ಮಳೆಗಾಲ, ಮಾರ್ಕ್ವೆಜ್ ಮತ್ತು ಅಮ್ಮ ಮಾಡುವ ಭೂತಾಯಿ ಮೀನಿನ ಸಾರು.

ಸಚಿನ್ ತೀರ್ಥಹಳ್ಳಿ

ಮಾರ್ಕ್ವೆಜ್ ನ ಕಾದಂಬರಿಯ ಅಧ್ಯಾಯವೊಂದನ್ನ ಓದಿ ಸುಮ್ಮನೆ ಯಾರೋಟ್ಟಿಗೋ ಹೇಳಿಕೊಳ್ಳಲಾಗದ ಬಹುಶಃ ನನ್ನ ಮೌನವನ್ನು ಮಾತ್ರ ಬಯಸುವ ಒಳಗೇಳುವ ಖುಷಿಯಿಂದ ಮನೆಯೆದರು ಅಂಗಾತ ಮಲಗಿದ್ದೆ. ಹುಡುಗಿಯನ್ನು ಬೇಡ ಅಂದರೂ ನೆನಪಿಸುವಷ್ಟು ಜೋರು ಮಳೆ ..ಜಲವೇಳುವ ಹಾಗೇ ಅದೆಲ್ಲಿಂದಲೋ ಒದ್ದುಕೊಂಡು ಬರುವ ಸಾಲುಗಳು , ಪೋಣಿಸುವ ಮನಸ್ಸಿಲ್ಲದೆ ಮಳೆಯ ನೀರಿನ ಹಾಗೆ ಅವು ಮತ್ತೆಲ್ಲಿಗೋ ಹರಿದು ಹೋಗುತ್ತಿದ್ದವು.ಅಮ್ಮ ಅದಾವುದೋ ಹಳೇ ಹಾಡನ್ನು ಗುನುಗುತ್ತಾ ತಲೆ ಬಾಚಿಕೊಂಡು ಸುಮಾರು ಹೊತ್ತು ಕೂತು ಎದ್ದು ಹೋದಳು.

ಗಂಡ ಸತ್ತ ದಿನವೇ ಹಳೇ ಗೆಳೆಯ ಎದುರಾಗಿ ಬರುತ್ತಿರುವ ಕಣ್ಣಿರು ಹೋದವನಿಗೋ ಎದುರಾದವನಿಗೋ ಅಂತ ಕಂಗಾಲಾಗುವ ಅಜ್ಜಿಯೊಬ್ಬಳ ಬಿಕ್ಕಳಿಕೆಯೊಂದಿಗೆ ಮುಗಿದ ಅಧ್ಯಾಯವನ್ನೆ ಧ್ಯಾನಿಸುತ್ತಿದ್ದವನಿಗೆ ಇದ್ದಕ್ಕಿದ್ದಂತೆ ಉಸಿರುಕಟ್ಟಿದಂತಾಗಿ ಕುಮುಟಿ ಬಿದ್ದೆ. ಗುಂಡು ಪಿನ್ನು ಚುಚ್ಚುವ ಹಾಗೆ ಮಧ್ಯಾಹ್ನ ತಿಂದಿದ್ದ ಮೀನಿನ ಮುಳ್ಳೊಂದು ಬಂದು ಸರಿಯಾಗಿ ಗುದ್ದಿ ಮತ್ತೆ ನಿಧಾನಕ್ಕೆ ಹಿಂದೆ ಮುಂದೆ ಚುಚ್ಚುತ್ತಾ ಆಟವಾಡುತ್ತಿತ್ತು.
ಮಲಗಿದ್ದಲಿಂದ ಎಡಕ್ಕೊ ಬಲಕ್ಕೊ ವಾಲಿದರೆ , ಜೋರಾಗಿ ಮಾತಾಡಲು ಬಾಯ್ತೆರೆದರೆ ಗಂಟಲು ಕೊರೆಯುವ ಚುಚ್ಚುತ್ತಿತ್ತು. ಬೇರೆ ದಾರಿಯಿಲ್ಲದೆ ಮಲಗಿದ್ದಲಿಂದಲೇ ತಲೆಯನ್ನ ಆಕಡೆ ಈಕಡೆ ತಿರುಗಿಸದೆ ಸುಮಾರು ಹೊತ್ತು ಹಾಗೆ ಮಲಗಿದ್ದೆ.

ದೇಹದ ಎಲ್ಲಾ ಭಾಗಗಳು ಸರಿಯಿದ್ದು ಸರಿಯಿಲ್ಲದ ಹಾಗೆ ಅನಿಸಿದರೆ ಎಂತಾ ಯಾತನೆಯಾಗುತ್ತದೆ ಅಂತ ಗೊತ್ತಾಗುತ್ತಿತ್ತು.

ಯಾರೋ ಅಪ್ಪನನ್ನು ಕೇಳಿಕೊಂಡು ಬರುವುದು ಗೇಟು ದಾಟುವುದು ಕಾಣಿಸಿತು, ನಾನು ನಿದ್ದೆ ಮಾಡುವ ಹಾಗೆ ಕಣ್ಮುಚ್ಚಿಕೊಂಡೆ, ಅವರು ಒಳಗೆ ಹೋಗಿ ಮಾತಾಡಿಕೊಂಡು ಗೇಟು ಹಾಕಿಕೊಂಡು ಹೋದರು.
ನಮ್ಮನೆ ನಾಯಿ ಬಂದು ಕಾಲು ಕೈಯನ್ನೆಲ್ಲಾ ಬಂದು ಮುತ್ತಿಕ್ಕುತ್ತಿದ್ದರೂ ನಾನು ವಾಪಾಸು ಅದನ್ನು ಮುದ್ದು ಮಾಡದೇ ಇರುವುದನ್ನ ಗಮನಿಸಿ ಸಿಟ್ಟು ಮಾಡಿಕೊಂಡು ದೂರ ಹೋಗಿ ಮಲಗಿತು.

ಹಾಗೆ ಒಂದು ಯಕಶ್ಚಿತ್ ಮೀನಿನ ಮುಳ್ಳು ನನ್ನನ್ನು ಕೈ ಕಾಲು ಅಲ್ಲಾಡಿಸದೇ ಬರೀ ಉಸಿರಾಡಿಕೊಂಡು ಮಲಗಿರು ಅಂತ ಅಜ್ನಾಪಿಸುತ್ತಿರುವಾಗ ..ನನ್ನೆಲ್ಲಾ ಕೆಲಸ, ಸಂಬಳ, insecurities, ಯಾವುದ್ಯಾವುದೋ ಭಯಗಳು , ಅರ್ಧ ಬರೆದ ಕತೆ, ಬಿಡದೆ ಬರುವ ಮಳೆ, ಮನೆ, ಊರು, ನನ್ನ ಬಿಟ್ಟರೆ ನಿನಗೆ ಇನ್ಯಾರು ಗತಿ ಅನ್ನುವ ಸಿಗರೇಟು ಎಲ್ಲಾ ಇದ್ದಕಿದ್ದಂತೆ ನಗಣ್ಯ ಅನಿಸೋಕೆ ಶುರುವಾಯಿತು.

ಅದು ಯಾವುದೋ ಬಾರದ ಹುಡುಗಿ ಗೋಳಾಡುತ್ತಿಯಾ.. ನಾಳೆ ಕೆಲಸ ಹೋದರೆ ಅಂತ ಭಯಪಡುತ್ತಿಯಾ.. ಅವನ್ಯಾವನೋ ಮ್ಯಾನೇಜರ್ ಬಯ್ದ ಅಂತ ಊಟ ಬಿಟ್ಟು ಮಲಗುತ್ತಿಯಾ.. ನಿನಗೆಲ್ಲಾ ಕೊಟ್ಟರು ಬೆಂಗಳೂರನ್ನ ನಿನ್ಯಾವತ್ತು ನಿನ್ನೂರಿನ ಹಾಗೆ ಪ್ರೀತಿಸದೆ ಸತಾಯಿಸುತ್ತಿಯಾ.. ನಿನ್ನ ಬಳಿಗೇ ಬಂದ ಕತೆಯನ್ನ ಬರೆಯದೇ ಅದನ್ನ ಎದೆ ಬಾಗಿಲ ಬಳಿ ಕಾಯುಸುತ್ತಿಯಾ.. ವರ್ಷದಲ್ಲಿ ಮೂರು ನಾಲ್ಕೊ ದಿನ ನಿನ್ನ ಕಣ್ಣಿಗೆ ಕಾಣಿಸಿಕೊಳ್ಳುವರ ಬಗ್ಗೆ ಸದಾ ಚಿಂತಿಸುತ್ತಾ ಅವರಿಷ್ಟಕ್ಕೆ ಬದುಕೋಕೆ ಹೋಗಿ ಒದ್ದಾಡುತ್ತಿಯಾ…ಯಾರ್ಯಾರದೋ ಹೊಗಳಿಕೆಗೆ ನಾಟಕ ಮಾಡುತ್ತಿಯಾ..ಬೇಕಾ ನಿನಗೆ ಇದೆಲ್ಲಾ ಬೇಕಾ ಅಂತ ಆ ಮುಳ್ಳು ಚುಚ್ಚಿ ಮಾತಾಡುತ್ತಿದೆ ಅನಿಸುತ್ತಿತ್ತು. ಅದರ ಮಾತಿಗೆ ಎದುರಾಡದೆ ಸುಮ್ಮನೆ ಕೈಕಾಲು ನೀಡಿಕೊಂಡು ಕೇಳಿಸಿಕೊಳ್ಳುತ್ತಿದೆ.

ಸುಮಾರು ಹೊತ್ತು ಹೀಗೆ ನನ್ನನ್ನು ಯಾವ ಜನ್ಮದ ಶತ್ರುವೋ ಏನೋ ಎಂಬಂತೆ ಜಾಡಿಸಿದರೂ ಅದು ಎದೆಯ ಗೂಡಿನ ಕಣಿಯ ಹಾಗೆ ನನಗೇ ಗೊತ್ತಿದ್ದನ್ನೆ ಹೇಳುತ್ತಿದೆ ಅನ್ನಿಸುತ್ತಿತ್ತು.

ಬಯ್ದು ಬೇಜಾರಾಗಿರಬೇಕು ..ಇದ್ದಕ್ಕಿದ್ದಂತೆ ಗಂಟಲ ಸಂಧಿಯಲ್ಲಿ ಎಲ್ಲೊ ನುಸುಳಿ ಮರೆಯಾಯಿತು, ಸರಿಯಾಗಿ ಮಳೆಯೂ ನಿಂತಿತು.

ನಿಧಾನಕ್ಕೆ ಮನೆಯೊಳಗೆ ಹೋದೆ. ಅಪ್ಪ ಅಮ್ಮ ಇಬ್ಬರು ಒಂದು ದೊಡ್ಡ ಲೋಟದಲ್ಲಿ ಕಾಫಿ ಹಿಡಿದು ಟೀವಿಯಲ್ಲಿ ಯಾವುದೋ ಸಿನಿಮಾ ನೋಡುತ್ತಾ ಆ ಸಂಜೆ ಕಳೆಯುತ್ತಿದ್ದರು. ನಾನು ನಿಧಾನಕ್ಕೆ ಒಂದು ಪೇಪರ್ ಹಿಡಿದು ಹೊರಬಂದು ದೋಣಿಯೊಂದನ್ನ ಮಾಡಲು ಪ್ರಯತ್ನಿಸಿದರೆ ಅದು ದೋಣಿಯಾಗದೆ ಮತ್ತಿನ್ನೆನೊ ಆಗುತ್ತಿತ್ತು , ಸಾಯಲಿ ಅಂತ ಪೇಪರ್ ಎಸೆಯಲೋ ಕೈ ಎತ್ತಬೇಕು.. ಮತ್ತೆ ಗಂಟಲಲ್ಲಿ ಮುಳ್ಳಿನ ಗಂಟೆ.

ಇದರ ಸಾವಾಸವೇ ಬೇಡ ಅಂತ ಮತ್ತೆ ನಿಧಾನಕ್ಕೆ ನನ್ನೆಲ್ಲಾ ಗಮನವನ್ನು ಪೇಪರಿನ ಮೇಲೆ ನೆಟ್ಟು ಮರೆತ ವಿಧ್ಯೆಯನ್ನ ನೆನಪಿಸಿಕೊಂಡು ದೋಣಿ ಮಾಡಿ ಮನೆಯೆದುರಿಗೆ ಹರಿಯುತ್ತಿದ್ದ ಸಣ್ಣ ಜರಿಯಲ್ಲಿ ಬಿಟ್ಟೆ… ಆ ದೋಣಿ ಕೈಯಿಂದ ಬಿಡಿಸಿಕೊಂಡು ನನ್ನನ್ನು ಅಗಲಿ ಹೋಗುವಾಗ ಮಾತ್ರ ಅದರ ಮುಖದಲ್ಲಿ , ಅವಳು ಕೊನೆಯ ಬಾರಿಗೊಮ್ಮೆ ಬಸ್ಸಿನ ಕಿಟಕಿಯ ಸರಳುಗಳ ನಡುವೆ ತಲೆಯಿಟ್ಟು ನೋಡಿದಾಗಲಿದ್ದಷ್ಟೆ ವಿಷಾದವಿತ್ತು.

‍ಲೇಖಕರು Admin

June 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: