‘ಮಾಯಾಕನ್ನಡಿ’ಯೊಳಗಿನ ಮಲೆಯಾಳ ಪೆಣ್ ಕಥೆಗಳು

ಪಾರ್ವತಿ ಐತಾಳ

‘ಮಾಯಾಕನ್ನಡಿ’ ಮಲೆಯಾಳದ ೧೪ ಮಂದಿ ಕಥೆಗಾರ್ತಿಯರ ಹದಿನಾರು ಸುಂದರ ಸಣ್ಣಕಥೆಗಳ ಸಂಕಲನ. ಮಲೇಯಾಳದ ಮೊದಲ ಕಥೆಗಾರ್ತಿ ಲಲಿತಾಂಬಿಕಾ ಅಂತರ್ಜನಂ ಅವರಿಂದ ಆರಂಭಿಸಿ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಶೀಬಾ ಇ.ಕೆ. ವರೆಗೆ ಎಲ್ಲ ಕಥೆಗಾರ್ತಿಯರನ್ನು ಅನುವಾದಕಿ ಕಮಲಾ ಹೆಮ್ಮಿಗೆ ಕನ್ನಡದ ಓದುಗರ ಮುಂದೆ ತಂದು ನಿಲ್ಲಿಸಿದ್ದಾರೆ. ವಸ್ತುಗಳ ದೃಷ್ಟಿಯಿಂದಲೂ ಸಾಂಸ್ಕೃತಿಕ ಹಿನ್ನೆಲೆಯಿಂದಲೂ ಈ ಎಲ್ಲ ಕಥೆಗಳು ಕನ್ನಡಕ್ಕಿಂತ ಭಿನ್ನವಾಗಿವೆ.

ಲಲಿತಾಂಬಿಕಾ ಅಂತರ್ಜನಂ ಅವರ ‘ಗಾಂಧೀಜಿಯೋತ್ತರ ದಿನಗಳು’ಗಾಂಧಿ ತತ್ವಗಳನ್ನು ಕಾಯಾ ವಾಚಾ ಮನಸಾ ಅನುಸರಿಸುವ ಒಬ್ಬ ವ್ಯಕ್ತಿ ಮತ್ತು ಗಾಂಧೀಜಿಯವರ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದು ರಾಜಕೀಯ ಅಧಿಕಾರ ಪಡೆದು ನಂತರ ಪ್ರಜೆಗಳ ಹಿತವನ್ನೇ ಮರೆಯುವ ಗೋಸುಂಬೆಗಳ ನಡುವೆ ನಡೆಯುವ ಸಂಘರ್ಷವನ್ನು ವ್ಯಂಗ್ಯ-ವಿಡಂಬನೆಗಳೊಂದಿಗೆ ಚಿತ್ರಿಸುತ್ತದೆ.

ಮೊದಲ ತಲೆಮಾರಿನ ಇನ್ನೋರ್ವ ಪ್ರತಿಭಾವಂತ ಲೇಖಕಿ ರಾಜಲಕ್ಷ್ಮಿಯವರ ‘ಚರಿತ್ರೆ ಮರುಕಳಿಸಲಿಲ್ಲ’ ಎಂಬ ಕಥೆಯಲ್ಲಿ ಬಡತನದ ಕಾರಣದಿಂದ ಋಣದಲ್ಲಿ ಬಿದ್ದು ಇಷ್ಟವಿಲ್ಲದ ಹೆಣ್ಣನ್ನು ಮದುವೆಯಾಗಿ ವರ್ಷಗಳನ್ನು ದೂಡಿದ ವ್ಯಕ್ತಿಯೊಬ್ಬ ತನ್ನದೇ ಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದ ಇನ್ನೊಬ್ಬ ಬಡ ಹುಡುಗನನ್ನು ಅವನ ಸಮಸ್ಯೆಯಿಂದ ಬಿಡಿಸಿ ಅವನು ಇಷ್ಟಪಟ್ಟ ಹುಡುಗಿಯೊಂದಿಗೆ ಮದುವೆ ಮಾಡಿಸುತ್ತಾನೆ.

ಇಂಗ್ಲಿಷ್ ಮತ್ತು ಮಲೆಯಾಳಗಳಲ್ಲಿ ಬರೆದು ಪ್ರಸಿದ್ಧ ಲೇಖಕಿಯಾದ ಕಮಲಾದಾಸ್ ಅವರ ಕಥೆ ‘ಕಲ್ಯಾಣಿ’. ಇದು ಫ್ರೆಂಚ್ ಲೇಖಕ ಕಾಫ್ಕಾನ ‘ದಿ ಟ್ರಯಲ್’ ಕಾದಂಬರಿಯ ಅಸಂಗತ ಶೈಲಿಯಲಿ, ಯಾವ ತಪ್ಪೂ ಮಾಡದ ವಿವಾಹಿತ ಸ್ತ್ರೀಯೊಬ್ಬಳು ಇದ್ದಕ್ಕಿದ್ದಂತೆ ಪೋಲಿಸರಿಂದ ಅರೆಸ್ಟ್ ಆಗಿ ಅಸಹಾಯಕ ಸ್ಥಿತಿಯಲ್ಲಿ ಬೀಳುವ ಕಥೆ. ತನ್ನ ತಪ್ಪೇನೆಂದು ಆಕೆಗೂ ತಿಳಿಯದು. ಪೋಲಿಸರೂ ಹೇಳುವುದಿಲ್ಲ.

ಆಕೆ ತನ್ನ ಹೆಸರು ಅಮ್ಮಿಣಿಯೆಂದು ಹೇಳಿದರೂ ಕೇಳದೆ ಪೋಲಿಸರು ಅವಳನ್ನು ‘ಕಲ್ಯಾಣಿ’ಎಂದು ಕರೆದು ಕುಹಕವಾಡುತ್ತ ಆಕೆಯನ್ನು ಗಾಬರಿಗೊಳಿಸುತ್ತಾರೆ. ಅವಳ ಗಂಡನೂ ಬಂದು ಆಕೆಯ ಮೇಲೆ ಇಲ್ಲಸಲ್ಲದ ಅನೈತಿಕತೆಯ ಆರೋಪ ಹೊರಿಸುತ್ತಾನೆ. ಎಲ್ಲವೂ ಒಂದು ಕನಸಿನಲ್ಲೆಂಬಂತೆ ನಡೆಯುತ್ತದೆ. ಹಿರಿಯ ತಲೆಮಾರಿನ ಇನ್ನೋರ್ವ ಲೇಖಕಿ ಪಿ.ವತ್ಸಲಾರ ‘ಶಾರದೆಯ ಮನೆ’ ಎಂಬುದು ಒಂದು ಮನ ಮಿಡಿಯುವಂತೆ ಮಾಡುವ ಕಥೆ.

ಕಷ್ಟಪಟ್ಟು ಹಣ ಹೊಂದಿಸಿ ಅಚ್ಚುಕಟ್ಟಾದ ಮನೆ ಕಟ್ಟಿಸಿದ ಶಾರದಾ ಯಾವುದೋ ಅಸಹಾಯಕತೆಯಿಂದಾಗಿ ಆ ಮನೆಯನ್ನು ಮಾರಬೇಕಾದ ಪರಿಸ್ಥಿತಿ ಬಂದಾಗ ಆ ಬಗ್ಗೆ ಭಾವುಕಳಾಗಿ ನೊಂದುಕೊಳ್ಳುತ್ತಾಳೆ. ವತ್ಸಲಾರದ್ದೇ ಇನ್ನೊಂದು ಕತೆ ‘ಅರೆಕಳಿತ ಗೇರುಹಣ್ಣು’. ಜತೆಗೆ ಆಡಿ ನಲಿದ ಬಾಲ್ಯದ ಗೆಳೆಯನ ಬಗ್ಗೆ ಕಥಾನಾಯಕಿಗೆ ಕೋಮಲ ಭಾವನೆಗಳಿದ್ದರೂ ಹಿರಿಯರ ಒತ್ತಾಯಕ್ಕೆ ಮಣಿದು ಬೇರೆ ಯಾರನ್ನೋ ಮದುವೆಯಾಗಿ ನಗರಕ್ಕೆ ಹೋಗುತ್ತಾಳೆ.

ಅವನು ಅಶಿಕ್ಷಿತನಾಗಿದ್ದರಿಮದ ಹಳ್ಳಿಯಲ್ಲೇ ಉಳಿಯುತ್ತಾನೆ. ಎಷ್ಟೋ ವರ್ಷಗಳ ನಂತರ ಅವರಿಬ್ಬರೂ ಭೇಟಿಯಾದಾಗ ಆಕೆಯ ಭಾವನೆಗಳು ಮರುಕಳಿಸುತ್ತವೆ. ಚಂದ್ರಮತಿಯವರ ‘ವೆಂಟಿಲೇಟರ್ ಮತ್ತು ಒಂದು ಹಿಡಿ ಜನರು..’ ಹೊತ್ತು ಹೆತ್ತು ಹೊಟ್ಟೆ ಬಟ್ಟೆ ಕಟ್ಟಿ ಸಾಕಿ ಬೆಳೆಸಿದ ತಾಯಿ-ತಂದೆಯರನ್ನು ಕೊನೆಗಾಲದಲ್ಲಿ ಮಕ್ಕಳು ಕಡೆಗಣಿಸುವ ದಯನೀಯ ಸ್ಥಿತಿಯ ಚಿತ್ರಣವಿದೆ. ಪ್ರಸಿದ್ಧ ಸ್ತ್ರೀವಾದಿ ಲೇಖಕಿ ಸಾರಾ ಜೋಸೆಫ್ ಅವರ ‘ಬೆಳದಿಂಗಳಿಗೆ ಗೊತ್ತು’ ಎಂಬ ಕಥೆಯನ್ನು ಮನಶಾಸ್ತ್ರಿಯ ಹಿನ್ನೆಲೆಯಲ್ಲಿ ಓದಬೇಕು.

ಕೈಗೆ ಸಿಕ್ಕಿದ್ದನ್ನೆಲ್ಲ ಪದೇ ಪದೇ ತಿಕ್ಕಿ ತೊಳೆಯುವ ತನ್ನ ಗಂಡ ಉಣ್ಣಿಕೃಷ್ಣನ ವಿಚಿತ್ರ ರೋಗದಿಂದ(ಮ್ಯಾಕ್‌ಬೆಥ್ ನಾಟಕದಲ್ಲಿ ಲೇಡಿ ಮ್ಯಾಕ್‌ಬೆಥ್ ಮಾಡುವಂತೆ) ತಲ್ಲಣಗೊಳ್ಳುವ ತಂಗಮಣಿ ಅವನ ಬೇಡಿಕೆಯ ಮೇರೆಗೆ ‘ಊರಲ್ಲಿರುವ ಬಾವಿಯ ಶುದ್ಧ ಜಲದಲ್ಲಿ ಸ್ನಾನ ಮಾಡಿದರೆ ತಾನು ಶುದ್ಧನಾಗುವೆ’ ಎಂದಂತೆ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಅನುಸರಿಸಿ ಪರಿಹಾರಕಾರ್ಯಗಳನ್ನು ಮಾಡುತ್ತಾಳಾದರೂ ಅವನನ್ನು ಉಳಿಸಿಕೊಳ್ಳಲಾಗುವುದಿಲ್ಲ .

ಇಲ್ಲಿ ಮಂತ್ರವಾದ, ಮೂಢ ನಂಬಿಕೆಗಳ ಕುರಿತಾದ ವಿಡಂಬನೆಯಿದೆ. ಹಿರಿಯ ಕಥೆಗಾರ್ತಿ ಗ್ರೇಸಿಯವರ ಕಥೆ ‘ಮಾಯಾಕನ್ನಡಿ’ಯಲ್ಲಿ ಪ್ರತಿಭಟನೆಯು ಅಂತರ್ಧಾರೆಯಂತೆ ಹರಿಯುತ್ತದೆ. ಈ ಕಥೆಯಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಕನ್ನಡಿ ನೋಡಿಕೊಳ್ಳುತ್ತ ತನ್ನ ವ್ಯಕ್ತಿತ್ವವನ್ನು ಔನ್ನತ್ಯಕ್ಕೇರಿಸಲು ಏನೇನೋ ಮಾಡುತ್ತಾನೆ. ಆದರೆ ಅವನೊಳಗಿನ ಪಶುತ್ವವು ಹಾಗೆಯೇ ಉಳಿಯುವುದನ್ನು ನೋಡಿ ಅವನು ಗಾಬರಿಗೊಳ್ಳುತ್ತಾನೆ.

ಯುವ ಕಥೆಗಾರ್ತಿಯರಲ್ಲಿ ಇಂದು ಮೆನೋನ್, ಮುಚ್ಚಿಲೋಟ್ಟು ಭಗವತಿ, ಇ.ಪಿ.ಸುಷ್ಮಾ, ಪ್ರಿಯಾ ಎ.ಎಸ್, ಸಿತಾರಾ, ಅಜಿತಾ ಚಂದ್ರನ್ ಮತ್ತು ಶೀಬಾ ಇ.ಕೆ. ಯವರ ಕಥೆಗಳು ಆಧುನಿಕ ಬದುಕಿನ ವಿವಿಧ ಮುಖಗಳನ್ನು ಚಿತ್ರಿಸುತ್ತವೆ.

ಕನ್ಯತ್ವವನ್ನು ವಿವಾಹಕ್ಕೆ ಮೊದಲೇ ಮುರಿದುಕೊಳ್ಳುವುದು ಸಾಮರ್ಥ್ಯವುಳ್ಳ ಆಧುನಿಕ ಮನೋಭಾವದ ಹೆಣ್ಣಿನ ಲಕ್ಷಣವೆಂದು ರಿಯಾಲಿಟಿ ಷೋದಲ್ಲಿ ಕೇಳಿದ ಪ್ರಶ್ನೆಯೊಂದರ ಸಂದರ್ಭದಲ್ಲಿ ಭ್ರಮಿಸುವ ಕಥಾನಾಯಕಿ ಲೈಂಗಿಕ ಅನುಭವವನ್ನು ಪಡೆದೇ ತೀರುತ್ತೇನೆಂದು ಸವಾಲು ಹಾಕಿ ಕೊನೆಗೆ ಸ್ವಾಮೀಜಿಯೊಬ್ಬರ ಮೂಲಕ ಅದರಲ್ಲಿ ಗೆಲ್ಲುವ ಇಂದು ಮೆನೋನ್ ಅವರ ಕಥೆ ‘ಕನ್ಯೆ’ ಯುವಜನಾಂಗದ ತಪ್ಪು ಹೆಜ್ಜೆಯತ್ತ ಮತ್ತು ಕಾಷಾಯಧಾರಿಗಳಲ್ಲಿ ಅಡಗಿರುವ ಕಾಮವಾಛೆಯತ್ತ ಬೊಟ್ಟು ಮಾಡಿ ತೋರಿಸುತ್ತದೆ. ಅವರದ್ದೇ ಇನ್ನೊಂಂದು ಕತೆ ‘ಲೆಸ್ಬಿಯನ್ ಪಶು’ ಕೇರಳದ ಸಾಹಿತ್ಯ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ ಕತೆ.

ಹಿಂದೂ-ಮುಸ್ಲಿಂ ಅಂತರ್ಧರ್ಮೀಯ ವಿವಾಹದ ಉಲ್ಲೇಖ ಹಾಗೂ ರತಿಭಾವದ ಸ್ಪರ್ಶವೇ ಇಲ್ಲದ ಹಸುವಿನ ಪ್ರತಿಮೆಯ ಮೂಲಕ ಸಾಗುವ ಈ ಕತೆ ಜಾತ್ಯಾತೀತ ತತ್ವವನ್ನು ಬೆಂಬಲಿಸುತ್ತದೆ. ಇತರ ಯುವ ಕಥೆಗಾರ್ತಿಯರ ಕಥೆಗಳು ವಸ್ತುವಿನ ದೃಷ್ಟಿಯಿಂದ ಸಾಧಾರಣವೆನ್ನಿಸಿದರೂ ನಿರೂಪಣಾ ಶೈಲಿ, ತಂತ್ರ ಹಾಗೂ ಪ್ರತಿಮೆಗಳ ಬಳಕೆಯ ನಾವೀನ್ಯವು ಕಥೆಗಳಿಗೆ ಹೊಸ ಸ್ವರೂಪವನ್ನು ಕೊಟ್ಟು ಆಸಕ್ತಿಪೂರ್ವಕವಾಗಿ ಓದಿಸಿಕೊಂಡು ಹೋಗುತ್ತವೆ.

ಮಲೆಯಾಳದ ಪ್ರಾತಿನಿಧಿಕ ಕತೆಗಾರ್ತಿಯರ ವೈಶಿಷ್ಟ್ಯಪೂರ್ಣ ಕಥೆಗಳನ್ನು ಆಯ್ದು ಕನ್ನಡದ ಓದುಗರಿಗೆ ನೀಡಿರುವ ಕಮಲ ಹೆಮ್ಮಿಗೆಯವರ ಪರಿಶ್ರಮ ಅಭಿನಂದನೀಯ.

‍ಲೇಖಕರು Avadhi

October 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: