ಎಚ್ ಆರ್ ರಮೇಶ ಕಥೆ- ರಾಗ ಬಾಗೇಶ್ರೀ…

ಎಚ್ ಆರ್ ರಮೇಶ

‘ಅಮ್ಮ ನಾನು ಸತ್ತೊಗ್ತೀನಾ, ಯಾವಾಗ?’ ‘ಹೇ ಸಾಂಚಿ ಪುಟ್ಟ ಏನೇನೋ ಮಾತಾಡ್ತಿದಿಯಲ್ಲ, ಇದುನ್ನೆಲ್ಲ ಯಾರು ಹೇಳಿಕೊಟ್ಟರು?’ ಸಾಂಚಿಯ ತಾಯಿ ರಾಧಿಕ ಗಾಬರಿಯಿಂದ ಕೇಳಿದಳು ಅಕ್ಕಿಯನ್ನು ನೀರಿನಲ್ಲಿ ನೆನೆಸಿಡುತ್ತ. ಈ ಪ್ರಶ್ನೆಗಳು ರಾಧಿಕಳನ್ನು ತಬ್ಬಿಬ್ಬುಗೊಳಿಸಿದವು. ಏಳೂವರೆ ವರ್ಷದ ಮಗಳು ಸಾಂಚಿ ಅಲ್ಲಿಗೆ ಸುಮ್ಮನಾಗದೆ, ‘ಅಮ್ಮ ಸತ್ತು ಹೋಗೋದು ಅಂದರೆ ಏನಮ್ಮ?’ ಈ ಪ್ರಶ್ನೆಗೆ ಅವಳಿಗೆ ಉತ್ತರ ಕೊಡುವುದಕ್ಕೆ ಆಗಲಿಲ್ಲ. ಆಗ ಅವಳಿಗೆ ಏನಾದರು ಹೇಳಿ ಸುಮ್ಮನಿರಿಸಬೇಕೆಂದು ‘ಸತ್ತು ಹೋಗೋದು ಅಂದರೆ ಆಕಾಶದೊಳಗಡೆ ಹೋಗೋದು’ ಎಂದಳು.

‘ಸತ್ತೋರೆಲ್ಲ ಆಕಾಶದೊಳಗಡೆ ಹೋಗಿ ಏನು ಮಾಡ್ತಾರೆ?’ ಎಂದು ಕೇಳಿದಳು ತನ್ನ ಮಗಳು ಅಷ್ಟು ಸುಲಭಕ್ಕೆಬಿಡುವುದಿಲ್ಲ ಎಂದು ಕೊಂಡ ರಾಧಿಕ, ‘ಅವರಿಗೆ ಅಲ್ಲಿ ರೆಕ್ಕೆಗಳು ಬರ್ತಾವೆ, ಹಾರಾಡುತ್ತಿರುತ್ತಾರೆ.’ ‘ರೆಕ್ಕೆ ಯಾರು ಕೊಡುತ್ತಾರೆ?’, ‘ಸತ್ತವರನ್ನು ಹುಳಗಳು ತಿಂತಾವಲ್ಲ, ಋಣ ಯಾಕೆ ಇರಿಸ್ಕೊಬೇಕು ಅಂತ ಅವು ರೆಕ್ಕೆಗಳ್ನ ಕೊಡ್ತಾವೆ.’ ‘ಹೇ ಸಾಂಚಿ ಪುಟ್ಟ ನೀನು ಈಗಲ್ಲ ಹೋಗೋದು, ತುಂಬಾ ದೊಡ್ಡಾಕಿ ಆದ ಮೇಲೆ, ನಿಮ್ಮ ತಾತ, ಅಜ್ಜಿ ಥರ ಆಗ್ತೀಯಲ್ಲ ಅವಾಗ.’ ‘ಮತ್ತೆ ಅವರಿನ್ನೂ ಇದ್ದಾರಲ್ಲ?‘ ಎಂದು ಕೇಳಿ ತನ್ನ ಪ್ರಶ್ನೆಗಳ ಸರಣಿಯನ್ನು ಮುಂದುವರೆಸಿದಳು. ಈ ಸಂಭಾಷಣೆ ತಾಯಿ ಮತ್ತು ಮಗಳು ಇಬ್ಬರ ನಡುವೆ ನಡೆಯುತ್ತಿತ್ತು. ಸಂಜೆ. ನಾಲಕ್ಕು. ಮಳೆ ಕಣ್ಣಾ ಮುಚ್ಚಾಲೆ ಆಡುತ್ತಿತ್ತು. ಮುಗ್ಧ ಬಾಲೆಯ ಈ ಪ್ರಶ್ನೆಗಳು ಕೇವಲ ಊಹೆಯ ಪ್ರಶ್ನೆಗಳಂತಾಗಿ ಕಾಣದೆ ವಾಸ್ತವದಲ್ಲಿ ಘಟಿಸುತ್ತಿವೆಯೇನೋ ಎನ್ನುವ ಅನುಭವವಾಯಿತು ಮುವತ್ತೆಂಟು, ಮುವತ್ತೊಂಬತ್ತರ ಆಸುಪಾಸಿನಲ್ಲಿರುವ ರಾಧಿಕಳಿಗೆ. 

ಹೊಸ ಬಗೆಯ ವಾಸ್ತುಶಿಲ್ಪದ ವಿನ್ಯಾಸದಲ್ಲಿ ಕಟ್ಟಲಾಗಿದ್ದ ಅವರ ಮನೆ ಆಕರ್ಷಣೀಯವಾಗಿತ್ತು. ಕಮಾನು ಆಕಾರದಲ್ಲಿರುವ ಮನೆಯ ಮುಂದಿನ ಮುಖಮಂಟಪ. ಇದು ಮನೆಗೆ ವಿಶಿಷ್ಟವಾದ ಮೆರುಗನ್ನು ಹೊಂದಿ ನೋಡುಗರನ್ನು ಸೆಳೆಯುತ್ತಿತ್ತು. ಮನೆಯ ಕಾಂಪೌಂಡಿನ ಒಳಗಡೆ ತರಾವರಿ ಹೂವಿನ ಗಿಡಗಳು. ಆ ಅಸಂಖ್ಯ ಹೂವುಗಳ ನಡುವೆ ಕೆಂಪು ಬಣ್ಣದ ಆಂಥೋರಿಯಮ್ ಹೂವುಗಳು ವಿಲಕ್ಷಣವಾಗಿ ಸೊಗಸನ್ನು ಹರಡುತ್ತಿದ್ದವು. ಮಳೆಯ ಜಿಟಿ ಜಿಟಿ ಸದ್ದಿನಲ್ಲಿ ಮುಂಬಾಗಿಲಿನ ಮುಂದೆ ನೇತುಹಾಕಲಾಗಿದ್ದ ಗಾಳಿಗೆಜ್ಜೆಯ ಸದ್ದು ಎಲ್ಲೋ ದೂರದಲ್ಲಿ ಕೇಳುತ್ತಿರುವಂತೆ ಕೇಳುತ್ತಿತ್ತು. ಗಾಳಿ ಅದರ ಮೈಯನ್ನು ಮುಟ್ಟಿ ಅದಕ್ಕೆ ಕಚಗುಳಿ ಇಟ್ಟು ಬಂದು ಹೋಗುವುದನ್ನು ಮಾಡುತ್ತಿತ್ತು. ಮನೆಯು ದೊಡ್ಡದಾಗಿದ್ದರೂ, ಆಡಂಬರದ ವಸ್ತುಗಳಿಂದ ಇಡಿಕಿರಿದಿರಲಿಲ್ಲ. ಮನೆಯ ಒಳಗಿನ ಗೋಡೆಗಳು ಬಿಳಿ ಬಣ್ಣದಿಂದ ಹೊಳೆಯುತ್ತಿದ್ದವು. ಆದರೆ ಕೆಳಭಾಗ ಮಗಳು ಬಣ್ಣದ ಸೀಸದಕಡ್ಡಿಗಳಿಂದ ಎಳೆದ ಗೆರೆಗಳಿಂದ ವರ್ಣಮಯವಾಗಿತ್ತು.  

ತನ್ನ ಮಗಳು ಶಾಲೆಗೆ ಹೋಗದೆ ಜ್ಞಾನವನ್ನುಗಳಿಸಿಕೊಳ್ಳಬೇಕೆಂದು ರಾಧಿಕ ಅಂದುಕೊಂಡು ಅದರಂತೆ ಅವಳಿಗೆ ಮನೆಯಲ್ಲಿಯೇ ಓದಲು ಬರೆಯಲು ಹೇಳಿಕೊಡುತ್ತಿದ್ದಳು. ಹಾಗಾಗಿ ಶಾಲೆಗೆ ಸೇರಿಸುವ ವಯಸ್ಸಾಗಿದ್ದರೂ ಶಾಲೆಗೆ ಸೇರಿಸಿರಲಿಲ್ಲ. ಗಂಡ ಚಂದ್ರಕಾಂತನಿಗೂ ಇದು ಆಸಕ್ತಿದಾಯಕವಾಗಿ ಕಂಡಿದ್ದರೂ ಮೊದಲು ವಿರೋಧವನ್ನು ವ್ಯಕ್ತಪಡಿಸಿದ್ದ. ‘ನಿಮ್ಮ ಶಾಲೆಗಳು ಕೊಡುವುದು ಕೊನೆಗೆ ಏನನ್ನು ಸರ್ಟಿಫಿಕೇಟನ್ನು. ಅದರಿಂದ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳಬೇಕು ಅಷ್ಟೆ. ನಮ್ಮ ದೇಶದಲ್ಲಿ ಕೋಟ್ಯಾಂತರ ಜನ ರೈತರು ಯುನಿವರ್ಸಿಟಿಯಲ್ಲಿ ಓದದೆಯೂ ಬುದ್ಧವಂತರಿಲ್ಲವಾ? ಮನುಷ್ಯನಿಗೆ ಬೇಕಿರುವುದು ಮುಖ್ಯವಾಗಿ ವಿವೇಕ. ಅಷ್ಟಕ್ಕೂ ನನ್ನ ಮಗಳು ಯಾವ ಸರ್ಕಾರಿ ಕೆಲಸಕ್ಕೂ ಹೋಗುವುದು ಬೇಡ, ಅವಳು ಸಿತಾರ ವಾದಕಿ ಆಗಲಿ. 

ಸರ್ಟಿಫಿಕೇಟ್ ಬೇಕಂದ್ರೆ ಅವಳು ನೇರವಾಗಿ ಎಕ್ಸಾಮ್ ಬರೆದು ತಗೋಳ್ಳಲಿ ಮುಂದೆ ಯಾವತ್ತಾದರು’ ಎಂದಿದ್ದಳು. ‘ಹಾಗದರೆ ಸ್ಕೂಲಲ್ಲಿ ಏನನ್ನೂ ಕಲಿಯುವುದಿಲ್ಲವೇ, ವಿಭಿನ್ನ ನೆಲೆಯ ಮಕ್ಕಳು ಅವರ ಜೊತೆ ಬೆರೆಯುವುದೇ ಒಂದು ಅನುಭವ’ ಎಂದಿದ್ದ ಅವನ ಮಾತಿಗೆ, ‘ಇರಬಹುದು, ಅದನ್ನು ನಾನು ಅಲ್ಲಗೆಳೆಯುತ್ತಿಲ್ಲ, ಆದರೆ ನನ್ನ ಮಗಳು ಬದುಕಿನಿಂದ ನೇರವಾಗಿ ಪಾಠಗಳನ್ನು ಕಲಿಯಲಿ, ಪಠ್ಯ ಪುಸ್ತಕಗಳಿಂದ ಬೇಡ’ ಎಂದಿದ್ದಳು. ‘ಈ ಎಕ್ಸ್ಪೆರಿಮೆಂಟ್ ಅವಳ ಜೀವನದಲ್ಲಿ ನಾವು ಮಾಡುವುದು ಎಷ್ಟು ಸರಿಯೋ ಏನೋ’ ಎಂದಿದ್ದ ಚಂದ್ರಕಾಂತ. ‘ಇದು ಎಕ್ಸ್ಪೆರಿಮೆಂಟಲ್ಲ, ಪ್ರಾಕ್ಟಿಕಲ್. ಓದುವುದನ್ನು, ಬರೆಯುವುದನ್ನು ಕಲಿತರೆ ಜಗತ್ತಿನಲ್ಲಿರುವ ವಿಷಯಗಳನ್ನು ತಿಳಿದುಕೊಳ್ಳಬಹುದಲ್ಲ’ ಎಂದು ಸಮರ್ಥಸಿಕೊಂಡಿದ್ದಳು ರಾಧಿಕ. ‘ಆದರೆ ಒಂದು ಫೋಕಸ್ ಅನ್ನವುದು ಬೇಕಲ್ಲ?’ ‘ಅದನ್ನೇ ನಾನು ಬಯಸುವುದು. ಫೋಕಸ್ ಬೇಕು. ಅವಳು ಸಣ್ಣವಳಾಗಿಂದಾನೆ ಸಿತಾರಿನ ಮೇಲೆ ಕಾನ್ಸನ್‍ಟ್ಟೇಟ್ ಮಾಡಲಿ. ಅದರಲ್ಲೇ ಸಾಧನೆ ಮಾಡಲಿ. ಹಾಗಾಗಿ ಅವಳಿಗೆ ನಾವು ಅದರ ಬಗ್ಗೆನೆ ಯಾಕೆ ಒಲವು ಮೂಡಿಸಬಾರದು?’ ರಾಧಿಕ ಉತ್ತರ ಕೊಟ್ಟಿದ್ದಳು. ‘ಏನೋ,  ನೋಡೋಣ, ಮುಂದೆ ಏನಾಗುತ್ತೋ, ಭವಿಷ್ಯವನ್ನು ಯಾರು ಊಹಿಸುವುದಕ್ಕೆ ಆಗುತ್ತೆ’ ಎಂದು ಚಂದ್ರಕಾಂತ ಸುಮ್ಮನಾಗಿದ್ದ.  

ಏಳೂವರೆ ವರ್ಷಕ್ಕೆ ಅವಳು ಸ್ವತಃ ಸಣ್ಣ ಸಣ್ಣ ವಾಕ್ಯಗಳನ್ನು ರಚಿಸಲು ಪ್ರಾರಂಭಿಸಿದ್ದಳು. ಅವಳನ್ನು ಹೊರಗಡೆ ಕರೆದುಕೊಂಡು ಹೋಗಿ ಮತ್ತೆ ಮನೆಗೆ ಮರಳಿದಾಗ ಅವಳು ನೋಡಿದ ವಸ್ತುಗಳನ್ನು ಅವಳಿಂದ ಹೇಳಿಸಿ, ಅವುಗಳನ್ನು ವಾಕ್ಯಗಳಲ್ಲಿ ಬರೆಸುತ್ತಿದ್ದಳು. ಒಂದು ಸಲ ಚಪ್ಪಲಿ ಹೊಲಿಸಿಕೊಳ್ಳುವಾಗ, ಚಪ್ಪಲಿ ಹೊಲಿಯುವ ವ್ಯಕ್ತಿಗೆ ಅವನು ಉಪಯೋಗಿಸುವ ಪರಿಕರಗಳ ಹೆಸರುಗಳನ್ನೆಲ್ಲ ಕೇಳುತ್ತಿದ್ದುದನ್ನು ನೋಡಿ ರಾಧಿಕ ಆಶ್ಚರ್ಯಗೊಂಡಿದ್ದಳು. ಆ ವ್ಯಕ್ತಿ ‘ಎಷ್ಟನೆ ಕ್ಲಾಸು ಪುಟ್ಟಿ?’ ಎಂದು ಕೇಳಿದ್ದಕ್ಕೆ ‘ನಾನು ಸ್ಕೂಲಿಗೆ ಹೋಗೋಲ್ಲ’ ಎಂದಿದ್ದಳು. ‘ಚೋಟುದ್ದ ಇದಿಯಾ, ಅದೇನು ಖದರ್ ಐತೆ ಪುಟ್ಟಿ ನಿನ್ನ ಧ್ವನಿಯಲ್ಲಿ’ ಎಂದು ನಕ್ಕು, ರಾಧಿಕಳಿಗೆ ‘ಯಾಕ್ಮೇಡಮ್ಮ ಮಗಳ್ನ ಇನ್ನುವೆ ಸ್ಕೂಲಿಗೆ ಹಾಕಿಲ್ಲವಾ? ಎಷ್ಟು ವಯಸ್ಸು?’ ಎಂದು ಕೇಳಿದ್ದ. ಅದಕ್ಕೆ ಅವಳು ಎಲ್ಲರಿಗೂ ಕೊಡುವು ಉತ್ತರವನ್ನೇ ಇವನಿಗೂ ಕೊಟ್ಟಿದ್ದಳು ‘ನನ್ನ ಮಗಳ್ನ ಸ್ಕೂಲಿಗೆ ಕಳಿಸಲ್ಲ, ಅವಳೂ ಹೋಗೋಲ್ಲ’ ಎಂದು. ಅದಕ್ಕೆ ಅವನು ಮೊದಲು ಎಲ್ಲ ಹಠಮಾಡ್ತಾವೆ, ಆಮೇಲೆ ಸರಿಯಾಗ್ತಾವೆ ಎಂದ. ಆದರೆ ‘ಅದು ಹಾಗಲ್ಲ, ಎಂದು ಏನನ್ನೋ ಹೇಳಲು ಹೋಗಿ, ಎಲ್ಲರಿಗೂ ಎಲ್ಲಕಡೆಯೂ ಸಮಜಾಯಿಷಿ ಕೊಡುವುದು ಬೇಡ ಎಂದು ಸುಮ್ಮನಾಗಿ, ಹರಿದು ಹೋಗಿದ್ದ ಚಪ್ಪಲಿಯನ್ನು ಹೊಲಿದು ಕೊಟ್ಟ ನಂತರ, ಆ ವ್ಯಕ್ತಿಯ ತಲೆ ಮುಟ್ಟಿ ನಮಸ್ಕಾರ ಮಾಡಿ ಬಂದಿದ್ದಳು. ‘ಅಮ್ಮ ಅವರಿಗೆ ಯಾಕೆ ನಮಸ್ಕಾರ ಮಾಡಿದೆ?’ ‘ನಾವು ಎಲ್ಲೆಲ್ಲೋ ಅಡ್ಡಾಡಿ ಬಂದಿರುವ ಚಪ್ಪಲಿಗಳನ್ನು ಅವರು ಕೈಯಲ್ಲಿ ಮುಟ್ಟಿ ಹೊಲಿದು ಕೊಟ್ಟರಲ್ಲ ಅದಕ್ಕೆ’ ಎಂದು ತನ್ನ ಮಗಳಿಗೆ ಹೇಳುತ್ತ ಬಂದಿದ್ದಳು  

ಚಂದ್ರಕಾಂತ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ಅವನ ಹೆಂಡತಿ ರಾಧಿಕಳು ಸಹ ಅದೇ ಕಾಲೇಜಿನಲ್ಲಿ ಜೀವಶಾಸ್ತ್ರದ ವಿಷಯದಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಮಗಳು ಸಾಂಚಿ ಹುಟ್ಟಿದ ನಂತರ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮಗಳನ್ನು ಬೆಳೆಸುವುದರಲ್ಲಿ ಮತ್ತು ಊರಿನಲ್ಲಿನ ಕೃಷಿ ಭೂಮಿಯನ್ನು ನೋಡಿಕೊಳ್ಳುವುದರಲ್ಲಿ ತೊಡಗಿಕೊಂಡಿದ್ದಳು. ಕೃಷಿಮಾಡುವುದಕ್ಕೆ ಹಳ್ಳಿಯಲ್ಲಿದ್ದ ಅವಳ ಮಾವ, ಅತ್ತೆ, ಮೈದುನರು ಬೆಂಬಲವನ್ನು ಕೊಡುತ್ತಿದ್ದರು. ಅನೌಷ್ಕಳ ಸಿತಾರ ಸಂಗೀತ ಕಛೇರಿ ದೇಶದಲ್ಲಿ ಎಲ್ಲಿ ನಡೆದರೂ ಮಗಳನ್ನು ಕರೆದುಕೊಂಡು ಹೋಗುತ್ತಿದ್ದಳು. ಇತ್ತೀಚಿಗೆ ಅವಳು ನಡೆಸಿಕೊಟ್ಟ ಹೈದರಾಬಾದ್, ದೆಹಲಿ, ಮುಂಬೈ ಸಂಗೀತ ಕಛೇರಿಗಳಿಗೂ ಹೋಗಿ ಬಂದಿದ್ದಳು. ಕೋಲ್ಕತ್ತದ ಅನೇಕ ಸೀತಾರ ಸಂಗೀತ ಕಛೇರಿಗಳಿಗೆ ಹೋಗಿ ಬಂದಿದ್ದ ಅವಳು, ಅಲ್ಲಿಂದ ಒಂದು ಸಿತಾರನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದಳು.  

ಒಂದು ಬೇಸಗೆಯ ಮಧ್ಯಾಹ್ನ. ರಾಧಿಕ ಶೋವರ್ ಅನ್ನು ಆನ್ ಮಾಡಿಕೊಂಡು ಹಾಡೊಂದನ್ನು ಗುನುಗಿಕೊಂಡು ಸ್ನಾನಮಾಡುತ್ತಿದ್ದಳು. ಶೋವರ್‍ನ ಅಡಿಯಲ್ಲಿ ನಿಂತು ತಲೆಗೆ ನೀರನ್ನು ಬಿಟ್ಟು ಕೊಳ್ಳಲು ಅಣಿಯಾಗಿದ್ದಳು, ಅಷ್ಟರಲ್ಲಿ, ಅವಳ ಕಿವಿಗೆ ಹೊರಗಡೆಯಿಂದ ಸಿತಾರಿನ ತಂತಿಗಳ ನಾದ ಬಡಿಯಿತು. ತಕ್ಷಣಕ್ಕೆ ಎಲ್ಲ ನಲ್ಲಿಗಳನ್ನು ಆಫ್ ಮಾಡಿ, ತದೇಕ ಚಿತ್ತದಿಂದ ಅದು ಬಂದ ದಿಕ್ಕಿಗೆ ಕಿವಿಗಳನ್ನು ಕೇಂದ್ರಿಕರಿಸಿದಳು. ಇಡೀ ಪ್ರಪಂಚವೇ ಮೌನವಾಗಿದ್ದು, ಅ ಮೌನವವನ್ನು ಸಿತಾರಿನ ತಂತಿಗಳು ಸ್ಪರ್ಶಿಸಿ ಪುಳಕಗೊಳಿಸುತ್ತಿರುವಂತೆ ಅನುಭವವಾಯಿತು. ‘ಅರೆ ಎಲ್ಲಿಂದ ಬರುತ್ತಿದೆ ಈ ಮಧ್ಯಾಹ್ನದಲ್ಲಿ, ಈ ಸುರಾಗ’ ಎಂದುಕೊಂಡು, ಮತ್ತಷ್ಟು ತೀವ್ರವಾಗಿ ಅದನ್ನು ಆಲಿಸತೊಡಗಿದಳು. ಈಗ ಅವಳಿಗೆ ಇನ್ನಷ್ಟು ಸ್ಪಷ್ಟವಾಗ ತೊಡಗಿತು ಆ ತಂತಿಯ ಸಂಗೀತದ ಸದ್ದು ಎಲ್ಲೋ ದೂರದಿಂದ ಬರುತ್ತಿಲ್ಲ, ತನ್ನ ಮನೆಯ ಒಳಗಡೆಯಿಂದನೆ ಬರುತ್ತಿದೆ ಎಂದು ಅರಿವಾಗ ತೊಡಗಿತು. ಮೈಮೇಲೆ ಬಟ್ಟೆಯಿಲ್ಲದಿರುವುದನ್ನೂ ಮತ್ತು ಸೋಪಿನ ನೊರೆಯನ್ನು ಲೆಕ್ಕಿಸದೆ ಮೆಲ್ಲನೆ ಬಾತುರೂಮಿನಿಂದ ಹೊರ ಹೆಜ್ಜೆಹಾಕುತ್ತ ಹೊರ ಬಂದಳು. ಮಗಳು ಸಾಂಚಿ ಸಿತಾರದ ತಂತಿಗಳ ಮೇಲೆ ಬೆರಳುಗಳ ಆಡಿಸುತ್ತಿದ್ದಾಳೆ. ಅವಳ ಬೆರಳುಗಳ ಆಡಿಸುವಿಕೆಯೇ ರಾಗವಾಗಿ ಹೊಮ್ಮುತ್ತಿದೆ. ‘ಅರೆ! ಇದು ನುಡಿಸುತ್ತಿರುವುದು ನನ್ನ ಮಗಳು ಪುಟ್ಟಿನಾ!’ ಎಂದು ಆಶ್ಚರ್ಯವಾಯಿತು ರಾಧಿಕಳಿಗೆ. ಇವಳು ಬಂದದ್ದನ್ನು ಗಮನಿಸಿದ ಸಾಂಚಿ, ಸಿತಾರನ್ನು ಬಿಟ್ಟು ಎದ್ದು, ಇವಳ ಕಡೆ ಎರಡು ಕೈಗಳನ್ನು ತೋರಿಸುತ್ತ ‘ಶೇಮ್ ಶೇಮ್ ಪಪ್ಪಿ ಶೇಮ್’ ಎಂದು ಕುಣಿಯ ತೊಡಗಿದಳು. ತಕ್ಷಣಕ್ಕೆ ರಾಧಿಕಳಿಗೆ ತಾನಿರುವ ಸ್ಥಿತಿಯನ್ನು ನೋಡಿಕೊಂಡು ತಕ್ಷಣಕ್ಕೆ ನಾಚಿಕೆಯಾದಂತಾಗಿ ಮಗಳು ಸಾಂಚಿಯ ಮೂಗಿಗೆ ನೊರೆಯನ್ನು ಬಳಿದು ಮತ್ತೆ ಬಾತ್‍ರೂಮಿನೊಳಗಡೆ ಸೇರಿಕೊಂಡಳು. 

ಎಂದೂ ಯಾವ ಪ್ರಶ್ನೆಗೂ ವಿಚಲಿತಲಾಗದ ಅವಳು ತನ್ನ ಮಗಳು ಕೇಳಿದ ‘ಅಮ್ಮ ನಾನು ಸಾಯ್ತೀನಾ, ಎನ್ನುವುದು ಅವಳನ್ನು ಯಾಕೋ ಒಳಗಡೆ ಅಲುಗಾಡುವಂತೆ ಮಾಡಿದ್ದವು. ಇದಕ್ಕಿಂತ ಮುಂಚೆ ಅನೇಕ ಪ್ರಶ್ನೆಗಳು ಅವಳು ಕೇಳಿರುವಳು. ಒಮ್ಮೆ ‘ಅಮ್ಮ ಜಾತಿ ಅಂಥಾರಲ್ಲ, ಹಂಗಂದ್ರೆ ಏನು, ಹೆಂಗಿರುತ್ತೆ, ನೀನು ಯಾವ ಜಾತಿ, ನಾನು ಯಾವ ಜಾತಿ, ಅಪ್ಪ ಯಾವ ಜಾತಿ, ತಾತ ಯಾವ ಜಾತಿ, ಮಾಮ ಯಾವ ಜಾತಿ, ಪ್ರಭು ಚಿಕ್ಕಪ್ಪಂದು ಯಾವ ಜಾತಿ, ಎದುರು ಮನೆ ಮೀನ ಇದ್ದಾಳಲ್ಲ ಅವಳದು ಯಾವ  ಜಾತಿ’ ಹೀಗೆ ಅವಳಿಗೆ ಗೊತ್ತಿರುವ ಎಲ್ಲರ ಹೆಸರುಗಳನ್ನು ಹೇಳಿ ಅವರ ಜಾತಿ ಯಾವುದು ಎಂದು ಕೇಳಿದ್ದಳು. ‘ವಚನ, ನಾನು, ಮೀನ, ಗೌತಮ್ ಆಟಮಾಡುವಾಗ ವಚನ ಹೇಳ್ತಾಇದ್ದಳು ಅವಳ ಮನೆಯೊಳಗಡೆಗೆ ಬೇರೆ ಜಾತಿಯವರು ಹೋಗಬಾರದಂತೆ ಅಂತ’ ಎಂದು, ‘ಯಾಕಮ್ಮ, ನಾವು ಒಳಗಡೆ ಹೋದರೆ ಏನಾಗುತ್ತೆ?’ ಎಂದು ಕೇಳಿದ್ದಳು. ಅದಕ್ಕೆ ರಾಧಿಕ, ‘ನಿನ್ನ ವಚನಳಿಗೆ ಹೇಳು ನಮ್ಮ ಮನೆಯೊಳಗಡೆ ಅವಳು ಎಲ್ಲಿಗೆ ಬೇಕಾದರೂ ಬರಬಹುದು ಅಂತ’ ಅಂದಿದ್ದಳು. ಅದಕ್ಕೆ ‘ಅಯ್ಯೋ ಅಮ್ಮ, ಅವಳು ಎಲ್ಲರ ಮನೆಯೊಳಗಡೆ ಹೋಗೊಲ್ವಂತೆ. ಅವರ ಜಾತಿಯವರ ಮನೆಯೊಳಗಡೆ ಮಾತ್ರ ಅಂತೆ ಹೋಗೋದು. ನಮ್ಮ ಜಾತಿ ನಮಗೆ ಹೆಂಗೆ ಗೊತ್ತಾಗುತ್ತೆ’ಎಂದು ಕೇಳಿದ್ದಳು. ಅದಕ್ಕೆ ರಾಧಿಕ, ‘ಜಾತಿ ಗೀತಿ ಇಲ್ಲ ಕಣೆ. ನೆಕ್ಸ್ಟೈಮ್ ಕೇಳಿದರೆ ‘ಜಾತಿ ಇಲ್ಲ, ಗೀತಿ ಇಲ್ಲ ಅಂತ ಹೇಳು’ ಎಂದು ಉತ್ತರಕೊಟ್ಟು ಸುಮ್ಮನಾಗಿಸಿದ್ದಳು. ಈ ಯಾವ ಪ್ರಶ್ನೆಗಳಿಗೂ ವಿಚಿಲಿತಳಾಗಿದಿದ್ದ ರಾಧಿಕ ಅವಳು ಕೇಳಿದ್ದ ‘ಅಮ್ಮ ನಾನು ಸತ್ತೋಗ್ತೀನಾ, ಯಾವಾಗ’ ಎಂದು ಕೇಳಿದ್ದ ಪ್ರಶ್ನೆ ಅವಳನ್ನು ತುಂಬಾ ಕಾಡಿತ್ತು. 

‘ಪುಟ್ಟಿ ಇವೊತ್ತು ನಿಮ್ಮಪ್ಪಂದು ಬರ್ಥಡೆ ಕಣೆ’ ಎಂದಳು. ‘ಹೌದಾ, ಮತ್ತೆ ಕೇಕು?’ ‘ನಿನ್ನೆನೆ ಮಾಡಿ, ಫ್ರಿಡ್ಜ್‍ನಲ್ಲಿ ಇಟ್ಟಿದ್ದೇನಲ್ಲ,’ ‘ಮತ್ತೆ ಹೇಳಲೇ ಇಲ್ಲ,’ ‘ಹೇಳಿದ್ದಿದ್ದರೆ ಇಷ್ಟೊತ್ತಿಗೆ ಅದೆಲ್ಲಿ ಇರುತ್ತಿತ್ತು, ನಿಮ್ಮ ಅಪ್ಪನ ಬರ್ಥಡೆ ನಿನ್ನೆನೆ ಮುಗಿತಿತ್ತು’ ಎಂದು ಹೇಳಿ, ‘ಪುಟ್ಟಿ ಕೇಕ್ ಜೊತೆಗೆ ಇನ್ನೊಂದು ತಿಂಡಿ ಮಾಡಲಾ?’ ‘ಏನು ಮಾಡೋಣ?’ ಎಂದು ಗಲ್ಲದ ಮೇಲೆ ಕೈಯಿಟ್ಟು ಕೊಂಡು ಕೇಳಿದಳು ಸಾಂಚಿ. ಅವಳು ಕುಳಿತು ಭಂಗಿ ರಾಧಿಕಳಿಗೆ ಇಷ್ಟವಾಗಿ ಅವಳ ಕೆನ್ನೆಗೆ ಒಂದು ಮುತ್ತು ಕೊಟ್ಟಳು. ಅವಳು ಮುತ್ತುಕೊಡುವುದನ್ನು ಅವಳ ಎಡಗಣ್ಣಿನ ಕೆಳಗೆ ಇರುವ ಕಪ್ಪು ಚುಕ್ಕಿ ನೋಡಿ ನಕ್ಕಿತು. ‘ಪತ್ರೊಡೆ?’ ‘ಓ, ಡನ್’ ಎಂದು ತನ್ನ ಎಡಗೈಯಿಯ ಹೆಬ್ಬೆರಳನ್ನು ಮೇಲಕ್ಕೆ ಎತ್ತಿಕೊಂಡು ಹೇಳಿದಳು ಸಾಂಚಿ. ಉಪ್ಪು, ಹುಣುಸೇ ಹಣ್ಣು, ಹರಿಶಿಣ, ಜೀರಿಗೆ, ದನಿಯಾಕಾಳು, ಒಣಮೆಣಸಿನಕಾಯಿ, ಉದ್ದಿನಬೇಳೆ, ಕಡ್ಲೆಬೇಳೆ, ಇಂಗು, ತೆಂಗಿನ ತುರಿ, ಬೆಲ್ಲ, ನೆನೆಸಿರುವ ಅಕ್ಕಿಯನ್ನು ಮಿಕ್ಸಿಯ ಜಾರಿನಲ್ಲಿ ಹಾಕಿಕೊಂಡು ರುಬ್ಬಿಕೊಂಡಳು.

‘ಪುಟ್ಟಿ ಅಗೋ ತರಕಾರಿ ಇದೆಯಲ್ಲ ಅಲ್ಲಿ ಕೆಸುವಿನ ಎಲೆಯ ಕಟ್ಟಿ ಇದೆಯಲ್ಲ ಅದನ್ನು ತಗೊಂಬಾ’ ಎಂದಳು. ಅವಳ ಅಮ್ಮ ಕೆಲಸವನ್ನು ಹೇಳುವುದನ್ನೇ ಕಾಯುತ್ತ ನಿಂತಿದ್ದ ಸಾಂಚಿ ಓಡಿಹೋಗಿ, ಎಲೆಯ ಕಟ್ಟನ್ನು ತಂದು ಕೊಟ್ಟಳು. ಅದನ್ನು ಇಸಿದುಕೊಂಡು ಅದಕ್ಕೆ ಕಟ್ಟಿರುವ ದಾರವನ್ನು ಮತ್ತು ಎಲೆಗಳ ದಿಂಡುಗಳನ್ನು ಕತ್ತಿರಿಸಿದಳು. ನಂತರ ಎಲೆಗಳನ್ನು ಸಿಂಕಿನ ನಳದಲ್ಲಿ ಚೆನ್ನಾಗಿ ತೊಳೆದು ಮತ್ತೆ ಪಕ್ಕದ ಒಂದು ದೊಡ್ಡ ಬೋಗುಣಿಯಲ್ಲಿದ್ದ ಹುಣಸೆ ಹಣ್ಣಿನ ನೀರಿನಲ್ಲಿ ಅದ್ದಿ ಕೆಲ ಕ್ಷಣ ಬಿಟ್ಟಳು. ‘ಯಾಕೆ, ತೊಳೆದಿದ್ದೀಯಲ್ಲ ಆಗಲೆ’ ಕೇಳಿದಳು ಮಗಳು. ‘ಗಂಟಲು ನಸನಸ ಅನ್ನುತ್ತೆ, ಆಮೇಲೆ ನೀನು ತಿನ್ನದಿದ್ದರೆ ಏನು ಮಾಡೋದು, ಅದಕ್ಕೆ ಸ್ವಲ್ಪಹೊತ್ತು ಅದರಲ್ಲಿ ನೆನೆಯಲಿ’ಎಂದು ಹೇಳಿದಳು. ಸ್ವಲ್ಪಹೊತ್ತಿನ ಬಳಿಕ ಗ್ಯಾಸಿನ ಒಲೆಯನ್ನು ಹೊತ್ತಿಸಿ ಕಡುಬು ಮಾಡುವ ಪಾತ್ರೆಯನ್ನು ಇಟ್ಟು, ತಳದಲ್ಲಿ ನೀರನ್ನು ಹೊಯ್ದು, ಕುದ್ದ ನೀರು ಮೇಲಕ್ಕೆ ಚಿಮ್ಮಬಾರದೆಂದು ಅಡ್ಡವಾಗಿ ತೂತುಗಳಿರುವ ಪ್ಲೇಟನ್ನು ಇಟ್ಟಳು. ಅದು ತನ್ನ ಸ್ಥಾನದಲ್ಲಿ ಭದ್ರವಾಗಿ ಕುಳಿತುಕೊಂಡಿತು. ಅದರ ಮೇಲೆ ಕೆಸುವಿನ ಎಲೆಗಳಿಗೆ ಮಗಳ ಕೈಗಳಿಂದ ಸವರಿಸಿ, ಮತ್ತೆ ಎಲೆಗಳನ್ನು ಸುತ್ತಿಸಿ, ನಿಧಾನ ಇಟ್ಟಳು. ಅದನ್ನು ಮುಚ್ಚುಳದಿಂದ ಮುಚ್ಚಿದಳು.

ಮುಕ್ಕಾಲು ಗಂಟೆ ಬೇಯಿಸಿದ ನಂತರ ಅದನ್ನು ಇಳಿಸಿ, ಅದೇ ಒಲೆಯ ಮೇಲೆ ಮಗಳು ಈಗಾಗಲೇ ಹಿಡಿದುಕೊಂಡು ನಿಂತಿದ್ದ ಕರಿಯುವ ಪುಟ್ಟ ಬಾಣಲೆಯನ್ನು ಈಸ್ಕೊಂಡು ಇಟ್ಟಳು. ಮಗಳು ಅಮ್ಮನನ್ನೇ ನೋಡುತ್ತಿದ್ದಳು. ರಾಧಿಕಳದು ಎತ್ತರದ ನಿಲುವು. ಈಗಷ್ಟೆ ಬಿರಿಯುತ್ತಿರುವ ಮಲ್ಲಿಗೆಯಂತಹ ಪುಟ್ಟ ಮೂಗು. ಮರಳ ಮೈಯ ಬಣ್ಣ. ಆಕರ್ಷಕ ಕಣ್ಣುಗಳು. ಮಿಂಚುವ ಮೂಗು ನತ್ತು. ಕಾಣಬೇಕೋ ಬೇಡವೋ ಎನ್ನುವ ರೀತಿಯಲ್ಲಿ ಕವಿಯಲ್ಲಿ ಪುಟ್ಟ ಹರಳುಗಳು. ಕೊರಳಲ್ಲಿ ನೋಡದರಷ್ಟೇ ಕಾಣುವಂತಿರುವ ಅತಿ ತೆಳುವಾದ ದಾರದ ರೀತಿಯ ಸರ. ವಯಸ್ಸು ಮುವತ್ತೆಂಟರ ಆಚೆ ಇದ್ದರೂ, ಚೂಡಿದಾರದಲ್ಲಿ ಇಪ್ಪತ್ತು ಇಪ್ಪತ್ತೆರೆಡರ ತರುಣಿಯಂತೆ ಕಾಣುತ್ತಿದ್ದಾಳೆ. ‘ಯಾಕೆ, ಹಂಗೆ ನೋಡ್ತಾ ಇದ್ದೀಯಾ?’ ಅಮ್ಮ. ‘ನಥಿಂಗ್’ ಮಗಳು. ‘ಓ ಇಂಗ್ಲಿಷ್! ಇದಕ್ಕೇನು ಕಮ್ಮಿ ಇಲ್ಲ ನೀನು’ ಎಂದು ನಕ್ಕಳು. ‘ಇನ್ನು ಎಷ್ಟೊತ್ತು?’ ಎಂದು ಅಳುವಂತೆ ಕೇಳಿದಳು.

‘ಏನು ಅವಸರನೆ, ಥೇಟ್ ನಿಮ್ಮ ಅಪ್ಪನ ಥರ, ತಿನ್ನುವುದಿದ್ದರೆ ಯಾವಾಗಲು ಮುಂದೆ ಎಂದಳು ಅವಳು ಬಾಣಲೆಯನ್ನು ಹಿಡಿದಕೊಂಡಿರುವುದನ್ನು ನೋಡಿ. ‘ಹೌದು, ಈ ಮನೆಯಲ್ಲಿ ನಾನು, ಅಪ್ಪ ಇಬ್ಬರೆ ತಿನ್ನೋದು, ನೀನು ಗಾಂಧೀಜಿ ಥರ ಉಪವಾಸ ಮಾಡ್ತಿಯ’ ಎಂದು ರೇಗಿಸಿದಳು ಪುಟ್ಟ ಬಾಲೆ ಸಾಂಚಿ. ‘ಏನು ಮಾತಾಡೋದು ಕಲಿತಿದೆಯೇ?’ ಒಲೆಯ ಮೇಲಿನ ಬಾಣಲೆಯೊಳಗಡೆ ಕೊಬ್ಬರಿ ಎಣ್ಣೆಯನ್ನು ಸುರುವಿ  ಪಾತ್ರೆಯ ಮುಚ್ಚಳವನ್ನು ತೆಗೆದಳು. ಆಗ ಅದರೊಳಗಡೆಯಿಂದ ಆವಿ ರೈಲಿನ ಇಂಜಿನ್ನಿನ ಆವಿಯಂತೆ ಎದ್ದಿತು. ಇಕ್ಕಳದಲ್ಲಿ ಅವೆರಡು ರೋಲುಗಳನ್ನು ಎತ್ತಿಕೊಂಡು ಒಂದು ತಟ್ಟೆಯಲ್ಲಿ ಇಟ್ಟು, ಚಾಕುವಿನಿಂದ ಒಂದು ರೋಲಿನಲ್ಲಿ ನಾಲಕ್ಕು ತುಂಡುಗಳನ್ನಾಗಿ ಮಾಡಿದಳು. ‘ಅಮ್ಮ ಇನ್ನೊಂದನ್ನು ನಾನು ಮಾಡ್ತೀನಿ’ ಎಂದಳು. ಸುಡುತ್ತೆ ಎಂದು ಹೇಳಿದರೂ ಕೇಳದೆ ಕತ್ತರಿಸಲು ಮುಂದಾದಳು. ರೋಲನ್ನು ಅರ್ಧಭಾಗ ಕತ್ತರಿಸಿ, ಸುಡುತ್ತೆ ನೀನೆ ಮಾಡು ಎಂದು ವಾಪಸ್ಸು ಚಾಕುವನ್ನು ತನ್ನ ಅಮ್ಮನಿಗೆ ಕೊಟ್ಟಳು.

ಎಣ್ಣೆ ಕಾವಲಿಯಲ್ಲಿ ಕಾದು ತೆಂಗಿನ ಎಣ್ಣೆಯ ಪರಿಮಳ ಇಡೀ ಅಡುಗೆಮನೆಯನ್ನು ಆವರಿಸಿಕೊಂಡು ಪತ್ರೊಡೆಯ ಮಸಾಲೆಯ ಜೊತೆ ಸಮ್ಮಿಲನ ಗೊಳ್ಳಲು ಕಾತರಿಸುತ್ತಿತ್ತು. ಎರಡು ತುಂಡುಗಳನ್ನು ಅದರೊಳಗೆ ಇಟ್ಟಳು. ಎಣ್ಣೆ ಕಾದಿದ್ದರಿಂದ ಇವುಗಳನ್ನು ಇಟ್ಟ ತಕ್ಷಣಕ್ಕೆ ಚುರ್ ಚುರ್ ಎಂದು ಸದ್ದು ಮಾಡತೊಡಗಿತು. ‘ಅಮ್ಮ ನೀನು ಅಪ್ಪನ್ನ ನೆನೆಸಿಕೊಂಡು ಗುನುಗಿಕೊಳ್ಳುತ್ತಿದ್ದೀಯಲ್ಲ ಆ ಬಾಗೇಶ್ರೀ ರಾಗನ ದೊಡ್ಡವಳಾದ ಮೇಲೆ ಸಿತಾರದಲಿ ನುಡಿಸ್ತೀನಿ’ ಎಂದಳು. ಈ ಮಾತಿಗೆ ರಾಧಿಕ ಮೂಕ ವಿಸ್ಮಿತಳಾದಳು. ‘ಈ ಹುಡುಗಿ ಚೋಟುದ್ದ ಇಲ್ಲ, ಎಷ್ಟೊಂದು ಮಾತಾಡ್ತಾಳೆ, ಮುಂದೆ ಇನ್ನೂ ಘಟಿಸುವ ಕಾಲವನ್ನು ಈಗಲೇ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡಂಗೆ ಕಾಣ್ತಾಳೆ’ ಎಂದು ಕೊಂಡಳು ಮನಸ್ಸಿನಲ್ಲಿಯೇ.

ಮತ್ತೆ ‘ಬಾಗೇಶ್ರೀ ರಾಗ ಪ್ರಿಯಕರನಿಗಾಗಿ ಕಾಯುತ್ತ ರಾತ್ರಿಯ ವೇಳೆ ಹಾಡುವ ರಾಗ ಇವಳಿಗೆ ಹೆಂಗೆ ಗೊತ್ತು ಎಂದು ಕೊಂಡು, ‘ತಾನ್‍ಸೇನ್ ಇವಳ ಒಳಗೆ ಬಂದು ಸೇರಿಕೊಂಡಿದೆಯೋ ಹೆಂಗೆ!’ ಎಂದು ಕೊಳ್ಳುತ್ತ ಮಗಳು ಸಾಂಚಿಯನ್ನೇ ನೋಡುತ್ತ ನಿಂತಳು. ಕಾಲದ ಮುಂದನ್ನಷ್ಟೇ ಅಲ್ಲ, ಹಿಂದನ್ನೂ ಈ ಪೋರಿ ತನ್ನ ಮುಷ್ಟಿಯಲ್ಲಿ ಅಡಗಿಸಿಟ್ಟು ಕೊಂಡಿರುವ ರೀತಿ ಕಾಣ್ತಿದ್ದಾಳೆ’ ಎಂದುಕೊಂಡಳು. ‘ಆಯ್ತು ಡಾರ್ಲಿಂಗ್, ಜಲ್ದು ಜಲ್ದು ಬೆಳೆದು ದೊಡ್ಡವಳಾಗು’ ಎಂದಳು ಅವಳ ಕೆನ್ನೆಗಳನ್ನು ಹಿಡಿದು. ಇವರು ಹೀಗೆ ಮಾತಾಡುವಾಗ ಹೊರಗಡೆ ಚಂದ್ರಕಾಂತ ಬಂದ  ಕಾರಿನ ಹಾರನ್ನಿನ ಸದ್ದಾಯಿತು. ‘ನಿನ್ನ ರಾಗ ಅಪ್ಪನನ್ನು ಕರೆದುಕೊಂಡು ಬಂತು ನೋಡು’ ಎಂದಳು. ‘ಏನು ಮಾತಾಡುವುದನ್ನು ಕಲಿತಿದಿಯೇ’ ಎಂದು ಅವಳನ್ನು ಒಮ್ಮೆ ಮೇಲಕ್ಕೆ ಎರಡು ಕೈಗಳಲ್ಲಿ ಎತ್ತಿ ಇಳಿಸಿದಳು. ‘ನಿಮ್ಮ ಅಪ್ಪನಿಗೆ ವಿಶ್ ಮಾಡೋಣ ಬಾ’ ಎಂದಳು. ‘ಬೆಳಗ್ಗೆ ಮಾಡಲಿಲ್ಲ ಯಾಕೆ?’ ‘ಮರೆತು ಹೋತು ಕಣೆ, ನಿನ್ನ ಪ್ರಶ್ನೆಗಳೋ ಸಾವಿರ.’ 

ಇವರಿಬ್ಬರ ಲವಲವಿಕೆಗೂ ಚಂದ್ರಕಾಂತನ ಹಾವಾಭಾವಕ್ಕೂ ಒಂದಕ್ಕೊಂದು ತದ್ವಿರುದ್ಧವಾಗಿತ್ತು. ಅದನ್ನು ಗಮನಸಿದ ರಾಧಿಕ ಅದನ್ನು ಬಾಯಿಬಿಟ್ಟು ಹೇಳದೆ ಅವನಿಗೆ ವಿಶ್ ಮಾಡಿದಳು. ಮಗಳು ಸಾಂಚಿಯೂ ಸಹ ತನ್ನ ಪುಟ್ಟ ಕೈಗಳನ್ನು ಚಾಚಿ ತನ್ನ ಅಪ್ಪನಿಗೆ ವಿಶ್ ಮಾಡಿದಳು. ‘ಥ್ಯಾಂಕ್ಯು ಪುಟ್ಟಿ’ ಎಂದ. ಅವನ ಧ್ವನಿಯಲ್ಲಿ ಉತ್ಸಾಹವಿರಲಿಲ್ಲ. ಅವನು ವಾಶ್ ರೂಮಿಗೆ ಹೋಗಿ ಫ್ರೆಶ್ ಆಗಿ ಬಂದಮೇಲೆ ತನ್ನ ಗಂಡ ಡಲ್ ಆಗಿರುವುದಕ್ಕೆ ಕಾರಣವನ್ನು ಕೇಕ್ ಕತ್ತರಿಸಿದ ನಂತರ ಕೇಳಿದರೆ ಆಯಿತು ಎಂದು ಕೊಂಡು ಸುಮ್ಮನಾದಳು. ಕೇಕನ್ನು ಕತ್ತರಿಸಿ, ಪತ್ರೊಡೆಯನ್ನು ಟೀಯ ಜೊತೆ ಮೂವರು ಸವಿದರು.    

ಅವೊತ್ತು ಕಾರಹುಣ್ಣಿಮೆ. ಮಳೆ ಮತ್ತು ಬೆಳದಿಂಗಳು ಕ್ಯಾನವಾಸಿನ ಪೇಂಟಿಂಗಿನ ಥರ ಮಂದ ಮತ್ತು ಗಾಢವಾಗಿ ಕಾಣುತ್ತಿದ್ದವು. ವಾಸ್ತವದಲ್ಲಿ ಮಳೆಯ ಸೋನೆ ಸುರಿಯುತ್ತಿದ್ದರೂ, ಬೆಳದಿಂಗಳ ಬೆಳಕು ಚೆಲ್ಲಿದ್ದರೂ, ಅವಾಸ್ತವವೆನ್ನುವಂತೆ ಕಾಣುತ್ತಿತ್ತು.  ಕಪ್ಪನೆಯ ಮೋಡಗಳು ಬಂದು ಬೆಳದಿಂಗಳನ್ನು ಮುಚ್ಚಿ ಹೋಗುತ್ತಿದ್ದವು. ಕ್ಷಣ ಹೊತ್ತಿನ ಬಳಿಕ ಮತ್ತೆ ಮೋಡ ಕರಿಗಿ ಮಳೆ ಸುರಿದು ಬೆಳದಿಂಗಳು. ನಭದಲ್ಲಿ ಬೆಳ್ಳಕ್ಕಿಗಳ ಉದ್ದನೆಯ ಸಾಲು ಬಿಳಿಯ ದಾರದ ಥರ ಇದ್ದು, ಅದು ಬೆಳದಿಂಗಳನ್ನು ಪಟವನ್ನಾಗಿಸಿಕೊಂಡು ಆಡಿಸುವಂತಿತ್ತು. ಸಾಂಚಿ ಮನೆಯ ನಡುಮನೆಯ ಎದುರಿನ ಅಕ್ವೇರಿಯಮ್ಮಿನ ಮೀನುಗಳನ್ನು ನೋಡುತ್ತ ಅವುಗಳ ಜೊತೆ ಮಾತಾಡುತ್ತ ಆಡುತ್ತಿದ್ದಳು. ಇಬ್ಬರು ಮನೆಯ ಮುಂದಿನ ಮುಖಮಂಟಪದ ಮೇಲಿನ ಟೆರೇಸಿಗೆ ಹೋದರು. ‘ನನ್ನ ವಿದ್ಯಾರ್ಥಿನಿಯೊಬ್ಬಳು ನನ್ನ ಹತ್ತಿರ ಒಂದು ಪುಸ್ತಕ ಇಸಕೊಂಡು ಹೋಗಿದ್ದಳು. ಇವೊತ್ತು ಅದನ್ನು ತಂದು ಕೊಟ್ಟಳು. ಅವಳು ಹೋದ ಮೇಲೆ ಯಾಕೋ ಪುಸ್ತಕವನ್ನು ತೆರೆದೆ.

ಒಂದು ಖಾಲಿ ಹಾಳೆ ಅದರಲ್ಲಿ ‘ನೀನಿಲ್ಲದ್ದಿದ್ದರೆ ಈ ಬದುಕಿಗೆ ಅರ್ಥವಿಲ್ಲ, ಅಸ್ತಿತ್ವವಿಲ್ಲ’ ಎಂದು ಬರೆಯಲಾಗಿತ್ತು ಎಂದ. ‘ಅದರಲ್ಲೇನಿದೆ ಅಪ್ ಸೆಟ್ ಆಗುವಂತಹದ್ದು? ಆ ವಾಕ್ಯದಲ್ಲಿನ ನೀನಿಲ್ಲದಿದ್ದರೆ ಎನ್ನುವ ಜಾಗದಲ್ಲಿ ನಿನ್ನನ್ನು ಯಾಕೆ ಇಟ್ಟುಕೊಂಡು ನೋಡುತ್ತಿರುವೆ? ಅ ಮಾತಿನಲ್ಲಿನ ‘ನೀನು’ ನೀನಾ?’ ಎಂದು ಚೇಡಿಸುವ ಧ್ವನಿಯಲ್ಲಿ ಕೇಳೆದಳು. ‘ಹೇ ಗೂಬೆ  ಹಾಗಲ್ಲ’ ಎಂದನು ತನ್ನ ಬೆರಳುಗಳ ಅವಳ ರೇಶ್ಮೆನಯದ ಕೂದಲೊಳಗೆ ತೂರಿಸಿ. ಮುಂದುವರೆದು, ‘ತಾರುಣ್ಯದ ಹುಚ್ಚು ವಯಸ್ಸು ಅವರ ತಲೆಯಲ್ಲಿ ಏನೇನು ಇರುತ್ತೋ ಏನೋ ಎನ್ನುವ ಭಯ’. ‘ಇಲ್ಲದ ಅರ್ಥಗಳನ್ನು ನೀನೇ ಕಲ್ಪಿಸಿ, ತೀರ್ಮಾನಕ್ಕೆ ಬರುವುದು ಸರಿಯಲ್ಲ. ಶಿ ಮೇ ಹ್ಯಾವ್ ಬೀನ್ ಇನಸ್ಪೈರ್ಡ್ ಬೈ ಯು’ ಅಲ್ಲದೆ ಬೇರೆ ಯಾರಿಗೋ ಕೊಡಬೇಕಿತ್ತೆನೋ, ಮಿಸ್ಸಾಗಿ ಆ ಪುಸ್ತಕದಲ್ಲಿ ಸೇರಿಕೊಂಡಿರಬಹುದು, ಅಲ್ಲದೆ, ನೀನು ಎನ್ನುವುದು ಅವಳ ಫ್ರೆಂಡ್, ಪ್ರಿಯಕರ, ಬದುಕು, ಏನುಬೇಕಾದರೂ ಇರಬಹುದು, ಆ ನೀನು ಬಗ್ಗೆ ನೀನು ಯಾಕೆ ಇಷ್ಟು ಸೀರಿಯಸ್ ಆಗಬೇಕು? ಒಂದು ಸಲ ಮನೆಗೆ ಬರಲು ಹೇಳು, ಬಾ ಕೆಳಗಡೆ ಹೋಗೋಣ. ಇಷ್ಟೊಂದು ಸೂಕ್ಷ್ಮ ಆದರೆ ಹೆಂಗೆ ನೀನು ಹ್ಞಾ’ ಎಂದಳು. ಮಗಳು ಕೇಳಿದ್ದ ಪ್ರಶ್ನೆ ಅವಳ ಇಡೀ ಮನಸ್ಸನ್ನು ಆವರಿಸಿಕೊಂಡು ಅನುರಣನಗೊಳ್ಳುತ್ತಿತ್ತು. ಅಡುಗೆ ಮನೆಯ ಪುಟ್ಟ ಅಡ್ಡಗೋಡೆ ಮೇಲೆ ನಗುವ ಬುದ್ಧ,  ಮೇಲಕ್ಕೆತ್ತಿಕೊಂಡಿದ್ದ ಕೈಗಳನ್ನು ಮಳೆಯಲ್ಲಿ ಒದ್ದೆಯಾಗಿ, ಚಳಿಯಲ್ಲಿ ನಡುಗುತ್ತ ಒಲೆಯ ಮುಂದೆ ತನ್ನ ಎರಡೂ ಕೈಗಳನ್ನು ಚಾಚಿಕೊಂಡು ಬೆಚ್ಚಗೆ ಮಾಡಿಕೊಳ್ಳುವ ಭಂಗಿಯಲ್ಲಿ ಕುಳಿತಿರುವಂತೆ ಕಂಡಿತು. ಅದು, ಅವಳ ಕಡೆ ತಿರುಗಿ ನಕ್ಕಂತೆ ಕಂಡಿತು ಅವಳಿಗೆ. ಅವಳು ನಕ್ಕಳು. ‘ಯಾಕೆ?’ ಎಂದ ಚಂದ್ರಕಾಂತ. ‘ಏನು ಇಲ್ಲ’ ಎಂದಳು. 

‘ಅಮ್ಮ’ ‘ಏನು?’ ‘ನೀನು ಸಿಗರೇಟ್ ಸೇದ್ತಿಯಲ್ಲ, ಮತ್ತೆ ಅಪ್ಪ ಯಾಕೆ ಸೇದೋಲ್ಲ,?’ ‘ನಿಮ್ಮ ಪಪ್ಪನೂ ಸೇದ್ತಾರೆ, ಕಣೆ, ನಮಗೆ ಗೊತ್ತಿಲ್ಲ.’ ಚಂದ್ರಕಾಂತ ಈ ಪ್ರಶ್ನೆಯನ್ನು ಕೇಳಿ ನಕ್ಕನು. ‘ನಿಜ? ನಾನು ಸೇದಬಹುದಾ? ನೀನು ಯಾಕೆ ಸೇದ್ತೀಯಾ?’ ‘ಬೇಜಾರಾದಾಗ.’ ‘ಯಾವಾಗ ಆಗುತ್ತೆ?’ ಈ ಪ್ರಶ್ನೆಗೆ ನಗು ಬಂದರೂ ತಡೆದುಕೊಂಡು, ಅವಳ  ಗಮನವನ್ನು ಬೇರೆ ಕಡೆಗೆ ಪ್ರಜ್ಞಾಪೂರ್ವಕವಾಗಿ ತಿರುಗಿಸಲು ಪ್ರಯತ್ನಿಸಿದಳು. ‘ಸಾಂಚಿ ಪುಟ್ಟ ಅವೊತ್ತು ನೀನು ಬ್ಲಾಕ್ ಹೋಲ್ ಎಲ್ಲಿರುತ್ತಾವೆ, ಗಿರ್ತಾವೆ ಎಂದು ಕೇಳಿದ್ದಲ್ಲ ಹೇಳ್ತೀನಿ ಬಾ’ ಎಂದು ಅವಳನ್ನು ಮಲಗುವ ಕೋಣೆಗೆ ಎತ್ತಿಕೊಂಡು ಹೋಗಿ ನಿಲುವುಗನ್ನಡಿಯ ಮುಂದೆ ನಿಲ್ಲಿಸಿ, ‘ನಿನ್ನ ಎಡ ಕಣ್ಣಿನ ಕೆಳಗೆ ಒಂದು ಪುಟ್ಟ ಕಪ್ಪು ಚುಕ್ಕಿ ಇದೆಯಲ್ಲ ಆ ಥರ ಇರುತ್ತೆ’ ಎಂದಳು. ‘ಇಷ್ಟರೊಳಗಡೆ ಸೂರ್ಯ ಇರುತ್ತಾನಾ, ನಮ್ಮ ಭೂಮಿನು ಇರುತ್ತಾ, ಚಂದ್ರನೂ ಇರುತ್ತಾ, ಅದು ಹೇಗೆ? ಎಂದು ಪ್ರಶ್ನೆಯನ್ನು ಹಾಕಿದಳು. ‘ಆಕಾಶ ದೊಡ್ಡದಿರುತ್ತಲ್ಲ, ಆಗ ಆ ಬ್ಲಾಕ್ ಹೋಲ್ ಚಿಕ್ಕದಾಗಿ ಕಾಣುತ್ತೆ ನಿನ್ನ ಮುಖದಲ್ಲಿನ ಚುಕ್ಕಿಥರ’ ಎಂದಳು.

ನಂತರ ಅಡುಗೆ ಮನೆಗೆ ಹೋಗಿ ರಾತ್ರಿಯ ಊಟಕ್ಕೆ ಅನ್ನ ಮತ್ತು ಸಾರನ್ನು ಮಾಡಿ, ಮಗಳು ಮತ್ತು ಗಂಡನಿಗೆ ಊಟಕ್ಕೆ ಕುಳಿತುಕೊಳ್ಳಲು ಹೇಳುತ್ತಿದ್ದಳು, ಅಷ್ಟರಲ್ಲಿ ಫೋನ್ ರಿಂಗಾಯಿತು. ರಾಧಿಕ ಕರೆಯನ್ನು ಸ್ವೀಕರಿಸಿದಳು. ‘ಛೇ, ಯಾವಾಗ, ಎಂದು ಕೇಳಿದಳು. ಅಷ್ಟರಲ್ಲಿ ಆ ಕಡೆಯಿಂದ ಕರೆ ನಿಂತಿತ್ತು. ‘ಮಾವನವರು ಹೋದ್ರಂತೆ, ಈಗ ಒಂದೈದು ನಿಮಿಷ ಆಯ್ತಂತೆ. ಈಗ ಬೇಡ, ಬೆಳಗ್ಗೆ ಬನ್ನಿ ಎಂದು ಹೇಳಿದರು ನಿಮ್ಮ ತಮ್ಮ ಪ್ರಭು ಫೋನ್ ಮಾಡಿದ್ದರು’ ಎಂದಳು. ಕ್ಷಣ ಏನನ್ನೂ ಮಾತಾಡದೆ ಮೌನವಾದ. ಅವನ ಮನಸ್ಸಿಗೆ ಅವನ ತಂದೆಯ ಜೊತೆ ಅವನು ಮದುವೆ ಆಗುವ ಸಂದರ್ಭದಲ್ಲಿ ಆಡಿದ ಹನ್ನೆರಡು ವರ್ಷಗಳ ಹಿಂದಿನ ಮಾತುಗಳು ಬಂದವು:

‘ಯಾವ ಜಾತಿಯಾದರೆ ಏನಂತೆ, ಹುಡುಗಿ ಒಳ್ಳೆ ಸ್ವಭಾವದವಳು ಆಗಿದ್ದರೆ ಆಯ್ತು.’ ‘ಸಮಾಜ ಬಹಿಷ್ಕಾರ ಹಾಕಿದರೆ?’ ‘ಯಾವ ಸಮಾಜ, ಎಲ್ಲ ನಾವು ಮಾಡಿಕೊಂಡಿರುವ ಸಮಾಜ, ಕರಕೊಂಡು ಬಾ ಇಲ್ಲೆ ಮದುವೆ ಮಾಡ್ತೀನಿ, ಕುಲ ಕೆಡಬೇಕು ಆಗಲೆ ಅದಕ್ಕೆ ಅರ್ಥ. ಅನಾದಿ ಕಾಲದಿಂದ ಅವರು ಇವರನ್ನ ಇವರು ಅವರನ್ನ ಮದುವೆ ಆಗುತ್ತ ಬಂದಿಲ್ಲವಾ, ಮನುಷ್ಯಕುಲದ ಕಟ್ಟೆಗಳೆಲ್ಲ ಒಡೆಯುತ್ತವೆ, ಮತ್ತೆ ಕಟ್ಟಿಕೊಳ್ಳೂತ್ತವೆ. ಒಡೆದು ಹೋಗುವುದು ಮತ್ತೆ ಕೂಡಿಕೊಳ್ಳುವುದು ನಿಸರ್ಗದ ನಿಯಮ. ಮನುಷ್ಯ ಕುಲ ಹೀಗೆ ಮುಂದುವರೆಯಬೇಕು.

ಸಾಂಗತ್ಯಕ್ಕೆ ಒಳ್ಳೆಯ ಮನಸ್ಸು, ಸ್ವಭಾವ ಮುಖ್ಯ. ಜಾತಿ ಜೊತೆಗೆ ಸಂಸಾರ ಮಾಡೋಕೆ ಆಗುತ್ತಾ?’ ‘ಅಮ್ಮ ತಾತ ಹೋದ್ರು ಅಂದಲ್ಲ ಎಲ್ಲಿಗೆ ಎಂದು?’ ಕೇಳಿದಳು. ‘ಆಕಾಶದೊಳಗಡೆ ಹೋದರು’. ‘ತಾತನಿಗೆ ರೆಕ್ಕೆ ಬರುತ್ತಾವಲ್ಲವ ಅಲ್ಲಿ, ಮತ್ತೆ ವಾಪಸ್ಸು ಬರಲ್ಲವಾ?’ ‘ಅಲ್ಲಿಗೆ ಹೋದರೆ ಮತ್ತೆ ವಾಪಸ್ಸು ಬರಲ್ಲ.’ ಅವಳು ಇನ್ನು ಏನೇನೋ ಪ್ರಶ್ನೆಗಳನ್ನು ಕೇಳುತ್ತಿದ್ದಳು. ರಾಧಿಕ ಅವುಗಳನ್ನು ಕೇಳುತ್ತ ಅವಳಿಗೆ ಊಟಮಾಡಿಸಿ ಮಲಗಿಸಿದಳು. ಚಂದ್ರಕಾಂತ ಮತ್ತು ರಾಧಿಕ ಸುಮ್ಮನೆ ಕುಳಿತುಕೊಂಡರು.

‍ಲೇಖಕರು Admin

November 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: