ಮಲ್ಲಿಕಾರ್ಜುನ ಶೆಲ್ಲಿಕೇರಿ ಓದಿದ ‘ಚೆಲುವಿ ಚಂದ್ರಿʼ

ಮಲ್ಲಿಕಾರ್ಜುನ ಶೆಲ್ಲಿಕೇರಿ

ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡದ ಮಹತ್ವದ ಕವಿಗಳಲ್ಲಿ ಒಬ್ಬರಾದ ಡಾ. ಪ್ರಕಾಶ ಖಾಡೆಯವರು ಈಗಾಗಲೇ ಸಾಹಿತ್ಯ ಲೋಕದಲ್ಲಿ ಮೂವತ್ತಕ್ಕೂ ಮೀರಿ ಕೃತಿಗಳನ್ನು ಬೆಳಕಿಗೆ ತಂದಿದ್ದು, ಅವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕವನ ಸಂಕಲನಗಳು ಎಂಬುವುದನ್ನು ಸಾಹಿತ್ಯಾಸಕ್ತರು ಬಲ್ಲಂತಹ ಸಂಗತಿ. ನಾಡಿನ ಜನಪ್ರಿಯ ಪತ್ರಿಕೆಗಳಲ್ಲಿ ಅವರ ಕವನಗಳು, ಲೇಖನಗಳನ್ನು ಓದದ ಓದುಗರು ಸಿಗುವುದು ತುಂಬಾ ದುರ್ಲಭ. ಹಾಗೆಯೇ ಅವರ ಕಥೆಗಳು ಆಗಾಗ ಪತ್ರಿಕೆಯಲ್ಲಿ ಬಂದದ್ದು ಉಂಟು.

ಕವಿತಾ ಪ್ರಕಾರಕ್ಕೆ ಕೊಟ್ಟಂತಹ ಒತ್ತನ್ನು ಅವರು ಕಥಾ ಪ್ರಕಾರಕ್ಕೆ ಕೊಟ್ಟಿದ್ದರೆ ಅವರು ಒಬ್ಬ ಉತ್ತಮ ಕಥೆಗಾರರಾಗಿ ಹೊರಹೊಮ್ಮುತ್ತಿದ್ದರು, ಯಾಕೆಂದರೆ ಅವರ ಚೊಚ್ಚಲು ಕಥಾ ಸಂಕಲನ ‘ಚೆಲುವಿ ಚಂದ್ರಿ’ಯಲ್ಲಿನ ಕಥೆಗಳನ್ನು ಓದಿದಾಗ ಅಂತಹ ಅನಿಸಿಕೆ ಬಾರದೆ ಇರದು. ಯಾಕೆಂದರೆ ಇಲ್ಲಿನ ಕಥೆಗಳಲ್ಲಿನ ಗಟ್ಟಿತನ ಹಾಗೂ ಕುಸುರಿತನ ಈ ಮಾತಿಗೆ ಇನ್ನಷ್ಟು ಇಂಬು ಕೊಡುತ್ತದೆ.

‘ಚೆಲುವಿ ಚಂದ್ರಿ’ ಕಥಾ ಸಂಕಲನದ ಪ್ರತಿಯೊಂದು ಕಥೆಯಲ್ಲೂ ಡಾ.ಖಾಡೆಯವರು ಗ್ರಾಮ್ಯ ಪರಿಸರದ ತಮ್ಮ ದಟ್ಟ ಅನುಭವಗಳನ್ನು ಕತೆಯನ್ನಾಗಿಸಿದ್ದಾರೆ. ಗ್ರಾಮೀಣ ಭಾರತದಲ್ಲಿ ನಡೆಯುವ ಧಾರ್ಮಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತ್ಯಂತರಗಳಲ್ಲಿನ ಘಟನೆಗಳಿಗೆ ತಮ್ಮ ಗ್ರಾಮ್ಯ ಅನುಭವದ ಮೂಸೆಯಲ್ಲಿ ಸಾಣೆ ಹಿಡಿದು ಕಥೆಯನ್ನಾಗಿಸಿರುವುದು ಸಂಕಲನದ ಹೆಗ್ಗಳಿಕೆಯಾಗಿದೆ. ಇಲ್ಲಿರುವ ಎಲ್ಲ ಕತೆಗಳು ಗ್ರಾಮೀಣ ಹಿನ್ನೆಲೆ ಹೊಂದಿರುವದರಿಂದ ಕಥೆಗಳಲ್ಲಿ ಏಕತಾನತೆ ನುಗ್ಗಿ ಚರ್ವಿತಚರ್ಣವಾಗುವ ಸಂಭವ ಇದ್ದಾಗಲೂ ಇಲ್ಲಿನ ಕತೆಗಳ ವಿಷಯ ವಸ್ತುವಿನಲ್ಲಿ ವೈವಿಧ್ಯತೆ ಕಾಪಾಡಿ ಅದಕ್ಕೆ ಅವಕಾಶ ನೀಡದಿರುವುದು ಕತೆಗಾರನ ಕೌಶಲ್ಯಕ್ಕೆ ಸಾಕ್ಷಿಯೊದಗಿಸಿವೆ.

ಈ ಸಂಕಲನದಲ್ಲಿನ ಪ್ರತಿಯೊಂದು ಕತೆಯನ್ನು ಓದುತ್ತಾ ಹೋದಂತೆ ಹಳ್ಳಿಯ ಪರಿಸರದ ವಿವಿಧ ಮುಖಗಳ ಅನಾವರಣಗೊಳ್ಳುತ್ತ ಸಾಗುತ್ತದೆ. ವಿವಿಧ ಸಂದರ್ಭಗಳು, ಪಾತ್ರಗಳು ಓದುಗನನ್ನು ಕುತೂಹಲಗೊಳಿಸುವಲ್ಲಿ ಯಶಸ್ವಿಯಾಗುತ್ತವೆ. ಗೌಡ, ದೇಸಾಯಿ, ಛೇರಮನ್, ಪೊಲೀಸ್, ಪ್ರೊಫೆಸರ್, ಸೂರ್ಯಪುತ್ರ, ಚಂದ್ರಿ, ಮಲ್ಲಕ್ಕ, ಧರಮೂ, ಗುಂಡೂ, ಭಡಜಿ, ಕೊನೆಗೆ ನಾಯಿ ಶಿವನ್ಯಾ ಹೀಗೆ ಪ್ರತಿಯೊಂದು ಕಥೆಯಲ್ಲಿ ಬರುವ ಪಾತ್ರಗಳು ಬಹು ಕಾಲ ಓದುಗನ ಮನಸ್ಸಿನಲ್ಲಿ ಮನೆ ಮಾಡುವಂತಹವೇ. ಯಾವುದೆ ಒಬ್ಬ ಕಥೆಗಾರನು ತನ್ನ ಒಲವು, ನಂಬಿಕೆಗಳನ್ನು ಓದುಗನ ಮೇಲೆ ಹೇರಬಾರದೆಂಬ ಮಾತಿನಂತೆ ಕಥೆಗಳಲ್ಲಿ ಬರುವ ಪ್ರಸಂಗಗಳು ಓದುಗನ ಒಲವು ಹಾಗೂ ನಂಬಿಕೆಗಳೆ ಆಗಿ ಬಿಡುತ್ತವೆಯೆಂಬುವುದು ಕತೆಗಾರನ ಜಾಣ್ಮೆಯನ್ನು ತೋರಿಸುತ್ತದೆ. ಅಲ್ಲದೆ, ಅದು ಇಲ್ಲಿಯ ಕತೆಗಳನ್ನು ಓದಿದಾಗ ಕಂಡು ಬರುವ ಸಂಗತಿ ಕೂಡಾ.

ಈ ಸಂಕಲನದಲ್ಲಿನ ಗ್ರಾಮ್ಯ ಸೊಗಡಿನ ಕಥೆಗಳನ್ನು ಓದುತ್ತಾ ಹೋದಂತೆ ಗ್ರಾಮೀಣ ಪ್ರದೇಶದಲ್ಲಿಯೇ ನಾವಿದ್ದೆವೇನೋ ಎಂದು ಭಾಸವಾಗದೆ ಇರದು. ಒಂದೊಂದು ಕಥೆಗಳ ಎಳೆಗಳನ್ನು ಬಿಚ್ಚುತ್ತಾ ಹೋದಂತೆ ಎಲ್ಲಿಯೂ ಜಾಳು ಜಾಳು ಆಗದಿರುವದು ದೃಗ್ಗೋಚರವಾಗುತ್ತದೆ. ಖಾಕಿ ಕಾವಲು ಕಥೆಯು ಊರಿನ ಪೈಲ್ವಾನನೊಬ್ಬನ ಕೊಲೆಯ ನಂತರ ನಡೆಯುವ ವಿದ್ಯಮಾನಗಳನ್ನು ಅದರಲ್ಲೂ ಆ ಕೊಲೆಯಾದ ಹೆಣವನ್ನು ಕಾಯುವ ಹಿರಿಯ ಪೊಲೀಸರು ಹಾಗೂ ಅಂದೆ ಕರ್ತವ್ಯಕ್ಕೆ ಹಾಜರಾದ ಪೊಲೀಸನೊಬ್ಬನ ಮನದ ತಹತಹ, ಭಯಮಿಶ್ರಿತ ಮೊಂಡ ಧೈರ್ಯ ಹಾಗೂ ಆತನ ಕರ್ತವ್ಯಪ್ರಜ್ಞೆಯನ್ನು ಮನಮುಟ್ಟುವಂತೆ ಅನಾವರಣಗೊಳಿಸಿದೆ.

‘ಇದೊಳ್ಳೆ ಪಂಚಾಯತಿ ಆಯ್ತಲ್ಲ’ ಕತೆಯಲ್ಲಿ ಕೊವಿಡ್ ಕಾಲದಲ್ಲಿ ಪಂಚಾಯತಿ ಕಟ್ಟಡ ಕಟ್ಟುವ ಹಿನ್ನೆಲೆಯಲ್ಲಿ ನಡೆಯುವ ಹಲವಾರು ಘಟನೆಗಳು ಓದುಗರನ್ನು ಸೆಳೆಯುವದರಲ್ಲಿ ಸಂದೇಹವಿಲ್ಲ. ಹಳೆಮನೆ ಗೋಡೆ ಕಲ್ಲಿನಲ್ಲಿ ಲಕ್ಕವ್ವನ ಇರುವಿಕೆ, ಪಂಚಾಯತಿ ಕಟ್ಟಲು ಆ ಕಲ್ಲನ್ನು ಎರಡು ಮಾಡಿ ಒಗೆದ ಕಾರಣ ಪುಲಾಬಾಯಿ ಮೈಯಲ್ಲಿ ಲಕ್ಕವ್ವ ಬಂದಂತೆ ಆಡುವ ರಾದ್ದಾಂತ, ಕಲಾವತಿ ಶಂಕರರ ಪ್ರೇಮ ಪ್ರಕರಣ ಹೀಗೆ ಕಥೆಯೊಂದಿಗೆ ಉಪಕಥೆಗಳಂತೆ ಘಟನೆಗಳನ್ನು ಹೆಣೆದಿರುವುದರಲ್ಲಿ ಕತೆಗಾರನ ಕುಸುರಿತನ ಕಾಣುವುದು.

ಕಣ್ಣಲ್ಲಿ ಹೋದ ಕಬ್ಬಿಣ ಚೂರಿನ ಬಾಧೆಯಿಂದ ನರಳುವ ಕಂಬಾರ ಧರಮೂನ ಧಾರುಣ ಸ್ಥಿತಿ ನಿಜಕ್ಕೂ ವಾಚಕನಲ್ಲಿ ಕರುಣೆ ಉಕ್ಕಿಸುವದೆಂದರೆ ಅದಕ್ಕೆ ಕತೆಗಾರನು ಪಾತ್ರದ ಪರಕಾಯ ಪ್ರವೇಶ ಮಾಡಿ ಬರೆಯುವ ಪರಿ ಕಾರಣ. ಆ ಬಾಧೆಯಿಂದ ಹೊರ ಬರಲು ನಗರದ ದೊಡ್ಡ ದೊಡ್ಡ ಆಸ್ಪತ್ರೆಗೆ ಅಲೆದಾಟ, ಅಲ್ಲಿಯ ಜನರ ಹಣದ ಪಿಪಾಸೆ, ಕೊನೆಗೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಕಾಣ ಬರುವ ಗಾಂವಟಿ ವೈದ್ಯಕೀಯ, ವೈದ್ಯ ಕುಬೇರಪ್ಪನ ಕೈ ಚಳಕದಿಂದ ಆ ಬಾಧೆಯಿಂದ ಧರಮೂ ಹೊರ ಬರುವ ಕರುಣಾಜನಕ ಪ್ರಸಂಗ, ಅದಕ್ಕೆ ಹಣ ಕೊಡಲು ಹೋದರೂ ಅದನ್ನು ಪಡೆಯದ ಕುಬೇರಪ್ಪನ ದೊಡ್ಡತನವು ಇಂದಿನ ಧನದಾಹಿ ಆಸ್ಪತ್ರೆಗಳನ್ನು ಅಣಿಕಿಸುವಂತೆ ಇರುವುದನ್ನು ನಮ್ಮೂರ ನಮಗ ಪಾಡ ಕತೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ.

ಕನ್ನಡ ಶಾಲೆಯ ಶಿಕ್ಷಕರೊಬ್ಬರು ಮನಸು ಮಾಡಿದರೆ ಕುಗ್ರಾಮವೊಂದನ್ನು ಹೇಗೆ ಅಕ್ಷರ ಗ್ರಾಮವನ್ನಾಗಿ ಮಾಡಬಹುದೆಂಬ ಸತ್ಯವನ್ನು ಅಕ್ಷರ ಬೀಜ ಕತೆ ಹೊಂದಿದ್ದು ದೊಡ್ಡ ಪಾಠವನ್ನು ಹೇಳುವಂತೆ ಅನಿಸುತ್ತದೆ. ಪ್ರಸ್ತುತ ಪ್ರೊಫೆಸರ್ ಆಗಿದ್ದರೂ ಪ್ರಾರಂಭದಲ್ಲಿ ಚಿಕ್ಕ ಹಳ್ಳಿಯಲ್ಲಿ ವೃತ್ತಿ ಆರಂಭಿಸಿ ಶಿಕ್ಷಣವನ್ನು ಅಸಡ್ಡೆಯಿಂದ ನೋಡುತ್ತಿದ್ದ ಜನಗಳ ಮಧ್ಯೆ ಅದನ್ನು ಸವಾಲಾಗಿ ಸ್ವೀಕರಿಸಿ ಶಿಕ್ಷಣ ಕ್ರಾಂತಿ ಮಾಡಿ ಅದರ ಮಹತ್ತನ್ನು ಸಾರುವುದರೊಂದಿಗೆ ಇಂದಿನ ಶಿಕ್ಷಕರಿಗೂ ಮಾದರಿಯಾಗುವ ಕಥಾವಸ್ತು ಹೊಂದಿದೆ.

ಕಥಾ ಸಂಕಲನದ ಶೀರ್ಷಿಕೆ ಹೊತ್ತ ‘ಚೆಲುವಿ ಚಂದ್ರಿ’ ಕಥೆ ಈ ಸಂಕಲನದಲ್ಲಿ ವಿಸ್ತಾರದಲ್ಲಿ ದೊಡ್ಡ ಕಥೆಯೆನಿಸಿಕೊಂಡು ಫ್ಯಾಂಟಸಿ ಹಿನ್ನೆಲೆಯನ್ನು ಹೊಂದಿರುವಂತಹದ್ದು. ಕಥೆಯನ್ನು ಓದುತ್ತಾ ಓದುತ್ತಾ ಜನ್ನನ ಯಶೋಧರ ಚರಿತೆಯ ಅಮೃತಮತಿ ಮತ್ತು ಅಷ್ಟಾವಂಕನ ಕತೆ ನೆನಪಿಸಿದರೂ ಕತೆಯ ಅಂತ್ಯ ಮಾತ್ರ ವಿಭಿನ್ನವೆನಿಸಿಕೊಳ್ಳುತ್ತದೆ. ಏಕೆಂದರೆ, ಚಂದನೆಯ ಹಾಡುಗಾರ ಬನದ ಸೂರ್ಯಪುತ್ರನನ್ನು ಯಾವಾಗ ಕಂಡೆನೆಂಬ ತವಕ ಹೊಂದಿದ ಚೆಲುವಿ ಚಂದ್ರಿ ಕೊನೆಗೂ ಅವನನ್ನು ಕಂಡಾಗ ಅವಳಲ್ಲಿ ಉಂಟಾಗುವ ತಲ್ಲಣದ ಚಿತ್ರಣದೊಂದಿಗೆ ಕಥೆ ಮುಗಿದರೂ ನೆನಪುಗಳನ್ನು ಆವರಿಸಿಕೊಳ್ಳುತ್ತದೆ. ‘ಭೂಮಿ ತಲ್ಲಣಿಸ್ಯಾವ’ ಕಥೆಯಲ್ಲಿ ಇತ್ತೀಚಿಗೆ ಕೈಗಾರಿಕೋದ್ಯಮದಿಂದಾದ ಪಲ್ಲಟಗಳು, ಅದರಿಂದಾಗುವ ಪ್ರಯೋಜನ ಕುರಿತ ಮೂಗಿಗೆ ತುಪ್ಪ ಸವರುವ ಮಾತುಗಳ ಬಗ್ಗೆ ತುಂಬಾ ಮಾರ್ಮಿಕವಾಗಿ ಹೇಳಿದೆ.

ಅಕ್ಕಿಕಾಳು ಹಾಗೂ ಮುತ್ಯಾನ ಜಾತ್ರೆ ಕಥೆಗಳು ಕರೋನಾ ಕಾಲಘಟ್ಟದಲ್ಲಿ ಕರೋನಾವು ಜಾತ್ರೆ, ಮದುವೆ ಸೇರಿದಂತೆ ಎಲ್ಲ ಸಾಂಪ್ರದಾಯಕ ಕಾರ್ಯಕ್ರಮಗಳ ಮೇಲೆ ಬೀರಿದ ಪರಿಣಾಮಗಳನ್ನು ಸಾದಂತ್ಯವಾಗಿ ವಿವರಿಸಿವೆ. ಎರಡೂ ಕಥೆಗಳು ಕರೋನಾ ಹಿನ್ನೆಲೆ ಹೊಂದಿದ್ದರೂ ಎರಡು ಬೇರೆ ಸ್ತರದ ಕಥಾವಸ್ತು ಹೊಂದಿರುವರಿಂದ ಏಕತಾನತೆಯಿಂದ ಪ್ರಭಾವದಿಂದ ದೂರಾಗಿವೆ. ಹಾಗೆಯೆ ಅಕ್ಕಿಕಾಳು ಕತೆಯು ನಮ್ಮ ಜನರ ಸಿನಿಮಾ ನಟರ ಬಗೆಗಿನ ಅತಿ ಕುತೂಹಲದ ಬಗ್ಗೆ ಸ್ವಾರಸ್ಯಪೂರ್ಣವಾಗಿ ಹೇಳುತ್ತದೆ.

ದೇಸಗತಿ ಮನೆತನದ ಸೋನುಬಾ ಹಾಗೂ ಬಾಪುರಾವ್ ಸಾಹೇಬನ ಶೂರತ್ವದ ‘ಕತ್ತಲಾ ಕಾಡಿತು’ ಕಥೆಯಲ್ಲಿ ಒಂದು ಕತ್ತಲ ರಾತ್ರಿಯಲ್ಲಿ ನಡೆದ ಘಟನೆಯಿಂದಲೆ ಒಂದು ದೇಸಗತಿ ಮನೆತನ ಹೇಗೆ ಅಧಃಪತನ ಕಂಡಿತು ಎಂಬುವುದನ್ನು ಮನಸಿಗೆ ನಾಟುವಂತೆ ಚಿತ್ರಿತವಾಗಿದೆ. ಊರ ರಕ್ಷಣೆಯ ಹೊಣೆ ಹೊತ್ತ ಬಾಪುರಾವ್ ಸಾಹೇಬ ತಪ್ಪು ಕಲ್ಪನೆಯಿಂದ ಹೊಡೆದ ಗುಂಡು ಹಗಲು ವೇಷಗಾರರ ಒಬ್ಬ ಹಿರಿಯನಿಗೆ ಬಡಿದು ಆ ಹಿರಿಯ ಅಸುನೀಗಿ ಹೋಗಿದ್ದಕ್ಕೆ ತಾನೇ ಕಾರಣನಾದೆನಲ್ಲ ಎಂಬ ವಿಷಯವನ್ನೆ ಮನಸಿಗೆ ಹಚ್ಚಿಕೊಂಡು ಅದೇ ಕೊರಗಿನಲ್ಲಿ ಬಾಪುರಾವ್ ಸತ್ತು ಆ ದೇಸಗತಿ ಮನೆತನದ ಅವಸಾನಕ್ಕೆ ಕಾರಣವಾಗುವುದು ನಿಜಕ್ಕೂ ಮನಸಿನಲ್ಲಿ ಇಳಿಯುವಂತಹ ಕಥಾವಸ್ತು ಹೊಂದಿರುವ ಕಥೆ.

ಸೂರ್ಯ ಚಂದ್ರರು ಕಾವಲೋ ಕತೆಯಲ್ಲಿ ಆಕಸ್ಮಾತಾಗಿ ನಡೆದ ಘಟನೆಯಿಂದ ಗುಂಡೂನ ಬಾಳಲ್ಲಿ ಬಿರುಗಾಳಿ ಬೀಸಿದ ಪರಿಣಾಮವನ್ನು ಕಣ್ಣಿಗೆ ಕಟ್ಟುವಂತೆ ಹೇಳುವಲ್ಲಿ ಕತೆಗಾರರು ಯಶಸ್ವಿಯಾಗಿದ್ದಾರೆ. ಮೊದಲೆ ಗುಂಡೂನ ಹೊಲದ ಮೇಲೆ ಕಣ್ಣಿಟ್ಟು ಅದನ್ನು ಪಡೆಯಲು ವಿಫಲನಾದ ಊರ ಗೌಡ ಗಿರಿಯಪ್ಪನಿಗೆ ತನ್ನ ನಾಯಿಯ ಸಾವಿಗೆ ಗುಂಡೂನೆ ಕಾರಣವೆಂದು ತಿಳಿದಾಗ ರೊಟ್ಟಿಯೇ ತುಪ್ಪಕ್ಕೆ ಜಾರಿ ಬಿದ್ದಂತೆ, ಅವನ ತುಂಡು ಭೂಮಿ ಪಡೆಯದೆ ಇದ್ದರೂ ಗುಂಡೂನಿಗೆ ಹತ್ತು ಸಾವಿರ ರೂಪಾಯಿ ದಂಡನೆಯ ತೀರ್ಮಾನ ಮಾಡಿ, ಅವನು ಊರೇ ಬಿಡುವಂತೆ ಮಾಡುವದರಲ್ಲಿ ಯಶಸ್ವಿಯಾಗುವದು ಯಾವುದೆ ರೂಪದಲ್ಲಿ ಆ ತುಂಡು ಭೂಮಿ ತನ್ನದಾಗಿಸಿಕೊಳ್ಳುವ ಹುನ್ನಾರು ಹಳ್ಳಿಯಲ್ಲಿ ನಡೆಯುವ ಉಳ್ಳವರ ದಬ್ಬಾಳಿಕೆಯ ರೂಪವಲ್ಲದೆ ಮತ್ತೇನು ಅಲ್ಲ.

ತಮ್ಮ ಪ್ರಥಮ ಕಥಾ ಸಂಕಲನವಾದರೂ ಕಥೆಗಳ ವಿಷಯವಸ್ತು, ಕಥಾ ನಿರೂಪಣೆ ಹಾಗೂ ಕಥೆ ಕಟ್ಟುವ ಕುಶಲತೆಯಿಂದ ಭರವಸೆಯನ್ನು ಹುಟ್ಟು ಹಾಕಿ ತಾವು ಇನ್ನಷ್ಟು ಸಶಕ್ತ ಕತೆಗಳನ್ನು ಬರೆಯಬಲ್ಲ ಸಾಮರ್ಥ್ಯವಿರುವ ಕತೆಗಾರನೆಂಬುದನ್ನು ಡಾ.ಪ್ರಕಾಶ ಖಾಡೆಯವರು ತೋರಿಸಿ ಕೊಟ್ಟಿದ್ದಾರೆ. ಅಲ್ಲದೆ, ಕಥೆಯ ಒಟ್ಟಂದದ ಕಸಬುದಾರಿಕೆ ಹಾಗೂ ಓದುಗನಿಗೆ ಕಥೆಯ ಆಶಯ ಮನಕ್ಕೆ ನಾಟುವಂತಹ ಆಯಸ್ಕಾಂತಿಯ ಗುಣವನ್ನು ಹೊಂದಿರುವದನ್ನು ಕಾಣಬಹುದು. ಒಟ್ಟಾರೆ ‘ಚೆಲುವಿ ಚಂದ್ರಿ’ ಸಂಕಲನದಿಂದ ತಾವೊಬ್ಬ ಉತ್ತಮ ಕತೆಗಾರನೆಂಬುವದನ್ನು ಈ ಕೃತಿಯ ಮೂಲಕ ನಿರೂಪಿಸಿದ್ದಾರೆ. ಸಂಕಲನಕ್ಕೆ ಕಲಾವಿದ ಟಿ.ಎಫ್.ಹಾದಿಮನಿ ಅವರು ಸುಂದರ ಮುಖಪುಟ ರೂಪಿಸಿದ್ದಾರೆ. ಹೊಸಪೇಟೆಯ ಯಾಜಿ ಪ್ರಕಾಶನದ ಹೆಮ್ಮೆಯ ಕೃತಿಗಳಲ್ಲೊಂದು ಈ ಕಥಾ ಸಂಕಲನ.

‍ಲೇಖಕರು Admin

November 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: