ಮಾತಿಲ್ಲಿ ­ಮೈಲಿಗೆ!

ಕುಪ್ಪಳಿ ಎಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಕುವೆಂಪು ಅವರ ಕವಿಶೈಲ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಕವಿಶೈಲವು ತಮಗೆ ಕಂಡ ಬಗೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಮಾರನೆ ­ಬೆಳಗ್ಗೆ ­ಮಳೆಯ ­ಆರ್ಭಟ ನಿಂತಿತ್ತಾದರೂ ­ತುಂತುರು ­ಮಳೆಯ ­ಸಿಂಚನ ­ಹಾಗೇ ನಡೆ­ದಿತ್ತು. ­ಸ್ವಲ್ಪ ತಡವಾ­ಗಿಯೇ ­ಎದ್ದ ­ನಾನು ­ಕೊಡೆ ­ಹಿಡಿದು ಕವಿಶೈ­ಲಕ್ಕೆ ­ಹೊರಟೆ. ­ಇತ್ತ ಕಡೆ­ಯಿಂದ ­ತೇಜಸ್ವಿ ­ಸಮಾಧಿ ­ಎದುರಿನ ರಸ್ತೆಯಲ್ಲಿ ­ಏರುತ್ತ ಹೋಗಿ ­ಅತ್ತ ಕಡೆ­ಯಿಂದ ­ಕವಿಮನೆ ಸೇರುವ ಮೆಟ್ಟಿಲುಗಳಲ್ಲಿ ­ಇಳಿಯುವ ­ಹಾಗೆ ­ಹೊರಟೆ. ­ಕವಿ ­ಶೈಲದ ­ಟಾರು ­ರಸ್ತೆ ­ಮಹಾ ಮಜ್ಜ­ನಗೈದು ಕಳೆ­ಕಳೆ­ಯಾಗಿ ಬಿದ್ದುಕೊಂ­ಡಿತ್ತು.

­ಆ ­ಸ್ವಚ್ಛ ರಸ್ತೆಯಲ್ಲಿ ನಡೆಯುವುದೇ ­ಒಂದು ­ಆನಂದ. ನಾನಾ ­ವಿಧದ ಹಕ್ಕಿಪಕ್ಷಿಗಳು ಉಲಿಯುತ್ತಿದ್ದವು. ­ಅವುಗಳ ­ಇಂಚರ ಆಲಿಸುತ್ತಾ ಕವಿಶೈ­ಲದ ­ಬೃಹತ್ ಬಂಡೆಗಂ­ಬಗಳು ­ಬಂದಿದ್ದು ­ಗೊತ್ತೇ ಆಗ­ಲಿಲ್ಲ. ­ಈಗಾಗಲೇ ­ಎಷ್ಟೋ ­ಬಾರಿ ­ಆ ­ಒರಟು ಕಂಬಗಳ ಶಿಲ್ಪಗಳನ್ನು ­ಕಂಡಿದ್ದೆ. ­ಆದರೆ ­ಇಂದು ­ಮೋಡ ­ಮುಚ್ಚಿದ ­ತಿಳಿ ಮಬ್ಬಿ­ನಲ್ಲಿ ­ಅವು ­ಜೀವ ­ತುಂಬಿಕೊಂಡು ವಿಸ್ಮಯ ಹುಟ್ಟಿಸುವ ಹಾಗೆ ನಿಂತಿದ್ದವು.

­ಕುವೆಂಪು ಅವರಿ­ಗಿಂತಲೂ ಆದಿ­ಕವಿ ಪಂಪನಿ­ಗಿಂತಲೂ ­ಮೊದಲೇ ­ಹುಟ್ಟಿದ ­ಸೃಷ್ಟಿ ಸೂರಿಗಳಂತೆ ಮೌನ­ವಾಗಿ ನಿಸರ್ಗದೊಡನೆ ­ಬೆರೆತು ಹೋಗಿದ್ದವು. ­ಕುವೆಂಪು ­ಅವರಂಥ ­ಮಹಾನ್ ಸೃಷ್ಟಿಶೀ­ಲನ ­ಸಮಾಧಿ ­ಸ್ಥಳವನ್ನು ­ಇದಕ್ಕಿಂತ ಅರ್ಥಪೂರ್ಣಗೊ­ಳಿಸಲು ಸಾಧ್ಯ­ವಿರ­ಲಿಲ್ಲ. ­ಅಂಥ ­ಒಂದು ಸೃಜ­ನಶೀಲ ಕಲ್ಪ­ನೆಕೊಟ್ಟ ಕಲಾ­ವಿದ ­ಕೆ.ಟಿ. ಶಿವಪ್ರಸಾದ್ ­ನಿಜಕ್ಕೂ ಅಭಿನಂದ­ನಾರ್ಹರು ­ಎನಿಸಿತು.

ಕವಿಶೈ­ಲದ ಹಾಸುಬಂಡೆಯ ­ಮೇಲೆ ­ನಿಂತು ­ಸುತ್ತಲೂ ಕಣ್ಣಾ­ಡಿ­ಸಿದಾಗ ಕಣ್ತುಂಬಿಕೊಳ್ಳುವ ­ಬೆಳಗಿನ ­ದೃಶ್ಯವನ್ನು ­ಕುವೆಂಪು ವಿಧ­ವಿಧ­ವಾಗಿ ವರ್ಣಿ­ಸಿದ್ದಾರೆ. ­ಆದರೂ ­ಅದು ದಿನ­ದಿ­ನವೂ ನವ­ನವೋನ್ಮೇಷ­ಶಾ­ಲಿನಿ. ­ಒಂದು ­ದಿನ ­ಇದ್ದಂತೆ ­ಮತ್ತೊಂದು ­ದಿನ ಇರುವು­ದಿಲ್ಲ. ­ಕವಿಯ ಮಾತಿ­ನಲ್ಲೇ ಹೇಳುವುದಾದರೆ…

ಓ ಕವಿಶೈಲ, ನಿನ್ನ

ಸಂಪದವನೆನಿತು ಬಣ್ಣಿಸಲಳವು ಕವನದಲಿ?

ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ

ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ

ದೃಶ್ಯ ವೈವಿಧ್ಯಮಂ ರಚಿಸಿ ನೀಂ ಭುವನದಲಿ

ಸ್ವರ್ಗವಾಗಿಹೆ ನನಗೆ!…

­ತೆರೆ ­ಮೇಲೆ ­ತೆರೆದಿದ್ದು ಹರಿಯುತಿದೆ ಗಿರಿಪಂಕ್ತಿ

­ಕಣ್ದಿಟ್ಟಿ ಹೋಹನ್ನೆಗಂ. ­ಚಿತ್ರ ಬರೆದಂತೆ

­ಕಡುಹಸುರು ­ತಿಳಿಹಸುರು ಹಸುರುಬ­ಣ್ಣದ ­ಸಂತೆ

ಶೋಭಿ­ಸಿಹುದಾತ್ಮ­ವರಳುವ ­ತೆರದಿ. ­ದಿಗ್ದಂತಿ

ಕೊಂಕಿ­ಸಿದ ದೀರ್ಘಬಾಹುವ ­ಭಂಗಿಯನು ­ಹೋಲಿ

ಮೆರೆ­ದಿದೆ ದಿಗಂತರೇಖೆ.

… ­ಮಳೆಬಂದು ­ನಿಂತಿಹುದು; ­ಮಿಂದಿಹುದು ಹಸುರೆಲ್ಲ;

­ಬಿಸಿಲ ­ಬೇಗೆಯು ­ಮಾದು, ­ಬಂದಿಹುದು ಹೊಸತಂಪು;

­ಹೊಸತು ­ಮಳೆ ತೊಯಿಸಿರುವ ­ನೆಲದ ­ಕಮ್ಮನೆ ­ಕಂಪು

ತೀಡುತಿರೆ, ಮಣ್ಣು ತಿನ್ನುವುದೇನು ಮರುಳಲ್ಲ!

­ವಾಯು ­ಮಂಡಲ ­ಶುಭ್ರ; ಗಗ­ನದಲಿ ಮುಗಿ­ಲಿಲ್ಲ;

ಮೈಲುತುತ್ತಿನ ಬಣ್ಣದಗಲ ­ಗಾಜನು ­ಹೋಲಿ

ಕಮನೀಯವಾ­ಗಿರಲು ­ಧೌತಾಂಬರದ ­ನೀಲಿ,

­ಕವಿಗೆ ­ಮನೆ ಬೇಡೆಂಬುದೊಂದು ಸೋಜಿಗ­ವಲ್ಲ!

ಕರಿದಾಗಿ ಹಸ­ರಿ­ಸಿಹ ಕವಿಶೈ­ಲದರೆಯಲ್ಲಿ

ಬಿಸಿ­ಲಿ­ನಲಿ ಮಿರುಗುತಿವೆ ಕನ್ನ­ಡಿಗಳೆಂ­ಬವೋಲ್

­ನಿಂತ ­ನೀರುಗಳು; ಆವಿಗಳೆದ್ದು, ­ಅಲ್ಲಲ್ಲಿ,

ನಭಕೇರುತಿವೆ. ­ಹಕ್ಕಿ ಹಾಡತೊಡ­ಗಿವೆ, ­ಕೇಳು;

­ಹೇ ­ಬಂಧು, ಸೊಬ­ಗಿ­ನಲಿ ನಿನ್ನಾತ್ಮವನು ­ತೇಲು;

ಪ್ರಜ್ವ­ಲಿ­ಸಲೈ ­ಕಲ್ಪನೆ, ­ಕೆರಳ್ದ ಬೆಂಕಿಯೋಲ್!…

ಇಂಥ ಒಂದು ದಿವ್ಯ ನಿಸರ್ಗವನ್ನು ಮಾತಿಲ್ಲದೆ ಮೌನವನಾಂತು ತಪಸ್ಸಿನೋಪಾದಿಯಲ್ಲಿ ಅನುಭವಿಸಬೇಕಲ್ಲವೇ? ಆ ಎಚ್ಚರವನ್ನೂ ಕವಿ ನೀಡುತ್ತಾರೆ.

ಮಿತ್ರ­ರಿರೆ, ­ಮಾತಿಲ್ಲಿ ­ಮೈಲಿಗೆ! ಸುಮ್ಮನಿರಿ:

­ಮೌನವೆ ಮಹತ್ತಿಲ್ಲಿ, ­ಈ ಬೈಗುಹೊತ್ತಿ­ನಲಿ

ಕವಿಶೈ­ಲದಲಿ. ಮುತ್ತಿ­ಬಹ ಸಂಜೆಗತ್ತ­ಲಲಿ

ಧ್ಯಾನಸ್ಥಯೋ­ಗಿ­ಯಾ­ಗಿದೆ ­ಮಹಾ ಸಹ್ಯ­ಗಿರಿ!

ಮುಗಿಲ್ದೆರೆಗಳಾಗ­ಸದಿ ಮುಗುಳ್ನಗುವ ತದಿಗೆಪೆರೆ,

­ಕೊಂಕು ­ಬಿಂಕವ ­ಬೀರಿ, ­ಬಾನ್ದೇವಿ ಚಂದದಲಿ

­ನೋಂತ ಸೊಡ­ರಿನ ಹಣತೆಹೊಂದೋ­ಣಿಯಂದದಲಿ

ಮೆರೆಯುತ್ತೆ ­ಮತ್ತೆ ಮರೆ­ಯಾಗುತ್ತೆ ­ತೇಲುತಿರೆ,

­ಬೆಳಕು ­ನೆಳಲೂ ­ಸೇರಿ ಶಿವ­ಶಿ­ವಾ­ಣಿಯರಂತೆ

ಸರ­ಸ­ವಾಡುತಿವೆ ­ಅದೊ ­ತರುತಲ ಧರಾತ­ಲದಿ!

ಪಟ್ಟ­ಣದಿ, ಬೀದಿಯಲಿ, ಮನೆಯಲ್ಲಿ, ­ಸರ್ವತ್ರ

­ಇದ್ದೆಯಿದೆ ­ನಿಮ್ಮ ­ಹರಟೆಯ ­ಗುಲ್ಲು! ­ಆ ­ಸಂತೆ

­ಇಲ್ಲೇಕೆ? – ­ಪ್ರಕೃತಿ ­ದೇವಿಯ ­ಸೊಬಗು ­ದೇಗುಲದಿ

ಆನಂದವೇ ­ಪೂಜೆ; ­ಮೌನವೆ ಮಹಾಸ್ತೋತ್ರ!

ಕ್ಷಣ ­ಹೊತ್ತು ­ಅಲ್ಲಿ ­ಕುಂತು ಸುತ್ತಮುತ್ತ ­ದಿಟ್ಟಿಸುವ ­ಹೊತ್ತಿಗೆ ­ಅದೆಲ್ಲಿತ್ತೋ ­ಮೋಡ, ­ಅದೆಲ್ಲಿತ್ತೋ ­ಆ ವರ್ಷಧಾರೆ, ­ಸುಯ್ಯನೆ ­ಸುರಿದು ­ಬಿಟ್ಟಿತ್ತು; ­ಹತ್ತು ನಿಮಿಷಗಳ ­ಕಾಲವಷ್ಟೆ! ಕೊಡೆ ­ಇದ್ದುದರಿಂದ ­ನಾನು ­ಬಚಾವಾದೆ. ­ಕವಿಯ ­ಸ್ಮಾರಕ ಬಂಡೆಗಳ ­ಅಡಿಯಲ್ಲಿ ­ಹಾಗೇ ­ನಿಂತೆ. ಮಳೆ­ನಿಂತ ಮರುಕ್ಷಣ ಮೋಡ­ವೆಲ್ಲ ­ಸರಿದು ­ಎಳೆ ­ಬಿಸಿಲ ಕಿರ­ಣಗಳು ­ತಣ್ಣಗೆ ಚಾಚಿಕೊಂಡವು. ­ಇದೊಂದು ಆಕಸ್ಮಿಕ ಅಪರೂಪದ ­ಸಂದರ್ಭ ­ಎನಿಸಿತು.

­ನಮ್ಮ ಬಯಲು ಸೀಮೆಯಲ್ಲಿ ­ಇಂಥ ­ದಿಢೀರ್ ­ಚೋದ್ಯಗಳು ­ಇಲ್ಲವೇ ­ಇಲ್ಲ. ಕ್ಷಣಾರ್ಧದಲ್ಲಿ ಕವಿಶೈ­ಲದ ಸುತ್ತಮುತ್ತಲ ­ಸಮೃದ್ಧ ­ಕಾಡು ಲಕ­ಲ­ಕನೆ ಹೊಳೆಯತೊಡಗಿತು. ಮರ­ಗಿಡಗಳೆಲ್ಲ ತೊಳೆದಿಟ್ಟಂತೆ ಸ್ವಚ್ಛ­ವಾಗಿ ಶುಭ್ರ­ವಾಗಿ ಕಂಗೊ­ಳಿ­ಸಿದವು. ­ಕವಿ ­ಮನೆಯ ­ಹಿಂದಿನ ದಟ್ಟಾರಣ್ಯದ ­ಬೆಟ್ಟದ ­ತುದಿಯಲ್ಲಿ ಅರಳೆರಾ­ಶಿಗ­ಳಂಥ ಬೆಳ್ಮೋಡಗಳು ಮುತ್ತಿಡುತ್ತಿದ್ದವು. ­ಅಷ್ಟರಲ್ಲಿ ­ಎಲ್ಲಿಂದಲೋ ­ತೂರಿ ­ಬಂದ ಘಮಘಮಿಸುವ ­ವಾಸನೆ ಗಾಳಿಯಲ್ಲಿ ಗಂಧ­ವಾಗಿ ­ತೇಲಿದ ­ಅನುಭವ, ­ಅರೆ ­ಇದೇನಿದು? ­ಹಾಗೇ ­ಜಾಡು ­ಹಿಡಿದು ಮುಂಬ­ರಿದೆ. ­

ದಾರಿ ­ಪಕ್ಕದ ಕಾಡಂ­ಚಿ­ನಲ್ಲಿ ­ಕಾಡು ­ಸುರಗಿ ­ಮರವೊಂದು ಇಳೆಯ ಕಡೆಗೆ ­ಚಾಚಿದ್ದ ತನ್ನ ­ಸಣ್ಣ ­ಸಣ್ಣ ಎಸಳುಗಳಲ್ಲಿ ­ಸುಂದರ ­ಬಿಳಿ ­ಹೂಗಳನ್ನು ತುಂಬಿಕೊಂ­ಡಿತ್ತು. ­ಥೇಟ್ ಪಾರಿಜಾತದ ಹೂವಿ­ನಂಥ ­ಆಕಾರ, ­ಅದೇ ­ಬಗೆಯ ­ಮಧುರ ಪರಿಮಳ. ­ಮೊದಲ ­ಮಳೆಗೆ ­ತೊಯ್ದ ಕವಿಶೈ­ಲದ ­ಈ ಪ್ರಥ­ಮಾನುಭವ ­ನನಗೊಂದು ­ಅಸದೃಶ್ಯ ಸಂಗ­ತಿ­ಯಾಗಿ ­ಉಳಿಯಿತು.

September 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: