ಪ್ರೀತಿ ಕೆ ಎ ಹೊಸ ಕಥೆ – ನಿರಾಕರಣೆ

ಡಾ ಪ್ರೀತಿ ಕೆ ಎ 

‘ಅಮ್ಮಾ.. ಸಾಕು ಪ್ಲೀಸ್.. ‘ಮುದ್ದಿನ ಮಗಳು ಮಿಹಿಕಾಳ ಗೋಗರೆತ. ‘ಇನ್ನೊಂದೇ ಒಂದು ದೋಸೆ ತಿನ್ನೇ ಪುಟ್ಟ’ ನನ್ನ ಪ್ರೀತಿಯ ಓಲೈಕೆ. ‘ಅಮ್ಮ.. ನಂಗೆ ಬೇಡ ಅಂದ್ರೆ ಬೇಡ ಅಷ್ಟೇ. ‘ಮಗಳ ತುಸು ಏರಿದ ದನಿ. ‘ಸರಿ ಬಿಡು’ ಅಂದರೂ ಯಾಕೋ ಮನಸ್ಸಿಗೆ ಕಸಿವಿಸಿ. ಇತ್ತೀಚೆಗೆ ಅದಿತಿ ತುಂಬಾ ನೆನಪಾಗುತ್ತಿದ್ದಾಳೆ. ಮೊದಲೆಲ್ಲಾ ‘ಅದಿತಿ’ ಅಂದಾಗ ನೆನಪಾಗುತ್ತಿದ್ದ ಅವಳ ಮುದ್ದು ಮುಖ ಮಾತ್ರ ಈಗೀಗ ಅಸ್ಪಷ್ಟ. 

ಮಾಧವಿ ಅತ್ತೆಯ ಏಕೈಕ ಪುತ್ರಿ ಅದಿತಿ. ಬಾಲ್ಯದ ಗೆಳತಿಯೂ ಹೌದು. ಸಮಾನ ವಯಸ್ಸಿನವಳಾದ ಕಾರಣ ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಸಲಿಗೆ. ಶಾಲೆಗೆ ರಜೆ ಸಿಕ್ಕರೆ ಸಾಕು ನನ್ನ ಸವಾರಿ ಅತ್ತೆ ಮನೆಗೆ. ನಾವಿಬ್ಬರೂ ಹಂಚಿಕೊಳ್ಳದ ವಿಷಯಗಳಿರಲಿಲ್ಲ, ಹೇಳಿಕೊಳ್ಳದ ಗುಟ್ಟುಗಳಿರಲಿಲ್ಲ. ಒಟ್ಟಿಗೆ ಸೇರಿದೆವೆಂದರೆ ಮಾತು ಮಾತು ಮಾತು. ನನ್ನ ಮತ್ತು ಅದಿತಿಯ ಸ್ವಭಾವ ತದ್ವಿರುದ್ಧ.

ನಾನೆಷ್ಟು ಸಮಾಧಾನಿಯೋ ಅವಳು ಅಷ್ಟೇ ಹಠಮಾರಿ. ಅತ್ತೆ ಯಾವಾಗಲೂ ತಮಾಷೆ ಮಾಡುವುದಿತ್ತು- ‘ನಿನ್ನ ಕಾಲುವಾಸಿ ತಾಳ್ಮೆ ಇವಳಿಗೆ ಇಲ್ವಲ್ಲೇ.. ಏಳು ತಿಂಗಳಿಗೇ ಹುಟ್ಟಿದವಳ ಥರಾ ಆಡ್ತಾಳಲ್ವೇ’ ಅಂತ. ಅವರು ಹೇಳಿದ್ದರಲ್ಲೂ ನಿಜವಿತ್ತು. ಅದಿತಿಗೆ ಅನಿಸಿದ್ದನ್ನು ಮಾಡಿಯೇ ತೀರುವ ಛಲ; ಬಯಸಿದ್ದನ್ನು ಕೂಡಲೇ ಪಡೆಯುವ ಹಠ. ಯಾವುದನ್ನೂ ಒತ್ತಾಯಕ್ಕೆ ಕಟ್ಟು ಬಿದ್ದು ಮಾಡಿದವಳಲ್ಲ. ತನಗಿಷ್ಟ ಆದದ್ದನ್ನು ಹೇಳಿಯೇ ತೀರುವ, ಇಷ್ಟವಾಗಿಲ್ಲದ್ದನ್ನು ಸಾರಾಸಗಟಾಗಿ ಬೇಡವೆನ್ನುವ ಅದಿತಿಯನ್ನು ಕಂಡು, ನಾನೂ ಅವಳಂತೆ ಆಗಬೇಕು ಅಂತ ಅನಿಸುತ್ತಿದ್ದದ್ದು ಅದೆಷ್ಟು ಬಾರಿಯೋ. 

ಅತ್ತೆ ಮನೆಗೆ ಹೋದಾಗಲೆಲ್ಲ ಅತ್ತೆ ರುಚಿರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದರೂ, ಕೆಲವೊಂದು ತಿಂಡಿಗಳು ನನಗೆ ಹಿಡಿಸುತ್ತಿರಲಿಲ್ಲ. ಆದರೂ ಅವರನ್ನು ನೋಯಿಸಬಾರದೆಂಬ ಕಾರಣಕ್ಕೆ ಬಡಿಸುವಾಗ ಬೇಡವೆನ್ನುತ್ತಿರಲಿಲ್ಲ. ಅದೇ ಅದಿತಿ ಇಷ್ಟವಿಲ್ಲದಿದ್ದರೆ ಅತ್ತೆ ಎಷ್ಟೇ ಒತ್ತಾಯ ಮಾಡಿದರೂ ‘ಬೇಡ ಅಂದ್ರೆ ಬೇಡ ಅಷ್ಟೇ’ ಎಂದು ತಟ್ಟೆ ಎತ್ತಿ ಹೋಗಿಯೇ ಬಿಡುತ್ತಿದ್ದಳು. ನನ್ನ ಸ್ವಭಾವ ಗೊತ್ತಿದ್ದ ಅವಳು ‘ನಿಂಗೆ ಬೇಡ ಅನಿಸಿದ್ದನ್ನು ಬೇಡ ಅನ್ನೋದಕ್ಕೆ ಏನೇ ಧಾಡಿ’ ಅಂತ ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. 

ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. ನಮ್ಮ ಜೊತೆ ಆಡಲು ಬರುತ್ತಿದ್ದ ನಮ್ಮದೇ ಓರಗೆಯವನ ಹತ್ತಿರವಿದ್ದ ವೀಡಿಯೋ ಗೇಮ್ ಸೆಟ್ ನಮ್ಮಿಬ್ಬರ ಕಣ್ಣು ಸೆಳೆದಿತ್ತು. ಮನೆಗೆ ಹೋದವಳೇ ಅದಿತಿ ಅವಳ ಅಪ್ಪನಲ್ಲಿ ಅಂಥದ್ದೇ ಗೇಮ್ ಸೆಟ್ ಗೆ ಬೇಡಿಕೆಯಿಟ್ಟಿದ್ದಳು. ಮಾವನಿಗೆ ಸಂದಿಗ್ಧ ಸ್ಥಿತಿ. ಅತ್ತ ಮಗಳಿಗೆ ಇಲ್ಲವೆನ್ನಲಾರ. ಇತ್ತ ಕೊಡಿಸೋಣವೆಂದರೆ ತಿಂಗಳ ಕೊನೆ. ಸಂಬಳ ಬಂದ ಕೂಡಲೇ ತೆಗೆದುಕೊಡುವ ಭರವಸೆಯಿತ್ತರೂ ಅವಳದ್ದು ಒಂದೇ ಹಠ- ‘ನಂಗೆ ಬೇಕು ಅಂದ್ರೆ ಬೇಕೇ ಬೇಕು, ಈಗಲೇ’.

ಕೊನೆಗೂ ಮಾವ ಮುದ್ದಿನ ಮಗಳನ್ನು ನೋಯಿಸಲಾರದೆ ಅವತ್ತೇ ಅಂಗಡಿಗೆ ಹೋಗಿ ಕೊಂಡು ತಂದಿದ್ದ. ಫಕ್ಕನೇ ಯೋಚಿಸಿದ್ದೆ ‘ನಾನು ಅದಿತಿಯ ಥರಾ ಹಠ ಮಾಡಿದ್ರೆ ನನ್ನ ಅಪ್ಪ ಏನು ಮಾಡ್ತಿದ್ರು’ ಅಂತ. ಬಹುಶಃ ಬೆನ್ನಿಗೆರಡು ಬೀಳುತ್ತಿತ್ತೋ ಏನೋ ಅಂತಂದುಕೊಳ್ಳುವಾಗಲೇ ನೆನಪಾಗಿತ್ತು, ತಿಂಗಳ ಹಿಂದೆ ಬಿದ್ದ ಪೆಟ್ಟು.. ಕಂಪಾಸು ಬಾಕ್ಸ್ ಬೇಕು ಅಂತ ಅತ್ತದ್ದಕ್ಕೆ. ಯಾಕೋ ಗಂಟಲಲ್ಲಿ ಏನೋ ಸಿಕ್ಕಿಕೊಂಡ ಹಾಗಾಗಿತ್ತು. 

ಈಗ ಅನ್ನಿಸುತ್ತದೆ.. ಸರ್ಕಾರಿ ಕೆಲಸದಲ್ಲಿದ್ದು ತಿಂಗಳು ತಿಂಗಳು ದೊಡ್ಡ ಮೊತ್ತದ ಸಂಬಳ ಎಣಿಸುತ್ತಿದ್ದ ಮಾವನಿಗೆ ತನ್ನ ಒಬ್ಬಳೇ ಮಗಳ ಬೇಡಿಕೆಗಳನ್ನು ಪೂರೈಸುವುದರಲ್ಲೇ ಖುಷಿ ಇದ್ದಿರಬಹುದು. ಸಣ್ಣ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ, ಮನೆಯ ಖರ್ಚು ಅಲ್ಲಿಂದಲ್ಲಿಗೆ ತೂಗಿಸುತ್ತಿದ್ದ ನನ್ನ ಅಪ್ಪನಿಗೆ ತನ್ನ ಮೂವರು ಮಕ್ಕಳ ಬೇಡಿಕೆಗಳನ್ನು ಕೇಳುತ್ತಿದ್ದ ಹಾಗೆಯೇ ಕೋಪ ಬರುತ್ತಿದ್ದದ್ದು ಸಹಜವೇ ಅಂತ. ಆಗ ಅದೆಲ್ಲಾ ಅರ್ಥವಾಗುವ ವಯಸ್ಸಲ್ಲ. 

ನಾವಿಬ್ಬರೂ ಸಿ.ಇ.ಟಿಯಲ್ಲಿ ಹೆಚ್ಚು ಕಡಿಮೆ ಒಂದೇ ತರಹ ಅಂಕಗಳನ್ನು ತೆಗೆದುಕೊಂಡಿದ್ದರೂ ನನ್ನ ರಾಂಕಿಂಗ್ ಅದಿತಿಗಿಂತ ತುಸು ಮೇಲಿತ್ತು. ಅಪ್ಪ ಕೇಳಿದ್ದರು ಇಂಜಿನಿಯರಿಂಗ್ ಸೇರ್ತಿಯಾ ಎಂದು. ಬಹುಶಃ ‘ಇಲ್ಲ ಅನ್ನಲಿ’ ಅಂತ ಪ್ರಾರ್ಥಿಸಿದ್ದರೋ ಏನೋ. ಮೆರಿಟ್ ಸೀಟು ಸಿಕ್ಕುತ್ತಿದ್ದರೂ ಟ್ಯೂಷನ್ ಫೀಸು, ಹಾಸ್ಟೆಲ್ ಫೀಸು ಎಲ್ಲಾ ಸೇರಿದರೆ ಅಪ್ಪನ ಜೇಬು ಖಾಲಿಯಾಗುವುದರಲ್ಲಿ ಸಂಶಯವಿರಲಿಲ್ಲ. ಒಂದು ಸಲ ಎಜುಕೇಶನ್ ಲೋನ್ ತೆಗೆದರೆ ಹೇಗೆ ಅಂದುಕೊಂಡಿದ್ದೆನಾದರೂ ಮತ್ತೆ ಯಾಕೋ ಬೇಡವೆನ್ನಿಸಿ, ಅಪ್ಪ ಬಯಸಿದಂತೆ ಬಿ.ಎಸ್ಸಿ ಸೇರಿದ್ದೆ. ಅದಿತಿ ಮಾತ್ರ ‘ಆದ್ರೆ ಇಂಜಿನಿಯರ್ರೇ’ ಎಂದು ಒಳ್ಳೆಯ ಕಾಲೇಜಿಗೆ ಡೊನೇಷನ್ ಕೊಟ್ಟು ಸೇರಿಕೊಂಡಳು. ಮತ್ತೆ ಯಾಕೋ ಗಂಟಲು…

ಅಷ್ಟು ವರ್ಷಗಳೂ ಗಳಸ್ಯ ಕಂಠಸ್ಯರಂತಿದ್ದ ನಾವಿಬ್ಬರೂ ಕಾಲ ಸರಿದಂತೆಲ್ಲಾ ದೂರವಾದಂತೆ ಅನ್ನಿಸುತ್ತಿತ್ತು. ಇಂಜಿನಿಯರಿಂಗ್- ಬಿ. ಎಸ್ಸಿಗೂ ತಾಳೆಯಾಗಲಿಲ್ಲವೋ, ಇಬ್ಬರ ಸೆಮಿಸ್ಟರ್- ವಾರ್ಷಿಕ ರಜೆಗಳೂ ಬೇರೆಯಾಗಿದ್ದರಿಂದಲೋ, ಅಲ್ಲ ಸಂಬಂಧಗಳು ಇರುವುದೇ ಹಾಗೋ… ಗೊತ್ತಿಲ್ಲ. ಆದರೂ ಅವಳು ರಜೆಗೆ ಬಂದಾಗಲೆಲ್ಲಾ ನಮ್ಮಿಬ್ಬರ ಗುಸುಗುಸು ಒಂದು ದಿನದ ಮಟ್ಟಿಗಾದರೂ ಇರುತ್ತಿತ್ತು. ಅವಳಾಗ ಬಹುಶಃ ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿದ್ದಳೋ ಏನೋ. ಗುಟ್ಟಾಗಿ ನನ್ನನ್ನು ಕರೆದು ಪತ್ರಗಳ ಪುಟ್ಟ ಗಂಟೊಂದನ್ನು ಕೈಗಿಟ್ಟಿದ್ದಳು. ಏನೇ ಇದು ಅಂತ ಕೇಳಿದ್ದಕ್ಕೆ ಕೈ ಸನ್ನೆ ಮಾಡಿ ‘ಓದು’ ಅಂದಿದ್ದಳು. 

ಮುದ್ದಾದ ಅಕ್ಷರಗಳು. ಮತ್ತೊಮ್ಮೆ ಮಗದೊಮ್ಮೆ ಓದಬೇಕೆನಿಸುವಂತಹ ಸಾಲುಗಳು. ಕೆಲವು ಸಾಲುಗಳು ಇನ್ನೂ ನೆನಪಿವೆ. 

‘ಕಳೆಯಬೇಕಿದೆ ಒಂದು ಮಧುರ ಸಂಜೆ 

ನಿನ್ನ ಜೊತೆ 

ಕಳೆದುಕೊಳ್ಳಬೇಕಿದೆ ನನ್ನನ್ನು ನಾನು 

ಮತ್ತೆ ಮತ್ತೆ… ‘

ಓದಿದ ಕೂಡಲೇ ಅಂದಿದ್ದೆ -‘ ವ್ಹಾ.. ಎಷ್ಟು ರೊಮ್ಯಾಂಟಿಕ್ ಆಗಿ ಬರೆದಿದ್ದಾನೆ. ಯಾರೇ ಇವನು? ‘.  ‘ಅಮಿತ್ ಅಂತ. ನನ್ನ ಸೀನಿಯರ್ ಆಗಿದ್ದ ಕಣೇ. ಈಗ ಟಿಸಿಎಸ್ ನಲ್ಲಿ ಕೆಲಸ ಮಾಡ್ತಿದ್ದಾನೆ’ ಅಂದಳು. ‘ನಿನ್ನನ್ನು ತುಂಬ ಇಷ್ಟ ಪಡ್ತಿದ್ದಾನೆ ಅನ್ನಿಸುತ್ತೆ’ ಅಂದಾಗ ‘ಹೂಂ.. ನಾನು ಸೆಕೆಂಡ್ ಸೆಮಿಸ್ಟರ್ ನಲ್ಲಿ ಇದ್ದಾಗಿಂದಾನೇ ಇಷ್ಟ ಪಡ್ತಿದ್ದನಂತೆ. ಆದ್ರೆ ಹೇಳೋದಕ್ಕೆ ಹೆದರಿ ಸುಮ್ಮನಿದ್ದ.

ಒಳ್ಳೆಯ ಕೆಲಸ ಸಿಕ್ಕಿದ ಮೇಲೇನೇ ಪ್ರೊಪೋಸ್ ಮಾಡೋದು ಅಂದುಕೊಂಡಿದ್ದನಂತೆ. ಅದರ ಫಲವೇ ಈ ಪ್ರೇಮಪತ್ರಗಳು’ ಅಂತ ನಾಟಕೀಯವಾಗಿ ತೋರಿಸಿದ್ದಳು. ‘ಅವನು ನೋಡೋದಿಕ್ಕೂ ಚೆನ್ನಾಗಿದ್ರೆ ಒಪ್ಕೋಳ್ಳೇ’ ಅಂದಿದ್ದಕ್ಕೆ ಕಿಲ ಕಿಲ ನಕ್ಕಿದ್ದಳು. ‘ನಿಂದೊಳ್ಳೇ ಕಥೆ ಆಯ್ತಲ್ಲ ತನು.. ಅವನಿಗೆ ನಾನಿಷ್ಟ ಆದ್ರೆ ಸಾಕಾ? ನಂಗೆ ಅವನು ಇಷ್ಟ ಆಗ್ಬೇಡ್ವಾ? ನೋಡೋದಕ್ಕೇನೋ ಚೆನ್ನಾಗಿದ್ದಾನೆ. ಆದ್ರೆ ಪ್ರೀತಿಸ್ತಿದ್ದೀನಿ ಅಂತ ಹೇಳೋದಕ್ಕೇ ಎರಡು ವರ್ಷ ತಗೊಂಡ ಅಂದ್ರೆ ಎಂಥ ಪುಕ್ಕಲ ಇರಬೇಕು ಆಸಾಮಿ. ನಂಗೆ ಯಾಕೋ ಅಂಥವರು ಇಷ್ಟಾನೇ ಆಗೋದಿಲ್ಲ. ಅನಿಸಿದ್ದನ್ನು ಥಟ್ ಅಂತ ಹೇಳಿಬಿಡಬೇಕು. ಬೇಕು ಅಂತನಿಸಿದ್ದನ್ನು ಕೂಡಲೇ ಒಲಿಸಿಕೊಳ್ಳಬೇಕು. ಅಂಥವರು ಮಾತ್ರ ನಂಗಿಷ್ಟ ಆಗ್ತಾರೆ’ ಅಂತ ದೃಢವಾಗಿ ಹೇಳಿದ್ದಳು. ಒಂದು ಕ್ಷಣಕ್ಕೆ ‘ನಂಗೂ ಯಾರಾದ್ರೂ ಆ ಥರ ಪ್ರೇಮಪತ್ರ ಬರೆದಿದ್ರೆ’ ಅಂತನ್ನಿಸಿ ಮುಖ ಕೆಂಪಾಗಿತ್ತು. 

ನಾನು ಬಿ.ಎಸ್ಸಿ ಮುಗಿದ ಮೇಲೆ ಎಂ. ಎಸ್ಸಿಗೆ ಸೇರುವವಳಿದ್ದೆ. ಅಪ್ಪನ ಇಚ್ಛೆಗೆ ಕಟ್ಟು ಬಿದ್ದು ಬ್ಯಾಂಕ್ ಕೆಲಸದ ಸಂದರ್ಶನಕ್ಕೆ ಹಾಜರಾಗಿದ್ದೆ. ಆ ಕೆಲಸ ಸಿಕ್ಕಾಗ ಅಪ್ಪನ ಸಂಭ್ರಮ ಹೇಳತೀರದು. ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಅಂತಿದ್ದ. ಅಪ್ಪನ ಮಧ್ಯಮ ವರ್ಗದ ಕನಸನ್ನು ನನಸು ಮಾಡುವುದಕ್ಕೆ ಹೋಗಿ, ನನ್ನ ಎಂ. ಎಸ್ಸಿ ಮಾಡುವ ಕನಸು ಅಲ್ಲಿಗೇ ಕಮರಿ ಹೋಗಿತ್ತು.

ಬಹುಶಃ ಮಧ್ಯಮ ವರ್ಗದ ಮಕ್ಕಳ ಕನಸುಗಳೇ ಹಾಗೇನೋ. ಅದಿತಿಗೆ ಇಂಜಿನಿಯರಿಂಗ್ ಮುಗಿದ ಕೂಡಲೇ ಕೈ ತುಂಬಾ ಸಂಬಳ ನೀಡುವ ಕೆಲಸ ಅನಾಯಾಸವಾಗಿ ಸಿಕ್ಕಿತ್ತು. ‘ನಾನಾದ್ರೆ ಇಂಜಿನಿಯರ್ರೇ’ ಅಂದಿದ್ದ ಅವಳ ದನಿ ಅವತ್ತು ಯಾಕೋ ಮತ್ತೆ ನನ್ನ ಕಿವಿಯಲ್ಲಿ ಕರ್ಕಶವಾಗಿ ಮೊಳಗಿತ್ತು. 

ಕೆಲಸ ಸಿಕ್ಕಿದ ಕೂಡಲೇ ಮನೆಯಲ್ಲಿ ವರಾನ್ವೇಷಣೆ ಶುರುವಾಗಿತ್ತು. ಅದೊಂದು ದಿನ ಮಾವ ಮನೆಗೆ ಬಂದಿದ್ದರು ಜಾತಕ ತೆಗೆದುಕೊಂಡು. ನನ್ನಪ್ಪನಲ್ಲಿ ಅಂದಿದ್ದರು-‘ಒಳ್ಳೇ ಹುಡುಗ.. ಒಳ್ಳೇ ಕೆಲಸದಲ್ಲಿದ್ದಾನೆ. ನೋಡೋದಕ್ಕೂ ಲಕ್ಷಣವಾಗಿದ್ದಾನೆ. ನಮ್ಮ ಅದಿತಿಗೆ ಬಂದಿತ್ತು ಜಾತಕ’.  ‘ಮತ್ತೆ ಮುಂದುವರಿಸದಿದ್ದ ಕಾರಣ? ‘ಅಪ್ಪನ ಮುಖದಲ್ಲಿದ್ದ ಪ್ರಶ್ನೆಯನ್ನು ಓದಿದವರಂತೆ ಹೇಳಿದ್ದರು ಮಾವ -‘ ಅದಿತಿಗೆ ಇನ್ನೂ ಎರಡು ವರ್ಷ ಮದುವೆ ಬೇಡವಂತೆ. ಕೆರಿಯರ್ ನಲ್ಲಿ ಸೆಟ್ಲ್ ಆಗಬೇಕಂತೆ.

ದೇವರು ವರ ಕೊಡೋದೇನು? ದೇವರಂಥಾ ವರ ಸಿಕ್ಕಿದ್ರೂ ಅವಳಿಗೆ ಈಗ ಬೇಡವಂತೆ’ ಅಂದು ಅದೊಂದು ದೊಡ್ಡ ಜೋಕೇನೋ ಎಂಬಂತೆ ನಕ್ಕಿದ್ದ. ಎಲ್ಲರೂ ನಗುವಿಗೆ ದನಿಗೂಡಿಸಿದ್ದರು. ಅಲ್ಲೇ ಬಾಗಿಲ ಹಿಂದೆ ನಿಂತು ಕೇಳಿಸಿಕೊಂಡಿದ್ದ ನಂಗೆ ಯಾಕೋ ಎದೆಯಲ್ಲಿ ಸೂಜಿ ಚುಚ್ಚಿದ ಹಾಗಾಗಿತ್ತು. ಅಲ್ಲಿಂದ ಶುರುವಾಗಿತ್ತು ಈ ಜಾತಕ ತಲುಪಿಸುವ ನಾಟಕ. ಹುಡುಗ ಚೆನ್ನಾಗಿದ್ದರೆ ಕೆಲಸ ಚೆನ್ನಾಗಿಲ್ಲ. ಕೆಲಸವೂ ರೂಪವೂ ಚೆನ್ನಾಗಿದ್ದರೆ ಜಾತಕ ಹೊಂದುತ್ತಿಲ್ಲ. ಎಲ್ಲವೂ ಸರಿಯಾಗಿದ್ದರೆ ಹುಡುಗ ಸಾಧಾರಣ ರೂಪಿನ ನನ್ನನ್ನು ಒಪ್ಪುತ್ತಿಲ್ಲ. ‘ಸಾಕಪ್ಪಾ ಸಾಕು ಈ ಮದುವೆಯ ಸಹವಾಸ’ ಅನ್ನಿಸಿತ್ತು. 

ಬ್ಯಾಂಕ್ ಉದ್ಯೋಗಿಯಾದ ನನಗೆ ಲೆಕ್ಕ ಇಡುವುದು ಕಷ್ಟವಾದದ್ದೇನಲ್ಲ. ಆದರೆ ಕಳುಹಿಸಿದ ಜಾತಕಗಳು, ನೋಡಲು ಬಂದ ಹುಡುಗರ ಲೆಕ್ಕ ಯಾಕೋ ತಪ್ಪಿ ಹೋದಂತಿತ್ತು. ಅಂತೂ ಇಂತೂ ಎರಡು ವರ್ಷಗಳ ಹುಡುಕಾಟದಲ್ಲಿ ಕೊನೆಗೂ ಸಿಕ್ಕಿದ್ದ ನನ್ನ ವರ. ನನ್ನಂತೇ ಸಾಮಾನ್ಯ ರೂಪಿನ, ನನ್ನಂತೆಯೇ ಬ್ಯಾಂಕ್ ಉದ್ಯೋಗಿಯಾಗಿದ್ದ ವಿನಯ್.

ಹುಡುಗ ನನ್ನನ್ನು ಒಪ್ಪಿದ್ದಾನೆ ಎಂದ ಕೂಡಲೇ ನಾನೂ ಹೂಂಗುಟ್ಟಿದ್ದೆ. ಆಯ್ಕೆಗಳಾದರೂ ಎಲ್ಲಿದ್ದವು ನನಗೆ? ನನ್ನ ಮದುವೆ ನಿಶ್ಚಯವಾಗುವ ಹೊತ್ತಿಗೆ ಅದಿತಿಯ ಎರಡು ವರ್ಷದ ಗಡುವು ಮುಗಿದಿತ್ತು. ಅದು ಮುಗಿಯಲಿಕ್ಕೇ ಕಾಯುತ್ತಿದ್ದೆ ಅನ್ನುವ ಹಾಗೆ ಒಳ್ಳೆಯ ಸಂಬಂಧವೊಂದು ಹಾರಿ ಬಂದಿತ್ತು ಅವಳಿದ್ದಲ್ಲಿಗೇ. ಅವಳ ಕೆರಿಯರ್ ಫೋಕಸ್ಡ್’ ಕನಸಿಗೆ ಬಣ್ಣ ತುಂಬುವ, ಅವಳಂತೆಯೇ ಇಂಜಿನಿಯರ್ ಆದ ಚೆಲುವ. ನೋಡಿದ್ದು ಒಂದೇ ಜಾತಕ, ಒಂದೇ ಹುಡುಗ, ಎಲ್ಲವೂ ಸುಸೂತ್ರ. 

ಅವತ್ತು ಅಮ್ಮನ ಮಡಿಲಲ್ಲಿ ಮುಖವಿಟ್ಟು ಕೇಳಿದ್ದೆ- ‘ಅಮ್ಮ, ಕೆಲವರ ಬದುಕು ಯಾಕೆ ಸರಳ ರೇಖೆಯಂತೆ ಎಲ್ಲವೂ ಸರಳ.. ಮತ್ತೆ ಕೆಲವರದ್ದೇಕೆ ಲಂಬ, ಲಘು, ವಕ್ರ? ‘. ಕೇಳಿದ್ದು ತನಗೆ ಅರ್ಥವಾಯಿತು ಎಂಬಂತೆ ಅಮ್ಮ ತಲೆ ಸವರುತ್ತಾ ಹೇಳಿದ್ದಳು- ‘ಬದುಕು ಇರುವುದೇ ಹಾಗೆ ಮಗಳೇ..’

ಮದುವೆ ಆಗಿ ಎರಡು ವರ್ಷಗಳೊಳಗೆ ನಾನು ತಾಯಿಯಾಗಿದ್ದೆ. ಮಗಳು ಮಿಹಿಕಾ ಒಡಲು ತುಂಬಿದ್ದಳು. ಮಗುವಿನ ನಾಮಕರಣಕ್ಕೆ ಅದಿತಿಯೂ ಬಂದಿದ್ದಳು. ವರ್ಷಕ್ಕೊಂದು ಪ್ರಮೋಷನ್ ಗಿಟ್ಟಿಸುತ್ತಿದ್ದ ಅವಳು ಕೇಳಿದ್ದಳು-‘ ಏನೇ ತನು, ಇಷ್ಟು ಬೇಗ ಇದೆಲ್ಲಾ ಬೇಕಿತ್ತಾ? ಪ್ಲಾನಿಂಗ್ ಮಾಡೋದಲ್ವೇನೇ? ‘. ‘ಏನು ಮಾಡೋದು, ಆಗಿ ಬಿಡ್ತು’ ಅಂತ ಪೆದ್ದಾಗಿ ನಕ್ಕಿದ್ದೆ.

‘ಅಯ್ಯೋ… ನಂಗಂತೂ ಇನ್ನೂ ಎರಡು ಮೂರು ವರ್ಷ ಮಗು ಬೇಡಪ್ಪಾ.. ಎಲ್ಲಾದ್ರೂ ಆಯ್ತು ಅಂತಿಟ್ಕೋ. ನಾನಂತೂ ತೆಗೆಸಿ ಬಿಡೋಳೇ… ‘ಇನ್ನೂ ಏನೋ ಹೇಳುವವಳಿದ್ದಳು. ಅಷ್ಟು ಹೊತ್ತಿಗೆ ಅಲ್ಲೇ ಇದ್ದ ಅವಳ ಅಮ್ಮ ಮೊತ್ತ ಮೊದಲ ಬಾರಿಗೆ ಮಗಳನ್ನು ಗದರಿಸಿದ್ದರು- ‘ಸಾಕು ಮುಚ್ಚೇ ಬಾಯಿ. ತೆಗೆಸ್ತಾಳಂತೆ.. ಮಗು ಅಂದರೆ ದೇವರು ಕೊಡುವ ವರ. ಅದನ್ನೇ ಬೇಡ ಅಂತಾರೇನೇ.. ‘. ‘ದೇವರ ವರ ಅಂತ ಎಲ್ರೂ ಅಂದ್ಕೊಂಡೇ ಈ ದೇಶದ ಜನಸಂಖ್ಯೆ ಇಷ್ಟಾಗಿರೋದಮ್ಮ’ ಛಕ್ಕನೇ ಬಂದಿತ್ತು ಅದಿತಿಯ ಉತ್ತರ. ಇನ್ನು ಅಲ್ಲಿ ನಿಲ್ಲಲಾರೆ ಎಂಬಂತೆ ಅಸಹನೆಯಿಂದ ಎದ್ದು ಹೋಗಿದ್ದರು ಅವಳಮ್ಮ. 

ಮಗಳು ಮಿಹಿಕಾ ಬಂದ ಮೇಲಂತೂ ನನ್ನ ಬದುಕೇ ಬದಲಾಗಿ ಹೋಗಿತ್ತು. ಒಂದರೆ ಗಳಿಗೆ ಸುಮ್ಮನೇ ಕೂರಲೂ ಪುರುಸೊತ್ತಿರಲಿಲ್ಲ. ಮಗು-ಮನೆ-ಬ್ಯಾಂಕು  ಅಂತ ಬೆಳಗ್ಗೆಯಿಂದ ರಾತ್ರಿವರೆಗೂ ಬಿಡುವಿಲ್ಲದ ಕೆಲಸ. ತಾನಾಗೇ ಬಂದ ಪ್ರೊಮೋಶನ್ನನ್ನೂ ನಿರಾಕರಿಸುವಾಗ ಅವತ್ತು ಅದಿತಿ ಹೇಳಿದ್ದೇ ಸರಿಯಿತ್ತೇನೋ ಎಂದು ಒಂದು ಕ್ಷಣಕ್ಕೆ ಅನ್ನಿಸಿತ್ತಾದರೂ ಮಿಹಿಯ ಮುದ್ದು ಮುಖ, ತೊದಲು ನುಡಿಗಳು ಎಲ್ಲವನ್ನೂ ಮರೆಯುವಂತೆ ಮಾಡಿದ್ದು ಸುಳ್ಳಲ್ಲ. ವಾರಕ್ಕೊಮ್ಮೆ ಅಮ್ಮನಿಗೆ ಮಾಡುತ್ತಿದ್ದ ಫೋನು ಕರೆಗಳು ನಿಧಾನವಾಗಿ ಕಡಿಮೆಯಾಗಿ ತಿಂಗಳಿಗೊಂದಾಗಿತ್ತು. ಬದುಕೇ ಪುರುಸೊತ್ತಿಲ್ಲದಂತೆ ಓಡುತ್ತಿರುವಾಗ ಇನ್ನೊಬ್ಬರ ಬಗ್ಗೆ ಯೋಚಿಸಲೂ ಎಲ್ಲಿದೆ ಪುರುಸೊತ್ತು? ಅರೇ.. ಅದಾಗಲೇ ಅಮ್ಮ ಇನ್ನೊಬ್ಬಳಾದಳಾ? 

ಆಮೇಲೆ ನಡೆದ ನನ್ನ ತಂಗಿ ತಮ್ಮಂದಿರ ಮದುವೆಗೂ ಅದಿತಿ ಬಂದಿರಲಿಲ್ಲ. ಕೆಲಸದ ನೆಪ ಹೇಳಿ ತಪ್ಪಿಸಿಕೊಂಡಿದ್ದಳು. ನನ್ನದೇ ಪುಟ್ಟ ಜಗತ್ತಲ್ಲಿ ಮುಳುಗಿದ್ದ ನಾನು ಅವಳಿಗೊಂದು ಕರೆ ಮಾಡಿಯೂ ವಿಚಾರಿಸಿರಲಿಲ್ಲ. ಪ್ರತಿಯೊಬ್ಬರಿಗೂ ಅವರವರದ್ದೇ ಹಾಡು ಪಾಡು. 

ಅದೊಂದು ದಿನ ಅಮ್ಮ ಫೋನು ಮಾಡಿದವಳೇ ಅದಿತಿಯ ಬಗ್ಗೆ ಮಾತಾಡಲು ಶುರುವಿಟ್ಟಿದ್ದಳು. ನಾನು ಅದಾಗಲೇ ಅದಿತಿ ಎಂಬುವವಳೊಬ್ಬಳು ಇದ್ದಳೆಂಬುದನ್ನೇ ಮರೆತು ಬಿಟ್ಟಿದ್ದೆ. ಅಮ್ಮ ಹೇಳಿದ್ದಕ್ಕೆಲ್ಲಾ ಹೂಂಗುಟ್ಟುತ್ತಾ ಇದ್ದವಳು, ಅಮ್ಮ ಮಾಧವಿ ಅತ್ತೆ ಮನೆಗೆ ಬಂದದ್ದನ್ನೂ, ಮಗಳ ಬಗ್ಗೆ ಮಾತಾಡುತ್ತಾ ಕಣ್ಣೀರು ಸುರಿಸಿದ್ದನ್ನೂ ಹೇಳಿದಾಗ, ಉದಾಸೀನದಿಂದ ಕೇಳಿದ್ದೆ ‘ಯಾಕೆ? ಅವಳಿಗೆ ಅಂಥದ್ದೇನಾಗಿದೆ? ‘.

ಅಮ್ಮ ಹೆಚ್ಚು ಕಮ್ಮಿ ಚೀರುವಂತೆ ಹೇಳಿದ್ದಳು- ‘ಮತ್ತಿನ್ನೇನೇ? ಮದುವೆಯಾಗಿ ಹತ್ತು ವರ್ಷವಾದ್ರೂ ಮಗಳು ಹೆರಲಿಲ್ಲ ಅಂತಂದ್ರೆ ಯಾವ ತಾಯಿಗೆ ಬೇಜಾರಾಗುವುದಿಲ್ಲ?.’ ಕೂಡಲೇ ನೆನಪಿಗೆ ಬಂದಿತ್ತು ಅದಿತಿಯ ಗಡುವು ಮುಗಿದು ಅದಾಗಲೇ ಹಲವು ವರ್ಷ ಕಳೆದಿದೆ ಎಂದು. ‘ಇನ್ನೇನು ಆಗಬಹುದು ಬಿಡಮ್ಮಾ.. ಕೆಲವರಿಗೆಲ್ಲಾ ಹತ್ತು- ಹನ್ನೆರಡು ವರ್ಷಗಳಾದ ಮೇಲೂ…. ‘ ಅಂತ ನಾನು ಅನ್ನುವಾಗಲೇ ಮಾತನ್ನು ಅರ್ಧಕ್ಕೇ ತುಂಡರಿಸಿ ಹೇಳಿದ್ದಳು ಅಮ್ಮ’ಇಲ್ಲವಂತೆ..ಇದ್ದ ಡಾಕ್ಟ್ರುಗಳಿಗೆಲ್ಲಾ ತೋರಿಸಿ ಆಯ್ತಂತೆ. ಅಲೋಪಥಿ, ಹೋಮಿಯೋಪಥಿ, ಆಯುರ್ವೇದ ಎಲ್ಲವೂ ಆಯ್ತಂತೆ. ಅವಳಿಗೆ ಮಗುವಾಗುವ ಸಾಧ್ಯತೆಯೇ ಇಲ್ಲವಂತೆ. ‘ಮನಸ್ಸಿಗೆ ಪಿಚ್ಚೆನಿಸಿತ್ತು. 

ಆ ದಿನವಿಡೀ ಮನಸ್ಸು ಕೂತಲ್ಲಿ ನಿಂತಲ್ಲಿ ಅದಿತಿಯ ಬಗ್ಗೆಯೇ ಯೋಚಿಸುತ್ತಿತ್ತು. ಒಂದು ಬಾರಿ ಅವಳನ್ನು ಭೇಟಿಯಾಗಲೇ ಬೇಕು, ಮನಬಿಚ್ಚಿ ಮಾತಾಡಬೇಕು ಅಂದುಕೊಂಡೆ. ಹಾಗಂದುಕೊಂಡೇ ಆರೇಳು ವರ್ಷಗಳು ಉರುಳಿತ್ತು. ಸ್ಕೂಲಿಗೆ ಹೋಗುತ್ತಿದ್ದ ಮಗಳು ಹೈಸ್ಕೂಲು ಮುಗಿಸಿ ಇನ್ನೇನು ಕಾಲೇಜು ಮೆಟ್ಟಲು ಹತ್ತುತ್ತಾಳೆ. 

ಇವತ್ತು ಯಾಕೆ ಇದೆಲ್ಲಾ ನೆನಪಾಗುತ್ತಿದೆ? ಬದುಕಿನ ಎಲ್ಲ ಪುಟಗಳನ್ನೂ ತಿರುವಿ ನೋಡಲು ಪುರುಸೊತ್ತಿಲ್ಲದ ಗಳಿಗೆಗಳಲ್ಲೂ ಕೆಲವೊಂದು ಪುಟಗಳು ಹೀಗೆ ತಂತಾನೇ ತಿರುವಿಕೊಳ್ಳುವುದು ಏಕೆ? ಉತ್ತರ ಗೊತ್ತಿಲ್ಲ. ಯಾಕೋ ಅಮ್ಮನ ಮನೆಗೆ ಹೋಗಲೇಬೇಕು ಅನಿಸುತ್ತಿದೆ. ಎಷ್ಟು ಕಾಲವಾಯಿತು ಅಮ್ಮನಲ್ಲಿ ಸಮಯದ ಪರಿವೆಯೇ ಇಲ್ಲದಂತೆ ಹರಟಿ. ಮನದ ತುಮುಲಗಳನ್ನು ಅವಳಲ್ಲಿ ಹಂಚಿಕೊಳ್ಳಲೇಬೇಕು ಎಂದೆನಿಸಿದೆ. ಹಾಗೆಯೇ ಕಡೆಯ ಪಕ್ಷ ಮಾಧವಿ ಅತ್ತೆಯನ್ನೂ ನೋಡಿಕೊಂಡು ಅದಿತಿಯ ಬಗ್ಗೆ ವಿಚಾರಿಸಿಕೊಂಡು  ಬರಬೇಕು ಎಂಬ ತುಡಿತವೂ. ಇನ್ನು ತಡ ಮಾಡಬಾರದೆಂದು ಬ್ಯಾಂಕಿಗೆ ರಜೆ ಹಾಕಿ, ಹೇಗೂ ರಜೆಯಲ್ಲಿದ್ದ ಮಗಳನ್ನೂ ಕರೆದುಕೊಂಡು ಹೊರಟೆ. 

ಅಮ್ಮನ ಮನೆಯ ಅಂಗಳದಲ್ಲಿ ಕಾಲಿಟ್ಟ ಕೂಡಲೇ ಮನಸು ತಂಪು ತಂಪು. ಎಷ್ಟು ವರ್ಷಗಳಾದರೂ ತವರು ಮನೆ ಹೀಗೇ ಇರುತ್ತದೇನೋ ಅನ್ನಿಸಿ ಬೆಚ್ಚನೆಯ ಭಾವ. ಹೋದ ದಿನವೇ ನನ್ನೊಬ್ಬಳನ್ನೇ ಪಕ್ಕಕ್ಕೆ ಕರೆದು ಮೆಲ್ಲಗೆ ಕೇಳಿದಳು ಅಮ್ಮ- ‘ವಿಷಯ ಗೊತ್ತಾಯ್ತೇನೇ? ‘. ಕೇಳಿದ ರೀತಿಯಲ್ಲೇ ‘ಏನೋ ಇದೆ’ ಅನ್ನಿಸಿ ಯಾವ ವಿಷಯ ಎಂದೆ ಕುತೂಹಲದಿಂದ. ‘ಮೊನ್ನೆ ಮಾಧವಿ ಅತ್ತೆ ಬಂದಿದ್ದಳು. ಮಗಳ ಬಗ್ಗೆ ಮಾತಾಡುತ್ತಾ ಕಣ್ಣೀರಾದ್ಲು. ಅದಿತಿಗೆ ಸ್ತನ ಕ್ಯಾನ್ಸರ್ ಅಂತೆ. ಅದೂ ಕೊನೆಯ ಹಂತದಲ್ಲಿದೆಯಂತೆ…’ ಕೇಳುತ್ತಿದ್ದಂತೆಯೇ ಎದೆಯಲ್ಲಿ ನಡುಕ.

ಮನಸ್ಸಲ್ಲಿ ಹೇಳಲಾಗದ ಅವ್ಯಕ್ತ ನೋವು. ಅಳು ಬಂದರೂ ಒತ್ತರಿಸಿಕೊಂಡು ಅಮ್ಮನ ಕೈ ಹಿಡಿದು ಅಲ್ಲೇ ಅದೆಷ್ಟು ಹೊತ್ತು ಕೂತಿದ್ದೆವೋ… ಮಗಳು ಬಂದು ಭುಜ ಅಲುಗಾಡಿಸಿದಾಗಲೇ ಎಚ್ಚರವಾದದ್ದು. ಸರಕ್ಕನೇ ಮಗಳ ಕೈಯನ್ನು ಒತ್ತಿ ಹಿಡಿದು, ಬದುಕಿನ ಗುಟ್ಟೊಂದನ್ನು ಹೇಳುವವಳಂತೆ ಅಂದೆ- ‘ಮಗಳೇ, ಬದುಕು ಯಾವಾಗಲೂ ನಾವು ಅಂದುಕೊಂಡಂತೆಯೇ ನಡೆಯುವುದಿಲ್ಲ. ನಮಗೆ ಬೇಕು ಅಂದದ್ದೆಲ್ಲವೂ ದಕ್ಕುವುದಿಲ್ಲ. ಹಾಗೆಯೇ ಒಮ್ಮೊಮ್ಮೆ ಬೇಡವೆಂದರೂ ದೇವರು ಕೊಡುತ್ತಾನೆ. ಎಲ್ಲವನ್ನೂ ಬೇಡವೆನ್ನಲಾಗುವುದಿಲ್ಲ…’ ಮಗಳು ಏನೊಂದೂ ಅರ್ಥವಾಗದೆ ನಿಂತಿದ್ದಳು.

‍ಲೇಖಕರು Admin

November 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: