ಇವರು.. ಸದಾನಂದ ಸುವರ್ಣ

ಡಾ ಜಿ ಎನ್ ಉಪಾಧ್ಯ

**

ಈ ಬಾರಿಯ ಬಿ. ವಿ. ಕಾರಂತ ಪ್ರಶಸ್ತಿಯು ಹಿರಿಯ ರಂಗತಜ್ಞ, ಕಲಾವಿದ ಸದಾನಂದ ಸುವರ್ಣ ಅವರನ್ನು ಹುಡುಕಿಕೊಂಡು ಬಂದಿದೆ.

ದೂರದ ಮುಂಬೈಯಲ್ಲಿ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ಸುವರ್ಣ ಅವರಿಗೆ ಈಗ 93ರ ಹರೆಯ.

ಅವರ ಆತ್ಮೀಯರಾದ ಡಾ ಜಿ ಎನ್ ಉಪಾಧ್ಯ ಅವರು ತಾವು ಕಂಡ ಸುವರ್ಣರನ್ನ ಇಲ್ಲಿ ಕಟ್ಟಿಕೊಟ್ಟಿದ್ದಾರೆ

**

ಕನ್ನಡ ರಂಗಭೂಮಿ ಹಾಗೂ ಚಲನಚಿತ್ರರಂಗದ ಸೃಜನಶೀಲ ಪ್ರತಿಭೆಗಳಲ್ಲಿ ಸದಾನಂದ ಸುವರ್ಣ ಅವರದು ಎದ್ದುಕಾಣುವ ಹೆಸರು. ದೂರದ ಮುಂಬೈಯಲ್ಲಿ ಅವರು ಗೈದ ಸಾಂಸ್ಕೃತಿಕ ಪರಿಚಾರಿಕೆ ಯಾರನ್ನೂ ಬೆರಗುಗೊಳಿಸದೇ ಬಿಡದು.ನಾಟಕಕಾರ, ನಟ, ರಂಗಭೂಮಿ ಹಾಗೂ ಸಿನಿಮಾ ನಿರ್ದೇಶಕ, ರಂಗತಜ್ಞ, ರಂಗಶಿಕ್ಷಕ, ಪ್ರಕಾಶಕ,ಹೀಗೆ ಹತ್ತಾರು ನೆಲೆಗಳಿಂದ ಬಹುಭಾಷಾ ರಂಗಭೂಮಿಯೊಡನೆ ಘನಿಷ್ಠ ಸಂಬಂಧವನ್ನು ಅವರು ಬೆಸೆದು ಉಳಿಸಿಕೊಂಡು ಬಂದವರು. ರಂಗಭೂಮಿ ಅವರ ಬದುಕಿನ ಅವಿಭಾಜ್ಯ ಅಂಗ. ಬದುಕಿನ ಯಥಾರ್ಥ ದರ್ಶನ ಸಾಧ್ಯವಾಗುವುದು ರಂಗಭೂಮಿಯಲ್ಲಿ ಎಂಬ ದೃಢ ನಿಲುವು ಅವರದಾಗಿತ್ತು. ಸುವರ್ಣ ಅವರು ರಂಗಭೂಮಿಯಲ್ಲಿಯೇ ಬೆಳೆದವರು. ಅದನ್ನೇ ತಮ್ಮ ಅನಂತ ಆಸಕ್ತಿಯ ಮಾರ್ಗವನ್ನಾಗಿ ಆಯ್ದುಕೊಂಡವರು.

ರಂಗಭೂಮಿಯ ಉತ್ಕಟ ಉಪಾಸಕರಾದ ಅವರ ಅನುಭವ ಬೆಳ್ಳಿತೆರೆಯಲ್ಲೂ ಮಿಂಚಿತು. ಸದಭಿರುಚಿಯ ಚಲನಚಿತ್ರ ಕ್ಷೇತ್ರದಲ್ಲಿಯೂ ಅವರು ಸೈ ಎನಿಸಿಕೊಂಡರು. ಸದಾನಂದ ಸುವರ್ಣ ಅವರಲ್ಲಿ ಎದ್ದು ಕಾಣುವ ಗುಣವೆಂದರೆ ಪ್ರಯೋಗಶೀಲತೆ. ಅವರ ಇಡೀ ಬದುಕು ಪ್ರಯೋಗಗಳಿಂದ ಕೂಡಿದ್ದು ವಿಶೇಷ. ಮುಂಬಯಿಯ ದೈನಂದಿನ ತಾಪತ್ರಯಗಳಲ್ಲಿ ಕಳೆದು ಹೋಗದೆ ಯಶಸ್ಸು ಬಂದಾಗ ಹಿಗ್ಗದೆ ಸಮಚಿತ್ತವನ್ನು ಕಾಯ್ದುಕೊಂಡು ಬಂದ ಸಂವೇದನಶೀಲ ಮನಸ್ಸು ಅವರದು. ಸಾಹಿತ್ಯ, ಸಂಗೀತ, ಸಿನಿಮಾ, ರಂಗಭೂಮಿ ಹೀಗೆ ಬದುಕಿನ ಬೇರೆ ಬೇರೆ ಕ್ಷೇತ್ರಗಳಿಗೆ ಕ್ರಿಯಾಶೀಲವಾಗಿ ಸ್ಪಂದಿಸಿದ ಸುವರ್ಣ ಅವರಲ್ಲಿ ರಸಿಕತೆ ಹಾಗೂ ವಿದ್ವತ್ತು ಚೆನ್ನಾಗಿ ಮೇಳೈಸಿಕೊಂಡದ್ದು ಅವರ ಯಶಸ್ಸಿನ ಗುಟ್ಟು.

ಸದಾನಂದರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯವರು. 1931ರ ಡಿಸೆಂಬರ್ 24ರಂದು ಜನಿಸಿದ ಅವರಿಗೆ ಎಳವೆಯಿಂದಲೇ ನಾಟಕಗಳ ಗೀಳು ಬಲವಾಗಿ ಅಂಟಿಕೊಂಡಿತು. ಬಡತನ ಕಾರಣವಾಗಿ ಚಿಕ್ಕಂದಿನಲ್ಲಿಯೇ ಹುಟ್ಟೂರು ತೊರೆದು ಮುಂಬಯಿಗೆ ಬಂದರು. ಮುಂಬಯಿಯ ಮೊಗವೀರ ರಾತ್ರಿ ಶಾಲೆ ಮುಂಬರುವ ಒಬ್ಬ ಸೃಜನಶೀಲ ಪ್ರತಿಭೆಗೆ ಪ್ರೋತ್ಸಾಹ ನೀಡಿತು. ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ವಿದ್ಯಾರ್ಥಿ ದೆಸೆಯಲ್ಲಿಯೇ ‘ಕುರುಡನ ಸಂಗೀತ’ ಎಂಬ ನಾಟಕವನ್ನು ಅವರು ಬರೆದು ನಿರ್ದೇಶಿಸಿ ಬದುಕಿನ ದಾರಿಯನ್ನು ಕಂಡುಕೊಂಡರು.ಕನ್ನಡದ ಜತೆ ಜತೆಗೆ ಹಿಂದಿ, ಗುಜರಾತಿ, ಮರಾಠಿ, ಇಂಗ್ಲೀಷ್ ನಾಟಕಗಳ ಆಳ-ಅಗಲಗಳ ಪರಿಚಯವನ್ನೂ ಮಾಡಿಕೊಂಡರು. ಮುಂಬಯಿಯ ಕನ್ನಡ ರಂಗಭೂಮಿಯನ್ನು ಗಟ್ಟಿಗೊಳಿಸಲು ಕಟಿಬದ್ದರಾದರು .

ಗೆಳೆಯರ ಗುಂಪೊಂದನ್ನು ಸೇರಿಸಿ ‘ಉದಯ ಕಲಾನಿಕೇತನ’ ಎಂಬ ಹವ್ಯಾಸಿ ನಾಟಕ ಸಂಸ್ಥೆಯೊಂದನ್ನು ಹುಟ್ಟುಹಾಕಿದರು. ತಾವೇ ಹತ್ತಾರು ನಾಟಕಗಳನ್ನು ಬರೆದು ಆಡಿಸಿದ್ದಲ್ಲದೆ ಹೊಸ ಮುಖಗಳಿಗೆ ಬಣ್ಣ ಹಚ್ಚಿ ಅಭಿನಯ ಕಲಿಸಿ ರಂಗಮಂಚದ ಮೇಲೆ ತಂದರು. ಹತ್ತು ವರ್ಷಗಳ ಕಾಲ ಸುವರ್ಣ ಅವರು ಬರೆದ ನಾಟಕಗಳು ಮುಂಬೈಯಲ್ಲಿ ಶಾಲಾ ವಾರ್ಷಿಕೋತ್ಸವಗಳಲ್ಲಿ ಸಂಘ-ಸಂಸ್ಥೆಗಳ ಸ್ನೇಹಸಮ್ಮಿಲನಗಳಲ್ಲಿ ಜಯಭೇರಿ ಬಾರಿಸಿದವು. ಕಲಾ ನಿಕೇತನಕ್ಕೆ ಹೊಸ ಕಳೆ ತರಲು ಸದಾನಂದರು ಮತ್ತೆ ವಿದ್ಯಾರ್ಥಿಯಾದರು. ಥಿಯೇಟರ್ ಟ್ರೈನಿಂಗ್ ಡಿಪ್ಲೊಮ ಕೋರ್ಸಿಗೆ ಸೇರಿಕೊಂಡರು. ಅಲ್ಲಿ ರಂಗತಜ್ಞರೊಂದಿಗೆ ಜಿಜ್ಞಾಸೆ ಆರಂಭಿಸಿದಾಗ ನಾನೊಬ್ಬ ನಿರ್ದೇಶಕ ಎಂಬ ಅಮಲು ಇಳಿದು ಹೋಯಿತು ಎಂದು ಇಂದಿಗೂ ಅವರು ಆ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ.

ಅನಂತರ ಭಾರತೀಯ ವಿದ್ಯಾಭವನದಿಂದ ಸಮೂಹ ಮಾಧ್ಯಮದಲ್ಲಿ ಡಿಪ್ಲೋಮ, ಪುಣೆಯ ಸಿನಿಮಾ ಮತ್ತು ಟೆಲಿವಿಜನ್ ಸಂಸ್ಥೆಯಲ್ಲಿ, ಚಲನಚಿತ್ರ ರಸಗ್ರಹಣ ಶಿಬಿರಾರ್ಥಿಯಾಗಿ, ಮುಂಬಯಿಯ ಐ.ಎ. ಸೊಸೈಟಿಯಲ್ಲಿ ಫೋಟೊಗ್ರಾಫಿಯಲ್ಲಿ ವಿಶೇಷ ತರಬೇತಿ ಪಡೆದರು. ರಂಗಭೂಮಿಯ ಹೊಸ ಸಾಧ್ಯತೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಕನ್ನಡ ನಾಟಕಗಳಿಗೆ ಹೊಸತನ ತುಂಬಿದರು. ದೊರೆ ಈಡಿಪಸ್ (ಅನುವಾದ ಪಿ. ಲಂಕೇಶ್), ಕದಡಿದ ನೀರು (ಜಿ.ಬಿ. ಜೋಶಿ), ಪ್ರಜಾಪ್ರಭುತ್ವ – ಲೊಳಲೊಟ್ಟೆ (ಶ್ರೀರಂಗ), ಧರ್ಮಚಕ್ರ ಮೊದಲಾದ ಐವತ್ತಕ್ಕು ಮಿಕ್ಕು ನಾಟಕಗಳನ್ನು ರಂಗದ ಮೇಲೆ ತಂದು ಯಶಸ್ವಿ ನಿರ್ದೆಶಕರಾಗಿ ಹೆಸರು ಮಾಡಿದರು. ಶಿಸ್ತುಬದ್ಧವಾಗಿ ನಾಟ್ಯ ಶಿಕ್ಷಣದ ಹಿನ್ನೆಲೆಯಲ್ಲಿ ತುಂಬಾ ಶ್ರಮ ವಹಿಸಿ ಅನೇಕ ರಂಗ ಪ್ರಯೋಗಗಳನ್ನು ಮಾಡಿದರು.

ಸ್ವತಃ ಲೇಖಕರಾಗಿ ಅನೇಕ ನಾಟಕಗಳನ್ನು ಬರೆದು ಆಡಿಸಿ ಹೊಸ ತಲೆಮಾರಿನ ಯುವಕರಲ್ಲಿ ರಂಗಾಸಕ್ತಿ ಮೂಡಿಸಿದರು. ಅವರು ಬರೆದ ರಜಪೂತ ಪವಾಡ, ಕುಲಗೌರವ, ರೂಪದರ್ಶನ, ಗುಡ್ಡದಭೂತ, ಭಗ್ನಮಂದಿರ ಮೊದಲಾದ ನಾಟಕಗಳು ತಂತ್ರದ ದೃಷ್ಟಿಯಿಂದ ಗಟ್ಟಿಯಾದವು; ರಂಗಭೂಮಿಗೆ ಹೇಳಿ ಮಾಡಿಸಿದಂಥವು. ಸುವರ್ಣ ಅವರು ಪರಿಪೂರ್ಣತೆಗಾಗಿ ಸದಾ ಹಂಬಲಿಸುತ್ತಾ ಬಂದವರು. ರಂಗಕ್ಕೆ ಹೊಸ ಬೆಳಕು ನೀಡಿದ ಅವರ ಸಾಧನೆಗಳು ಸೃಜನಶೀಲ ವ್ಯಕ್ತಿಗಳಿಗೆ ಒಂದು ಸ್ಫೂರ್ತಿ. ಮುಂಬಯಿಯ ಕನ್ನಡಿಗರ ಸಾಂಸ್ಕೃತಿಕ ಬದುಕಿಗೆ ಅರ್ಥಪೂರ್ಣ ಚಾಲನೆ ನೀಡಿದ ಸುವರ್ಣರು ವಿನಯಸಂಪನ್ನರು, ಸರಳ ಸಜ್ಜನಿಕೆಯ ಅಪೂರ್ವ ಚೇತನ.

ಬೆಳ್ಳಿ ತೆರೆಯ ಬದುಕು: ಸದಭಿರುಚಿಯ ಕನ್ನಡ ಸಿನಿಮಾಗಳನ್ನು ಚಿತ್ರರಸಿಕರಿಗೆ ಉಣಬಡಿಸಿದ ಕೀರ್ತಿಗೂ ಸುವರ್ಣ ಅವರು ಭಾಜನರಾಗಿದ್ದಾರೆ. ಸುವರ್ಣರು ಬರೆದ ‘ಗುಡ್ಡದ ಭೂತ’ ನಾಟಕ ನಾಡಿನಲ್ಲೆಡೆ ಜನಪ್ರಿಯವಾಯಿತು. ಇದರಿಂದ ಉತ್ತೇಜನ ಪಡೆದ ಅವರು ಒಂದು ಸಸ್ಪೆನ್ಸ್ ಸಿನಿಮಾ ಮಾಡಲು ಹೋಗಿ ಕೈಸುಟ್ಟುಕೊಂಡರು. ಆದರೂ ಧೃತಿಗೆಡದೆ ಸಾಲಸೋಲ ಮಾಡಿ ಪ್ರೊ. ಯು. ಆರ್. ಅನಂತಮೂರ್ತಿ ಅವರ ಸಣ್ಣ ಕಥೆಯಾಧಾರಿತ ಘಟಶ್ರಾದ್ದ ಚಿತ್ರವನ್ನು ನಿರ್ಮಿಸಿದರು. ಗಿರೀಶ್ ಕಾಸರವಳ್ಳಿಯವರ ಮೊದಲ ನಿರ್ದೇಶನದ ಈ ಘಟಶ್ರಾದ್ದ ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಜರ್ಮನಿಯ ಅಂತಾರಾಷ್ಟ್ರೀಯ ಪ್ರಶಸ್ತಿ ಹೀಗೆ ಹದಿನೆಂಟು ಪ್ರಶಸ್ತಿಗಳನ್ನು ಗಳಿಸಿ ದಾಖಲೆ ಮಾಡಿತು. ಮತ್ತೆ ಹೊಸ ಹುರುಪಿನಿಂದ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆಯನ್ನು ಆಧರಿಸಿ ಕುಬಿ ಮತ್ತು ಈಯಾಲ ಎಂಬ ಚಿತ್ರವನ್ನು ಸುವರ್ಣ ನಿರ್ದೇಶಿಸಿದರು.

ಇದಕ್ಕೆ ಶ್ರೇಷ್ಠಚಿತ್ರ, ಶ್ರೇಷ್ಠ ನಿರ್ದೇಶಕ ಮತ್ತು ಶ್ರೇಷ್ಠ ಕತೆ, ಹೀಗೆ ಮೂರು ರಾಜ್ಯ ಪ್ರಶಸ್ತಿಗಳು ಬಂದುದಲ್ಲದೆ ಇದು ಅಂತಾರಾಷ್ಟ್ರೀಯ ಚಿತ್ರೋತ್ಸವದ ಪನೋರಮ ವಿಭಾಗದಲ್ಲೂ ಪ್ರವೇಶ ಪಡೆಯಿತು. ಇದಲ್ಲದೆ ತಬರನ ಕತೆ, ಮನೆ, ಕ್ಷೌರ ಮುಂತಾದ ಪ್ರಶಸ್ತಿ ವಿಜೇತ ಚಿತ್ರಗಳ ನಿರ್ವಾಹಕ ನಿರ್ಮಾಪಕರಾದ ಸುವರ್ಣ ಜನಪ್ರಿಯ ಧಾರಾವಾಹಿ ಗುಡ್ಡದ ಭೂತ ನಿರ್ಮಿಸಿ ನಿರ್ದೇಶಿಸಿದ್ದಲ್ಲದೆ ಕೆಲವು ಗುಣಮಟ್ಟದ ಸಾಕ್ಷ್ಯ ಚಿತ್ರ ಮತ್ತು ಜಾಹೀರಾತು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಕೆಲವು ಸಿನಿಮಾ ಅಭಿರುಚಿಯ ಗೆಳೆಯರೊಂದಿಗೆ ದೃಷ್ಟಿ ಫಿಲ್ಮ್ ಸೊಸೈಟಿಯನ್ನು ಕಟ್ಟಿ ಬೆಳೆಸಿದರು. ಸುಮಾರು ಆರು ವರ್ಷಗಳ ಕಾಲ ಅನೇಕ ಪ್ರಶಸ್ತಿ ವಿಜೇತ, ಗುಣಮಟ್ಟದ ಪ್ರಾದೇಶಿಕ ಚಿತ್ರಗಳನ್ನು ಪ್ರದರ್ಶಿಸಿ ಈ ಸಂಸ್ಥೆ ಸದಭಿರುಚಿಯ ಪ್ರೇಕ್ಷಕವರ್ಗದ ನಿರ್ಮಾಣಕ್ಕೆ ಕಾರಣವಾಯಿತು.

ಮುಂಬಯಿಯಲ್ಲಿ ಕನ್ನಡ ರಂಗಭೂಮಿಯ ಜಾಗೃತಿಗಾಗಿ ಹವ್ಯಾಸಿ ರಂಗಭೂಮಿಯ ಏಳೆಗಾಗಿ ಶ್ರಮಿಸುತ್ತಾ ಬಂದವರು ಸುವರ್ಣ. ಸಾಹಿತ್ಯದಲ್ಲಿಯೂ ಅವರಿಗೆ ವಿಶೇಷ ಆಸಕ್ತಿ. ನಾಟಕಗಳಲ್ಲದೆ ಚಿನ್ನದ ಗೊಂಬೆ ಎಂಬ ಕಥಾ ಸಂಕಲನವೂ ಬೆಳಕು ಕಂಡಿದೆ. ‘ಉರುಳು’ ಇವರ ಒಂದು ಒಳ್ಳೆಯ ಅನುವಾದಿತ ನಾಟಕ. ಇಂಗ್ಲಿಷ್, ಬಂಗಾಲಿ ಮತ್ತು ಹಿಂದಿಯಿಂದಲೂ ನಾಟಕವನ್ನು ರೂಪಾಂತರಿಸಿದ್ದಾರೆ. ಇವರ ಉತ್ತಮ ಅನುವಾದವೂ ಸಹ ಮೂಲಕೃತಿಯಷ್ಟೇ ಮಹತ್ವದ್ದು. ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನವೊಂದನ್ನು ಸ್ಥಾಪಿಸಿ ಮುಂಬೈಯಲ್ಲಿ ಕಾರಂತ ಉತ್ಸವ ಮೊದಲಾಗಿ ಹತ್ತು ಹಲವು ಕನ್ನಡ ಕಾರ್ಯಕ್ರಮಗಳನ್ನು ರೂಪಿಸಿ ಮುಂಬೈಯಲ್ಲಿ ಕನ್ನಡತನ ಮಂಕಾಗದಂತೆ ನೋಡಿಕೊಂಡರು.

ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾರಂತ ದತ್ತಿನಿಧಿಯನ್ನು ಸ್ಥಾಪನೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಶಿವರಾಮ ಕಾರಂತರ ಯಶೋಗಾಥೆಯನ್ನು ಬಿಂಬಿಸುವ ಸುದೀರ್ಘ ಸಾಕ್ಷ್ಯಚಿತ್ರ ನಿರ್ಮಾಣ ಅವರ ಮತ್ತೊಂದು ಮಹತ್ವದ ಸಾಧನೆ. ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ‘ರಂಗಸ್ಥಳ’ ಎಂಬ ವೇದಿಕೆಯ ಮೂಲಕ ಯುವ ಕಲಾವಿದರಿಗೆ ರಂಗ ತರಬೇತಿ ನೀಡಿ ಹೊಸ ಹುಮ್ಮಸ್ಸು ನೀಡಿದರು. ಸುವರ್ಣಗಿರಿ ಪ್ರಕಾಶನದ ಮೂಲಕ ಹತ್ತಾರು ಬಹು ಮೌಲಿಕ ಕೃತಿಗಳನ್ನು ಪ್ರಕಟಿಸಿ ಯುವ ಪ್ರತಿಭೆಗಳನ್ನು ಲೋಕಮುಖಕ್ಕೆ ಪರಿಚಿಸಿದರು. ಸುವರ್ಣ ಅವರ ಬಹುಮುಖ ಪ್ರತಿಭೆಯನ್ನು ಮನ್ನಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸತ್ಕರಿಸಿದ್ದು ಅರ್ಹ ವ್ಯಕ್ತಿಗೆ ಸಂದ ಗೌರವವಾಗಿದೆ. ಇದಲ್ಲದೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ (2000), ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ(2002) ಗುರುನಾರಾಯಣ ಪ್ರಶಸ್ತಿಯನ್ನೂ ಪಡೆದ ಸುವರ್ಣರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದು ಉಲ್ಲೇಖನೀಯ ಅಂಶ. ಹೊರನಾಡಿನಲ್ಲಿ ಕನ್ನಡ ರಂಗಭೂಮಿಯ ಬಲವರ್ಧನೆಗೆ ತನು ಶುದ್ಧ ಮನ ಶುದ್ಧ ಭಾವ ಶುದ್ಧವಾಗಿ ಬಹುಕಾಲ ಶ್ರಮಿಸಿದ ಸದಾನಂದ ಸುವರ್ಣ ಅವರ ಜೀವನ ಸಾಧನೆ ನಾಡಿಗೆ ಮಾದರಿ. ಈಗ ಅವರ ಸಾಧನೆಗೆ ಸಂದ ಇನ್ನೊಂದು ದೊಡ್ಡ ಗೌರವ ಈ ಬಾರಿಯ ಕರ್ನಾಟಕ ಸರಕಾರ ನೀಡಿದ ಬಿ. ವಿ. ಕಾರಂತ ಪ್ರಶಸ್ತಿ.

   

‍ಲೇಖಕರು Admin MM

March 12, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: