ಆರತಿ ಎಚ್ ಎನ್ ಹೊಸ ಕವಿತೆ- ಚರಮ್ಯ! ಗೀತೆ…

ಆರತಿ ಎಚ್ ಎನ್

ನಿನಗೊಂದು ಶವಯಾತ್ರೆ ಮಾಡಬಯಸುತ್ತೇನೆ. ಕರೆದವರು, ಕರೆಯದೆ ಬಂದವರ
ಕಣ್ಮುಚ್ಚಿ ನೋಡುತ್ತಾ,
ಓಲಗ ಪಟಾಕಿಗಳು ಕಿವಿಗಡಚಿಕ್ಕುವಾಗ ಹುಬ್ಬುಗಂಟಿಡುವ
ನಿನ್ನ ವದನಾರವಿಂದವನ್ನು
ನೋಡಬಯಸುತ್ತೇನೆ…

ಕುದಿವ ನೀರು ಗೊತ್ತೇ ಆಗದೆ ಆವಿಯಾದಂತೆ
ನಿಧಾನಕ್ಕೆ ನಮ್ಮ ನಡುವೆ ನಿಂತುಹೋದ ಮಾತಿಗೊಂದು,

ಊರಿಗೆಲ್ಲಾ ಕಾಣುವ
ನಿನ್ನ ಗಾಜಿನಮನೆಯಲ್ಲಿ
ಉಟ್ಟು ಕಳಚಿದ ಸಾಂಗತ್ಯಕ್ಕೊಂದು,

ಒಂದೇ ಸೂರಿನಡಿ ಬಹುಕಾಲವಿದ್ದಾಗ
ಪರಮಸ್ನೇಹವು ರಣಶತ್ರುತ್ವವಾದ
ಪ್ರತಿ ಹಾಳೆಯ ಪುಸ್ತಕಕ್ಕೊಂದು…

ಸಲೀಸಾಗಿ ಸಾಗುತ್ತಿರುವ ಧಾರಾವಾಹಿಯ ನಟ್ಟನಡುವೆ ಜಾಹೀರಾತಿನಂತೆರಗಿ ಅಬ್ಬರಿಸುವ
ನಿನ್ನ ಅನುಗಾಲದ ಸಿಟ್ಟಿಗೊಂದು‌…

ಕಾದು ಹೈರಾಣಾದಾಗ
ಹತ್ತಿರ ಬಂದ ಹಾಗೆ ಮಾಡಿ
ಬೆನ್ನು ತಿರುಗಿಸುವ
ಚಾಲಾಕಿ ನಕಲಿ ನಗುವಿಗೊಂದು…

ನಿಜ, ಇವೆಲ್ಲಕ್ಕೂ ವಿದಾಯ ಹೇಳಲೇಬೇಕಿದೆ.

ತಳ ಸೋರುವ ಮಧುಪಾತ್ರೆಯಲ್ಲಿ
ಕೈ ಕಾಲು ಬಡಿಯುತ್ತಾ,
ಬಂದದ್ದೋ ಹೊರಟದ್ದೋ ತಿಳಿಯದೇ
ಅಮಲ
ಮಿಣುಕುದೀಪದಲ್ಲಿ ಕಾಣುವುದೆಲ್ಲಾ ಹಳೆಯ ಪ್ರೇಮವೇ…

ಇಸ್ಪೀಟಿನ ಲಕ್ಕಿ ನಂಬರ್ರೇ ಜೋಕರ್ ಆಗಿ ತಿರುಗಿ ಬಿದ್ದಂತೆ,
ಸಿಲಿಕಾನ್ ಮೊಲೆಗಳ
ಬೊಟಾಕ್ಸ್ ಮುಖಗಳ
ಫಿಲ್ಲರ್ ತುಂಬಿದ ತುಟಿಗಳ
ಕವಚ ತೊಟ್ಟ ಕಟಿಗಳ
ರಂಗಿನಂಗಳದಲ್ಲಿ
ನೀನು
ಸೊಂಟ ಹಿಡಿದದ್ದು
ಹೆಣ್ಣೋ-ಗಂಡೋ???

ಗೊಂದಲ ಪರಿಹಾರಕ್ಕಾದರೂ ಮಾಡಿಸಲೇಬೇಕಿದೆ ಅಂತಿಮಯಾತ್ರೆ…

ನಮ್ಮೊಡನೆ ವಾಸವಿದ್ದು ಕಳೆದುಹೋದ ಬೆಕ್ಕು,
ಕವಿತೆ ಬರೆದ
ಹರಿದು ಹಾಳಾದ ಬುಕ್ಕು,
ಅಳಿಸಿ ಹೋಗದ ಜಿಡ್ಡುಕಲೆಯಂಥಾ
ನಿನ್ನ ಸೊಕ್ಕು,
ಬಳಸಿ ಬಳಸಿ ಬೇಜಾರಾದ ಬಿಕ್ಕು.
ಇದೆಲ್ಲವನ್ನೂ ನೋಟಿಸ್ ಬೋರ್ಡಿನ ಉದ್ದಕ್ಕೂ
ಕಿವಿ ಚುಚ್ಚಿದಂತೆ ಸಿಕ್ಕಿಸಿ,
ಓದುತ್ತಾ ನಿಂತವರನ್ನು ನೋಡುವ ನಿನ್ನನ್ನು,
ಕಣ್ಣೀರಲ್ಲಿ ಕಲಕಿ ಮಬ್ಬಾದರೂ
ಕಣ್ತುಂಬ ನೋಡಬೇಕಿದೆ…

ಹರಿಯದ ಕಡಲು,
ದಡವಿರದ ನದಿ,
ಆಕಾರವಿರದ ಅನುಭೂತಿ,
ಪರಿಭಾಷೆಯಿರದ ಪ್ರೀತಿಯ
ಚಿತೆಯ ಮೇಲೆ
ಜೀವವಿರದ ನಮ್ಮ
ಅನುರೂಪ ದಾಂಪತ್ಯ,
ನೋಡುವವರ ಕಣ್ಣಿಗೆ
ಚಕಾಚಕ್ ಹೊಳೆಯುತ್ತಿರಬೇಕೆಂದು,
ಸೋಪ್ ಜಾರಿ ಹೋದ ಮೇಲೆ
ಬೆತ್ತಲಾಗಿ,
ಎಣ್ಣೆ ಮೈಯಲ್ಲಿ
ನೀನು ಹುಡುಕುತ್ತಿರುವುದಾದರೂ ಏನೆಂದು ಒಮ್ಮೆ ಹೇಳಬೇಕಿತ್ತು!!!

ನನಗನಿಸುತ್ತದೆ,
ಎಲ್ಲ ಮುಗಿದು
ಹಿಂದಿರುಗಿ ನೋಡದೆ
ಮರಳುವಾಗ
ಎಲ್ಲ ಪರಮಾಪ್ತರು
ನಿನ್ನದೇ ಖಾಯಂ ಬಾರಿನಲ್ಲಿ ಕುಳಿತು,
ಕುಯುಕ್ತಿ ಮರೆತು ಭಯಭಕ್ತಿಯಿಂದ ಕಂಠಪೂರ್ತಿ ಕುಡಿದು,
ಹೊಗಳಿ ಹೊನ್ನಶೂಲಕ್ಕೇರಿಸಿದರೂ
ಸಿಗುವುದಿಲ್ಲ ಮುಕ್ತಿ,
“ನೀನು” ಎನಿಸಿಕೊಂಡ ಎಲ್ಲ ಗಂಡಸರುಗಳಿಗೆ…

‍ಲೇಖಕರು Admin

January 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. prathibha nandakumar

    ಎಂದಿನಂತೆ ಚೆನ್ನಾಗಿದೆ ಆರತಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: