ಮಹಾಪತಿ ಕಲ್ಲುಗಳು ಏಕಿಲ್ಲ?

ಸಿದ್ಧರಾಮ ಕೂಡ್ಲಿಗಿ

ಇದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಒಂದು ಗ್ರಾಮದಲ್ಲಿ ಕಂಡುಬಂದ ಮಾಸ್ತಿಕಲ್ಲು (ಮಹಾಸತಿ ಕಲ್ಲು). ಯುದ್ಧದಲ್ಲಿ ವೀರಮರಣ ಹೊಂದಿದ ಯೋಧನ ಶವದ ಜೊತೆಯಲ್ಲಿ ಆತನ ಸತಿ ಚಿತೆ ಏರಿ ಒಟ್ಟಿಗೆ ಸಾವಿಗೀಡಾಗುವ ದುರಂತ ಕಥನದ ಕುರುಹು ಇದು.

ಇಲ್ಲಿ ಮಹಾಸತಿಯಾದವಳು ಪತಿಭಕ್ತಿಯನ್ನು ತೋರುವಳು ಎಂದು ಸಮಾಜಕ್ಕೆ ತಿಳಿಸುವ ರೀತಿಯಲ್ಲಿ ಆಕೆಯ ಚಿತ್ರವನ್ನು ಕಲ್ಲಿನಲ್ಲಿ ಕೆತ್ತನೆ ಮಾಡಿ, ಆಕೆಯ ಕೈಯನ್ನು ಸ್ಪಷ್ಟವಾಗಿ 5 ಬೆರಳುಗಳೂ ತೋರುವಂತೆ ಚಿತ್ರಿಸಲಾಗಿರುತ್ತದೆ. ಇದು ಉಳಿದ ಸತಿಯರಿಗೆ ಒಂದು ಮಾದರಿ ಎಂಬಂತೆ ಇಲ್ಲಿ ಚಿತ್ರಿತಳಾಗಿರುವ ಆ ಮಹಾಸತಿ ಯಾರೋ ಗೊತ್ತಿಲ್ಲ. ಆದರೆ ಈ ಹೆಣ್ಣು ಜೀವ ಚಿತೆಯಲ್ಲಿ ಪತಿಯ ಜೊತೆ ಎಷ್ಟು ಒದ್ದಾಡಿದಳೋ ಗೊತ್ತಿಲ್ಲ. ಇಷ್ಟು ಒದ್ದಾಡಿದ ಜೀವದ ಚಿತ್ರಣವಿರುವ ಈ ಕಲ್ಲನ್ನು ಈಗಲೂ ಭಕ್ತಿಯಿಂದ ಪೂಜಿಸಲಾಗುತ್ತದೆ. ಇದು ಆಕೆಯ ಸಂಕಟಕ್ಕೆ ಗೌರವ ಕೊಡುವುದಕ್ಕೋ, ಅಥವಾ ಆಕೆಯ ಪತಿಭಕ್ತಿಗೆ ಸಲ್ಲಿಸುವ ನಮನವೋ ಗೊತ್ತಿಲ್ಲ.

ಆದರೆ ನನ್ನಲ್ಲಿ ಈಗಲೂ ಮೂಡುವ ಪ್ರಶ್ನೆ ಏನೆಂದರೆ ಪತಿಯ ಬಗ್ಗೆ ಅಪರಿಮಿತವಾದ ಗೌರವ, ಭಕ್ತಿ, ನಿಷ್ಠೆ, ಪ್ರಾಮಾಣಿಕತೆ ಕೇವಲ ಸತಿಗಷ್ಟೇ ಇರಬೇಕೆ ? ಎಂಬುದು. ಪತಿ ಸತ್ತ ನಂತರ ಅವನೊಂದಿಗೇ ಚಿತೆ ಏರಲು ಸತಿ ನಿರ್ಧರಿಸಲೇಬೇಕಾದ್ದು ಅನಿವಾರ್ಯ ಹಾಗೂ ದುರಂತ. ಆದರೆ ಸತಿಯೇನಾದರೂ ಸಾವಿಗೀಡಾದರೆ ಅದೇ ಪತಿ ಯಾಕೆ ಚಿತೆ ಏರುವುದಿಲ್ಲ ? ಅವನು ಮತ್ತೊಬ್ಬಳನ್ನು ವಿವಾಹ ಮಾಡಿಕೊಳ್ಳಲು ಸಮಾಜ ಯಾವ ಅಡ್ಡಿ, ಆತಂಕಗಳನ್ನೂ ಒಡ್ಡುವುದಿಲ್ಲ. ನಿಷ್ಟೆ, ಪ್ರಾಮಾಣಿಕತೆ, ಭಕ್ತಿ, ಸೇವೆ, ಎಲ್ಲವೂ ಹೆಣ್ಣಿನ ಸುತ್ತಲು ಮಾತ್ರವೇ ಗಿರಕಿ ಹೊಡೆಯುತ್ತವೆ.

ಈ ಯಾವ ಕಟ್ಟುಪಾಡುಗಳೂ ಪುರುಷರಿಗಿಲ್ಲ. ಪುರುಷನ ಪದತಲದಲ್ಲಿಯೆ ಸ್ವರ್ಗ ಎಂದು ಸಮಾಜ ಹಾಕಿದ ನಿರ್ಬಂಧಗಳಿಂದಲೇ ಇಂದು ಪುರುಷರು ಅಟ್ಟಹಾಸ ಮಾಡುತ್ತಿರುವುದು ಎನಿಸುತ್ತಿದೆ. ಹೆಣ್ಣುಮಕ್ಕಳನ್ನೂ ಸಹ ‘ಪತಿಯಾದವನು ಯಾವುದೇ ನರಕವನ್ನು ಸೃಷ್ಟಿಸಿದರೂ ಅಲ್ಲಿಯೇ ನಿನ್ನ ಸ್ವರ್ಗವನ್ನು ಕಾಣು’ ಎಂಬ ರೀತಿಯಲ್ಲಿ ಬೆಳೆಸಲಾಗುತ್ತಿದೆ. ಹೀಗಾಗಿಯೆ ಬಹುತೇಕ ಹೆಣ್ಣುಮಕ್ಕಳ ಬದುಕು ಅಡುಗೆಮನೆಯ ಹೊಸ್ತಿಲ ಒಳಗೇ ಪೂರ್ಣಗೊಳ್ಳುತ್ತದೆ.

ಎಷ್ಟೆಷ್ಟು ಹೆಣ್ಣಿನ ಮೇಲೆ ದೌರ್ಜನ್ಯ, ಅತ್ಯಾಚಾರ, ಅನಾಚಾರ, ತುಳಿತಗಳು ಹೆಚ್ಚಾಗುತ್ತವೆಯೋ ಅಷ್ಟಷ್ಟು ಆಕೆಯ ಬಗ್ಗೆ ಪೂಜೆ, ಪುನಸ್ಕಾರ, ಗೌರವ, ಆದರ, ಆರಾಧನೆ, ಗುಡಿಗುಂಡಾರಗಳು, ಭಕ್ತಿ, ಸ್ತೋತ್ರ, ಹೊಗಳಿಕೆಗಳು ಹೆಚ್ಚಾಗುತ್ತ ಹೋಗುತ್ತವೆ. ಇವು ಒಂದು ರೀತಿಯಲ್ಲಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ರೂಪದ ಸಂಕೇತಗಳಂತೆಯೇ ನನಗೆ ಕಾಣುತ್ತವೆ. ಆದರೆ ಇತಿಹಾಸದಲ್ಲಿ ಎಲ್ಲಿಯೂ ಅಪ್ಪಿತಪ್ಪಿಯೂ ಗಂಡಿಗೆ ನಿರ್ಬಂಧ, ನಿಯಮ, ಕಟ್ಟುಪಾಡುಗಳು ಕಾಣುವುದಿಲ್ಲ. ಎಲ್ಲ ನೋವು, ದು:ಖ ದುಮ್ಮಾನಗಳು, ನಿಟ್ಟುಸಿರುಗಳು ಹೆಣ್ಣಿಗೇ ಮೀಸಲು. ಅವೆಲ್ಲವನ್ನು ಮುಚ್ಚಿಹಾಕಲೆಂದೇ ನಮ್ಮಲ್ಲಿ ಎಷ್ಟೆಲ್ಲ ಆರಾಧನೆಗಳ ನಾಟಕಗಳು ನಡೆಯುತ್ತಿವೆ ಎಂದೇ ನನಗೆ ಅನಿಸುತ್ತಿದೆ.

ಅದಕ್ಕೇ ಅನಿಸಿತು ಮಾಸ್ತಿಕಲ್ಲುಗಳಿದ್ದಂತೆ, ಮಹಾಪತಿ ಕಲ್ಲುಗಳೇಕಿಲ್ಲ ? ಎಂದು. ಸಾವಿಗೀಡಾದ ಸತಿಯ ಜೊತೆ ಪತಿಯೂ ಚಿತೆಯೇರಿ ’ಸತಿಭಕ್ತಿ’ ಮೆರೆಯಬೇಕಿತ್ತು.

‍ಲೇಖಕರು Admin

January 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: