ಕೃಷ್ಣಮೂರ್ತಿ ಬಿಳಿಗೆರೆ ಹೊಸ ಪುಟ್ಟ ಪದ್ಯಗಳು

ಕೃಷ್ಣಮೂರ್ತಿ ಬಿಳಿಗೆರೆ

ಮನುಷ್ಯರು
ಹಕ್ಕಿ ಪಕ್ಷಿಗಳಿಗೆ ಎಂದು
ಮುಚ್ಚಳದಲ್ಲಿ ಇಡುವ ನೀರು
ನೀರಲ್ಲ ಅಹಂ ಕೆಸರು

ಎರೆಹುಳು ಮೆತ್ತಗೆ ನಿಜ
ಅವು ಕತ್ತಲಲ್ಲಿರುತ್ತವೆ
ಅದೂ ನಿಜ
ಭೂಮಿಗೆ ನೀರ ಬಾಗಿಲಿಟ್ಟು
ನೀರು ಕುಡಿಸುತ್ತವೆ ಅದೂ ನಿಜ

ಮಣ್ಣು ತಿನ್ನುವ
ಎರೆಹುಳಕ್ಕೆ ಎಷ್ಟೊಂದು ಬುದ್ಧಿ
ಮಣ್ಣೇ ಬುದ್ಧಿ

ಎರೆಹುಳದ ಮಾತು
ಮಣ್ಣಿನ ಜೊತೆ ಮಾತ್ರ
ಮನುಷ್ಯರೇನಾದರೂ ಮಾತಾಡಿಸಿ ಕೆದಕಿದರೆ
ಹಿಂಗುತ್ತವೆ ಮಣ್ಣಿಗೆ
ಅರ್ಧ ದೇಹವ ಅಲ್ಲೆ ಬಿಟ್ಟು

ಎರೆಹುಳು
ರೈತನ ಗೆಳೆಯ ಎಂದರೆ
ಅವು ನಗುತ್ತವೆ
ರೈತರು ನೆಲಕ್ಕೆ ಬೆಂಕಿ ಇಟ್ಟಾಗ
ಅವು ಅಳುತ್ತವೆ

ಎರೆಹುಳುಗಳು
ತಮ್ಮ ತಂದೆ ತಾಯಿ ಗುರುಗಳು
ಯಾರೂ ಪಕ್ಕದಲ್ಲಿಲ್ಲದಿದ್ದರೂ
ಕತ್ತಲೆಯಲ್ಲಿದ್ದರು
ಚರಿತ್ರೆ ಬರೆಯುವುದ ನಿಲ್ಲಿಸುವುದಿಲ್ಲ

ಎರೆಹುಳುಗಳು
ಹೆಡೆ ಎತ್ತದಿದ್ದರೂ
ವಿಷ ಕಕ್ಕದಿದ್ದರೂ
ಅವುಗಳಿಗೆ ಗೌರವ ಕೊಡಬೇಕು

ಒಂದೊಂದು ಎರೆಹುಳಕ್ಕೂ
ಹೆಸರೇನೂ ಇರುವುದಿಲ್ಲ
ಹೆಸರಿಲ್ಲದಿದ್ದರೂ ಒಳ್ಳೆಯದು ಮಾಡಬಹುದು

ಹುಲ್ಲುಗರಿಕೆ ಇಲ್ಲದಿದ್ದರೆ
ನೆಲ ನೀರು ಕುಡಿಯುಲು ನಿರಾಕರಿಸುತ್ತದೆ
ಹುಲ್ಲಿನ ಬೇರು
ನೆಲಕ್ಕೆ ನೀರು
ಅದಕ್ಕೆ ದೊಡ್ಡವರು ಹೇಳುವುದು
ಚಿಕ್ಕದು ದೊಡ್ಡದು ಎಂಬುದಿಲ್ಲ ಎಂದು

ಹುಲ್ಲಿನ ಮೇಲಿನ ಇಬ್ಬನಿ
ಹುಲಿಗೂ ಅಲ್ಲ
ಮನುಷ್ಯರಿಗೆ ಮೊದಲೇ ಅಲ್ಲ
ಮೊಲ ನೆಂಚಿಕೊಂಡು ತಿನ್ನಲು

ಕೊಕ್ಕರೆಗಳು ಹುಲ್ಲಿನೊಳಗೆ ನಡೆದರೆ
ಅದೇ ಉಳುಮೆ
ಮಿಡತೆ, ಹುಲ್ಲು ನೊಣಗಳೇ ಫಸಲು
ಕೊಕ್ಕರೆಗಳೂ ರೈತರೇ

ಕೀಟಗಳನ್ನು
ಪುರಾತನ ಕಾಲದಿಂದಲೂ
ತಿನ್ನುತ್ತಲೇ ಇವೆ ಹಕ್ಕಿಗಳು
ಕೀಟಗಳು ಮಾತ್ರ
ಯಾರು ಎಷ್ಟು ತಿಂದರೂ ಹಾಡುತ್ತಲೇ ಇವೆ

ಉಳುಮೆ ನಡೆಯುತ್ತದೆ ಹುಲ್ಲು ಕಳೆಯಲು
ಹುಲ್ಲು ಹುಟ್ಟುತ್ತಿರುತ್ತದೆ ಹೂವು ಬೆಳೆಯಲು
ಹುಲ್ಲು ದೊಡ್ಡದು ಉಳುಮೆ ಚಿಕ್ಕದು

ಶಾಲೆಗೆ ಹೊಗದಿದ್ದರೂ
ಕೀಟಗಳು ಎಲೆಗಳ ಮೇಲೆ
ದಿನಕ್ಕೊಂದು ಬಗೆಯ ಅಕ್ಷರಗಳ ಬರೆಯುತ್ತವೆ
ತರತರದ ಚಿತ್ರ ಕೊರೆಯುತ್ತವೆ
ಹೂವಿನೊಳಗೆ ಹಣ್ಣಿನೊಳಗೆ ಕೂತು
ಪಾಸಾಗುತ್ತವೆ

ಜಾಲಿ ಮರದ ಕೊಂಬೆಯಲ್ಲಿ
ಕನಸಿನಂತೆ ಎಲ್ಲೋ ಕೂತ
ಹೆಬ್ಬೆಟ್ಟು ಗಾತ್ರದ ಜೀರುಂಡೆಗಳು
ಜೀಗುಡುವ ಶಬ್ಧಕ್ಕೆ ರಾತ್ರಿ ತಲೆಮರೆಸಿಕೊಳ್ಳುತ್ತದೆ
ಆಗ ಬೆಳಗಾಗುತ್ತದೆ

ನವಿಲಿಗೆ ಮೊಟ್ಟೆ ಇಡಲು ಬರುವುದಿಲ್ಲ
ಒಂದೇ ಕಡೆ ನಾಲ್ಕು ಮೊಟ್ಟೆ ಇಟ್ಟು
ಕಾವು ಕೂರುತ್ತದೆ
ಹಸಿದ ನರಿ ನವಿಲ ಎಬ್ಬಿಸಿ ನುಂಗುತ್ತದೆ
ಒಂದೇ ಕಡೆ ನಾಲ್ಕು ಮೊಟ್ಟೆ
ನರಿಯ ಹಸಿದ ಹೊಟ್ಟೆ

ನವಿಲಿಗೆ ಸರಿಯಾಗಿ
ಹಾರಲೂ ಬರುವುದಿಲ್ಲ ಓಡುವುದೂ ಅಷ್ಟೆ
ಕುಣಿತ ಚೆಂದ
ಕುಣಿದರೆ ಯಾರು ತಾನೆ ಕುಣಿಸದೆ ಬಿಡುತ್ತಾರೆ

ನಿಂತ ಮರದೊಳಗೆ
ನೀರು ನಿಂತಿದೆ
ಅದಕ್ಕೆ ಅದು ಮಳೆಯ ಕರೆಯುತ್ತಿದೆ

ಮರವೆಂದರೆ ಒಂದು ಊರು
ಆಕಾಶಕ್ಕೆ ಇಳಿಬಿಟ್ಟ ಹಸಿರು ನೀರು
ನೆಲದೊಳಗೆ ಅನೂಹ್ಯ ಬೇರು
ಅದರಡಿಯಲ್ಲಿ ಕೂತಿದ್ದಾನಲ್ಲ ಅವನು ಯಾರು

ಬೆಂಕಿಯನ್ನು ಬಿಟ್ಟು ಮೇಯಿಸಬಾರದು
ಕಟ್ಟಿ ಹಾಕಿಯೂ ಮೇಯಿಸಬಾರದು
ಅದನ್ನು ಒಲೆಯೊಳಗಿಟ್ಟು
ಬೇಯಿಸಬೇಕು

ಎರೆಹುಳು ಇಟ್ಟ
ಮಿಲಿಗ್ರಾಂ ಹಿಕ್ಕೆಯ ಲೆಕ್ಕ ಇಟ್ಟರೆ
ಮರವೊಂದರ ಎಲೆಯ ಲೆಕ್ಕ ಸಿಕ್ಕುತ್ತದೆ

ಎರೆಹುಳು ಕಕ್ಕಸ್ಸು ಮಾಡಿದರೆ
ಅದು ಪ್ರಸಾದ
ಜೇನುಹುಳು ಉಗಿದರೆ
ಅದೇ ತೀರ್ಥ

ಭೂಮಿ ನಕ್ಕು ಹೂ ಬಿಡಲು
ಒಣ ಎಲೆಗಳ ಮಿಂಚು ಹೊಡೆಯ ಬೇಕು
ಗೆದ್ದಲು ಪೂಜೆ, ಎರೆಹುಳುಗಳ ಮೆರವಣಿಗೆ ನಡೆಯಬೇಕು
ತೇವ ತಾಯಿಯ ಜೊತೆಗೆ ಸಗಣಿ ದೇವರು ಬರಬೇಕು

ಭೂಮಿ ಆಕಾಶದಲ್ಲಿ ತೇಲುತ್ತಿದ್ದರೂ
ಹಗುರವಲ್ಲ
ಟೊಳ್ಳಲ್ಲ
ಎಷ್ಟು ಬೆಳೆಯನ್ನಾದರೂ ತೆಗೆಯಬಹುದು
ಒಂದೇ ಶರತ್ತು
ಮನುಷ್ಯರು ತಮ್ಮ ದುರಾಸೆಯ ಬಾಣಲೆಯಲ್ಲಿ
ಬೀಜಗಳ ಉರಿಯಬಾರದು ಅಷ್ಟೆ

ಬೇಸಾಯ ಒಳ್ಳೆಯದೆ
…ರೆ
…ರೆ
…ರೆ

…………………..

ದೊಡ್ಡ ಮರ ನಿಂತಿದೆ
ನೆರಳು ಸುರಿಸುತ್ತಿದೆ
ಮನುಷ್ಯ ಅದರಡಿಯಲ್ಲಿ ಕುಂತಿದ್ದಾನೆ
ಕುದಿಯುತ್ತಿದ್ದಾನೆ ಹಲ್ಲು ಕಡಿಯುತ್ತಿದ್ದಾನೆ
ನಾಳೆ ಮರ ಕಡಿಯುತ್ತಾನೆ

ಭೂಮಿ ಮೇಲಿನ ಮಣ್ಣ ಪಾತ್ರೆಯ ನೀರು
ಗಿಡಗಳಿಗೆ ಮರಗಳಿಗೆ
ಹಕ್ಕಿ ಪಕ್ಷಿ ಮನುಷ್ಯರಿಗೆ ಮುಕ್ತ
ಭೂಮಿಯಾಳದ
ಪಾತಾಳ ಪಾತ್ರೆಯ ನೀರು ನೀರಲ್ಲ
ನೆಲದ ರಕ್ತ

ಪ್ರಾಣಿ ಪಕ್ಷಿ ಗಿಡ ಮರ
ರಾಷ್ಟ್ರಗೀತೆ ಹಾಡುವುದಿಲ್ಲ
ಕರೆನ್ಸಿ ಭೂಪಟಗಳ ಗಡಿ ನುಡಿಗಳ ಹಂಗಿಲ್ಲ
ಮನುಷ್ಯರು ಮಾತ್ರ
ಕರೆಂಟು ಮುಳ್ಳು ಬೇಲಿಗೆ
ತಮ್ಮ ತಮ್ಮ ರಾಷ್ಟ್ರಗಳ ಗೂಟಕ್ಕೆ
ನವಿಲು ಹುಲಿ ಹೂವುಗಳ
ಸಿಂಹ ಆಸ್ಟ್ರಿಚ್ ಕಾಂಗರು ಕಾಯಿಗಳ
ಕಟ್ಟಿ ಸಾಯಿಸುತ್ತಾರೆ ಮೇಯಿಸುತ್ತಾರೆ
ಇವರೇ ಮನುಷ್ಯರು

ಬೇಲಿಯ ಬುಡ ಮೆತ್ತಗೆ
ಹುಟ್ಟುವ ಬೀಜಗಳಿಗೆ ಹೊಟ್ಟೆ
ಕಟ್ಟುವ ಗೂಡುಗಳಿಗೆ ಮೆತ್ತೆ
ಉಣ್ಣುವ ಊಟಕ್ಕೆ ತಟ್ಟೆ

ಬೇಲಿಯೊಳಗೆ
ಏನು ಬಿದ್ದರೂ ಅದು ಬೀಜ
ಬೇಲಿಯ ಜಾಲ ಆಕಾಶ ಪಾತಾಳ
ಹುಟ್ಟುತ್ತದೆ ಗಿಡವಾಗಿ ಮರವಾಗಿ
ಹೂವಾಗಿ ಜೇನಾಗಿ ಹಾವು ಮುಂಗುಸಿಯಾಗಿ

ಬೀಜವ ಗೂಡಲ್ಲಿಟ್ಟು
ಎಷ್ಟು ಕಾದರೂ ಮೊಳಕೆಯ ಸದ್ದಿಲ್ಲ
ಸ್ಪೋಟವಿಲ್ಲದೆ ಬೀಜದಾಟವಿಲ್ಲ

ಬಯಲಲ್ಲಿ ಬಿಸಿಲಲ್ಲಿ
ಕತ್ತಲೆಯಲ್ಲಿ ಬೆಂಕಿಯ ಬಗಲಲ್ಲಿ
ಮನುಷ್ಯರ ಝಳದಲ್ಲಿ
ಪ್ರಾಣಿ ಪಕ್ಷಿಗಳ ದವಡೆಯಲ್ಲಿ
ಮೊಳಕೆಯೊಡೆದು ಮರವಾಗುವುದಿದೆಯಲ್ಲ
ಬೀಜಕ್ಕೆ ದೊಡ್ಡ ಸವಾಲು, ಮನುಷ್ಯರು ಬೀಜವಾಗುವುದು ಮೇಲು

ಬಳ್ಳಿಗಳ ಹೊಸ ಕುಡಿಗಳನ್ನು
ಹುಷಾರಾಗಿ ಕಾಪಾಡಬೇಕು
ಅವು ಸಹಸ್ರ ಮಾನದ ಸಾಲ
ಮುಂದೆ ಅವುಗಳದೆ ಕಾಲ
ಮಕ್ಕಳ ಹೊಸ ಬೆಳೆ ಮಕ್ಕಳೂ ಕುಡಿಗಳೆ

ಫುಕುವೋಕಾ ಬಳ್ಳಿ ಎಡವಿ
ಕುಂಬಳ ಕಾಯಿಯ ಬಳಿ ಬಂದು ಬೀಳುತ್ತಾನೆ
ನಕ್ಕು ಕುಂಬಳಕಾಯಿಯ ಪಲ್ಯ ಮಾಡಿಕೊಂಡು
ತಿನ್ನುತ್ತಾನೆ
ಎಡವಿದರೆ ಹೀಗೆ ಎಡವಬೇಕು
ಎಡವುವ ಮುನ್ನ ಕುಂಬಳ ಕಾಯಿ ಬೆಳೆಯಬೇಕು

ಫುಕುವೋಕಾ ಕತ್ತಲಾದರೆ
ಎಣ್ಣೆಯ ದೀಪ ಹಚ್ಚುವುದಿಲ್ಲ
ಹಾಡು ಬಿಚ್ಚುತ್ತಾನೆ ಕಣ್ಣಲ್ಲಿ ನಿದ್ದೆಯ ದೀಪ

ಫುಕುವೋಕಾ ದಡ್ಡ
ವಿಜ್ಞಾನಿ ಪಟ್ಟಕ್ಕೆ ಚಟ್ಟ ಕಟ್ಟಿ
ತಿಂಗಳ ಸಂಬಳ ಬಿಟ್ಟು ಬಂದ
(ತಿಂಗಾ ತಿಂಗಳಿಗೂ..)
ಮಳೆಗೆ ನೆಂದ ಮಣ್ಣಿಗೆ ಮಣ್ಣು ತಿಂದ
ಸೊಗಸು ಕ್ಯಾರೆಟ್ಟು ಗೆಣಸು ಬೆಳೆದು ಮಿಂದ
ಇದೀಗ ದಡ್ಡನ ಕುರಿತು ವಿಚಾರ ಸಂಕಿರಣ
ಪೂಜೆ ಪುರಸ್ಕಾರ ಭಣ ಭಣ

ಉಕ್ಕಿನ ಚೂಪು ತುದಿಯ ರಕ್ತದ ನೇಗಿಲಲ್ಲಿ
ಉಳುಮೆ ಮಾಡುವವರ ಕಂಡರೆ
ಎರೆಹುಳಕ್ಕೆ ನಗು
ಗಾಯಗೊಂಡ ಎರೆಹುಳು
ನಗುತ್ತಲೇ ಉಳುಮೆ ಮುಂದುವರಿಸುತ್ತದೆ

ಮನುಷ್ಯರು ಸತ್ತರೂ
ಸುಮ್ಮನೆ ಮಲಗುವುದಿಲ್ಲ
ನೋಡಿ ಹೇಗೆ ಪ್ರತಿಮೆಯಾಗಿ
ಎದ್ದು ಗದ್ದಲ ಮಾಡುತ್ತಿದ್ದಾರೆ

ನಿನ್ನ ದೇಹ ಬಗ್ಗಿ
ನೆಲಕ್ಕೆ ನಮಸ್ಕರಿಸುವಾಗ
ಮಡಿಲಲ್ಲಿದ್ದ ಕುಂಬಳ ಬೀಜ
ನೆಲಕ್ಕೆ ಉದುರಿದರೆ ನೆಲಕ್ಕೇನು
ನಿನಗೇ ಲಾಭ

ಮನುಷ್ಯರು ನಗುವಾಗ
ಹುಷಾರಾಗಿರಬೇಕು
ಆಗ ಕಣ್ಣು ಕಾಡುವುದಿಲ್ಲ
ಕಿವಿ ಕೇಳುತ್ತಿರುವುದಿಲ್ಲ

ಗಿಡ ಮರಗಳಂತೆ
ಹೂ ಮುಡಿಯುತ್ತಿದ್ದ ಮನುಷ್ಯರೀಗ
ಬಾಯಲ್ಲಿ ಮುಳ್ಳು ಮೆತ್ತಿಕ್ಕೊಂಡು ಮುತ್ತು ಕೊಡುತ್ತಿದ್ದಾರೆ
ಎಲ್ಲರ ಬಾಯಲ್ಲು ರಕ್ತ

ಮನುಷ್ಯರ ತಲೆ ನೋವುಗಳಿಗೆ
ಮದ್ದಿಲ್ಲ
ಅವರ ತಲೆ ತುಂಬಾ ಮದ್ದು

ತೋಟದ ದಾರಿಯಲ್ಲಿ
ನನ್ನ ಕಣ್ಣಿಗೆ ಬೀಳುವ ಹುಳಕ್ಕೆ ಸಾವು
ನನಗೆ ನೋವು
ನೋವು ದೊಡ್ಡದೋ ಸಾವು ದೊಡ್ಡದೋ

ಮನುಷ್ಯರು ಎಂದರೆ
ಏನು ಎಂದರೆ
ಸ್ವಯಂ ತೊಂದರೆ

ಮನುಷ್ಯರಿಗೆ
ಮನುಷ್ಯರದೇ ಭಯ
ಲಕ್ಷಾಂತರ ಯುದ್ಧಗಳ ನೆನಪು ಸುಮ್ಮನೆ ಅಲ್ಲ

ಮನುಷ್ಯರಿಗೆ
ಸಾವಿಲ್ಲ
ಸಾಯಲು ಬದುಕಿರಬೇಕಲ್ಲ

ಮನುಷ್ಯರು ತಲೆಮಾರುಗಳ
ತಲೆ ಮೇಲೆ ಹೊತ್ತು ನಿಂತಿದ್ದಾರೆ
ಆಕಾಶದೆತ್ತರಕ್ಕೆ

ನಾನು ಸಾಕಿರುವ ಸಾವಿಗೆ ಆಳವಾದ ಗಾಯವಾಗಿದೆ
ನನ್ನ ಬಳಿಯೇ ಮುಲಾಮಿದೆ ಹಚ್ಚಿದರೆ ಸಾವು ಬಚಾವು
ಹಚ್ಚದಿದ್ದರೆ ನಾವು ಬಚಾವು ಯೋಚಿಸುತ್ತಿದ್ದೇನೆ

ಸಾಯುವುದಕ್ಕೆ
ಬದುಕಿರಬೇಕು
ಮನುಷ್ಯರಿಗೆಲ್ಲಿಯ ಬದುಕು

ಸಾವಿನ ಚರಿತ್ರೆ
ಬರೆಯಬಹುದೇ ಹೊರತು
ಭವಿಷ್ಯವನ್ನಲ್ಲ

ಭಯವ ಓಡಿಸಿದರೆ
ಅದು ತಾನೆ ಎಲ್ಲಿಗೆ ಹೋಗುತ್ತದೆ
ಮನುಷ್ಯರ ಎದೆಯಿಂದ ಎದೆಗೆ

ಮನುಷ್ಯರು
ಸುರಿಸುವ ಕಣ್ಣೀರು
ಎಂದಾದರೂ ಸಿಹಿಯಾಗಬಹುದೆ
ಅವರ ಅದಲ್ಲವಲ್ಲ

ತಮ್ಮ ಸಾವನ್ನು ನದಿಯಲ್ಲಿ
ತೇಲಿ ಬಿಡಬಯಸುವ
ಮನುಷ್ಯರಿಗೆ ನದಿಯ ನೋವೇ ಗೊತ್ತಿಲ್ಲ

ಪ್ರಾಣಿ ಚರ್ಮ ಎಬ್ಬಿ
ಡೋಲು ಬಡಿದು
ಬಿದಿರ ಕೊರಳ ಕತ್ತರಿಸಿ ಕೊಳಲೂದಿ
ನಾದಮಯ ಎನ್ನಬಲ್ಲವರು ಯಾರೋ
ಅವರೇ ಮನುಷ್ಯರು

ಮನುಷ್ಯರು
ರಾತ್ರಿ ನಿದ್ದೆ ಮಾಡಲು ನಿರ್ಧರಿಸಿದ್ದಾರೆ
ಶಾಂತಿ ದೂಲರು

ಮನುಷ್ಯರೆಲ್ಲ ಸೇರಿ
ಹಿಟ್ಲರನನ್ನು ಬೈಯ್ಯುತ್ತಾರೆ
ತಮ್ಮ ಬೆರಳಿನ ಗಾಯದ ರಕ್ತ ತಾವೇ ನೆಕ್ಕುತ್ತಾರೆ

ಮನುಷ್ಯರು
ಕಾರು ರೈಲು ಏರೋಪ್ಲೇನು ಅಸ್ತ್ರಗಳ
ತಮ್ಮೀ ಮೆದುಳು ಮಕ್ಕಳ
ಪೂಜೆ ಮಾಡಲು ಹೂವು ಬಳಸುತ್ತಾರೆ
ಸಾವಿನ ವರ ಬೇಡುತ್ತಾರೆ

ಮನುಷ್ಯರನ್ನು
ಬುದ್ದಿವಂತರೆನ್ನಬೇಕೋ
ದಡ್ಡರು ಅನ್ನಬೇಕೋ ಗೊತ್ತಿಲ್ಲ
ಆನೆ ಕೊಲ್ಲುತ್ತಾರೆ ಅದರ ಕಣ್ಣನ್ನಷ್ಟೇ ತಿನ್ನುತ್ತಾರೆ

ಮನುಷ್ಯರು
ಕೊರೆವ ಛಳಿಯನ್ನು
ಉರಿವ ಬಿಸಿಲನ್ನು ನಿಭಾಯಿಸುತ್ತಾರೆ
ಮೌನಕ್ಕೆ ಸತ್ತು ಸುಣ್ಣವಾಗುತ್ತಾರೆ

ಮನುಷ್ಯರಲ್ಲಿ
ಎಷ್ಟೊಂದು ವಿಧಗಳು
ಒಳ್ಳೆಯವರು ದೇವರಂತ ಮನುಷ್ಯರು
ಮಗುವಿನಂತವರು ಹಸುವಿನಂತವರು
ಎಲ್ಲ ಸರಿ
ಒಣ ಹುಲ್ಲು ಕಂಡರೆ
ಬೆಂಕಿ ಇಡುತ್ತಾರೆ

ತುಂಬಾ ಬುದ್ಧಿವಂ ಮನುಷ್ಯರು
ಉಪಾಯವಾಗಿ
ದೇವರ ಮಾಡಿಕೊಂಡಿದ್ದಾರೆ
ತಮಗೆ ಬೀಳುವ ಏಟುಗಳ ದೇವರಿಗೆ ತಟಾಯಿಸಿ
ಬಚಾವಾಗಿ ನಗುತ್ತಿದ್ದಾರೆ

ಈ ಮನುಷ್ಯರ
ನೆನಪಿನ ಬುತ್ತಿಯಲ್ಲಿ
ಹಳಸಿದ ರಕ್ತವಿದೆ
ಸ್ನಾನ ಮಾಡಿದರೆ ಫಲವಿಲ್ಲ

ಈ ಮನುಷ್ಯರು ಸೃಷ್ಟಿಸಿದ
ಶಾಂತಿ ಪ್ರೀತಿ ಕ್ಷಮೆ ಸಹಕಾರ ಕರುಣೆ
ಪದಪುಂಜಗಳು
ಇವರು ಹರಿಸಿದ ರಕ್ತ ಕಾಲುವೆಯಲ್ಲಿ
ಕಸದಂತೆ ತೇಲುತ್ತಿವೆ

ಈ ಮನುಷ್ಯರನ್ನು ಎಷ್ಟು
ತೋಡಿದರೂ ಅಷ್ಟೆ
ಅಂತರ್ಜಲವಿಲ್ಲ ಅಂತರ್ಮಲ

ಈ ಮನುಷ್ಯರು
೨೬, ೪೮ ಅಕ್ಷರಗಳ ಕಟ್ಟಿಕೊಂಡು
ಟೀ ಕಪ್ಪಿನ ಬಿರುಗಾಳಿಗೆ ಸಿಕ್ಕಿ ಸುಸ್ತಾಗಿದ್ದಾರೆ

ಮನುಷ್ಯರು
ಬಟ್ಟೆ ತೊಟ್ಟರೆ ಮುಗಿಯಿತು
ಯಾರೂ ಕಂಡುಹಿಡಿಯಲಾರರು

ಕವಿಗಳು ಕಲಾವಿದರು
ವಿಜ್ಞಾನಿಗಳು ತತ್ವಜ್ಞಾನಿಗಳು ಹೀಗೆ
ಮನುಷ್ಯರಿಗೆ ಎಂಥಾ ಬಣ್ಣ ಹಚ್ಚಿದರೂ ಅಷ್ಟೆ
ಬಾಯಿ ಬಿಟ್ಟರೆ ಬಣ್ಣಗೇಡು

ಈ ಮನುಷ್ಯರ ಹೆಸರನ್ನು
ಯಾವ ಪ್ರಾಣಿ ಪಕ್ಷಿಗಳೂ ಇಟ್ಟುಕೊಳ್ಳುವುದಿಲ್ಲ
ಅವಕ್ಕೆ ಅಲರ್ಜಿ

ಮನುಷ್ಯರೂ ಒಳ್ಳೆಯವರೆ
ಸತ್ತು ಹೋದ ಮೇಲೆ

ಗಡಿಗಳಿಲ್ಲದ ನೆಲಕ್ಕೆ
ಗೋಡೆ ಕರೆಂಟು ಮುಳ್ಳು ತಂತಿ ಎಳೆದು
ಹಂಚಿಕೊಂಡ ಮೇಲಾದರೂ
ಈ ಮನುಷ್ಯರು ಸುಮ್ಮನಿರಬೇಕಿತ್ತಲ್ಲ
ಯುದ್ಧಕ್ಕೆ ಕಾಲ್ಕೆರೆಯುತ್ತಾರೆ ಇದೇ ಮನುಷ್ಯತ್ವ

ಅರ್ಧವಾದರೂ
ಮನುಷ್ಯರಲ್ಲದ ಹೆಂಗಸರು
ಮಕ್ಕಳಿಗೆ ನೀರು ನೆರಳು ಅನ್ನ ಉಣಿಸುತ್ತಿದ್ದಾರೆ

ಪೂರಾ ಮನುಷ್ಯರಾಗಿರುವ
ಗಂಡಸರು
ತಮ್ಮ ಪ್ರಾಣಗಳ ಉಳಿಸಿಕೊಳ್ಳಲು
ಪ್ರಾಣಯಾಮ ಮಾಡುತ್ತಿದ್ದಾರೆ

ಕವಿತೆ ನೀರಿನಂತೆ
ಹರಿಯುತ್ತದೆ, ಆವಿಯಾಗುತ್ತದೆ
ಹೆಪ್ಪುಗಟ್ಟುತ್ತದೆ
ಕವಿತೆ ಇದೆ

ಕೆಲವರು ಕವಿತೆಯನ್ನು
ಬರೆದು ಸಾಯಿಸುತ್ತಾರೆ
ಮತ್ತೆ ಕೆಲವರು ಓದಿ
ಇನ್ನೂ ಕೆಲವರು ಪ್ರಿಂಟ್ ಮಾಡಿ
ಹೀಗೆಲ್ಲ ಕವಿತೆಯನ್ನು ಸಾಯಿಸುವುದು ತಪ್ಪು

ಕವಿತೆ ಬರೆಯುವುದನ್ನು ಕಲಿತರೆ
ಸುಳ್ಳು ಹೇಳುವುದನ್ನು
ಪುಕ್ಕಟೆ ಕಲಿಯಬಹುದು

ಕವಿತೆ
ಕವಿಯ ಹುಡುಕಿ ಅಲೆಯುತ್ತದೆ
ಕವಿ ಸಿಕ್ಕಿದರೆ ಕೈಬಿಟ್ಟು
ಓದುಗರ ಹುಡುಕಿ ಅಲೆಯುತ್ತದೆ
ಓದುಗರು ಸಿಕ್ಕಿದರೆ
ದೇಶಾಂರ ಹೊರಡುತ್ತದೆ
ಅಲೆಯುವುದೆ ಕವಿತೆ

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. km vasundhara

    ಸಂಗ್ರಹಿಸಿಕೊಂಡು ಆಗಾಗ ಓದಬೇಕು ಅನ್ನಿಸುವಂತೆ ಮಾಡಿದ ಕವಿತೆಗಳಿವು. ಬಹಳ ಅರ್ಥಪೂರ್ಣವಾಗಿಯೂ ಸೊಗಸಾಗಿಯೂ ಇವೆ !!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: