ಕೇಸರಿ ಹರವೂ ನೆನಪು- ‘ಮೇ ದಿನವು ಇದು ಶುಭದಿನವು’

ಕೇಸರಿ ಹರವೂ

ಅಬ್ಬಾಯಿ ನಾಯ್ಡು ನಿರ್ಮಾಣದ ಒಂದು ಚಿತ್ರಕ್ಕೆ ನಾನು ಸಹ ನಿರ್ದೇಶಕ. ಆ ಚಿತ್ರದಲ್ಲಿ ಮೇ ದಿನದ ಆಚರಣೆಯ ಒಂದು ಹಾಡಿನ ಸನ್ನಿವೇಶ ಇದೆ. ಅಬ್ಬಾಯಿ ನಾಯ್ಡು ಅವರಿಗೆ ನಮ್ಮ ಸಿದ್ದಲಿಂಗಯ್ಯನವರಿಂದ ಈ ಹಾಡು ಬರೆಸಬೇಕು ಎನ್ನುವ ಹುಕಿ ಬಂತು. ಅವರಿಗೆ ಕವಿಯ ಪರಿಚಯ ಇರಲಿಲ್ಲ. 79 ರಿಂದ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೇ ಬದುಕು ಕಳೆದಿದ್ದ ನನಗೆ ಡಿ ಆರ್ ನೇರ ಮೇಷ್ಟ್ರು. URA, ಲಂಕೇಶ್, ಕಿರಂ, ಸಿದ್ದಲಿಂಗಯ್ಯ ನೇರ ಅಲ್ಲದಿದ್ದರೂ ಮೇಷ್ಟ್ರುಗಳು.

ಚಿತ್ರದ ಹಾಡುಗಳ ರೆಕಾರ್ಡಿಂಗ್ ಗೆ ನಾವೆಲ್ಲ ಮದ್ರಾಸಿನಲ್ಲಿ ಇದ್ದೆವು. ನಾಯ್ಡು ಹಾಡು ಬರೆಯುವ ವಿಚಾರ ಕವಿಗಳೊಂದಿಗೆ ಮಾತಾಡಲು ನನಗೆ ಹೇಳಿದರು. ನಾನು ಫೋನು ಮಾಡಿ ವಿಷಯ ಹೇಳಿ, ಮದ್ರಾಸಿಗೆ ಎರಡು ದಿನದ ಮಟ್ಟಿಗೆ ಬಂದುಹೋಗಬೇಕು ಎಂದೆ. ಸಿದ್ದಲಿಂಗಯ್ಯ ಮಾಮೂಲಿನಂತೆ ಊಹುಹುಹು ನಕ್ಕರು. ಯಾಕೆ ಎಂದೆ. ಅವರು ನಮ್ಮ ಹಾಡುಗಳನ್ನೆಲ್ಲ ಎಲ್ಲಿ ಒಪ್ತಾರೆ? ಎಂದರು. ಇರಲಿ ಬಂದು ಹೋಗಿ ಎಂದು ಒಪ್ಪಿಸಿದೆ. ರಾತ್ರಿಯ ರೈಲು ಬುಕ್ ಆಯಿತು. ಬೆಳಗಿನ ಜಾವ ನಾನೇ ಮದ್ರಾಸ್ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೋಗಿ ಕರಕೊಂಡು ಬಂದೆ.

ಸಂಜೆ ನಾಲ್ಕೈದು ಗಂಟೆ ಹೊತ್ತಿಗೆ ‘ಮೇ ದಿನವು ಇದು ಶುಭದಿನವು’ ಎನ್ನುವ ಹಾಡು ‘ತಯಾರಾಯಿತು’. ನಾಯ್ಡು ಅವರಿಗೆ ಹಾಡಿಗಿಂತ ತಮ್ಮ ಚಿತ್ರಕ್ಕೆ ಕವಿಗಳು ಹಾಡು ಬರೆದರು ಎಂದು ಖುಷಿಯಿತ್ತು. ಆಗ ಕವಿಗಳು ಗುಂಡು ಹಾಕುತ್ತಿದ್ದರು, ಬಿಟ್ಟಿರಲಿಲ್ಲ. ಸರಿ, ಸಂಜೆ ನಾಯ್ಡು, ಚಿ.ಉದಯಶಂಕರ್, ಮತ್ತೊಬ್ಬರು ಆಹ್ವಾನಿತರು ಕವಿಗಳನ್ನೂ ಕೂರಿಸಿಕೊಂಡು ಗೆಸ್ಟ್ ಹೌಸ್ ನ ಒಂದು ರೂಮಿನಲ್ಲಿ ಕುಳಿತರು. ನನಗೆ ಅಂದು ಆಹ್ವಾನ ಇರಲಿಲ್ಲ. ಅದೇಕೋ ಗೊತ್ತಿಲ್ಲ, ಬಹುಶಃ ಚಿ. ಉದಯಶಂಕರ್ ನನ್ನನ್ನು ‘ಒಳ್ಳೆಯ ಹುಡುಗ ‘ ಅಂದುಕೊಂಡಿದ್ದರು ಅಂತ ಕಾಣುತ್ತೆ. ನಾನು ಮತ್ತೊಂದು ಕೋಣೆಯಲ್ಲಿ ಕುಳಿತು ಪ್ರೊಡಕ್ಷನ್ ಚಾರ್ಟ್ ಗಳನ್ನು ಮಾಡುತ್ತ ಕುಳಿತೆ.

ಅರ್ಧ ಮುಕ್ಕಾಲು ಗಂಟೆಯ ನಂತರ ಕವಿಗಳು ಬಾಗಿಲು ತಳ್ಳಿಕೊಂಡು ಕೋಣೆಯೊಳಗೆ ಬಂದರು. ಕೈಯಲ್ಲಿ ಪೂರ್ತಿ ತುಂಬಿದ ಗ್ಲಾಸು ಇತ್ತು. ಅದರ ಕೆಳಗೆ ಇನ್ನೊಂದು ಗ್ಲಾಸನ್ನು ಸಿಕ್ಕಿಸಿಕೊಂಡು ತಂದಿದ್ದರು. ಬಾಗಿಲು ಮುಂದಕ್ಕೆ ತಳ್ಳಿ ಕೆಳಗಿನ ಗ್ಲಾಸಿಗೆ ಅರ್ಧ ಹುಯ್ದು ನನ್ನ ಮುಂದೆ ಇಟ್ಟರು. ಅವರಿಗೆ ಕಾಣದ ಹಂಗೆ ತಂದಿದಿನಿ ಎಂದರು. ನಾನು ಶಂಭೋಶಿವ ಎನ್ನುತ್ತಾ ಗ್ಲಾಸನ್ನು ಕೈಗೆತ್ತಿಕೊಂಡಾಗ ಏ, ಇನ್ನೂ ನೀರು ಹಾಕಿಲ್ಲ ತಡೀರಿ, ಕಿಚನ್ನಿಗೆ ಹೋಗಿ ಒಂದು ಚೆಂಬು ನೀರು ತಗಬನ್ನಿ ಎಂದರು.

ಕವಿಗಳು ಆ ಹಾಡು ಬರೆದಾಗ ಆಗುತ್ತಿದ್ದ ಅನುಭವ ಹೇಳಲು ಶುರು ಮಾಡಿದರು. ನಾನು ಗುಸುಗುಸು ನಗಲು, ಅವರು ಇನ್ನಷ್ಟು ಹೇಳೋರು. ನಾನು ಇನ್ನಷ್ಟು ನಗುವೆ…

ನಮ್ಮ ಮುಖ್ಯ ಅತಿಥಿ ಎಲ್ಲಿ ಹೋದರು? ಎಂದು ಅಲ್ಲಿಯವರಿಗೆ ಪ್ರಶ್ನೆಯಾಗಿ ಹುಡುಕಲು ಹುಡುಗನನ್ನು ಕಳಿಸಿದರು. ಅವನು ಕವಿಗಳು ಇಲ್ಲಿರುವುದನ್ನು ಅಲ್ಲಿ ವರದಿ ಮಾಡಲು, ನಾಯ್ಡು ಸ್ವಲ್ಪ ಅಸಮಾಧಾನದಿಂದಲೇ ಇಲ್ಲಿಗೆ ಬಂದರು. ಬಂದೇ ಬಂದೇ, ಐದೇ ನಿಮಿಷ ಎಂದರು ಕವಿಗಳು. ಹತ್ತು ನಿಮಿಷ ಆದರೂ ಬರದಿದ್ದ ಕಂಡ ನಾಯ್ಡು ಮತ್ತೆ ಬಂದು ನಮ್ಮಿಬ್ಬರನ್ನೂ ಎಬ್ಬಿಸಿಕೊಂಡು ಕರಕೊಂಡು ಹೋದರು.

ಬರೆಯುವುದಾದರೆ ನಾನೇ ಇದನ್ನು ಬರೆಯಬೇಕು, ಇನ್ನಾರೂ ಬರೆಯಲು ಸಾಧ್ಯ ಇಲ್ಲ ಎಂದು ನಾನು ಬರೆದಿದ್ದೇನೆ.

ಕವಿಗಳು ಸಿಕ್ಕಾಗಲೆಲ್ಲ ಈ ಸನ್ನಿವೇಶ ಮತ್ತು ನನ್ನ ಚಿತ್ರ ಭೂಮಿಗೀತ ಎರಡನ್ನೂ ತಪ್ಪದೇ ನೆನೆಸಿಕೊಳ್ಳುತ್ತಾ ಇದ್ದರು. ಸಿಕ್ಕೇ ಎರಡು ವರ್ಷಕ್ಕೂ ಜಾಸ್ತಿ ಆಗಿತ್ತು. ಹೋಗಿಬನ್ನಿ ಮೇಷ್ಟ್ರೇ, ನಿಮ್ಮ ಹಾಡುಗಳು ನಮ್ಮ ಎದೆಯಲ್ಲಿವೆ…

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: