ಮಹಿಳಾ ದಿನದಂದು…ಗಡಿಯೂರ ನೆನೆಯುತ್ತಾ..

ಶೋಭಾ ಹಿರೇಕೈ ಕಂಡ್ರಾಜಿ.

**

ನೆನಪು ಒಂದು…

ಕೆಲಸಕ್ಕೆ ಸೇರಿ ಆಗಷ್ಟೇ ಬೆರಳೆಣಿಕೆಯ ತಿಂಗಳು ಕಳೆದಿದ್ದವು.ಪರಭಾಷೆಯ ಪರದೇಸಿ ಅನ್ನೋ ಕಾರಣಕ್ಕೋ ಏನೋ ನನ್ನ ಬಗ್ಗೆ ಒಂದು ವಿಶೇಷ ಮಮತೆ ಅಕ್ಕ ಪಕ್ಕದ ಶಾಲಾ ಶಿಕ್ಷಕ ಬಳಗದಲ್ಲಿತ್ತು. ಕಂಡಾಗಲೆಲ್ಲ ” ಚಿಗುಳೆ ಬಾಯಿ ನೀವು ಗ್ರೇಟ್‌ ಎನ್ನುತ್ತಲೇ ಮಾತಿಗಿಳಿಯುತ್ತ, ಅಲ್ಲಿನ ಕಷ್ಟ ಸಂಕಷ್ಟಗಳ ಕೆದಕುತ್ತಾ, ಹಾಗೇ ಒಂದಷ್ಟು ಸಮಾಧಾನವನ್ನೂ ತಾವೇ ಹೇಳಿ, ಹೆದರಬೇಡಿ ನಾವೆಲ್ಲ ನಿಮ್ಮೊಂದಿಗಿದ್ದೇವೆ ಎಂಬ ಕಾಳಜಿ, ಕನಿಕರ ಬೆರೆತ ನುಡಿಗಳನ್ನು ನನಗೆ ದಾಟಿಸಿಯೇ ಮುಂದೆ ಸಾಗುತಿದ್ದರು. ಹೀಗಿಪ್ಪ ಗಡಿಯೂರಲ್ಲಿ ಒಂದು ದಿನ ಮುಂಜಾನೆ ನಮ್ಮ ಮುಖ್ಯ ಗುರುಗಳು ಸೈಕಲ್ನಿಂದ ಇಳಿದವರೇ ಸೈಕಲ್ ಸ್ಟ್ಯಾಂಡ್ ನ್ನು ಹಾಕಲು ಮರೆತು , ಬಿದ್ದ ಸೈಕಲ್ ಎತ್ತಿಡುತ್ತ” ಬಾಯವ್ರ ವಿಷಯ ನಿಮ್ಮ ತನ್ಕ ಬಂತೇನ್ರಿ? ಬಾಳ ಆಘಾತ ಆತ್ರಿ ನಂಗಂತೂ…ಖರೆವಂದ್ರ ನಂಗೂ ಏನೂ ಮಾಹಿತಿ ಇದ್ದಿದ್ದಿಲ್ರಿ” ಎನ್ನುತ್ತಾ ಎಂಜಲು ನುಂಗಿಕೊಂಡ್ರು.ಅಷ್ಟಕ್ಕೂ ನನಗಲ್ಲಿ ಹೊರ ಜಗತ್ತಿನ ಸುದ್ದಿ ಹೇಳುವವರಾದರೂ ಯಾರು? ನಮ್ಮ ಮುಖ್ಯ ಗುರುಗಳ ಹೊರತಾಗಿ! ನಾನೋ ಅಂತ್ಪರ ಹರಿಯದೇ “ಸರ್ ಯಾರಿಗೆ ಏನಾಗಿದೆ ದಯವಿಟ್ಟು ಹೇಳಿ” ಅಂದೆ.

ಆಗವರಿಗೆ ನನಗಿನ್ನು ವಿಷಯ ಗೊತ್ತಿಲ್ಲ ಎಂಬುದು ಖಾತ್ರಿಯಾಗಿ, ” ಬಾಯವ್ರ …..ಆ ಶಾಲೆಯ ಮೂವರು ಶಿಕ್ಷಕರು ಸೇವೆಯಿಂದ ಅಮಾನತ್ ಆದರ್ರಿ ಎಂದು ಹೇಳುತ್ತಾ, ಉಸ್ಸೆಂದು ಸಂಕಟ ಪಡುತ್ತಾ ತಮ್ಮ ಕುರ್ಚಿ ಎಳೆದು ಕೊಂಡು ಕೂತರು.ನಂತರ ಇವರಿವರು ಎಂದು ಹೆಸರು ಹೇಳಿದರು.

ನಂಗೋ ಅಚಾನಕ್ ಆಗಿ ಬಂದ ಆಘಾತಕಾರಿ ಸುದ್ದಿ ಕೇಳಿ ಕೈಕಾಲು ಬಿದ್ದ ಅನುಭವ. ನನ್ನ ಮೊದಲ ಊಹೆ ಅವರಿಂದ ಹೆಣ್ಣು ಮಕ್ಕಳಿಗೇ ( ಅಲ್ಲಿಯ ವಿದ್ಯಾರ್ಥಿನಿಯರಿಗೆ) ಏನೋ ತೊಂದರೆ ಆಗಿರಬೇಕೆಂದು ,ಅದಕ್ಕೆ ತಕ್ಷಣ ಇಂತಹ ಆದೇಶ ಬಂದಿರಬೇಕೆಂದು, ನಾನೂ ಸಹ ಸಾವರಿಸಿಕೊಂಡು ಕೇಳಿದೆ ” ಸರ್ ಯಾಕಾಗಂತೆ?

ಅವರೆಲ್ಲಾ ಪಕ್ಕದ ಶಾಲೆಯ ವೃತ್ತಿ ಬಾಂಧವರು. ನನಗೂ ಪರಿಚಿತರೇ.. ಸಿಕ್ಕಾಗ ಹಿತೋಪದೇಶ ಹೇಳಿ ಕಳಿಸಿದವರೇ.. ಈಗ ಹೀಗಂದರೆ… ನನಗೂ ನಂಬಲಾಗುತ್ತಿಲ್ಲ. ಸರ್ ಸ್ವಲ್ಪ ಸುಧಾರಿಸಿಕೊಂಡು ಹೇಳಿದರು
” ಅವರ ಶಾಲೆಯ ಮಹಿಳಾ ಶಿಕ್ಷಕಿಗೆ ಬೇರೆ ಬೇರೆ ರೀತಿಯ ಟಿಂಗಲ್ ಪದಗಳನ್ನು ಬಳಸುತಿದ್ದರಂತೆ .ಕೊಂಕು ಮಾತುಗಳಿಂದ ರೋಸಿ ಹೋದ ಆ ಶಿಕ್ಷಕಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರಂತೆ…..
ಇಷ್ಟು ಹೇಳಿ ಅವರು ತಮ್ಮ ತರಗತಿಗೆ ಹೋದರು.

ನನಗೆ ಸುಧಾರಿಸಿ ಕೊಳ್ಳಲು ಪೂರ್ತಿ ದಿನವೇ..ಹಿಡಿಯಿತು.ಭಾಷೆ, ಊರು, ಜನ , ವೃತ್ತಿ ಎಲ್ಲವೂ ಹೊಸತೇ ಆಗಿರುವ ನನಗೆ ಇಂತ ಅನುಭವಗಳು ಕೂಡಾ ಹೊಸದೇ ಆಗಿದ್ದವು. ಆ ದಿನ ಪೂರ್ತಿ ನಾನು ಯೋಚನೆಯಲ್ಲೇ ಕಳೆದೆ. ನಾ ಕಂಡಾಗ ಲೆಲ್ಲ ಕಾಳಜಿ ತೋರಿದ ಅಂಥವರೇ….. ತಮ್ಮ ಸಹೋದ್ಯೋಗಿ ಶಿಕ್ಷಕಿಗೆ ಈ ರೀತಿ ಮಾತಾಡುತ್ತಿದ್ದರಾ?ಮತ್ತೂ..ಇನ್ನೆಷ್ಟು ಕಿರುಕುಳ ಕೊಟ್ಟಿರಬೇಕು … ತಾವೇ ಅಮಾನತ್ ಆಗುವಷ್ಟು! ಮತ್ತೆ ನನ್ನ ಆಪ್ತ ಶಿಕ್ಷಕಿ ಅದೆಷ್ಟು ಹಿಂಸೆ ಅನುಭವಿಸಿರಬೇಡ ? ಅವರನ್ನು ಅಮಾನತ್ ಮಾಡಿಸುವಷ್ಟು! ಅಬ್ಬಾ ! ಇಂತಹ ಸುದ್ದಿಗಳು ನನ್ನ ಊರ ಕಡೆ ಮಾತ್ರ ತಲುಪದಿರಲಿ ದೇವರೇ…..ದೂರ ಇರುವ ಮಗಳ ಕುರಿತು ಅಲ್ಲೆಷ್ಟು ಚಿಂತಿತರಾಗ ಬಹುದು ಅಲ್ಲಿ ನನ್ನ ಹೆತ್ತವರು ಎಂದು ಕೊಳ್ಳುತ್ತಲೇ… ಕೇಳಿದ ವಿಷಯವನ್ನು ಮರೆಯದೇ …ಅಥವಾ ಮರೆಯಲು ಬಿಡದೆ ಮತ್ತೆ ಮತ್ತೆ ನೆನಪಿಸಿಕೊಂಡಿದ್ದೆ. ಆದಷ್ಟು ಬೇಗ ಆ ಶಿಕ್ಷಕಿಯನ್ನು ನೋಡಬೇಕು, ಏನಾಗಿತ್ತೆಂದು ಕೇಳಬೇಕು ಅಂದುಕೊಂಡೆ. ಇದೊಂದು ಒಳ್ಳೆಯ ಪಾಠ ಕಲಿಸಿದಿರಿ ನೀವು ಎಂದು ಆ ದಿನದ ಡೈರಿ ಪುಟದಲ್ಲಿ ಬರೆದಿಟ್ಟೆ.

ನೆನಪು ಇನ್ನೊಂದು…

ಅದೊಂದು ಕಾಡ ನಡುನೆತ್ತಿಗೇ ಕುಂತಂತ ಕುಗ್ರಾಮ. ನೆತ್ತಿಯ ಬಗೆದು ಬೈತಲೆ ತೆಗೆದಿದ್ದಾರೋ ಎಂಬಂತೆ ಕಾಣುವ ಒಂದು ಚಿಕ್ಕ ಕಾಲುದಾರಿ ಮಾತ್ರ ನಮ್ಮನ್ನು ಆ ಊರಿಗೆ ತಲುಪಿಸಬಲ್ಲದು. ನಾನಿರುವಲ್ಲಿಂದ ಆ ಊರಿಗೆ ಕನಿಷ್ಠ ಹತ್ತದಿನೈದು ಮೈಲು ದೂರ. ಹುಳಂದ ಎಂದು ಆ ಊರಿನ ಹೆಸರು. ಅಲ್ಲಿರುವುದು ಒಂದೇ ಒಂದು ಕೊಠಡಿಯ ಕಿರಿಯ ಪ್ರಾಥಮಿಕ ಮರಾಠಿ ಶಾಲೆ. ಅದೊಂದೇ ಸರಕಾರಿ ಸವಲತ್ತು ಆ ಊರಿಗೆ .ವಿದ್ಯುತ್ ಸೌಲಭ್ಯ ಇತ್ತೋ ಇಲ್ಲೋ ದೇವರೇ ಬಲ್ಲ. ಬಹುಷ: ಅಲ್ಲಿನ ನೀರಿನ ಮೂಲ ಹುಡುಕಿಕೊಂಡು ಹೋಗಿ ಅದೊಂದೇ ಕಾರಣಕ್ಕೆ ಕಾಡು ಕಡಿದು ಮಾನವಕುಲ ಅಲ್ಲಿ ನಿಂತಿರಬೇಕು ಬಿಟ್ಟರೆ ಬೇರೆ ಯಾವ ಕೃಷಿ ಭೂಮಿಯೂ ಇರಲಿಲ್ಲ. ವಯಸ್ಸಿನ ಗಂಡು ಹೆಣ್ಷು ಮಕ್ಕಳೆಲ್ಲ ಕೆಲಸ ಹುಡುಕಿಕೊಂಡು ಗೋವಾ , ಅಥವಾ ಪುಣೆ ಕಡೆ ಹೊರಟು ಹೋಗುತ್ತಾರೆ.ಇದ್ದ ಹತ್ತು ಮನೆಗಳಲ್ಲಿ ಲೆಕ್ಕ ಮಾಡಿದರೆ ಹತ್ತಿಪ್ಪತ್ತೆ ಜನ ಸಿಗಬಹುದು…ಉಳಿದವರೆಲ್ಲ ಊರಿಂದ ಹೊರಗೆ. ನಾನಾಗ ಅವರಲ್ಲಿ ಕೆಲವರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲೋ… ಅಥವಾ ಹೆಸರನ್ನು ತೆಗೆಯಲೋ ಆ ಊರಿಗೆ ಹೋಗಬೇಕಾಗಿತ್ತು. ಮತದಾರರ ಪಟ್ಟಿ ಪರಿಷ್ಕರಣೆಯ ಮತದಾನ ಕೇಂದ್ರದ ಬೂತ್ ಲೆವೆಲ್ ಆಫೀಸರ್ ಆಗಿ ಡ್ಯೂಟಿ ಬಂದಿದೆ.ಡ್ಯೂಟಿ ಮಾಡಲೇ ಬೇಕು.ಅದರಲ್ಲೇ ಈ ಅಮಾನತ್ತಿನ ಬಾನಗಡಿಯ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ. ಅಮಾನವೀಯರ ನಡುವೆ ಮಾನವೀಯ ಮನುಷ್ಯರು ಇದ್ದೇ ಇರುತ್ತಾರೆ. ಇದ್ದರು ಸಹ.

ನಮ್ಮ ಮುಖ್ಯ ಶಿಕ್ಷಕರು ಒಬ್ಬಳು ವಿದ್ಯಾರ್ಥಿ ನಿಯ ಜೊತೆ ಮಾಡಿ , ಹೋಗಲು ದ್ವಿಚಕ್ರ ವಾಹನದ ವ್ಯವಸ್ಥೆ ಮಾಡಿಸಿ ನನ್ನನ್ನು ಹೇಗೋ ಆ ಊರು ತಲುಪಿಸಿದ್ದರು. (ಅಲ್ಲ ಕಾಡ ತಲುಪಿಸಿದ್ದರು) ಆ ಕಾಡಿನ ಊರಲ್ಲಿ ಮನೆ ಮನೆಗೆ ಹೋಗಿ ಬಾಗಿಲು ಬಡಿದರೆ ಹೊಸ ಸೇರ್ಪಡೆ ಮಾಡಬೇಕಾದ ಯಾರ ಸುಳಿವೂ ಇಲ್ಲ. ದಾಖಲೆಗಳೂ ಇಲ್ಲ. ಒಮ್ಮೆ ಈ ಊರಿಗೆ ಬರುವುದೇ ಹರ್ಮಾಗಾಲ ನಮಗೆ. ಇನ್ನೂ ಮತ್ತೆ ಇದೇ ಕೆಲಸಕ್ಕೆ ಹೇಗೆ ಬರಬೇಕು ಎಂಬ ಚಿಂತೆ ನನಗೆ. ಆಗ ನಮ್ಮ ಅವಸ್ಥೆ ಕಂಡ ಆ ಶಾಲೆಯ ಗುರುಗಳು “, ಚಿಂತೆ ಮಾಡಬೇಡಿ ಬಾಯಿ , ನಿಮ್ಮೂರಿಗೇ ನಮ್ಮ ಊರಿನ ಮಕ್ಕಳನ್ನು ಕಳಿಸೋ ವ್ಯವಸ್ಥೆ ಮಾಡಿಸ್ತೇವೆ.ಹೆಣ್ಮಕ್ಳು ಓಡಾಡೋ ದಾರಿ ಅಲ್ಲ ಇದು” ಎಂದು ನನಗೊಂದು ಮಹದುಪಕಾರ ಮಾಡಿ, ಹೇಳಿದಂತೆ ಆ ವರ್ಷ ಮತದಾರರ ಯಾದಿಗೆ ಹೊಸ ಸೇರ್ಪಡೆ ಯಾಗಬೇಕಿದ್ದ ಎಲ್ಲರನ್ನು ಕಳಿಸಿದ್ದರು, ಬೇಕಾದ ದಾಖಲೆಗಳನ್ನು ಅವರ ಕೈಯ್ಯಲ್ಲಿಟ್ಟು. ಮತದಾರರ ಪಟ್ಟಿಯ ಉಳಿದೆಲ್ಲಾ ಮಾಹಿತಿಗಳನ್ನು ತುಂಬಲು ಅಂದೇ ನೆರವಾಗಿದ್ದರು. ಇದು ನನಗೆ ಗಡಿಯೂರಲ್ಲಿ ಓರ್ವ ಶಿಕ್ಷಕರು ಮಾಡಿದ. ಮರೆಯಲಾರದ ಉಪಕಾರ.

ಮಗದೊಂದು ನೆನಪು….

ನಾನಿದ್ದ ಚಿಗುಳೆ ಎಂಬ ಊರಿನಿಂದ ಯಾವುದೇ ಕೆಲಸಕ್ಕೆ ಹೊರಗಡೆ ಬರಬೇಕೆಂದರೆ ನಸುಕು ಹರಿಯುವುದರೊಳಗೆ ಒಂದು ಬಸ್ಸು ಹೊರಡುತಿತ್ತು.ಮತ್ತು ಅದೇ ಬಸ್ಸು ರಾತ್ರಿ ಒಂಬತ್ತರ ಹೊತ್ತಿಗೆ ಹೊರಳಿ ಬಂದು ಇಲ್ಲೇ ಉಳಿಯುತಿತ್ತು.ಹಾಗಾಗಿ ಬೆಳಿಗ್ಗೆ ಹೊರಟ ನಾನು ಮತ್ತಿಲ್ಲಿ ತಲುಪುವುದು ರಾತ್ರಿಯೇ. ಆಗ ಖಾನಾಪುರದಿಂದ ಜಾಂಬೋಟಿಯವರೆಗೆ ಒಂದು, ಅಲ್ಲಿಂದ ಮತ್ತೊಂದು ಗೋವಾ ಬಸ್ ಹಿಡಿದು ಕತ್ತಲಾಗುವುದರೊಳಗೆ ನನ್ನೂರಿಂದ ಐದು ಕಿಮೀ ಹಿಂದೆ ಬಂದಿಳಿಯಬೇಕು. ಅಲ್ಲಿ ರಾತ್ರಿ ೮ ರವರೆಗೆ ಕಾಯಬೇಕು. ಅಲ್ಲಿ ಕಾಯುತ್ತ ಕುಳಿತಿರುತಿದ್ದ ನನ್ನ ನೋಡಿ ಬೆಳಗಾವಿಯ ಮೂಲದ ಕನ್ನಡದವರಾದ, ಪೋಸ್ಟ್ ಮ್ಯಾನ್ ರ ಕುಟುಂಬ ತಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸಿ ಬಸ್ ಹಚ್ಚಿಸಿ, ಬಸ್ ನಲ್ಲಿ ಬೇರೆ ಜನರಿದ್ದಾರೆಯೇ ಎಂದು ಗೊತ್ತಾದ ಮೇಲೆಯೇ ಕೆಳಗಿಳಿದು ಹೋಗುತಿದ್ದರು. ಇದು ಪ್ರತಿ ಸಲದ ಪುನರಾವರ್ತನೆ.ಪೋಸ್ಟ್‌ ಮ್ಯಾನ್ ಸರ್ ಬಸ್ ಹತ್ತಿ ಜನರಿದ್ದಾರೋ ನೋಡಿದರೆ ಅವರ ಪತ್ನಿ ನನ್ನ ಕೈ ಹಿಡಿದು ನಿಂತಿರುತಿದ್ದರು. ಹೀಗೆ ಹೆಂಡತಿಯ ಮಾತು ಕೇಳಿ ನನ್ನ ಸುರಕ್ಷಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದ ಅವರೂ ಒಬ್ಬರು ಮಾನವೀಯ ಗಂಡಸರೇ…

ಇಂದು ಮಹಿಳಾ ದಿನಾಚರಣೆ, ಮಾನವೀಯ ಗುಣದ ಇಂತಹ ಎಲ್ಲಾ ಪುರುಷ ಕುಲಕ್ಕೂ ಮಹಿಳಾ ದಿನದ ಶುಭಾಷಯಗಳು.

‍ಲೇಖಕರು avadhi

March 7, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. R. M.Hegde

    ತುಂಬಾ ಮಾರ್ಮಿಕವಾಗಿ ಬರೆದಿದ್ದೀರಿ.. ಅಭಿನಂದನೆಗಳು ಮೇಡಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: