ಒಡಲ ನೂಲಿನಿಂದ ನೇಯ್ದ‘ಹೆಣದ ಬಟ್ಟೆ’

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

ಹೂವು ಅರಳಿದ್ದು ಕಾಣುತ್ತದೆ. ಅರಳಿದ ಹೂವಿಗೆ ಕಾರಣವಾದವು ನೀರು ಗೊಬ್ಬರದಂತಹ ಹಲವು ಅನಾಮಧೇಯ ಸಂಗತಿಗಳು, ‘ಲೇಬಲ್’ ಸಿಗದ ವಿಷಯಗಳು ಅಥವಾ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಚೂರೇ ಚೂರು ಹೊಳೆಯುವ ಆಕಾಶಗಳು ಹಲವು.

‘ಒಡಲ ನೂಲಿನಿಂದ’ ಜೇಡ ಹೊರಗೆ ನೇಯುತ್ತವಂತೆ. ಆದರೆ ಒಡಲಲ್ಲಿ ನೂಲಾದ ಹಲವು ಸಂಗತಿಗಳ ಗುರುತು ಸಿಗೋದು ಕಷ್ಟ. “ಯಾಕೆ ಅಂತ ಕೇಳಬೇಡ, ನಾನು ಬರಲಾಗುವುದಿಲ್ಲ” ಅಂತ ಆತ ಹೇಳಿದಾಗ ಒಮ್ಮೆ ಕುಸಿದು ಬಿದ್ದ ಹಾಗಾಗಿದ್ದು ನಿಜ. ಅವಮಾನವೂ ಆಗಿತ್ತು. “ಸರಿ ಬಿಡು” ಅಂತ ಅವನ ಮನೆಯಿಂದ ಗದ್ದೆ ಬಯಲು ದಾಟಿ ನಡೆದು ಬರುವಾಗ ಮನಸ್ಸು ತುಸು ಸಿಟ್ಟಿನಿಂದಲೂ ಆತ್ಮವಿಶ್ವಾಸದಿಂದಲೂ ಹೇಳಿತ್ತು. ‘ಇವನ ಕೊಳಲು ಇಲ್ಲದಿದ್ದರೆ ನಾಟಕವೇ ಆಗೋದಿಲ್ಲ ಅಂತಾನಾ? ನಾಟಕಕ್ಕೆ ಕೊರಳು ಸಾಕು’ ಕೈಯಲ್ಲಿರುವ ನೋಟ್‌ ಬುಕ್ ತೊಡೆಯನ್ನು ತಟ್ಟುತ್ತಿತ್ತು. ತಟ್ಟುವದು… ನುಡಿಸುವದು…

ಚಿಕ್ಕಂದಿನಿಂದಲೂ ನನಗೊಂದು ವಿಶಿಷ್ಠ ಚಟವಿತ್ತು. ಹಲವು ಸಾರಿ ನನ್ನ ಜತೆಗಿರುವವರಿಗೆ ಕಿರಿಕಿರಿ ಎನಿಸಿದ ಚಟವದು. ಅದೇನೆಂದರೆ ನಾನು ಕುಳಿತಲ್ಲಿ ನಿಂತಲ್ಲಿ ಕೈಯಿಂದ ಅಥವಾ ಕಾಲಿನಿಂದ ಏನಾದರೂ ತಾಳ ಹಾಕುತ್ತಲೇ ಇರುತ್ತಿದ್ದೆ. ತಾಳ..? ಗೊತ್ತಿಲ್ಲ ಏನನ್ನಾದರೂ ಬಾರಿಸುತ್ತಲಿರುತ್ತಿದ್ದೆ. ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವನಲ್ಲ ನಾನು. ಆದರೆ ಅದು ಹೇಗೋ ಏನೋ ನನ್ನ ಕೈಬೆರಳುಗಳು ಸಿಕ್ಕಿದ ಕಡೆಯೆಲ್ಲ ಯಾವುದಾದರೊಂದು ಲಯವ ಅನುಕರಿಸುತ್ತಲೇ ಇತ್ತು.

ಖುರ್ಚಿಯ ಮೇಲೆ ಕುಳಿತರೆ ಅದರ ಕೈಗಳ ಮೇಲೆ, ಬಾಗಿಲ ಪಕ್ಕ ನಿಂತಿದ್ದರೆ ಬಾಗಿಲು ಚೌಕಟ್ಟಿನ ಮೇಲೆ, ಕೆಲವೊಮ್ಮೆ ಗೋಡೆಗಳ ಮೇಲೆಯೂ… ಸಿಕ್ಕಿದಲ್ಲೆಲ್ಲ. ಅನೇಕ ಸಾರಿ ಬೆರಳೆಲ್ಲ ನೋವಿನಿಂದ ಮುಲುಗುಟ್ಟುತ್ತಿದ್ದವು. ಆದರೂ ಅದನ್ನು ತಪ್ಪಿಸಲಾಗುತ್ತಿರಲಿಲ್ಲ. ಬಸ್ ಕಿಟಕಿ ಪಕ್ಕ ಕುಳಿತಿದ್ದರೆ ಬಸ್ಸಿನ ಚಲನೆಯ ಶಬ್ದದ ಜತೆ ಅದರ ಗಾಜಿನ ಮೇಲೆ ನನ್ನ ಉಗುರುಗಳು ‘ಜುಗಲ್ ಬಂದಿ’ ನಡೆಸತ್ತಿದ್ದುದೂ ಇತ್ತು. ಒಮ್ಮೊಮ್ಮೆ ಮನೆಯವರೆಲ್ಲ ಕುಳಿತಾಗ ನನ್ನ ಲಹರಿಯಲ್ಲಿ ನಾನು ಅಲ್ಲೆಲ್ಲೋ ಕುಟ್ಟುತ್ತಿದ್ದರೆ ಕುಳಿತಿದ್ದವರಿಗೆಲ್ಲ ಕಿರಿಕಿರಿ ಆಗುತ್ತಿತ್ತು. ಅಂತಹ ಒಂದೆರೆಡು ದಿನ ನಾನು ನನ್ನ ಹಿರಿಯರಿಂದ ಕೈಗಳ ಮೇಲೆ ಕುಟುಕಿಸಿಕೊಂಡಿದ್ದೂ ಉಂಟು.

ಭಾವಕ್ಕೆ ಭಾಷೆಯನ್ನು ಹುಟ್ಟಿಸಿಕೊಳ್ಳುವ ಪ್ರಯತ್ನವಾಗಿತ್ತೋ ಏನೋ ಅದು. ಗೊತ್ತಿಲ್ಲ. ಕಾಲೇಜಿಗೆ ಹೋಗುವಾಗಲೂ ಕೈಯಲ್ಲಿ ಹಿಡಿದಿದ್ದ ನೋಟ್‌ ಬುಕ್‌ನಿಂದ ತೊಡೆ ತಟ್ಟಿಕೊಂಡು ಗುನುಗುತ್ತ ನಡೀತಿದ್ನಂತೆ, ಅನೇಕರು ಹೇಳುತ್ತಿದ್ದರು. ಈಗನ್ನಿಸುತ್ತದೆ, ಬಹುಶಃ ತಾಳ, ಲಯವನ್ನು ದೇಹಸ್ಥಗೊಳಿಸುವ ಆಟವಾಗಿರಬೇಕದು. ಈ ಆಟ ಮುಂದೆ ದೈನಂದಿನ ಕೆಲಸ ಮಾಡುವಾಗಲೂ ದೇಹವನ್ನು ನಾದದ ಗುಂಗಿಗೆ ತೊನೆದಾಡಿಸುತ್ತ ಬದುಕಿನುದ್ದಕೂ ಬೆಳೆದು ಬಂತು.

ಆ ದಿನಗಳಲ್ಲಂತೂ ಕೀರ್ತನೆ ಅಂತ ಕರೆಯುವ ಹರಿಕಥಾಪ್ರಸಂಗಗಳನ್ನು ನಾನು ಎಲ್ಲಿದ್ದರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅಲ್ಲಿ ಮಾತನ್ನು ಗೀತವಾಗಿಸುತ್ತ, ಗೀತವನ್ನು ಮಾತಾಗಿಸುತ್ತ ಕತೆ ಹೇಳಲಾಗುತ್ತಿತ್ತು. ಆ ಅಂತಹ ರೂಢಿಗಳೇ ಈ ಸಂದರ್ಭ ಎದುರಿಸಲು ಬಲ ತಂದಿತ್ತು ಅಂತ ಕಾಣುತ್ತದೆ. ಸಂದರ್ಭ ಹೀಗಿತ್ತು..

ಹೊನ್ನಾವರ ಕಾಲೇಜಿನಲ್ಲಿ ಓದುತ್ತಿದ್ದ ಸಮಯವದು. ಧಾರವಾಡ ವಿಶ್ವವಿದ್ಯಾಲಯದ ಯುವ ಜನೋತ್ಸವಕ್ಕೆ ನಮ್ಮ ನಾಟಕ ಆಯ್ಕೆಯಾಗಿತ್ತು. ಅಂತರ್‌ ಕಾಲೇಜು ಸ್ಪರ್ಧೆಯಲ್ಲಿ ನಮ್ಮ ತಂಡದ ಜತೆ ಸ್ನೇಹಿತನೊಬ್ಬ, ತಕ್ಕಮಟ್ಟಿಗೆ ಕೊಳಲು ನುಡಿಸಬಲ್ಲವ ಇದ್ದ. ಅವನಿಂದ ಮೂಡ್ ‌ಮ್ಯೂಜಿಕ್ ಸೆಟ್ ಮಾಡಿಕೊಂಡು ನಾವು ಅಲ್ಲಿಯ ಸ್ಪರ್ಧೆಯಲ್ಲಿ ಗೆದ್ದು ವಿಶ್ವವಿದ್ಯಾಲಯದ ಸ್ಪರ್ಧೆಗೆ ಹೊರಟಿದ್ದ ವೇಳೆ ಅದು.

ಅಂತಹ ಸಂದರ್ಭದಲ್ಲಿ ಆತ ‘ತಾನು ಬರುವದಿಲ್ಲ’ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟ. ಅವನ ಮನೆಯವರೆಗೂ ಹೋಗಿ ಗೋಗರೆದರೂ ಆತ ಒಪ್ಪಲಿಲ್ಲ. ಇಂದಿಗೂ ಅದಕ್ಕೆ ಕಾರಣ ನನಗೆ ತಿಳಿದಿಲ್ಲ. ಕೆಲವೊಮ್ಮೆ ಹೀಗಾಗುತ್ತದೆ ನೋಡಿ. ನಮಗೆ ಕಾರಣವೇ ತಿಳಿಯದೇ ನಮ್ಮ ಮೇಲೆ ಕೆಲವರು ಮುನಿಸಿಕೊಂಡಿರುತ್ತಾರೆ. ‘ಹೇಳಿ ಹೋಗು ಕಾರಣಾ…’ ಅನ್ನುತ್ತೇವಷ್ಟೆ. ಇದು ತನಕ ಯಾರೂ ಹೇಳಿಲ್ಲ.

ತಪ್ಪಿದ್ದು ಎಲ್ಲಿ ಅಂತ ತಿಳಿಯದ, ಪಶ್ಚಾತ್ತಾಪಕ್ಕೂ ಎಡೆ ಇಲ್ಲದ ವಿಚಿತ್ರ ನೋವಿನ ಸಂದರ್ಭಗಳು ಅವು. ಒಂದೆರಡು ದಿನಗಳಲ್ಲಿ ಮನುಷ್ಯರು ಶತಮಾನದ ಹಿಂದಿನ ಸ್ನೇಹಿತರೇನೋ ಅನಿಸುವದು, ಶತಮಾನದ ಸ್ನೇಹಿತರು ಒಂದೇ ದಿನದಲ್ಲಿ ವೈರಿಗಳಂತಾಡುವದು ವಿಚಿತ್ರವಾಗಿ ಕಾಣುವ ಸತ್ಯ. ಅಂತೂ ಒಮ್ಮೊಮ್ಮೆ ನಮ್ಮ ರೂಢಿಗಳೇ ನಮ್ಮ ಕಾಯುತ್ತವೆ ಅನ್ನೋದಕ್ಕಿದು ಸಾಕ್ಷಿ ಆಗೋಯ್ತು.

  ಇರಲಿ. ಅವನಿಂದ ಇಂತದೊಂದು ನಿರಾಕರಣೆ ಬಂದ ಹೊತ್ತಾದರೂ ಎಂತದೆಂದರೆ ಸ್ಪರ್ಧೆಗೆ ಎರಡು ದಿನ ಮಾತ್ರವಿತ್ತು. ಯಾರನ್ನೂ ಸಿದ್ಧಪಡಿಸಲು ನಮ್ಮಲ್ಲಿ ಯಾವ ಬಗೆಯ ಬಂಡವಾಳವೂ ಸಹ ಇರಲಿಲ್ಲ. ಆದರೆ, ಸೋಲಬಹುದೇ ಹೀಗೆ? ಒಳಗಿನಿಂದ ಅನಿಸುತ್ತಿತ್ತು ‘ನಾವು ಸಂಗೀತವನ್ನು ನಮ್ಮ ಮಾತಿನಿಂದಲೂ ದೇಹದ ಬಳಸುವಿಕೆಯಿಂದಲೂ ಹೊರಡಿಸಲು ಸಾಧ್ಯ.’ ತಂಡದವರಿಗೆ ಧೈರ್ಯ ತುಂಬಿ ಒಂದು ದಿನ ಕಾಲೇಜಿನಲ್ಲಿ ತಾಲೀಮು ನಡೆಸಿ ಧಾರವಾಡಕ್ಕೆ ಹೋಗಿ ಅಲ್ಲಿಯ ವಿಶ್ವವಿದ್ಯಾಲಯ ಮಟ್ಟದ ಸ್ಪರ್ಧೆಯಲ್ಲಿ, ಪ್ರತ್ಯೇಕವಾದ ಹಿನ್ನೆಲೆ ಸಂಗೀತ ಇಲ್ಲದೇ ನಾಟಕ ಪ್ರಯೋಗಿಸಿದೆವು.

ಮಾತಿನಲ್ಲಿ ಖಚಿತ ಲಯ ಕಾಣಿಸುತ್ತ, ದೇಹದ ಚಲನೆಯನ್ನೂ ಮಾತಿನ ಧಾಟಿಗೆ ಮಣಿಸುತ್ತ ಅಗತ್ಯವಿದ್ದಾಗಲೆಲ್ಲ ಮಾತಿನ ಜತೆಗೆ ಹೆಜ್ಜೆಯ ಘಾತದಿಂದಲೂ ತಾಳ ಸೃಷ್ಟಿಸಿಕೊಳ್ಳುತ್ತ… ಮಜವಾಗಿತ್ತದು. ನಾಟಕ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಹೋಯ್ತು!!

ಆ ನಾಟಕದ ಹೆಸರು ‘ಹೆಣದ ಬಟ್ಟೆ’. ಪ್ರೇಮಚಂದ್ ಅವರ ‘ಕಫನ್’ ಎಂಬ ಹಿಂದಿ ಕತೆಯನ್ನು ಆಧರಿಸಿದ್ದು. ೧೯೮೮-೮೯ರ ಸಮಯ. ನಾವೆಲ್ಲ ಹೊನ್ನಾವರ ಎಸ್ ಡಿ ಎಂ ಕಾಲೇಜಿನಲ್ಲಿ ಬಿಎ ಓದುತ್ತಿದ್ದೆವು. ಕಾಲೇಜಿನ ಒಳಗೆ ನಮಗೆ ಅಧ್ಯಾಪಕರಾಗಿದ್ದ ಪ್ರೊ ಜಿ ಎಸ್ ಅವಧಾನಿ ಹಾಗೂ ಕಾಲೇಜಿನ ಹೊರಗೆ ಸಾಮಾಜಿಕ ಗುರುಗಳಾಗಿದ್ದ ಡಾ ಆರ್ ವಿ ಭಂಡಾರಿಯವರ ನೇತೃತ್ವದಲ್ಲಿ ಬದುಕು ಆರಂಭಿಸಿದ್ದ ಕಾಲವದು.

ಸಾಹಿತ್ಯದ ಮರುಳು ಹಿಡಿದಿತ್ತು, ಚಳುವಳಿಗಳ ಗುಂಗು ತುಂಬಿತ್ತು. ಆಧುನಿಕವಾದ ಹಲವು ಸಂಗತಿಗಳನ್ನು, ತಲ್ಲಣಗಳನ್ನು ನಾನು ರೂಢಿಸಿಕೊಂಡು ಬಂದ ಯಕ್ಷಗಾನವೊಂದರಿಂದಲೇ ಅಭಿವ್ಯಕ್ತಿಸುವುದು ಅಸಾಧ್ಯ ಎನ್ನಿಸತೊಡಗಿತ್ತು. ಅದೇ ವೇಳೆ ನನ್ನ ಸಹೋದರ ಸಂಬಂಧಿ ಕಿರಣ ಭಟ್ ಶಿರಸಿಯಲ್ಲಿ ‘ರಂಗಸಂಗ’ ಎನ್ನುವ ತಂಡಕಟ್ಟಿ ‘ಮಕ್ಕಳ ನಾಟಕ, ‘ಕಥಾನಾಟಕ’ ಮುಂತಾದ ರಂಗ ಚಟುವಟಿಕೆಗಳನ್ನು ಆರಂಭಿಸಿದ್ದರು.

ರಜಾ ದಿನಗಳಲ್ಲಿ ಅಲ್ಲಿಗೆ ಹೋಗಿ ಆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಅದೇ ಸಮಯದಲ್ಲಿ ಸುರೇಶ ಅನಗಳ್ಳಿಯವರು ಎನ್ ಎಸ್ ಡಿ ಪದವಿ ಮುಗಿಸಿ ಬಂದವರು, ನಮ್ಮ ಕಾಲೇಜಿನಲ್ಲಿ ರಂಗ ತರಬೇತಿ ನಡೆಸಿ ‘ವಾರ್ಡ್ ನಂ ೬’ ಮತ್ತು ‘ಸಂಕ್ರಾಂತಿ’ ನಾಟಕಗಳನ್ನು ಆಡಿಸಿದ್ದರು. ಆಧುನಿಕ ರಂಗಭೂಮಿಯ ಮೋಹದಲ್ಲಿ ಕರಗತೊಡಗಿದ ದಿನಗಳವು.

ಅಂತದೇ ಒಂದು ಸಮಯದಲ್ಲಿ ರಜೆಗೆಂದು ಊರಿಗೆ ಬಂದಿದ್ದ ಕಿರಣ್ ‌ಭಟ್ ತಮ್ಮ ಮನೆಯ ಕೋಣೆಯೊಂದರಲ್ಲಿ ಈ ‘ಹೆಣದ ಬಟ್ಟೆ’ ನಾಟಕವನ್ನು ಅದರ ಒಳಹೊರ ಮೈಯನ್ನು ಪರಿಚಯಿಸಿದ್ದ. ನಾನು ಮತ್ತು ನನ್ನ ಸ್ನೇಹಿತ ನಾರಾಯಣ ಭಾಗ್ವತ್ ಅಲ್ಲಿಯೇ ಅವನ ಮಾತಿಗೆ ‘ಮೈ’ ಕೊಟ್ಟೆವು. ಹೀಗೆ ನಾಟಕ ಒಡಲ ಸೇರಿತು. ‘ನಾಟಕ ಸ್ಪರ್ಧೆಗೆ ಹೋಗಿ’ ಅಂತ ನಮ್ಮ ನೆಚ್ಚಿನ ಅಧ್ಯಾಪಕರಾಗಿದ್ದ ಅವಧಾನಿಯವರು ಹೇಳಿದ್ದೇ ತಡ ‘ಹೆಣದ ಬಟ್ಟೆ’ ನಾನಾ ರೂಪ ಪಡೆಯತೊಡಗಿತು.

ದಕ್ಷಿಣ ಭಾರತ ಮಟ್ಟದ ಸ್ಪರ್ಧೆಯನ್ನು ಸಂಘಟಿಸುವ ಪಾಳಿ ಆ ವರ್ಷ ಮೈಸೂರು ವಿಶ್ವವಿದ್ಯಾಲಯದ್ದಾಗಿತ್ತು. ಒಂದು ವಾರ ಮುಂಚಿತವಾಗಿ ಧಾರವಾಡ ವಿವಿಗೆ ಹೋಗುವುದು, ಅಲ್ಲಿ ನಮ್ಮ ನಾಟಕದ ಜತೆ ಇನ್ನೂ ಕೆಲವು ಸ್ಪರ್ಧೆಯಲ್ಲಿ ಭಾಗವಹಿಸಲು ತರಬೇತಿ ಹೊಂದುವುದು ಅನಿವಾರ್ಯವಾಗಿತ್ತು. ವಿಶ್ವವಿದ್ಯಾಲಯದ ನಿಯಮದ ಪ್ರಕಾರ ನಿರ್ದಿಷ್ಟಪಡಿಸಿದ ಸಂಖ್ಯೆಯ ಜನ ಹೆಚ್ಚಿನ ಎಲ್ಲ ಸ್ಪರ್ಧೆಗಳಲ್ಲಿಯೂ ಭಾಗವಹಿಸಬೇಕಿತ್ತು.

ದಕ್ಷಿಣ ಭಾರತ ಮಟ್ಟದ ಈ ಸ್ಪರ್ಧೆಗೆ ಆಯ್ಕೆಯಾದ ಬಹುತೇಕ ಎಲ್ಲ ವಿಭಾಗದ ಸ್ಪರ್ಧಾಳುಗಳು ಧಾರವಾಡ ವಿವಿಯಿಂದಲೇ ಆಯ್ಕೆಯಾಗಿದ್ದು ನಾವು ‘ನಾಟಕದವರು’ ಮಾತ್ರ ಹಳ್ಳಿಯೊಂದರ ಕಾಲೇಜಿನ ವಿದ್ಯಾರ್ಥಿಗಳಾಗಿರೋದ್ರಿಂದ ಒಂದು ರೀತಿ ಎರಡನೇ ದರ್ಜೆಯ ನಾಗರಿಕರಂತೆ ನಾವು ವಿಶ್ವವಿದ್ಯಾಲಯದ ತಂಡ ಸೇರಿದ್ದೆವು. ನಾಟಕಕ್ಕೆ ಸಂಬಂಧಿಸಿದಂತೆ ಯಾವ ಸೆಟ್, ಪರಿಕರ ಏನೂ ಇರಲಿಲ್ಲ ನಮ್ಮಲ್ಲಿ. ಅದು ಅಂತಹ ಅಗತ್ಯವೂ ಅನ್ನಿಸಿರಲಿಲ್ಲ ನಮಗೆ.

ನಾಟಕದಲ್ಲಿ ಇರುವ ಪಾತ್ರಗಳು ಇಷ್ಟು. ಅಪ್ಪ ಮಗ, ಗುಡಿಸಲೊಳಗೆ ದನಿಯಾಗಿ ಮಾತ್ರ ಕೇಳಿಬರುವ ಬಸಿರು ಸೊಸೆಯ ಅಳು, ಸಾಹುಕಾರ, ಕೊನೆಗೊಂದು ಹೆಂಡದಂಗಡಿ ಮಾಲಿಕ, ಕುಡುಕರು. ಇನ್ನು ಸನ್ನಿವೇಶವೋ, ಈ ಸೋಂಬೇರಿ ಅಪ್ಪ ಮಗ ಬಸಿರು ಬೇನೆ ತಿಂತಿರೋ ಮನೆಯ ಹೆಣ್ಣುಮಗಳಿಗೆ ಏನೂ ಸಹಾಯ ಮಾಡದೇ, ಅವಳ ಸಾವಿನ ನಂತರ ಊರ ಸಾಹುಕಾರನಿಂದ ಅವಳ ಶವಸಂಸ್ಕಾರಕ್ಕೆಂದು ಹಣವನ್ನು ಕಾಡಿಬೇಡಿ ತಂದು, ‘ಬದುಕಿರುವಾಗಲೇ ಮೈತುಂಬ ಬಟ್ಟೆ ಕೊಡಲಾಗಲಿಲ್ಲ, ಇನ್ನು ಸತ್ತ ಮೇಲೇಕೆ ಹೆಣಕ್ಕೆ ಹೊಸ ಬಟ್ಟೆ’ ಅನ್ನುವ ತರ್ಕದಡಿ ಆ ಹಣವನ್ನೂ ಹೆಂಡದಂಗಡಿಯಲ್ಲಿ ಕಳೆಯುವುದು.

ಈ ಸನ್ನಿವೇಶಗಳನ್ನು ಅಭಿನಯಿಸಲು ನಮಗೆ ಅಗತ್ಯವಾದುದು ಸಾಹುಕಾರನಿಗೊಂದು ಖುರ್ಚಿ, ಶೇಂದಿ ಅಂಗಡಿಯಲ್ಲಿ ಬಾಟಲಿ ಇಡಲು ಒಂದು ಮೇಜು ಇವೆರಡೇ. ಈ ನಮ್ಮ ‘ಸೆಟ್’ಗಳು ಹೋದ ಕಡೆಯಲ್ಲೇ ಸಿಗುತ್ತವೆ! ಇನ್ನು ಪರಿಕರಗಳು. ಕುಡಿದು ಬಿಟ್ಟ ಬಿಯರ್ ಬಾಟಲಿಗಳಲ್ಲಿ ಮಜ್ಜಿಗೆಯೋ, ಹಾಲು ನೀರೋ ತುಂಬಿ ಅದನ್ನು ಶೇಂದಿ ಎಂದು ಹೇಳಲು ಅಗತ್ಯ ಖಾಲಿ ಬಾಟಲು ಹೋದೆಡೆಯಲೆಲ್ಲ ನಾವೇ ಸಿದ್ಧಮಾಡ್ಕೋಬಹುದು(!)

ಒಟ್ಟೂ ಸಂಗತಿ ಏನೆಂದರೆ ಒಂದೆರಡು ಪಂಚೆ, ಹರಿದ ಟವಲ್ ಇಟ್ಟುಕೊಂಡು ನಾವು ದಕ್ಷಿಣ ಭಾರತ ಮಟ್ಟದ ನಾಟಕ ಸ್ಪರ್ಧೆಗೆಂದು ಧಾರವಾಡದಲ್ಲಿ ಇಳಿದಾಗ, ವಿಶ್ವವಿದ್ಯಾಲಯದಲ್ಲಿ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ತಯಾರಾಗುತ್ತಿದ್ದ ಇತರರಿಗೆ ತಮ್ಮ ತಂಡದ ಒಂದು ಸ್ಫರ್ಧೆ ‘ಢಮಾರ್’ ಅಂತ ಅನಿಸಿದ್ದಂತೂ ಸುಳ್ಳಲ್ಲ.

ಹೀಗಾಗಿ ನಮಗೆ ತಾಲೀಮು ಮಾಡಲು ಅವಕಾಶವನ್ನೇ ಕೊಡದೇ ಜನಪದ ನೃತ್ಯಸ್ಪರ್ಧೆಯಲ್ಲಿ  ಕುಣಿಯಲು ಹಿಂದುಗಡೆ ಸಾಲಿನಲ್ಲಿ ನಮ್ಮನ್ನು ನಿಲ್ಲಿಸಲಾಗಿತ್ತು. ದಿನವೂ ಜನಪದ ನೃತ್ಯದ ರಿಹರ್ಸಲ್ ಮುಗಿದು ಎಲ್ಲರೂ ಹೋದ ಮೇಲೆ ನಮ್ಮ ನಾಟಕದ ಯೋಜನೆಯ ಚರ್ಚೆಯನ್ನು ನಾವು ಗುಪ್ತವಾಗಿಯೇ ಮಾಡಿಕೊಳ್ಳುತ್ತಿದ್ದೆವು; ಯಾಕೆಂದರೆ ನಮ್ಮ ಕೆಲಸದ ಬಗ್ಗೆ ಅವರ್ಯಾರಿಗೂ ಗೌರವ ಇರಲಿಲ್ಲ. ನಾವು ನಮ್ಮಷ್ಟಕ್ಕೇ ತಾಲೀಮು ನಡೆಸಿಕೊಳ್ಳುತ್ತಿದ್ದೆವು.

ಯಾರೊಬ್ಬರೂ ನಮ್ಮ ಒಂದು ತಾಲೀಮನ್ನೂ ನೋಡಲು ಇರಲಿಲ್ಲ. ಪಾತ್ರಗಳ ಸಂಬಂಧವನ್ನು ಭೌತಿಕವಾಗಿ ಗುರುತಿಸುವ ಜಾಗ ಯಾವುದು ಎಂಬುದರ ಹುಡುಕಾಟ ನಡೆಸುತ್ತ… ಕೇಂದ್ರ ಮತ್ತು ಪರಿಧಿಯ ಚಲನೆಯನ್ನು ಪಾತ್ರದೊಂದಿಗೆ ನಡೆಸುತ್ತ… ಏನೋ… ಒಂದಿಷ್ಟನ್ನು ಅಸ್ಪಷ್ಟವಾಗಿ ಗುರುತು ಹಾಕಿಕೊಂಡಿದ್ದೆ ಅಷ್ಟೆ. ಮೈಸೂರಿಗೆಂದು ಹೊರಟ ಧಾರವಾಡ ವಿಶ್ವವಿದ್ಯಾಲಯದ ತಂಡದಲ್ಲಿ ತುಂಬ ಪ್ರತಿಭಾವಂತರಿದ್ದರು. ಈಗ ಹಾರ್ಮೋನಿಯಂನಲ್ಲಿ ಹೆಸರಾದ ರವೀಂದ್ರ ಕಾಟೋಟಿ, ರೇಡಿಯೋ ಕಲಾವಿದೆಯಾಗಿ ಹೆಸರಾದ ಮಥುರಾ ದೀಕ್ಷಿತ್, ಇವರೆಲ್ಲ ಇರುವ ತಂಡದಲ್ಲಿ ನಾವೂ ಇದ್ದೆವು.

ಇದುವರೆಗೆ ಹೇಗೋ ನಡೆದು ಹೋಯಿತು. ತೊಂದರೆ ಎದುರಾಗಿದ್ದು ಹೀಗೆ. ಮೈಸೂರಿಗೆ ಹೋದ ಮೇಲೆ ನಮ್ಮ ಸ್ಪರ್ಧೆಗಳು ಮುಗಿದ ನಂತರ ಎಲ್ಲರೂ ಮೈಸೂರು ನೋಡಲು ಹೋಗುವುದೆಂದು ತಂಡದ ಎಲ್ಲರೂ ಸೇರಿ ತೀರ್ಮಾನಿಸಿ ಬಿಟ್ಟರು. ಅದಕ್ಕೆ ಅಗತ್ಯ ಹಣವನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುವದೆಂತಲೂ ಮಾತಾಯಿತು. ನಾವು ತುಂಬ ಗಾಬರಿಗೊಂಡೆವು. ಕಾರಣ ನಮ್ಮಲ್ಲಿ ಸ್ವಲ್ಪವೂ ಹಣ ಇರಲಿಲ್ಲ.

ಅಸಲಿಗೆ ಹಣ ಅಷ್ಟು ಅವಶ್ಯಕ ಅಂತ ನನಗೆ ಗೊತ್ತೇ ಇರಲಿಲ್ಲ. ನಾಟಕ ಮಾಡೋಕಂತೂ ಹಣ ಬೇಕಿರಲಿಲ್ಲ. ಬರುವಾಗ ಬಸ್ಸಿಗೆ ಕೊಡಲು ಅಗತ್ಯವಾದ ಹಣವನ್ನು ಕಾಲೇಜಿನವರು ಕೊಟ್ಟಿದ್ದರು. ವಾಪಾಸು ಬರುವಾಗ ವಿಶ್ವವಿದ್ಯಾಲಯದವರು ನಮಗೆ ಬಸ್ ‌ಚಾರ್ಜು ಕೊಡುತ್ತಾರೆ ಅಂತ ಹೇಳಲಾಗಿತ್ತು. ಹೀಗಾಗಿ ನಮಗೆ ಹಣ ಬೇಕು ಅಂತ ಅನಿಸಿರಲೇ ಇಲ್ಲ..!

ನಾಟಕ ಮಾಡುವುದು ಅಂತಹ ‘ಘನಂದಾರಿ ಕೆಲಸ’ ಅಲ್ಲವಾದ್ದರಿಂದ ಹೆಚ್ಚಿಗೆ ಹಣ ಕೇಳುವದು, ಅದೂ ಮನೆಯಿಂದ ಹಣ ಕೇಳುವುದು ಯಾವತ್ತೂ ಸಾಧು ಅನಿಸಿಯೇ ಇರಲಿಲ್ಲ. ಆದರೆ ಈಗ ಸ್ವಲ್ಪವಾದರೂ ಹಣ ಬೇಕು! ಎಷ್ಟು ಅಂತಲೂ ತಿಳಿಯದು! ಸುಂದರ ಹುಡುಗಿಯರೇ ಹೆಚ್ಚಿಗೆ ಇರುವ ಆ ಗುಂಪಿನಲ್ಲಿ ಹಣವಿಲ್ಲದೇ ‘ಪಾಪ’ ಅಂತ ಅನಿಸಿಕೊಳ್ಳುವ ಸ್ಥಿತಿ ಒದಗಿದರೆ!

ಭೂಮಿ ಬಾಯ್ಬಿರಿಯುವ ಸಂಕಟ ಅದು! ರಾತ್ರಿಯೆಲ್ಲ ನಡೆದ ಚರ್ಚೆಯ ನಂತರದ ಫಲವಾಗಿ, ನಮ್ಮ ತಂಡದ ಕಲಾವಿದನೊಬ್ಬನ ಸಹೋದರಿಯ ಮನೆ ಹುಬ್ಬಳ್ಳಿಯಲಿದ್ದು, ಆತ ಅವರ ಮನೆಗೆ ಹೋಗಿ ದೇವರ ಹುಂಡಿಗೆಂದು ಇಟ್ಟಿದ್ದ ನೂರಿನ್ನೂರು ರೂಪಾಯಿಗಳ ಚಿಲ್ಲರೆಯನ್ನು ಟವಲ್ ನಲ್ಲಿ ಕಟ್ಟಿ ತಂದು, ವಾಪಾಸು ಕೊಡುವ ಶರತ್ತಿನ ಮೇಲೆ, ನಮಗೆಲ್ಲ ಮೂವತ್ತೋ ನಲವತ್ತೋ ರೂಪಾಯಿ ಹಂಚಿದ್ದ ನೆನಪು. ಅಂತೂ ಮೈಸೂರು ಸೇರಿದೆವು.

ಕಲಾ ಮಂದಿರದಲ್ಲಿ ಸ್ಪರ್ಧೆ. ಕೇರಳ ತಂಡವಂತೂ ನಾಟಕದ ‘ಸೆಟ್’ಗಳನ್ನು ಅವರ ಸ್ವಂತ ವಾಹನದಿಂದ ಇಳಿಸುವುದನ್ನು ನೋಡಿಯೇ ಎದೆ ಬಾಯಿಗೆ ಬಂದಿತ್ತು. ಮಧ್ಯಾಹ್ನ ೩ ಘಂಟೆಯ ಹೊತ್ತಿಗೆ ನಮ್ಮ ಪಾಳಿ. ಉದ್ವೇಗದಲ್ಲಿ ಮುಂಜಾನೆ ಸರಿಯಾಗಿ ತಿಂಡಿ ಸೇರಲಿಲ್ಲ. ಸ್ಪರ್ಧೆಗೆ ಬಂದ ನಾಟಕಗಳ ಪ್ರದರ್ಶನ ಶುರು ಆಗಿತ್ತು. ಕೇರಳ ತಂಡದ ನಾಟಕ!

ಬೆಳಕಿನ ವ್ಯವಸ್ಥೆ, ಸೆಟ್, ಬಣ್ಣ, ಪ್ರಾಪರ್ಟಿ… ವಾವ್! ಎದೆ ಬಾಯಿಗೆ ಬಂದಿತ್ತು. ನಮ್ಮಲ್ಲಿ ಅಂತಾದ್ದು ಏನೂ ಇರಲಿಲ್ಲ..! ಹನ್ನೊಂದು ಘಂಟೆಯ ಹೊತ್ತಿಗೆ ವಿಪರೀತ ಹಸಿವು. ನಾನು ಮತ್ತು ವಿಠ್ಠಲ ಭಂಡಾರಿ (ಡಾ.ವಿಠ್ಠಲ ಭಂಡಾರಿ, ಈಗ ಸಿದ್ಧಾಪುರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು) ಯಾವುದಾದರೂ ಹೊಟೇಲಿನಲ್ಲಿ ತುಸು ಉಪ್ಪಿಟ್ಟು ತಿಂದು ಬರೋಣ ಅಂತ ಓಡಿದೆವು. ಎಷ್ಟು ಹೊತ್ತಾದರೂ ಹೋಟೆಲ್ ಕಾಣುವುದಿಲ್ಲ. ತಡವಾಗಿ ಬಿಟ್ಟರೆ ಎಂಬ ಧಾವಂತ ಬೇರೆ. ಕೊನೆಗೂ ಒಂದು ಅತಿದೊಡ್ಡ ಹೋಟೆಲಿನ ಮುಂದೆ ನಿಂತಾಗ ಅಲ್ಲಿಯ ಸೆಕ್ಯುರಿಟಿ ಗಾರ್ಡ ಸೆಲ್ಯೂಟ್ ಹೊಡೆದ. “ಇದು ಬಾಳ ದೊಡ್ಡ ಹೋಟೆಲ್ಲೋ ಶ್ರೀಪಾದಾ” ಅಂತ ವಿಠ್ಠಲ ಹೇಳಿದಾಗ ಹೆದರಿಕೆ ಶುರು ಆಯ್ತು.

ಕಿಸೆಯಲಿದ್ದುದು ಅಂದಾಜು ಇಪ್ಪತ್ತೈದು ರೂಪಾಯಿ ಮಾತ್ರ. ಒಳ ಹೋಗಿ ವೇಟರ್ ಕೊಟ್ಟ ಮೆನು ನೋಡಿ ಇನ್ನೂ ಗಾಬರಿ ಆಯ್ತು! ಅಲ್ಲಿ ಇಂಗ್ಲಿಷ್‌ ನಲ್ಲಿ ಬರೆದ ತಿಂಡಿಗಳ ಹೆಸರಿನ ಮುಂದೆ ಹಣವನ್ನು ಬರೆದಿರುತ್ತಾರಲ್ಲ ಅದರಲ್ಲಿ ೨೫ ರೂ. ಗಿಂತ ಕಡಿಮೆಯದು ಒಂದೂ ಕಾಣಲಿಲ್ಲ..! ಹಲವು ಸಾರಿ ನೋಡಿದ ನಂತರ ಅಲ್ಲೊಂದು ಕಡೆ ೧೫ ರೂ. ಅನ್ನೋ ಕಡೆ ಬೆರಳಿಟ್ಟು ವೇಟರ್‌ನನ್ನು “ಇದನ್ನು ಒಂದು ಕೊಡಿ” ಅಂದೆವು.

ಆತ “ಇದರ ಜತೆ ಏನು ಕೊಡಲಿ” ಅಂದ. ನಾವು “ಏನೂ ಬೇಡ ಇದೊಂದೇ” ಅಂದೆವು. ಅದು ಯಾವುದೋ ‘ಸಾಸ್’ ಆಗಿತ್ತು ಅಂತ ಕಾಣತ್ತೆ! ಆತ ವ್ಯಂಗ್ಯದ ನಗೆ ನಗುತ್ತ ನಿಮಗೆ ಏನು ಬೇಕಿತ್ತು ಅಂತ ಶುದ್ಧ ಕನ್ನಡದಲ್ಲಿ ಕೇಳಿದಾಗ ವಿಠ್ಠಲ ಧೈರ್ಯಮಾಡಿ ‘೨೦ ರೂ. ಒಳಗೆ ಯಾವ ತಿಂಡಿ ಸಿಗುತ್ತದೆ?’ ಅಂತ ಕೇಳಿದ. ಆತ ನಸು ನಗುತ್ತ ‘ಪಕ್ಕದ ರಸ್ತೆಗೆ ಹೋಗಿ ಅಲ್ಲಿ ತಳ್ಳುವ ಗಾಡಿಯ ಮೇಲೆ ನಿಮಗೆ ಬೇಕಿದ್ದು ಸಿಗುತ್ತದೆ’ ಅಂದ.

ಬದುಕಿದೆಯಾ ಬಡ ಜೀವವೇ ಅಂತ ಹೊರಗೋಡಿ ಬಂದು ರಸ್ತೆ ಪಕ್ಕದಲ್ಲಿ ಬೋಡಾ ತಿಂದೆವು. ನಾನು ನಾಲ್ಕು ನಾಲ್ಕು ಬೋಂಡಾ ತಿಂದು ಅಲ್ಲಿದ್ದ ತಂಬಿಗೆಯ ನೀರನ್ನು ಬಾಯೊಳಗೆ ಸುರುವಿಕೊಳ್ಳುವಾಗ ವಿಠ್ಠಲ ಕಣ್ಣು ಕೆಕ್ಕರಿಸುತ್ತಿದ್ದ. ನನ್ನ ಧ್ವನಿ ಹಾಳಾಗಿಬಿಟ್ಟರೆ ಅಂತ ಅವನ ಚಿಂತೆ!

ನಿಜ. ನಮ್ಮ ದೇಹ, ದನಿ ಇವೆರಡೇ ನಮ್ಮ ಬಂಡವಾಳವಾಗಿತ್ತು. ಇವೆರಡೇ ಆಯುಧಗಳಿಂದ ನಾವು ಯುದ್ಧ ಗೆಲ್ಲಲು ಹೊರಟಿದ್ದೆವು..! ಹೇಳಿ ಕೇಳಿ ಈ ನಾಟಕದಲ್ಲಿಯಂತೂ ದೃಶ್ಯ ಸಂಯೋಜನೆಯಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚೇ ಶ್ರವ್ಯ ಸಂಯೋಜನೆಗೆ ಅನಿವಾರ್ಯವಾದ ಪ್ರಾಮುಖ್ಯತೆಯೂ ದೊರಕಿ ಹೋಗಿತ್ತು. ಅರ್ಧಗಂಟೆ ಮೊದಲು ಸ್ಟೇಜ್ ಕೊಟ್ಟರು.

ಆದರೆ ೫ ನಿಮಿಷದಲ್ಲಿ ನಮ್ಮ ತಯಾರಿ ಮುಗಿದು ಹೋಗಿತ್ತು!. ಬೆಳಕಿನ ತಜ್ಞರು ಬಂದು ‘ಲೈಟ್’ ಬೇಕಾದ ನಿರ್ದಿಷ್ಟ ಸ್ಥಳವನ್ನು ಕೇಳಿದರು. ನಾನು ರಂಗದ ಮೇಲೆ ಒಂದಿಷ್ಟು ದೊಡ್ಡ ಸುತ್ತು ಹಾಕಿ ‘ಇಲ್ಲೆಲ್ಲ ಓಡಾಡುತ್ತೇವೆ, ಮುಖ ಕಾಣುವ ಹಾಗೆ ಬೆಳಕು ಕೊಟ್ಟರೆ ಸಾಕು’ ಎಂದಿದ್ದೆ. (ಮುಂದೆ ಎನ್ ಎಸ್ ಡಿ ಯಲ್ಲಿ ನಾಟಕ ಮಾಡುವಾಗಲೂ ಹೀಗೆಯೇ ಆಗಿತ್ತು) ನಾಟಕ ಆರಂಭಗೊಂಡಿತು.

ನಾನು ಅಪ್ಪನ ಪಾತ್ರವನ್ನೂ, ವಿಠ್ಠಲ ಮಗನ ಪಾತ್ರವನ್ನೂ ವಹಿಸಿದ್ದ. ನಾಟಕವನ್ನು ವೀಡಿಯೋ ಮಾಡುತ್ತಿದ್ದರು. ರಂಗ ಸ್ಥಳದ ಮುಂದೆಯೇ ಒಂದು ಮಾನಿಟರ್ ಇಟ್ಟಿದ್ದರು. ಅದರಲ್ಲಿ ಅಭಿನಯಿಸುತ್ತಿದ್ದ ನಾವು ಕಾಣುತ್ತಿದ್ದೆವು. ವಿಠ್ಠಲ ಆಗಾಗ ಕಣ್ಣರಳಿಸಿ (ನಾಟಕದ ಮಧ್ಯಯೇ) ಆ ಪರದೆಯಲ್ಲಿ ಅವನನ್ನು ನೋಡಿಕೊಳ್ಳುತ್ತಿದ್ದ. ತುಸು ಹೊತ್ತು ಅಷ್ಟೆ. ಕಥೆಯಲ್ಲಿ ಮುಳುಗುತ್ತಿದ್ದಂತೆ ಇಂಥವೆಲ್ಲವೂ ಮರೆಯಾಗುತ್ತ ಬಂತು.

ಮಾತು, ದೇಹ, ಚಲನೆ ಎಲ್ಲಕ್ಕೂ ಗತಿ ಒದಗುತ್ತ ಬಂತು. ನಾಟಕದ ಕೊನೆಯ ದೃಶ್ಯ, ಹೆಂಡದಂಗಡಿಯಲ್ಲಿ ಎಲ್ಲರೂ ಕುಣಿಯುತ್ತ ‘ಬಂಗಾರದ ಬಟ್ಟೆ ತೊಡಿಸ್ತೀವಿ, ಪನ್ನೀರ ಸ್ನಾನ ಮಾಡಿಸ್ತೀವಿ, ಅವಳು ರಾಣಿ ಆಗ್ತಾಳೆ… ಅನ್ನೋ ಸಾಲುಗಳೊಂದಿಗೆ ಪ್ರತಿಮೆಯಾಗ್ತಾ ಆಗ್ತಾ… ಅಷ್ಟೆ..! ಚಪ್ಪಾಳೆಯ ಸದ್ದಿನೊಂದಿಗೆ ಸರಿಯಾಗಿ ಕಣ್ಣು ಬಿಟ್ಟಿದ್ದು… ನಾವು ಅತಿ ಹೆಚ್ಚು ಅಂಕದೊಂದಿಗೆ ಪ್ರಥಮ ಬಂದುದು ಮಾತ್ರವಲ್ಲ ತಂಡಕ್ಕೆ ವೀರಾಗ್ರಣಿ ದೊರಕಿಸಿ ಕೊಟ್ಟಿದ್ದೆವು!! ರಾಷ್ಟ್ರೀಯ ಉತ್ಸವಕ್ಕಾಗಿ ಡೆಹರಾಡೂನಿಗೆ ಆಯ್ಕೆಯಾಗಿದ್ದೆವು!!!

ದಕ್ಷಿಣ ಭಾರತ ಮಟ್ಟದ ನಾಟಕ ಸ್ಪರ್ಧೆಗೆಂದು ಹೋಗಿದ್ದ ನಮ್ಮಲಿದ್ದ ರಂಗ ಸಂಬಂಧಿ ಸಂಗತಿ ಎಂದರೆ ಒಂದೆರಡು ಪಂಚೆ, ಹರಿದ ಚಡ್ಡಿ, ಬನಿಯನ್ ಅಷ್ಟೆ! ಅಷ್ಟೇ? ಅಷ್ಟೇ ಆಗಿರಲಿಲ್ಲ ಅಲ್ಲವೇ? ದೇಹ, ದನಿ, ಲಯ; ಮಾತನ್ನು ಗೀತದೊಂದಿಗೆ ಸೇರಿ ಆಡುವ ಲಯ ಮತ್ತು ಕತೆಯ ಶ್ರುತಿಯೊಂದಿಗೆ ದೇಹ ಚಲನೆಯನ್ನು ಸಮಾಸಗೊಳಿಸಿದ… ಅಲ್ಲಿ ಅವೆಲ್ಲವೂ ಕರಗಿದ, ಪಾಕಗೊಂಡ ಒಂದು ಬಗೆ, ಎಲ್ಲವೂ ಜತೆಗಿತ್ತು. ಅಲ್ಲಿ ಹಗಣವಿತ್ತು, ಯಕ್ಷಗಾನವಿತ್ತು, ಮಂಡಲ ಕುಣಿತವಿತ್ತು.

ಆದರೆ ಅದು ಅದಾಗಿ ಇರದೇ ಇನ್ನೊಂದಾಗಿ ರೂಪಾಂತರವಾಗಿತ್ತು… ಕರಗಿತ್ತು… ಗಂಟು ಗಂಟಾಗಿ, ಮೂಲ ಸ್ವರೂಪದಲ್ಲಿ ಕಾಣಿಸಿಕೊಳ್ಳಲು ತವಕಿಸದೇ ಕರಗಿತ್ತು… ಒಡಲ ನೂಲದು ಹೊರಗೆ ನೇಯ್ದದ್ದು.

‍ಲೇಖಕರು ಶ್ರೀಪಾದ್ ಭಟ್

September 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kavya Kadame

    ಅದ್ಯಾವುದೋ ಲೋಕದಿಂದ ಬಂದ ಹಂಸ ತನ್ನ ಪಕ್ಕೆಗಳ ಸೆರಗಿನಲ್ಲಿ ಮೃದುವಾಗಿ ಹೊತ್ತೊಯ್ದಂತೆ ಅನುಭವಕ್ಕೆ ಬರುವ ಸೃಜನಶೀಲತೆಯ ಬೆರಗು ಮತ್ತೆ ಮತ್ತೆ ಅರಿವಿಗೆ ಬರುತ್ತದೆ ಈ ಕಥೆಗಳನ್ನು ಕೇಳುತ್ತಿದ್ದರೆ. ಬೆರಳುಗಳು ಲೋಕದ ಅಜ್ಞಾತ ಲಯಗಳಿಗೆ ಮಿಡಿಯುತ್ತಲೇ ಇರುವುದು, ರಂಗದ ಮೇಲೆ ಮಾತು ಮತ್ತು ದೇಹದ ಬಳಸುವಿಕೆಯಿಂದಲೇ ಸಂಗೀತವನ್ನು ಹೊಮ್ಮಿಸುವುದು,  ಶ್ರದ್ಧೆಯ ಇದ್ದಾಗ ಹಣ ಅಷ್ಟೇನೂ ಮುಖ್ಯವಲ್ಲ ಎಂಬ ಆಳವಾದ ತಿಳಿವಳಿಕೆ… ಇವೆಲ್ಲ ಒಡಲ ನೂಲಿನಿಂದಲೇ ತಂತಾನೇ ಹೆಣೆದುಕೊಂಡ ಜೀವ ಜಾಲಗಳು. I can imagine the passion on that stage.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: