ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಕಾಡುವ ಅಂಕಣ – ಹೆಜ್ಜೆಯ ಜೊತೆ ಹೆಜ್ಜೆ ಇಟ್ಟು..

ಮಲ್ಲಿಕಾರ್ಜುನಸ್ವಾಮಿ ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಸ್ವಾಮಿ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನಸ್ವಾಮಿ ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

ಕಥನವನ್ನು ನಾನೆಲ್ಲಿಗೆ ನಿಲ್ಸಿದ್ದೇ.. ಹಾಂ!!… ನೆನಪಾಯಿತು..

ಹೆಣ್ಣಿಗೆ ಹೆರಿಗೆಯ ದಿನಗಳು ಹತ್ತಿರ ಬಂದಂತೆಲ್ಲಾ ಯಾವುದೋ ಆತಂಕ ಆವರಿಸಿಕೊಳ್ಳುತ್ತದೆ… ಅದಾವುದೋ ಚಡಪಡಿಕೆ ಪ್ರಾರಂಭವಾಗುತ್ತದೆ… ಗರ್ಭದಲ್ಲಿ ಮಗು ವಿಕಾಸವಾಗುತ್ತಿದ್ದಂತೆಲ್ಲ ಒಂದು ಪುಳಕ.. ಸಂತಸದ ಸಂಚಲನವಾಗುತ್ತಿರುತ್ತದೆ… ಒಳಗಿನ ಭಾವ ಹೂವಾಗುತ್ತದೆ… ಮುಖದಲ್ಲಾವುದೋ ರಾಜಹಂಸ ಕಳೆ ರೂಪದಾಳುತ್ತದೆ… ದೇಹ ಸುಗಂಧದ ಸುವಾಸನೆಯ ಬೀರತೊಡಗುತ್ತದೆ… ದೇಹ ಕಾಂತಿಯುಕ್ತವಾಗುತ್ತದೆ…

ಫಲವತಿ ಅತ್ಯಂತ ರೂಪವತಿಯಾಗಿ ಮಾರ್ಪಾಡಾಗುತ್ತಾಳೆ… ಹೆಣ್ಣೇ ಹಾಗೆ ಕಣ್ರೀ… ಒಂದೇ ದೇಹ ಎರಡು ಜೀವಗಳು… ಹೆಣ್ಣು, ಜನ್ಮ ಕೊಡುವ ದಿನ ಹೆರಿಗೆ ಆಗುವ ಗಳಿಗೆ ಇದೆಯಲ್ಲಾ ಅವಳಿಗೆ ಮರುಜನ್ಮವೆತ್ತಿದಂತೆ… ಮಗುವಿನ ಜನ್ಮ ಹಾಗೂ ತಾಯಿಯ ಪುನರ್ಜನ್ಮವಾಗುತ್ತದೆ ಆಗ… ಸುಗುಮ ಹೆರಿಗೆಯಾದರೆ ಎರಡೂ ಜೀವಗಳೂ ಅರಳುತ್ತವೆ… ನಿರಾಳ ಉಸಿರೊಂದು ಪತಿಯಲ್ಲಿ… ಹೆಣ್ಣಿನ ತಂದೆ ತಾಯಿಗಳಲ್ಲಿ ಹರಿದಾಡುತ್ತದೆ… ಸಂತಸದ ಹೊಳೆಯೊಂದು ನಲಿದಾಡುತ್ತದೆ…. ಮಲ್ಲಿಗೆಯ ಮಕರಂದ ಮೊಗದೊಳಗೆ ಚೆಲ್ಲಾಡುತ್ತದೆ… ಇಲ್ಲದಿರೆ..? ಹೆರಿಗೆ ಸುಗುಮವಾಗಿ ಆಗದಿರೆ….? ಅವಘಡವೇನಾದರೂ ಸಂಭವಿಸಿಬಿಟ್ಟರೆ…??

ಇರಲಿ ಹಾಗಾಗುವುದು ಬೇಡ… ಯಾವುದೇ ಹೆಣ್ಣಿಗೆ ಆಗಲಿ ಯಾರೇ ಗರ್ಭವತಿಗೇ ಆಗಲಿ…. ಪ್ರಸವದ ವೇಳೆ ಅವಘಡಗಳು ಸಂಭವಿಸದೇ ಇರಲಿ…. ಆ ನಂತರವೂ ಯಾವುದೇ ಏರಿಳಿತಗಳು ಆಗದೆ ತಾಯಿ-ಮಗು ಆರೋಗ್ಯವಾಗಿ ಆನಂದದಿಂದಿರಲಿ. ತುಂಬು ಆಯಸ್ಸನ್ನು ಕಳೆದು ಎಲ್ಲಾ ಕಂದಮ್ಮಗಳ ಬದುಕು ತಮ್ಮ ಜೀವನದ ಎಲ್ಲಾ ಸೋಪಾನಗಳನ್ನು ಏರಿ ಕೊನೆಗೆ ಸಾರ್ಥಕ ಕಾಣಲಿ…
ಆ ಕೂಸು ಕಂದಮ್ಮಗಳ ಬದುಕು ಬಂಗಾರವಾಗಲಿ…
ಆ ಕಳ್ಳು ಬಳ್ಳಿಯ ಕುಡಿ ಬಸಳೆಯಂತೆ ದಶದಿಕ್ಕಿಗೂ ಪಸರಿಸಿ ಯಶವಂತರಾಗಲಿ..

ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದಂತೆ.. ಆ ಗಳಿಗೆ ಸನಿಹವಾಗುತ್ತಿದ್ದಂತೆ ಹೆಣ್ಣಿನಲ್ಲಾಗುವ ಮನೋ ತೊಯ್ದಾಟಗಳು.. ಆಕೆಯ ದೇಹದ ಮೇಲಾಗುವ ಪರಿಣಾಮಗಳ ಕುರಿತು ಮಾತಾಡುತ್ತಿದ್ದೆ ಅಂತ ಕಾಣುತ್ತೆ.. ಕರೆಕ್ಟ್..

ನೋಡಿ.. ಅಂತಾ ಸಂದರ್ಭದಲ್ಲೇ ಗರ್ಭವತಿಗೆ ಹಾಗೂ ಹತ್ತಿರದವರಿಗೆ ಅಂದರೆ ಗಂಡನಿಗೆ.. ತಂದೆ ತಾಯಿಯರಿಗೆ-ಅತ್ತೆ ಮಾವನಿಗೆ ಹುಟ್ಟುವ ಮಗುವು ಹೆಣ್ಣು ಮಗುವೋ.. ಗಂಡು ಮಗುವೋ ಎಂಬ ಕುತೂಹಲ ಇದ್ದೇ ಇರುತ್ತದೆ.. ತಾಯಿಯಾಗುವವರಿಗಂತೂ ಇದು ಮನದಲಿ ಮೂಡಿ ಮರೆಯಾಗುತ್ತಿರುತ್ತದೆ..

ಸಾಮಾನ್ಯವಾಗಿ ಹೆಣ್ಣು ತನಗೆ ಹುಟ್ಟುವ ಮಗು ಗಂಡಾಗಲಿ ಎಂದು ಬಯಸುತ್ತಿರುತ್ತಾಳೆ.. ಇದಕ್ಕೆ ಅನೇಕ ‘ಸಾಮಾಜಿಕ’ ಕಾರಣಗಳಿರುತ್ತವೆ ಹಾಗೆಯೇ ‘ವಂಶಿಕ’ ಹಾಗೂ ‘ಮನೆತನದ’ ಕಾರಣಗಳು ಇರುತ್ತವೆ.. ಏನಾದರೂ ಮೊದಲು ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿ.. ಎರಡನೇ ಹೆರಿಗೆಯ ನಿರೀಕ್ಷೆಯಲ್ಲಿದ್ದಾಗಲಂತೂ ಗಂಡು ಮಗು ಹುಟ್ಟಲೇಬೇಕೆಂಬ ಹಠಕ್ಕೆ ಬಿದ್ದವರಂತೆ ಭಾರತೀಯ ಕುಟುಂಬಗಳು ವರ್ತಿಸುತ್ತಿರುತ್ತವೆ.. ಇಲ್ಲಿಯ ಸಮಾಜದ ಮನಸ್ಥಿತಿಯೇ ಹಾಗಿದೆ.. ಸಾಮಾನ್ಯವಾಗಿ ಹೆಣ್ಣು ತನಗೆ ಹುಟ್ಟುವ ಮಗು ಗಂಡಾಗಿರಲಿ ಎಂದು ಇದ್ದ ಬದ್ದ ದೇವರುಗಳಿಗೆಲ್ಲ ಮನದಲ್ಲೇ ನಮಸ್ಕಾರ ಹಾಕುತ್ತಿರುತ್ತಾಳೆ. ಹಾಗೆಯೇ ಗಂಡಾದವನೂ ಸಹ..

ಎರಡು.. ಮೂರು ಹೆಣ್ಣು ಜನನವಾದರೂ ಗಂಡಾಗಲಿ.. ಗಂಡಾಗಲಿ ಎಂದು ‘ಮರಳಿ ಯತ್ನವ ಮಾಡಿ’ ಐದು-ಆರು ಹೆಣ್ಣು ಮಕ್ಕಳನೆತ್ತ ದಂಪತಿಗಳೂ ಇದ್ದಾರೆ.. ‘ತಲ್ಲಣಿಸದಿರು ತಾಳು ಮನವೇ’ ಎನ್ನುತ್ತಾ ಎಡೆಬಿಡದೇ ಟ್ರೈ ಮಾಡಿ ಮಾಡಿ ಮತ್ತೆ ಹೆಣ್ಣು ಮಗುವನ್ನೇ ಪಡೆದ ಭೂಪರೂ ಇದ್ದಾರೆ..

ಮೊದಲನೆಯವಳಿಗೆ ‘ಗಂಡು’ ಮಗು ಆಗಲ್ಲಾಂತೇಳಿ ಎರಡನೆಯವಳನ್ನು ಕಟ್ಟಿಕೊಂಡು ‘ಗಂಡು’ ಮಗುವನ್ನು ಪಡೆದ ಸಾಧಕರೂ ಇದ್ದಾರೆ ಈ ಜಗತ್ತಲ್ಲಿ..

ಹೆಂಡತಿಯಾದವಳೇನು… ಗರ್ಭವತಿಯೇನು… ಹೆಣ್ಣಾದವಳೇನೂ ಗರ್ಭದೊಳಗಿನ ‘ಲಿಂಗ’ದ ನಿರ್ಧಾರಕಳು ಅಲ್ಲ… ನಿರ್ಣಾಯಕಲೂ ಅಲ್ಲ… ಎಂಬ ಸಾಮಾನ್ಯ ಜ್ಞಾನ… ಅಲ್ಪ ಅರಿವು, ಇಂಥದೇ ಮಗು ಬೇಕು ಎಂದು ನಿರ್ಧರಿಸುವ… ಗಂಡು ಮಗುವನ್ನು ಹೆತ್ತುಕೊಡಲೇಬೇಕು ಎಂದು ಅಪ್ಪಣೆಯ ನಿರ್ಣಾಯಕವನ್ನು ಗರ್ಭವತಿಯ ಮೇಲೆ ಹೇರುವ ಕಟು ಮನಸ್ಸುಗಳಿಗಿರಬೇಕು.. ಗಂಡುಮಗುವನ್ನು ಕೊಡಲಿಲ್ಲ ಎಂದು ಹೆಂಡತಿಯನ್ನು ಕಾಲಕಸ ಮಾಡಿರುವ.. ಮನೆಯಿಂದ ಹೊರಗಟ್ಟಿರುವ.. ನಿಕೃಷ್ಟವಾಗಿ ಕಂಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.. ಇಂಥಹದ್ದೆನ್ನೆಲ್ಲಾ ಕೇಳಿರುವ, ನೋಡಿರುವ ನಮ್ಮ ಹೆಣ್ಣು ಮಕ್ಕಳನೇಕರು ಮಗು ‘ಗಂಡು’ ಆಗಲಿ ಎಂದು ಬಯಸುತ್ತಾರೆ.

ಇಂತಹ ಅನೇಕ ಒತ್ತಡಗಳು ಗರ್ಭವತಿಯ ಮೇಲಾಗುತ್ತಿರುತ್ತದೆ.. ಆಮೇಲೆ.. ಅನೇಕ ಮನೋಕ್ಲೇಷೆಗಳು.. ಡಾಕ್ಟರ್ ನಾರ್ಮಲ್ ಡೆಲಿವರಿಯಾಗುತ್ತದೆಂದು ಹೇಳಿದ್ದರೂ ಏನೋ ಅನುಮಾನಗಳು.. ಯಾವುದೋ ಸಂದೇಹಗಳು ಕಾಡಿ ಎಲ್ಲಿ ‘ಸಿಝೇರಿಯೆನ್’ ಆಗಿಬಿಡುತ್ತದೋ ಎಂಬ ಭಯ..ಆತಂಕಗಳು ಮೂಡಿ.. ಇಲ್ಲದ ಗೊಂದಲಗಳು ಪ್ರಾರಂಭವಾಗಿ ‘ಲೋ ಬಿಪಿಯೋ’ ಹೆಚ್ಚಿನ ರಕ್ತದೊತ್ತಡವೊ… ರಕ್ತಹೀನತೆಯೋ ಆಗಿ ಅದು ಮತ್ತೊಂದಾಗಿ.. ಮಗದೊಂದಕ್ಕೆ ತಿರುಗಿ ಸನ್ನಿಗೆ ತಿರುಗಿರುವ ಸಂಭವಗಳೂ ಹೆಚ್ಚು.. ಇದು ಮಗುವಿನ ಜನನದ ವೇಳೆ.. ಆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಿರುವ ಉದಾಹರಣೆಗಳೂ ಇವೆ..

ಹೆಣ್ಣು ಗರ್ಭ ಧರಿಸಿದ ದಿನಗಳಿಂದ ಪ್ರಾರಂಭಿಸಿ ಹೆರಿಗೆಯಾಗುವವರೆಗಿನ ದಿನಗಳವರೆಗೆ ಇಂತಹ ಮಾನಸಿಕ ಹೊಯ್ದಾಟಗಳು.. ದೇಹದ ವೈಪರಿತ್ಯಗಳನ್ನು ಹೆಣ್ಣು ಹೊಂದಿಯೇ ಇರುತ್ತಾಳೆ.. ಇನ್ನು ಸಾಮಾಜಿಕ ಸ್ತರಗಳಲ್ಲಿರುವ.. ವರ್ಗಸ್ತರಗಳಲ್ಲಿಯ ಕುಟುಂಬದಿಂದ ಬಂದ ಹೆಣ್ಣು ಮಕ್ಕಳ ಸ್ಥಿತಿಗಳಂತೂ ಇನ್ನೂ ವಿಭಿನ್ನವಾಗಿರುತ್ತದೆ.. ಏನೇ ಇರಲಿ.. ಆಕೆಗೆ ಎಂಥದೆ ಸ್ಥಿತಿ ಇರಲಿ… ಫಲವತಿಯಾದ ಹೆಣ್ಣು ಇಂತಹವುಗಳನ್ನೆಲ್ಲಾ ಇದುರುಗೊಳ್ಳುತ್ತಲೇ ಮನೆಯವರ ತಂದೆ ತಾಯಿಗಳ ಹಾಗೂ ಗಂಡನ ಸಾಮೀಪ್ಯವನ್ನು.. ಪ್ರೀತಿಭರಿತ ಕಾಳಜಿಯನ್ನು.. ಒಲುವಿನ ಸಾಕಾರವನ್ನು.. ಮಾನಸಿಕ ಧೈರ್ಯವನ್ನು.. ಸಿಹಿ ಅಪ್ಪುಗೆಯನ್ನು.. ಮಂದಾರದಂಥಾ ಮನವನ್ನು.. ಮಲ್ಲಿಗೆಯಂಥಾ ನಗುವನ್ನು ಆ ಗರ್ಭವತಿ.. ಆ ಫಲವತಿ.. ಆ ಮಡದಿ.. ಆ ಹೆಣ್ಣು ಬಯಸುತ್ತಿರುತ್ತಾಳೆ..

ಆ ಸಮಯ ಗಂಡನಾದವನು ಅತೀ ಪ್ರೀತಿಯಿಂದ.. ಅತೀ ಕಕ್ಕುಲತೆಯಿಂದ.. ಅಷ್ಟೇ ಮೋಹದಿಂದ.. ಅಷ್ಟೇ ಜವಾಬ್ದಾರಿಯಿಂದ ಮಡದಿಯನ್ನು ನೋಡಿಕೊಳ್ಳಬೇಕು… ಅವಳ ಪ್ರತಿ ಹೆಜ್ಜೆಯಲ್ಲೂ ಸಹ ಪಯಣಿಗನಾಗಿರಬೇಕು.. ಅದರಲ್ಲೂ ಚೊಚ್ಚಲ ಗರ್ಭವಾದರಂತೂ ಬಹಳ ಹೆಚ್ಚರದಿಂದ ಇರಬೇಕಾಗುತ್ತದೆ.

ಇದರಿಂದ ನಾನೂ ಹೊರತಲ್ಲ.. ಯಾರೂ ಸಹ..

ಪ್ರೀತಿಯ ಲಲ್ಲೆಗರೆ
ಒಲವಿನ ಹಾಡಾಗು
ಮನಕೆ ಮುದವ ನೀಡು
ಮಮತೆಯ ಮಡಿಲಾಗು
ಉಸಿರಲಿ ಉಸಿರಾಗು
ಆಸರೆಯ ಅನಂತವಾಗು
ಅಮ್ಮನಾಗು.. ಆ ಹೆಣ್ಣೇ ನೀನಾಗು ಗಂಡೇ…

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: