ಉಪ ಚುನಾವಣೆ ಅರಸರಿಗೆ ವರವೂ ಆಯಿತು, ಶಾಪವೂ ಆಯಿತು

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ’ ಅವರ ಪ್ರಸಿದ್ಧ ಕೃತಿ.

ಒಂದು ಉಪಚುನಾವಣೆಯ ನಂತರ ಅವರು ಶರವೇಗದಿಂದ ಸಿಎಂ ಹುದ್ದೆಯ ಕಡೆ ನಡೆದುಕೊಂಡು ಬಂದರು. ಮತ್ತೊಂದು ಉಪಚುನಾವಣೆಯ ನಂತರ ಅಷ್ಟೇ ಬೇಗವಾಗಿ ಸಿಎಂ ಖುರ್ಚಿಯಿಂದ ಕೆಳಗಿಳಿದರು.

ಹಾಗಂತ ಅವರು ಹೇಳಿದಾಗ ನಾನು ಕುತೂಹಲದಿಂದ ನೋಡಿದೆ. ಹೀಗವರು ಹೇಳಿದ್ದು ದೇವರಾಜ ಅರಸರ ಬಗ್ಗೆ ಅಂತ ನನಗೆ ಗೊತ್ತಿತ್ತು. ಆದರೆ ಒಂದು ಓಘದಲ್ಲಿ ಎಪಿಸೋಡನ್ನು ಅರಿಯಲು ನಾನು ಉತ್ಸುಕನಾಗಿದ್ದೆ.

ಅಂದ ಹಾಗೆ ಅವತ್ತು ಇದನ್ನು ಹೇಳಿದವರು ಎಸ್.ಜಿ.ನಂಜಯ್ಯನ ಮಠ.

ಹಲ ಬಾರಿ ಶಾಸಕರಾಗಿ,ಗೃಹ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ನಂಜಯ್ಯನ ಮಠ್,ಕರ್ನಾಟಕದಲ್ಲಿ ಅರಸರ ಅರಸರ ನಾಯಕತ್ವ ಹೊರಹೊಮ್ಮಲು ಕಾರಣವಾದ ಮೊದಲ ಉಪಚುನಾವಣೆಯನ್ನು ಕಣ್ಣಾರೆ ಕಂಡವರು.

ಅದಕ್ಕಿಂತ ಮುಖ್ಯವಾಗಿ ಆ ಉಪಚುನಾವಣೆಯಲ್ಲಿ ಹುನಗುಂದ ವಿಧಾನಸಭಾ ಕ್ಷೇತ್ರದಿಂದ ರೂಲಿಂಗ್‌ ಕಾಂಗ್ರೆಸ್‌ ಕ್ಯಾಂಡಿಡೇಟ್‌ ಆಗಿಕಣಕ್ಕಿಳಿದ ಜಿ.ಪರಯ್ಯ ನಂಜಯ್ಯನ ಮಠ ಅವರ ಪುತ್ರ.

ಹೀಗಾಗಿ ಅರಸರ ಶಕ್ತಿ ಮೇಲೆದ್ದು ನಿಲ್ಲುವಂತೆ ಮಾಡಿದ ಆ ಉಪಚುನಾವಣೆಯ ವಿವರ ನನಗೆ ಬೇಕಿತ್ತು. ಹಾಗಂತಲೇ ನಂಜಯ್ಯನ ಮಠ್‌ ಅವರನ್ನು ಅವತ್ತು ಕೆದಕಿದ್ದೆ.

ಹೀಗೆ ಕೆದಕಿದ್ದೇ ತಡ ಅವರ ಮಿದುಳಿನ ಕೋಶದಿಂದ ಐವತ್ತು ವರ್ಷಗಳ ಹಿಂದಿನ ನೆನಪು ಉಕ್ಕತೊಡಗಿತು: ವಿಠ್ಠಲಮೂರ್ತಿ, ಆ ಹೊತ್ತಿಗಾಗಲೇ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ವಿಭಜನೆಯಾಗಿತ್ತು.

ಇಲ್ಲಿ ಕರ್ನಾಟಕದಲ್ಲಿ ನಿಜಲಿಂಗಪ್ಪ ಅವರ ನೇತೃತ್ವದ ಕಾಂಗ್ರೆಸ್‌(ಓ) ಮತ್ತು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್‌(ಆರ್‌) ವಿರುದ್ದ ದಿಕ್ಕಿನಲ್ಲಿ ತಲೆ ಎತ್ತಿ ನಿಂತಿದ್ದವು.

ಈ ಪೈಕಿ ಕಾಂಗ್ರೆಸ್‌(ಓ) ಮುಖ್ಯಮಂತ್ರಿ ವೀರೇಂದ್ರಪಾಟೀಲರ ನೇತೃತ್ವದಲ್ಲಿ ನಿಂತಿದ್ದರೆ, ಕಾಂಗ್ರೆಸ್‌(ಆರ್)‌ ಮುಂಚೂಣಿಯಲ್ಲಿ ದೇವರಾಜ ಅರಸರು ನಿಂತಿದ್ದರು.

ಅಂದ ಹಾಗೆ ಕಾಂಗ್ರೆಸ್‌ ವಿಭಜನೆಯ ನಂತರ ರಾಜ್ಯದಲ್ಲಿ ತಮ್ಮ ಬಣದ ಮುಂಚೂಣಿಗೆ ಹೈದ್ರಾಬಾದ್‌ಕರ್ನಾಟಕ ಭಾಗದ ಪ್ರಭಾವಿ ಮುಖಂಡ, ಕುರುಬ ಸಮುದಾಯದ ಕೋಳೂರು ಮಲ್ಲಪ್ಪ ಅವರನ್ನು ತಂದು ನಿಲ್ಲಿಸಲು ಇಂದಿರಾಗಾಂಧಿ ಬಯಸಿದ್ದರು.

ಇದೇ ಕಾರಣಕ್ಕಾಗಿ ಅವರು ಕೋಳೂರು ಮಲ್ಲಪ್ಪನವರನ್ನು ಸಂಪರ್ಕಿಸಿ: ನೀವು ರಾಜ್ಯ ಕಾಂಗ್ರೆಸ್‌ನ ಅಡ್‌ಹಾಕ್‌ ಅಧ್ಯಕ್ಷರಾಗಿ ಎಂದು ಆಫರ್‌ ನೀಡಿದ್ದರು. ಆದರೆ ನಾನು ವಿದ್ಯಾವಂತನಲ್ಲ. ನನ್ನ ಬದಲಿಗೆ ದೇವರಾಜ ಅರಸರನ್ನು ನೇಮಕ ಮಾಡಿ ಎಂದಿದ್ದರು ಕೋಳೂರು ಮಲ್ಲಪ್ಪ.
ಹೀಗೆ ಮಲ್ಲಪ್ಪನವರ ಮಾತಿನಂತೆ ದೇವರಾಜ ಅರಸರನ್ನು ಇಂದಿರಾಗಾಂಧಿ ನೇಮಕ ಮಾಡಿದ್ದರಾದರೂ, ಆ ಜಾಗದಲ್ಲಿ ಕೂರಲು ತಾವು ಸಮರ್ಥರು ಎಂಬುದನ್ನು ಅರಸರು ಕೂಡಾ ಫ್ರೂವ್‌ ಮಾಡಬೇಕಿತ್ತು.

ಇಂತಹ ಸಮಯದಲ್ಲೇ (೧೯೭೦) ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ಘೋಷಣೆಯಾದವು. ಈ ಪೈಕಿ ಒಂದು ಹುನಗುಂದ ಕ್ಷೇತ್ರ. ಮಾಜಿ ಸಿಎಂ ಎಸ್.ಆರ್.ಕಂಠಿಯವರ ನಿಧನದಿಂದ ತೆರವಾದ ಕ್ಷೇತ್ರ ಅದು.

ಅದೇ ರೀತಿ ಹೊಸಪೇಟೆ ಸೇರಿದಂತೆ ಇನ್ನೆರಡು ಕ್ಷೇತ್ರಗಳು ತೆರವಾಗಿದ್ದವು. ಯಾವಾಗ ಉಪಚುನಾವಣೆಗಳು ಘೋಷಣೆಯಾದವೋ?ಇದಾದ ನಂತರ ಅರಸರು ಸುಮ್ಮನೆ ಕೂರಲಿಲ್ಲ. ಗೆಲ್ಲಬಲ್ಲ ಕ್ಯಾಂಡಿಡೇಟುಗಳು ಯಾರು ಎಂದು ಹುಡುಕತೊಡಗಿದರು.

ಆ ಸಂದರ್ಭದಲ್ಲಿ ಹುನಗುಂದ ಕ್ಷೇತ್ರದಲ್ಲಿ ಅವರ ಕಣ್ಣಿಗೆ ಬಿದ್ದವರು ನನ್ನ ತಂದೆ ಜಿ.ಪಿ.ನಂಜಯ್ಯನ ಮಠ. ಆದರೆ ಅವರು ಕಾಂಗ್ರೆಸ್‌ ಪಕ್ಷದವರಾಗಿರಲಿಲ್ಲ. ಬದಲಿಗೆ ಪ್ರಜಾಸೋಷಲಿಸ್ಟ್‌ ಪಾರ್ಟಿಯ ವತಿಯಿಂದ ಮೂರು ಬಾರಿ ಎಸ್.ಆರ್.ಕಂಠಿ ಅವರ ವಿರುದ್ಧ ಸ್ಪರ್ಧಿಸಿ ಸೋತವರಾಗಿದ್ದರು.

ಈ ಇತಿಹಾಸವನ್ನು ಅರಿತಿದ್ದ ಅರಸರು ನೇರವಾಗಿ ಜಿ.ಪಿ.ನಂಜಯ್ಯನ ಮಠ ಅವರನ್ನು ಸಂಪರ್ಕಿಸಿ: ನೀವು ನಮ್ಮ ಪಕ್ಷದ ಕ್ಯಾಂಡಿಡೇಟ್‌ ಆಗಿ ಸ್ಪರ್ಧಿಸಿ ಎಂದು ಮನ ಒಲಿಸಿದರು. ಅವರ ಎದುರು ಅವತ್ತು ಸ್ಪರ್ಧಿಸಿದವರು ಕಾಂಗ್ರೆಸ್‌ (ಓ) ಪಕ್ಷದ ಕವಿಶೆಟ್ಟಿ ಶಂಕರಪ್ಪ. ಸಜ್ಜನ ನಾಯಕ ಪಿ.ಎಂ.ನಾಡಗೌಡರು ಆಯ್ಕೆ ಮಾಡಿದ ಕ್ಯಾಂಡಿಡೇಟ್‌ ಅವರು.

ಇನ್ನು ಹಾಲಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದಾರಲ್ಲ ಆನಂದ್‌ ಸಿಂಗ್?ಅವರ ತಂದೆ ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ (ಆರ್‌)ಪಕ್ಷದ ಕ್ಯಾಂಡಿಡೇಟ್‌ ಆಗಿದ್ದರು.

ಅಂತಿಮವಾಗಿ ಉಪಚುನಾವಣೆಗಳು ನಡೆದು ಫಲಿತಾಂಶ ಹೊರಬಂದಾಗ ಕಾಂಗ್ರೆಸ್‌(ಆರ್) ಅಭೂತಪೂರ್ವ ವಿಜಯ ಸಾಧಿಸಿತ್ತು. ಮತ್ತದು ನಿಸ್ಸಂಶಯವಾಗಿ ಇಂದಿರಾಗಾಂಧಿ ಅವರ ಜನಪ್ರಿಯತೆಗೆ ಸಂದ ಫಲವಾಗಿತ್ತು.

ಇಂದಿರಾಗಾಂಧಿ ಅವರ ಈ ಜನಪ್ರಿಯತೆಯನ್ನು ಅರಸರು ಕೂಡಾ ಬಹು ಸಮರ್ಥವಾಗಿ ಬಳಸಿಕೊಂಡರು. ಒಂದು ಸನ್ನಿವೇಶವನ್ನು ಪಾಸಿಟಿವ್‌ ಆಗಿ ಬಳಸಿಕೊಳ್ಳುವವರೇ ನಿಜವಾದ ನಾಯಕರು.

ಸರಿ, ಹೀಗೆ ಉಪಚುನಾವಣೆಗಳ ಫಲಿತಾಂಶ ಬಂತು. ಅದರ ಬೆನ್ನಲ್ಲೇ  ವೀರೇಂದ್ರಪಾಟೀಲ್‌ ನೇತೃತ್ವದ ಕಾಂಗ್ರೆಸ್‌(ಓ) ಸರ್ಕಾರ ವಿದ್ಯುಕ್ತವಾಗಿ ಕಂಪಿಸತೊಡಗಿತು.

ಅಂದರೆ?ಅವರ ಸರ್ಕಾರದ ಒಬ್ಬೊಬ್ಬರೇ ಮಂತ್ರಿಗಳು ರಾಜೀನಾಮೆ ಕೊಡತೊಡಗಿದರು. ಇದರ ನಡುವೆ ಅರಸರು ಪ್ರಚಂಡ ವೇಗದಲ್ಲಿ ಬೆಳೆಯತೊಡಗಿದರು. ಮುಂದೆ ಎಪ್ಪತ್ತೊಂದರ ಪಾರ್ಲಿಮೆಂಟ್‌ ಚುನಾವಣೆಯಲ್ಲಿ ಕಾಂಗ್ರೆಸ್‌ (ಆರ್‌) ಪಕ್ಷ ಅದ್ಧೂರಿ ಜಯಗಳಿಸಿದ ಮೇಲೆ ಸರ್ಕಾರ ಉರುಳಿ ಬಿತ್ತು.

ಇದಾದ ನಂತರ ಕೆಲ ಕಾಲ ರಾಜ್ಯದ ಮೇಲೆ ರಾಜ್ಯಪಾಲರ ಆಡಳಿತ ಹೇರಿಕೆಯಾದರೂ ಅರಸರ ನೇತೃತ್ವದ ಕಾಂಗ್ರೆಸ್‌(ಆರ್‌) ದೊಡ್ಡ ಮಟ್ಟದಲ್ಲಿ ಮೇಲೆದ್ದು ನಿಂತಿತು. ೧೯೭೨ ರಲ್ಲಿ ಗೆದ್ದು ಅಧಿಕಾರ ಹಿಡಿಯಿತು.

ಪರಿಣಾಮ? ಉಪಚುನಾವಣೆಗಳ ನಂತರ ನಿರಾಯಾಸವಾಗಿ ನಡೆದು ಬಂದು ಮುಖ್ಯಮಂತ್ರಿ ಹುದ್ದೆಯ ಮೇಲೆ ಕುಳಿತ ದೇವರಾಜ ಅರಸರು ಕರ್ನಾಟಕದ ರಾಜಕಾರಣದಲ್ಲಿ ಯಶಸ್ವಿ ಸಿಎಂ ಅನ್ನಿಸಿಕೊಂಡರು. ಸಾಮಾಜಿಕ ಕ್ರಾಂತಿಯ ಹರಿಕಾರ ಎಂಬ ಖ್ಯಾತಿಗೆ ಪಾತ್ರರಾದರು.

ಇಷ್ಟು ಹೇಳಿ ಅರೆಕ್ಷಣ ಮೌನವಾದ ನಂಜಯ್ಯನ ಮಠ್: ಇದು ಅರಸರು ಮೇಲೆದ್ದು ನಿಲ್ಲಲು ಕಾರಣವಾದ ಉಪಚುನಾವಣೆಗಳಾದರೆ ಮುಂದೆ ನಡೆದ ಮತ್ತೊಂದು ಉಪಚುನಾವಣೆ ಅವರ ರಾಜಕೀಯ ಬದುಕನ್ನೇ ನೆಲಕ್ಕುರುಳಿಸಿಬಿಟ್ಟಿತು ವಿಠ್ಠಲಮೂರ್ತಿ ಎಂದರು.

ನಾನು ಕುತೂಹಲದಿಂದ ನೋಡುತ್ತಿದ್ದಂತೆಯೇ ಅವರ ಮಾತು ಮುಂದುವರಿಯಿತು: ಅಂದ ಹಾಗೆ ೧೯೭೭ ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾಗಾಂಧಿ ಸೋತರಲ್ಲ? ಆ ಹೊತ್ತಿಗಾಗಲೇ ಅರಸರು ಬಹು ಎತ್ತರಕ್ಕೇರಿದ್ದರು.

ಉಳುವವನೇ ಹೊಲದೊಡೆಯ ಎಂಬ ಕಾರ್ಯಕ್ರಮವೂ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಶೋಷಿತ ಸಮುದಾಯಗಳ ಮನಗೆದ್ದಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್‌ ಪಕ್ಷಕ್ಕೆ ತನ್ನದೇ ಆದ ವೋಟ್‌ ಬ್ಯಾಂಕ್‌ ಸೃಷ್ಟಿ ಮಾಡಿದ್ದರು.

ಇದೇ ಕಾರಣಕ್ಕಾಗಿ ೧೯೭೮ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ನಿರಾಯಾಸವಾಗಿ ಗೆಲುವು ಸಾಧಿಸಿತು. ಸಂಸ್ಥಾ ಕಾಂಗ್ರೆಸ್‌ನ ಬಿರುಗಾಳಿಗೆ ಜಗ್ಗದೆ ಅಧಿಕಾರ ಹಿಡಿಯಿತು.

ಮುಂದೆ ಇಂದಿರಾಗಾಂಧಿ ಅವರು ಲೋಕಸಭೆಗೆ ಮರಳಿ ಆಯ್ಕೆ ಬಯಸಿದರಲ್ಲ? ಆ ಸಂದರ್ಭದಲ್ಲಿ ಇಂದಿರಾಗಾಂಧಿ ಅವರು ಕರ್ನಾಟಕದ ಚಿಕ್ಕಮಗಳೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು.

ಹೀಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಇಂದಿರಾಗಾಂಧಿ ವಿರುದ್ಧ ಸಂಸ್ಥಾ ಕಾಂಗ್ರೆಸ್‌ ಕ್ಯಾಂಡಿಡೇಟ್‌ ಆಗಿ ಕಣಕ್ಕಿಳಿದವರು ವೀರೇಂದ್ರ ಪಾಟೀಲ್.‌

ಆದರೆ ಇಂದಿರಾಗಾಂಧಿ ಅವರಿಗಿದ್ದ ವರ್ಚಸ್ಸಿನ ಮುಂದೆ ವೀರೇಂದ್ರ ಪಾಟೀಲ್‌ ಸೋತರು. ಮುಂದೆ ಈ ಗೆಲುವನ್ನು ನಾನಾ ಬಗೆಯಲ್ಲಿ ವ್ಯಾಖ್ಯಾನಿಸುವ ಕೆಲಸವಾಗತೊಡಗಿತು.

ಈ ಮಧ್ಯೆ ಇಂದಿರಾಗಾಂಧಿ ಸಿಟ್ಟಿಗೇಳುವಂತಹ ಒಂದು ಘಟನೆ ನಡೆಯಿತು.

ಅದೆಂದರೆ: ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿನ ಗೆಲುವಿಗೆ ನಾನೇ ಕಾರಣ ಎಂದು ಅರಸರು ಹೇಳಿಕೊಳ್ಳುತ್ತಿದ್ದಾರೆ ಅಂತ ಯಾರೋ ಇಂದಿರಾಗಾಂಧಿ ಅವರಿಗೆ ವಿವರಿಸಿದ್ದರು.

ಇದು ಸಹಜವಾಗಿಯೇ ಇಂದಿರಾಗಾಂಧಿ ಅವರನ್ನು ಕೆರಳಿಸಿತು.ಅಷ್ಟೇ ಅಲ್ಲ,ಮುಖ್ಯಮಂತ್ರಿ ಪಟ್ಟದಿಂದ ಅರಸರನ್ನು ಪದಚ್ಯುತಗೊಳಿಸುವ ನಿರ್ಧಾರಕ್ಕೆ ಬರುವಂತೆ ಮಾಡಿತು.

ಅಂದ ಹಾಗೆ ಆನಂತರದ ಬೆಳವಣಿಗೆಗಳು ಮಿಂಚಿನಂತೆ ನಡೆಯತೊಡಗಿದವು ಬಿಡಿ.

ನೋಡ-ನೋಡುತ್ತಿದ್ದಂತೆಯೇ ದೇವರಾಜ ಅರಸರ ವಿರುದ್ಧ ಬಂಗಾರಪ್ಪ ಸೇರಿದಂತೆ ಹಲವು ನಾಯಕರು ತಿರುಗಿ ಬಿದ್ದರು. ಫೈನಲಿ, ಅರಸರು ಸಿಎಂ ಹುದ್ದೆಯಿಂದ ಕೆಳಗಿಳಿದು ಆ ಜಾಗಕ್ಕೆ ಗುಂಡೂರಾಯರು ಬಂದು ಕೂರುವಂತಾಯಿತು.

ಅಲ್ಲಿಗೆ ಒಂದು ಉಪಚುನಾವಣೆಯ ಮೂಲಕ ಮೇಲೆದ್ದ ದೇವರಾಜ ಅರಸರು ಮತ್ತೊಂದು ಉಪಚುನಾವಣೆಯ ಮೂಲಕ ವಿದ್ಯುಕ್ತವಾಗಿ ಕೆಳಗೆ ಉರುಳಿದಂತಾಯಿತು.

ಹಾಗಂತ ಹೇಳಿದ ನಂಜಯ್ಯನ ಮಠ್‌ ಸುಮ್ಮನೆ ನನ್ನ ಮುಖ ನೋಡಿದರು. ರಾಜಕಾರಣದ ಒಳಸುಳಿಗಳು ಹೇಗಿರುತ್ತವೆ? ಅನ್ನುವುದನ್ನು ಯೋಚಿಸುತ್ತಾ ನಾನು ಅವರ ಮುಖವನ್ನೇ ದಿಟ್ಟಿಸಿದೆ.


 

October 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ರಾಜಕಾರಣದ ಒಳಸುಳಿಗಳು… ಇಂಟೆರೆಸ್ಟಿಂಗ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: