ಮಹಾಮನೆ ಅಂಕಣ- ನಾಟ್ಕ ಮಾಡೋ ಹುಡ್ಗುನ್ಗ್ಯಾರಿ ಹೆಣ್‌ ಕೊಟ್ಟಾರೂ…

ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನಸ್ವಾಮಿ ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

4

ಅಲ್ರೀ… ಈ ಬಡಪಾಯಿ ಕವಿ ಹತ್ರ ಮತ್ತೇನು ಕೇಳಕಾಗುತ್ತೆ ಹೇಳಿ… ನಾಟ್ಕ ಆಡೋ ಮನುಷ್ಯನತ್ರ ಏನಿದ್ದಾತೂ ಅಂತಾ ನನ್ನವಳು ಬಯಕೆ ಅಂತೇಳಿ ಮಗಳ ಕುರಿತು’ ಕವಿತೆ ಬರೆಯಿರಿ ಎಂದು ಕೇಳಿರಬೇಕು… ನನಗೋಸ್ಕರ ಒಂದು ಬಂಗ್ಲೆ ಕಟ್ಸಿ ಅಂತಾನೊ… ವಜ್ರದ ನೆಕ್ಲೆಸ್ ಮಾಡ್ಸಿ ಅಂತಾನೊ… ಚಿನ್ನದ ಬಳೆ ತೊಡ್ಸಿ ಅಂತಾನೋ… ಹೊಸ ಕಾರೊಂದನ್ನು ಗಿಫ್ಟ್ ಮಾಡಿ ಅಂತಾನೊ… ಇಲ್ಲ ನನ್ನೆಸರಿನಲ್ಲೊಂದು ತಾಜ್‌ಮಹಲ್ ಕಟ್ಸಿ ಎಂದೋ ಕೇಳುವಂತವಳಲ್ಲ ನನ್ನ ಗಂಗಾ… ಅವಳಿಗೂ ಗೊತ್ತಿತ್ತು ನನ್ನ ಹಣಕಾಸಿನ ಪರಿಸ್ಥಿತಿ.

ನನ್ನ ಸಂಪತ್ತೊ… ಎರಡ್ಡೂತೆ ಜೋತಾಡೋ ಪೈಜಾಮ…ಜುಬ್ಬ… ಒಂದು ಜೊತೆ ಪ್ಯಾಂಟು ಶರ್ಟು… ಸದಾ ಹೆಗಲಮೇಲೆ ಇರುತ್ತಿದ್ದ ಕೆಂಪು ಶಾಲು… ಹಾಗೂ ನೇತಾಡೊ ಹೆಗಲ ಬ್ಯಾಗೂ… ಆಮೇಲೆ ಬ್ಯಾಂಕ್ ಕಾಲೋನಿಯ ಶ್ರೀನಿವಾಸನಗರದಲ್ಲಿದ್ದ ಶೀಟಿನ ಬಾಡ್ಗೆ ಮನೆ. ಮನೆ ಒಳಗೆ ಒಂದು ಸೀಮೆಣ್ಣೆ ಸ್ಟೊವ್… ನಾಲ್ಕು ಪಾತ್ರೆ… ಎರಡುತಟ್ಟೆ… ಮೂರು ಲೋಟ… ಸೌಟು-ಪಾಟು ಚಮಚ-ಗಿಮಚ ಇತ್ಯಾದಿ… ಒಂದು ಡ್ರಮ್ಮು… ಎರಡು ಬಕೆಟ್… ಒಂದು ತಂಬ್ಗೆ… ಎರಡು ಸೀಮೆಎಣ್ಣೆ ಡಬ್ಬ… ಒಂದು ಬಿಸಿನೀರು ಕಾಯಿಸುವ ಕಾಯಿಲ್ಲು… ಒಂದು ಚಾಪೆ… ಎರಡು ದಿಂಬೂ… ಎರಡೇ ಎರಡು ಹೊದಿಕೆ… ಯಾರಾದ್ರೂ ಗೆಳೆಯರೊ ಅಥವಾ ಅವರೊ ಇವರೊ ಬಂದ್ರೆ ಹಾಸಿಗೆಯನ್ನೇ ಸುತ್ತಿ ಅದರ ಮೇಲೆ ಇದ್ದ ಒಂದೇ ಒಂದು ಬೆಡಶೀಟು ಹಾಸಿ ಸೋಪಾ ಮಾಡಿ… ‘ಪ್ಲೀಸ್ ಟೇಕ್ ಯುವರ್ ಆನರಬಲ್ ಸೀಟ್’ ಎಂತಲೊ… ಅಥವಾ ‘ಆಪ್ ಪದಾರಿಯೆ ಎಂದೊ… ಮಹನೀಯರು ಆಸಿನರಾಗಬೇಕು’ ಎಂತಲೊ… ತುಂಬಾ ಆತ್ಮೀಯ ಗೆಳೆಯರಾದರೆ ‘ನಿನ್ನ ಅಂಡ್ ಊರ್ಲೆ ಇದರ ಮೇಲೆ’ ಅಂತೇಳಕ್ಕಿದ್ದ ಹಾಸಿಗೆ ಕಂ ಸೋಫಾ… ಅವತ್ತಿನ ಕಾಲಕ್ಕ ಐಷಾರಾಮಿ ಎನಿಸಿದ್ದ ಕಂತಲ್ಲಿ ಕೊಂಡಿದ್ದ…

ಬರೇ ಆರೇ ಆರು ಚಾನಲ್ ಬರುತ್ತಿದ್ದ ಅಕಾಯೋ ಎಂತದೋ ಟಿ.ವಿ. ಹಾಗೂ ಸದಾ ಪಂಚರ್ ಆಗಿರುತ್ತಿದ್ದ ಸೈಕಲ್ಲು… ಅದಕ್ಕೆ ಪೆಟ್ಲ ಸರಿ ಇದ್ರೆ…ಹ್ಯಾಂಡಲ್ ಸರಿ ಇರುತ್ತಿರಲಿಲ್ಲ… ಹ್ಯಾಂಡಲ್ ಸರಿಯಾದ್ರೆ… ಚೈನ್ ಸರಿ ಇರುತ್ತಿರಲಿಲ್ಲ… ಅದು ಸರಿಯಾದ್ರೆ ಟ್ಯೂಬ್ ಹೋಗ್ಬುಡದು… ಟ್ಯೂಬ್ ಹಾಕ್ಸಿದ್ರೆ… ಟೈರೇ ಗಾನ್ ಆಗ್ಬುಡದು… ಆಗ ನಾನು ಅಲ್ಲಿ ಇಲ್ಲಿ ಸ್ನೇಹಿತರ ನಾಟ್ಕಗಳಿಗೆ ಮೇಕಪ್ ಮಾಡ್ತಿದ್ದೆ… ಹಂಗಾಗಿ ಒಂದು ಮೇಕಪ್ ಕಿಟ್ಟು… ಆಮೇಲೆ ಒಂದ್ರಾಶಿ ಪುಸ್ತಕಗಳು ಅವನ್ನು ಇಡೋಕ್ಕೂ ಜಾಗ ಇಲ್ದೆ… ಆ ಪುಟ್ಟ ಮನೆ ತುಂಬಾ ಅವೇ ತುಂಬಿರುತ್ತಿದ್ದೊ… ಆನಂತರ ನಾನು ತುಂಬಾ ಜತನದಿಂದ ಕಾಪಾಡಿಕೊಂಡಿದ್ದ… ಜೋಪಾನ ಮಾಡಿದ್ದ ನನ್ನ ಆಸ್ತಿಯೂ ಆಗಿದ್ದ ನಾನು ಆಡಿದ ನಾಟ್ಕಗಳ ಒಂದಷ್ಟು ಫೋಟೋಗಳು… ಆಹ್ವಾನ ಪತ್ರಿಕೆಗಳು… ಸರ್ಟಿಫಿಕೇಟ್‌ಗಳು… ಅವೂ ಇವೂ ಏನೇನೊ… ಇವೇ ಕಣ್ರಿ ನನ್ನತ್ರ ಇದ್ದವು… ಮತ್ತೇ ಸ್ವಲ್ಪ ಶ್ರೀಮಂತಿಕೆ ಎನಿಸಿದ್ದ ‘ಗೋಡ್ರೇಜ್ ಬೀರು’ ಅದೂ ಸಾಲ ಬಿಡ್ರೀ…

ಆಮೇಲೆ ಕವಿತೆಗಳು ಎಂದು ಬರೆದಿಟ್ಟಿದ್ದ ಒಂದಷ್ಟು ಹಾಳೆಗಳು… ಅದರಲ್ಲಿ ಪೂರ್ತಿಯಾಗದ ಅರೆ ಬರೆ ಕವನಗಳೇ ಜಾಸ್ತಿ ಇದ್ದೊ ಕಣ್ರಪ್ಪಾ… ನಂತ್ರ ಬೀರುವಿನ ಮೇಲೆ ಪೇರಿಸಿಟ್ಟಿದ್ದ ಲಂಕೇಶ್ ಪತ್ರಿಕೆಗಳು… ನ್ಯೂಸ್ ಪೇಪರ್…ಸುಧಾ… ಮಯೂರ… ತುಷಾರ… ಮಲ್ಲಿಗೆ… ತರಂಗ… ಕಸ್ತೂರಿ ಹಾಗೂ ದೀಪಾವಳಿ ಸಂಚಿಕೆಗಳು.

ಆಮೇಲೆ ತಲೆ ತುಂಬಾ ಕನಸು… ಜೇಬಿನ ತುಂಬಾ ತೂತು… ಪಾಲೀಶೇ ಕಾಣದೆ ಇರೋ ಶೂ, ಒಂದು ಜೊತೆ ಹವಾಯ್ ಚಪ್ಲಿ… ಅವತ್ಗೆ ಅಂದ್ರೆ ಮದುವೆ ಆಗೋದಕ್ಕೆ ಮುಂಚೆ ನನ್ನ ಬಳಿ ಇದ್ದ ಆಸ್ತಿ ಇಷ್ಟೇ… ಮದುವೆ ಆದ ಮೇಲೆ ಚಿನ್ನಾ’ ಅಂತ ಬಂದಿದ್ದು… ನನ್ನ ಹೆಂಡತಿ ಗಂಗಾ… ಅವಳು ತನ್ನ ಮಾಲ್ಗಣ್ ಮುಖದಲ್ಲಿ ಬೆಳದಿಂಗಳ ತರ ಚೆಲ್ಲುತ್ತಿದ್ದ ಆ ಚೆಲುವಾದ ನಗು… ಮದುವೆ ಸಮಯದಲ್ಲಿ ಅವರಪ್ಪನ ಮನೆಯಲ್ಲಿ ಕೊಟ್ಟ ಅಷ್ಟೊ ಇಷ್ಟೋ ಒಡವೆ ವಸ್ತ್ರ … ಬೆಳ್ಳಿ ತಟ್ಟೆ ಚೊಂಬು… ನಮ್ಮಮ್ಮನ ಒಡವೆಯಿಂದ ಕರಗಿಸಿ ಮಾಡಿಸಿದ ತಾಳಿ ಚೈನು…ಬಳೆ…ಉಂಗುರ…ಆಮೇಲೆ ಮದುವೆ ಸಂದರ್ಭದಲ್ಲಿ ಬಂದ ಮುಯ್ಯಿ… ಇವಷ್ಟೇ ಕಣ್ರೀ ನಮ್ಮ ಶ್ರೀಮಂತಿಕೆ.

ಅಯ್ಯೋ ಹೇಳುವುದ ಮರೆತಿದ್ದೆ… ಮುಯ್ಯಿ ಅಂತ ಬಂದಿದ್ದ ಒಂದಷ್ಟು ದುಡ್ನ ಯಾರೋ ಕದ್ಬಿಟ್ಟಿದ್ರೂ ಕಣ್ರೀ… ಆ ಕಾಸಿಗೆ ನಾನು ನೋರೆಂಟು ಯೋಜನೆ ರೂಪಿಸಿದ್ದೆ… ಅದು ತಗೋಬೇಕು… ಇದು ತಗೋಬಹುದು ಅಂತ… ನನ್ನ ಪ್ಲಾನ್ ಎಲ್ಲಾ ಡಮಾರ್ ಆಗೋಯ್ತು… ಇಂತಪ್ಪ ನನ್ನನು ಮದುವೆಯಾಗಿ ಬಂದ ಮಡದಿಯು ಆಗ್ಗೆ ಹಿರಿಯೂರಿನ ಆದಿವಾಲದಲ್ಲಿ ಮಿಡಲ್ ಸ್ಕೂಲಿನಲ್ಲಿ ಹಿಂದಿ ಮೇಡಮ್ ಆಗಿ ಕೆಲಸ ಮಾಡುತ್ತಿದ್ದಳು…

ಮಲ್ಲಿ ಎಂಬ ನಾನು ಬೆಂಗಳೂರಿನ ಮಹಾನಗರ ಪಾಲಿಕೆಯ ಕಾಲೇಜೊಂದರಲ್ಲಿ ಗ್ರಂಥಪಾಲಕನಾಗಿಯೂ… ಆಗಾಗ ಮೇಸ್ಟ್ರಾಗಿಯೂ… ಉಪನ್ಯಾಸಕನಾಗಿಯೂ… ಸಾಂಸ್ಕೃತಿಕ ಪರಿಚಾರಕನಾಗಿಯೂ… ಟೂರ್ ಮ್ಯಾನೇಜರ್ ಆಗಿಯೂ… ಪರೀಕ್ಷಾ ಸಮಯದ ಮೇಲ್ವಿಚಾರಕನಾಗಿಯೂ ಅನೇಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ನಾಟಕದ ಮೇಸ್ಟ್ರಾಗಿಯೂ ಇದ್ದೆ… ಇದಕ್ಕೆ ಮೊದಲು ಒಂದಷ್ಟು ಕಾಲ ಕಮರ್ಶಿಯಲ್‌ ಸ್ಟ್ರೀಟಿನ ಬಳಿಯಿದ್ದ ಹೆಣ್ಣುಮಕ್ಕಳ… ಒಳ ಉಡುಪುಗಳ ಅಂಗಡಿಯಲ್ಲಿ ಸೇಲ್ಸ್ಮೆನ್ ಆಗಿಯೂ… ಆಗಾಗ ಭಟ್ಟ ಎಂಬ ಅಡಿಗೆ ಕಂಟ್ರಾಕ್ಟರ್ ಬಳಿ ಅಡಿಗೆ ಕೆಲಸಕ್ಕೆ ಹೋಗುತ್ತಾ ಮೇಲ್ವಿಚಾರಕ ಆಜ್ಞೆ ಮಾಡುವ ಎಲ್ಲಾ ಕೆಲಸಗಳನ್ನು ಮಾಡುತ್ತಾ ಅಂದರೆ ದಿನಸಿ ಸಾಮಾನುಗಳನ್ನು ಸಾಗಿಸುವುದು… ತರಕಾರಿ ಎಚ್ಚುವುದು… ನೀರು ತುಂಬುವುದು…ಊಟ ಮಾಡಲು ಕೂತವರ ಮುಂದೆ ಎಲೆ ಹಾಕುವುದು… ಲೋಟಕ್ಕೆ ನೀರಾಕುವುದು… ಹಿಂಗೆ ಏನೇನೊ ವೇಷ ಹಾಕಿ ದಶಾವತಾರಿಯಾಗಿದ್ದೆ ಕಣ್ರಪ್ಪಾ…

ನನ್ನ ‘ಅವತಾರ್’ ಕಥೆಯನ್ನು ಇನ್ನೊಮ್ಮೆ ಹೇಳ್ತೀನಿ… ಯಾವ್ಯಾವ ಅವತಾರಗಳನ್ನು ಎತ್ತಿದ್ದೆ… ಯಾವ್ಯಾವ ವೇಷ ಹಾಕಿದೆ… ಏನೇನು ಮಾಡ್ದೆ… ಏನೇನು ಅನುಭವಿಸಿದೆ… ಏನೇನ್ ಕಂಡೆ… ಏನೇನ್ ಉಂಡೆ… ನನ್ನ ಭಂಗ ಒಂದಾ ಎರಡಾ… ಓಹೋ ಅಂದೊಂದು ಭಾರೀ ಕಥೆ. ರಾಮಾಯಣ…ಮಹಾಭಾರತ…!!!

ನೋಡ್ರಪ್ಪ…ಇದು ನನ್ನ ಪೂರ್ವಾರ್ಧ ಕಥೆಯ ಸ್ಯಾಂಪಲ್ ಸ್ಟೋರಿ. ಎಲ್ಲರ ಬದುಕಲ್ಲೂ ಇಂತಹ ಅನೇಕ ಜೀವನಗಾಥೆಗಳು ಇರುತ್ತವೆ… ಎಲ್ಲರೂ ಎಲ್ಲಾ ಘಟ್ಟಗಳನ್ನು ಹಾಯ್ದು ಬಂದಿರುತ್ತಾರೆ… ಬೇರೆ ಬೇರೆ ರೂಪಗಳನ್ನು ಹಾಕಿ ಬಂದಿರುತ್ತಾರೆ…ವಿವಿಧ ಮಜಲುಗಳು…ವಿವಿಧ ಸ್ಥಿತ್ಯಂತರಗಳು… ವಿವಿಧ ಅನುಭವಗಳು…ವಿವಿಧ ಘಟನೆಗಳು… ವಿವಿಧ ಜನರು ಇವೆಲ್ಲವನ್ನೂ ಹಾಯ್ದು ಬಂದಿರುತ್ತಾರೆ… ಅವೆಲ್ಲವೂ ಅವರವರ ಜೀವನ ಕಥನಗಳೇ… ಅವುಗಳ್ಳೊಂದು ‘ಸಾಹಸ ಗಾಥೆಗಳೇ’ ಸರಿ. ಆ ಕಥನಗಳು… ಜೀವಪರವಾಗಿರಬೇಕು… ಸಾರ್ವತ್ರಿಕವಾಗಿರಬೇಕು. ಆಗ ಮಾತ್ರವೇ ಅದು ಸಮಾಜಕ್ಕೆ ಬೇಕಾಗುತ್ತದೆ… ಅದಕ್ಕೊಂದು ಮೌಲ್ಯ ಇರುತ್ತದೆ…. ಎಲ್ಲರ ಬದುಕಂತೆ ನನ್ನ ಬದುಕೂ ಸಹ… ಆದರೆ ಸ್ವಲ್ಪ ಭಿನ್ನ ಇರಬಹುದು… ಅವೆಲ್ಲವನ್ನು ಮುಂದಿನ ಮಾಲಿಕೆಯಲ್ಲಿ ನಿಮ್ಮ ಮುಂದೆ ಇಟ್ಟೇನು…

ಆ ಹಾ… ಮದುವೆಯ ವಿಚಾರವನ್ನು ಮಾತಾಡುತ್ತಿದ್ದೆ ಅಲ್ವಾ… ಆ ಕುರಿತು ಒಂದೆರಡು ಮಾತು ಬರೆದು ಮುಂದಕ್ಕೆ ಹೋಗುತ್ತೇನೆ… ನಮ್ಮದು ಸ್ವಲ್ಪ ಸಂಪ್ರದಾಯಸ್ಥ ಕುಟುಂಬ… ನನ್ನ ತಂದೆ ಕುಟುಂಬ ವ್ಯಾಪಾರಸ್ಥ ಮನೆತನ.

ನನ್ನ ತಾಯಿ ಕುಟುಂಬದವರೂ ವ್ಯಾಪಾರ ಸಪಾರ ಎಂದೂ ಎಕರೆಕಟ್ಟಲೆ ಜಮೀನೂ ಹೊಂದಿದ್ದ ಶ್ರೀಮಂತರು ಹಾಗೂ ತದನಂತರದಲ್ಲಿ ವಿದ್ಯಾವಂತರ ಕುಟುಂಬ… ಇಂತಹವರ ನಡುವೆ ನಾಟಕದ ಹುಚ್ಚತ್ತಿಸಿಕೊಂಡಿರುವ ನಾನು’ ಮೊದಲಿಗೆ ನಮ್ಮ ಮನೆಗಳಲ್ಲಿ ನಾಟಕ ಗೀಟ್ಕ’ ನೋಡೋಕ್ಕೆ ಹೋಗೊಂಗೂ ಇರಲಿಲ್ವಂತೆ… ಅಂತಹದ್ರಲ್ಲಿ ನಾನು ನಾಟಕದ ಹುಡುಗ’. ಯಾರು ಹೆಣ್ಣುಕೊಟ್ಟಾರು…’ ನಮ್ಮಪ್ಪ ಅವರ ನೆಂಟರಿಗೆಲ್ಲ ನನ್ನ ಮಗ ನಾಟ್ಕ ನಾಟ್ಕ ಅಂತೇಳಿ ಗಡ್ಡ ಪಡ್ಡ ಬಿಟ್ಕೊಂಡು… ಜುಬ್ಬ ಪಬ್ಬ ಹಾಕ್ಕೊಂಡು ಅಲ್ಲಿ ಇಲ್ಲಿ ಅಡ್ಡಾಡ್ತಾನೆ. ನೀವಾರ ಬುದ್ದಿ ಹೇಳ್ರಪ್ಪ ಅವನಿಗೆ…ಹಿಂಗಿದ್ರೆ ಯಾರು ಹೆಣ್‌ಕೊಟ್ಟಾರು… ಮೊದಲು ಅವನಿಗೆ ಗಡ್ಡ ಬೋಳ್ಸಕ್ಕೇಳಿ’ ಎಂದೇಳಿಕೊಂಡು ಪೇಚಾಡುತ್ತಿದ್ದರೆಂಬ ಸುದ್ದಿಯೂ ನನ್ನ ಕಿವಿಗೆ ಬಿದ್ದಿತು… ನನ್ನಮ್ಮನದು ಇನ್ನೊಂದು ತರದ ಪರಿತಾಪ…ನನ್ನ ಮಗ ಎಲ್ಲಿ ನಾಟ್ಕದ ಹುಡ್ಗೀನ ಕಟ್ಕೊಂಡ್‌ಬಂದು ಆಶೀರ್ವಾದ ಮಾಡು’ ಎಂದಾನೋ… ಅಥವಾ ಬೇರೆ ಜಾತಿಯವಳನ್ನ ಮದುವೆ ಆದಾನೋ’ ಎಂಬ ಆತಂಕ…

ಶ್ರೀನಿವಾಸ ನಗರದಲ್ಲಿ ನನ್ನ ಮನೆ ಪಕ್ಕದಲ್ಲೇ ಇದ್ದ ಮಿತ್ರ… ಒಂದು ಕಾಲಕ್ಕೆ ಪ್ರಗತಿಪರ ಚಳವಳಿಗಳ ಕಾರ್ಯಕರ್ತ, ಕಮ್ಯೂನಿಸ್ಟ್ ಸಿದ್ಧಾಂತದ ಪ್ರತಿಪಾದಕ… ಕಾಮ್ರೇಡ್ ಹಾಗೂ ವೃತ್ತಿಯಲ್ಲಿ ಟ್ಯಾಕ್ಸಿ ಚಾಲಕನಾದ ಮಳೆಯಾಳಿ ಮಾಧವನ್ ಬಳಿ ತಮ್ಮ ಅವಲತ್ತೂ ತೋಡಿಕೊಂಡು ಈ ವರ್ಷ ಬೇಗ ಮದುವೆ ಮಾಡಿಬಿಡಬೇಕು ಎಂದು ಹೇಳುತ್ತಾ ಬಹಳ ಮೆಲ್ಲಗೆ ನನ್ನ ಮಗ ಏನಾದ್ರೂ ಯಾರನ್ನಾದ್ರೂ ಪ್ರೀತಿಸಿ ಗ್ರೀತಿಸಿ ಇದಾನೆನಪ್ಪ… ನಿನ್ನ ಕೈಲೇನಾದ್ರೂ ಆ ಬಗ್ಗೆ ಹೇಳಿದ್ದಾನೇನಪ್ಪಾ ಎಂದು ಕೇಳಲಾಗಿ… ಆತನೊ ಅವನ ಮಲೆಯಾಳಿ ಶೈಲಿಯ ಕನ್ನಡದಲ್ಲಿ ಯಾನೋ, ‘ಮಲ್ಲಿಯೇ’, ಲವ್ವಾ ಚಾಧ್ಯಾವೇ ಇಲ್ಲ… ಅವನೊ ಹಾಗೆಲ್ಲ ಇಲ್ಲಮ್ಮ. ನೀವೂ ಚುಮ್ಮನಿರಿ… ಇಲ್ಲಿವರೆಗೂ ನ್ಯಾನು ಅವ್ಯನಲ್ಲಿ ಅಂತಾದ್ಯೇನೊ ಕಾಣೇ ಇಲ್ಲೆ ಎಂದು ಹೇಳಿದನೆಂಬ ಸುದ್ದಿಯೂ ನನ್ನ ಕಿವಿಗೆ ಬಿದ್ದಿತ್ತು.

ಆ ಮಾಧವನ್ ನನ್ನ ಬಗ್ಗೆ ಕೊಟ್ಟ ಸರ್ಟಿಫಿಕೇಟಿನಿಂದ ಸಮಾಧಾನಗೊಂಡ ನನ್ನಮ್ಮ ನನ್ನಲ್ಲಿ ನನ್ನ ಮದುವೆಯ ವಿಚಾರವನ್ನು ಪ್ರಸ್ತಾಪ ಮಾಡಿ ತನ್ನ ಅಣ್ಣತಮ್ಮಂದಿರಿಗೆ, ನೆಂಟರಿಷ್ಟರಿಗೆ ಹಾಗೂ ನನ್ನ ಅಕ್ಕಂದಿರಿಗೆ ಮತ್ತು ಅವರ ಗಂಡಂದಿರಿಗೆ ವಧೂನ್ವೇಷಣನೆಗೆ ಕರೆ ಕೊಟ್ಟರು…

ನನಗೋ… ನನ್ನ ಮದುವೆ ಆಗುವ ಹುಡುಗಿ ಹಾಗಿರಬೇಕು… ಹೀಗಿರಬೇಕು… ಬೆಳ್ಳಗಿರಬೇಕು… ಸಣ್ಣಗಿರಬೇಕು… ಎತ್ತರವಿರಬೇಕು… ಮಾವನ ಮನೆಯವರು ಶ್ರೀಮಂತರಾಗಿರಬೇಕು… ಮದುವೆ ಹೆಣ್ಣು… ಆಸ್ತಿ ಪಾಸ್ತಿ ತರುವಂತಳಿರಬೇಕು… ಇಂತಹ ಯಾವ ಸ್ಪೆಸಿಫಿಕೇಷನ್ನೂ ಇರಲಿಲ್ಲ… ವಿದ್ಯಾವಂತೆಯಾಗಿರಬೇಕು ಹಾಗೂ ಕೆಲಸದಲ್ಲಿರಬೇಕು ಮತ್ತು ನಾನು ನಾಟ್ಕ ಮಾಡೋದಕ್ಕೆ ಅಡ್ಡಿಪಡಿಸದಂತೆ ಸಮ್ಮತಿ ಸೂಚಿಸಬೇಕು… ಇವಿಷ್ಟೇ ನನ್ನಲ್ಲಿದ್ದ ಕೋರಿಕೆಗಳು…

ನಾನು ಮದುವೆ ಆಗುವುದಕ್ಕೆ ಎಂದು ನೋಡಿದ್ದು ಮೂರೇ ಹೆಣ್ಣುಗಳನ್ನು… ಒಂದು ಬಿಡದಿಯ ಸಂಬಂಧಿಕರ ಹೆಣ್ಣು… ಮತ್ತೊಂದು ಬೆಂಗಳೂರಿನ ನೆಂಟರ ಹುಡುಗಿ… ಮೂರನೇಯವಳೇ ನನ್ನ ಗಂಗಾ… ನೆಲಮಂಗಲದ ಬಳಿಯ ಮೈಲನಹಳ್ಳಿ ಮೂಲದ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನೆಲಸಿದ್ದ ಸಿದ್ಧಲಿಂಗಯ್ಯ ಹಾಗೂ ಲಿಂಗಮ್ಮನವರ ದ್ವಿತೀಯ ಪುತ್ರಿಯಾದ ಕೆ.ಎಸ್. ಗಂಗಾಂಬಿಕೆಯವರನ್ನು ನನ್ನಕ್ಕ ಡಿ.ಬಿ. ಸುಮಂಗಲಮ್ಮನರ ಪತಿದೇವರಾದ ವಾಚಾಳಿಯೂ, ತರ್ಕಗಳಲ್ಲಿಯೂ ಖ್ಯಾತರಾದ ರಾಜಶೇಖರಮೂರ್ತಿಗಳು ನೋಡಿದ ಹೆಣ್ಣು.

‘ಸ್ವಾಮಿ’ ಹೆಣ್ ನೋಡ್ಕೊಂಡು ಬರಾನ ಬನ್ನಿ… ಕುರುಬರ ಹಳ್ಳಿಯಲ್ಲಿ ಒಂದೆಣ್ಣದೆ… ಸ್ಕೂಲ್ ಟೀಚರೂ… ನನ್ನ ಪ್ರಂಡ್ನಾ ತಂಗಿ ಕಣ… ಮುಂದಿನ ಸ್ವಾಮಾರ ಸಂಜೆ ೫ ಗಂಟೆಗೆ ನವರಂಗ್ ಹತ್ರ ಬಂದ್ಬುಡಿ… ನೋಡಿ…ಮತಾಡಿ… ನಿಮಗೆ ಒಪ್ಪಿಗೆಯಾದ್ರೆ… ಮುಂದಿನ ಮಾತೂಕತೆ… ಆಮೇಲೆ ನಿಮ್ಮಪ್ಪಾಜಿನಾ ನಿಮ್ಮಮ್ಮ ಅವರನ್ನ ಕರೇಸ್ತೀನಿ… ಆಗ್ಬಹುದಾ ಅಂದ್ರು ನಮ್ಮ ಭಾವಾಜಿ…

ಹೆಣ್ಣ್ ನೋಡಕ್ಕ ಹೋಗ್ಬೇಕಲ್ವ… ಏನಾದ್ರೂ ಹಣ್ಣು…ಹೂ ಅದೂ ಇದೂ ತಗೊಂಡೋಬೇಕಲ್ವ… ಬರೀ ಕೈಲೋದರೆ ಚಂದ್ವೇ… ಒಂದೈವತ್ರೂಪಾಯಾದ್ರೂ ಬೇಡ್ವೆ… ನನ್ನತ್ರ ಹತ್ರೂಪಾಯಿ ಮಾತ್ರ ಅದೆ… ಅದು ಬಸ್ ಚಾರ್ಜ್ ಆಗ್ತದೆ… ಬಾಕಿದುಕ್ಕೇನ್ ಮಾಡ್ಲಿ… ಎಲ್ಲಿ ಇರ‍್ಲಿ… ಯಾರುನ ಕೇಳ್ಲಿ…ದುಡ್ಗೆ ಯಂಗಪ್ಪಾ ಮಾಡೋದಿಗಾ ಅಂತ ಲೆಕ್ಕಾಚಾರ ಹಾಕ್ತಿದ್ದಾಗ ಆರ್.ಜಿ.ಹಳ್ಳಿ ನೆನ್ಪಾದಾ… ಅವನ ಬಳಿ ಎಂಗಾರು ಮಾಡಿ ಐವತ್ತು ರೂಪಾಯಿ ಕೇಳೋದು ಅಂತ ಡಿಸೈಡ್ ಮಾಡಿದೆ… ಅವನು ಆಗ ವಿಜಯನಗರ ಬಡಾವಣೆಯಲ್ಲಿ ಒಂದು ಸರ್ಕ್ಯುಲೇಟಿಂಗ್ ಲೈಬ್ರರಿ ನಡೆಸುತ್ತಿದ್ದ… ಅಲ್ಲಿಗೆ ಹೊರಟೆ…

ಥತ್… ಅಲ್ಲಿ ಅವನಿಲ್ಲ… ಲೈಬ್ರರಿಗೆ ಬೀಗ ಹಾಕಿತ್ತು…

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: