ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಧ್ಯಮಗಳ ಜವಾಬ್ದಾರಿ ಮತ್ತು ಪತನ

ಎ.ಸ್.ಎನ್.ಹೆಬ್ಬಾರ್ ಅವರ ‘ಮಾಧ್ಯಮದ ಮಧ್ಯದಿಂದ’

ವಿಕಾಸ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಪಾರ್ವತಿ ಜಿ.ಐತಾಳ್ ಅವರ ಬರಹ ಇಲ್ಲಿದೆ.

-ಡಾ.ಪಾರ್ವತಿ ಜಿ.ಐತಾಳ್

‘ಸ್ಫೋಟಕ ಹಗರಣಗಳು, ಪ್ರಕರಣಗಳು, ವಿವಾದಗಳು’ ಎಂಬ ಉಪಶೀರ್ಷಿಕೆಯೊಂದಿಗೆ ಪ್ರಕಟವಾದ ‘ಮಾಧ್ಯಮದ ಮಧ್ಯದಿಂದ’ ಎಂಬ ಕೃತಿಯು ಕುಂದಾಪುರದ ಖ್ಯಾತ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರರು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಕುರಿತಾಗಿ ಬರೆದ  ೫೦ ಲೇಖನಗಳ ಸಂಕಲನ. ಈ ಕೃತಿಯ  ೨೭೫ ಪುಟಗಳಲ್ಲಿ ಲೇಖಕರು ಮಾಧ್ಯಮಗಳ ಮೂಲಕ ಪ್ರಸಾರವಾದ ದೇಶದ ಹಾಗೂ ಜಾಗತಿಕ ಮಟ್ಟದ ಇತಿಹಾಸದ ಮತ್ತು ವರ್ತಮಾನದ ಕೆಲವು  ವಿದ್ಯಮಾನಗಳ ವಿವರಗಳನ್ನು ವಿಮರ್ಶಾತ್ಮಕವಾಗಿ ಬರೆದು ದಾಖಲಿಸಿದ್ದಾರೆ. ಲೇಖಕರು ಸ್ವತಃ ಓರ್ವ ಪತ್ರಕರ್ತರಾದರೂ ಘಟನೆಗಳಿಗೆ ಮಾಧ್ಯಮಗಳ ಸ್ಪಂದನೆ ಮತ್ತು ನಿಲುವುಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಪ್ರಜಾಪ್ರಭುತ್ವ ಎಂಬ ಸುವ್ಯವಸ್ಥೆಯಲ್ಲಿ  ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗ ಎನ್ನುವ ಮೂರು ಆಯಾಮಗಳ ಜತೆಗೆ ನಾಲ್ಕನೆಯದಾಗಿ ಸ್ಥಾನ ಪಡೆದ ಆಯಾಮ ಮಾಧ್ಯಮ ಎನ್ನುತ್ತಾರೆ ಲೇಖಕರು.  ಜನರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವಲ್ಲಿ  ಆಡಳಿತದ ಜತೆಗೆ ಕೈಜೋಡಿಸುವ ಹಕ್ಕು  ಅದಕ್ಕೆ ಎಷ್ಟಿದೆಯೋ ಹೊಣೆಗಾರಿಕೆಯೂ ಅಷ್ಟೇ ಇದೆ. ಜಗತ್ತಿನ ಎಲ್ಲಾ ದೇಶಗಳಲ್ಲೂ ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡುವಲ್ಲಿ  ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು. ಅದರೆ ಇಂಥ ಜವಾಬ್ದಾರಿಯನ್ನು ಹೊತ್ತ ಮಾಧ್ಯಮವು ದಾರಿ ತಪ್ಪಿದ ಉದಾಹರಣೆಗಳು ಎಷ್ಟೆಷ್ಟೋ ಇವೆ. ಈ ಕೃತಿಯಲ್ಲಿ ಹೆಬ್ಬಾರರು ಮಾಧ್ಯಮಗಳ ಸಾಧಕ-ಬಾಧಕಗಳೆರಡಕ್ಕೂ ಘಟನೆಗಳ ಉದಾಹರಣೆಗಳನ್ನು ಕೊಡುತ್ತ ಹೋಗುತ್ತಾರೆ.  

‘ಫತ್ವಾ-ಓಟು ಹಾಕಿದರೆ ಜಾಗ್ರತೆ’ ಎಂಬ ಮೊದಲ ಲೇಖನದಲ್ಲಿ ಹಳ್ಳಿಯೊಂದರಲ್ಲಿ ಎಲ್ಲರನ್ನೂ ಜಬರ್ದಸ್ತಿನಿಂದ ತನ್ನ ಕೈಯೊಳಗಿಟ್ಟುಕೊಂಡ  ಒಬ್ಬ ಭೂಮಾಲೀಕ ಚುನಾವಣೆಯ ಸಮಯದಲ್ಲಿ ಎಲ್ಲರೂ ತಾನು ಹೇಳಿದವರಿಗೇ ಓಟು ಹಾಕುವಂತೆ ಮಾಡಲು ಮಾಡುವ ಕುತಂತ್ರಗಳ ಬಗ್ಗೆ ಮಾಧ್ಯಮದವರಿಗೆ ತಡವಾಗಿ ಅರಿವಿಗೆ ಬರುವ ಒಂದು ಘಟನೆಯಿದೆ. ಎರಡನೆಯ ಲೇಖನದಲ್ಲಿ ಮಂಗಳೂರಿನಲ್ಲಿ ಶ್ರೀರಾಮಸೇನೆಯವರಿಂದ ನಡೆದ ಪಬ್ ದಾಳಿಯ ಕುರಿತು ಮೊದಲೇ ಗೊತ್ತಿದ್ದೂ ಅಲ್ಲಿ ಪೆನ್ನು, ಪೇಪರು, ಕ್ಯಾಮರಾಗಳ ಜತೆಗೆ ಹೋಗಿ ಅಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ಆಕ್ರಮಣವನ್ನು ಕಣ್ಣಾರೆ ನೋಡಿಯೂ ಬಿಸಿ ಬಿಸಿ ಸುದ್ದಿಯ ವರದಿಯನ್ನು ‘ಮಂಗಳೂರಿನಲ್ಲಿ ನೈತಿಕ ಪೋಲಿಸ್’ ಎಂದೆಲ್ಲ ರೋಚಕವಾಗಿ ಬರೆಯುವುದರಲ್ಲಿ ಮಗ್ನರಾದ ಮಾಧ್ಯಮದವರ ಅಮಾನುಷ ಧೋರಣೆಯನ್ನು ಲೇಖಕರು ಖಂಡಿಸುತ್ತಾರೆ.  ಮೂರನೆಯ ಲೇಖನದಲ್ಲೂ ಕೆವಿನ್ ಕಾರ್ಟರ್ ಎಂಬ ಪ್ರಸಿದ್ದ ಛಾಯಾಗ್ರಾಹಕನು ಸೂಡಾನಿನಲ್ಲಿನ ಭಯಾನಕ ಬರಗಾಲವನ್ನು ಚಿತ್ರಿಸುವ  ಭರದಲ್ಲಿ ಅಲ್ಲಿ ಹಸಿವಿನಿಂದ ಕಂಗೆಟ್ಟ ಒಂದು ಮಗುವಿನ ಸುತ್ತಮುತ್ತ ಹಾರಾಡುತ್ತಿದ್ದ ರಣಹದ್ದುಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವುದರಲ್ಲಿ ಮಗ್ನನಾದನೇ ಹೊರತು ಆ ಮಗುವಿಗೆ ಒಂದಿಷ್ಟು ನೀರಾದರೂ ಕೊಡಬೇಕೆಂದು ಅವನಿಗೆ ಅನ್ನಿಸುವುದಿಲ್ಲ. ಆ ಚಿತ್ರದ  ಪ್ರಕಟಣೆಯ ಮೂಲಕ ದಿನ ಬೆಳಗಾಗುವುದರೊಳಗೆ ಅವನಿಗೆ ಹಣ-ಪ್ರಸಿದ್ದಿಗಳ ಹೊಳೆಯೇ ಹರಿದು ಬರುತ್ತದೆ. ಆದರೆ ಕ್ರಮೇಣ ಅವನ ಹೃದಯಹೀನತೆಯ ಬಗ್ಗೆ ಮಾಧ್ಯಮಗಳೇ  ಪ್ರಶ್ನೆ ಎಬ್ಬಿಸಿದಾಗ ಅವನು ಪಶ್ಚಾತ್ತಾಪ ಪಟ್ಟು ಕೊರಗಿ ಅತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಒಳ್ಳೆಯ ಸುದ್ದಿಗಳಿಂದ ಸಮಾಜ ಶುದ್ದಿಯಾಗುತ್ತದೆ. ಮಾಧ್ಯಮಗಳು ಸುದ್ದಿಗಾಗಿ ಹಾತೊರೆಯಬೇಕು ನಿಜ.‌ಆದರೆ ಬ್ರೇಕಿಂಗ್ ನ್ಯೂಸ್ ಆಗಲೆಂದು  ಜನರ ಮನಸ್ಸಿಗೆ ಆಘಾತ ನೀಡುವ ಕೆಟ್ಟ ಸುದ್ದಿಗಾಗಿ ಕಾಯುವುದಲ್ಲ. ತಾವು ಎಣಿಸಿದಂಥ ಸುದ್ದಿ ಬರಲಿಲ್ಲವಲ್ಲ  ಎಂದು ಕಂಗೆಡುವುದು ತರವಲ್ಲ. ದುರಂತಗಳೇ ರೋಚಕ ಸುದ್ದಿ ಎಂದು ನಂಬುವುದು ಮೂರ್ಖತನ. ಎಷ್ಟೋ ಬಾರಿ ಸುಖಾಂತಗಳು ಅದಕ್ಕಿಂತಲೂ ಹೆಚ್ಚು ರೋಚಕವಾದಾವು. ಒಬ್ಬರ ಸಾವಿನ ಸುದ್ದಿಗಾಗಿ ಕಾಯುತ್ತ ಸರಿಯಾಗಿ ವಿಚಾರಿಸದೆ ಅವರ ಸಾವಿನ ಸುದ್ದಿಯನ್ನು ಬಿತ್ತರಿಸಿದರೆ ಮುಂದೆ ನಡೆಯುವ ಅನಾಹುತಕ್ಕೆ ಮಾಧ್ಯಮಗಳೇ ಹೊಣೆಯಾಗಬೇಕಾಗುತ್ತದೆ. ಇದಕ್ಕೆ ಲೇಖಕರು ‘ ಸಾವಿನ ಸುದ್ದಿಗೆ ಮಾಧ್ಯಮದ ಕಾತರ-ಆತುರ’ (ಪುಟ ೫೧-೫೨)ಎಂಬ ಲೇಖನದಲ್ಲಿ ಕೆಲವು ಉದಾಹರಣೆಗಳನ್ನು ಕೊಡುತ್ತಾರೆ.

ಮುಂದೆ ಹಲವು ಲೇಖನಗಳಲ್ಲಿ ಲೇಖಕರು ಹೆಣ್ಣುಮಕ್ಕಳಿಗೆ ನ್ಯಾಯಾಂಗದಿಂದಲೂ ಮಾಧ್ಯಮಗಳಿಂದಲೂ ಆದ ಅನ್ಯಾಯಗಳ ಬಗ್ಗೆ ಹೇಳುತ್ತಾರೆ. ಭಾರತದ ಮಾತ್ರವಲ್ಲದೆ ಬೇರೆ ದೇಶಗಳಲ್ಲಿ ನಡೆದ ಘಟನೆಗಳನ್ನೂ ಉಲ್ಲೇಖಿಸುತ್ತಾರೆ. ಜಾನೆಟ್ ಜಾಕ್ಸನ್ ಎಂಬ ಮಾದಕ ಕಣ್ಣುಗಳ ನೃತ್ಯಗಾತಿ(ಮೈಕೆಲ್ ಜಾಕ್ಸನ್ ತಂಗಿ) ಅಮೆರಿಕಾದ ಪ್ರತಿಷ್ಠಿತ ಸೂಪರ್ ಬೌಲ್ ಪಂದ್ಯದಲ್ಲಿ ಮಧ್ಯಂತರ ಮನೋರಂಜನೆಗೆಂದು ಕುಣಿಯುತ್ತಿದ್ದಾಗ ಅವಳ ಸಹನರ್ತಕನ ಕೈ ಅವಳ ಎದೆಗೆ ತಾಗಿ ಮೇಲುಡುಗೆ ಬಿಚ್ಚಿ ಹೋಗಿ ಅವಳ ಬಲ ಎದೆ ಬಯಲಾಯಿತು. ಅನಂತರ ಜನರು ಪಂದ್ಯವನ್ನು ಮರೆತು ಹುಚ್ಚೆದ್ದು ಕುಣಿದರು. ಕೆಲವರು ಸಿಡಿದೆದ್ದರು. ಇದು ಕಾನೂನು ಬಾಹಿರವೆಂದು ಆಕ್ಷೇಪಗಳ ಸುರಿಮಳೆಯಾಯಿತು. ಇನ್ನು ಮುಂದೆ ಸೂಪರ್ ಬೌಲ್ ಪಂದ್ಯದ ಮಧ್ಯೆ ಮನೋರಂಜನೆಯೇ ಬೇಡವೆಂದರು. ವಾಸ್ತವದಲ್ಲಿ ಅದು ಜಾನೆಟ್ ಮತ್ತು ಸಹನರ್ತಕನ ನಡುವೆ ಜನರ ಗಮನ ಸೆಳೆಯುವ ಉದ್ದೇಶದಿಂದ ಮಾಡಿಕೊಂಡ ಒಪ್ಪಂದವಾಗಿತ್ತು.‌ ಆದರೆ ಅದರ ಪರಿಣಾಮವಾಗಿ ಟಿ.ವಿ.ಕಂಪೆನಿಗಳಿಗೆ ನಿಷೇಧ  ಹೇರಲಾಯಿತು. ಮಾಧ್ಯಮದ ಪಾರಮ್ಯಕ್ಕಿಂತ ಜನರ ಪಾರಮ್ಯವೇ ಮಿಗಿಲಾದದ್ದು ಎಂಬುದನ್ನು ಸಾಬೀತು ಪಡಿಸಿದ ಘಟನೆಯಿದು.

ಜೇಡ್ ಗೂಡಿಯ ಪ್ರಕರಣ ಭಿನ್ನವಾದುದು. ರಿಯಾಲಿಟಿ ಷೋಗಳ ಮೂಲಕ ಖ್ಯಾತಿಯ ತುತ್ತ ತುದಿಗೇರಿದ್ದ ಜೇಡ್ ೨೭ನೆಯ ವಯಸ್ಸಿಗೇ ಕ್ಯಾನ್ಸರ್ ಪೀಡಿತಳಾಗಿದ್ದರಿಂದ ಕ್ಯಾನ್ಸರ್ ವಿರುದ್ಧ ಸಾವಿರಾರು ಮಂದಿಗೆ ಸಹಾಯ ಮಾಡುವುದರ ಮೂಲಕ ಹೋರಾಟ ನಡೆಸಿದವಳು. ಕಷ್ಟ ಪಟ್ಟು ಜೀವನದಲ್ಲಿ ಮೇಲೆ ಬಂದವಳು. ಅವಳು ‘ಬಿಗ್ ಬ್ರದರ್ ಷೋ’ಗೆ ಆಯ್ಕೆಯಾದಾಗ ಪತ್ರಿಕೆಗಳು ಅವಳನ್ನು ಹಂಗಿಸಿ ಹೀಯಾಳಿಸಿದವು. ಆದರೂ ಅವಳು ಕಿರುತೆರೆಯಲ್ಲಿ ತಾರೆಯಾಗಿ ಮೆರೆದಳು. ಆದರೆ ಒಮ್ಮೆ ಷೋನಲ್ಲಿ ಅವಳು ಶಿಲ್ಪಾ ಶೆಟ್ಟಿಯನ್ನು ಲೇವಡಿ ಮಾಡಿದ್ದಕ್ಕೆ ಜನರು ಕೆರಳಿದರು. ದಿನಬೆಳಗಾಗುವುದರೊಳಗೆ  ಪತ್ರಿಕೆಗಳಲ್ಲಿ ಸುದ್ದಿಯಾಗಿ ಅವಳು ಖಳನಾಯಕಿಯಾದಳು. ಅವಳನ್ನು ಜನಾಂಗೀಯ ದ್ವೇಷಿಯಾಗಿ ಬಿಂಬಿಸಲಾಯಿತು. ಜೇಡ್ ಇದರಿಂದ ಖಿನ್ನಳಾಗಿ ಭಾರತಕ್ಕೆ ಬಂದು ಬಡ ಮಕ್ಕಳಿಗಾಗಿ ಆಶ್ರಮ ತೆರೆದು ಆರ್ಥಿಕ ನೆರವು ನೀಡಿ  ಮತ್ತೆ ಪ್ರಸಿದ್ಧಳಾದಳು. ಮಾಧ್ಯಮಗಳು ಪುನಃ ಅವಳನ್ನು ಹಾಡಿ ಹೊಗಳಿದವು.

ಮಹಿಳೆಗೆ ಅನ್ಯಾಯವಾದ ಇನ್ನೊಂದು ಘಟನೆ ಪ್ರತಿಷ್ಠಿತ ಪೋಲಿಸ್ ಡಿಜಿಪಿ ಕೆ.ಪಿ.ಎಸ್.ಗಿಲ್ ತನ್ನ ಕೈಕೆಳಗಿನ ಅಧಿಕಾರಿಣಿ ರೂಪೇನ್ ಬಜಾಜ್ ಜತೆಗೆ ಪಾರ್ಟಿಯೊಂದರಲ್ಲಿ ಅಸಭ್ಯನಾಗಿ ವರ್ತಿಸಿದ್ದು. ಆತ ಅವಳ ಪೃಷ್ಠವನ್ನು ಮುಟ್ಟಿದಾಗ ಕೆರಳಿದ ರೂಪೇನ್  ರಾಜ್ಯಪಾಲರಿಗೆ ದೂರಿತ್ತಳು. ಆದರೆ ಏನೂ ಪ್ರಯೋಜನವಾಗಲಿಲ್ಲ. ವರಿಷ್ಠ ಅಧಿಕಾರಿಗಳೆಲ್ಲರೂ ಗಿಲ್ ಪರವಾಗಿಯೇ ನಿಂತರು. ಮಾಧ್ಯಮಗಳೂ ಅವಳಿಗಾದ ಅನ್ಯಾಯವನ್ನು ಕಣ್ಣಾರೆ ಕಂಡರೂ  ವರದಿ ಮಾಡಲಿಲ್ಲ. ಎಲ್ಲ ಅಧಿಕಾರಿಗಳೂ ಸೇರಿ ಅವಳಿಗೆ ಹುಚ್ಚಿ ಎಂಬ ಪಟ್ಟ ಕಟ್ಟಿದರು.  ಹೈಕೋರ್ಟು ಕೂಡಾ ಗಿಲ್ ಅಂಥ ತಪ್ಪು ಮಾಡಲು ಸಾಧ್ಯವೇ ಇಲ್ಲವೆಂದು ತೀರ್ಪು ಕೊಟ್ಟಿತು. ಕೇಂದ್ರ ಸರಕಾರವು ಅವನಿಗೆ ಪದ್ಮಶ್ರೀ ಕೊಟ್ಟು ಗೌರವಿಸಿತು.

ರೂಪೇನ್ ಛಲ ಬಿಡದೆ ಸುಪ್ರೀಮ್ ಕೋರ್ಟಿಗೆ ದೂರಿತ್ತಳು. ಸುಪ್ರೀಮ್ ಕೋರ್ಟು ಹಳೆಯ ಪ್ರಕರಣಗಳನ್ನು ಪುನಃ ತನಿಖೆಗೆ ತರಿಸಿ ವಿಚಾರಣೆ ಮಾಡಿ  ಗಿಲ್ ಅಪರಾಧಿಯೆಂದು ಘೋಷಿಸಿ  ಜೈಲು ಶಿಕ್ಷೆ ವಿಧಿಸಿತು.  ಆದರೆ ಗಿಲ್ ಏನೇನೋ ಪ್ರಯತ್ನ ಮಾಡಿ ಎರಡು ಲಕ್ಷ ರೂಪಾಯಿ ದಂಡ ತೆತ್ತು ಶಿಕ್ಷೆಯಿಂದ ತಪ್ಪಿಸಿಕೊಂಡ. ಹೀಗೆ ಅನ್ಯಾಯಕ್ಕೆ ಗೆಲುವಾಗಲು ಮಾಧ್ಯಮವೇ ಕಾರಣವಾಯಿತು.

ಉಮಾ ಖುರಾನಾ ಪ್ರಕರಣದಲ್ಲಿ ಅವಳು ನಿರಪರಾಧಿಯಾಗಿದ್ದರೂ ತನ್ನದಲ್ಲದ ತಪ್ಪಿಗೆ ಅವಳು ಸಮಾಜದ ಮುಂದೆ ಅನುಭವಿಸಿದ ಅಪಮಾನಕ್ಕೆ  ನ್ಯಾಯಾಂಗ ಮಾತ್ರವಲ್ಲದೆ ಮಾಧ್ಯಮವೂ ಕಾರಣವಾಯಿತು.. ಉಡುಪಿಯ ಶಾಸಕರ ಪತ್ನಿ ಪದ್ಮಪ್ರಿಯಾಳ ಪ್ರಕರಣವು ಅವಳ ಅತ್ಮಹತ್ಯೆಯೊಂದಿಗೆ ಪರ್ಯವಸಾನವಾಗಲು ಮಾಧ್ಯಮಗಳ ಬೇಜವಾಬ್ದಾರಿ ವರ್ತನೆಯೇ ಕಾರಣವಾಯಿತು.

ದೇಶದ ರಾಜಧಾನಿಯಲ್ಲಿ ಹಾಡುಹಗಲಲ್ಲೇ ಒಬ್ಬ ವಿ.ಐ.ಪಿ.ಯಿಂದ ಹಾಡುಗಾರ್ತಿ ಪ್ರಿಯದರ್ಶಿನಿ ಮಟ್ಟೂ ಎಂಬವಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವೂ ಇದೇ ರೀತಿ ಅನ್ಯಾಯಗಳ ಸರಮಾಲೆಯಾದರೂ ಅವಳ ತಂದೆ ಚಮನ್ ಲಾಲ್ ಛಲ ಬಿಡದ ತ್ರಿವಿಕ್ರಮನಂತೆ ಪ್ರಕರಣದ ಬೆನ್ನಟ್ಟಿ ಹೋದುದರಿಂದ ಕೊನೆಯಲ್ಲಿ ಆರೋಪಿಗೆ ಗಲ್ಲುಶಿಕ್ಷೆಯಾಗುತ್ತದೆ. ಗೋವಾದ ಗೀತಾಂಜಲಿ ನಾಗಪಾಲ್ ಪ್ರಕರಣದಲ್ಲಿ ಖ್ಯಾತಿಯ ತುತ್ತ ತುದಿಗೇರಿ ನಂತರ ಪಾತಾಳಕ್ಕಿಳಿದ ಅವಳ ಬದುಕು ಸರಿ ಹೋಗುವಲ್ಲಿ ಮಾಧ್ಯಮದ ಪಾತ್ರ ಬಹಳ ದೊಡ್ಡದು. ‘ರುಚಿಕಾ ಪ್ರಕರಣ, ನಿರುಪಮಾ ಪಾಠಕ್ ಪ್ರಕರಣ, ಆರುಷಿ ಕೊಲೆ ಪ್ರಕರಣ, ಮಧುಮಿತಾ ಶುಕ್ಲ ಪ್ರಕರಣಗಳು ನಡುಕ ಹುಟ್ಟಿಸುವ ಇನ್ನಷ್ಟು ಕಥೆಗಳು..

ಮಾಧ್ಯಮದ ವಿರುದ್ಧ ಸದನವು ಹಕ್ಕುಚ್ಯುತಿಯ ಆರೋಪ ಮಾಡುವ ಬಗ್ಗೆ ಇಲ್ಲಿ ಮೂರು ಮಹತ್ವದ ಲೇಖನಗಳಿವೆ. ಮಾಧ್ಯಮದ ಸ್ವಾತಂತ್ರ್ಯವನ್ನು ತನ್ನ ಹದ್ದುಬಸ್ತಿನೊಳಗೆ ಇಟ್ಟುಕೊಂಡು ಅಧಿಕಾರ ನಡೆಸಿದ ತಮಿಳುನಾಡಿನ ಜಯಲಲಿತಾ ಸರಕಾರವು ಮಾಡಿದ ಅನ್ಯಾಯಗಳು ಅಪರಿಮಿತ ಮತ್ತು ಅಸಹನೀಯ. ಅದೇ ರೀತಿ ಇನ್ನೂ ಅನೇಕ ಸರಕಾರಗಳು ಸದನದಲ್ಲಿ ಸಂಭವಿಸಿದ ಪ್ರಮಾದಗಳನ್ನು ಮುಚ್ಚಲು ಹಕ್ಕುಬಾಧ್ಯತೆಯನ್ನು ಪ್ರತಿಪಾದಿಸಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದ ಉದಾಹರಣೆಗಳೂ ಸಾಕಷ್ಟಿವೆ.

ವಾಷಿಂಗ್ಟನ್ ಪೋಸ್ಟ್ ಎಂಬ ಖ್ಯಾತ ಪತ್ರಿಕೆಯ ವರದಿಗಾರ್ತಿ ಜಾನೆಟ್ ಕುಕ್ ಅನ್ನುವ ಕೃಷ್ಣ ಸುಂದರಿ ತನ್ನ ಸ್ವಂತ ಪ್ರತಿಭೆಯಿಂದ ಖ್ಯಾತ ನಾಮಳಾಗಿ ಮೇಲೇರುತ್ತ ಕೊನೆಗೆ ‘ಜಿಮ್ಮಿಯ ಜಗತ್ತು’ ಎಂಬ ಲೇಖನ ಬರೆದು ಅದಕ್ಕೆ ಪುಲಿಟ್ಜರ್ ಪ್ರಶಸ್ತಿ ಪಡೆದಳು. ಆದರೆ ಕೊನೆಗೊಂದು ದಿನ ಅವಳ ಲೇಖನವು ಸತ್ಯದೂರವಾದುದು ಎಂಬುದು ಗೊತ್ತಾದಾಗ ಸಿಕ್ಕಿಬಿದ್ದು ಅವಳು ತನ್ನ ಕೆಲಸಕ್ಕೆ ರಾಜೀನಾಮೆ ಇತ್ತಳು. ಮಾಧ್ಯಮದಲ್ಲಿ ದುಡಿಯುವವರಲ್ಲಿ ಎಷ್ಟು ಪ್ರಾಮಾಣಿಕತೆಯಿರಬೇಕು ಅನ್ನುವುದನ್ನು ಇದು ತೋರಿಸುತ್ತದೆ.

  ‘ಬೆಲೆವೆಣ್ಣಿಗಾಗಿ ಬೆಲೆ ತೆತ್ತ ಇಂಗ್ಲೆಂಡಿನ ಯುದ್ಧ ಮಂತ್ರಿ’ ಎಂಬ ಲೇಖನದಲ್ಲಿ ಹೆಣ್ಣಿನ ಮಾದಕ ಸೌಂದರ್ಯಕ್ಕೆ ಪುರುಷರು ಮರುಳಾಗುವಂತೆ ಖೆಡ್ಡಾ ತೋಡುವ ಪುರುಷರು ಮತ್ತು ಹಣಕ್ಕಾಗಿ ಪುರುಷರು ತಮ್ಮ ಬಲೆಗೆ ಬೀಳುವಂತೆ ಮಾಡುವ ಹೆಣ್ಣುಗಳ ಚಿತ್ರಣವಿದೆ. ಇಲ್ಲಿ ಕಾಣುವ ಎಲ್ಲರೂ ವಿಲಾಸಿ ಜೀವನಕ್ಕೆ ಒಗ್ಗಿಕೊಂಡ ಶ್ರೀಮಂತರು ಮತ್ತು ಮೇಲುವರ್ಗದ ಅಧಿಕಾರಿಗಳು. ಅಂಥವರು ಹೆಣ್ಣಿಗೋಸ್ಕರ ಹೇಗೆ ಪತನದ ಹಾದಿ ಹಿಡಿಯುತ್ತಾರೆ ಅನ್ನುವುದನ್ನು ಈ ಲೇಖನ ಎತ್ತಿ ತೋರಿಸುತ್ತದೆ.

ಅತ್ಯಂತ ಆಸಕ್ತಿ ಹುಟ್ಟಿಸುವ ಮತ್ತು ಕುತೂಹಲ ಕೆರಳಿಸುವ ಘಟನೆಗಳನ್ನು ಈ ಕೃತಿ ಪ್ರಸ್ತುತ ಪಡಿಸುತ್ತದೆ. ಇಲ್ಲಿ ನಮೂದಿಸಿದ ಘಟನೆಗಳ ಬಗ್ಗೆ ಗೊತ್ತಿಲ್ಲ ದವರಿಗೆ ಇದು ಒಂದು ಹೊಸ ಲೋಕವನ್ನು ತೆರೆದಿಡುತ್ತದೆ. ಇತಿಹಾಸದಲ್ಲಿ ಆಗಿ ಹೋದ ಘಟನೆಗಳ ವಿವರವಾದ ದಾಖಲೆ ಇಲ್ಲಿರುವುದರಿಂದ ಇದು  ಮಾಧ್ಯಮದ ಮಾತ್ರವಲ್ಲದೆ ನ್ಯಾಯಶಾಸ್ತ್ರದ ವಿದ್ಯಾರ್ಥಿಗಳಿಗೂ ಒಂದು ಅತ್ಯುತ್ತಮ ಪರಾಮರ್ಶನ ಗ್ರಂಥವಾಗಬಲ್ಲದು. ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದ ಕಥೆಗಳನ್ನು ಜನರು ಬೇಗನೆ ಮರೆಯುವುದರಿಂದ  ಭವಿಷ್ಯದಲ್ಲಿ  ಸಂದರ್ಭ ಬಂದಾಗ ಉಲ್ಲೇಖಿಸಲು ಇಂಥ ದಾಖಲೆಗಳು ಅತ್ಯಗತ್ಯ. ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳನ್ನು ಬಳಸದೆ ಹೆಬ್ಬಾರರು ಸರಳವಾದ ಭಾಷೆಯಲ್ಲಿ ಬರೆದಿರುವುದರಿಂದ ಜನಸಾಮಾನ್ಯರೂ ಇದನ್ನು ಸರಾಗವಾಗಿ ಓದಬಹುದಾಗಿದೆ.

ತಾವು ಸ್ವತಃ ಮಾಧ್ಯಮ ಪ್ರತಿನಿಧಿಯೇ ಆದರೂ ಹೆಬ್ಬಾರರು ತಮ್ಮ ಸೂಕ್ಷ್ಮ ಒಳಗಣ್ಣುಗಳ ಮೂಲಕ ಸತ್ಯ-ನ್ಯಾಯಗಳನ್ನು ಎತ್ತಿ ಹಿಡಿಯುತ್ತಾರೆ. ಮಾಧ್ಯಮಗಳು ಒಳ್ಳೆಯ ಕೆಲಸ ಮಾಡಿದರೆ ಪ್ರಶಂಸೆಯ ಮಾತುಗಳನ್ನಾಡುತ್ತ ಅವು ದಾರಿ ತಪ್ಪಿದರೆ ಅವರ ಬೇಜವಾಬ್ದಾರಿತನವನ್ನು ಎತ್ತಿ ಹೇಳುತ್ತಾರೆ. ಎಂದಿನಂತೆ ಹೆಬ್ಬಾರರ ಬರವಣಿಗೆಯ ರೋಚಕ ಶೈಲಿ ಕೃತಿಯ ಆಕರ್ಷಣೆಯನ್ನು ಹೆಚ್ಚಿಸಿದೆ. ಪ್ರತಿ ಅಧ್ಯಾಯಕ್ಕೂ ಅವರು ನೀಡುವ ಶೀರ್ಷಿಕೆಯೇ ಓದುಗನನ್ನು ಒಳಗೆ ಹೋಗಲು ಪ್ರೇರಣೆ ನೀಡುತ್ತದೆ.  

‍ಲೇಖಕರು Admin

22 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading