ಕೇಬಲ್ ಕಾರಿನಲ್ಲಿ.. ಬಾರ್ಸಿಲೋನಾ ಆಗಸದಲ್ಲಿ..

ಈಕೆ ‘ಜಯನಗರದ ಹುಡುಗಿ’. ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ

“ಫೋನ್ ನಂಬರ್ ಕೇಳೋದೆಲ್ಲ ಅದೆಷ್ಟು ವೇಸ್ಟ್ ವಿಷಯ ಅಲ್ವಾ” ಎಂದು ಸಿಡ್ ನಗುತ್ತಾ ಹುಡುಗಿಗೆ ಹೇಳುತ್ತಿದ್ದ. “ಈಗಿನ ಕಾಲದಲ್ಲಿ ಸಕ್ಕತ್ ಸುಲಭವಾಗಿ ಫೋನ್ ನಂಬರ್ ಕಂಡು ಹಿಡಿಯಬಹುದು, ಅಕಸ್ಮಾತ್ ಇಷ್ಟ ಇಲ್ಲದಿದ್ದರೆ ಬ್ಲಾಕ್ ಸಹ ಮಾಡಬಹುದು. ಏನು ಮಜಾನೆ ಇರಲ್ಲ” ಎಂದು ಮನಸ್ವಿ ಸಹ ಹೇಳಿದ.

“ನಾವು ಇವತ್ತು ಮತ್ತೆ ಬೆಟ್ಟದ ಕೆಳಗೆ ಹೋಗಿ, ಏರಿ ದೆ ಮಾನ್ಸೆರಾಟ್ ಒಳಗಿಂದ ಮತ್ತೆ ಇಲ್ಲಿಗೆ ಬರೋಣ” ಎಂದ ಕುಶಾಗ್ರ. “ಹಾಡಿದ್ದೇ ಹಾಡೋ ಕಿಸ್ಬಾಯಿ ದಾಸ ಅಂತ ನಾವ್ಯಾಕೋ ಮತ್ತೆ ಇಲ್ಲಿ ಹತ್ತಬೇಕು, ಮಾಡಕ್ಕೆ ಕೆಲ್ಸಾ ಇಲ್ವಾ, ಆಯ್ತಲ್ವಾ ನಮ್ಮ ನಂಬಿಕೆ ದೇವರು ಅದು ಇದು ಎಲ್ಲಾ, ನಡಿ” ಎಂದು ಹುಡುಗಿ ಅವರನ್ನೆಲ್ಲಾ ಎಳೆದುಕೊಂಡು ಹೋಗಲು ಪ್ರಯತ್ನಿಸಿದಳು.

“ಮತ್ತೆ ಅಷ್ಟೆಲ್ಲಾ ಯೂರೋಸ್ ಖರ್ಚು ಮಾಡೋಕೆ ಸಾಧ್ಯವಿಲ್ಲ, ದುಡ್ಡೇನು ಮರದ ಮೇಲೆ ಬೆಳೆಯುತ್ತಾ” ಎಂದು ಮನೆಯಲ್ಲಿ ಕೇಳುತ್ತಿದ್ದ ಡೈಲಾಗನ್ನೇ ಹುಡುಗಿ ಸಹ ಹೇಳಿದ್ದು, ಅವಳಮ್ಮನ್ನನ್ನ ನೆನಪಿಸಿತು. ನಾವು ಬೆಳೆಯುತ್ತಾ ಬೆಳೆಯುತ್ತಾ ಅಪ್ಪ ಅಮ್ಮನ ವಿಚಾರಧಾರೆಗಳನ್ನ ಅಥವಾ ಅವರ ಕಷ್ಟಗಳನ್ನ ಧಿಕ್ಕರಿಸುತ್ತಾ ಮತ್ತೆ ಅವರ ತದ್ರೂಪೇ ಆಗುವ ಮಕ್ಕಳೇ ಜಾಸ್ತಿ ಎಂದು ಅಂದುಕೊಂಡೇ ಅವಳು ಈ ಮಾತನ್ನು ಹೇಳಿದ್ದಳು.

ಭಾರತದಿಂದ ಇಲ್ಲಿಗೆ ಬಂದ ಐವರೂ ವಿದ್ಯಾರ್ಥಿಗಳು ಎಲ್ಲಾ ಮಿಡಲ್ ಕ್ಲಾಸ್ ಜನ. ಅಪ್ಪ ಒಬ್ಬರೇ ಕೆಲಸಕ್ಕೆ ಹೋಗುತ್ತಿದ್ದದ್ದು, ಫಾಲ್ಸ್ ಪ್ರೆಸ್ಟೀಜಿನ ಹಾಗೆ ಸರಿ ಹೋಗದಿದ್ದರೂ ಜಾಯಿಂಟ್ ಫ್ಯಾಮಿಲಿ ಎಂದು ಒಬ್ಬನೇ ಖರ್ಚು ವೆಚ್ಚ ನೋಡಿಕೊಂಡು ಮಿಕ್ಕವರೆಲ್ಲ ತಿಂದು ಉಂಡು ತೇಗುತ್ತಿದ್ದ ವರ್ಗಕ್ಕೇ ಸೇರಿದ್ದವರು. ಇಂತಹ ಸಂದರ್ಭದಲ್ಲಿ ಬೆಳೆದ ಮಕ್ಕಳು ಖರ್ಚು ವೆಚ್ಚದ ಬಗ್ಗೆ ವಿಪರೀತ ಹುಷಾರಾಗಿ ಇರುವವರು.

ಯಾವುದು ಶೋಕಿ, ಯಾವುದು ಜೀವನಕ್ಕೆ ಅವಶ್ಯಕ ಎಂಬುದರ ಬಗ್ಗೆ ಸರಿಯಾದ ಡಿಮಾರ್ಕೇಷನ್ ಹೊಂದಿದವರು. ಇಲ್ಲಿ ಬಂದಾಗಲೂ ಅಷ್ಟೆ ನನ್ನಲ್ಲಿ ಗೋಧಿ ಉಳಿದಿದೆ, ನೀನು ತಗೋಬೇಡ, ಅದರ ಬದಲು ನಿನ್ನಲ್ಲಿ ಉಳಿದಿರುವ ಅಕ್ಕಿ ಕೊಡು ಎಂದು 2 ಕಿಲೋಮೀಟರ್ ನಡೆದೇ ಗೆಳೆಯರ ಮನೆಗೆ ತಲುಪಿಸುವ ಜಾಯಮಾನ ಹೊಂದಿದವರು. ವಲಸೆ ಬಂದವರೇ ಇಲ್ಲಿ ಸಾಕಷ್ಟು ಆಸ್ತಿ ಪಾಸ್ತಿ ಮಾಡಿಕೊಂಡಿರುವುದು ಬಾರ್ಸಾದಲ್ಲಿ.

ಬೆಂಗಳೂರಿನಲ್ಲಿ ಹೇಗೆ ಮೂಲ ಬೆಂಗಳೂರಿಗರು ಸೌತ್ ಬೆಂಗಳೂರಿನ ಒಂದು ಮನೆಯಲ್ಲೇ ಇಡೀ ಆಯುಷ್ಯ ಕಳೆಯುತ್ತಾರೆ ಆದರೆ ಬೇರೆ ಊರಿಂದ ಬಂದವರಿಗೆ ಯಾವ ಏರಿಯಾ ಆದರೂ ಪರವಾಗಿಲ್ಲ, ಒಂದು ಮನೆ ಮಾಡಿಕೊಂಡರೆ ಸಾಕು ಎಂಬ ಮನಸ್ಥಿತಿಯಲ್ಲಿರುತ್ತಾರೆ ಹಾಗೆಯೇ ಇಲ್ಲಿ ಕೂಡ ಅದೇ ಆಗಿದೆ. ಕರೀರ್ ದಿ ಪದಿಯಾದಲ್ಲೇ ಮನೆ ಮಾಡಬೇಕು ಎಂಬುದು ಮೂಲ ಬಾರ್ಸಾದವರ ವ್ಯಥೆ, ವಲಸಿಗರು ದೂರದ ಬದಲೋನದಲ್ಲೂ ಮನೆ ಮಾಡಿದವರ ಕಥೆ ಬಹಳಷ್ಟಿದೆ.

ವಲಸಿಗರು ಬೇರೆ ಕಡೆ ಹೋದಾಗ ಅವರತನವನ್ನೇ ಇನ್ನೂ ಜಾಸ್ತಿ ತೋರಿಸೋದಕ್ಕೆ ಪ್ರಯತ್ನ ಮಾಡುತ್ತಾರೆ. ತಮ್ಮೂರಿನಲ್ಲಿ ಗಣೇಶನ್ನನ್ನು ಆ ದಿವಸವೇ ವಿಸರ್ಜನೆ ಮಾಡಿ ಕೆಲಸ ಕಡಿಮೆ ಮಾಡಿಕೊಳ್ಳಲು ಬಯಸಿದವರು ಬೇರೆ ದೇಶಕ್ಕೆ ಹೋದ ಮೇಲೆ ಐದೈದು ದಿವಸವೂ ಇಟ್ಟು ಪಾಂಗೀತವಾಗಿ ಪೂಜೆ ಮಾಡಿ ವಿಸರ್ಜನೆಯ ದಿವಸ ಸಿಹಿಯನ್ನೂ ಮಾಡಿ ಕೆರೆಗೆ ಮೂರ್ತಿ ಹಾಕಿ ಬರುತ್ತಾರೆ.

ಇಲ್ಲಿದ್ದಾಗ ಹುಡುಕಿಕೊಂಡು ಹೋಗಿ ಪೀಝಾ ತಿನ್ನೋರು ಅಲ್ಲಿ ಹೋದಾಗ ಕಡ್ಡಾಯವಾಗಿ ವುಡ್ ಲ್ಯಾಂಡ್ಸ್ ನಲ್ಲಿ ಇಡ್ಲಿ ತಿನ್ನುವ ಕೆಲಸ ಮಾಡುತ್ತಾರೆ ಇದೊಂಥರಾ ಅರ್ಥವಾಗದಿರುವ ಕಥೆ. ಇವೆಲ್ಲವನ್ನು ಯೋಚಿಸುವಾಗ ಮಾಂಸೆರಾಟ್ ಬೆಟ್ಟವನ್ನು ರೈಲಿನಲ್ಲಿ ಇಳಿದ್ದಿದ್ದೇ ಗೊತ್ತಾಗಲ್ಲಿಲ್ಲ ಹುಡುಗಿಗೆ. “ಟೆಲ್ ಸೀರಿಯಲ್ ಹೀರೋಯಿನ್ ಹಾಗೆ ನೋಡಿಕೊಂಡು ಕೂತಿದ್ದೀಯಾ” ಎಂದು ಕಿಚಾಯಿಸಿ ಏರಿ ದಿ ಮಾಂಸೆರಾಟ್ ಕೇಬಲ್ ಕಾರಿನಲ್ಲಿ ಹೋಗುವ ಸಾಲಿನಲ್ಲಿ ನಿಂತರು.

“ನೀನು ಕೇಬಲ್ ಕಾರಿನ ಚರಿತ್ರೆ ಏನು, ಇದು ವಿಶ್ವಯುದ್ಧದಲ್ಲಿ ಏನು ಮಾಡಿತ್ತು, ಹೋರಾಟದಲ್ಲಿ ಇದರ ಲೈನ್ ಕಟ್ ಆಗಿತ್ತಾ? ಎಂದೆಲ್ಲಾ ಪ್ರಶ್ನೆ ಕೇಳಿದರೆ ನಾವು ನಿನ್ನನ್ನ ಕೇಬಲ್ ಕಾರ್ ಇಂದ ತಳ್ಳುತ್ತೇವೆ, ಇದು ನಾವು ಕೊಡುತ್ತಿರುವ ವಾರ್ನಿಂಗ್” ಎಂದು ಕುಶಾಗ್ರ ಹೇಳಿದ ಹುಡುಗಿಗೆ.

“ಇದನ್ನೇ ಇಂಗ್ಲೀಷಿನಲ್ಲಿ ಹೇಳು ಪೊಲೀಸರು ಇಲ್ಲಿಗೆ ಬಂದು ನಿನ್ನನ್ನ ಎಳೆದುಕೊಂಡು ಹೋಗುತ್ತಾರೆ” ಎಂದು ಹುಡುಗಿ ಹೇಳಿದಕ್ಕೆ, ಮಿಕ್ಕ ಹುಡುಗರು ”ನೀನು ಸ್ವಲ್ಪ ಚಿಲ್ ಮಾಡಬೇಕು, ಬರೀ ಜಾಗ ನೋಡಿ ಅದರ ಬಗ್ಗೆ ಟ್ರಾವೆಲ್ ವ್ಲಾಗ್ ಮಾಡಬೇಕು, ಅದನ್ನ ಬಿಟ್ಟು ಹಳೇದನ್ನ ತಿಳಿದುಕೊಂಡು ಕೂತಿದ್ದರೆ ಸಕ್ಕತ್ ಬೋರ್ ಆಗತ್ತೆ” ಎಂದು ಸ್ವಲ್ಪ ಬುದ್ಧಿ ಹೇಳಿ ಅವಳನ್ನ ಇವತ್ತು ಚರಿತ್ರೆಯ ಒಂದು ಲೈನ್ನನ್ನೂ ಹೇಳಿಸದೆ ಇರಲು ಶಪಥ ತೊಟ್ಟರು.

ರವಿಚಂದ್ರನ್ ಸಿನಿಮಾದಲ್ಲಿ ಹೀಗೆ ಫಾರಿನ್ ಮತ್ತು ಈ ಥರದ ಲಕ್ಶುರಿ ವಿಷಯಗಳನ್ನ ಹುಡುಗಿ ಮೊದಲು ನೋಡಿದ್ದು. ಸ್ವಿಸರ್ಲೆಂಡ್ ಪಕ್ಕದ ಮನೆಯ ಹಾಗೆ ರವಿಚಂದ್ರನ್ ಏನೆಲ್ಲಾ ತೋರಿಸಿದ್ದರು ಎಂದರೆ ಒಮ್ಮೆ ಹೀಗೆ ಫಾರಿನ್ನಿಗೆ ಹೋಗಿ ಬರಬೇಕೆಂದು ಹುಡುಗಿಗೆ ಅನ್ನಿಸಿದ್ದು ಸುಳ್ಳಲ್ಲ. ಈ ಕೇಬಲ್ ಕಾರಿನಲ್ಲಿ ರವಿಚಂದ್ರನ್ ಸಿನಿಮಾ ಹೇಗೆ ಚಿತ್ರಿಸಬಹುದೆಂದು ಯೋಚನೆ ಮಾಡುತ್ತಾ ಇದ್ದಳು. ಗುಡ್ಡಗಳ ಮಧ್ಯದಲ್ಲಿ ಆಕಾಶದಲ್ಲಿ ಹಾರಾಡುವ ಭಾವನೆ ಬಂದಿದ್ದು ಹುಡುಗಿಗೆ ಸುಳ್ಳಲ್ಲ. ಹಳೇ ಮೊಹಮ್ಮದ್ ರಫೀ ಗಾನವನ್ನು ಹುಡುಗರು ಗುನುಗುತ್ತಿದ್ದರು.

“ಕನ್ನಡದಲ್ಲಿ ಒಂದು ಪದ್ಯ ಇದೆ, ಕುವೆಂಪು ಬರೆದಿರೋದು, ದೇವರು ರುಜು ಮಾಡಿದನು ಅಂತ, ಈ ಸೌಂದರ್ಯ ಗಾಡ್ಸ್ ಸಿಗ್ನೇಚರ್ ಎಂದು ಅರ್ಧಂಬರ್ಧ ಇಂಗ್ಲೀಷಿನಲ್ಲಿ ಕನ್ನಡದ ಪದ್ಯವನ್ನ ಅರ್ಥ ಮಾಡಿಸಲು ಹೆಣಗಾಡಿದಳು, ಇದು ಹಾಗೆ ಇದೆ “ ಎಂದಾಗ, “ಓಹ್ ಈಗ ಸಾಹಿತ್ಯ ಶುರು ಮಾಡಿಕೊಂಡಳು, ಮನುಷ್ಯನಿಗೆ ಹೀಗೆಲ್ಲಾ ಹುಚ್ಚುಗಳಿರಬಾರದು” ಎಂದು ಹುಡುಗರು ಗಹಗಹಿಸಿ ನಕ್ಕರು.

“ಆರ್ಟ್ ಗ್ಯಾಲರಿಗೆ ಇಲ್ಲಿ ಇಳಿಯಬಹುದು” ಎಂದು ಆಕಾಶದ ಮಧ್ಯೆ ನಿಲ್ಲಿಸುವ ಹಾಗೆ ನಿಲ್ಲಿಸಿದರು. ಸಾಲ್ವಾದೋರ್ ಡಾಲಿ, ಕ್ಲಾಡ್ ಮಾನೆಟ್, ಜುವಾನ್ ರುಬೆಲ್ಲ್ ಮುಂತಾದ ದೊಡ್ಡ ಕಲಾಕಾರರ ಕಲಾಕೃತಿಗಳು ಅಲಿ ಪ್ರದರ್ಶನಕ್ಕಿದ್ದವು. ಅಲ್ಲಿದ್ದ ಯಾವ ಕಲಾಕಾರರ ಹೆಸರನ್ನೂ ಕೇಳದೆ ಇದ್ದ ಜನರು ಯಾರೆಂದರೆ ಈ ಐವರು ಭಾರತೀಯರೇ.

ಫ್ರೀಯಾಗಿ ಕರೆದುಕೊಂಡು ಹೋಗುತ್ತಿದ್ದಾರೆ ನೋಡೋಣ ಬಾ ಎಂಬ ಮನಸ್ಥಿತಿಯಲ್ಲೇ ಐವರೂ ಒಳ ಹೊಕ್ಕರು. ಹೀಗೆ ಫ್ರೀಯಾಗಿ ಮ್ಯೂಸಿಯಮ್ ಸಮಾಚಾರದಲ್ಲಿ ಸ್ಟೂಡೆಂಟ್ ಗಳಿಗೆ ಒಮ್ಮೊಮ್ಮೆ ಬಿಟ್ಟಿ ಕ್ರಾಸೆಂಟ್, ಒಂದು ಗ್ಲಾಸ್ ವೈನು ಸಿಗುವ ಲಕ್ಷಣ ಇರುವುದರಿಂದ ವಿದ್ಯಾರ್ಥಿಗಳು ಇಂತದಕ್ಕೆ ಬೇಗ ನುಗ್ಗುತ್ತಾರೆ.

“ಇಲ್ಲಿ ಈಜಿಪ್ಶಿಯನ್ ಸಾರ್ಕೋಪೇಗಸ್ ಇದೆ, ಇದು 13ನೇ ಶತಮಾನ, ಬಿ ಸಿ ಯದ್ದು” ಎಂದು ದೊಡ್ಡ ಧ್ವನಿಯಲ್ಲಿ ಹೇಳಿದಾಗ “ಏನಿದು ಸಾರ್ಕೋಪೇಗಸ್” ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಈಜಿಪ್ಟ್ ಅಂದರೆ ಮಮ್ಮಿಗಳು ಎಂದಷ್ಟೇ ಡಿಸ್ಕವರಿ ಚಾನೆಲ್ ತಿಳಿದು ಗೊತ್ತಿದ್ದ ಹುಡುಗಿಗೆ ಯಾವುದೋ ಹೊಸ ರೀತಿಯ ಪೇಟಿಂಗ್ ಎಂದು ನೋಡಲು ಅಲ್ಲಿದವರ ಜೊತೆ ರನ್ನಿಂಗ್ ರೇಸ್ ಓಡುವ ಹಾಗೆ ಓಡಿ ಮೊನಾಲಿಸಾಳನ್ನು ನೋಡಲು ಅದೆಷ್ಟು ಕಾತುರವೋ ಅಷ್ಟು ಕಾತರತೆಯಿಂದ ಹೋಗಿ ಸಾರ್ಕೋಪೇಗಸ್ ಮುಂದೆ ನಿಂತಳು.

ಥೇಟ್ ನಮ್ಮ ಊರಿನ ಜಾತ್ರೆಗಳಲ್ಲಿ ದೇವರಿಗೆ ಮಾಡುವ ವಿಶೇಷ ಸುವರ್ಣಾಲಂಕಾರದ ಹಾಗೆ ಕಂಡಿತು. ತಲೆ ಆ ಕಡೆ  ತಿರುಗಿಸಿ ತಲೆ ಈ ಕಡೆ ತಿರುಗಿಸಿ ನೋಡಿದಳು. ಇದು ಮುಖವಾಡನೇ ಎಂದು ಅನ್ನಿಸುವಷ್ಟು ಮುಖಕ್ಕೆ ಹೊಡೆಯುತ್ತಿತ್ತು. ಸತ್ತ ವ್ಯಕ್ತಿಯ ದೇಹದ ಮೇಲೆ ಒಂದು ಥರದ ಸುಣ್ಣದಕಲ್ಲಿನಿಂದ ಆದ ಒಂದು ಬೇಸ್, ನಂತರ ಅದರ ಮೇಲೆ ಚಿನ್ನದ ಲೇಪನ, ಒಟ್ಟಿನಲ್ಲಿ ಸತ್ತ ಮನುಷ್ಯ ಬಹಳ ದೊಡ್ಡವನು ಅನ್ನುವುದನ್ನ ತೋರಿಸುತ್ತಿತ್ತು. ಚಿನ್ನದ ಲೇಪನ ಆದರೆ ಅವನು ದೊಡ್ಡವನು ಎಂಬ ಪ್ರತೀತಿ.

ಅದರೆ ಬಗ್ಗೆ ಪುಂಖಾನುಪುಂಖವಾಗಿ ಗೈಡ್ ಮಾತಾಡುತ್ತಾ ಹೋದರು. ಸಾವು ಎನ್ನುವುದರ ಬಗ್ಗೆ ಹುಡುಗರಿಗೂ ಮತ್ತು ಹುಡುಗಿಗೂ ಇದ್ದದ್ದು ಒಂದೇ ಅಭಿಪ್ರಾಯ. ಅದಕ್ಕೆ ಚಿನ್ನದ ಲೇಪನ ಮಾಡುವ ಅವಶ್ಯಕತೆ ಇಲ್ಲ ಎಂಬುದು. ಈಗಿನ ಪೀಳಿಗೆಯವರಿಗೆ ನ್ಯೂಸ್ ಚಾನೆಲ್ಲಿನಲ್ಲಿ ಯಾವ ಥರದ (ದೊಡ್ಡ ಅಥವಾ ಚಿಕ್ಕ)  ವ್ಯಕ್ತಿ ಸತ್ತರೂ  ಅವರನ್ನ ಯಾವುದೇ ಬೇಧ ಮಾಡದೇ ಬಾಡಿ ಎಂದು ಅಂದು ಸಂತಾಪ ಸಲ್ಲಿಸುತ್ತಾರಲ್ಲ ಅಷ್ಟೆ ಅದಕ್ಕೆ ಮಹತ್ವ ಎಂದು ಅಭಿಪ್ರಾಯ ಹೊಂದಿದ್ದರು.

ಪ್ರಾಣಾನೇ ಇಲ್ಲದ ದೇಹವನ್ನು ಅಟ್ಟಕೇರಿಸಿದರೆ ಏನು ಪ್ರಯೋಜನ ಎಂದೂ ತಲೆಯಲ್ಲಿ ಬಂತು ಮೆಜಾರಿಟಿ ಜನಾಭಿಪ್ರಾಯಕ್ಕೆ ವಿರುದ್ಧ ಪ್ರಶ್ನೆ ಕೇಳಿದರೆ ಎಲ್ಲಿ ಒದೆ ಬೀಳುತ್ತದೋ ಎಂದು ಅಲ್ಲಿಂದ ಕಾಲುಕಿತ್ತರು…

ಜಗತ್ತಿನ ದೊಡ್ಡ ಕೌತುಕ ಬರೀ ಒಂದು “ಬಾಡಿ”ಯಂತೆ ಕಂಡಿದ್ದು ಅವರಿಗೇ ಆಶ್ಚರ್ಯವಾಯಿತು. ಏರಿಯಲ್ಲಿ ಬಂದಿದ್ದ ನಶೆಯೆಲ್ಲ ಇಳಿದು ಮತ್ತೆ ಮರದ ನೆರಳಿಗೆ ಹೋದರು… ”ಇದರ ಬದಲು ಹುಡುಗಿಯ ಬೋರಿಂಗ್ ಚರಿತ್ರೆಯಲ್ಲೇ ಸ್ವಲ್ಪ ಟ್ವಿಸ್ಟ್ ಇರ್ತಿತ್ತು” ಎಂದು ನಕ್ಕು ಮುಂದಿನ ನಿಲ್ದಾಣಕ್ಕೆ ತೆರಳಿದರು.

September 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: