ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನಾಲ್ವರು ಸೈನಿಕರ ಮಾತುಕತೆ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇಂದಿನಿಂದ ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

2

ಹಾಜಿ ಮುರಾದ್ ರಾತ್ರಿಯ ವಸತಿ ಮಾಡಿದ್ದ ಔಲ್‌ನಿಂದ ಸುಮಾರು ಹತ್ತು ಮೈಲು ದೂರದಲ್ಲಿದ್ದ ವಾಝ್ವಿಶಾನ್ಕ್ ಕೋಟೆಯಿಂದ ಮೂವರು ಸೈನಿಕರು ಮತ್ತೊಬ್ಬ ನಾನ್ ಕಮೀಶನ್ಡ್ ಅಧಿಕಾರಿ ಹೊರ ಬಂದು ಶಾಗಿರಿನ್ಸ್‌ಕ್ ಗೇಟನ್ನು ದಾಟಿದರು. ಆ ಕಾಲದ ಕಕೇಶಿಯನ್ ಸೈನಿಕರ ಉಡುಪಿನಂಥ ಕುರಿಯ ಚರ್ಮದ ಕೋಟು, ಟೋಪಿ, ಮೊಳಕಾಲು ದಾಟುವಂಥ ಬೂಟು ತೊಟ್ಟಿದ್ದರು. ಉದ್ದ ನಿಲುವಂಗಿಯನ್ನು ಸುಮ್ಮನೆ ಭುಜದ ಮೇಲೆಸೆದುಕೊಂಡು ಬಲಗೈಯಲ್ಲಿ ಬಂದೂಕನ್ನು ಹಿಡಿದು ಭುಜಕ್ಕೊರಿಸಿಕೊಂಡು ಸುಮಾರು ಐದು ನೂರು ಹೆಜ್ಜೆ ನಡೆದರು.  ಆಮೇಲೆ ಬಲಕ್ಕೆ ತಿರುಗಿ ಸುಮಾರು ಇಪ್ಪತ್ತು ಹೆಜ್ಜೆ ನಡೆದು ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುತಿದ್ದ ಕತ್ತರಿಸಿದ ಪ್ಲೇನ್ ಮರದ ಬೊಡ್ಡೆಯತ್ತ ಸಾಗಿದಾಗ ಉದುರಿದ ಎಲೆಗಳು ಅವರ ಬೂಟಿನಡಿಯಲ್ಲಿ ಚರಪರ ಸದ್ದು ಮಾಡುತಿದ್ದವು. ಬರುವ ಶತ್ರುಗಳಿಗೆ ಹೊಂಚು ಹಾಕಿ ಕಾಯುವ ಜಾಗ ಸಾಮಾನ್ಯವಾಗಿ ಇದೇ ಆಗಿರುತಿತ್ತು. 

ಸೈನಿಕರು ನಡೆಯುತಿದ್ದಾಗ ಮರಗಳ ತುಟ್ಟ ತುದಿಯಲ್ಲಿ ಸಾಲಾಗಿ ಓಡುವ ಹಾಗೆ ಕಾಣುತಿದ್ದ ನಕ್ಷತ್ರಗಳು ಈಗ ನಿಶ್ಚಲವಾಗಿ ನಿಂತು ಮರದ ಕೊಂಬೆಗಳ ನಡುವೆ ಮಿನುಗುತಿದ್ದವು. 

’ಸದ್ಯ, ನೆಲ ಒಣಗಿದೆ,’ ಅನ್ನುತ್ತ ನಾನ್ ಕಮಿಶನ್ಡ್ ಅಧಿಕಾರಿ ಪಾನೋವ್ ತನ್ನ ಭುಜಕ್ಕೆ ಒರಗಿಸಿಕೊಂಡಿದ್ದ, ಬಾಯೊನೆಟ್ ಸಿಕ್ಕಿಸಿದ ಬಂದೂಕನ್ನು ದೊಪ್ಪನೆ ಸದ್ದಾಗುವ ಹಾಗೆ ಮರಕ್ಕೆ ಒರಗಿಸಿದ. ಮಿಕ್ಕ ಮೂವರು ಸೈನಿಕರೂ ಹಾಗೇ ಮಾಡಿದರು. 

’ಗ್ಯಾರಂಟಿ ಕಳೆದು ಹೋಗಿದೆ! ನಾನು ಅಲ್ಲೇ ಬಿಟ್ಟು ಬಂದಿರಬೇಕು ಅಥವಾ ದಾರಿಯಲ್ಲಿ ಬೀಳಿಸಿಕೊಂಡಿರಬೇಕು,’ ಪಾನೋವ್ ಗೊಣಗಿದ.

’ಏನು ಹುಡುಕುತಿದ್ದೀರಿ, ಸರ್?’ ಸೈನಿಕರಲ್ಲೊಬ್ಬ ಖುಷಿಯ ದೊಡ್ಡ ದನಿಯಲ್ಲಿ ಕೇಳಿದ.

’ತಂಬಾಕು ಸೇದುವ ಪೈಪಿನ ತುದಿಯ ಬಟ್ಟಲು, ಎಲ್ಲಿ ಹೋಯಿತೋ’

’ನಿಮ್ಮ ಹತ್ತಿರ ಪೈಪು ಇದೆಯಲ್ಲವಾ, ಸರ್?’ ಖುಷಿಯ ದನಿ ಕೇಳಿತು.

’ತಗೋ, ಖಾಲಿ ಪೈಪು.’

’ಹಾಗಿದ್ದರೆ ಅದನ್ನ ನೆಲಕ್ಕೆ ಹೂಳಿ ತಂಬಾಕು ತುಂಬಿಸಬಹುದಲ್ಲವಾ?’

’ಯಾಕೆ ಸುಮ್ಮನೆ ರೇಜಿಗೆ!’

’ಒಂದೇ ನಿಮಿಷ, ರೆಡಿ ಮಾಡತೇವೆ.’

ಹೊಂಚು ಕಾಯುವಾಗ ಪೈಪು, ಸಿಗರೇಟು ಸೇದುವ ಹಾಗಿರಲಿಲ್ಲ. ಆದರಿದು ಹೊಂಚು ಹಾಕುವ ಜಾಗ ಅನ್ನುವುದಕ್ಕಿಂತ ಗುಡ್ಡಗಾಡಿನ ಜನ ತೋಪುಗಳನ್ನು ತಂದು ಕೋಟೆಯ ಮೇಲೆ ದಾಳಿ ಮಾಡದ ಹಾಗೆ ಕಣ್ಣಿಡುವ ಜಾಗವಷ್ಟೇ ಆಗಿ ಉಳಿದಿತ್ತು. ಬೆಟ್ಟದ ಜನ ಹಿಂದೆ ಎಷ್ಟು ಬಾರಿ ಹಾಗೆ ಮಾಡಿದ್ದರು. ಇಂಥಲ್ಲಿ ಪೈಪು ಸೇದುವ ಸುಖವನ್ನು ತ್ಯಾಗಮಾಡಬೇಕಾಗಿಲ್ಲ ಅನ್ನಿಸಿತ್ತು ಪಾನೋವ್‍ಗೆ. ಹಾಗಾಗಿ ಖುಷಿ ಸೈನಿಕನ ಮಾತು ಒಪ್ಪಿದ. ಸೈನಿಕ ಜೇಬಿನಿಂದ ಚಾಕು ತೆಗೆದು ನೆಲದಲ್ಲಿ ಪುಟ್ಟದೊಂದು ಗುಂಡಿ ತೋಡಿದ. ಗುಂಡಿಯ ಸುತ್ತಲೂ ಒಳಗೂ ತಟ್ಟಿ, ಸವರಿ, ಸಮಮಾಡಿ, ಪೈಪಿನ ಕೊಳವೆಯನ್ನು ಸರಿಯಾಗಿ ಜೋಡಿಸಿ ಗುಂಡಿಯ ತುಂಬ ಹೊಗೆಸೊಪ್ಪು ತುಂಬಿ ಅದುಮಿದ. ಪೈಪು ಸಿದ್ಧವಾಯಿತು.  ಗಂಧಕದ ಕಡ್ಡಿಯನ್ನು ಗೀರಿದಾಗ ಆ ಬೆಳಕಲ್ಲಿ ನೆಲದ ಮೇಲೆ ಹೊಟ್ಟೆ ಅಡಿಯಾಗಿ ಮಲಗಿದ್ದ ಸೈನಿಕನ ಮುಖದ ಗಲ್ಲದ ಮೂಳೆ ಎದ್ದು ಕಂಡಿತು. ಪೈಪಿನ ಕೊಳವೆಯಿಂದ ಸಿಳ್ಳೆಯಂಥ ಸದ್ದು ಕೇಳಿಸಿತು. ಸುಡುತಿರುವ ಹೊಗೆಸೊಪ್ಪಿನ ಹಿತವಾದ ಪರಿಮಳ ಪಾನೋವ್‌ನನ್ನು ಆವರಿಸಿತು. 

’ಸರಿಹೋಯಿತಾ?’ ಪಾನೋವ್ ಕೇಳಿದ.

’ಸರಿಹೋಗದೆ ಮತ್ತೇ!’

’ಎಷ್ಟು ಜಾಣ ನೀನು, ಅವ್ದೀವ್!…ಓ ಬಾಯ್! ಜಡ್ಜ್ ಆಗುವಷ್ಟು ಜಾಣ ನೀನು.’ 

ಅವ್ದೀವ್ ಪಕ್ಕಕ್ಕೆ ಹೊರಳಿ, ಬಾಯಿಂದ ಹೊಗೆ ಬಿಡುತ್ತಾ ಪಾನೋವ್‌ಗೆ ಜಾಗ ಮಾಡಿಕೊಟ್ಟ. ಪಾನೋವ್ ಬಗ್ಗಿ ಕೂತು, ಕೊಳವೆಯನ್ನು ಮೊದಲು ಅಂಗಿಯ ತೋಳಿನಲ್ಲಿ ಒರೆಸಿ, ಹೊಗೆ ಎಳೆದ. ಎಲ್ಲ ನಾಲ್ಕು ಸೈನಿಕರೂ ಪೈಪು ಸೇದಿ ಮಾತು ಶುರುಮಾಡಿಕೊಂಡರು. 

’ಕಂಪನಿಯ ಕಮಾಂಡರು ಗಲ್ಲಾ ಪೆಟ್ಟಿಗೆಗೆ ಇನ್ನೊಂದು ಸಲ ಕೈ ಹಾಕಿದ್ದ ಅಂತ ಕೇಳಿದೆ,’ ಅಂದ ಒಬ್ಬ.

’ಇಸ್ಪೀಟಿನಲ್ಲಿ ಸೋತಿದ್ದನಲ್ಲಾ, ಅದಕ್ಕೇ…’ ಸೋಮಾರಿತನದ ದನಿಯಲ್ಲಿ ಇನ್ನೊಬ್ಬ ಅಂದ. 

’ವಾಪಸ್ಸು ಕೊಡತಾನೆ ಅದನ್ನ,’ ಅಂದ ಪಾನೋವ್.

’ಕೊಡುತಾನೆ! ಒಳ್ಳೆಯ ಆಫೀಸರು ಅವನು,’ ಅವ್ದೀವ್ ಒಪ್ಪಿಗೆ ಸೂಚಿಸಿದ. 

’ಒಳ್ಳೇದು! ಒಳ್ಳೇದು! ನನ್ನ ಕೇಳಿದರೆ ನಮ್ಮ ಇಡೀ ಕಂಪನಿ ಈ ವಿಚಾರ ಮಾತಾಡಬೇಕು. ದುಡ್ಡು ತಗೊಂಡಿದ್ದರೆ ಎಷ್ಟು ತಗೊಂಡಿದೀಯ, ಯಾವಾಗ ಕೊಡುತೀಯ, ಕೇಳಬೇಕು.’

’ಆ ವಿಚಾರ ಕಂಪನಿ ತೀರ್ಮಾನ ಮಾಡಬೇಕು,’ ಅನ್ನುತ್ತ ಪಾನೋವ್ ಪೈಪಿನಿಂದ ದೂರವಾದ. 

’ನಿಜ, ’ಒಗ್ಗಟ್ಟಿನಲ್ಲಿ ಬಲವಿದೆ’ ಅನ್ನುತ್ತಾರಲ್ಲ, ಹಾಗೆ,’ ಅಂದು ಒಪ್ಪಿಗೆ ತೋರಿದ ಅವ್ದೀವ್.

’ಓಟ್ಸ್ ಖರೀದಿ ಮಾಡಬೇಕು, ಬೇಸಿಗೆಯಲ್ಲಿ ಹೊಸ ಬೂಟು ತಗೊಳ್ಳಬೇಕು, ದುಡ್ಡು ಬೇಕಾಗತ್ತೆ. ಅವನು ನುಂಗಿ ಹಾಕಿದರೆ?’ ಅತೃಪ್ತ ಸೈನಿಕ ಗಟ್ಟಿಸಿ ಕೇಳಿದ. 

’ಹೇಳಿದೆನಲ್ಲಾ, ಕಂಪನಿ ತೀರ್ಮಾನ ಮಾಡಿದ ಹಾಗೆ ನಡೆಯತ್ತೆ. ಇದೇ ಮೊದಲೇನೂ ಅಲ್ಲ. ಅವನು ದುಡ್ಡು ಎತ್ತಿಕೊಳ್ಳತಾನೆ, ವಾಪಸ್ಸೂ ಕೊಡತಾನೆ,’ ಅಂದ ಪಾನೋವ್. 

ಆ ದಿನಗಳಲ್ಲಿ ಕಾಕಸಸ್‌ನಲ್ಲಿದ್ದ ಸೈನಿಕ ತುಕಡಿಗಳು ತಮ್ಮ ಹಣಕಾಸಿನ ವ್ಯವಹಾರ ನೋಡಿಕೊಳ್ಳುವುದಕ್ಕೆ ತಮ್ಮಲ್ಲೇ ಒಬ್ಬನನ್ನು ನೇಮಿಸುತಿದ್ದವು. ಪ್ರತಿಯೊಬ್ಬ ಸೈನಿಕನಿಗೆ ಒಂದು ತಿಂಗಳಿಗೆ ೬ ರೂಬಲ್, ೫೦ ಕೊಪೆಕ್ ಹಣ ಖಜಾನೆಯಿಂದ ಬರುತಿತ್ತು. ಅದು ಕಂಪೆನಿಯ ಖರ್ಚುವೆಚ್ಚಗಳಿಗೆ ಬಳಕೆಯಾಗುತಿತ್ತು. ಸೈನಿಕರು ಕೋಸು ಬೆಳೆಯುತಿದ್ದರು, ಹುಲ್ಲು ಬೆಳೆಸುತಿದ್ದರು, ಅವರದೇ ಗಾಡಿಗಳಿದ್ದವು, ತಮ್ಮ ಹತ್ತಿರ ಚೆನ್ನಾಗಿ ಬೆಳೆದ ಕುದುರೆಗಳಿವೆ ಎಂದು ಹೆಮ್ಮೆಪಡುತಿದ್ದರು. ಕಂಪೆನಿಯ ಹಣವನ್ನು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿರುತಿದ್ದರು, ಅದರ ಬೀಗದ ಕೈ ಕಮಾಂಡರನ ಹತ್ತಿರ ಇರುತಿತ್ತು. ಕಮಾಂಡರು ಆಗಾಗ ಆ ದುಡ್ಡನ್ನು ಬಳಸಿಕೊಂಡು ಮತ್ತೆ ಹಿಂದಿರುಗಿಸುತಿದ್ದ. ಮಂಕು ದನಿಯ ಸೈನಿಕ ನಿಕಿತಿನ್ ಈಗ, ‘ದುಡ್ಡು ತೆಗೆದುಕೊಂಡ ಕಮಾಂಡರನ ಹತ್ತಿರ ಲೆಕ್ಕ ಕೇಳಬೇಕು,’ ಅನ್ನುತಿದ್ದ, ಪಾನೋವ್ ಅದು ಅಗತ್ಯವಿಲ್ಲ ಅನ್ನುತಿದ್ದ. 

ಪಾನೋವ್‌ ಆದಮೇಲೆ ನಿಕಿತಿನ್ ಹೊಗೆ ಎಳೆದು, ನಿಲುವಂಗಿ ನೆಲದ ಮೇಲೆ ಹರಡಿ, ಅದರ ಮೇಲೆ ಕೂತು ಪ್ಲೇನ್ ಮರದ ಬೊಡ್ಡೆಗೆ ಬೆನ್ನು ಒರಗಿಸಿದ. ಸೈನಿಕರು ಸುಮ್ಮನಾದರು. ಅವರ ತಲೆಗಳ ಮೇಲೆ ಮರದ ತುದಿಯಲ್ಲಿ ಗಾಳಿಯ ಸುಳಿದಾಟದ ಸದ್ದು ಕೇಳುತಿತ್ತು. ಈ ಸತತ ಮರ್ಮರವನ್ನು ಮೀರಿಸಿ ಇದ್ದಕಿದ್ದ ಹಾಗೆ ನರಿಗಳು ಊಳಿಡುವ, ಗೋಳಿಡುವ, ಗುರುಗುಟ್ಟುವ. ನಗುವ ಸದ್ದು ಕೇಳಿಸಿದವು. 

’ಥೂ ದರಿದ್ರದವು, ಬೆದೆಗೆ ಬಂದು ಒದರತಾ ಇದಾವೆ!’

’ನಿಮ್ಮ ಮಂಕು ತಲೆ ನೋಡಿ ನಗತಾ ಇವೆ,’ ಉಕ್ರೇನಿನ ಸೈನಿಕ, ಅವರೊಡನೆ ಇದ್ದ ನಾಲ್ಕನೆಯವನು, ಗಟ್ಟಿ ದನಿಯಲ್ಲಿ ಅಂದ. 

ಎಲ್ಲರೂ ಮತ್ತೆ ಸುಮ್ಮನಾದರು. ಗಾಳಿ ಮಾತ್ರ ಬೀಸುತ್ತ ಕೊಂಬೆಗಳು ಮೆಲ್ಲಗೆ ಅತ್ತಿತ್ತ ಒಲೆಯುತ್ತ ಈಗ ನಕ್ಷತ್ರಗಳನ್ನು ತೋರುತ್ತ, ಈಗ ಮರೆ ಮಾಡುತ್ತ ಇದ್ದವು. 

’ಪಾನೋವ್, ನಿಮಗೆ ಯಾವಾಗಾದರೂ ಬೇಜಾರು ಆಗತ್ತಾ? ಮಂಕು ಕವಿದ ಹಾಗೆ ಅನ್ನಿಸುತ್ತಾ?’ ಖುಷಿ ಸೈನಿಕ ಅವ್ದೀವ್ ಕೇಳಿದ. 

’ಮಂಕು? ಬೇಜಾರು? ಯಾಕೆ?’ ಪಾನೋವ್ ಹಿಂಜರಿಯುತ್ತ ಕೇಳಿದ. 

’ನನಗೆ ಹಾಗಾಗತ್ತೆ. ಎಂಥಾ ಮಂಕು ಕವಿಯತ್ತೆ ಅಂದರೆ ನಾನೇ ಏನಾದರೂ ಮಾಡಿಕೊಂಡೇನು ಅನಿಸಿಬಿಡತ್ತೆ.’

’ಅದಪ್ಪಾ ಕಥೇ ಅಂದರೆ!’ ಅಂದ ಪಾನೋವ್. 

’ನನ್ನ ಎಲ್ಲಾ ದುಡ್ಡು ಕುಡಿತಕ್ಕೆ ಸುರಿದಿದ್ದೆನಲ್ಲಾ…ತುಂಬ ಬೇಜಾರಲ್ಲಿದ್ದೆ. ಎಂಥಾ ಮಂಕು ಹಿಡಿದಿತ್ತು ಅಂದರೆ ಕುಡಿದು ಕುಡಿದು ಔಟ್ ಆಗಬೇಕು ಅನಿಸಿತ್ತು.’

’ಕುಡಿದರೆ ಒಂದೊಂದು ಬೇಜಾರು ಇನ್ನೂ ಜಾಸ್ತಿ ಕೂಡ ಆಗತ್ತೆ.’ 

’ಹ್ಞೂಂ, ನನಗೂ ಹಾಗೇ ಆಯಿತು. ಏನು ಮಾಡಬೇಕು ಹೇಳು?’

’ಯಾಕೆ ಅಷ್ಟೊಂದು ಬೇಜಾರು?’

’ನನಗಾ? ಮನೆಗೆ ವಾಪಸ್ಸು ಹೋಗಬೇಕು ಅಂತ ಆಸೆ.’

’ಮನೆಯ ಕಡೆ ಆಸ್ತಿ ಪಾಸ್ತಿ ಇದೆಯಾ?’

’ಹಾಗೇನಿಲ್ಲ. ನಾವು ತುಂಬಾ ದುಡ್ಡಿರುವವರೂ ಅಲ್ಲ.  ಚೆನ್ನಾಗಿ ಬದುಕಿದ್ದೆವು…’ ಅವ್ದೀವ್ ಎಷ್ಟೋ ಬಾರಿ ಪಾನೋವ್‌ಗೆ ಹೇಳಿದ್ದ ಕಥೆಯನ್ನು ಮತ್ತೆ ಹೇಳುವುದಕ್ಕೆ ಶುರು ಮಾಡಿದ.

’ನೋಡು, ನಾನೇ ಸೈನಿಕ ಆಗಬೇಕು ಅಂತ ತೀರ್ಮಾನ ಮಾಡಿ ಸೈನಿಕ ಆದೆ. ನಮ್ಮಣ್ಣನ ಬದಲು ನಾನು ಸೈನ್ಯಕ್ಕೆ ಸೇರಿದೆ. ನಮ್ಮಣ್ಣನಿಗೆ ಮಕ್ಕಳಿದಾವೆ. ಮನೆಯಲ್ಲಿ ಐದು ಜನ ಇದ್ದೆವು. ನನಗೆ ಆಗ ತಾನೇ ಮದುವೆ ಆಗಿತ್ತು. ನೀನು ಸೈನ್ಯಕ್ಕೆ ಹೋಗು ಅಂತ ಅಮ್ಮ ಬೇಡಿಕೊಳ್ಳೋದಕ್ಕೆ ಶುರು ಮಾಡಿದಳು. ನಾನು ಮನೆಗೆ ಉಪಕಾರ ಮಾಡಿದ್ದನ್ನ ಇವರೆಲ್ಲ ಜ್ಞಾಪಕ ಇಟ್ಟುಕೊಳ್ಳತಾರೆ ಅಂದುಕೊಂಡೆ. ನಮ್ಮ ಧಣಿ ಹತ್ತಿರ ಹೋದೆ. ಒಳ್ಳೆಯವರು ಅವರು. ’ಒಳ್ಳೇ ಹುಡುಗ, ನೀನೇ ಹೋಗು,’ ಅಂದರು. ಅಣ್ಣನ ಬದಲಾಗಿ ನಾನು ಬಂದೆ.  

’ಸರಿ ಬಿಡು, ಒಳ್ಳೆಯದಾಯಿತು,’ ಅಂದ ಪಾನೋವ್.

’ಆದರೂ, ಪಾನೋವ್, ಮನಸಿಗೆ ತುಂಬ ಬೇಜಾರಾಗತ್ತೆ. ಅವನು ಅರಮನೆಯಲ್ಲಿರುವ ರಾಜನ ಥರ ಆರಾಮವಾಗಿದಾನೆ, ನಾನು ಕಷ್ಟಪಡತಾ ಇದೇನೆ, ಅವನ ಬದಲು ನಾನು ಯಾಕೆ ಬಂದೆ ದಂಡಿನ ಕೆಲಸಕ್ಕೆ ಅಂತ ಮನಸಿಗೆ ಹಿಂಸೆ ಆಗತ್ತೆ. ಯೋಚನೆ ಮಾಡಿದಷ್ಟೂ ಮನಸ್ಸು ಕೆಟ್ಟು ಹೋಗಿ ನನ್ನ ಅದೃಷ್ಟ ಸರಿ ಇಲ್ಲ ಅನಿಸತ್ತೆ.’

ಅವ್ದೀವ್ ಸುಮ್ಮನಾದ. 

ಸ್ವಲ್ಪ ಹೊತ್ತಾದ ಮೇಲೆ ’ಇನ್ನೊಂದು ಸಾರಿ ಹೊಗೆ ಎಳೆಯೋಣವಾ?’ ಅಂತ ಕೇಳಿದ. 

’ಸರಿ, ರೆಡಿ ಮಾಡು!’

ಸೈನಿಕರು ತಂಬಾಕು ಸೇದುವ ಅವಕಾಶ ಸಿಗಲಿಲ್ಲ. ಅವ್ದೀವ್ ಪೈಪಿನ ಕೊಳವೆಯನ್ನು ನೆಲದಲ್ಲಿ ಸಿಕ್ಕಿಸಲು ಏಳುತಿದ್ದ ಹಾಗೇ ಎಲೆಗಳ ಮರ್ಮರ ಶಬ್ದವನ್ನೂ ಮೀರಿಸಿದ ಹೆಜ್ಜೆ ಸದ್ದು ರಸ್ತೆಯ ದಿಕ್ಕಿನಿಂದ ಕೇಳಿಸಿತು. ಪಾನೊವ್ ಬಂದೂಕು ಎತ್ತಿಕೊಂಡ. ನಿಕಿತಿನ್‌ನನ್ನು ಕಾಲಲ್ಲಿ ತಿವಿದ. 

ನಿಕಿತಿನ್ ಎಚ್ಚರಗೊಂಡು ನಿಲುವಂಗಿ ಎತ್ತಿಕೊಂಡ.

ಮೂರನೆಯ ಸೈನಿಕ, ಬೊನ್ದರೆನ್ಕೋ ಕೂಡ ಎದ್ದು, ’ನನಗೆ ಎಂಥಾ ಕನಸು ಬಿದ್ದಿತ್ತು ಗೊತ್ತಾ ಫ್ರೆಂಡ್ಸ್’ ಅನ್ನುವುದಕ್ಕೆ ಶುರುಮಾಡಿದ.

’ಶ್ ಶ್!’ ಅಂದ ಅವ್ದೀವ್. ಸೈನಿಕರು ಉಸಿರು ಬಿಗಿ ಹಿಡಿದು ಕಾಯುತ್ತ ನಿಂತರು. ಗಟ್ಟಿಯಾದ ಬೂಟುಗಳನ್ನು ತೊಟ್ಟಿರದ ಜನ ಹಾಕುತ್ತಿರುವ  ಹೆಜ್ಜೆ  ಸದ್ದು ಹತ್ತಿರಕ್ಕೆ ಬರುತಿತ್ತು. ಕತ್ತಲಲ್ಲಿ ಇಡುತ್ತಿರುವ ಹೆಜ್ಜೆಗಳಿಗೆ ಸಿಕ್ಕಿ ಮುರಿಯುವ ಒಣ ಕಡ್ಡಿ, ಎಲೆಗಳ ಸದ್ದು ಬರುಬರುತ್ತ ಜೋರಾಗುತ್ತಿತ್ತು. ಆಮೇಲೆ ಚೆಚೆನ್ ಜನಗಳಿಗೇ ವಿಶೇಷವಾದ ಗಂಟಲ ದನಿಗಳೇ ಹೆಚ್ಚಾಗಿರುವ ಮಾತು ಕೇಳಿಸಿತು. ಬರಿಯ ಕೇಳಿಸಿದ್ದು ಮಾತ್ರವಲ್ಲ, ಮರಗಳ ನಡುವೆ ಇರುವ ಖಾಲಿ ಜಾಗದಲ್ಲಿ ಎರಡು ಮನುಷ್ಯಾಕೃತಿಗಳ ನೆರಳು ಕೂಡ ಸೈನಿಕರಿಗೆ ಕಾಣಿಸಿತು. ಒಂದು ನೆರಳು ಎತ್ತರವಾಗಿ, ಇನ್ನೊಂದು ಗಿಡ್ಡದಾಗಿ ಇದ್ದವು. ಆ ನೆರಳು ಸೈನಿಕರ ಕಣ್ಣಳತೆಗೆ ನೇರವಾಗಿ ಬಂದಾಗ ಪಾನೋವ್ ಬಂದೂಕು ಎತ್ತಿ ಹಿಡಿದು, ರಸ್ತೆಯ ಬದಿಗೆ ಬಂದ. ಅವನ ಹಿಂದೆಯೇ ಸೈನಿಕರೂ ಬಂದರು.

’ಯಾರದು? ನಿಲ್ಲಿ!’ ಅಂದ ಪಾನೋವ್. 

’ನಾನು, ಗೆಳೆಯ ಚೆಚೆನ್! ಇಲ್ಲ ಗನ್! ಇಲ್ಲ ಕತ್ತಿ! ನೋಡಬೇಕು ಪ್ರಿನ್ಸ್ ಅವರನ್ನ!’ ಅಂದಿತು ಗಿಡ್ಡ ನೆರಳು. ಅವನು ಬಾತಾ.  

ಎತ್ತರವಾಗಿದ್ದವನು ಗೆಳೆಯನ ಪಕ್ಕ ಸುಮ್ಮನೆ ನಿಂತಿದ್ದ. ಅವನ ಹತ್ತಿರವೂ ಆಯುಧ ಇರಲಿಲ್ಲ.

’ಸುದ್ದಿ ತಿಳಿಯುವುದಕ್ಕೆ ಬಂದಿರುವ ಸೇವಕ. ಕರ್ನಲ್‌ನ ಭೇಟಿ ಮಾಡಬೇಕಂತೆ,’ ಪಾನೋವ್ ತನ್ನ ಗೆಳೆಯರಿಗೆ ವಿವರಿಸಿ ಹೇಳಿದ.

’ಪ್ರಿನ್ಸ್ ವರಾನ್ತಸೋವ್ ಅವರನ್ನು ನೋಡಲೇಬೇಕು! ವ್ಯವಹಾರ ದೊಡ್ಡದು!’ ಅಂದ ಬಾತಾ.

’ಸರಿ, ಸರಿ! ಕರಕೊಂಡು ಹೋಗುತ್ತೇವೆ. ಅವ್ದೀವ್ ನೀನು, ಬೊನ್ದರೆನ್ಕೋ ನೀನು, ನೀವಿಬ್ಬರೂ ಇವರನ್ನ ಕರಕೊಂಡು ಹೋಗಿ ಡ್ಯೂಟಿ ಆಫೀಸರಿಗೆ ಒಪ್ಪಿಸಿ. ಮತ್ತೆ ಇಲ್ಲಿಗೇ ವಾಪಸ್ಸು ಬನ್ನಿ. ಹುಷಾರು, ಇವರಿಬ್ಬರೂ ಯಾವಾಗಲೂ ನಿಮ್ಮ ಕಣ್ಣಮುಂದೇನೇ ಇರಬೇಕು! ಇಂಥವರು ಏನೇನು ತರಲೆ ಮಾಡುತ್ತಾರೋ ಗೊತ್ತಾಗಲ್ಲ,’ ಅಂದ ಪಾನೋವ್. 

ಸ್ವಲ್ಪ ಹೊತ್ತು ಸುಮ್ಮನಿದ್ದು, ’ಮತ್ತೆ ಇದು ಇರುವುದು ಯಾಕೆ?’ ಅನ್ನುತ್ತ ಅವ್ದೀವ್ ತನ್ನ ಬಂದೂಕಿನ ಬಾಯೊನೆಟ್ಟಿನಿಂದ ಯಾರನ್ನೋ ತಿವಿಯುವ ಹಾಗೆ ನಟಿಸುತ್ತ, ’ಒಂದು ಸಾರಿ ತಿವಿದರೆ ಉಸಿರು ಹಾರಿ ಹೋಗತ್ತೆ!’ ಅಂದ. 

’ಅವನು ಸತ್ತು ಹೆಣ ಆದರೆ ಏನು ಉಪಯೋಗ ಅದರಿಂದ?’ ಬಾಂದರೆನ್ಕೋ ಕೇಳಿದ.

’ಮಾರ್ಚ್!’

ಇಬ್ಬರು ಸೈನಿಕರು ಮತ್ತು ಇಬ್ಬರು ಸುದ್ದಿಗಾರರ ಹೆಜ್ಜೆ ಸದ್ದು ಕೇಳದಂತಾದಾಗ ಪಾನೋವ್, ನಿಕಿತಿನ್ ಇಬ್ಬರೂ ಮರಳಿ ತಮ್ಮ ಜಾಗಕ್ಕೆ ಹೋದರು.

’ಈ ಸರಿಹೊತ್ತಿನಲ್ಲಿ ಯಾಕೆ ಬಂದರೋ?’ ನಿಕಿತಿನ್ ಆಶ್ಚರ್ಯಪಟ್ಟ.

’ಏನೋ ಕೆಲಸ ಇರಬೇಕು. ಚಳಿ ಜಾಸ್ತಿ ಆಯಿತು,’ ಅನ್ನುತ್ತ ಪಾನೋವ್ ನಿಲುವಂಗಿಯನ್ನು ತೊಟ್ಟು ಮತ್ತೆ ಮರಕ್ಕೆ ಒರಗಿ ಕೂತ.

ಸುಮಾರು ಎರಡು ಗಂಟೆ ಕಳೆದ ಮೇಲೆ ಅವ್ದೀವ್, ಬೊನ್ದರೆನ್ಕೋ ವಾಪಸು ಬಂದರು.

’ಅವರನ್ನ ಡ್ಯೂಟಿ ಆಫೀಸರಿಗೆ ಒಪ್ಪಿಸಿದಿರಾ?’

’ಹ್ಞೂಂ. ಕರ್ನಲ್ ಮಲಗಿರಲಿಲ್ಲ. ಸೀದ ಕರ್ನಲ್ ಹತ್ತಿರ ಕರಕೊಂಡು ಹೋದರು. ಗೊತ್ತಾ ಫ್ರೆಂಡ್ಸ್, ತಲೆ ಬೋಳಿಸಿಕೊಂಡಿರುವ ಈ ಹುಡುಗರು ತುಂಬ ಒಳ್ಳೆಯವರು. ನಿಜವಾಗಲೂ. ಅವರ ಜೊತೆ ಮಾತಾಡಿದೆ, ಗೊತ್ತಾ?’ ಅಂದ ಅವ್ದೀವ್. 

’ಹ್ಞೂಂ, ಮಾತಾಡದೆ ಇರುತೀಯಾ ನೀನು,’ ನಿಕಿತಿನ್ ಆಕ್ಷೇಪ ಮಾಡುವ ದನಿಯಲ್ಲಿ ಕೇಳಿದ.

’ನಿಜವಾಗಲೂ, ರಶಿಯಾದವರ ಥರಾನೇ ಇದಾರೆ. ಅವರಲ್ಲಿ ಒಬ್ಬನ್ನ  ಮದುವೆ ಆಗಿದೆಯಾ ಅಂದೆ. ಆಗಿದೆ ಅಂದ. ಮಕ್ಕಳು ಅಂದೆ. ಇವೆ ಅಂದ. ತುಂಬಾ ಮಕ್ಕಳು ಇದಾವಾ ಅಂದೆ. ಎರಡು ಅಂದ. ಎಷ್ಟು ಚೆನ್ನಾಗಿ ಮಾತಾಡಿದ. ಈ ಜನ ಒಳ್ಳೇವರು.’

’ಒಳ್ಳೇವರು! ನಿಜ! ನೀನೊಬ್ಬನೇ ಅವರ ಕೈಗೆ ಸಿಕ್ಕಿ ಬಿದ್ದರೆ ನಿನ್ನ ಹೊಟ್ಟೆ ಬಗೆದು ಕರುಳು ಕಿತ್ತು ಬಿಸಾಕತಾರೆ,’ ಅಂದ ನಿಕಿತಿನ್. 

’ಇನ್ನೇನು ಬೆಳಕು ಹರಿಯತ್ತೆ,’ ಅಂದ ಪಾನೋವ್.

’ಹ್ಞೂಂ, ನಕ್ಷತ್ರಗಳು ಮಂಕಾಗತಾ ಇವೆ,’ ಅನ್ನುತ್ತ ಅವ್ದೀವ್ ಆರಾಮವಾಗಿ ಕೂತ. ಸೈನಿಕರು ಮತ್ತೆ ಮೌನವಾದರು.

| ಮುಂದುವರೆಯುವುದು |

‍ಲೇಖಕರು Admin

October 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: