ಎಸ್ ಜಿ ಸಿದ್ದರಾಮಯ್ಯ ಕವಿತೆ- ಕವಿಯ ನೆನೆದು..

ಎಸ್ ಜಿ ಸಿದ್ದರಾಮಯ್ಯ

ಹೀಗೆ ಒಬ್ಬೊಬ್ಬರಾಗಿ ಸಾಲುಗಟ್ಟಿ ಹೋಗಿಬಿಟ್ಟರೆ
ಯಾರಿಗೆ ದೂರಲಿ? ಏನೆಂದು ಅಳಲಿ?
ಕಣ್ಣನೀರು ಬತ್ತಿ ಹೋಗಿವೆ ಕವಿಗಳೇ.

ಮೊನ್ನೆ ಚುಟುಕುದನಿ ಜರಗನಹಳ್ಳಿ
ನಿನ್ನೆ ಕಥೆಗಾರ ಯೋಗಪ್ಪನವರ್
ಅದಕ್ಕೂ ಮುನ್ನ ಕೋವೆಂ,
ಎಲ್ಲರಿಗೂ ಮುನ್ನ ರಂಗ ಕರ್ಮಿ

ಇಂದು ಬಂದಿದೆ ಸುದ್ದಿ ಕವಿಗಳು ಇನ್ನಿಲ್ಲ
ಕುಂತ ಕಡೆಯೇ ಸಂತೆ ಗದ್ದಲ ಸ್ತಬ್ಧವಾಗಿದೆ
ಇಕ್ಕರ್ಲಾ ಒದಿರ್ಲಾ ಇವರ ಚಮ್ಡ ಎಬ್ಬುರ್ಲಾ
ಎಂದು ಅಬ್ಬರಿಸುತ್ತಾ ಹೊಟ್ಟೆಯ ಸಿಟ್ಟಿಗೆ ಗುಡುಗಿದೆ

ಸಪ್ಪಲಾಗಿದ್ದ ಮಾತಿಗೆ ಸಾವಿರದ ಶಕ್ತಿಕೊಟ್ಟೆ
ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು
ನೀನು ಹೇಳಿದೆ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸುಳಿದಾಡಬೇಡವೆಂದು ಮರದೊಳಗಣ ಮಂದಾಗ್ನಿ
ಬೇರು ಕಾಂಡ ಚಿಗುರು ಒಗರು ಹೂವಾಯಿತು
ಹಣ್ಣಾಯಿತು: ಮಾರುಕಟ್ಟೆಯಲ್ಲಿ ದಲ್ಲಾಳಿ ಪ್ರಭುತ್ವ.

ಬೆಳೆದ ರೈತ ಫಸಲು ಮರೆತ
ಹಂಗಿನರಗಿನ ಮನೆಗೆ ಹೊರಟ
ಬಂಗದ ಕೂಳು ಕುಂಬಳಿಯವರ
ನೆನಪಿನ ಕಣ್ಣು ಕಿವಿ ಬಾಯಿ ಕಳಕೊಂಡ

ಕವಿಸತ್ತು ಕಾಲವಾಯಿತು ಅಂದುಕೊಂಡವರ
ಮಾತನಣಕಿಸಿ ತೋರಿದೆ ಬಡವರ ನಗುವಿನ ಶಕ್ತಿ.
ಊರೆಲ್ಲ ನಗುವಾಗ ಮೊಗುಮ್ಮಾಗಿ ನೋಡಿದೆ
ಸಂತೆಯೊಳಗೆ ಬೆತ್ತಲಾದ ಅಕ್ಕನಾದೆ ಅರಿವಾದೆ.

ದಕ್ಕಿಸಿಕೊಳ್ಳಲಾರದವರಿಗೆ ದಕ್ಕದ ಮುನಿಯಾದೆ
ಬಿಕ್ಕೆಯ ಮಾತನಾಡುತ್ತಲೇ ನೀರನಿರ್ವಾಣಿಯಾದೆ.
ತಲೆಗೆ ಕಿರೀಟ ತೊಟ್ಟರೂ ಬೈರಾಗಿಯ ಬಟ್ಟೆ ನೆನೆದೆ
ಎಡ ಬಲಗಳ ಗೋಂದಳಿಯಲಿ ಮೈಗೆ ಸವರಿದೆ ಎಣ್ಣೆ.

ಬೈದವರ ಬಲಕ್ಕೆ ಬಂದೆ ಹೊಯ್ದವರ ಎಡಕ್ಕೆ ನಿಂದೆ
ಅವರು ಇವರು ಎವರಿಗೂ ಬೇಕೇ ಬೇಕಾದೆ
ಇವ ನಮ್ಮವ ಎನ್ನುವವರ ಮನೆಯ ಮಗನಾದೆ
ಈಗ ಎಲ್ಲರನ್ನು ಸಂತೆಯಲ್ಲೇ ಬಿಟ್ಟು ದೂರ ಹೋದೆ.

‍ಲೇಖಕರು Avadhi

June 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: