ಕೆ ಆರ್‌ ಸಂಧ್ಯಾರೆಡ್ಡಿ ಕರೋನಾ ಮುಕ್ತೆಯಾದ ಕಥನ – 22

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ.

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಕಳೆದ ಸಂಚಿಕೆಗಳಿಗಾಗಿ ಇಲ್ಲಿ-ಕ್ಲಿಕ್ಕಿಸಿ

22

ಮಾಧ್ಯಮಗಳು ಮತ್ತು ಕರೋನಾ

ದೂರದರ್ಶನ ಒಂದು ದೃಶ್ಯಮಾಧ್ಯಮ. ಅದು ಅನಕ್ಷರಸ್ಥರಿಗೆ ಸುಲಭವಾಗಿ ತಲುಪುವಂಥದ್ದು ಮಾತ್ರವಲ್ಲ. ಅಕ್ಷರಸ್ಥರಿಗೂ ಸಹ ಜ್ಞಾನ ಪ್ರಸಾರದ ದಿಸೆಯಲ್ಲಿ ಅದರ ಪಾತ್ರ ಮಹತ್ವದ್ದೇ ಆಗಿದೆ. ಈ ದೃಷ್ಟಿಯಿಂದ ಕರೋನಾ ಕುರಿತು ಸ್ಪಷ್ಟ ತಿಳುವಳಿಕೆ ನೀಡುವಲ್ಲಿ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎಂದೇ ಹೇಳಬೇಕು.
ಕರೋನಾ ಸೋಂಕಿತರ ಹಾಗೂ ಸಾವಿಗೀಡಾದವರ ಅಂಕಿಅಂಶಗಳನ್ನು ಕೊಡುವುದಕ್ಕಷ್ಟೇ ಅವುಗಳ ಕಾರ್ಯ ಸೀಮಿತವಾಗಿತ್ತು.

ವಾಸ್ತವಿಕವಾಗಿ ಕರೋನಾ ರೋಗ ಪಿಡಿತರು ಅನುಭವಿಸುವ ಉಸಿರಾಟದ ತೊಂದರೆ ಯಾವ ರೀತಿ ಇರುತ್ತದೆ, ಅವರಿಗೆ ತಕ್ಷಣ ಚಿಕಿತ್ಸೆ ದೊರೆಯದಿದ್ದರೆ ಆಗುವ ಪರಿಣಾಮಗಳೇನು ಎಂಬ ಬಗ್ಗೆ ಯಾವ ವಾಹಿನಿಗಳೂ ದೃಶ್ಯ ರೂಪದಲ್ಲಿ ತೋರಿಸಲಿಲ್ಲ. ನಿಜಕ್ಕೂ ಈ ರೋಗದ ಭಯಂಕರ ಸ್ವರೂಪವನ್ನು ಈ ಮೂಲಕ ತೋರಿಸಿದ್ದೇ ಆಗಿದ್ದರೆ ಜನರು ತಾವಾಗಿಯೇ ಮಾಸ್ಕ್ಗಳನ್ನು ಧರಿಸುವಂಥ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದರು. ಈಗಲೂ ಬಹಳಷ್ಟು ಮಂದಿ ಕರೋನಾ ಎಂದರೆ ನೆಗಡಿ, ಫ್ಲೂ ಥರಾ ಜ್ವರವಷ್ಟೇ, ಬಿಸಿನೀರು ಕಷಾಯ ಕುಡಿದರೆ ಈ ರೋಗದಿಂದ ದೂರವಾಗಬಹುದು ಎಂಬ ತಿಳುವಳಿಕೆ ಯಿಂದ ಅದರ ಬಗ್ಗೆ ಅಸಡ್ಡೆ ತೋರುತ್ತಾ ಬಂದಿದ್ದಾರೆ.

ಯಾವುದೋ ಚಿಲ್ಲರೆ ಹೊಡೆದಾಟ ಬಡಿದಾಟಗಳನ್ನು ಗಂಡ ಹೆಂಡತಿ ಜಗಳಗಳನ್ನು ದಿನಗಟ್ಟಲೆ ತೋರಿಸುವ ವಾಹಿನಿಗಳು, ಕರೋನಾ ಸಂಬಂಧವಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಕರೋನಾ ಪರೀಕ್ಷೆಯನ್ನು ಎಲ್ಲೆಲ್ಲಿ ನಡೆಸಲಾಗುತ್ತದೆ. ಅಲ್ಲಿ ಎಷ್ಟು ಹೊತ್ತು ಕಾಯಬೇಕಾಗುತ್ತದೆ ತಮ್ಮ ಸರದಿಗಾಗಿ ಗಂಟೆಗಟ್ಟಲೆ ಕಾಯುವಾಗ ಅವರಿಗೆ ಎದುರಾಗುವ ಸಮಸ್ಯೆಗಳೇನು? ಇಂಥವುಗಳ ನೇರಾ ನೇರ ವರದಿಯನ್ನು ಮಾಧ್ಯಮಗಳು ಮಾಡಬೇಕಾಗಿತ್ತು.

ಈಗಾಗಲೇ ಸೋಂಕಿಗೆ ಒಳಗಾಗಿ ಜ್ವರ, ಸುಸ್ತು ಉಸಿರಾಟದ ಸಮಸ್ಯೆ ಮೊದಲಾದವುಗಳಿಂದ ನರಳುತ್ತಿರುವವರು ಕರೋನಾ ಪರೀಕ್ಷೆಗಾಗಿ ಯಾರೊಬ್ಬರ ಸಹಾಯವಿಲ್ಲದೆ ಒಬ್ಬರೇ ಹೋಗಬೇಕಾದ ಸ್ಥಿತಿ, ಮೊದಲೇ ರೋಗ ಪೀಡಿತರಾದವರು ಪರೀಕ್ಷೆಗಾಗಿ ಕಾಯುವಾಗ ಆಹಾರ ಪಾನೀಯ ನೀರು ಇಲ್ಲದೆ ಅಲ್ಲಿಯೇ ಅವರ ಸ್ಥಿತಿ ಇನ್ನಷ್ಟು ಉಲ್ಬಣವಾದ ನಿದರ್ಶನಗಳು, ರೋಗ ಪೀಡಿತರಾಗಿ ಕಣ್ಣೆದುರಿಗೇ ಉಸಿರಾಟದ ಸಮಸ್ಯೆಯಿಂದ ನರಳುತ್ತಿದ್ದರೂ ಕೋವಿಡ್ ಪರೀಕ್ಷಾ ಪ್ರಮಾಣ ಪತ್ರವಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೆ ಅವರು ಅಲ್ಲಿಯೇ ಸಾವಿಗೀಡಾದ ಪ್ರಕರಣಗಳು ಇಂಥವುಗಳನ್ನು ದೃಶ್ಯ ಮಾಧ್ಯಮಗಳು ಗಂಭೀರವಾಗಿ ಚಿತ್ರೀಕರಿಸಿ ತೋರಿಸಬೇಕಿತ್ತು.

ಕರೋನಾ ಪರೀಕ್ಷೆಗಳ ಪ್ರಾತ್ಯಕ್ಷಿಕೆಗಳನ್ನು ತೋರಿಸಬೇಕಿತ್ತು. ಕರೋನಾ ಪರೀಕ್ಷೆಯಾದ ಕೂಡಲೇ ಯಾಕೆ ಫಲಿತಾಂಶವನ್ನು ನೀಡಲಾಗುವುದಿಲ್ಲ, ಆ ಪರೀಕ್ಷೆಗಳು ಯಾವ ರೀತಿ ನಡೆಯುತ್ತವೆ, ಅದಕ್ಕೆ ತಗಲುವ ಸಮಯವೆಷ್ಟು, ವಿವಿಧ ರೀತಿಯ ಪರೀಕ್ಷೆಗಳ ನಡುವೆ ಇರುವ ವ್ಯತ್ಯಾಸವೇನು ಇವುಗಳನ್ನು ಕುರಿತಾಗಿಯೂ ವಾಹಿನಿಗಳು ಪರಿಣತರ ಮೂಲಕ ಚರ್ಚೆಗಳನ್ನು ಏರ್ಪಡಿಸಿ ಜನ ಸಾಮಾನ್ಯರಿಗೆ ಈ ಕುರಿತಾದ ವೈಜ್ಞಾನಿಕ ತಿಳುವಳಿಕೆ ನೀಡಬಹುದಾಗಿತ್ತು.

ಈಗಾಗಲೇ ಕರೋನಾ ತಾಂಡವ ನೃತ್ಯ ಆರಂಭಿಸಿ ಏಳೆಂಟು ತಿಂಗಳುಗಳೇ ಕಳೇದು ಈಗ ಅದು ಉತ್ತುಂಗ ಘಟ್ಟವನ್ನು ತಲುಪಿದೆ. ಇಷ್ಟಾದರೂ ಕರೋನಾ ಬಗ್ಗೆ ಪ್ರಾಥಮಿಕ ತಿಳುವಳಿಕೆಯನ್ನೂ ಮೂಡಿಸದೇ ಇರುವುದು ನಮ್ಮ ಮಾಧ್ಯಮಗಳು ಈ ನಿಟ್ಟಿನಲ್ಲಿ ಜವಾಬ್ದಾರಿ ಯುತವಾಗಿ ವರ್ತಿಸುತ್ತಿಲ್ಲ ಎಂಬುದಕ್ಕೆ ನಿದರ್ಶನ.

ಬೇರೆ ಬೇರೆ ವೈದ್ಯಕೀಯ ಪದ್ಧತಿಗಳ ಪರಿಣತರನ್ನು ಒಂದು ವೇದಿಕೆಗೆ ತಂದು ಪರಸ್ಪರ ಚರ್ಚೆ, ವಿಚಾರ ವಿನಿಮಯ ನಡೆಸುವುದು, ಗುಣಮುಖರಾಗಿ ಹೊರ ಬಂದವರ ಅನುಭವಗಳನ್ನು ಹಂಚಿಕೊಳ್ಳುವುದು ರೋಗ ಮುಕ್ತರಾದ ನಂತರವೂ ಯಾವ ರೀತಿಯ ಎಚ್ಚರಿಕೆಗಳನ್ನು ವಹಿಸಬೇಕು ಮತ್ತು ಯಾವ ಕಾರಣಕ್ಕಾಗಿ ಈ ಎಚ್ಚರಿಕೆಗಳು ಅಗತ್ಯ ಎಂಬುದನ್ನು ತಿಳಿಸುವ ಕಾರ್ಯಕ್ರಮಗಳನ್ನು ಮಾಧ್ಯಮಗಳು ನಡೆಸಬೇಕಿತ್ತು. ಆಕ್ಸಿಜನ್ ಕೊರತೆಯಿಂದ ಉಂಟಾಗುವ ತೊಂದರೆಗಳು, ಸರಿಯಾದ ಉಸಿರಾಟದ ಕ್ರಮಗಳ ಪ್ರಾತ್ಯಕ್ಷಿಕೆಯನ್ನು ತೋರಿಸುವ ಕಾರ್ಯಕ್ರಮಗಳು ಅತ್ಯಗತ್ಯವಾಗಿದ್ದವು.

ಮೃತರ ಅಂತಿಮ ದರ್ಶನ ಎನ್ನುವುದು ಮಾನವ ಸಂಸ್ಕೃತಿಯ ಬಹುಮುಖ್ಯವಾದ ಅಂಶ. ಎಲ್ಲ ಜಾತಿ ಮತ ದೇಶಗಳಲ್ಲಿಯೂ ಈ ವಿಷಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಬದ್ಧ ವೈರಿಗಳಾದವರೂ ಸಹ ಸಾವಿನ ಸಂದರ್ಭದಲ್ಲಿ ವೈರವನ್ನು ಮರೆತು ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸುತ್ತಾರೆ. ಅಂತಿಮ ದರ್ಶನಕ್ಕೆ ಎಷ್ಟು ಮಹತ್ವವಿದೆ ಎಂದರೆ ಸಾವಿರಾರು ಮೈಲುಗಳ ದೂರದಲ್ಲಿದ್ದ ಬಂಧುಗಳೂ ಸಹ ಅಲ್ಲಿಂದ ಬಂದು ಅಂತಿಮ ದರ್ಶನ ಪಡೆಯುವಂತಾಗಲೀ ಎಂದು ಮೃತ ದೇಹವನ್ನು ದಿನಗಟ್ಟಲೆ ವಾರಗಟ್ಟಲೆ ಕಾಯ್ದಿರಿಸಲಾಗುತ್ತದೆ. ಹೀಗಿರುವಾಗ ಕರೋನಾ ಖಾಯಿಲೆಯಿಂದ ಮೃತರಾದವರ ವಿಷಯದಲ್ಲಿ ಮಾತ್ರ ತೀರಾ ಅಮಾನವೀಯವಾದ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಅಕ್ಷಮ್ಯವೆಂದೇ ಹೇಳಬೇಕು.

ವಿವಾದಾಸ್ಪದವಾದ ಶವ ವಿಲೇವಾರಿಯ ಪ್ರಕರಣಗಳನ್ನು ವಾಹಿನಿಗಳು ತೋರಿಸಿದವೇ ಹೊರತು ಈ ಬಗ್ಗೆ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು, ನಿಜವಾಗಿಯೂ ಮೃತರಿಂದ ಸೋಂಕು ಹರಡುತ್ತದೆಯೇ ಎಂಬ ಬಗ್ಗೆ ತಿಳುವಳಿಕೆ ನೀಡುವತ್ತ ಗಮನ ಹರಿಸಲಿಲ್ಲ. ಮೃತರಿಂದ ಸೋಂಕು ಹರಡುವುದಿಲ್ಲ ಎಂದು ಡಾ. ನಂಜಪ್ಪನವರು ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತಲೇ ಇದ್ದಾರೆ. ಈ ಬಗ್ಗೆ ಇತರ ವೈದ್ಯರು ಚರ್ಚಿಸಿ ಸ್ಪಷ್ಟ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ನಡೆಸಬೇಕಿತ್ತು. ಈ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕಾಗಿತ್ತು. ಈಗಲೂ ಕಾಲ ಮಿಂಚಿಲ್ಲ. ಇಂತಹ ಪ್ರಕರಣಗಳನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸಿ ಜನರ ಸಂಕಷ್ಟಗಳಿಗೆ ದನಿಯಾಗುವ ಕೆಲಸವನ್ನು ದೃಶ್ಯ ಮಾಧ್ಯಮಗಳು ಮಾಡಬೇಕಾಗಿದೆ.

ಪತ್ರಿಕೆಗಳೂ ಸಹ ಖಾಸಗಿ ವಾಹಿನಿಯವರ ಮೇಲೆ ಪೈಪೋಟಿಗೆ ಬಿದ್ದಂತೆ ಸುದ್ದಿಗಳ ಆಯ್ಕೆ ಹಾಗೂ ಅದನ್ನು ನಿರೂಪಿಸುವ ಭಾಷೆಯಲ್ಲಿ ತೊಡಗಿರುವುದು ನಿಜಕ್ಕೂ ಶೋಚನೀಯ. ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಹಿಗೊಂದು ಸುದ್ದಿ ಯಾವುದೋ ಒಂದು ಮೂಲೆಯಲ್ಲಿ ಪ್ರಕಟವಾಗಿತ್ತು. ‘ದಫನ್ ಮಾಡಿದವ ಬಲಿ!’ ಏನೋ ನಗೆ ಪಾಟಲಿನ ಸುದ್ದಿಯೇನೋ ಎಂಬಂತೆ ಇಲ್ಲಿ ಆಶ್ಚರ್ಯ ಸೂಚಕ ಚಿಹ್ನೆಯ ಬಳಕೆ ಏಕೆ? ಈ ಶೀರ್ಷಿಕೆಯ ಕೆಳಗೆ ಪ್ರಕಟವಾದ ಸುದ್ದಿ ನಿಜಕ್ಕೂ ಮುಖಪುಟದಲ್ಲಿ ವ್ಯಕ್ತಿಯ ಭಾವಚಿತ್ರದೊಂದಿಗೆ ಅತ್ಯಂತ ಗೌರವಯುತವಾಗಿ ಪ್ರಕಟವಾಗಬೇಕಿತ್ತು.

ಸುದ್ದಿ ಹೀಗಿದೆ: ಈಶಾನ್ಯ ದೆಹಲಿಯಲ್ಲಿ ಕಳೆದ ಆರು ತಿಂಗಳಿಂದ ಕರೋನ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಹಾಗೂ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಕೆಲಸ ಮಾಡುತ್ತಿದ್ದ್ ಅಂಬುಲೆನ್ಸ್ ಚಾಲಕರೊಬ್ಬರು ಕರೋನಾ ವೈರಸ್‌ನಿಂದಲೇ ಮೃತಪಟ್ಟಿದ್ದಾರೆ. ೪೮ ವರ್ಷದ ಅರಿಫ್‌ಖಾನ್ ಉಚಿತ ತುರ್ತು ಸೇವೆಗಳನ್ನು ಒದಗಿಸುವ ಶಹೀದ್ ಭಗತ್‌ಸಿಂಗ್ ಸೇವಾದಳದಲ್ಲಿ ಕೆಲಸ ಮಾಡುತ್ತಿದ್ದರು. ದೆಹಲಿಯ ಸೀಲಾಂಪುರದ ತನ್ನ ಮನೆಯಿಂದ ೨೮ ಕಿ.ಮೀ. ದೂರವಿರುವ ಅಂಬುಲೆನ್ಸ್ ಪಾರ್ಕಿಂಗ್ ಸ್ಥಳದಲ್ಲೆ ವಾಸಿಸುತ್ತ ಹೆಂಡತಿ ಮಕ್ಕಳೊಂದಿಗೆ ಕೇವಲ ಫೋನ್ ಮೂಲಕ ಸಂಪರ್ಕ ಹೊಂದಿದ್ದರು. ಕರೋನಾದಿಂದ ಮೃತಪಟ್ಟ ಸುಮಾರು ೨೦೦ ಮಂದಿಯ ಶವಗಳನ್ನು ಅವರೇ ಅಂತ್ಯ ಸಂಸ್ಕಾರ ಮಾಡಿದ್ದರು.

ಇಂಥಾ ಅನಾಮಿಕ ವ್ಯಕ್ತಿ ಸಲ್ಲಿಸಿದ ಸೇವೆಗೆ ಪರಮವೀರಚಕ್ರ ಕೊಟ್ಟರೂ ಸಾಲದು. ಮನೆಯವರೂ ಸಹ ಹತ್ತಿರ ಬರಲು ಹೆದರುವಂಥ ಪರಿಸ್ಥಿತಿ ಇರುವಾಗ ಈತ ತನ್ನ ಜೀವ ಕುರಿತು ಒಂದಿಷ್ಟೂ ಚಿಂತಿಸದೆ ಈ ರೀತಿಯ ಕಾರ್ಯದ ಮೂಲಕ ತನ್ನ ಜೀವನವನ್ನೇ ಮುಡಿಪಾಗಿಟ್ಟು ಅದೆಂಥ ಅಮೋಘ ಸೇವೆ ಮಾಡಿದ್ದಾನೆ. ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿ ಅತ್ಯಂತ ದೊಡ್ಡ ಸುದ್ದಿಯಾಗಿ ಇದನ್ನು ಬಿತ್ತರಿಸಿದ್ದರೆ ನಾವು ನಮ್ಮ ಸಮಾಜದಲ್ಲಿ ನಿಜವಾಗಿಯೂ ಗೌರವ ಕೃತಜ್ಞತೆ ಸಲ್ಲಿಸಬೇಕಾಗಿರುವುದು ಎಂಥವರಿಗೆ ಎಂಬ ಒಂದು ಮಾದರಿಯೇ ರೂಪುಗೊಳ್ಳುತ್ತಿತ್ತು.

ಹಾಗೆ ನೋಡಿದರೆ ಸಾಲು ಮರದ ತಿಮ್ಮಕ್ಕ ಈಗ ಮಕ್ಕಳ ಪಠ್ಯ ಪುಸ್ತಕದ ವಸ್ತುವಾಗಿರುವಂತೆ, ನಿಜವಾಗಿಯೂ ಕರೋನಾ ವಾರಿಯರ್ ಎಂಬ ಹೆಸರಿಗೆ ತಕ್ಕ ನಿದರ್ಶನವಾದ ಆರಿಫ್‌ಖಾನ್ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಬೇಕು. ಇಡೀ ರಾಷ್ಟ್ರವೇ ಇಂಥ ಅನಾಮಿಕ ಯೋಧರಿಗೆ ಗೌರವ ಸಲ್ಲಿಸಬೇಕು. ಭಾವೈಕ್ಯತೆ ಮೂಡಿಸುವಲ್ಲಿ, ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸುವಲ್ಲಿ ಗಂಭೀರವಾಗಿ ಕಾರ್ಯ ನಿರ್ವಹಿಸ ಬೇಕಾಗಿದ್ದ ಮಾಧ್ಯಮಗಳು ಇದಕ್ಕೆ ಸಂಪೂರ್ಣ ವಿರುದ್ಧವಾದ ಕೆಲಸವನ್ನು ಮಾಡುತ್ತಿವೆ. ಮಾನವೀಯತೆಯ ಸ್ಪರ್ಶವಿಲ್ಲದ ಒಂದಿಷ್ಟೂ ಸಾಮಾಜಿಕ ಜವಾಬ್ದಾರಿಯಿಲ್ಲದ ಸುದ್ದಿಗಳು ನಮ್ಮ ಸಮಾಜವನ್ನು ಇನ್ನಷ್ಟು ಅಧಃ ಪತನಕ್ಕೆ ಕೊಂಡೊಯ್ಯುತ್ತಿರುವುದು ಒಂದು ದುರಂತ.

| ಇನ್ನು ನಾಳೆಗೆ |

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: