‘ಮಾಯಾಲೋಕ’ದ ಪಾತ್ರಗಳ ನೆನೆಯುತ್ತ…

‘ಬಾಲ ಒಂದಿಲ್ಲ ಅಷ್ಟೇ..’ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ. 

ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ಪ್ರತಿಷ್ಠಿತ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ ಕೊಟ್ಟಿದ್ದಾರೆ. 

ಉಳಿದವರೆಲ್ಲಾ ಶಾಲೆ ಅಭಿವೃದ್ಧಿ ಮಾಡ್ತಾರೆನಾನು ಮಕ್ಕಳ ಜೊತೆ ಬಾಲ ಕಟ್ಟಿಕೊಂಡು ಕುಣೀತೀನಿ’ ಅಂತ ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಡುತ್ತಾರೆ.

ಹೇಮಾಗೆ ಪುಸ್ತಕ ಎಂದರೆ ಇನ್ನಿಲ್ಲದ ಹುಚ್ಚು. ತಾವು ಓದಿದ ಕೃತಿಗಳ ಪಾತ್ರಗಳು ಇವರನ್ನು ಇನ್ನಿಲ್ಲದಂತೆ ಕಾಡುತ್ತವೆ. ‘ನಿದ್ದೆಯಲ್ಲೂ..’ ಎಂದು ಮಾತು ಸೇರಿಸುತ್ತಾರೆ. ಪ್ರತೀ ಗುರುವಾರ ಹೇಮಾ ತಮ್ಮನ್ನು ಕಾಡಿದ ಪಾತ್ರಗಳನ್ನು ತಂದು ನಮ್ಮ ಎದುರು ನಿಲ್ಲಿಸಲಿದ್ದಾರೆ.

ಮಂದಣ್ಣ, ಬಿರಿಯಾನಿ ಕರಿಯಪ್ಪ, ಹಾವುಗೊಲ್ಲರ ಎಂಕ್ಟ, ಕರಾಟೆ ಮಂಜ, ಜಗ್ಗು, ಜಾನ್ ಬೆಟ್ಟಯ್ಯ…. ಸೇರಿದಂತೆ ಇನ್ನೂ ಅನೇಕ ಪಾತ್ರಗಳ ವಿಶಿಷ್ಟವಾದ ಹಾಸ್ಯ ಪ್ರಸಂಗಗಳನ್ನು ಓದುವಾಗ, ಇದು ಮಲೆನಾಡಿನ ಜನರಿಗೆ ಮಾತ್ರ ದಕ್ಕಿದ ಪ್ರಜ್ಞೆ ಇರಬಹುದೇ? ಎಂದೆನಿಸುತ್ತಿತ್ತು ನನಗೆ. ನಗಬೇಕು ಎನಿಸಿದಾಗಲೆಲ್ಲ ಓದುತ್ತಿದ್ದೆ. ಪದೇ ಪದೇ ನೆನಪಿಸಿಕೊಂಡು ನಗುತ್ತಿದ್ದೆ ಕೂಡ.

ಆದರೆ, ಮೊದಲ ಸಲ ‘ಮಾಯಾಲೋಕ’ ಓದಿದೆ ನೋಡಿ! ಇಲ್ಲ ಇಲ್ಲ ಪಾತ್ರಗಳ ಹೆಸರು ಬೇರೆ-ಬೇರೆ ಇರಬಹುದು. ಆದರೆ ಅಪ್ಪಟ್ಟ ಮನುಷ್ಯ ಮಾತ್ರ ವರ್ತಿಸಬಹುದಾದ ಈ ಪ್ರಜ್ಞೆಯಿದೆಯಲ್ಲ ಇದು ಪ್ರಾಂತ್ಯವಾರು ಅಲ್ಲ, ನಾನು ನೋಡುತ್ತಿರುವ ನೋಟವೇ ಸರಿ ಇಲ್ಲವೇನೊ ಅನಿಸಿ ಬದಲಾಯಿಸಿಕೊಂಡೆ. ಫಲಿತಾಂಶ ಮಾತ್ರ ಅದ್ಭುತ!

ನನ್ನ ಲೋಕದ ಪಾತ್ರಗಳ ಸುತ್ತ:

ದಶಕದ ಹಿಂದೆ ಅಕ್ಕನಿಗೆ ಬಾದಾಮಿಯಲ್ಲಿ ಟೀಚರ್ ಕೆಲಸ ಸಿಕ್ಕಿತು. ಬಾಡಿಗೆ ಮನೆ ಸಿಗುವವರೆಗೆ ಒಬ್ಬರ ಮನೆಯಲ್ಲಿ ಇರುವುದು ಅಂತಾಗಿತ್ತು. ಅವರಿಗಾಗಿ ನಾವು ಬಸ್ ಸ್ಟ್ಯಾಂಡ್ ಕ್ಯಾಂಟೀನಿನಲ್ಲಿ ಕುಳಿತು ಕಾಯುತ್ತಿದ್ದೆವು. ಕೈಯಲ್ಲಿ ಅದೇ ಇನ್ನೂ ಓದಿ ಮುಗಿಸಿದ ‘ಮಾಯಾಲೋಕ!’

ಕ್ಯಾಂಟೀನ್ ಗೋಡೆಗೆ ಒಂದು ಫಾಲ್ಸ್ ನ ದೊಡ್ಡ ಫೋಟೋ ತೂಗು ಹಾಕಿದ್ದರು. ನಮ್ಮ ಎದುರಿಗೆ ಕೂತು ಟೀ ಕುಡಿತಾ ಇದ್ದ ಹುಡುಗನೊಬ್ಬ ನಮ್ಮನ್ನ ಮಾತಿಗೆಳೆದು; ಇಂಥ ಬಿರುಬಿಸಿಲ ನಾಡಲ್ಲಿ ಹೀಗೊಂದು ಜಲಪಾತ ಅದ್ಭುತ ಅಲ್ವ ಅಂತ ಕಣ್ಣು ಬಾಯಿ ಬಿಟ್ಕೊಂಡು ನೋಡ್ತಾ ಇದ್ದ ಹೊಸಬರು ಆ ಊರಿಗೆ ಬಂದ ಸಕರಾಣವನ್ನ ವಿವರವಾಗಿ ತಿಳಿದೊಂಡ.

ಫಾಲ್ಸ್ ಕಥೆ; ಬಾದಾಮಿಯಲ್ಲಿ ಒಳ್ಳೆಯ ಮಳೆಯಾದರೆ ಅಗಸ್ತ್ಯ ತೀರ್ಥದ ಹಿಂದೆ ಒಂದು instant falls ನಿರ್ಮಾಣವಾಗುತ್ತದೆ. ಮಳೆ ನಿಂತ ಒಂದು ಗಂಟೆಯೊಳಗೆ ಆ ಫಾಲ್ಸ್ ಕೂಡ ನಿಲ್ಲುತ್ತದೆ!

ಅಷ್ಟೊತ್ತಿಗೆ ನಮ್ಮನ್ನ ಕರೆದುಕೊಂಡು ಹೋಗುವವರೂ ಬಂದರು. ಮುಂದೆ ಬಿಡದಿ ಬದಲಾಯಿಸಿ ಎಲ್ಲ ಸೆಟ್ ಆದ ಸ್ವಲ್ಪ ದಿನಕ್ಕೆ ಅಕ್ಕನ ಫೋನ್. ಆವತ್ತು ಕ್ಯಾಂಟೀನ್ ನಲ್ಲಿ ನೀ ಮಾತಾಡಿದೆಯಲ್ಲ ಆ ಹುಡುಗ ಇವತ್ತು ಸ್ಕೂಲ್ ಗೆ ಬಂದಿದ್ದ ಅಂತ. ಅಯ್ಯೋ ಮಾತನಾಡಿಸಿದ್ದಕ್ಕೆ ಸ್ಕೂಲ್ ವರೆಗೆ ಹುಡುಕಿ ಹೋದನೇ? ಬೈಗುಳ ಗ್ಯಾರಂಟಿ ಅಂತ ನಾ ಹೂಂ ಹೂಂ ಅಂತಿದ್ದೆ.

ಸದಾ ಗಂಭೀರವದನೆಯಾಗಿರುತ್ತಿದ್ದ ಅವಳೇ ಮಾತಿಗೆ ಮುಂಚೆ ನಗಲು ಶುರು ಮಾಡಿದಳು. ವಿಷಯ ಏನಪ್ಪಾ ಅಂದರೆ ಅವನು LIC agent. ಊರಿಗೆ ಬಂದವರ ಕೈಲಿ ಪಾಲಿಸಿ ಮಾಡಿಸದಿದ್ರೆ ಹೇಗೆ ಅಂತ ಬಿಡದೆ ಕಡೆಗೂ ಅಕ್ಕನ ಕೈಲೊಂದು ಪಾಲಿಸಿ ಮಾಡಿಸಿಕೊಂಡೇ ಹೋದನಂತೆ! ವಾಟರ್ ಫಾಲ್ಸ್ ಜೀವ ವಿಮೆ.

ಮೊನ್ನೆ ಊರಿಗೆ ಹೋಗಿದ್ದಾಗ ಅಲ್ಲಿ ನನ್ನಮ್ಮನ ಬಲಗೈ ಬಂಟಿಯೊಬ್ಬರಿದ್ದಾರೆ. ಅವರ ಗಂಡನಿಗೆ ಕೊರೊನಾ ಬಂದು ಆಸ್ಪತ್ರೆಗೆ ಸೇರಿದ್ದರು. ವಾಸಿ ಕೂಡ ಆಗಿ ಮಾರನೇ ದಿನ ಡಿಸ್ಚಾರ್ಜ್ ಇತ್ತು. ಡಿಸ್ಚಾರ್ಜ್ ದಿನವೇ ಹಾರ್ಟ್ ಅಟ್ಯಾಕ್ ಆಗಿ ತೀರಿಕೊಂಡು ಬಿಟ್ಟರು. ಅವರನ್ನು ನೋಡಿ ಮಾತಾಡಿಸಿ ಬರಲು ಹೋಗಿದ್ದೆ.

ನನಗೆ ಈ ಸಾವಿನ ನಂತರ ಆ ಸತ್ತ ವ್ಯಕ್ತಿಯ ಕಡೇ ನಿಮಿಷ, ಅವರ ಯಾವುದೋ ಸಂಗತಿ ಕುರಿತು ಇದ್ದಕ್ಕಿದ್ದಂತೆ ಪುರಾಣಗಳು ಹುಟ್ಟಿ ಬಾಯಿಂದ ಬಾಯಿಗೆ ಬದಲಾಗೋ ಪರಿಯ ಬಗ್ಗೆ ಸದಾ ಅಚ್ಚರಿ. ಈ ವ್ಯಕ್ತಿ ಸತ್ತ ಬಗೆ ಕುರಿತು ಮೂರು ಕಂತೆ ಪುರಾಣ ಸಿಕ್ಕಿತು.

ಒಂದನೇ ವರ್ಷನ್: ಮಗ ಇವನಿಗೆ ಹೇಳದೆ ಎಂಗೇಜ್ಮೆಂಟ್ ಮಾಡ್ಕೊಂಡ ಅಂತ ಮೂಗಿಗೆ ಹಾಕಿದ್ದ ಆಕ್ಸಿಜನ್ ತಾನೇ ತೆಗೆದುಬಿಟ್ಟ.

ಎರಡನೇ ವರ್ಷನ್: ಡಾಕ್ಟರ್ ಆಯ್ತು ಕಣಪ್ಪ ಬೆಳಗ್ಗೆ ಮನೆಗೆ ಕಳಿಸ್ತೀವಿ ಅಂದಿದ್ದಕ್ಕೆ ಇವನು ಸರಿ ಬೆಳಗ್ಗೆ ಅವರು ಬರೋ ಹೊತ್ತಿಗೆ ರೆಡಿ ಆಗಾಣ ಅಂತ ತಾನೇ ಮೂಗಿಗಿಟ್ಟಿದ್ದನ್ನ ತೆಗೆದ ಹಂಗೆ ಹೋಗ್ಬಿಟ್ಟ.

ಮೂರನೆಯ ವರ್ಷನ್: ಡಾಕ್ಟರ್ ಬರೋ ಹೊತ್ತಿಗೆ ಮೂಗಿಗೆ ಇಟ್ಟಿದ್ದು ಚೂರು ಆಡ್ಸವನೇ ಆರ್ಟ್ ವೀಕಾಗಿ ಹಂಗೆ ಪಟ್ ಅಂದ್ಬಿಟ್ಟಿದೆ.

ಇಂತಹದ್ದನ್ನು ಕೇಳಿಸಿಕೊಳ್ಳೋವಾಗ ಭಯಂಕರ ಕಿರಿಕ್ ಮಾಡೋ ಸಂಗತಿ ಏನೆಂದರೆ ಹೇಳುವವರು ತಾವು ಹೇಳ್ತಾ ಇರೋದು ಭಾರಿ ಘನಘೋರ ಗಂಭೀರ ವಿಷಯ ಅನ್ನೋ ಭಾವದಲ್ಲಿ ಹೇಳ್ತಿರುತ್ತಾರೆ. ಅದನ್ನು ಕೇಳುತ್ತಿದ್ದಂತೆ ಒದ್ದುಕೊಂಡು ಬರುತ್ತಿರೋ ನಗುವನ್ನು ತಡೆದುಕೊಂಡು ಮುಖದಲ್ಲಿ ಹರಳೆಣ್ಣೆ ಕುಡಿದವರ ಭಾವವನ್ನು ಇಟ್ಟುಕೊಂಡು ಅವರ ಮಾತಿಗೆ ತಲೆಯಾಡಿಸುವುದು.

ಸತ್ತವನ ಇನ್ನೊಂದು ವಿಷಯ ಈ ಎಲ್ಲ ಮಾತು ಆಡ್ಬೇಕಾದ್ರೆ ಹೊರಬಿದ್ದಿದ್ದು, ಅವನಿಗಿನ್ನೂ ಮಕ್ಕಳು ಆಗಿರಲಿಲ್ಲ ಆದರೆ ಗೌರ್ಮೆಂಟ್ ಸ್ಕೀಂ ಬಂತಂತೆ ಮಕ್ಕಳಾಗದಂಗೆ ಆಪರೇಷನ್ ಮಾಡಿಸಿಕೊಂಡರೆ ದುಡ್ಡು ಅಂತ. ಈಯಪ್ಪ ಹೋಗಿ ಮಾಡಿಸ್ಕೊಂಡು ಕಾಸು ತೊಗೊಂಡು ಬಂದನಂತೆ. ಅವರು ತಂಗಿಯ ಮಕ್ಕಳನ್ನು ಸಾಕಿಕೊಂಡಿದ್ದರ ಹಿಂದಿನ ಅಸಲಿ ಕಾರಣ ಆಗಲೇ ಗೊತ್ತಾಗಿದ್ದು!

ನನ್ನ ಅತಿ ಪ್ರೀತಿಯ ಇಡ್ಲಿ ಬೈಗುಳಕ್ಕೂ ಉಪಯೋಗ ಆಗಿದ್ದು: ನನ್ನ ಒಬ್ಬ ಫ್ರೆಂಡ್ ಅಪ್ಪನಿಗೆ ಇಡ್ಲಿ ಅಂದ್ರೆ ತುಂಬಾ ಇಷ್ಟ. ಅವರ ಮನೇಲಿ ಜಗಳ ಹತ್ಕೊಂಡಾಗ ಆಂಟಿ ಅಂಕಲ್ ನನ್ನು ಬೈಯುತ್ತಿದ್ದ ಒಂದು ಮಾತು, “ನೀನು ತಿಂದಿರೋಷ್ಟು ಇಡ್ಲೀಲಿ ದೊಡ್ಡ ಗ್ವಾಡೇನೆ ಕಟ್ಬೋದಿತ್ತು” ಅಂತ. ಇದನ್ನು ಕೇಳಿದ ತಕ್ಷಣ ಅರೆ ಇಡ್ಲಿ ಗೋಡೆ! ಹೇಗಿರಬಹುದು ಅಂತ ಇಮ್ಯಾಜಿನ್ ಮಾಡಿಕೊಳ್ಳಲು ಶುರುಮಾಡಿದ್ದೆ.

ನಾ ಕೇಳಿದಾಗಲೆಲ್ಲ ಈ ರೀತಿಯ ಕಥೆಗಳನ್ನು ಹೇಳಿದರೆ ನಿಮಗೆ ಸ್ವರ್ಗದಲ್ಲಿ ಸೀಟು ಖಾಯಂ ಎಂದು ನಾನು ಹಾರೈಸುವಾಗ ಸ್ನೇಹಿತೆ ಹೇಳುತ್ತಿರುತ್ತಾಳೆ, “ಸ್ವರ್ಗ ಗೊತ್ತಿಲ್ಲ ಆದರೆ ದಾರಿಯಂತೂ ಬೇಗ ಸವೆಯುತ್ತೆ. ಬದುಕು ಕಥಾಮಂಜರಿ ಆಗುತ್ತೆ” ಅಂತ. ನಿಜ ಅಲ್ವ!!

…ಸದ್ಯಕ್ಲೆ ಜಗ್ಗು ಮೋಪೆಡ್ ಬಳಸುವುದನ್ನು ಕಲಿಯುವವರೆಗೆ ಕರಾಟೆ ಮಂಜ ಡ್ರೈವರ್, ಜಗ್ಗು ಪ್ಯಾಸೆಂಜರ್. ಇಬ್ಬರೂ ಕುಳಿತು ನಮ್ಮೂರಿನ ಹೊಂಡ ಬಿದ್ದ ದರಿದ್ರ ರಸ್ತೆಗಳಲ್ಲಿ ಕುದುರೆ ಸವಾರಿ ಮಾಡಿದಂತೆ ಧಡಧಡ ಎಂದು ನೆಗೆಸುತ್ತಾ ತಿರುಗಾಡಿದ್ದರ ಫಲ ಒಮ್ಮೆ ಅದರ ಸೈಲೆನ್ಸರ್ ಕಳಚಿ ಬಿತ್ತು. ಅದರಿಂದ ಹೊರಟ ಸಿಡಿಲನಂಥ ಶಬ್ದಕ್ಕೆ ಇಬ್ಬರೂ ಕಂಗಾಲಾದರೂ ಅನಂತರ ಸಾವಿರಾರು ಮೈಲು ವೇಗದಲ್ಲಿ ಚಲಿಸುತ್ತಿರುವಂತೆ ಆರ್ಭಟಿಸುತ್ತಿದ್ದ ಮೋಪೆಡ್ ಸವಾರಿ ಅವರಿಗೆ ಇಷ್ಟವಾಗಿ “ಹಿಂಗೇ ಒಂದಷ್ಟು ದಿನ ಇರ್ಲಿ ಬಿಡೋ, ಆಮೇಲೆ ಬೇಕಾದರೆ ಜಾನ್ ಬೆಟ್ಟಯ್ಯನ ಹತ್ರ ಸೈಲೆನ್ಸರ್ ಕೂರಿಸಿ ಕೊಡೋ ಅಂತ ಹೇಳೋಣ” ಎಂದು ಪ್ಯಾಸೆಂಜರ್ ಜಗ್ಗು ಡ್ರೈವರ್ ಮಂಜನಿಗೆ ಹೇಳಿದ.

ಮಾಯಾಲೋಕ ~೧\೧೦೩

October 1, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: