ಮಹಾತ್ಮನಿಗೆ ಕಲಾ ನಮನ…

ನೂತನ ದೋಶೆಟ್ಟಿ

ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷರೂ ಆಗಿದ್ದ ಬೆಂಗಳೂರಿನ ಶ್ರೀ ಎಮ್ ಎಸ್ ಮೂರ್ತಿ ಅವರು  ಕಳೆದ ಅಕ್ಟೋಬರ್ 2 ರಿಂದ 13 ರವರೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ  ಏರ್ಪಡಿಸಿದ್ದ  ‘ಮಹಾತ್ಮನಿಗೆ ನಮನ’ – ಎ ಟ್ರಿಬ್ಯೂಟ್ ಟು ಮಹಾತ್ಮಾ,  ಶೀರ್ಷಿಕೆಯ ಗಾಂಧೀಜಿಯವರ ಚಿತ್ರಗಳ ಪ್ರದರ್ಶನ ಬಹಳ ಅಪರೂಪವಾದದ್ದು. ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ  ಅವರ ಕುಂಚದಲ್ಲಿ ಅರಳಿದ  ಮಹಾತ್ಮರ 75 ಚಿತ್ರಗಳ ರೂಪಕಾತ್ಮಕ ಅಭಿವ್ಯಕ್ತಿ ಈ ಪ್ರದರ್ಶನವಾಗಿತ್ತು.

ಮಹಾತ್ಮ ಅಥವಾ ಗಾಂಧೀಜಿ , ಈ ಪದಗಳು ವ್ಯಕ್ತಿ ಸೂಚಕವಾಗಿರದೆ  ಅಗಾಧ ಚಿಂತನೆಯ, ಘನ ವ್ಯಕ್ತಿತ್ವದ, ಭಾರತದ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ದಾಖಲೆಯ ಹಾಗೂ ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಯ ದ್ಯೋತಕವಾಗಿವೆ. ಇಂಥ ವ್ಯಕ್ತಿತ್ವವನ್ನು ಬಣ್ಣಗಳಲ್ಲೋ, ಗೆರೆಗಳಲ್ಲೋ ಹಿಡಿದಿಡುವುದು ಅಪಾರ ಕಷ್ಟದ  ಹಾಗೂ ಜವಾಬ್ದಾರಿಯ ಕೆಲಸ. ಇದನ್ನು ಸೂಕ್ಷ್ಮ ಕುಸುರಿಯಾಗಿ ಇಲ್ಲಿ ಪ್ರದರ್ಶಿತವಾದ ಎಲ್ಲ 75 ಕಲಾಕೃತಿಗಳಲ್ಲೂ ಸೆರೆ ಹಿಡಿದಿರುವುದು ಈ ಹಿರಿಯ ಕಲಾವಿದನ ನೈಪುಣ್ಯದೊಂದಿಗೆ ಮಹಾತ್ಮರ ಬಗೆಗೆ ಅವರಿಗಿರುವ ಪ್ರೇಮ, ಗೌರವಗಳನ್ನೂ ಸೂಚಿಸುತ್ತದೆ. ಮಹಾತ್ಮಾ, ಕಲಾವಿದನ ಆಂತರ್ಯದಲ್ಲಿ  ನೆಲೆಸಿದ ಹೊರತು ಇಂಥ ಕಲಾರಚನೆ ಅಸಾಧ್ಯ ಎಂದೇ ಹೇಳಬಹುದು. 

ಈ ಚಿತ್ರಗಳಲ್ಲಿರುವ ಸರಳತೆ ಮಹಾತ್ಮಾ ಗಾಂಧಿಯವರ ಸರಳತೆಗೆ ರೂಪಕವಾಗಿದೆ. ಇಲ್ಲಿ ಯಾವುದೇ ಬಣ್ಣಗಳ ಮೇಳವಿಲ್ಲ.  ಕೆಲವು ಕೃತಿಗಳ  ಹಿನ್ನೆಲೆಯಲ್ಲಿ  ಬಳಸಲಾಗಿರುವ 3-4  ಬಣ್ಣಗಳು ಮುನ್ನೆಲೆಯ ಮಹತ್ವವನ್ನು ಸೆರೆ ಹಿಡಿಯುತ್ತವೆಯೇ ಹೊರತು ಯಾವ ರೀತಿಯಲ್ಲೂ ಕೇಂದ್ರದಿಂದ ಮನಸ್ಸನ್ನು ಪಲ್ಲಟಗೊಳಿಸುವುದಿಲ್ಲ. ಅಷ್ಟು ಗಾಢವಾಗಿ ಮಹಾತ್ಮರ ಮುಖಮುದ್ರೆ  ಪ್ರತಿಯೊಬ್ಬ ನೋಡುಗನನ್ನೂ  ಹಿಡಿದು ನಿಲ್ಲಿಸಿ ಬಿಡುತ್ತದೆ. ಅದು ಇಲ್ಲಿರುವ 14× 9 ಸೆ.ಮೀ ನ ಪುಟ್ಟ ಕ್ಯಾನ್ವಾಸೇ ಆಗಲೀ ಅಥವಾ  24× 35 ಇಂಚಿನ      ಅಳತೆಯ ದೊಡ್ಡ ಕ್ಯಾನ್ವಾಸೇ ಆಗಲಿ ! ಮಹಾತ್ಮರ ಚಿತ್ರಕ್ಕೆ ಅಳತೆಯ ಗೋಜೇ ಇಲ್ಲ.

ಮೂರ್ತಿಯವರು ಸೆರೆ ಹಿಡಿದಿರುವ ಅವರ ಭಾವಮುದ್ರೆಗಳ ವಿಭಿನ್ನತೆ ಅಚ್ಚರಿ ಹುಟ್ಟಿಸುವಂತಿದೆ. ಮುಗ್ಧ ಮಗುವಿನ ನಗೆಯ ಗಾಂಧಿಯಂತೆಯೇ ದೀರ್ಘ ಆಲೋಚನೆ, ಚಿಂತನೆ, ನೋವು, ಧ್ಯಾನ ಮೊದಲಾದ ಹಲವಾರು ಮನಸ್ಥಿತಿಗಳ  ಶೋಕೇಸ್ ಇಲ್ಲಿದೆ. ಕಣ್ಣು ಮುಚ್ಚಿ ದೀರ್ಘ ಧ್ಯಾನದಲ್ಲಿರುವ ಚಿತ್ರದೆದುರು ನಿಂತಾಗ ತಂತಾನೆ ವೈಷ್ಣವ ಜನತೋ…ಗುನುಗುನಿಸುತ್ತದೆ. ಚಿತ್ರಿಸದೇ ಇರುವ ಗಾಂಧಿ ಟೋಪಿ ಮಗದೊಂದು ಚಿತ್ರದಲ್ಲಿ ಜೀವತಳೆದರೆ, ಮುಗ್ಧ ನಗೆಯೆದುರು ನೋಡುಗನ ಮುಖದಲ್ಲೂ ಮಂದಹಾಸ ಮೂಡುತ್ತದೆ‌. ಇಲ್ಲಿ ಮೂಡಿರುವ ಒಂದೊಂದು ಸುಕ್ಕೂ, ಒಂದೊಂದು ಗೆರೆಯೂ, ಉಬ್ಬಿರುವ ನರವೂ, ಗೋಚರಿಸುವ ದೇಹದ  ಗಂಟುಗಳೂ ಕರಾರುವಾಕ್ಕಾಗಿದ್ದು ಅವುಗಳ ವಿಶೇಷತೆಯನ್ನು ಹೇಳುತ್ತವೆ. ಇದು ಒಬ್ಬ ಕಲಾತಪಸ್ವಿಗೆ ಮಾತ್ರ ಸಾಧ್ಯ ಎಂದರೆ ಅತಿಶಯೋಕ್ತಿಯಾಗಲಾರದು. ಗಾಂಧಿಯವರ ಸ್ವಾತಂತ್ರ್ಯ  ಹೋರಾಟದ ಸಂದರ್ಭದಲ್ಲಿ ಭಾಗವಾಗಿದ್ದ ಅನೇಕ ಮಹನೀಯರುಗಳಾದ ನೆಹರು, ಸುಭಾಶ್ಚಂದ್ರ ಬೋಸ್, ಗಡಿನಾಡ ಗಾಂಧಿ, ಕಸ್ತೂರಬಾ, ರವೀಂದ್ರನಾಥ ಟಾಗೋರ್ ಮೊದಲಾದವರ ಭೂಮಿಕಿಯೂ ಇಲ್ಲಿ ಚಿತ್ರಿತವಾಗಿದೆ. 

12 ದಿನಗಳ ಕಾಲ ನಡೆದ ಈ ಪ್ರದರ್ಶನವನ್ನು ಅನೇಕ ಗಣ್ಯರು ವೀಕ್ಷಿಸಿದ್ದಾರೆ. ಟಿ ಜೆ ಎಸ್ ಜಾರ್ಜ್ ಅವರಂಥ ಹಿರಿಯ ಲೇಖಕರು, ಗಿರೀಶ್ ಕಾಸರವಳ್ಳಿ ಅವರಂಥ ನಿರ್ದೇಶಕರು,  ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರು  ತಲೆದೂಗಿದ್ದಾರೆ. ಸುಮಾರು 25 ಏಕವ್ಯಕ್ತಿ ಪ್ರದರ್ಶನಗಳನ್ನು  ಮಾಡಿರುವ ಮೂರ್ತಿ ಅವರು  ಕೆಲ ವರ್ಷಗಳ ಹಿಂದೆ ‘ದ ಬೌಲ್ ‘ ಎಂಬ ಶೀರ್ಷಿಕೆಯಲ್ಲಿ ಬುದ್ಧನ ಚಿತ್ರಕಲಾ ಪ್ರದರ್ಶನವನ್ನು ಮಾಡಿ ಜನಮನ್ನಣೆ ಗಳಿಸಿದ್ದರು.  ಈ ಪ್ರದರ್ಶನದಿಂದ ಆ ಹಾದಿಯಲ್ಲಿ ಇನ್ನೂ ಮುಂದೆ ಸಾಗಿದ್ದಾರೆ. 

ಇಂಥ ಅಪರೂಪದ ಪ್ರದರ್ಶನಗಳ ಸುದ್ದಿ ಅನೇಕ ಮಾಧ್ಯಮಗಳಿಗೆ ತಲುಪದೇ ಇರುವುದು ಖೇದಕರ. ಗಾಂಧೀಜಿಯವರನ್ನು ಹಿನ್ನೆಲೆಗೆ ಸರಿಸಲಾಗುತ್ತಿರುವ ದಿನಗಳಲ್ಲಿ ಕಲಾವಿದ ಮೂರ್ತಿಯವರು, ಅವರನ್ನು ಜನಮಾನಸದಲ್ಲಿ ಹೀಗೆ ನೆಲೆಗೊಳಿಸಲು ಮಾಡಿದ ವೈಯುಕ್ತಿಕ ಪ್ರಯತ್ನ ಶ್ಲಾಘನೀಯ. ಅದರಲ್ಲೂ  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರು ಗಾಂಧೀಜಿಯವರಿಗೆ ನೀಡಿದ ಈ ಕಲಾ ಪ್ರದರ್ಶನ ಬಹಳ ಅರ್ಥಪೂರ್ಣ. 

‍ಲೇಖಕರು Admin

October 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: