋಜಿಗ. ಇಲ್ಲಿಯ ಯೋಧರ ಬದುಕಿನ ಒಳತೋಟಿಯನ್ನು ಓದುತ್ತಾ ಹೋದಂತೆ  ಗೊತ್ತಿಲ್ಲದೇ ಎದೆಯೊಳಗಿಳಿದು ಒಂದು ಸಣ್ಣ ಕಂಪನವನ್ನು ಸೃಷ್ಟಿಸಿ ಬಿಡಬಲ್ಲದು.

ಹಾಗೇ ನೋಡಿದರೆ ಇಲ್ಲಿಯ ಕತೆಗಳು ಯೋಧರ ಕಾರ್ಯಕ್ಷೇತ್ರವನ್ನಾಗಲಿ, ಅಥವಾ ಅವರ ಅಲ್ಲಿಯ ದೈನಂದಿನ ಜೀವನವನ್ನಷ್ಟೇ ಕಥಿಸುವುದಿಲ್ಲ. ಕೊಡಗಿನ ಯೋಧನೊಬ್ಬ ತನ್ನ ಮನೆಯ ಪ್ರಮುಖ ಸ್ಥಳವಾದ ಬಾಡೆಯಲ್ಲಿರುವ ನೆಲ್ಲಕ್ಕಿ ದೀಪಕ್ಕೆ ಅಕ್ಕಿ ಹಾಕಿ ಮುಂದಿನ ಹುತ್ತರಿಯ ಹೊತ್ತಿಗೆ ತಾನು ಬಂದು ಬಿಡುವೆನೆಂಬ ಭರವಸೆಯನ್ನು ಮನೆಯವರಲ್ಲಿ ಬಿತ್ತಿ ಹೋಗುವುದು, ಆ ನಂಬಿಕೆಯಲ್ಲಿಯೇ ಇಡೀ ಕುಟುಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು, ಎಷ್ಟೋ ಹುತ್ತರಿಗಳು ಕಳೆದು ಹೋದರೂ ಮನೆಗೆ ಬಾರದೇ ಹೋಗುವ ಅಸಾಹಯಕ ಕ್ಷಣಗಳು ಎಂತಹ ಕಲ್ಲು ಹೃದಯದ ಓದುಗರನ್ನೂ ತಲ್ಲಣಗೊಳಿಸಿ ಎದೆಯನ್ನು ಮಿದುಗೊಳಿಸ ಬಲ್ಲವು.

ಯೋಧ ಪತಿ ಗದ್ದೆ ,ಬಯಲು ದಾಟಿ ಹೋಗುವಾಗ ಕಣ್ಣು ತಾಕುವವರೆಗೂ ಹೆಂಡತಿಯೊಬ್ಬಳು ಅವನ ಟ್ರಂಕಿನ ನಕ್ಷತ್ರವನ್ನು ನೋಡುತ್ತಾ ನಿಲ್ಲುವುದು, ನೆರಳು ಮರೆಯಾದ ನಂತರ ತಮ್ಮ ದೈನಿಕದ ಜೀವನಕ್ಕೆ  ಒಡ್ಡಿಕೊಳ್ಳುವ ಮನೆಯ ಮಡದಿಯ ಒಳ ಸಂಕಟವನ್ನು ಅಷ್ಟೇ ಅರ್ಧ್ರವಾಗಿ ಬರೆಯಬಲ್ಲರು. ಹೀಗೆ ಯೋಧನ ಕುಟುಂಬದ ನೈಜ್ಯ ಬದುಕನ್ನು ಅಷ್ಟೇ ನೈಜ್ಯವಾಗಿ ಕಣ್ಣಿಗೆ ಕಟ್ಟುವಂತೆ ತೆರೆದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಇಲ್ಲಿ ಕತೆಗಾರನಿಗೆ ಯೋಧನೊಬ್ಬನ ಬದುಕು ಮಾತ್ರ ಮುಖ್ಯ ಅನ್ನಿಸುವುದಿಲ್ಲ. ಗಂಡನಿಲ್ಲದೆ ಬದುಕಬೇಕಾದ  ಅನಿವಾರ್ಯತೆಯಲ್ಲಿ  ಯೋಧನ ಮಡದಿಯ ಬದುಕಿನ ಸಂಘರ್ಷ ಯುದ್ದಕ್ಕಿಂತಲೂ ಘೋರ ಅನ್ನುವಂತದ್ದನ್ನ ಹೇಳ  ತೊಡಗುತ್ತವೆ. ಗಂಡನ ಅನುಪಸ್ಥಿತಿಯಲ್ಲಿ ಬಾಳ್ವೆ ನಡೆಸಲು ಆಕೆಗೆ ಅದೆಷ್ಟು ಕೆಚ್ಚೆದೆ ಬೇಕು? ಆಕೆಯ ಆ ದಿಟ್ಟತನಕ್ಕೆ ಅವಳಿಗೆ ಮೆಡಲುಗಳನ್ನು ಕೊಡಬಹುದಾಗಿದ್ದರೆ ಸಿಕ್ಕಿಸಿಕೊಳ್ಳಲು ಆಕೆಯ ರವಿಕೆಯಲ್ಲಿ ಜಾಗಗಳೇ ಇರಲಿಕ್ಕಿಲ್ಲ ಅನ್ನುವುದು ಎಷ್ಟೊಂದು ಅಪ್ಪಟ ಸತ್ಯ. ಇಲ್ಲಿ ಕತೆ ಧ್ವನಿಸುವ ಮಹಿಳಾಪರ ನಿಲುವುಗಳು ಕೂಡ ಮುಖ್ಯ ಅನ್ನಿಸಿ ಗಮನಸೆಳೆಯುತ್ತವೆ.  

ದೇಶದ ಗಡಿ ಕಾಯುವ ಯೋಧನ ಮನಸ್ಥಿತಿಯಷ್ಟೇ ಸಂಸಾರ ನಿಭಾಯಿಸುವ ಆಕೆಯ ಹೊಣೆಗಾರಿಕೆಯೂ ಅತಿ ಜವಾಬ್ಧಾರಿಯುತವಾದದ್ದು ಅನ್ನುವ ಸಂಗತಿ ನಮ್ಮನ್ನು ಕಾಡದೇ ಇರಲಾರದು. ಒಬ್ಬ ಯೋಧನ ಇಡೀ ಕುಟುಂಬ ಎದುರಿಸುವ ಸವಾಲುಗಳನ್ನು ಮನ ಮುಟ್ಟುವಂತೆ ತೆರೆದಿಡುವಲ್ಲಿ ಇಲ್ಲಿಯ ಕತೆಗಳು ಯಶಸ್ವಿಯಾಗಿವೆ.

ಯೋಧನ ಮಡದಿಯ ಒಳಗುದಿ ಎಷ್ಟಿದೆಯೆಂದರೆ ತನ್ನ ಮಗ ಸಿಗರೇಟ್ ಸೇದಿ ಸಿಕ್ಕಿ ಬಿದ್ದಾಗ ಆಗುವ ಸಂಕಟಕ್ಕಿಂತ ಹೆಚ್ಚಾಗಿ ಮಗ ಆರ್ಮಿ  ರ್‍ಯಾಲಿಯಲ್ಲಿ ಓಡಿದ ಸಂಗತಿ ಗೊತ್ತಾದಾಗ ಆಕೆಯ ದು:ಖ ಹೆಚ್ಚಿನದ್ದಾಗುತ್ತದೆ. ಇಂತಹ ತಳಮಳಗಳನ್ನ  ಎಷ್ಟೆಲ್ಲಾ ಅದರ ಹಿಂದಿನ ನೋವುಗಳನ್ನು,ಒಡಲಾಳದ ಬೇಗುದಿಗಳನ್ನು  ಇವು ತೆರೆದಿಡಬಲ್ಲವು?.

 ದ್ವನಿಪೂರ್ಣವಾಗಿ ಕಾವ್ಯಾತ್ಮಕ ಭಾಷೆಯಲ್ಲಿ ಕಥಿಸುವ ಇಲ್ಲಿನ ಎಲ್ಲಾ ಕಥೆಗಳಿಗೆ ಓದಿಸಿಕೊಂಡು ಹೋಗುವ ಗುಣವಿದೆ. ಯುದ್ಧದಲ್ಲಿ ಗೆದ್ದು ಬಂದ ಸೇನಾನಿಯನ್ನು ಕಂಡು ಹರ್ಷ ವ್ಯಕ್ತ ಪಡಿಸುವಷ್ಟು, ಆತ ಊರಿಗೆ ಸುಖವಾಗಿ ಮರಳಿ ನೆಲೆ ನಿಲ್ಲಲು ಬಂದಾಗ ನಮ್ಮ ಜನ ಸಂತೋಷ ತೋರ್ಪಡಿಸುವುದಿಲ್ಲ ಅನ್ನುವ ಸಾಲಿನಲ್ಲಿ ವಿಷಾದದ ಎಳೆಯೊಂದು ನಮ್ಮ ಎದೆಯನ್ನು ತಾಕಿ ಹೋಗದೆ ಇರಲಾರದು.

ಬದಲಾದ ಕಾಲಘಟ್ಟಕ್ಕೆ ತೆರೆದುಕೊಳ್ಳುವ ಹೊತ್ತಲ್ಲಿ ಇಲ್ಲಿನ ಕತೆಯಲ್ಲಿ ಬರುವ  ಅವ್ವ ಮತ್ತು ಮನೆಯ ಸಂಬಂಧ ಎಲ್ಲಾ ಬದಲಾವಣೆಗಳಿಗೆ ಮೂಕ ಸಾಕ್ಷಿಯಂತೆ ನಿಂತು ,ಹೇಳಿಯೂ ಹೇಳದಂತೆ ನಮ್ಮ ಮುಂದೆ ಚಿತ್ರದಂತೆ ಸುರಳಿ ಸುರಳಿಯಾಗಿ ತೆರೆದುಕೊಳ್ಳುತ್ತದೆ.

ದೇಶ ವಿಭಜನೆಯ ಸಂದರ್ಭದಲ್ಲಿ ಪಾಕ್ ದೇಶದ ಹಳ್ಳಿ ಮೂಲೆಯೊಂದರಲ್ಲಿ ವಾಸವಾಗಿದ್ದ ಸಿಖ್ ಕುಟುಂಬ ಭಾರತಕ್ಕೆ ವಲಸೆ ಬರುವುದು, ಆ ಕುಟುಂಬದ ಕುಡಿಯೊಬ್ಬ ಯೋಧನಾದಾಗ ಯುದ್ಧದ ಸಂದರ್ಭದಲ್ಲಿ ಅದೇ ಹಳ್ಳಿಯನ್ನು ಆಕ್ರಮಿಸಿಕೊಂಡಾಗ , ಅದು ಶತ್ರು ರಾಷ್ಟ್ರವಾದರೂ ಒಂದು ಬೊಗಸೆ ಮಣ್ಣನ್ನು ಎತ್ತಿಕೊಂಡು ಬರುವ ಚಿತ್ರಣವೊಂದು ಕಾಲ ದೇಶ, ಜಾತಿ, ಮತ, ಧರ್ಮವನ್ನು ಮೀರಿ ಮಣ್ಣೆಂಬುದು ಎಲ್ಲಕ್ಕಿಂತ ಮಿಗಿಲೆಂಬ ಸಾರವನ್ನು ಇದು ಸೂಚ್ಯವಾಗಿ ಕಟ್ಟಿಕೊಡುತ್ತದೆ.

 ಒಟ್ಟಾರೆಯಾಗಿ ಇಲ್ಲಿನ ಕತೆಗಳು ಕೊಡಗಿನ ಜನಜೀವನ, ಸಂಸ್ಕೃತಿ, ಸಂಪ್ರದಾಯದ ಎಳೆಯೊಂದಿಗೆ ಹೇಗೆ ಯೋಧ ಗಡಿಯಲ್ಲೂ , ಹುಟ್ಟೂರಿನಲ್ಲೂ ಮಣ್ಣಿಗಾಗಿ  ನಿರಂತರ ಹೋರಾಡುತ್ತಲೇ ಇರಬೇಕಾಗುತ್ತದೆಯೆಂಬ ಅವರ ಬದುಕಿನ ಇತರ ಮಜಲುಗಳತ್ತಲ್ಲೂ ನಮ್ಮನ್ನು ಕೊಂಡೊಯ್ಯುತ್ತಾರೆ. ಕೊಡಗಿನ ಮಣ್ಣಿನ ಪರಿಮಳ ಇಲ್ಲಿಯ ಕತೆಗಳಲ್ಲಿ ಮಾತನಾಡುತ್ತವೆ. 

ದಿನ ನಿತ್ಯದ ಬದುಕಿನ ವಿವರಗಳನ್ನು ಒಂದು ಕಥಾ ಚೌಕಟ್ಟಿನೊಳಗೆ ತಂದು ಕೂರಿಸುವ ಕಲೆ ಕುಶ್ವಂತರಿಗೆ ಒಲಿದಿದೆ. ಭವಿಷ್ಯದಲ್ಲಿ ಈ ಯುವ ಬರಹಗಾರನಿಂದ ಉತ್ತಮ ಕತೆಗಳನ್ನು ಖಂಡಿತಾ ನಿರೀಕ್ಷಿಸ ಬಹುದು. ಕೊಡಗಿನ ಈ ಯುವ ಪ್ರತಿಭೆಯಿಂದ ಹೆಚ್ಚಿನದೇನನ್ನೋ ಕನ್ನಡ ಸಾರಸ್ವತಲೋಕ ನಿರೀಕ್ಷಿಸಬಹುದು ಎನ್ನುವ ಆಶಯದೊಂದಿಗೆ, ಡಾ. ಕುಶ್ವಂತ್ ಕೋಳಿಬೈಲು ರವರಿಗೆ ಶುಭವಾಗಲಿ.

‍ಲೇಖಕರು Avadhi

October 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vijay Amrithraj

    ವೃತ್ತಿಯ ಕುರಿತು ಬರೆದ ಕವಿತೆಗಳು ಬಹುತೇಕ ಅವರವರಿಗೆ ಸಂಬಂಧ ಅನ್ನುವಂತಹ ಭಾವನೆಯೇ ಹೆಚ್ಚು ಮತ್ತು ಅಂತಹ ಕವಿತೆಗಳಿಗೆ ಲವಲವಿಕೆ ಕಡಿಮೆ….

    ಉದಾಹರಣೆಗೆ ಹೇಳುವುದಾದರೆ ಅನೇಕ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಕಟಿಸುವ ಕವನ ಸಂಕಲನಗಳಲ್ಲಿ ಮಕ್ಕಳ ಕತೆಯೆ ಶಿಕ್ಷಕ ಶಿಕ್ಷಣ ವೃತ್ತಿ ಆಧಾರಿತ ಕಥೆ , ಕವನಗಳೇ ಹೆಚ್ಚಿರುತ್ತವೆ ಬಹುತೇಕ ಸಾಹಿತ್ಯ ವೃತ್ತಿ ಹಾಗೂ ಶಾಲಾ ಕಾಂಪೌಂಡಿನ ಆಚೆಗೆ ಬರುವುದೇ ಕಡಿಮೆ….

    ಆದರೆ ತಾವು ಪರಿಚಯಿಸಿದ ಕವನ ಸಂಕಲನ ಆ ಸೀಮಿತ ಚೌಕಟ್ಟನ್ನು ಮೀರಿ ಲವಲವಿಕೆಯಿಂದ ಎಲ್ಲರೂ ಓದಬಹುದಾದ ಕೃತಿ ಎನ್ನುವುದು ತಮ್ಮ ಪುಸ್ತಕ ಪರಿಚಯ ಮನನ ಮಾಡಿ ಕೊಡುತ್ತೆ….

    ಸದರಿ ಕೃತಿಯನ್ನು ಪರಿಚಯಿಸುವಾಗ ತಾವು ಅದರ ಆಳ ಹರವು ರುಚಿ ಹೇಳುವುದರ ಜೊತೆಗೆ ಭಾವಗಳನ್ನ ಮಟ್ಟುಗಳನ್ನ ಕಾವ್ಯ ಕಟ್ಟುವಿಕೆಯನ್ನು ವ್ಯಾಕರಣಬದ್ಧವಾಗಿ ವಿಶ್ಲೇಷಣೆಯಿಂದಾಗಿ ಸದರಿ ಕೃತಿ ಓದುವಂತೆ ಪ್ರೇರೇಪಿಸುತ್ತದೆ…

    ಕವಿಗಳಿಗೂ, ಕೃತಿಗೂ ನನ್ನವರಿಗೂ ತಲುಪಿಸಿದ ತಮಗೂ ಅಭಿನಂದನೆಗಳು….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: